ನೀಗಿಕೊಂಡ ಗೆಳೆಯ

ವೆಂಕಟ್ ಮೋಂಟಡ್ಕ ಇನ್ನಿಲ್ಲ. ಗೆಳತಿ ಹೇಮಾ ಬದುಕಿನ ಭಾಗವಾಗಿದ್ದ, ಸುಳ್ಯದಲ್ಲಿ ಒಂದು ಹೋರಾಟ ಪ್ರಜ್ಞೆಯನ್ನು ಜೀವಂತವಾಗಿಟ್ಟಿದ್ದ ಮೋಂಟಡ್ಕ ನಡು ದಾರಿಯಲ್ಲೇ ಪಯಣ ಮುಗಿಸಿ ಹೊರಟಿದ್ದಾರೆ. ಅವರ ಬದುಕಿನ ಬಗ್ಗೆ ಅವರ ಜೀವದ ಗೆಳೆಯ ಕೆ ಪಿ ಸುರೇಶ ಇಲ್ಲಿ ನೆನೆದಿದ್ದಾರೆ.
-ಕೆ.ಪಿ.ಸುರೇಶ
friends
ಗೆಳೆಯ ವೆಂಕಡ್ ಮೋಂಟಡ್ಕ ತೀರಿಕೊಂಡಿದ್ದಾನೆ..ಚಿಂತೆ, ಸಂಕಷ್ಟ ಮತ್ತು ಕನಸುಗಳು ಒಟ್ಟಿಗೆ ಎದೆಗೆ ಗುದ್ದಿರಬೇಕು.
ಸುಳ್ಯದ ಕಾಲೇಜಿನಲ್ಲಿ, ಅಷ್ಟೇನೂ ಉಪಯೋಗಕ್ಕೆ ಬಾರದ ಡಿಗ್ರಿ ಪಡೆದುಕೊಂಡಿದ್ದ ವೆಂಕಟ್ ನಾವು ಊಹಿಸಿಯೇ ಇರದಂಥಾ ಸೌದೆ ವ್ಯಾಪಾರವನ್ನೂ ಪ್ರಯತ್ನಿಸಿದ್ದ. ಎಂಥಾ ರಗಳೆ ವೃತ್ತಿಯೂ ಸಾಹಸದಂತೆ ಕಾಣುವ ವಯಸ್ಸದು. ಆದರೆಇಂಥಾ ವ್ಯಾಪಾರಕ್ಕಿಳಿದಿದ್ದರೆ, ವೆಂಕಟ್, ಸುಳ್ಯದ ಅನಾಮಿಕ ಸಿರಿವಂತನಾಗಿರುತ್ತಿದ್ದನೋ ಏನೋ.
ಆದರೆ ನಮ್ಮ ಎಲ್ಲ ಸಣ್ಣ ಊರುಗಳ ಪ್ರತಿಭಾವಂತರಂತೆ ತನ್ನ ಆಂಟೆನ್ನಾವನ್ನು ರಾಜ್ಯದ ಚಳುವಳಿ, ಚಿಂತನೆಗಳಿಗೆ ಒಡ್ಡಿಕೊಂಡಿದ್ದ ವೆಂಕಟ್ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ.. ಸುಳ್ಯದ ಅಭಿನಯ ತಂಡದ ಅವಿಭಾಜ್ಯ ಅಂಗವಾಗಿದ್ದ ವೆಂಕಟ್ ಹಿನ್ನೆಲೆಯ ಎಲ್ಲ ಕೆಲಸಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದ.. ಉತ್ತಮ ಕೀಬೋರ್ಡ ವಾದಕನಾಗಿದ್ದ ವೆಂಕಟ್, ಅದ್ಭುತ ಮಿಮಿಕ್ರಿ ಪಟು ಕೂಡಾ.
ಇವೆಲ್ಲಾ ಗರ್ಭಸ್ಥ ಶಿಶು ಇರವು ತೋರಿಸಲು ಒದೆಯುವಂತೆ, ಪ್ರತಿಭೆ ಪ್ರಕಟಗೊಳ್ಳುವ ಬಗೆ. ಅಷ್ಟಕ್ಕೇ ನಿಂತಿದ್ದರೆ ವೆಂಕಟ್ ಸಣ್ಣ ಊರುಗಳಲ್ಲಿ ಕಾಣಸಿಗುವ ಮೀಡಿಯೋಕರ್ ಆಗಿ ಉಳಿಯುತ್ತಿದ್ದ. ಆದರೆ ಅವನೊಳಗೊಬ್ಬ ಆರ್ಟಿಸ್ಟ್ ಇದ್ದ. ಸುಳ್ಯ ಪುತ್ತೂರಿನ ಮಣ್ಣಿನ ಗುಣವೋ, ಅದೆಷ್ಟು ಕಲಾವಿದರು.. ಚಂದ್ರನಾಥ್, ಮನೋಹರ್, ಮೋನಪ್ಪ, ಸೋನಾ, ಅವರೊಂದಿಗೇ ಕುಂಚ ಹಿಡಿದ ವೆಂಕಟ್ ತಾಂತ್ರಿಕ ಕುಶಲತೆಯ ಕಲಾವಿದನಾಗಿ ಬೆಳೆದ. ಮತ್ತೆ, ನಮ್ಮ ಹಳ್ಳಿಗಾಡಿನ ಪ್ರತಿಭೆಗಳ ದುರಂತಕ್ಕೆ ವೆಂಕಟನೇ ರೂಪಕ. ಆ ಕಾಲದಲ್ಲಿ, ಕಲಾಶಿಕ್ಷಣದ ಅವಕಾಶ ದೊರೆತಿದ್ದರೆ ವೆಂಕಟ್ ಅದ್ಭುತ ಕಲಾವಿದನಾಗಿ ಬೆಳೆಯುತ್ತಿದ್ದನೋ ಏನೋ. ‘ಇನ್ನು ಎಂತಾದ್ರೂ ಇಂತಿಷ್ಟೇ..’ ಎಂದು ವೆಂಕಟ್ ಒಮ್ಮೊಮ್ಮೆ ವಿಷಾದದ ನಿಟ್ಟುಸಿರು ಬಿಟ್ಟಿದ್ದಿದೆ.
ಹೊಟ್ಟೆಪಾಡಿನ ಅನಿವಾರ್ಯತೆಗೆ ಏನಾದರೂ ಮಾಡಬೇಕಲ್ಲ.,ಎಂ.ಬಿ.ಸದಾಶಿವ, ‘ಚೇತನ’ ಎನ್ನುವ ಪತ್ರಿಕೆ ಶುರು ಮಾಡಿದಾಗ ಅದರ ಸಾರಥ್ಯ ವಹಿಸಿದ ವೆಂಕಟ್, ಅದನ್ನು ನಮ್ಮ ಗ್ರಾಮಾಂತರದ ಅತ್ಯುತ್ತಮ ಪತ್ರಿಕೆಯಾಗಿ ಬೆಳೆಸಿದ. ಆದರೆ ಇದು ಯಾವುದೂ ವೆಂಕಟ್ ಗೆ ಅನ್ನವೂ ನೀಡಲಿಲ್ಲ.; ತೃಪ್ತಿಯನ್ನೂ ನೀಡಲಿಲ್ಲ. ಆಢ್ಯ ಕುಟುಂಬದಲ್ಲಿ ಹುಟ್ಟಿದರೂ ತೀರಾ ಬಡತನ ಅನುಭವಿಸಿದ್ದ ವೆಂಕಟ್ ಈ ಸಣ್ಣ ತಾಲೂಕುಗಳ ಬಹುತೇಕರಂತೆ, ತಾನೇನು ಮಾಡಬೇಕು ಅನ್ನುವ ಸ್ಪಷ್ಠತೆಯೂ ಇಲ್ಲದೇ, ಕಿತ್ತು ಬೆಂಗಳೂರೋ ಬೊಂಬಾಯಿಯೋ ಸೇರುವ ಮನಸೂ ಮಾಡದೇ ಉಳಿದ. ಆದರೆ ಹೀಗೆ ಉಳಿದ ಎಷ್ಟೋ ಮಂದಿಗಿಂತ ಹೆಚ್ಚು ಕ್ರಿಯಾಶೀಲನಾದ, ಸೃಜನಶೀಲನಾದ..
ನನಗೆ ಪರಿಚಯವಾಗುವ ವೇಳೆಗೆ ವೆಂಕಟ್ ಹೊಸತೇನಾದರೂ ಮಾಡುವ ಹಂಬಲದಲ್ಲಿದ್ದ. ಪೇಟೆ ಬದಿಯ ಪಿತ್ರಾರ್ಜಿತ ತುಂಡು ಭೂಮಿ ಮಾರಿದ ದುಡ್ಡಲ್ಲಿ ಫೈನಾನ್ಸ್ ಒಂದನ್ನು ಶುರು ಮಾಡಿದ್ದ ವೆಂಕಟ್ಗೆ ಕೊನೆಗೆ ಅದೇ ದೊಡ್ಡ ಉರುಳಾಗಿ ಪರಿಣಮಿಸಿತು. ಬೇರೆ ಯಾರೇ ಆಗಿದ್ದರೂ ದುಡ್ಡಿನ ವ್ಯವಹಾರದ ಕಾರಣಕ್ಕೆ ಸ್ಥಳೀಯವಾಗಿ ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆಂದು ಚಳವಳಿ, ಸಿದ್ಧಾಂತದ ಉಸಾಬರಿಯೇ ಬೇಡ ಎಂದು ಜಾರಿಕೊಳ್ಳುತ್ತಿದ್ದರು. ಆದರೆ ವೆಂಕಟ್ ಸತತವಾಗಿ ಜನಪರ ಇಶ್ಯೂಗಳೊಂದಿಗೆ ಗುರುತಿಸಿಕೊಳ್ಳತೊಡಗಿದ. ಒಂದು ಸಭೆ, ಪ್ರತಿಭಟನೆ ಏನೇ ಇದ್ದರೂ, ವೆಂಕಟ್ ಸುತ್ತವೇ ಅದು ತಿರುಗುತ್ತಿತ್ತು. ಅದೆಷ್ಟು ದುಡ್ಡು ಇಂಥಾ ಉಸಾಬರಿಯಲ್ಲಿ ಕಳಕೊಂಡನೋ..
ಆ ವೇಳೆಗೆ ಆತ ಹೇಳುತ್ತಿದ್ದ ಊರು ಕತೆಗಳ ಮೋಹಕ್ಕೆ ಬಿದ್ದ ನಾನು ದುಂಬಾಲು ಬಿದ್ದ ಕಾರಣಕ್ಕೆ, ವೆಂಕಟ್ ಬರೆದ ಕಥೆಗಳು ಆತನ ಪ್ರತಿಭೆಯ ಇನ್ನೊಂದು ಆಯಾಮವನ್ನು ಪ್ರಕಟಿಸಿತು. ಆಮೇಲೆ ಸುಳ್ಯದ ‘ಪಯಸ್ವಿನಿ’ ಎಂಬ ಪತ್ರಿಕೆಯ ಕರ್ಣಧಾರತ್ವ ವಹಿಸಿದ ವೆಂಕಟ್ ಅದನ್ನೂ ಗಂಭೀರ ಪತ್ರಿಕೆಯನ್ನಾಗಿಸಿದ.
ಈ ವೇಳೆಗೆ ಫೈನಾನ್ಸ್ ಕಷ್ಟಕ್ಕೆ ಸಿಕ್ಕಿ ಹಾಕಿಕೊಂಡದ್ದೇ ವೆಂಕಟ್ ದಿಕ್ಕೆಟ್ಟುಹೋದ.. ಸಾಲದ ಪ್ರಶ್ನೆ ಅಲ್ಲ. ನೆಚ್ಚಿದ ಕಡೆಯಿಂದ ಕಿಂಚಿತ್ತೂ ಸಹಾಯ ಸಿಗದ ದುಗುಡ ಅದು. ಒಂದು ಕಾಲದಲ್ಲಿ ಸಹಾಯ ಪಡೆದವರೆಲ್ಲ ಕಣ್ಣಿಗೇ ಬೀಳದಂತೇ ಓಡಾಡುತ್ತಿದ್ದ ಬಗೆ ನೋಡಿದ ನನ್ನಂಥವನಿಗೇ ಗೊತ್ತು. ಊರು ಸಾಕೆನಿಸಿದ ಕಾರಣಕ್ಕೋ, ಹೊಸ ಅವಕಾಶಗಳ ಸಾಧ್ಯತೆಯ ಹುಡುಕಾಟದ ತೆವಲಿಗೋ ನಾನು ಊರು ಬಿಟ್ಟಾಗ, ‘ನೀವೂ ಊರು ಬಿಡಿ ಮಾರಾಯ್ರೇ, ಕರೆವ ಊರೂ ಅಲ್ಲ, ಪೊರೆವ ಊರೂ ಅಲ್ಲ, ಹೊರಟು ಬಿಡಿ’ ಎಂದು ವೆಂಕಟ್ ಗೆ ಹೇಳುತ್ತಲೇ ಬಂದೆ. ಆದರೆ ಬೆಂಗಳೂರಿನ ‘ಗೋಧೂಳಿ’ ಪ್ರಕಾಶನದ ಬೋರಯ್ಯನಂಥ ಸಹೃದಯರ ಪರಿಚಯವಾದ ಬಳಿಕ ವೆಂಕಟ್ಗೂ ಹೌದೆನ್ನಿಸಿರಬೇಕು. ಕಿತ್ತು ಬೆಂಗಳೂರಿಗೆ ಬಂದಾಗ. ಬೋರಯ್ಯನವರು, ನೆರಳಾಗಿ ನಿಂತು ಸಹಾಯ ಮಾಡಿದರು. ಅರ್ಧ ಆಯುಸ್ಸಿನ ಬಳಿಕ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಸ್ವಭಾವ ಸಹಜ ಸಜ್ಜನಿಕೆ, ದುಡಿಮೆಯ ಶಕ್ತಿ, ಪ್ರತಿಭೆಯ ಬಲದಿಂದಲೇ ವೆಂಕಟ್ ಅವಕಾಶಗಳನ್ನು ಪಡೆದುಕೊಂಡ. ಇನ್ನೇನು, ಬೆಂಗಳೂರಿನಂಥಾ ನಗರಿಯಲ್ಲೂ ಕಲಾವಿದನಾಗಿ ಗುರುತಿಸಲ್ಪಡುವ ಕಾಲಕ್ಕೆ , ಇವನ ಎದೆಗೇಕೆ ವಿಧಿ ಗುದ್ದಿತು?
ನೈತಿಕವಾಗಿ, ಸೈದ್ಧಾಂತಿಕವಾಗಿ ಸರಿ ಅನ್ನಿಸಿದ ವಿಚಾರದಲ್ಲಿ ವೆಂಕಟ್ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಜಾತಿ ಸಂಘಟನೆಗಳಿಂದ ದೂರವುಳಿದ ನನ್ನ ಬೆರಳೆಣಿಕೆ ಗೆಳೆಯರ ಪೈಕಿ ವೆಂಕಟ್ ಕೂಡಾ ಒಬ್ಬ. ಪ್ರಗತಿಪರರಾಗಿದ್ದೂ ಜಾತಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ತನ್ನ ಗೆಳೆಯರ ಇಬ್ಬಂದಿತನದ ಬಗ್ಗೆ ಜಗಳಾಡಿದ್ದ.
ಆಗಾಗ್ಗೆ ಪ್ರತಿಗಾಮಿ ನಡೆಗಳು ವಾಲಾಟ ಶುರು ಮಾಡಿದಾಗೆಲ್ಲ ,ಅದಕ್ಕೊಂದು ಸಕ್ರಿಯ ತಡೆಯೊಡ್ಡುವ ಕೆಲಸ ವೆಂಕಟ್ ಮಾಡುತ್ತಿದ್ದ. ವಿವೇಕಾನಂದರ ‘ಸ್ಪಿರಿಟ್’ ತನ್ನ ಮೂಲಕ ಸಂದೇಶ ಕೊಡುತ್ತೆ ಎಂದು ಬೊಗಳೆ ಬಿಡುವ ಡಿವೈನ್ ಪಾರ್ಕನ, ಸಂಘಟನೆ – ಭಜನೆ ಸುಳ್ಯದಲ್ಲಿ ಜೋರಾದಾಗ, ರಾಮಕೃಷ್ಣ ಆಶ್ರಮದ ಸ್ವಾಮೀಜಿಯವರನ್ನೂ, ವಿಚಾರವಾದಿ ಲೇಖಕ ಜ.ಹೊ.ನಾರಾಯಣಸ್ವಾಮಿಯವರನ್ನು ಕರೆಸಿ, ವಿವೇಕಾನಂದರ ವೈಚಾರಿಕತೆ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ವೆಂಕಟ್ ಸಂಘಟಿಸಿದ್ದ.
ಅದಕ್ಕೂ ಮೊದಲು, ರಾಜಕೀಯಪಕ್ಷದ ಕಾರ್ಯಕರ್ತರು ಪತ್ರಿಕೆಯೊಂದರ ಮೇಲೆ ದುಂಡಾವರ್ತಿ ನಡೆಸಿದಾಗ, ಈ ರೀತಿಯ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ‘ಸುಳ್ಯ ತಾಲೂಕು ಲೇಖಕ , ಕಲಾವಿದರ ಬಳಗ’ವನ್ನು ವೆಂಕಟ್ ಹುಟ್ಟು ಹಾಕಿದ್ದ. ನಾನೂ ಮತ್ತು ವೆಂಕಟ್ ಈ ಬಳಗದ ಸಂಚಾಲಕರಾಗಿದ್ದೆವು, ಅವಶ್ಯ ಬಿದ್ದಾಗಲೆಲ್ಲ ಈ ವೇದಿಕೆ ಕ್ರಿಯಾಶೀಲವಾಗಿದ್ದ ಕಾರಣ ಸುಳ್ಯ ಎಂದೂ ಮಿತಿಮೀರಿದ ದಾಂಧಲೆಗೆ ಒಳಗಾಗಲೇ ಇಲ್ಲ.
ಮಕ್ಕಳಿಗೆ ಚಿತ್ರಕಲಾ ಕ್ಲಾಸುಗಳನ್ನು ನಡೆಸಿದ್ದ ವೆಂಕಟ್, ಜನಪರ ದೃಷ್ಟಿ ನೀಡುವ ಪತ್ರಿಕೋದ್ಯಮ ಡಿಪ್ಲೊಮ ಒಂದನ್ನು ಆರಂಭಿಸಬೇಕೆಂದಿದ್ದ.ಅದರ ಸಿಲೆಬಸ್ ತಯಾರಿಗೆ ವಾರಗಟ್ಟಲೆ ತಲೆಕೆಡಿಸಿಕೊಂಡಿದ್ದ. ಆ ವೇಳೆಗೆ ಮೆಟ್ಟಿಕೊಂಡ ಆರ್ಥಿಕ ತಾಪತ್ರಯಗಳಿಂದಾಗಿ ಅವನ ಕನಸುಗಳೆಲ್ಲಾ ಮುರುಟಿ ಹೋದವು. ಹಣಕಾಸಿನ ಮುಗ್ಗಟ್ಟಿನಿಂದಾಗಿ ಪೂರಾ ನೆಲಕಚ್ಚಿ ಹೋದಾಗಲೂ, ಸುಳ್ಯದ ಸುದ್ದಿಬಿಡುಗಡೆ ಪತ್ರಿಕೆಯಲ್ಲಿ, ಸುಳ್ಯದ ಲೇಖಕರ ಕಥೆಯೊಂದನ್ನು ಆರಿಸಿ, ಅದಕ್ಕೆ, ಅದ್ಭುತ ಒಳನೋಟದ ಟಿಪ್ಪಣಿ ಬರೆದು, ಚಿತ್ರ ಬರೆದು ಪ್ರಕಟಿಸುತ್ತಿದ್ದ.
ಆ ಮಾಲಿಕೆಯಲ್ಲಿ, ಟಿ.ಜಿ.ಮೂಡೂರ್, ಚೊಕ್ಕಾಡಿ, ದೇವ, ವಿದ್ಯಾಧರ ಹೀಗೆ ಕನ್ನಡ ಹೆಮ್ಮೆ ಪಡಬಹುದಾದ ಕತೆಗಾರರು ನಮ್ಮ ನೆಲದಿಂದ ಬಂದಿದ್ದಾರೆ ಎಂಬ ಅರಿವನ್ನೂ, ಹೆಮ್ಮೆಯನ್ನೂ ಮೂಡಿಸಿದ.
ಆತನ ವಿವೇಕ, ಪೂರ್ವಾಗ್ರಹ ರಹಿತ ಮನಸ್ಥಿತಿ ಎಂಥದ್ದೆಂದರೆ, ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಪ್ರಭಾಕರ ಶಿಶಿಲರನ್ನು ಆರಿಸಿದ್ದ ರೀತಿಯ ಬಗ್ಗೆ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿತ್ತು. ವೆಂಕಟ್ ಕೂಡಾ ಈ ಆಯ್ಕೆಯ ವಿಧಾನದ ಸಣ್ಣತನದ ಬಗ್ಗೆ ಪ್ರತಿಕ್ರಿಯಿಸಿದ್ದ. ಆದರೆ, ಅದೇ ವಾರ ಶಿಶಿಲರ ಕಥೆಯೊಂದನ್ನು ಆರಿಸಿ, ಅದರ ಬಗ್ಗೆ ವಿಮರ್ಶಾತ್ಮಕ ಟಿಪ್ಪಣಿ ಬರೆದು ಪ್ರಕಟಿಸಿದ್ದ.
ಸಣ್ಣ ಪಟ್ಟಣಗಳಿಗೆ ನೀಡಬೇಕಾದ ಸಾಂಸ್ಕೃತಿಕ ಶಿಕ್ಷಣದ ಮಾದರಿಯೊಂದನ್ನು ವೆಂಕಟ್ ನೀಡಿದ ರೀತಿ ಬೇರೆಲ್ಲೂ ನಾನು ಕಂಡಿಲ್ಲ. ಸಾಮಾಜಿಕ ಪ್ರಜ್ಞೆ, ಕಾವ್ಯ, ಸಾಹಿತ್ಯ, ತಾತ್ವಿಕತೆ, ನೈತಿಕ ಮೌಲ್ಯಗಳ ಅಗತ್ಯವನ್ನೂ ಗುರುತಿಸುತ್ತಾ ಅವುಗಳನ್ನು ನಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಳ್ಳುವುದು ಮತ್ತು ನಮ್ಮ ಕಾಣ್ಕೆಯ ನೆಲೆಯಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ವೆಂಕಟ್ ಪದೇಪದೇ ತಮ್ಮ ಕ್ರಿಯಾಶೀಲ ಗೆಶ್ಟರ್ ಗಳ ಮೂಲಕ ತೋರಿಸಿ ಕೊಡುತ್ತಿದ್ದ.
ಇಷ್ಟಾಗೂ, ಈ ಸಣ್ಣ ಪಟ್ಟಣಗಳಲ್ಲಿ, ದೂರದ ತಾಲೂಕುಗಳಲ್ಲಿ ಏಗಿದ ಇತರರಂತೆ ವೆಂಕಟ್ಗೂ ಖಾಸಗಿ ಆರ್ಥಿಕ, ವ್ಯಾವಹಾರಿಕ ಕಷ್ಟಗಳನ್ನು ಮೀರಿ ದೊಡ್ಡದನ್ನು ಬರೆಯುವ ಶಕ್ತಿಯಾಗಲೀ, ದೈತ್ಯ ಪ್ರತಿಭೆಯಾಗಲೀ ಇರಲಿಲ್ಲ. ಆದರೆ, ಕೊಂಚ ನೆಮ್ಮೆದಿ, ಅಷ್ಟು ಆರ್ಥಿಕ ಸೌಖ್ಯ, ಸಿಕ್ಕಿದ್ದರೆ ಅರಳಬಹುದಾಗಿದ್ದ ಪ್ರತಿಭೆ ಅದು.
ನಮ್ಮ ಅಕಡೆಮಿಕ್ ವಲಯಗಳ ಅಧಿಕೃತ ಉವಾಚಗಳನ್ನು ಸಹಿಸಿಕೊಂಡು ನಮ್ಮ ಸಂವೇದನೆಯ ಬಗ್ಗೆ ಕೀಳರಿಮೆ ಹೊಂದದೇ ಇರುವುದು ದೂರದ ಊರುಗಳಲ್ಲಿ ಪ್ರಯಾಸದ ಕೆಲಸ. ವೆಂಕಟ್ ಈ ದಾಡ್ರ್ಯತೆ ಹೊಂದಿದ್ದ.
ನಸು ಪರಿಮಳದ ಕಾಡು ಹೂವಿನಂತಾ ಸಂವೇದನೆ, ಕನಸು ಕಾಣುವ ಖಯಾಲಿ, ನೈತಿಕ ಸ್ಥಿರತೆಗೇ ಜೀವದ ಸಂಗಾತಿ ಹೇಮಾ ಒಲಿದು ಬಂದದ್ದೂ ಇರಬಹುದು.!
ನೈತಿಕ, ಸೈದ್ಧಾಂತಿಕ ಆಕ್ರೋಶದಲ್ಲಿ ಜಡೆಮುನಿಯಂಥಾ ಸಿಟ್ಟಿನಲ್ಲಿ ನಾನು ಮುಷ್ಠಿ ಬಿಗಿದಾಗಲೆಲ್ಲ ಆ ಮುಷ್ಠಿ, ಯಾವ ಕಾರಣಕ್ಕೂ ಸಡಿಲಾಗದಂತೆ ನೋಡಿಕೊಂಡವನು ವೆಂಕಟ್..! ಕಷ್ಟಗಳ ಭಾರಕ್ಕೆ ನಾನು ಅಪ್ಪಚ್ಚಿಯಾಗದಂತೆ ಸದಾನೆರವು ನೀಡಿದವನು.
ಮತ್ತೆ ಚಿಗುರುವ ಕಾಲಕ್ಕೆ ಈ ಏಟು.. it’s unfair


‍ಲೇಖಕರು avadhi

October 24, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

೧ ಪ್ರತಿಕ್ರಿಯೆ

  1. naveedahamedkhan

    ಸುಳ್ಯ ವೆಂಕಟ್ ಕಣ್ಮರೆ ಪ್ರಗತಿ ಪರರಿಗೊಂದು ಆಘಾತ. ನೀಗಿಕೊಂಡ ಗೆಳೆಯನಿಗೆ ನನ್ನ ಹನಿಗಣ್ಣಿನ ವಿದಾಯ . “ಸಾಮಾಜಿಕ ಪ್ರಜ್ಞೆ, ಕಾವ್ಯ, ಸಾಹಿತ್ಯ, ತಾತ್ವಿಕತೆ, ನೈತಿಕ ಮೌಲ್ಯಗಳ ಅಗತ್ಯವನ್ನೂ ಗುರುತಿಸುತ್ತಾ ಅವುಗಳನ್ನು ನಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಳ್ಳುವುದು ಮತ್ತು ನಮ್ಮ ಕಾಣ್ಕೆಯ ನೆಲೆಯಾಗಿಸಿಕೊಳ್ಳುವುದು ಹೇಗೆ ಎಂಬುದನ್ನು ವೆಂಕಟ್ ಪದೇಪದೇ ತಮ್ಮ ಕ್ರಿಯಾಶೀಲ ಗೆಶ್ಟರ್ ಗಳ ಮೂಲಕ ತೋರಿಸಿ ಕೊಡುತ್ತಿದ್ದ” ಸುಳ್ಯ ವೆಂಕಟ್ ರವರು ನಮಗೆಲ್ಲ ಅಂತಃ ಸಾಕ್ಷಿಯಗಿರಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: