ನೀನಾಸಂ ನ ‘ಶಿಶಿರ ವಸಂತ’: ಇದು ಸುದೀಈಈಈಈರ್ಘ ಕಥೆ.

ಶಿಶಿರ ವಸಂತ ಹೇಗಿತ್ತು?!

ಭಾರತಿ / ಸುನಿಲ್

ಬೆಳ್ಳಿ ಚುಕ್ಕಿ ಸಂಸ್ಥೆ ರವಿಂದ್ರ ಕಲಾಕ್ಷೇತ್ರದಲ್ಲಿ ‘ನೀನಾಸಂ’ ಅಭಿನಯದಲ್ಲಿ ವಿಲ್ಲಿಯಮ್ ಶೇಕ್ ಸ್ಪಿಯರ್‌ನ  The Winter ‘s tale ನಾಟಕದ ಕನ್ನಡಾನುವಾದವಾದ ‘ಶಿಶಿರ ವಸಂತ’ ನಾಟಕವನ್ನು ಆಯೋಜಿಸಿದ್ದರು.. ಶೇಕ್ಸ್‌ಪಿಯರ್‌ನ ಸುಮಾರು ೪೦೦ ವರ್ಷಗಳ ಹಿಂದಿನ ಕೃತಿ The Winter ‘s tale ಬಹಳ ವಿರೋಧ ಹಾಗು ವಿಮರ್ಶೆ ಪಡೆದಿತ್ತು. ಇದನ್ನು ಕನ್ನಡಕ್ಕೆ ಅನುವಾದಿಸಿ, ನಿರ್ದೇಶನ ಮಾಡಿ ಹೆಗ್ಗೋಡಿನ ನೀನಾಸಂ ಮೂಲಕ ಹೊರತಂದವರು ಕೆ.ವಿ. ಅಕ್ಷರ.

ಒಂದೂರಿನಲ್ಲಿ ಒಬ್ಬ ರಾಜನಿದ್ದ ಅನ್ನೋ ನಮ್ಮ ದೇಶದ ಕಥೆಗಳ ಹಾಗೇನೇ ನಾಟಕ ಮೊದಲಾಗುತ್ತದೆ ಮತ್ತು ಕೊನೇಲಿ ಎಲ್ರೂ ಸುಖವಾಗಿದ್ರಂತೆ ಅನ್ನೋ ಹಾಗೇನೇ ಮುಗಿಯುತ್ತದೆ. ಸಿಸಿಲಿಯದ ದೊರೆ ಬಾಲ್ಯ ಸ್ನೇಹಿತನಾದ ಬೊಹೆಮಿಯಾದ ದೊರೆಯನ್ನ ಊರಿಗೆ ಹೋಗಬೇಡವಂತ ತಡೆಯುವ ದೃಶ್ಯದೊಡನೆ ನಾಟಕ ಶುರುವಾಗುತ್ತದೆ. ಆ ಬೊಹೆಮಿಯಾದ ದೊರೆ ಗೆಳೆಯ ಹೇಳಿದರೆ ಆಗದು, ಊರಿಗೆ ಹೋಗಲೇಬೇಕು ಅಂತ ಹೊರಟವನು ಗೆಳೆಯನ ಹೆಂಡತಿ ಹೇಳಿದ ಕೂಡಲೇ ಇರಲು ಒಪ್ಪುತ್ತಾನೆ. ಅಲ್ಲಿಗೆ ಸಿಸಿಲಿಯಾದ ದೊರೆಯ ಮನಸಲ್ಲಿ ಅಂಕುರವಾಗುವ ಅನುಮಾನದ ಬೀಜ ಹೆಮ್ಮರವಾಗಿ ಬೆಳೆಯುತ್ತಾ ಹೋಗಿ ತಾನೂ ಪಡಬಾರದ ಕಷ್ಟ ಪಟ್ಟು, ರಾಣಿಗೂ ಬದುಕು ನರಕ ಮಾಡಿ.. ಒಟ್ಟಿನಲ್ಲಿ ಅನುಮಾನವೆಂಬ ಉರಿಗೆ ಸಿಲುಕಿದವನ ಕಥೆಯನ್ನ ಬಿಡಿಸುತ್ತಾ ಹೋಗುತ್ತಾನೆ ಶೇಕ್‌ಸ್ಪಿಯರ್.

ಮಧ್ಯೆ ಮಧ್ಯೆ ನನಗೆ ರಾಮಾಯಣದ ರಾಮ ನೆನಪಾಗುತ್ತಿದ್ದ .. ಹೆರ್ಮಿವನ್‌ ಸೀತೆಯ ನೆನಪು ತಂದಳು. ಇಂದಿಗೂ ಅನುಮಾನದ ಉರಿಯಲ್ಲಿ ನರಳುವ ಸಾವಿರಾರು ಗಂಡು- ಹೆಣ್ಣುಗಳ ಕಥೆ ಕೂಡಾ ಮನಸ್ಸಿನಲ್ಲಿ ಹಾದುಹೋಯಿತು. ರಾಮ ಕ್ರಿಸ್ತಪೂರ್ವ 1,100,000ರಲ್ಲಿ ಇದ್ದವನಂತೆ. ಶೇಕ್ಸ‌ಪಿಯರ್ ಇದನ್ನು ಬರೆದಿದ್ದು ಕ್ರಿಸ್ತಶಕ ೧೬೦೦ ರ ಆಸುಪಾಸಿನಲ್ಲಂತೆ ಮತ್ತು ನಾವಿರುವುದೀಗ ೨೦೧೨! ನಾಟಕದ ವಸ್ತು ಇಂದಿಗೂ ಪ್ರಸ್ತುತವೇ ಆಗಿದೆ ಅನ್ನಿಸಿತು.

ನಾಟಕದಲ್ಲಿ ನನಗೆ ತುಂಬಾ ಮೆಚ್ಚಿಗೆಯಾಗಿದ್ದು ಬೆಳಕಿನ ವಿನ್ಯಾಸ. ರಂಗದ ಮೇಲಿನ ಬೆಳಕು ದುಃಖ, ಸಂತೋಷ, ವಿಷಾದ ಏನೆಲ್ಲ ಪ್ರತಿನಿಧಿಸುತ್ತಿದೆ ಅನ್ನಿಸುತ್ತಿತ್ತು ನನಗೆ. ರಂಗ ಸಜ್ಜಿಕೆ ಕೂಡಾ ನನಗೆ ತುಂಬ ಇಷ್ಟವಾಯ್ತು. ಮಗುವನ್ನು ಸಮುದ್ರ ದಡದಲ್ಲಿ ಬಿಟ್ಟು ಬರುವಾಗಿನ ದೃಶ್ಯ .. ರಾಣಿ ಕೊನೆಯಲ್ಲಿ ಬದುಕಿ ಬರುವ ದೃಶ್ಯ .. ಊರಹಬ್ಬದ ದೃಶ್ಯ ಎಲ್ಲದರಲ್ಲೂ ಇಡೀ ರಂಗದ್ದೇ ಮುಖ್ಯ ಆಕರ್ಷಣೆಯಾಗಿ ಹೋಯಿತು!

ಅಬ್ಬ! ನಾರಾಯಣ..ಸೀನ..ವಾಸುದೇವ..ಮಂಜ..ಹುಂಜ ಅನ್ಕಂಡು ನಾಟಕ ನೋಡುತ್ತಿದ್ದ ನಮಗೆ…herdita …hermione …ಸಿಸಿಲಿಯ ಇವೆಲ್ಲ ಹೆಸರು ಸ್ವಲ್ಪ ಗಲಿಬಿಲಿ ಮಾಡಿತು. ನಾಟಕದಲ್ಲಿನ ಹಾಡುಗಳನ್ನು ಸಂಪೂರ್ಣ ಕನ್ನಡೀಕರಿಸಿದ (ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನ … ಇದೂ ಕೂಡಾ ಅದರಲ್ಲಿನ ಒಂದು ಹಾಡು!) ಅಕ್ಷರ ಅವರು ಹೆಸರುಗಳನ್ನೂ ಕನ್ನಡೀಕರಿಸಿದ್ದರೆ ನನಗೆ ಪಾತ್ರಗಳ ಹೆಸರುಗಳು ಒಂದಿಷ್ಟು ನೆನಪಲ್ಲಿ ಉಳಿಯುತ್ತಿತ್ತೇನೋ! ಪ್ರಾಯಶಃ ಮುಖ್ಯ ಕೃತಿಯಲ್ಲಿ ಭಿನ್ನ ಬರಬಾರದೆಂದು ಅವರ ನಂಬಿಕೆ ಇರಬಹುದು …

ನಾಟಕ ಬೊಹೆಮಿಯಾಗೆ shift ಆದ ನಂತರದಲ್ಲಿ ಯುವ ಪ್ರೇಮಿಗಳ ಕಥೆ ಪ್ರಾರಂಭವಾದಾಗ ರಂಗ ತುಂಬ ಲವಲವಿಕೆಯಿಂದ ಕುಣಿದಾಡಿತು. ಕೆಲವರ ಅಭಿನಯ ಮನಸಲ್ಲಿ ಉಳಿಯಿತು. ರಾಣಿ ದುಃಖದ ಸನ್ನಿವೇಶಗಳಲ್ಲಿ ಮುಖದಲ್ಲಿ ಬಿಂಬಿಸುವ ಅಸಹಾಯಕತೆ ಈಗಲೂ ಕಣ್ಣಿಗೆ ಕಟ್ಟಿದ ಹಾಗೆ ಇದೆ. ರಾಜಕುಮಾರಿಯಂತೂ ಚಿಗರೆಮರಿ! ಇಡೀ ರಂಗದ ತುಂಬ ಜಿಗಿದಾಡುತ್ತಾಳೆ. ರವಿ ಮುರೂರರ ಹಾಸ್ಯ ಪಾತ್ರ ಕೂಡಾ ಬಹಳವಾಗಿ ರಂಜಿಸಿತು. ಮೊದಲ ಭಾಗ ದುಃಖಮಯ ಹಾಗು ಎರಡನೆ ಭಾಗ ಹಾಸ್ಯ ಭರಿತವಾಗಿ ಕೊಂಡು ಹೋಗಿದ್ದಾರೆ. ರವಿ ಮುರೂರರ ಸಂಗೀತ ಸಂಯೋಜನೆ ಅದ್ಭುತ ಹಾಗು ನಾಟಕಕ್ಕೆ ಒಳ್ಳೆಯ ಸಾಥ್ ನೀಡಿತ್ತು. ನಾಟಕದ ಕಾಸ್ಟ್ಯೂಮ್‌ ಕೂಡಾ ಚೂರು ಇರಿಸು ಮುರುಸು ತರಿಸುತ್ತಿತ್ತು …

ನಾಟಕದ ಮುಖ್ಯ drawback ಎಂದರೆ ಅದರ ಸುದೀಈಈಈಈರ್ಘ ಕಥೆ. ಹೆಚ್ಚು ಕಡಿಮೆ ಮೂರು ಘಂಟೆ! ಕೆಲವು ಕಥೆಗಳನ್ನು ರಂಗಕ್ಕೆ ಅಳವಡಿಸುವಾಗ ಈ ರೀತಿ ಉದ್ದಕ್ಕೆ ಬೆಳೆದುಬಿಡುವ ಸಾಧ್ಯತೆ ಇದೆ ಅನ್ನೋದು ನೂರಕ್ಕೆ ನೂರು ನಿಜವಾದ್ರೂ ‘ನೀನಾಸಮ್’ ಗೆ ಕಥಾ ಹಂದರ ಹಾಗು ಕಥೆಯ ವಿಸ್ತೀರ್ಣವನ್ನು ಬೇಕಿದ್ದಷ್ಟು ಮಾತ್ರ ಹಿಗ್ಗಿಸಿಕೊಳ್ಳುವುದು ಕಷ್ಟವಾಗಿರಲಿಲ್ಲ ಅಲ್ಲವೇ? ಅಬ್ಬಾ! ಕೊನೆ ಕೊನೆಯಲ್ಲಿ ನಾಟಕದ ಅಂತ್ಯಕ್ಕಾಗಿ ಪರಿತಪಿಸುವ ಹಾಗೆ ಆಗಿಹೋಯ್ತು. ಈ ಬೇಸಿಗೆಯ ಬಿರುಬಿಸಿಲಿನಲ್ಲಿ, ರವೀಂದ್ರ ಕಲಾಕ್ಷೇತ್ರದ ಫ್ಯಾನುಗಳು ಆಗೊಮ್ಮೆ, ಈಗೊಮ್ಮೆ ರಂಗದ ಮೇಲಿನ ಬೆಳಕಿನ ಜೊತೆ ಸ್ಪರ್ಧೆಗೆ ಇಳಿದಿದೆಯೇನೋ ಅನ್ನುವ ಹಾಗೆ ಆರಿ, ಹತ್ತಿ ಮತ್ತಿಷ್ಟು ತಾಳ್ಮೆ ಕೆಡಿಸುತ್ತಿತ್ತು …

ಕೊನೆ, ಕೊನೆಯಲ್ಲಿ (ನಮ್ಮ ಪ್ರಕಾರ ಅದು ಕೊನೆ ಕೊನೆಯಾಗಿತ್ತು ಅಷ್ಟೇ .. ನಿರ್ದೇಶಕರ ಪ್ರಕಾರ ಕೊನೆಯಿನ್ನೂ ದೂರವಿತ್ತು) ಪ್ರತಿ ಸೀನ್‌ನಲ್ಲೂ ಇದೇ ಕೊನೆ ಇರಬಹುದು ಅಂತ ಭ್ರಮಿಸುತ್ತಿದ್ದ ಸುನಿಲ ‘ಇದೇ ಕೊನೆ ಸೀನ್’ ಅಂತ ಘೋಷಿಸುತ್ತಿದ್ದ. ನಾಟಕ ಅಲ್ಲಿಗೆ ಮುಗಿಯದೇ ಮುಂದುವರೆದಾಗ ತಬ್ಬಿಬಾಗುತ್ತಿದ್ದ! ಕೊನೆಗೆ ಆದಿ, ಅಂತ್ಯಗಳ ಲೆಕ್ಕಾಚಾರವೇ ತಿಳಿಯದೇ ಅಂತ್ಯದ ಹಿಂದಿನ ದೃಶ್ಯ ಬಂದಾಗ ‘ಇದು ಕೊನೇ ಸೀನ್ ಇರಬಹುದೇನೋಪ್ಪಾ’ ಅಂತ ಅನುಮಾನಿಸುವ ಸ್ಥಿತಿ ತಲುಪಿದ್ದ ಮತ್ತು ಕೊನೆಯ ದೃಶ್ಯ ಶುರುವಾದಾಗ he had lost all hopes! `ಹಳ್ಳಿ ಬಯಲಾಟದ ಹಾಗೆ ಇದೂ ಇಡೀ ರಾತ್ರಿ ನಡೀಬಹುದೋ ಏನೋ!’ ಅಂತ ಉದ್ಗರಿಸಿದಾಗ ನಿರ್ದೇಶಕರು ಅಲ್ಲಿ ಇದ್ದಿದ್ದರೆ?!

‍ಲೇಖಕರು G

April 6, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

4 ಪ್ರತಿಕ್ರಿಯೆಗಳು

 1. Badarinath Palavalli

  ನಾಟಕ ಮಿಸ್ ಮಾಡಿಕೊಂಡದ್ದಾಕೆ ಈಗ ಹೊಟ್ಟೆ ಉರಿಯುತ್ತಿದೆ.

  ಓಕೆ, ಮುಂದಿನ ಸಾರಿ ಮಿಸ್ಸೇ ಇಲ್ಲ.

  ಒಳ್ಳೆಯ ಬರಹ ಮತ್ತು ಒಳ್ಳೆಯ ಚಿತ್ರಗಳು ಸುನೀಲ್.

  ಪ್ರತಿಕ್ರಿಯೆ
 2. Ravi Shankar

  ನಿನ್ನೆ ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲೂ “ಶಿಶಿರ-ವಸಂತ” ಋತುವಿನಾಗಮನ ತುಂಬಾ ಚೆನ್ನಾಗಿತ್ತು. ಇಲ್ಲಿಯೂ ಕೂಡ ಅನುಭವ ಯಥಾವತ್ ನಿಮ್ಮಂತೆಯೇ (ಭಾರತಿ – ಸುನಿಲ್) ಇದ್ದರೂ, ನನಗೆಲ್ಲೂ ಬೇಜಾರಾಗಲಿಲ್ಲ. ‘ನೀನಾಸಂ’ ಕಲಾವಿದರ ಅದ್ಬುತ ಅಭಿನಯ, ಬೆಳಕು ಮತ್ತು ರವಿ ಮೂರೂರುರರ ಸಂಗೀತದಿಂದ ತುಂಬಾ ಚನ್ನಾಗಿ ಮೂಡಿಬಂತು. ಕೆ.ವಿ.ಅಕ್ಷರರವರಿಗೆ ಧನ್ಯವಾದಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: