ನಿವೃತ್ತ ಅಪ್ಪನಿಗೆ ಮಗ ಓದಿಸಿದ ವರದಿಗಳು..

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ನಿವೃತ್ತ ಅಪ್ಪನಿಗೆ ಮಗ ಓದಿಸಿದ ವರದಿಗಳು… 

ಇತ್ತೀಚಿಗೆ ಪತ್ರಿಕೆಗಳ ಪುರವಣಿಗಳಲ್ಲಿ ಭಾನುವಾರವೂ ಕಥೆಗಳು ಪ್ರಕಟವಾಗೊಲ್ಲ, ಸಾಹಿತ್ಯಿಕ ಮೌಲ್ಯಗಳು ಇಲ್ಲದ ಇಂಥ ಪತ್ರಿಕೆಗಳನ್ನು ಓದಬೇಕೇ ಬೇಡವೇ ಎಂಬ ಗೊಂದಲದಲ್ಲಿ ಪತ್ರಿಕೆಗಳನ್ನು ಓದುವುದನ್ನೇ ನಿಲ್ಲಿಸಿದ್ದ, ಮನೆಗೆ ಬರುವ ಪತ್ರಿಕೆಯ ಚಂದಾದಾರಿಕೆಯನ್ನು ಹಿಂಪಡೆದಿದ್ದ ಅಪ್ಪನ ಬಳಿ, ಹರೆಯದ ಮಗ ಒಂದಿಷ್ಟು ಪತ್ರಿಕೆಗಳ ವರದಿಗಳನ್ನು ಕಟ್ ಮಾಡಿಕೊಂಡು ಬಂದಿದ್ದ. 

‘ಅಪ್ಪ, ಪತ್ರಿಕೆಗಳಲ್ಲಿ ಕಥೆಗಳೇ ಪ್ರಕಟವಾಗುತ್ತಿಲ್ಲ ಅಂತಿದ್ರಲ್ಲ, ಇಲ್ಲಿ‌ ನೋಡಿ’ ಎಂದ ಅವನ ಕೈಯಲ್ಲಿದ್ದ ಹತ್ತಾರು ಪೇಪರ್ ಕಟಿಂಗ್ ಗಳನ್ನು ಗಮನಿಸಿದ ಅಪ್ಪ, ನಕ್ಕು ‘ಇವು ಕಥೆಗಳಲ್ಲ ಮಗ. ಕೇವಲ ವರದಿಗಳು’ ಎಂದ. ‘ಇರಬಹುದು ಅಪ್ಪ. ಆದರೆ ಇವೆಲ್ಲ ನಡೆದಿರುವ ಘಟನೆಗಳು ತಾನೆ? ಯಾವುದೇ ಗೊಂದಲ ಉಳಿಸದ ನೀವು ಬಯಸುವ’ ವಾಸ್ತವಕ್ಕೆ ಹತ್ತಿರದ’ ಎಂಬ ಹಣೆಪಟ್ಟಿ ಅಗತ್ಯವಿಲ್ಲದ ವಾಸ್ತವಗಳು.

ಸಾಹಿತ್ಯಿಕ ಭಾಷೆ ಮತ್ತು ತಂತ್ರಗಳಿಲ್ಲದಿರಬಹುದು. ಆದರೆ ಇವು ಕೂಡ ಯೋಚನೆಗೆ ಹಚ್ಚುವ, ಮೌಲ್ಯಗಳ ಬಗ್ಗೆ ಮಾತಾಡುವ, ನಮ್ಮ ಜೀವನದ ಭಾಗವೇ ಆಗಿ ಹೋಗಿರುವ ಅನೇಕ ವಿಷಯಗಳನ್ನು ನೆನಪಿಸುತ್ತವೆ. ಅವುಗಳ ಭಾಷೆ ನಿಮ್ಮ ಪ್ರಕಾರ ವರದಿಯಂತೆ ಮಾತ್ರ ಇರಬಹುದಷ್ಟೆ ‘ಮಗ ತನ್ನ ವಾದವನ್ನು ಮುಂದುವರಿಸಿದ. ‘ಸರಿ. ಅದೇನು ಅಂಥ ಜೀವನ ದರ್ಶನ ಮಾಡಿಸಿವೆ ನಿನಗಿವು? ನಾನು ತಿಳಿದುಕೊಳ್ಳುತ್ತೇನೆ ಕೊಡಿಲ್ಲಿ’ ಎಂದು ಮಗನಿಂದ ಆ ಪೇಪರ್ ಕಟಿಂಗ್ ಗಳನ್ನು ತೆಗೆದುಕೊಂಡು ಒಂದೊಂದನ್ನೇ ಓದ ತೊಡಗಿದ ಅಪ್ಪ.

* * * * 

ಮಾತಿರದ ದಾಂಪತ್ಯ

ತಾಲ್ಲೂಕಿನ ಆ ಗ್ರಾಮದಲ್ಲಿ ವಾಸವಿರುವ ಇವರು ಕಳೆದ ಇಪ್ಪತ್ತು ವರ್ಷಗಳಿಂದ ತನ್ನ ಹೆಂಡತಿಯೊಂದಿಗೆ ಮಾತೇ ಆಡದೆ ಸಂಸಾರ ಮಾಡಿದ್ದಾರೆ. ಮದುವೆಯಾದ ಆರಂಭದ ಕೆಲವೇ ದಿನಗಳಲ್ಲಿ ತನ್ನ ತಂಗಿ ಮತ್ತು ಅಮ್ಮನ ಮಾತು ಕೇಳಿ ಹೆಂಡತಿಯೊಂದಿಗೆ ಶುರುವಾದ ವಿರಸವು ಮಾತು ಬಿಡಲು ಕಾರಣವಾಗಿದ್ದು ಸತತ ಇಪ್ಪತ್ತು ವರ್ಷ ಒಬ್ಬರಿಗೊಬ್ಬರು ಮಾತೇ ಆಡಿಲ್ಲವಾದರೂ ದಿನನಿತ್ಯದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಆಕೆಯ ತವರು ಮನೆಯವರು ಮಾಡಿದ ಯಾವ ಪ್ರಯತ್ನಗಳೂ ಫಲಿಸಲಿಲ್ಲ. ಡೈವೋರ್ಸ್ ಪಡೆಯಬಹುದಿತ್ತಲ್ಲ ಎಂದು ಕೇಳಿದರೆ, ‘ಕೊಟ್ಟ ಹೆಣ್ಣು ಕುಲದ ಹೊರಗೆ, ಅನ್ನೋ ಮಾತಿಲ್ವ?’ ಎಂದು ಹೇಳುವ ಇವರಿಗೆ ಮಾತು ಬಿಡಲು ಬಲವಾದ ಯಾವ ಕಾರಣಗಳೂ ಇಲ್ಲ. ತಮಾಷೆಯ ವಿಷಯವೆಂದರೆ ಈ ಇಪ್ಪತ್ತು ವರ್ಷಗಳಲ್ಲಿಯೇ ಇವರಿಗೆ ಇಬ್ಬರು ಮಕ್ಕಳು ಹುಟ್ಟಿದ್ದು.

ಮಗಳು ಮೆಜಾರಿಟಿಗೆ ಬಂದ ವರ್ಷವೇ ಅವಳನ್ನು ಮದುವೆ ಮಾಡಿಕೊಟ್ಟರು. ಮಗಳ ಮದುವೆ ಸಮಯದಲ್ಲಿ ಒಂದೆರೆಡು ಮಾತಾಡಿದ್ದು ಬಿಟ್ಟರೆ ಅಳಿಯನಾಗಲಿ, ಮೊಮ್ಮಗನ ಆಗಮನವಾಗಲಿ ಇವರನ್ನು ಬದಲಿಸಿಲ್ಲ. ಹಾಗೆಯೇ ಇಷ್ಟು ವರ್ಷಗಳಲ್ಲಿ ಆ ಮನೆಯಿಂದ ಜಗಳವಾಡುವ, ಜೋರಾಗಿ ಕೂಗಾಡುವ ಯಾವ ಸದ್ದೂ ಕೇಳಿ ಬಂದಿಲ್ಲ. ಇದೊಂದು ಮಾನಸಿಕ ಸಮಸ್ಯೆ ಇರಬಹುದೇನೋ ಎಂದು ಅವರಿಬ್ಬರನ್ನು ಕೌನ್ಸಿಲಿಂಗ್ ಗೆ ಕರೆದುಕೊಂಡು ಹೋಗುವ ಯಾವ ಪ್ರಯತ್ನಗಳೂ ಫಲ ಕೊಟ್ಟಿಲ್ಲ. ಹೀಗೆ ಇವರಿಬ್ಬರ ದಾಂಪತ್ಯ ಮೌನರಾಗದಲ್ಲಿ ಸರಾಗವಾಗಿ ನಡೆದುಕೊಂಡು ಹೋಗುತ್ತಿರುವುದು ಆಶ್ಚರ್ಯಕರ ಸಂಗತಿ.‌

ಅಪ್ಪ ಆ ಪೇಪರ್ ಕಟಿಂಗ್ ಕೆಳಗಿಟ್ಟು ಮುಂದಿನದಕ್ಕೆ ಹೋಗುವ ಮುನ್ನ ಒಮ್ಮೆ ಮಗನ ಮುಖ ನೋಡಿ ಕೀಳರಿಮೆಯಿಂದ ತಲೆ ಬಾಗಿಸಿದ. ‘ಅಪ್ಪ, ನನಗೊಂದು ವಿಷಯ ಅರ್ಥ ಆಗೊಲ್ಲ. ಮಗನಿಗೆ ಮದುವೆ ಮಾಡುವ ಸಮಯದಲ್ಲಿ ಸಂಭ್ರಮಪಡುವ ಅಮ್ಮ, ನಂತರ ಅತ್ತೆಯಾಗಿ ಬೇರೆಯದೇ ಮನುಷ್ಯಳಾಗುತ್ತಾಳಲ್ಲ ಅದು ಏಕೆ?’ ಆ ಪ್ರಶ್ನೆ ತನಗೆ ಸಂಬಂಧವಿಲ್ಲವೆಂಬಂತೆ ಇದ್ದ ಅಪ್ಪನ ತಲೆಯಲ್ಲಿ ಓಡಾಡುತ್ತಿದ್ದ ವಿಷಯವೇ ಬೇರೆ.

ತಾನೇ ಸಾಕಿ ಬೆಳಸಿ, ಓದಿಸಿದ ತಂಗಿಯ ಮದುವೆಯ ಸಮಯದಲ್ಲಿ ಉಂಟಾದ ಬಿಕ್ಕಟ್ಟಿನ ಕಾರಣ ಮುಂದಿಟ್ಟುಕೊಂಡು ಅವಳೊಂದಿಗೆ ಮಾತು ಬಿಟ್ಟು ಎಷ್ಟೋ ವರ್ಷಗಳಾಗಿತ್ತು. ಮನೆಯಲ್ಲಿ ತನ್ನ ತಂಗಿಯ ವಿಷಯ ಬಂದಾಗಲೆಲ್ಲ ‘ಇಪ್ಪತ್ತು ವರ್ಷ ಆಯ್ತು. ಅವಳ ಮುಖ ನೋಡಿಲ್ಲ. ಅವಳ ಮನೆ ಮೆಟ್ಟಿಲು ಕೂಡ ಹತ್ತಿಲ್ಲ’ ಎಂದು ಜಂಭದ ಮಾತಾಡುತ್ತಿದ್ದ ಅಪ್ಪ ಅಂದೇಕೋ ಮಗನ ಮುಂದೆ ಸಣ್ಣವನಾಗಿ ಕಾಣುತ್ತಿದ್ದ. ಇಬ್ಬರೂ ಕಣ್ಣುಗಳಲ್ಲೇ ಮಾತಾಡಿಕೊಂಡರು. ಮನುಷ್ಯನಲ್ಲಿ ರಕ್ತ ಪ್ರವಹಿಸುವಷ್ಟು ಸುಲಭವಾಗಿ ಬಂಧ ಪ್ರವಹಿಸಲಾರದೇನೋ ಎಂದು ಇಬ್ಬರೂ ಅಂದುಕೊಂಡಿರಬಹುದು. ಸಾವರಿಸಿಕೊಂಡ ಅಪ್ಪನ ಕೈ ಅದುಮಿದ ಮಗ. ಅಪ್ಪ ಮುಂದಿನ ವರದಿ ಓದಲು ತೊಡಗಿದರು..

* * ** 

ಸತಿ ಸಹಗಮನದಿಂದ ಸೊಸೆಯ ಮದುವೆವರೆಗೆ

ಅಪಘಾತದಲ್ಲಿ ತಮ್ಮ ಮಗ ಮರಣ ಹೊಂದಿದ ಒಂದು ತಿಂಗಳೊಳಗೆ ವಿಧವೆ ಸೊಸೆಯ ಮದುವೆಯನ್ನು ಮಾವನವರೇ ಮುಂದೆ ನಿಂತು ಮಾಡಿಸಿದರು ಎಂದರೆ ನೀವು ನಂಬುತ್ತೀರಾ? ಹೌದು, ಇಂಥ ಅಪರೂಪದ ಘಟನೆಯೊಂದು ವರದಿಯಾಗಿದೆ. ಅತ್ತೆ ಮತ್ತು ಭಾವಂದಿರ ವಿರೋಧದ ನಡುವೆಯೂ ಮಾವ ಈ ಸಾಹಸಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಸತಿ ಸಹಗಮನದ ಕಾಲದಿಂದ ಇಂಥ ಬದಲಾವಣೆಗೆ ನಮ್ಮ ಸಮಾಜ ತೆರೆದುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ‌ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಇದನ್ನು ಕರೆದಿದ್ದಾರೆ. ಪತಿಯ ಸಾವಿನ ನಂತರ ಪತ್ನಿಗೆ ಸಂತೋಷವಾಗಿ ಬದುಕುವ ಹಕ್ಕು ಇಲ್ಲವೇ ಇಲ್ಲ ಎಂಬಂಥ ಭಾವನೆ ನಮ್ಮ ಸಮಾಜದಲ್ಲಿದೆ, ಅದು ತಪ್ಪು. ಇದಕ್ಕೆಲ್ಲ ಪುರುಷ ಪ್ರಧಾನ ಕಟ್ಟಳೆಗಳೇ ಕಾರಣ ಎಂದು ಹೇಳಿದ ಅವರು, ಆದರೆ ಇಲ್ಲಿ ಒಬ್ಬ ಪುರುಷನೇ ಆ ಸಂಪ್ರದಾಯ ಮುರಿದು ಹೆಣ್ಣಿನ ಭಾವನೆಗಳಿಗೆ ಬೆಲೆ ಕೊಟ್ಟಿದ್ದು ಸ್ವಾಗತಾರ್ಹ ಎಂದು ಅಭಿಪ್ರಾಯ ಪಟ್ಟಿದ್ದಾರೆ.

‘ಇದೇನ್ರಿ ಇದು. ನಮ್ ಕಾಲದಲ್ಲಿ ಹಿಂಗಿರ್ಲಿಲ್ಲ.‌ ಅವಳಿನ್ನೆಂಥ ಚಂಚಲು ಇರಬೋದು ಅಲ್ವಾ? ಇದ್ದೋನ್ನ ನುಂಗಿ ನೀರ್ ಕುಡುದ್ಲು ಈಗ ಇನ್ನೊಬ್ಬ ಬೇಕಂತೆ!’ ಎಂಬ ಮಾತುಗಳನ್ನು ಯಾರೂ ಆಡಿರೋದಿಲ್ವೆ ಅಪ್ಪ ಎಂದು ಕೇಳಿದ ಮಗ.  ‘ಹೇಳಿರ್ತಾರೆ. ಆದರೆ ಇವನ್ಯಾರೋ ಸೆನ್ಸಿಬಲ್ ರಿಪೋರ್ಟರ್ ಇರಬೇಕು. ಏನೋ ಒಂದು ಒಳ್ಳೆಯ ಬೆಳವಣಿಗೆ ಆಗೋ ಸಮಯದಲ್ಲಿ ಅದನ್ಯಾಕೆ ಮತ್ತೆ ಹೇಳಬೇಕು ಅಂತ ಆ ಭಾಗವನ್ನ ಬರೆದಿಲ್ಲ ಅನ್ಸುತ್ತೆ’ 
‘ಹಾಗಾದರೆ ಈ ಪತ್ರಕರ್ತ ಕಥೆಗಾರನಲ್ಲವೆ ಅಪ್ಪ?’ 
‘ನಾನು ಮತ್ತೆ ಹೇಳ್ತೀನಿ ಮಗನೆ, ವರದಿಗಳು ಕಥೆಗಳಾಗೋದಿಲ್ಲ’ 
‘ಇರ್ಲಿ ಬಿಡಿ ಅಪ್ಪ. ಮುಂದಿನ ವರದಿ ನೋಡಿ’ 

* * * * 

ಅಂದು ತಿರಸ್ಕೃತ ಇಂದು ಪುರಸ್ಕೃತ 

ಕಾಲ ಪರಿಸ್ಥಿತಿಗಳನ್ನು ಬದಲಾಯಿಸಿ ಬಿಡುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಇಡೀ ಊರಿನ ಜನರೆಲ್ಲ ಯಾರನ್ನು ಅವಮಾನಿಸಿ, ನಿಂದಿಸಿ, ಶೋಷಿಸಿ ಊರಿಂದಲೇ ಬಹಿಷ್ಕರಿಸಿದ್ದರೋ ಇಂದು ಆ ಊರಿನ ಜನರೆಲ್ಲರೂ ಅವಳ ಬಳಿ ಪುಷ್ಪಗುಚ್ಛ ಹಿಡಿದು ಪುರಸ್ಕರಿಸಿ, ಕೈಕಟ್ಟಿ ನಿಲ್ಲ ತೊಡಗಿದ್ದಾರೆ.

ಹಲವು ವರ್ಷಗಳ ಹಿಂದೆ ಆ ಊರಿನ ಲಿಂಗಾಯತ ಹುಡುಗನೊಬ್ಬ ಲಂಬಾಣಿ ಹುಡುಗಿಯನ್ನು ಪ್ರೀತಿಸಿದ. ಅವರಿಬ್ಬರೂ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ಕಾಲೇಜಿನಲ್ಲಿ ತರಗತಿ ಕೇಳುವ ಕೊಠಡಿ ಒಂದೇ ಆಗಿದ್ದರೂ, ಊರಿನಲ್ಲಿ ಮಾತ್ರ ಅವರ ಮನೆ ಮತ್ತು ಮನಗಳ ಅಂತರ ಬಹು ದೂರದ್ದಾಗಿತ್ತು. ಇವರಿಬ್ಬರ ನಡುವಿನ ಪ್ರೇಮ ಪ್ರಕರಣ ಪಂಚಾಯಿತಿ ಮೆಟ್ಟಿಲು ಹತ್ತಿ‌ ಎಲ್ಲರೂ ಕೆಳಜಾತಿಗೆ ಸೇರಿದ್ದ ಆಕೆಯನ್ನೇ ದೂಷಿಸುತ್ತಿದ್ದರು.

ಕೊನೆಗೆ ಇಬ್ಬರೂ ತಮ್ಮ ಪ್ರೇಮವನ್ನು ಕೊನೆಗಾಣಿಸಬೇಕೆಂದೂ, ಆ ಹುಡುಗಿಯ ಕುಟುಂಬದವರು ಊರು ಬಿಡಬೇಕೆಂದೂ ತೀರ್ಮಾನವಾಯಿತು. ಆಕೆ ಊರು ಬಿಟ್ಟಳು. ಅವರಿಬ್ಬರ ಪದವಿ ವ್ಯಾಸಂಗವೂ ಅದೇ ವರ್ಷ ಮುಗಿಯಿತು. ಅವಳ ಜೊತೆ ಆಕೆಯ ಪ್ರೇಮಿಯೂ ಕಾಣೆಯಾದನು. ಇಬ್ಬರೂ ದೂರದೂರಿಗೆ ಹೋಗಿ ಮದುವೆಯಾಗಿ ಒಂದಿಷ್ಟು ವರ್ಷ ಅಲ್ಲೇ ಇದ್ದರು.‌ ಆ ನಂತರ ಅವಳು ಅದೇ ತಾಲ್ಲೂಕಿಗೆ ತಹಶೀಲ್ದಾರಳಾಗಿ ಆಯ್ಕೆಯಾಗಿ ಬಂದಳು.

ಆಗ ಇಡೀ ಊರಿನ ಜನ ಅವಳನ್ನು ಗೌರವದಿಂದ ಕಾಣುತ್ತಾ, ಪುರಸ್ಕರಿಸುತ್ತಾ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಅವಳ ಕಚೇರಿಯ ಮುಂದೆ ಕಾಯುತ್ತಾ ನಿಲ್ಲ ತೊಡಗಿದರು. ಇದರಲ್ಲಿ ಅವಳನ್ನು ಊರಿಂದ ಬಹಿಷ್ಕರಿಸಿದ ಪಂಚನೂ ಇದ್ದಿರುತ್ತಿದ್ದ. ಆಕೆಯೂ ಶಕ್ತ್ಯಾನುಸಾರ ಕೆಲಸ ಮಾಡಿಕೊಡುತ್ತ, ಯಥಾ ಪ್ರಕಾರ ಲಂಚ ಪಡೆದುಕೊಂಡು ಇದ್ದಳು. ತನ್ನನ್ನು ಹೊರಗಿಡಲು ಕಾರಣವಾದ ಸಮಾಜವನ್ನು ಮತ್ತು ತನ್ನನ್ನು ಒಳಗೊಳ್ಳಲು ಕಾರಣವಾದ ಸಂವಿಧಾನವನ್ನು ಆಕೆ ಈಗಲೂ ವಿಸ್ಮಯದಿಂದ ನೋಡುತ್ತಾಳೆ. 

‘ನೋಡು ಮಗನೆ, ಇದರಲ್ಲಿ ಸ್ವಲ್ಪ ಕಥೆಯ ಅಂಶ ಇದೆ. ಇದು ಕಾಡುತ್ತೆ. ನಮ್ಮ ಸಮಾಜದ ವ್ಯವಸ್ಥೆಯನ್ನ ಇದು ಪ್ರತಿಫಲಿಸುತ್ತೆ’ 
‘ಹೌದಲ್ವಾ ಅಪ್ಪ? ಅವೆರೆಡೂ ಕೂಡ ಸಮಾಜದ ಭಾಗವೇ ಆಗಿರುವ ಮನುಷ್ಯನ ಮನಸ್ಥಿತಿಯನ್ನೇ ಪ್ರತಿಫಲಿಸುತ್ತವೆ. ಕೆಲವೊಮ್ಮೆ ಅವು ನಮಗೆ ರಿಲೇಟ್ ಆಗ್ತಾವೆ ಅನ್ಸಿದಾಗ ಕೇವಲ ವರದಿಗಳು ಅನ್ಕೋತೀವೇನೋ ಅಲ್ವಾ ?’ ಎಂದು ಮಗ ಎದ್ದು ಹೋದ. 

ಅಪ್ಪ ಉಳಿದ ವರದಿಗಳಲ್ಲಿ ಕೆಲವನ್ನು ಕೇವಲ ಹೆಡ್ ಲೈನ್ ಮಾತ್ರ ಓದಿಕೊಂಡರು:

‘ಊರು ತುಂಬಾ ಸಾಲ ಮಾಡಿಕೊಂಡ ಭೂಪ ದೇಶಾಂತರ ಹೋಗಿ ಶ್ರೀಮಂತನಾದ’ 
‘ಅಪ್ಪನನ್ನೇ ಕೊಟ್ಟಿಗೆ ಮನೆಯಲ್ಲಿಟ್ಟ ಮಗ’ 
‘ಕಾಸ್ಟ್ಲಿ ಕಾರ್ ಷೋ ರೂಮ್ ನಲ್ಲಿ ಚಿಕ್ಕ ಮಗು ಮಾಡಿದ ಯಡವಟ್ಟು. ಅಪ್ಪನಿಗೆ 10 ಲಕ್ಷ ದಂಡ ಹಾಕಿದ ಶೋ ರೂಮ್’ 
ಇನ್ನೂ ನಾಲ್ಕೈದು ಹೆಡ್ ಲೈನ್ ಓದಿ ಮುಗಿಸುವಷ್ಟರಲ್ಲಿ ಮಗ ಎಲ್ಲಿಗೋ ಹೊರಟಿದ್ದು ಅಪ್ಪನಿಗೆ ಭಾಸವಾಯಿತು. ಹಾಗೆ ಹೊರಟವನು ಅಪ್ಪನ ಬಳಿ ಬಂದು ಕೇಳಿದ: 

‘ಈಗ ಏನಂತೀಯಾ?’ 

‘ಇವೆಲ್ಲ ಪ್ರಭಾವಿಸುವಂಥವೇ. ಆದರೆ ಇಂಥ ಚಿಕ್ಕ‌ಚಿಕ್ಕ ಘಟನೆಗಳನ್ನೇ ಕಥೆಗಳು ಎನ್ನಲಾಗದು..’ 
ನಗುತ್ತ ಮಗ ಹೇಳಿದ: ‘ಅದೇನೋ ತಿಳೀದು ಅಪ್ಪ. ನೀವು ಹೇಳುವಂಥ ಯಾವ ಕಥೆ ಪುಸ್ತಕಗಳನ್ನು ನಾನು ಓದಿಲ್ಲ. ಆದರೆ ‘ಅಪ್ಪನನ್ನೇ ಕೊಟ್ಟಿಗೆ ಮನೆಯಲ್ಲಿಟ್ಟ ಮಗ’ ಎಂಬ ವರದಿ ಓದಿಯೇ ನಾನು ನಿಮ್ಮನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ನಿರ್ಧಾರದಿಂದ ಹಿಂದೆ ಸರಿದದ್ದು. ಅದನ್ನು ಓದಿದ ದಿನ ನನ್ನಲ್ಲಿ ಆಗಿದ್ದ ಪಶ್ಚಾತ್ತಾಪ ಅಷ್ಟಿಷ್ಟಲ್ಲ ಅಪ್ಪ. ನಮ್ಮನ್ನು ಕಥೆಗಳು ಪ್ರಭಾವಿಸುತ್ತವೆ ಎಂದಾದರೆ ಇಂಥ ವರದಿಗಳನ್ನು ಕಥೆಗಳೆಂದೇ ಏಕೆ ಕಾಣಬಾರದು ಅಲ್ವಾ?’ ಎನ್ನುತ್ತಲೇ ಅಪ್ಪನ ಮಾತ್ರೆ ಚೀಟಿ ಪಡೆದು ಹೊರಟ. 

* * * *

ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ಅತ್ತೆ- ಸೊಸೆ ಕೂಡ ಈ ವರದಿಗಳಲ್ಲಿರುವ ತಮ್ಮ ತಮ್ಮ ಪಾತ್ರಗಳನ್ನು ಗುರುತಿಸಿಕೊಂಡಿದ್ದಿರಬಹುದು …

December 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

೧ ಪ್ರತಿಕ್ರಿಯೆ

  1. SUDHA SHIVARAMA HEGDE

    ಕಥೆ ಸಿಗದಿದ್ದಾಗೆಲ್ಲ ಇಂಥದ್ದೇ ಟ್ರಿಕ್ ಮಾಡ್ತೀರಾ ನೀವು. ಮುಂದಿನವಾರಾನಾದ್ರೂ ನೆಟ್ಟಗೆ ಕಥೆ ಬರೀರಿ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ SUDHA SHIVARAMA HEGDECancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: