ನೀನೇ ಬರೀ ನೀನೇ…

IMG_38861

ಗುಂಗು ಹಿಡಿಸುವ ಮಧುರಾನುಭವ

-ಸೂರ್ಯಕಿರಣ್ ಜೋಯಿಸ್

ಅಂತರಾಳದ ಮಾತು

ಇತ್ತೀಚೆಗೆ ಬಿಡುಗಡೆಯಾದ ಸೋನು ನಿಗಮ್ ಹಾಡಿರುವ ಕನ್ನಡದ ಪ್ರಪ್ರಥಮ ಗೀತಗುಚ್ಛ (Music album) “ನೀನೇ ಬರೀ ನೀನೇ” – ಇದರಲ್ಲಿನ ಎಲ್ಲ ಹಾಡುಗಳೂ ಜಯಂತ್ ಕಾಯ್ಕಿಣಿಯವರ ಕಾವ್ಯಕುಂಚದಲ್ಲಿ ಮೂಡಿಬಂದಿರುವ ವರ್ಣಚಿತ್ರಗಳಂತಿವೆ. ಈ ಹಾಡುಗಳ ಸಾಲುಗಳು ಹಿಡಿಸುವ ಗುಂಗು ಮಧುರಾನುಭವಕ್ಕೆ ತಿರುಗುವುದು ಮನೋಮೂರ್ತಿಯವರ ಸಂಗೀತದಿಂದ. ಮೇಲುನೋಟಕ್ಕೆ ಪ್ರೇಮಗೀತೆಗಳೆನಿಸುವ ಈ ಹಾಡುಗಳು, ಕೇಳುತ್ತಾಹೋದಂತೆ ಘಜ಼ಲ್ ಗಳಲ್ಲಿರುವ ಭಾವತೀವ್ರತೆ, ಸುಗಮ ಸಂಗೀತದಲ್ಲಿ ಸಿಗುವ ಸರಳತೆ, ಕವಿತೆಗಳಲ್ಲಿನ ಮುಗ್ಧತೆ ಈ ಎಲ್ಲವನ್ನು ಒಟ್ಟಿಗೇ ನೀಡುತ್ತವೆ. ಎಲ್ಲ ಹಾಡುಗಳಿಗೂ ಸೋನು ನಿಗಮ್ ಏಕಮೇವ ಗಾಯಕ.

Neene-Bari-Neene (1)ತನ್ನ ಪ್ರೇಯಸಿಯ ನೆನಪಿನಲ್ಲಿ ಹಾಡುವ, ಅಲೆದಾಡುವ ಯುವಕನೊಬ್ಬನ ಆರ್ತದನಿ ಈ ಗೀತೆಗಳಲ್ಲಿ ಕೇಳಿಬರುತ್ತದೆ. ಈ ಹಾಡುಗಳಿಗೆ ಯಾವುದೇ ನಾಯಕ ನಟ/ನಟಿಯ ಹಂಗಿಲ್ಲ, ಚಿತ್ರಕಥೆಯ ಕಟ್ಟುಪಾಡಿಲ್ಲ. ಹಾಡುಗಳಲ್ಲಿ ಬರುವ ಪ್ರೇಮಿಗಳು ಕಲ್ಪನೆಯಲ್ಲೆ ಕೇಳುಗರನ್ನು ಕಾಡುತ್ತಾರೆ. ಸರಳ ಸುಂದರ ಮನೋಲಹರಿಯೇ ಮಂಜುಳ ಗಾನವಾಗಿ ಹೊರಹೊಮ್ಮಿದಂತಿದೆ. ಕಾಯ್ಕಿಣಿಯವರ ಈ ಹಿಂದಿನ ಚಿತ್ರಗೀತೆಗಳಿಗೆ ಹೋಲಿಸಿದರೆ ಇವು ಸಿನೆಮಾ ಪರಿಭಾಷೆಯ ಚೌಕಟ್ಟಿನಿಂದ ಹೊರಸರಿದು ಕವಿತೆಗಳ ಛಾಯೆಯನ್ನು ಇನ್ನಷ್ಟು ಢಾಳಾಗಿ ಪಡೆದಿವೆಯೆನಿಸುತ್ತದೆ. ಪ್ರೀತಿ-ಪ್ರೇಮದ ವಿಷಯವಸ್ತುಗಳುಳ್ಳ ಕವಿತೆಗಳಲ್ಲಿ ಸಾಮನ್ಯವಾಗಿ ಕಾಣಸಿಗುವ ಸಿದ್ಧ ಪ್ರತಿಮೆಗಳನ್ನು ಮೀರಿ ಬಲು ವಿಭಿನ್ನವಾದ ಚಿತ್ರಣಗಳನ್ನು ತುಂಬಿಸಿ ಮನಮುಟ್ಟುವ ೯ ಗೀತೆಗಳನ್ನು ಕಾಯ್ಕಿಣಿಯವರು ರಚಿಸಿದ್ದಾರೆ. ಅದು ಅವರ ಎಂದಿನ ವೈಖರಿ.

“ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ” ಎನ್ನುವ ಗೀತೆಯಲ್ಲಿನ ಸಾಹಿತ್ಯ ಎಲ್ಲೋ ಇರುವ ತನ್ನ ನಲ್ಲೆಯನ್ನು ಹುಡುಕುತ್ತಿರುವ ಪ್ರೇಮಿಯ ಎದೆಯಾಳದ ಕರೆ. ಅವಳ ಜೊತೆಗಿನ ಒಡನಾಟದ ಹಸಿ ನೆನಪುಗಳು ಬಗೆ ಬಗೆ ರೂಪಗಳಲ್ಲಿ ಸುಳಿದಾಡುತ್ತವೆ. ಕದ್ದು ತಿಂದ ಬೋರೆಹಣ್ಣಿನ ಸವಿ, ಲಂಗದಲ್ಲಿ ಹೆಕ್ಕಿ ತಂದ ಪಾರಿಜಾತ, ಜೊತೆಯಲ್ಲಿ ಕಂಡ ತೇರು, ಜಾತ್ರೆ, ಅವಳಿಗಾಗಿ ತಂದು ಜೇಬಿನಲ್ಲೇ ಉಳಿದುಹೋದ ಹೂವು ಹೀಗೆ ಪ್ರತಿಯೊಂದು ಸಾಲಿನಲ್ಲು ನೆನಪಿನ ಚಿತ್ರವೊಂದು ಅನಾವರಣಗೊಳುತ್ತದೆ. “ನೀನೇ ಬರೀ ನೀನೇ ಈ ಹಾಡಲ್ಲಿ ಪದವೆಲ್ಲ ನೀನೇ” ಈ ಗೀತಗುಚ್ಛದ ಶೀರ್ಷಿಕೆ ಗೀತೆಯಲ್ಲಿ ತನ್ನ ಬದುಕಿನ ಸರ್ವಸ್ವವು ಅವಳೆ ಎಂದು ಬಿನ್ನಹಿಸಿಕೊಳ್ಳುವ ಪರಿ ಅತ್ಯಂತ ಆರ್ತವಾಗಿ ಮೂಡಿಬಂದಿದೆ. “ನಿನಗೆಂದೆ ಈ ಸಾಲು ಅಂಗಡಿಯಲಿ/ಉಡುಗೊರೆಯ ಏನಿಂದು ನಾ ಆಯಲಿ/ನಾ ಬಡವ ಈ ನನ್ನ ಮನಸಲ್ಲಿರು/ಸಡಗರದ ಸಿರಿ ಹೇಗೆ ನಾ ನೀಡಲಿ?” ಮನದಾಳದಲ್ಲಿ ಉಂಟಾಗುವ ಸಡಗರಕ್ಕಿಂತ ಮಿಗಿಲಾದ ಸಿರಿ ಇನ್ನೆಲ್ಲಿ ಸಿಗುವುದೆಂಬ ಪ್ರಶ್ನೆಯನ್ನು ಮೆಲ್ಲಗೆ ಎಬ್ಬಿಸುವ ಈ ಸಾಲು ಕಾಯ್ಕಿಣಿಯವರ ಕಾವ್ಯ ಕೌಶಲಕ್ಕೆ ಹಿಡಿದ ಕನ್ನಡಿ. “ನಿನ್ನ ಹಿಂದೆಯೆ ಹಿಂದೆಯೆ ಬರುವೆ ನಾನು” – ಈ ಹಾಡಿನಲ್ಲಿ ನಿಷ್ಕಾರಣ ಪ್ರೀತಿಯನ್ನರಸುತ್ತ ತನ್ನ ಪ್ರೇಯಸಿಯ ಹಿಂದೆ ಹಿಂದೆ ಸಾಗಬಯಸುವ ತರುಣ ಅವಳು ಬಾರದೆ ಇದ್ದುದರ ಬೇಸರಿಕೆಯಲ್ಲಿ ಚಂದ್ರನನ್ನೂ ಭಾಗಿಯಾಗಿಸುತ್ತಾನೆ. ಒಬ್ಬ ಪ್ರೇಮಿಗೆ ತನ್ನ ಮನದನ್ನೆ ತನಗೆ ಅಷ್ಟಾಗಿ ಏಕೆ ಬೇಕು ಎನಿಸುತ್ತಾಳೆ ಎನ್ನುವ ಪ್ರಶ್ನೆಗೆ ಅವನು ನೀಡುವ ಕಾರಣಗಳು ಅವನ ಮನದಾಳದ ಬಯಕೆಗಳೊಂದಿಗೆ ಬೆರೆತು ನಿಶ್ಕಲ್ಮಶ ಪ್ರೇಮವಾಗಿ “ಬೇಕೇ ಬೇಕು ನೀನೇ ಬೇಕು” ಎಂಬ ಹಾಡಿನಲ್ಲಿ ಅದ್ಭುತವಾಗಿ ವ್ಯಕ್ತವಾಗಿದೆ – ಚಂದ್ರನನ್ನು ಬಲೆಯಲ್ಲಿ ಹಿಡಿದು ಹಾಕಿಕೊಳ್ಳಲು, ಮಾಯದ ಗಾಯವ

ಮಾಯವಾಗಿಸಲು, ಹೃದಯದ ಕಡಲಲ್ಲಿ ಈಜಲು ಬರದೆ ಮುಳುಗಿರಲು ಜೀವವ ಉಳಿಸಲು ಬದುಕಿನ ಕನಸನ್ನು ಕಟ್ಟಲು ಅವಳೇ ಬೇಕು. ಪ್ರೇಮಿಗಳ ಭೇಟಿಯ ಕ್ಷಣಭಂಗುರವು “ಈಗ ಬಂದಿರುವೆ/ಆಗಲೇ ನೀ ಹೊಗಲೇಬೇಕೆ” ಎನ್ನುವ ಗೀತೆಯ ಕಾವ್ಯವಸ್ತು. ಈ ಗೀತೆ, ಪ್ರೇಮಿಗಳು ಕನಸಿನ ನೌಕೆಯಲ್ಲಿ ತೇಲುತ್ತಾ ಘಂಟೆಗಟ್ಟಲೆ ಮಾತುಗಳನ್ನಾಡಿದರೂ ಸಮಯ ಜಾರಿದ್ದೇ ತಿಳಿಯದೆ ಅಗಲುವ ಹೊತ್ತಿನ ಅವರ ಚಡಪಡಿಕೆಯನ್ನು ಬಿಂಬಿಸುತ್ತದೆ. “ಇದೆಯೆ ನಿನಗೆ ಸಮಯ” – ಜಗದ ನಂಟನ್ನೆಲ್ಲ ಮರೆತು ತನ್ನ ಜೊತೆ ತಿರುಗಾಡಲು, ಹಾಡಲು, ಬರೆದ ಓಲೆ ಓದಲು, ನೆನೆದಾಕ್ಷಣ ಕರೆ ಮಾಡಲು ಇದೆಯೆ ಸಮಯ? ಜಗಳವ ಆಡಲು, ರಾಜಿಯಾಗಲು ತನಗಾಗಿ ಒಂದಿಷ್ಟು ಹೊತ್ತು ಮೀಸಲಿಡಲು ಆಗುವುದೆ? ಎಂದು ಕೋರಿಕೊಳ್ಳುತ್ತ ಹಾಡುವ ಹಾಡಿದು. ಮಳೆಯಲ್ಲಿ ಜೊತೆಯಲ್ಲಿ ಕೈ ಹಿಡಿದು ನಡೆದ ಅನುಭೂತಿಯನ್ನು ಮೆಲುಕು ಹಾಕುವ “ಇನ್ನೂ ಅನಿಸುತಿದೆ” ಎನ್ನುವ ಗೀತೆಯ ಸಾಹಿತ್ಯ ಮತ್ತೊಂದು ಸುಂದರ ಕವಿತೆ.

2008061452080801ಸವಕಲಾಗಿದ್ದ ಕನ್ನಡ ಚಿತ್ರಗೀತೆಗಳ ಸಾಹಿತ್ಯಕ್ಕೆ ಹೊಳಪು ತಂದು ಹೊಸ ಮೌಲ್ಯ ನೀಡಿದ ಹೆಗ್ಗಳಿಕೆ ಜಯಂತ್ ಕಾಯ್ಕಿಣಿಯವರದು ಎಂದರೆ ಬಹುಶಃ ತಪ್ಪಾಗಲಾರದು. ಸರಿ ಸುಮಾರು ೪ ದಶಕಗಳಿಂದ ಕನ್ನಡ ಕವನ, ಕಥೆ, ಲಲಿತ ಪ್ರಬಂಧ, ನಾಟಕ ಹೀಗೆ ನಾನಾ ಪ್ರಕಾರಗಳಲ್ಲಿ ಸಾಹಿತ್ಯಕೃಷಿ ಮಾಡಿಕೊಂಡು ಬಂದಿರುವ ಇವರ ಜನಪ್ರಿಯತೆ ಚಿತ್ರಗೀತೆಗಳ ಮುಖೇನ ಕಳೆದ ೨-೩ ವರ್ಷಗಳಲ್ಲಿ ಅತ್ಯುನ್ನತಿಯನ್ನು ಪಡೆದಿದೆ. ಬದುಕಿನ ಸೂಕ್ಷ್ಮ ವಿವರಗಳನ್ನು, ಸಣ್ಣ ಸಣ್ಣ ಘಟನೆಗಳಲ್ಲಿನ ಮರ್ಮಗಳನ್ನು ತಮ್ಮ ಕಾವ್ಯಾತ್ಮಕ ಒಳನೋಟದಲ್ಲಿ ಗ್ರಹಿಸಿ ಚೆಂದದ ಪದಗಳಲ್ಲಿ ಹಿಡಿದಿಡುವ ಇವರ ಶೈಲಿ ಅತ್ಯಂತ ಸುಂದರ ಹಾಗೂ ಮನೋಹರ. ೧೯ನೇ ವಯಸ್ಸಿಗೇ ಚೊಚ್ಚಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿರುವ ಇವರು, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸೂಕ್ಷ್ಮ ಸಂವೇದನೆಯುಳ್ಳ ಚಿತ್ರಸಾಹಿತಿಗಳ ಕಾಲ ಆರ್. ಎನ್. ಜಯಗೋಪಾಲ್, ಚಿ. ಉದಯಶಂಕರ್, ಹಂಸಲೇಖ ನಂತರ ಮುಗಿದೇ ಹೋಯಿತು ಎಂಬ ಮಾತನ್ನು ಸುಳ್ಳಾಗಿಸಿದೆ. ಸರಳ ಪದಗಳನ್ನು ಪೋಣಿಸಿ, ಮಾಯೆಯ ಗಂಧವನ್ನು ಲೇಪಿಸಿ, ಕಾವ್ಯಮಾಲೆಯನ್ನು ಕಟ್ಟುವ ಕಲೆ ಕಾಯ್ಕಿಣಿಯವರಿಗೆ ಮೊದಲಿನಿಂದಲೂ ಒಲಿದುಬಂದಿದೆ. ಬದುಕಿನ ಅಸಂಗತಗಳನ್ನು ಇವರು ಅದ್ಭುತವಾಗಿ ಚಿತ್ರಿಸುವುದು ಇವರ ಕಥೆಗಳಲ್ಲಿ. ಕನ್ನಡ ಸಾಹಿತ್ಯಲೋಕದ ಇಂದಿನ ಅಗ್ರಗಣ್ಯ ಕಥೆಗಾರರಲ್ಲಿ ಇವರೂ ಒಬ್ಬರು ಎನ್ನುವ ವಿಷಯ ಸಾಕಷ್ಟು ಜನರಿಗೆ ಗೊತ್ತಿರಲಾರದು.

ಕಾಯ್ಕಿಣಿಯವರ ಪದಲಾಲಿತ್ಯ ಮತ್ತು ಭಾವಸೃಷ್ಟಿ, ಮನೋಮೂರ್ತಿಯವರ ರಾಗಸಂಯೋಜನೆ ಮತ್ತು ಸೋನು ನಿಗಮ್ ರ ಭಾವಪೂರ್ಣ ಸುಶ್ರಾವ್ಯ ಗಾಯನ ಈ ಗೀತಸಂಚಯದ ಮೌಲ್ಯವೇರಲು ಕಾರಣ. ಕನ್ನಡದ ಮಟ್ಟಿಗಂತೂ ಇದು ಹೊಸ ಪ್ರಯತ್ನ. ಈ ತ್ರಿಮೂರ್ತಿಗಳ ಸಮಾಗಮದಲ್ಲಿ ಇನ್ನಷ್ಟು ವೈವಿಧ್ಯದ ಸಾಹಿತ್ಯ-ಸಂಗೀತ ಕೂಡಿಬಂದು ಅಮೃತದ ಹೊಳೆಯು ಹರಿಯಲಿ.

ಆಲ್ಬಂ ನ ಎಲ್ಲಾ ಹಾಡು ಕೇಳಲು ಭೇಟಿ ಕೊಡಿ- ಕನ್ನಡ ಆಡಿಯೋ

‍ಲೇಖಕರು avadhi

September 6, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

  1. hneshakumar@gmail.com

    ಕಾಯ್ಕಿಣಿಯವರ ಪದಗಳ ಮಾಯೆ ನಮ್ಮನ್ನ ಆವರಿಸಿ,ಗುನುಗುನಿಸುತ್ತ ಮೈ ಮರೆವಂತೆ ಮಾಡಿವೆ…

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ [email protected]Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: