ನೀವು ಮಿಸ್ ಮಾಡಲೇಬಾರದ ಒಂದು ಪುಸ್ತಕ

ನಿಜಕ್ಕೂ ನೀವು ಮಿಸ್ ಮಾಡಲೇಬಾರದ ಒಂದು ಪುಸ್ತಕ ಬರುತ್ತಿದೆ. ವಿ ಗಾಯತ್ರಿ ಗೊತ್ತಲ್ಲ? ಅದೇ ನ್ಯಾಷನಲ್ ಬುಕ್  ಟ್ರಸ್ಟ್ ಗೆ   ತೊತ್ತೋಚಾನ್ ಅನುವಾದಿಸಿಕೊಟ್ಟವರು . ಇದೇ ತೊತ್ತೋ ಚಾನ್ ಎಳೆ ಹಿಡಿದು ಕನ್ನಡದ ಪರಿಸರಕ್ಕೆ ಒಗ್ಗಿಸಿ ಹೊಸ ಕಾದಂಬರಿ ಬರೆದಿದ್ದಾರೆ. ಕಾಡುವ ಕಾದಂಬರಿ ಅದು. ಪ ಸ ಕುಮಾರ್ ರೇಖೆಗಳು, ಅಪಾರ ವಿನ್ಯಾಸ ಸಹಾ ಅಷ್ಟೇ ಕಾಡುವಂತಿದೆ.

ಈ ಪುಸ್ತಕ ನಂಗಿಷ್ಟ ಯಾಕೆ ಎಂಬುದನ್ನು ಇಲ್ಲಿ ವಿವರಿಸಿದ್ದೇನೆ. ಓದಿ-

ಈ ಪುಸ್ತಕ ನಂಗಿಷ್ಟ

‘ಅವಳು ಈ ಶಾಲೆಗೆ ಸುಮ್ಮನೆ ಬರಲಿಲ್ಲ, ಒಂದು ಸಂಭ್ರಮದ ಅಲೆಯನ್ನೇ ಹೊತ್ತು ತಂದಳು..’ ಎಂದು ರೇಖಾ ಮೇಡಂ ತುಂಬಿದ ಸಭೆಗೆ ಕಿನ್ನರಿಯನ್ನು ಪರಿಚಯಿಸಿದಾಗ ನನ್ನ ಕಣ್ಣು ಹಾಗೂ ಮನಸ್ಸು ಎರಡೂ ಒದ್ದೆಯಾಗಿ ಹೋಗಿತ್ತು. ಥೇಟ್ ‘ತುಂಗಾ’ಳ ರೀತಿ ಅವಳ ಪುಟ್ಟ ಬೆರಳನ್ನು ಹಿಡಿದು ಶಾಲೆ ಶಾಲೆ ತಿರುಗಿದ್ದೆವು. ಪ್ರತೀ ಶಾಲೆಯ ಅಂಗಳ ಹೊಗುವಾಗಲೂ ಈ ಶಾಲೆ ಮಗಳ ಮನಸಿನ ಮೇಲೆ ಒಂದು ಕಲೆ ಮೂಡಿಸದಿರಲಿ ಎಂದು ಮನಸ್ಸು ಹಾರೈಸುತ್ತಿತ್ತು. ದುಗುಡ ನಮ್ಮ ಮುಖಗಳ ಮೇಲೆ ಮೋಡದಂತೆ ಬಂದು ನಿಲ್ಲುತ್ತಿತ್ತು.

‘ಅಮ್ಮ, ಅವರು ನಾನು ಬರೆದ ಚಿತ್ರ ಸರಿ ಇಲ್ಲ ಅನ್ನೋದು ಯಾಕೆ’ ಅಂತ ಅವಳು ಶಾಲೆಯಿಂದ ಓಡಿ ಬಂದು ಕೇಳಿದರೆ ನಮ್ಮ ಬದುಕಿನ ಅಷ್ಟೂ ಬಣ್ಣಗಳು ಮುದುಡಿಹೋಗುತ್ತಿತ್ತು. ಒಂದು ಹಾಳೆ, ಒಂದೆರಡೇ ಬಣ್ಣ ಸಿಕ್ಕರೂ ಆಕಾಶದಿಂದ ಕಾಮನ ಬಿಲ್ಲನ್ನು ಎಳೆದು ತಂದು ಹಾಳೆಯೊಳಗೆ ಕೂರಿಸುತ್ತಿದ್ದ ಹುಡುಗಿ ನಿಧಾನವಾಗಿ ಹಾಳೆಯನ್ನೇ ಬದಿಗೆ ಸರಿಸಿ ಬಿಟ್ಟಳು. ಪೆನ್ಸಿಲ್ ಸಿಕ್ಕರೆ ಸಾಕು ಚಕ ಚಕ ನೂರೆಂಟು ಓರೆಕೋರೆ ಗೆರೆ ಎಳೆಯುತ್ತಿದ್ದ ಹುಡುಗಿ ಬಣ್ಣದ ಲೋಕಕ್ಕೆ ಬೆನ್ನು ತಿರುಗಿಸಿ ಕೂತಳು. ಶಾಲೆಯಲ್ಲಿ ಡ್ರಾಯಿಂಗ್ ಮಾಸ್ತರ್ ಬಾಲ್ ಬರಿ, ಎರಡು ಬೆಟ್ಟದ ನಡುವೆ ಮಾತ್ರ ಸೂರ್ಯ ಇರಬೇಕು, ಚಿಟ್ಟೆಗೆ ಇಂತಹದೇ ಬಣ್ಣ ಹಾಕಬೇಕು, ರೆಕ್ಕೆ ಕರಾರುವಾಕ್ಕಾಗಿರಬೇಕು ಎಂದು ಹೇಳುತ್ತಾ ಹೇಳುತ್ತಲೇ ಮಗಳ ಮನಸ್ಸಿನಲ್ಲಿದ್ದ ಬಣ್ಣದ ಲೋಕವನ್ನು ಅವರು ರಬ್ಬರ್ ಹಿಡಿದು ಅಳಿಸುತ್ತಾ ನಡೆದಿದ್ದರು.

ಒಂದು ದಿನ ಹೀಗೆ ಥೇಟ್ ‘ತುಂಗಾ’ಳಂತೆಯೇ ಅವಳು ನೇರ ಪ್ರಿನ್ಸಿಪಾಲ್ ರೂಂ ಹೊಕ್ಕಳು ಅವಳಿಗೆ ಏನೋ ಹೇಳುವುದಿತ್ತು. ಆದರೆ ಅಲ್ಲಿದ್ದವರೆಲ್ಲಾ ಗದರಿಕೊಂಡ ಪರಿಗೆ ಅವಳು ಒಂದು ಭಯವನ್ನು ತನ್ನೊಳಗೆ ಸ್ಥಾಪಿಸಿಕೊಂಡುಬಿಟ್ಟಳು. ಇದು ಎಲ್ಲಿಯೂ ಸಿಗದ ಶಾಲೆ ಎಂದು ಎಲ್ಲರೂ ಶಿಫಾರಸು ಮಾಡಿ ಕಳಿಸಿದ ಶಾಲೆಯಲ್ಲಿ ಮಗಳಿಗೆ ಸತತವಾಗಿ ಸಿಕ್ಕಿದ್ದು ಬೈಗುಳ, ಆಗೀಗ ಪೆಟ್ಟು. ಪಾಪ, ನಮಗೂ ಅರ್ಥವಾಗುತ್ತಿತ್ತು, ಶಾಲೆಯ ಮೇಡಂ ಮನೆಯಲ್ಲಿದ್ದ ಮುಗಿಯದ ಸಮಸ್ಯೆ.

ಆದರೆ ಆ ಒಂದು ಶಾಲೆಯೂ ಇತ್ತು. ಥೇಟ್ ‘ತುಂಗಾ’ಳಿಗೆ ಸಿಕ್ಕ ಶಾಲೆಯಂತೆ- ಈಗಲೂ ನೆನಪಿದೆ. ಬೆಕ್ಕಿನಂತೆ ಹೆಜ್ಜೆ ಇಟ್ಟು ಸದ್ದಾಗದಂತೆ ಕಿಟಕಿಯಿಂದ ಇಣುಕಿ ನೋಡಿದಾಗ ಇನ್ನೂ ಬದುಕಿಗೆ ಕಣ್ಣು ಬಿಡುತ್ತಿದ್ದ ಅವಳು ಕೈನಲ್ಲಿ ಒಂದು ಡಬ್ಬಿ ಹಿಡಿದು ಅಲ್ಲಾಡಿಸುತ್ತಾ ಇದ್ದಳು. ಒಳಗೆ ಒಂದಿಷ್ಟು ಮರಳು. ಅದು ಮಾಡುತ್ತಿದ್ದ ಶಬ್ದ ಅವಳೊಳಗೆ ಕಚಗುಳಿ ಇಡುತ್ತಿತ್ತು. ಅಷ್ಟೇ ಅಲ್ಲ ಮಕ್ಕಳ ಎದೆಯಾಳದಲ್ಲಿ ನಾದದ ನದಿಯೊಂದು ನಡೆಯುವ ಹಾಗೆ ಮಾಡುತ್ತಿತ್ತು. ಹಾಗೇ ಇನ್ನೊಂದು ದಿನ,,ಹಾಗೇ ಕದ್ದು ನೋಡಿದಾಗ ಮಕ್ಕಳ ಎದುರು ಎಷ್ಟೊಂದು ಇಂಗ್ಲಿಷ್ ವರ್ಣಮಾಲೆಯ ಅಕ್ಷರವನ್ನು ಹರಡಿದ್ದರು. ಆಕೆಗೆ ಅವು ಅಕ್ಷರ ಎನ್ನುವುದಕ್ಕಿಂತ ಅವಳ ಜೊತೆ ಆಟಕ್ಕೆ ಕಾದು ಕೂತ ಗೆಳೆಯರ ಹಾಗೇ ಕಾಣುತ್ತಿದ್ದವು. ಅವಳು ಪಾಠ ಕಲಿತದ್ದು ಹಾಗೇ, ಗೆಳೆಯರ ಜೊತೆ ಆಟವಾಡಿದಂತೆ.

ಅಂಬೆಗಾಲು ದಾಟಿ ನಿಂತ ಹುಡುಗಿಗೆ ಸಿಕ್ಕ ಈ ಶಾಲೆಯ ನೆನಪು ಮನಸ್ಸಿನ ಕ್ಯಾನ್ವಾಸ್ ನಿಂದ ಮರೆಯಾಗಲೇ ಇಲ್ಲ. ಊರೂರು ಬದಲು ಮಾಡಿದಾಗಲೆಲ್ಲಾ ಹುಡುಕಿದ್ದು ಅಂತದೇ ಶಾಲೆಯನ್ನು. ಆದರೆ ಶಾಲೆಯ ಅಂಗಳದಲ್ಲಿ ಮಕ್ಕಳ ಕಲರವವೂ ಇರಬೇಕು ಎಂಬುದನ್ನೇ ಎಷ್ಟೋ ಶಾಲೆಗಳು ಮರೆತುಬಿಟ್ಟಿದ್ದವು. ಆ ನಂತರ ಎಷ್ಟು ವರ್ಷಗಳು ಹುಡುಕಿದ್ದೇವೆ. ಅವಳ ಮನಸ್ಸಿಗೆ ಘಾಸಿಯಾಗದಿರುವ ಶಾಲೆ ಸಿಗಲಿ ಅಂತ.

ಮತ್ತೆ ಸಿಕ್ಕಿತು- ಒಂದು ಅಚಾನಕ್ ವರ ಸಿಕ್ಕಿದಂತೆ- ಥೇಟ್ ತುಂಗಾಳಿಗೆ ಸಿಕ್ಕ ಹಾಗೇ. ನೀನು ಸಂಭ್ರಮವನ್ನು ಹೊತ್ತು ತಂಡ ಹುಡುಗಿ ಅಂತ ಸಂಭ್ರಮಿಸಿದ ಶಾಲೆ. ಅಂತಹ ಶಾಲೆಗಳು ಇವೆ. ಅಂಥಹ ಶಾಲೆಗಳನ್ನು ಎಷ್ಟೊಂದು ”ತುಂಗಾ’ಳಂತ ಪುಟಾಣಿಯರು ಹುಡುಕುತ್ತಾ ನಡೆದಿದ್ದಾರೆ. ಅವರ ಹಿಂದೆ ಎಷ್ಟೊಂದು ಆತಂಕ ಹೊತ್ತ ಅಮ್ಮ ಅಪ್ಪಂದಿರು. ಅಂತಹ ಶಾಲೆ ಕಥೆಗಳನ್ನು ಈ ‘ತುಂಗಾ’ ಹೇಳುತ್ತಿದೆಯಲ್ಲಾ ಅದಕ್ಕೇ ‘ಈ ಪುಸ್ತಕ ನಂಗಿಷ್ಟ’.

-ಜಿ ಎನ್ ಮೋಹನ್

‍ಲೇಖಕರು avadhi

June 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

3 ಪ್ರತಿಕ್ರಿಯೆಗಳು

 1. savitri

  Thunga tells us that is interesting novel in very introduction. please let me know the place where that novel is available.

  ಪ್ರತಿಕ್ರಿಯೆ
 2. kumar

  kumar avara rekhegalannu nododu nijakku khushi kodutte. bahushya apara cover kattiddare anisutte. tumba chennagide…

  – kumar

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: