
ಶಿಲ್ಪ ಮೋಹನ್
ಛೇ ಎಂತ ರಣ ಬಿಸಿಲೆಂದು ಮೂಗು ಮುರಿಯಬೇಡ
ನಿನ್ನ ನೆರಳಿಗೂ ಅಸ್ತಿತ್ವವಿದೆಯೆಂದು ಸಾರಿದ್ದು ಆ ಉರಿ ಬಿಸಿಲೆ
ಮರದಿಂದ ಒಣ ಎಲೆ ಬೀಳುವುದ ನೋಡಿ ಮರುಕ ಪಡದಿರು
ಕಾಲಚಕ್ರದಲ್ಲಿ ತನ್ನದೇ ಚಿಗುರಿಗೆ ಹಾದಿ ಮಾಡಿಕೊಟ್ಟ ಅದರ
ನಿಸ್ವಾರ್ಥ ಜೀವನ ಅರ್ಥೈಸಿಕೊಂಡರೆ…
ನೀ ಒಂದು ಕ್ಷಣ ದೇವರಾಗುವೆ
ಗುಡಿ ಗುಡಿಗೆ ಹೂ ಬತ್ತಿ ಹೊತ್ತು ತಿರುಗಿದರೇನು
ಸಮರ್ಪಣೆ ಇಲ್ಲದ ಭಕ್ತಿಯ ಆಡಂಬರಕೆ ಆ ದೈವ ನಕ್ಕಾನು ಅಷ್ಟೆ

ಕಿವಿಗವಿಯ ಹೊಕ್ಕ ಅನ್ಯರ ವಿಚಾರಗಳ
ಅಲ್ಲಿಯೇ ಹೂತು ಸಾಧ್ಯವಾದರೆ ಅಲ್ಲೊಂದು ಮೌನದ ಮರ ನೆಟ್ಟುಬಿಡು…..
ಅಲ್ಲಿಂದ ಬೇರೆ ಯಾರದ್ದೋ ಮೂಳೆಯಿಲ್ಲದ ನಾಲಿಗೆಯ ಮೇಲೆ ಚುರಿಮುರಿಯನ್ನಾಗಿಸಬೇಡ
ಇಲ್ಲಿ ನೀನೆಂದರೆ ನೀ ಅಷ್ಟೆ ಬೇರೆಯಾರಿಗೋ ಹೇಳುವಷ್ಟು ಪ್ರಬುದ್ಧವಾಗಿರುವುದಿಲ್ಲ ನಿನ್ನ ಜ್ಞಾನ
ನನ್ನೊಳಗಿನ ನೀನು ನಿನ್ನೊಳಗಿನ ನನ್ನನ್ನಷ್ಟೇ ನಾ ತಿದ್ದಲು ಹೆಣಗುತ್ತಿರುವೆ.
0 ಪ್ರತಿಕ್ರಿಯೆಗಳು