ನಿಷೇಧ ಸಂಸ್ಕೃತಿ ಪೊಲೀಸರ ಇತ್ತೀಚಿನ ವರಸೆ!

ನಿಷೇಧ ಸಂಸ್ಕೃತಿ ಪೊಲೀಸರ ಇತ್ತೀಚಿನ ವರಸೆ!

– ಜಿ. ರಾಜಶೇಖರ್

ಕೃಪೆ : ದ ಸ೦ಡೆ ಇ೦ಡಿಯನ್

ಗಾಂಧೀಜಿ ೧೯೩೪ರಲ್ಲಿ ತಮ್ಮ ದಕ್ಷಿಣ ಭಾರತ ಪ್ರವಾಸದ ಸಂದರ್ಭದಲ್ಲಿ ಕರ್ನಾಟಕದ ಕರಾವಳಿಯ ಸುಪ್ರಸಿದ್ಧ ತೀರ್ಥಕ್ಷೇತ್ರವಾದ ಉಡುಪಿಗೆ ಬಂದಿದ್ದರು. ಆ ವೇಳೆಗಾಗಲೇ ಅವರು ಕವಿವರ್ಯ ರವೀಂದ್ರರು ನಾಮಕರಣ ಮಾಡಿದ ’ಮಹಾತ್ಮ’ ಎಂಬ ಹೆಸರಿನಿಂದಲೇ ಗುರುತಿಸಲ್ಪಡುತ್ತಿದ್ದರು. ಉಡುಪಿಗೆ ಬಂದ ಮಹಾತ್ಮರು ಉಡುಪಿಯ ಕೃಷ್ಣಮಠಕ್ಕೆ ಬರದೇ ಇರುತ್ತಾರೆಯೇ ಎಂಬ ನಿರೀಕ್ಷೆಯಲ್ಲಿದ್ದ ಮಠದ ಪಾರುಪತ್ಯೆಗಾರರು ಹಾಗೂ ಊರಿನ ಗಣ್ಯರು ಹಾರತುರಾಯಿ ಹಿಡಿದು ಮಠದ ದ್ವಾರದಲ್ಲಿ ಅವರನ್ನು ಸ್ವಾಗತಿಸಲು ಕಾದು ನಿಂತಿದ್ದರು. ಗಾಂಧೀಜಿಯವರ ಕಾರು ರಥಬೀದಿಯನ್ನು ಪ್ರವೇಶಿಸಿ ಕೃಷ್ಣಮಠದ ಎದುರು ನಿಂತಿತು. ಗಾಂಧೀಜಿಯವರು ಕಾರಿನ ಒಳಗಿನಿಂದಲೇ ’ಕೃಷ್ಣಮಠದಲ್ಲಿ ದಲಿತರಿಗೆ ಪ್ರವೇಶವಿದೆಯೋ’ ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಗೆ ಮಠದ ವತಿಯಿಂದ ಸ್ಪಷ್ಟವಾದ ಉತ್ತರ ಬರಲಿಲ್ಲ. ಗಾಂಧೀಜಿಯವರು ತಮಗೆ ಹೌದು ಅಥವಾ ಇಲ್ಲ ಎಂಬ ಸ್ಪಷ್ಟ ಉತ್ತರ ಬೇಕು ಎಂದು ಆಗ್ರಹ ಪಡಿಸಿದರು. ಉಡುಪಿಯ ಕೃಷ್ಣಮಠಕ್ಕೆ ಆಗ ದಲಿತರು ಮತ್ತು ಇತರ ಕೆಳಜಾತಿಯವರಿಗೆ ಪ್ರವೇಶವಿರಲಿಲ್ಲ. ಇದು ತಿಳಿದದ್ದೇ “ಹಾಗಾದರೆ ನನಗೆ ಇಲ್ಲಿ ಏನೂ ಕೆಲಸವಿಲ್ಲ” ಎಂದು ಹೇಳಿ ಗಾಂಧೀಜಿ ಆ ಕ್ಷಣವೇ ಅಲ್ಲಿಂದ ನಿರ್ಗಮಿಸಿದರು. ಅವರು ಕಾಶಿ ಮತ್ತು ಪುರಿ ಕ್ಷೇತ್ರಗಳಿಗೆ ಹೋದಾಗಲೂ ಇದೇ ಕಾರಣಕ್ಕೆ ಅಲ್ಲಿನ ದೇವಾಲಯಗಳ ಒಳಗೆ ಹೋಗಲು ನಿರಾಕರಿಸಿದ್ದರು. ಗಾಂಧೀಜಿ ದೇವರನ್ನು ನಂಬುವವರಾಗಿದ್ದು, ತನ್ನನ್ನು ತಾನು ಓರ್ವ ಸನಾತನಿ ಎಂದು ಬಣ್ಣಿಸಿಕೊಂಡರೂ, ಕಾಶಿ ವಿಶ್ವನಾಥ ಮತ್ತು ಪುರಿಯ ಜಗನ್ನಾಥ ದೇವಾಲಯಗಳ ದರ್ಶನ ಪಡೆಯಲು ನಿರಾಕರಿಸಿದ್ದು ಆಧುನಿಕ ಭಾರತದ ಇತಿಹಾಸದಲ್ಲಿ ದಾಖಲಾಗಿದೆ ಮತ್ತು ಈಗಲೂ ಅದನ್ನು ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಉಡುಪಿಯ ಕೃಷ್ಣಮಠದ ಒಳಗೆ ಹೋಗಲು ನಿರಾಕರಿಸಿದ್ದು ಮತ್ತು ಅದರ ಹಿನ್ನೆಲೆಯನ್ನು ಮಾತ್ರ ಚರಿತ್ರೆಯಿಂದ ಅಳಿಸಿ ಹಾಕಲಾಗಿದೆ. ಉಡುಪಿಯ ಕ್ಷೇತ್ರ ಮಹಾತ್ಮೆಯನ್ನು ಪ್ರತಿನಿತ್ಯ ಹಾಡಿಹೊಗಳುವ ಸ್ಥಳೀಯ ಮಾಧ್ಯಮಗಳು ಆ ಘಟನೆಯನ್ನು ಮರತೇಬಿಟ್ಟಿವೆ. ೧೬ನೇ ಶತಮಾನದಲ್ಲಿ ಉಡುಪಿಗೆ ಭೇಟಿ ಕೊಟ್ಟ ಕನಕನಿಗೆ ಅವನ ಜಾತಿಯ ಕಾರಣಕ್ಕಾಗಿ ಕೃಷ್ಣಮಠದ ಒಳಗೆ ಪ್ರವೇಶಿಸಲು ನಿರಾಕರಿಸಲಾಗಿತ್ತು. ಕಾಲಾಂತರದಲ್ಲಿ ಮೋಹಕವೂ, ಅದ್ಭುತ ರಮ್ಯವೂ ಆದ ಕನಕನ ಕಿಂಡಿಯ ಕತೆ ಸೃಷ್ಟಿಯಾಯಿತು. ಆದರೆ, ಉಡುಪಿಗೆ ಗಾಂಧೀಜಿ ಭೇಟಿ ಕುರಿತು ಮಾಹಿತಿ ಕ್ರಾಂತಿಯ ಈ ದಿನಗಳಲ್ಲಿ ಅದ್ಭುತ ರಮ್ಯ ಕತೆಗಳನ್ನು ಹೇಳಲಾಗುವುದಿಲ್ಲ. ಚಾರಿತ್ರಿಕ ನೆನಪುಗಳನ್ನು ಒರೆಸಿ ಹಾಕುವುದೇ ಅಪ್ರಿಯ ಸತ್ಯಗಳನ್ನು ಮರೆಮಾಚಲು ಈಗ ಉಳಿದಿರುವ ಏಕಮಾತ್ರ ಉಪಾಯವಾಗಿದೆ. ಉಡುಪಿಯ ಕೃಷ್ಣಮಠದ ಒಳಗೆ ಈಗ ಜಾತಿಯ ಆಧಾರದಲ್ಲಿ ಯಾರಿಗೂ ಪ್ರವೇಶ ನಿರಾಕರಿಸುವುದಿಲ್ಲ. ಆದರೆ, ಅದು ಮಠದ ಸ್ವಯಂ ನಿರ್ಧಾರವಲ್ಲ. ಭಾರತ ಸರ್ಕಾರವೇ ದೇವಾಲಯಗಳ ಒಳಗೆ ಬ್ರಾಹ್ಮಣೇತರರಿಗೆ ಪ್ರವೇಶ ನಿರಾಕರಿಸುವುದನ್ನು ಕಾನೂನುರೀತ್ಯಾ ಅಪರಾಧವೆಂದು ಘೋಷಿಸಿದೆ. ಕೃಷ್ಣಮಠವೂ ಸೇರಿದಂತೆ ನಾಡಿನ ಎಲ್ಲಾ ಪವಿತ್ರ ತೀರ್ಥಕ್ಷೇತ್ರಗಳಿಗೂ ಈ ಕಠೋರವಾದ ಜಾತಿಬೇಧಕ ಆಚರಣೆಗಳ ಚರಿತ್ರೆಯಿದೆ; ಕೆಳಜಾತಿಯವರು ಮತ್ತು ಸ್ತ್ರೀಯರನ್ನು ಅವಮಾನಿಸಿದ ಪರಂಪರೆ ಇದೆ. ಗತಕಾಲದ ಈ ನೆನಪುಗಳನ್ನು ಅಳಿಸಿಹಾಕಿ ಅದರ ಹಿರಿಮೆಯನ್ನು ಮಾತ್ರ ಕೊಂಡಾಡುವುದು ಚರಿತ್ರೆಯನ್ನು ವಿರೂಪಗೊಳಿಸುತ್ತದೆ. ಇದೊಂದು ಬಗೆಯ ಸಾಂಸ್ಕೃತಿಕ ವಿಧ್ವಂಸಕ ಕ್ರಿಯೆ ಮತ್ತು ಅಘೋಷಿತ ಸೆನ್ಸಾರ್‌ಶಿಪ್; ಪ್ರಭುತ್ವ ವಿಧಿಸುವ ಸೆನ್ಸಾರ್‌ಶಿಪ್ ಅಲ್ಲ; ಬದಲು ವ್ಯವಸ್ಥೆಯ ಯಜಮಾನ ಶಕ್ತಿಗಳು ಜನತೆಯ ಮೇಲೆ ಹೇರುವ ನಿಷೇಧ. ಈ ಬಗೆಯ ಸ್ವಘೋಷಿತ ಸೆನ್ಸಾರ್‌ಶಿಪ್‌ಗೆ ಇನ್ನೊಂದು ಉದಾಹರಣೆ, ೧೯೪೮ರಲ್ಲಿ ಹೈದರಾಬಾದ್ ಸಂಸ್ಥಾನ ಭಾರತದಲ್ಲಿ ವಿಲೀನವಾದಾಗ ಸಂಭವಿಸಿದ ಮುಸ್ಲಿಮರ ಸಾಮೂಹಿಕ ಕಗ್ಗೊಲೆ. ಹೈದರಾಬಾದ್ ಸಂಸ್ಥಾನವನ್ನು ಭಾರತಕ್ಕೆ ಸೇರ್ಪಡೆಗೊಳಿಸಲು ಹೈದರಾಬಾದ್ ನಿಜಾಮ ನಿರಾಕರಿಸಿದ್ದ ದಿನಗಳಲ್ಲಿ ರಜಾಕಾರರು ಎಂಬ ನಿಜಾಮನ ಬಾಡಿಗೆ ಬಂಟರ ಪಡೆ ಸಂಸ್ಥಾನದ ಹಿಂದೂ ಪ್ರಜೆಗಳ ಮೇಲೆ ಹಲ್ಲೆ, ಲೂಟಿ, ಅತ್ಯಾಚಾರ ಇತ್ಯಾದಿ ಹಿಂಸಾಕೃತ್ಯಗಳನ್ನು ವ್ಯಾಪಕವಾಗಿ ನಡೆಸಿತ್ತು. ಸಂಸ್ಥಾನದ ಒಳಗೆ ಭಾರತದ ಸ್ಯೆನ್ಯ ಪ್ರವೇಶಿಸಿದ ನಂತರ ರಜಾಕಾರರ ಹಿಂಸೆಗೆ ಪ್ರತಿಕಾರವಾಗಿ ಮುಸ್ಲಿಮರ ಮೇಲೆ ಆ ಹಿಂಸೆಯ ಹಲವು ಪಟ್ಟು ಹೆಚ್ಚು ಹಿಂಸೆ ನಡೆಸಲಾಯಿತು. ಈ ಸೇಡಿನ ಹಿಂಸಾಚಾರದಿಂದಾಗಿ ಸುಮಾರು ೩೦,೦೦೦ ಮುಸ್ಲಿಮರ ಸಾವಿಗೀಡಾದರು. ಹೈದರಾಬಾದ್ ಸಂಸ್ಥಾನದ ಕನ್ನಡ ಭಾಷಿಕ ಪ್ರಾಂತ್ಯಗಳಾಗಿದ್ದ ಬೀದರ್, ಗುಲ್ಬರ್ಗಾ ಮತ್ತು ರಾಯಚೂರುಗಳ ಸಾಮಾನ್ಯ ಮುಸ್ಲಿಮ್ ಪ್ರಜೆಗಳು ಸಹ ಹೀಗೆ ಕೊಲೆಯಾದವರಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು. ಆದರೆ, ಈ ಹಿಂಸಾಚಾರದ ನೆನಪನ್ನೂ ಸಹ ಕನ್ನಡ ಸಂಸ್ಕೃತಿಯಿಂದ ಅಳಿಸಿ ಹಾಕಲಾಗಿದೆ. ನಿಜಾಮನ ಆಳ್ವಿಕೆಯಿಂದ ಸಂಸ್ಥಾನ ಬಿಡುಗಡೆ ಹೊಂದಿ ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾದ ದಿನವನ್ನು ಪ್ರತಿವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಕರ್ನಾಟಕ ಏಕೀಕರಣದ ದಿನವನ್ನೂ ಸಹ ಪ್ರತಿವರ್ಷ ಆಚರಿಸಲಾಗುತ್ತದೆ. ಕನ್ನಡಿಗರ ಸಹನಶೀಲತೆ, ಔದಾರ್ಯಗಳನ್ನಂತೂ ಪ್ರತಿದಿನವೂ ಅತಿಶಯಗೊಳಿಸಿ ಹೊಗಳಲಾಗುತ್ತದೆ. ಆದರೆ, ಕರ್ನಾಟಕ ರಾಜ್ಯೋದಯದ ಆಸುಪಾಸಿನ ದಿನಗಳಲ್ಲಿ ರಾಜ್ಯದ ಉತ್ತರ ಭಾಗದ ಮೂರು ಜಿಲ್ಲೆಗಳಲ್ಲಿ ನಡೆದ ನರಮೇಧವನ್ನು ಕರ್ನಾಟಕದ ಲೇಖಕರು, ಕಲಾವಿದರು, ಇತಿಹಾಸಕಾರರು, ಸಮಾಜಶಾಸ್ತ್ರಜ್ಞರು ಮತ್ತು ಮಾಧ್ಯಮದವರು ಗುರುತಿಸಲು ಸಹ ನಿರಾಕರಿಸುತ್ತಾರೆ. ಕರ್ನಾಟಕದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸರ್ಕಾರದ ಜಾಹಿರಾತುಗಳ ದುರಾಶೆಯಲ್ಲಿ ಕಂತೆ ಕಂತೆ ರದ್ದಿ ಪ್ರಕಟಿಸಿದ ಕನ್ನಡ ಪತ್ರಿಕೆಗಳ ಯಾವ ವಿಶೇಷಾಂಕ ಸಂಚಿಕೆಯಲ್ಲೂ ಈ ಘೋರ ದುರಂತದ ಪ್ರಸ್ತಾಪವಿರಲಿಲ್ಲ. ಇದಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಹೈದರಾಬಾದ್ ಕರ್ನಾಟಕದ ಪ್ರಗತಿಪರ ಮತ್ತು ಎಡಪಂಥೀಯ ಸಂಘಟನೆಗಳವರೂ ಸಹ ಈ ಹತ್ಯಾಕಾಂಡದ ಬಗ್ಗೆ ಅಲಕ್ಷ್ಯ ತಳೆದಿದ್ದಾರೆ. ನಾಗರಿಕ ಸಮಾಜದ ಸ್ವಯಂ ಘೋಷಿತ ಸೆನ್ಸಾರ್‌ಶಿಪ್ ಇದಕ್ಕಿಂತ ಹೆಚ್ಚು ಅಸಂಗತವಾಗಿರಲು ಸಾಧ್ಯವೆ? ನಾಗರಿಕ ಸಮಾಜ ಧಾರ್ಮಿಕ ಮೂಲಭೂತವಾದಿಗಳ ಹಿಡಿತದಲ್ಲಿದ್ದು ಸರಕಾರ, ಮಿಲಿಟರಿ ಸರ್ವಾಧಿಕಾರ ಅಥವಾ ರಾಜಪ್ರಭುತ್ವದ ಕೈವಶವಾಗಿರುವ ಸೌದಿ ಅರೇಬಿಯ, ಪಾಕಿಸ್ತಾನ, ಈಜಿಪ್ಟ್, ಇರಾನ್ ಮೊದಲಾದ ಇಸ್ಲಾಮಿಕ್ ದೇಶಗಳು ಹಾಗೂ ಅಮೆರಿಕದ ಸಾಮ್ರಾಜ್ಯಶಾಹಿಯ ಕೈಗೊಂಬೆಗಳಾಗಿರುವ ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ ಕೆಲವು ನಿರಂಕುಶ ಪ್ರಭುತ್ವಗಳು ತಮ್ಮ ಲೇಖಕರು, ಕಲಾವಿದರು, ಬುದ್ಧಿಜೀವಿಗಳು ಮತ್ತು ಪತ್ರಕರ್ತರ ಮೇಲೆ ಕಠೋರ ನಿರ್ಬಂಧಗಳನ್ನು ವಿಧಿಸುವುದು ಒಂದು ಮಾಮೂಲು ವಿದ್ಯಮಾನ. ಸೋವಿಯತ್ ರಷ್ಯಾದಲ್ಲಿ ಸರ್ಕಾರವೇ ವಿಧಿಸಿದ್ದ ಸೆನ್ಸಾರ್‌ಶಿಪ್‌ನಿಂದ ಪ್ರತಿಭಾವಂತ ಲೇಖಕರಾದ ಬೋರಿಸ್ ಪಾಸ್ಟರ್‌ನಾಕ್, ಅಲೆಕ್ಸಾಂಡರ್ ಸೋಲ್ಜೆನಿಟ್ಸಿನ್, ಕವಯಿತ್ರಿ ಅನ್ನಾ ಆತ್ಮತೋವ, ಕವಿ ಮಯಕೋವ್‌ಸ್ಕಿ ಮುಂತಾದವರೂ ಸಹ ತಪ್ಪಿಸಿಕೊಳ್ಳಲಾಗಲಿಲ್ಲ. ಚೀನಾದ ಕಮ್ಯೂನಿಸ್ಟ್ ಸರ್ಕಾರವಂತೂ ಫ್ರಾಂಝ್‌ಕಾಫ್ಕನ ಕೃತಿಗಳನ್ನೇ ನಿಷೇಧಿಸಿದೆ. ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಸರಕಾರದ ಸೆನ್ಸಾರ್‌ಶಿಪ್, ಮಿಲಿಟರಿ ಮತ್ತು ಕಮ್ಯೂನಿಸ್ಟ್ ಸರಕಾರಗಳು ವಿಧಿಸುವ ನಿಬಂಧನೆಗಳಷ್ಟು ದೊಡ್ಡ ಸಮಸ್ಯೆ ಅಲ್ಲ. ಕೆಲವು ವರ್ಷಗಳ ಹಿಂದೆ ಸಲ್ಮಾನ್ ರಶ್ದಿಯವರ ’ದ ಸೆಟಾನಿಕ್ ವರ್ಸಸ್’ ಕಾದಂಬರಿಯ ಮೇಲೆ ಹೇರಲಾದ ನಿಷೇಧಾಜ್ಞೆ ಮತ್ತು ಲೇಖಕಿ ತಸ್ಲಿಮಾ ನಸ್ರೀನ್‌ರ ಮೇಲೆ ವಿಧಿಸಲಾದ ನಿರ್ಬಂಧದ ಉದಾಹರಣೆಗಳಿದ್ದರೂ ಅವು ತಮ್ಮ ಬೌದ್ಧಿಕ ಸ್ವಾತಂತ್ರ್ಯದ ಅಪವಾದಗಳೇ ಹೊರತು ಅದರ ಸಾಮಾನ್ಯ ಸ್ಥಿತಿಯಲ್ಲ. ಈ ಲೇಖಕರ ಕೃತಿಗಳನ್ನು ನಿಷೇಧಿಸಲು ನಾಗರಿಕ ಸಮಾಜದ ಕೆಲವು ವಲಯಗಳಿಂದ ಒತ್ತಡವಿದ್ದುದರಿಂದ ಸರಕಾರ ಈ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಯಿತು. ೧೯೪೭ರಿಂದ ಈಚೆಗೆ ಪ್ರಭುತ್ವ ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿ, ಸಾಹಿತಿಗಳು, ಕಾವಿದರು, ಚಲನಚಿತ್ರ ನಿರ್ಮಾಪಕರು, ಚಿಂತಕರು ಮತ್ತು ಪತ್ರಕರ್ತರ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ಗೌರವಿಸುತ್ತಾ ಬಂದಿದೆ. ಭಾರತದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆ ಪ್ರಭುತ್ವದ ಸೆನ್ಸಾರ್‌ಶಿಪ್‌ಗಳಿಗಿಂತ ಹೆಚ್ಚಾಗಿ ನಾಗರಿಕ ಸಮಾಜದ ಅಸಹನೆಯದ್ದು. ಕಳೆದ ಕೆಲವು ವರ್ಷಗಳಲ್ಲಿ ಲೇಖಕ-ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ತಲೆದೋರಿದ ಎಲ್ಲಾ ವಿಚಾರಗಳಲ್ಲೂ, ನಾಗರಿಕ ಸಮಾಜದ ಕೆಲವು ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಗುಂಪುಗಳೇ ಪ್ರಧಾನ ಪಾತ್ರಧಾರಿಗಳಾಗಿದ್ದವು. ಉದಾಹರಣೆಗೆ ಲೋಕಖ್ಯಾತ ಕಲಾವಿದ ಎಂ.ಎಫ್. ಹುಸೇನ್‌ರ ವರ್ಣಚಿತ್ರಗಳು, ಆನಂದ್ ಪಟವರ್ಧನ್ ಅವರ ಸಾಕ್ಷ್ಯಚಿತ್ರಗಳು ಹಾಗೂ ದಿ. ಹಬೀಬ್ ತನ್ವೀರ್ ಅವರ ನಾಟಕಗಳ ಬಗ್ಗೆ ಕ್ಯಾತೆ ತೆಗೆದು ಅವುಗಳ ನಿಷೇಧಕ್ಕೆ ಹಕ್ಕೊತ್ತಾಯ ಮಂಡಿಸಿದ್ದು ಸಂಘ ಪರಿವಾರ. ಮಹಾರಾಷ್ಟ್ರದ ಶಿವಸೇನೆಯಂತೂ ಈ ಬಗೆಯ ದುರಾಗ್ರಹ ಮತ್ತು ಪುಂಡಾಟಿಕೆಯಿಂದ ರಾಜಕೀಯ ತಂತ್ರಕ್ಕೆ ಇನ್ನೊಂದು ಹೆಸರಾಗಿದೆ. ಕರ್ನಾಟಕದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿಯೇ ಶಿವರಾಮ ಕಾರಂತರ ’ಗರ್ಭಗುಡಿ’, ಶ್ರೀರಂಗರ ’ಹರಿಜನ್ವಾರ’, ಸ್ವಾತಂತ್ಯ್ಯಾ ನಂತರ ಅನಂತಮೂರ್ತಿಯವರ ’ಸಂಸ್ಕಾರ’, ಎಚ್.ಎಸ್. ಶಿವಪ್ರಕಾಶ್‌ರ ನಾಟಕ ’ಮಹಾಚೈತ್ರ’, ಬಂಜಗೆರೆ ಜಯಪ್ರಕಾಶ ಅವರ ಸಂಶೋಧನಾ ಕೃತಿ ’ಆನುದೇವಾ ಹೊರಗಣವನು’, ಎಂ.ಎಂ. ಕಲ್ಬುರ್ಗಿಯವರ ಅಧ್ಯಯನ ’ಮಾರ್ಗ’, ಕೆ.ವಿ. ನಾರಾಯಣ ಅವರ ’ಧರ್ಮಕಾರಣ’ ಮುಂತಾದ ಕೃತಿಗಳ ನಿಷೇಧಕ್ಕೆ ಒತ್ತಾಯಿಸಿದ್ದು ಇಲ್ಲಿನ ಜಾತಿ ಸಂಘಟನೆಗಳು. ಈ ಉದಾಹರಣೆಗಳಿಗೆ ಇತ್ತೀಚಿನದ್ದು ಹೆಚ್.ಎಸ್. ನಾಗವೇಣಿ ಅವರ ಕಾದಂಬರಿ ’ಗಾಂಧಿ ಬಂದ’ ಕುರಿತು ಈಗಾಗಲೇ ತಲೆದೋರಿರುವ ವಿವಾದ. ಈ ಎಲ್ಲಾ ವಿವಾದಗಳಲ್ಲೂ ನಾವು ಅಗತ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಸರಕಾರ ಈ ವಿವಾದಗಳಲ್ಲಿ ತಟಸ್ಥ ಪ್ರೇಕ್ಷಕ. ನಿಷೇಧಕ್ಕಾಗಿ ಒತ್ತಾಯ, ಅಸಹನೆ, ಒಮ್ಮೊಮ್ಮೆ ಹಿಂಸಾಚಾರ ಈ ಬಗೆಯ ಅತಿರೇಕಕ್ಕೆ ತಮ್ಮ ವಾದವನ್ನು ಒಯ್ಯುತ್ತಿರುವುದು ನಾಗರಿಕ ಸಮಾಜದ ಸಂಘಟನೆಗಳೇ ಹೊರತು ಪ್ರಭುತ್ವವಲ್ಲ. ಹಾಗೆ ನೋಡಿದರೆ ಪ್ರಭುತ್ವದ ಸೆನ್ಸಾರ್‌ಶಿಪ್‌ನಿಂದ ತಪ್ಪಿಸಿಕೊಳ್ಳಲು ನಾವು ಕಳ್ಳದಾರಿಗಳನ್ನು ಕಂಡುಕೊಳ್ಳಬಹುದು. ಆದರೆ, ನಾಗರಿಕ ಸಮಾಜದ ಸಂಘಟಿತ ಗುಂಪುಗಳ ಅಸಹನೆಯಿಂದ ತಪ್ಪಿಸಿಕೊಳ್ಳುವುದು ದುಸ್ಸಾಧ್ಯ. ಇದು ನಮ್ಮ ಪ್ರಜಾಪ್ರಭುತ್ವ ಈಗ ಎದುರಿಸುತ್ತಿರುವ ಅತಿದೊಡ್ಡ ಅಪಾಯ]]>

‍ಲೇಖಕರು G

May 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

4 ಪ್ರತಿಕ್ರಿಯೆಗಳು

 1. ಅಶೋಕವರ್ಧನ ಜಿ.ಎನ್

  ನಿಷೇಧಿತ ಕನಕನಿಗೆ `ಕಿಂಡಿ’ಯ ಮರ್ಯಾದೆ ಕೊಟ್ಟವರು, ಸ್ವತಃ ತಿರಸ್ಕರಿಸಿದ ಗಾಂಧಿಗೆ `ಕಾರ್ ಪಾರ್ಕ್’ ಕಟ್ಟಿಸಬಹುದಲ್ಲವೇ?
  ಅಶೋಕವರ್ಧನ

  ಪ್ರತಿಕ್ರಿಯೆ
 2. Appi

  ಸಲ್ಮಾನ್ ರಶ್ದಿಯವರ ’ದ ಸೆಟಾನಿಕ್ ವರ್ಸಸ್’ ಕಾದಂಬರಿಯ ಮೇಲೆ ಹೇರಲಾದ ನಿಷೇಧಾಜ್ಞೆ ಮತ್ತು ಲೇಖಕಿ ತಸ್ಲಿಮಾ ನಸ್ರೀನ್‌ರ ಮೇಲೆ ವಿಧಿಸಲಾದ ನಿರ್ಬಂಧದ ಉದಾಹರಣೆಗಳಿದ್ದರೂ ಅವು ತಮ್ಮ ಬೌದ್ಧಿಕ ಸ್ವಾತಂತ್ರ್ಯದ ಅಪವಾದಗಳೇ ಹೊರತು ಅದರ ಸಾಮಾನ್ಯ ಸ್ಥಿತಿಯಲ್ಲ. ಈ ಲೇಖಕರ ಕೃತಿಗಳನ್ನು ನಿಷೇಧಿಸಲು ನಾಗರಿಕ ಸಮಾಜದ ಕೆಲವು ವಲಯಗಳಿಂದ ಒತ್ತಡವಿದ್ದುದರಿಂದ ಸರಕಾರ ಈ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಯಿತು.
  Idu Selective secularism alve, ottadagalu yella kaaladalli irutte, baudhika mattu saamajika swatantryada nija rakshakaru yaavudakku baggabaaradu.

  ಪ್ರತಿಕ್ರಿಯೆ
 3. K.V. Tirumalesh

  Dharmakaarana: K.V.Narayan? or is it P.V.Narayan? I am confused.
  kvtirumalesh

  ಪ್ರತಿಕ್ರಿಯೆ
 4. ಎಚ್. ಸುಂದರ ರಾವ್

  ಗಾಂಧೀಜಿ “ಉಡುಪಿಯ ಕೃಷ್ಣಮಠದ ಒಳಗೆ ಹೋಗಲು ನಿರಾಕರಿಸಿದ್ದು ಮತ್ತು ಅದರ ಹಿನ್ನೆಲೆಯನ್ನು ಮಾತ್ರ ಚರಿತ್ರೆಯಿಂದ ಅಳಿಸಿ ಹಾಕಲಾಗಿದೆ.”
  -“ಚರಿತ್ರೆಯಿಂದ ಅಳಿಸಿ ಹಾಕಿದ” ಘಟನೆಯ ವಿವರ ರಾಜಶೇಖರ್ ರವರಿಗೆ ಹೇಗೋ ಸಿಕ್ಕಿರಬೇಕು ತಾನೆ? ಅಂದರೆ ಅದು ಚರಿತ್ರೆಯಲ್ಲಿ ಇದೆ; ಅಳಿಸಿಹೋಗಿಲ್ಲ. ಅಳಿಸಿಹಾಕುವ ಪ್ರಯತ್ನ ನಡೆದಿರಬಹುದು. ಆ ಪ್ರಯತ್ನ ವಿಫಲವಾಗಿದೆ.
  ರಾಜಶೇಖರ್ ಕರ್ನಾಟಕದ ಉತ್ತರ ಭಾಗದ ಮೂರು ಜಿಲ್ಲೆಗಳಲ್ಲಿ ಕೊಲೆಯಾದ ಮುಸ್ಲಿಮರ ಬಗ್ಗೆ ಪ್ರಸ್ತಾಪಿಸುತ್ತಾರೆ. ಮಾನವನ ಚರಿತ್ರೆ ರಕ್ತಸಿಕ್ತ ಘಟನೆಗಳಿಂದ, ಹಿಂಸೆಯಿಂದ ಇಡಿಕಿರಿದು ಹೋಗಿದೆ. ಬಹುಶಃ ಅತ್ಯಂತ ಹೆಚ್ಚು ಹಿಂಸೆ ನಡೆದಿರುವುದು ಧರ್ಮದ ಹೆಸರಿನಲ್ಲಿಯೇ. ಹಿಂಸೆಯ ಮೂಲಕವೇ “ಧರ್ಮ”ಗಳು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಇತಿಹಾಸದ ಪುಟಪುಟಗಳಲ್ಲಿ ತುಂಬಿಹೋಗಿರುವ ಅನಂತ ಸಂಖ್ಯೆಯ ಇಂತಹ ಘಟನೆಗಳ ಪೈಕಿ ಯಾವುದನ್ನು ನೆನಪಿಡುವುದು? ನೆನಪಿಟ್ಟು ಏನು ಮಾಡುವುದು? ಹಿಂಸೆ, ದ್ವೇಷಗಳಿಂದ ತುಂಬಿರುವ ಮಾನವ ಇತಿಹಾಸದ ಅರಿವು ಹಿಂಸೆಯನ್ನು ಪ್ರಚೋದಿಸುತ್ತದೆಯೋ ಕಡಿಮೆ ಮಾಡುತ್ತದೆಯೋ?
  “ನಿಷೇಧ ಸಂಸ್ಕೃತಿ” ಪ್ರಜಾಪ್ರಭುತ್ವ ಎದುರಿಸುತ್ತಿರುವ ಅಪಾಯಗಳಲ್ಲಿ ಒಂದು ಎಂದು ಖಂಡಿತ ಒಪ್ಪಬಹುದು. ಆದರೆ ಅದು ಪ್ರಜಾಪ್ರಭುತ್ವ ಎದುರಿಸುತ್ತಿರುವ “ಅತಿದೊಡ್ಡ” ಅಪಾಯವೇನೂ ಅಲ್ಲ. ಇಷ್ಟಕ್ಕೂ, ಮಡೆಸ್ನಾನವನ್ನು ಪ್ರತಿಭಟಿಸುವ ಹಕ್ಕು ಬೇಕು ಎನ್ನುವವರು ಎಂ.ಎಫ್. ಹುಸೇನರನ್ನು ಪ್ರತಿಭಟಿಸುವ ಹಕ್ಕನ್ನು ಒಪ್ಪಿಕೊಳ್ಳಬೇಕು ತಾನೆ?
  ನನಗೆ ಕಂಡಂತೆ ಖಾಸಗಿ ಸಹಭಾಗಿತ್ವ ಎಂಬ ಹೆಸರಿನಲ್ಲಿ ಇಡೀ ದೇಶ, ಸರಕಾರ ಒಳಗಿಂದೊಳಗೇ ಶ್ರೀಮಂತ ಕಂಪೆನಿಗಳ ಕೈವಶವಾಗುತ್ತಿರುವುದು ನಮ್ಮ ಪ್ರಜಾಪ್ರಭುತ್ವ ಎದುರಿಸುತ್ತಿರುವ ಅತಿ ದೊಡ್ಡ ಅಪಾಯ.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಎಚ್. ಸುಂದರ ರಾವ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: