ನೀ ಯಾರೋ ಏನೋ ಸಖ, ಎನಗಾಸರೆ..

ಆ ಹುಡುಗಿ ಹಾಗೇ ಇದ್ದಳು . . .

– ನಾಗರಾಜ್ ಕೆ

ಪೆನ್ನುಪೇಪರ್ ಇಳಿ ಮದ್ಯಾಹ್ನ ಸುಮ್ನೆ ಮನೆಯಿಂದ ಹೊರಬಿದ್ದೆ, ಏನೂ ಕೆಲಸ ಇರ್ಲಿಲ್ಲ ಹಾಗೇ ನಡ್ಕೊಂಡು ಸ್ವಲ್ಪ ದೂರದಲ್ಲಿರೋ ರಿಂಗ್ ರೋಡಿನವರೆಗೂ ಬಂದು ವೆಹಿಕಲ್ ಗಳನ್ನ ನೋಡ್ತಾ ನಿಂತೆ. ಯಾರೋ ನನ್ನನ್ನೇ ನೋಡ್ತಾಯಿದಾರೆ ಅನ್ನಿಸಿ ಆಕಡೆ ತಿರುಗಿದೆ. ಆ ಹೆಣ್ಣುಮಗಳು ನನ್ನನ್ನೇ ನೋಡ್ತಾಯಿದ್ಲು. ನನ್ನ ಹಿಂದೆ ಬೇರೆ ಯಾರಾದ್ರು ಇದಾರಾ ಅಂತ ನೋಡಿದ್ರೆ ಯಾರೂ ಇಲ್ಲ. ನಿಜ, ಆ ಹುಡುಗಿ ನನ್ನನ್ನೇ ನೋಡ್ತಿರೋದು. ‘ಇದ್ಯಾರಪ್ಪ’ ಅನ್ಕೊಂಡು ಮತ್ತೆ ಆಕೆಯನ್ನ ನೋಡಿದೆ. ಆಕೆ ನಗುತ್ತ ‘ಗೊತ್ತಾಗ್ಲಿಲ್ಲ ಹೌದಲ್ಲ?’ ಅಂದು ಹತ್ತಿರ ಬಂದಳು and she was pregnant. ನೆನಪು ಏಳು ವರ್ಷ ಹಿಂದೆ ಸಾಗಿತು, ಅದೇ ಧಾರವಾಡಕ್ಕೆ. ‘ಗೊತ್ತಾಯ್ತು ಹೇಗಿದಿರಾ ?’ ಅಂದಿದ್ದಕ್ಕೆ ‘ಇದ್ಯಾಕಲೆ ಇಷ್ಟೊಂದು ಗೌರವ, ನಿನಗಿದೆಲ್ಲ ಸೂಟ್ ಆಗಂಗಿಲ್ಲ ನೋಡು’ ಅಂದ್ಲು. ‘ಇನ್ನೂ ಹಂಗ ಅದೀ’ ‘ನಾ ಹೆಂಗ್ ಇದ್ನಿ ಅನ್ನೂದು ನೆನಪದ ನಿಂಗ?’ ಅಂತ ಕೇಳಿದಳು. ನಾನು ಸುಮ್ಮನಾದೆ. ‘ನನ್ನ ನೆನಪ ಆಗಿತ್ತ ಒಮ್ಮೆರ ?’ ಮತ್ತೆ ಕೇಳಿದಳು. ಜೋರಾಗಿ ಉಸಿರು ಬಿಟ್ಟು ‘ಇಲ್ಲ’ ಎಂಬಂತೆ ಅಡ್ಡಡ್ಡಾ ತಲೆ ಒಗೆದೆ, ಅವಳನ್ನ ನಾನು ಮರೆತುಹೋಗಿದ್ದೆ. ‘ಇದಕ ಇಷ್ಟ ಆಕ್ಕಿ ನೋಡ್ಲೆ ನೀ, ನೇರ ನೇರ ಹೇಳ್ತಿ’ ಅಂದ್ಲು. ‘ಮತ್ತೆ ಏನ್ ಸಮಾಚಾರ ? ಏನ್ ಸುದ್ದಿ ?’ ಅಂತ ಕೇಳ್ದೆ ‘ಭಾಳ ದಿನಕ್ಕ ಸಿಕ್ಕಿವೀ ಇಲ್ಲೇ ಎಲ್ಲೆರ ಮಿರ್ಚಿ-ಬಜ್ಜಿ ತಿಂದು ಚಾ ಕುಡಿಯುನ, ಗಿರ್ಮಿಟ್ ಸಿಕ್ರ ಇನ್ನೂ ಚಲೋ’ ಶುದ್ದ ಕಾಲೇಜಿನ ಧಾಟಿಯಲ್ಲೇ ಹೇಳಿದಳು ಇನ್ ಫ್ಯಾಕ್ಟ್ ಆರ್ಡರ್ ಮಾಡಿದಳು. ‘ಗಿರ್ಮಿಟ್ ಸಿಗಾಕ ಇದೇನು ಧಾರವಾಡೆನು?’ ಅಂದು ನಕ್ಕೆ ಅವಳು ನಕ್ಕಳು. ಹತ್ತಿರದಲ್ಲಿದ್ದ ಚಿಕ್ಕ ಹೋಟೆಲಿಗೆ ಹೋಗುವಾಗ ನಾವು ಮಾತಾಡಲಿಲ್ಲ. ಇನ್ನೇನು ಹೋಟೆಲಿನೊಳಗೆ ಹೋಗಬೇಕು ಅಷ್ಟರಲ್ಲಿ ನಿಲ್ಲಿಸಿ ‘ಸಿಗರೇಟ್ ಸೇದೋದು ಬಿಟ್ಟೀ?’ ಕೇಳಿದಳು. ‘ಬಿಡೋ ಪ್ರಯತ್ನದಲ್ಲಿದಿನಿ’ ಅಂದೆ ‘ಇನ್ನೂ ಯಾಕ್ ಸುಳ್ಳು ಹೇಳ್ತಿಯ ಮಾರಾಯ’ ‘ಇಲ್ಲ ನಿಜವಾಗಲು ಬಿಡಬೇಕು ಅನ್ಕೊಂಡಿದಿನಿ’ ‘ಹಂಗಂದ್ರ ಅವತ್ತು ನನಗ್ಹೆಳಿದ್ದು ಸುಳ್ಳ ?’ ನಾನು ಏನೂ ಮಾತಾಡಲಿಲ್ಲ, ಅವಳಿಗೆ ನಾನು ಯಾವಾಗ ‘ಸಿಗರೇಟ್ ಬಿಡೋ ಪ್ರಯತ್ನದಲ್ಲಿದಿನಿ’ ಅಂತ ಹೇಳಿದ್ದೇನೋ ಏನೋ ಅಥವಾ ಆ ಕ್ಷಣಕ್ಕೆ ಅವಳಿಂದ ಪಾರಾಗಬೇಕು ಅನ್ಕೊಂಡು ಹಾಗೆ ಹೇಳಿರೋ ಸಾಧ್ಯತೆಗಳಿವೆ. ಆ ಮಾತು ಒತ್ತಟ್ಟಿಗಿರಲಿ, ಅಸಲಿಗೆ ಅವಳು ನೆನಪಾದದ್ದೇ ಈಗ ಏಳು ವರ್ಷಗಳ ನಂತರ ಅವಳನ್ನ ನೋಡಿದ ಮೇಲೆ!. ಬೇರೆ ಸ್ಟಾಪಿಗೆ ಇಳಿಯುವ ಬದಲು ಗೊತ್ತಾಗದೆ ಗಡಿಬಿಡಿಯಲ್ಲಿ ಇಲ್ಲೇ ಬಸ್ ನಿಂದ ಇಳಿದಿದ್ದಳು – ಬಹುಶಃ ಅದೇ ಅದೃಷ್ಟ. ‘ನಡಿ ಒಳಗ, ಚಾ ಕುಡಿಯುನ’ ಅಂದೆ ‘ಬ್ಯಾಡ ಇಲ್ಲೇ ಫುಟ್ ಪಾತ್ ಮೇಲೆ ಚಾ ಕುಡುದ್ರಾತು, ನಿನಗೂ ಸಿಗರೇಟ್ ಸೇದಾಕಾ ಆರಾಮಾಕತಿ’ ಬೇಡವೆಂದರೂ ನನ್ನ ಕಣ್ಣಿಂದ ಹನಿ ಉದುರಿದವು. ‘ಬ್ಯಾಡ ಈಗ ಅಳಬ್ಯಾಡ, ನಾನು ಅಳ್ತಿನಿ ನೋಡು ಮತ್ತ’ ಅಂದ್ಲು ನಾನು ಕಣ್ಣೊರೆಸಿಕೊಳ್ಳುತ್ತಾ ನಕ್ಕೆ. ಚಾ ಕುಡಿದ ಮೇಲೆ ಅವಳು ತನ್ನ ಪರ್ಸ್ ಗೆ ಕೈಹಾಕುತ್ತಾ ‘ಅವತ್ತು ಅಷ್ಟ, ಇವತ್ತು ಅಷ್ಟ ನಾನೇನು ಸಿಗರೆಟಿಂದು ರೊಕ್ಕ ಕೊಡುದಿಲ್ಲ’ ಅಂದ್ಲು ‘ಏನೂ ಬ್ಯಾಡ ಎಲ್ಲಾ ನಾನ ಕೊಡ್ತೀನಿ ಬಿಡು’ ಅನ್ನುತ್ತಾ ಸಿಗರೇಟ್ ಎಸೆದು ಜೇಬಿಗೆ ಕೈ ಹಾಕಿದೆ. ಅವಳು ನನ್ನ ಕೈ ಒತ್ತಿ ಹಿಡಿದು ‘for the sake of college days. please, let the tradition continue’ ಅಂದ್ಲು. ಅವಳ ಕಣ್ಣು ಹಸಿಯಾಗಿದ್ದವು.ನನಗೆ ಒಂದು ಕ್ಷಣ ಅವಳನ್ನ ತಬ್ಬಿಕೊಂಡು ಬಿಡ್ಲಾ ಅನ್ನಿಸಿ ಬಿಟ್ಟಿತು. ನಾನು ಸಿಗರೇಟಿನ ದುಡ್ಡನ್ನಷ್ಟೇ ಕೊಟ್ಟೆ. ಕೆಲಹೊತ್ತು ಮಾತಾಡಿದೆವು, ನಕ್ಕೆವು, ಆಗಾಗ ಕಣ್ಣು ಹಸಿಯಾದವು. ನಾನು ಕೇಳಿದ ಮೇಲೇನೆ ಅವಳು ತನ್ನ ಗಂಡ-ಸಂಸಾರದ ಬಗ್ಗೆ ಮಾತಾಡಿದ್ದು, ಈಗ ನಾಲ್ಕು ತಿಂಗಳ ಗರ್ಭಿಣಿ. ಸಂತೋಷವಾಗಿದಾಳೆ. ‘ನೀನು ಸಿಗರೇಟ್ ಸೇದೋದು ಬಿಡಲಿಲ್ಲ, ನನಗ ಬಿಯರ್ ಕುಡ್ಸಲಿಲ್ಲ ನೋಡು ನೀನು’ ಅಂದ್ಲು. ನಾನು ಜೋರಾಗಿ ನಕ್ಕೆ. ಕಾಲೇಜಿನಲ್ಲಿ ಕೆಲ ಹುಡುಗಿಯರಿಗೆ ತಾವು ಒಮ್ಮೆಯಾದರು ಸಿಗರೇಟ್ ಮತ್ತು ಅಲ್ಕೋಹಾಲಿನ ರುಚಿ ನೋಡ್ಬೇಕು ಅಂತ ಆಸೆಯಿರುತ್ತೆ ಅಂತ ನನಗೆ ಗೊತ್ತಾಗಿದ್ದು ಅವಳಿಂದಲೇ. ‘ಈಗರ ಕುಡ್ಸು ನಡಿ’ ಅಂದಳು ‘ಏ ಹುಚ್ಚಿ’ ಅನ್ನುತ್ತಾ ತಲೆಗೆ ತಟ್ಟಲು ಕೈ ಮುಂದೆ ಮಾಡಿ ಯಾಕೋ ಬೇಡ ಅನ್ನಿಸಿ ಸುಮ್ಮನಾದೆ. ‘ಬಸರಿ ಬಯಕೆ ತಿರ್ಸ್ಬೇಕಪಾ’ ಅಂದು ನಕ್ಕಳು. ಅವಳ ಗಲ್ಲದ ತುಂಬಾ ತಾಯಿ ಆಗುವ ಸಂಬ್ರಮ. ನಾವಿಬ್ಬರು ಭೇಟಿಯಾಗಿ ವರ್ಷಗಳು ಕಳೆದಿದ್ದವು. ನಾನು ಏನು ಮಾತಾಡಬೇಕು, ಏನು ಆಡಬಾರದು, ಯಾವುದು ನೆನಪಾಗಬೇಕು, ಯಾವುದು ಆಗಬಾರದು ಅನ್ನುವುದರ ಬಗ್ಗೆ ಯೋಚಿಸಿ ಯೋಚಿಸಿ ಮಾತಾಡುತಿದ್ದೆ. ಅವಳು ದಿನಾ ಭೇಟಿಯಾಗುವವರ ಹಾಗೆ ಮಾತಾಡುತ್ತಿದ್ದಳು, ಥೇಟ್ ಕಾಲೇಜಿನಲ್ಲಿದ್ದ ಹಾಗೆ. ಸಂಜೆಯಾಗುವವರೆಗೂ ಮಾತಾಡಿದೆವು. ಇಬ್ಬರು ಕೂಡ ಮನೆಗೆ ಬಾ, ಎಲ್ಲಿದೆ ನಿಮ್ಮನೆ?, ಏನ್ ಕೆಲಸ ಮಾಡ್ತಿದಿಯ? ಅಂತ ಹೇಳಲು ಇಲ್ಲ, ಕೇಳಲು ಇಲ್ಲ. ಅವಳು ಹೊರಡುವ ಮುನ್ನ ಮತ್ತೊಮ್ಮೆ ಚಾ ಕುಡುದು ಆಟೋ ರಿಕ್ಷಾ ಹತ್ತಿದಳು. ಆಟೋ ರಿಂಗ್ ರೋಡಿನತ್ತ ಹೊರಟಿತು. ಮನೆಗೆ ಹೊರಡಲು ಇನ್ನೇನು ತಿರುಗಬೇಕು ಅಷ್ಟರಲ್ಲಿ ಏನೋ ನೆನಪಾಗಿ ಯಾವುದರ ಪರಿಯು ಇಲ್ಲದೆ ‘ಸ್ಟಾಪ್ . . . ಸ್ಟಾಪ್’ ಅಂತ ಕೂಗುತ್ತ ಓಡಿದೆ. ಅಟೋ ನಿಂತಿತು, ಅವಳು ಕೆಳಗಿಳಿದು ‘ಏನಾತು?’ ಕೇಳಿದಳು. ‘ನಿನ್ನ ಫೋನ್ ನಂಬರ್ ಕೊಡು’ ಅಂದೆ. ಹಾಗೆ ನಾನು ಕೇಳಿದ ತಕ್ಷಣ, ಏಳು ವರ್ಷಗಳ ಹಿಂದೆ ಕಾಲೇಜಿನ ಕೊನೆ ದಿನ ನಾವಾಡಿದ ಮಾತುಗಳು ನನಗೆ ತಟ್ಟನೆ ನೆನಪಾದವು. ಧಾರವಾಡದಿಂದ ನಮ್ಮ ನಮ್ಮ ಊರಿಗೆ ಹೋಗುವ ಮೊದಲು ಕಾಲೇಜಿನ ಹತ್ತಿರದ ಸಪ್ತಾಪುರದಲ್ಲಿ ಚಾ ಕುಡಿದೆವು, ಅವತ್ತು ಕೂಡ ನನ್ನ ಬೆರಳ ಸಂದಿಯಲ್ಲಿ ಹೊಗೆಯಾಡುವ ಸಿಗರೆಟಿತ್ತು. ಮಾತಾಡ್ತಾ ‘ಮತ್ಯಾವಾಗ ಭೇಟಿಯಾಗ್ತಿವೋ ಏನೋ ಗೊತ್ತಿಲ್ಲ’ ಅಂದಿದ್ದೆ ‘ಈ ಕಾಲೇಜಿಗೆ ಸೇರದಾಗ ನಿನ್ನಂತಂವ ಸಿಗ್ತಾನ ಅನ್ಕೊಂಡಿರ್ಲಿಲ್ಲ, ಆದ್ರ ಅಕಸ್ಮಾತಾಗಿ ನೀ ಪರಿಚಯ ಆದಿ ಚಲೋ ಆತು. ಮುಂದನ ಹಿಂಗ ಅಕಾಸ್ಮಾತಾಗೆ ಸಿಗೂದು’ ಅಂದಿದ್ದಳು. ನಾನು ಸುಮ್ಮನಾಗಿದ್ದೆ. ಈಗ ಫೋನ್ ನಂಬರ್ ಕೇಳಿದಾಗ ಅವಳು ಅದನ್ನೇ ಹೇಳ್ತಾಳೆ ಅಂತ ನನಗೆ ಗೊತ್ತಾಯ್ತು. ನನ್ನ ತೋಳು ಹಿಡಿದು ‘ನಾವಿಬ್ರು ಅಕಸ್ಮಾತಾಗಿ ಸಿಕ್ರ ಚಲೋ’ ಅಂದಳು. ಅವಳು ಮಾತು ಮುಗಿಸಿರಲಿಲ್ಲ ಇಬ್ಬರ ಕಣ್ಣುಗಳಿಂದ ಹನಿಗಳು ಉದುರಿದವು. ‘ಮತ್ತ ಧಾರವಾಡದಾಗ ಅಕಸ್ಮಾತಾಗಿ ಸಿಕ್ಕು ಗಿರ್ಮಿಟ್ ತಿಂದು ಚಾ ಕುಡಿಯು ದಿನ ಬರುತ್ತಾ ?’ ನಿರೀಕ್ಷೆಯ ಕಣ್ಣುಗಳಲ್ಲಿ ಕೇಳಿದಳು. ನನ್ನದು ಬೇರೆ ಊರು, ಅವಳದು ಬೇರೆ ಊರು ಓದಿದ್ದು ಧಾರವಾಡ ಈಗ ನೆಲೆ ಕಂಡಿರೋದು ಬೆಂಗಳೂರು. ಊರಿಗೆ ಅಂತ ಹೋದರೆ ನಮ್ಮ ಊರಿಗೆ ಹೋಗ್ತೇವೆ. ಧಾರವಾಡಕ್ಕೆ ಹೋಗೋದು ತೀರಾ ಕಡಿಮೆ. ಅವಳು ಯಾವಾಗ ಧಾರವಾಡಕ್ಕೆ ಹೋಗ್ತಾಳೋ, ನಾನ್ಯಾವಾಗ ಹೋಗ್ತಿನೋ ಆದ್ದರಿಂದ ‘ಬಹುಶಃ ಆ ದಿನ ಬರಲ್ಲ’ ಅನ್ಸುತ್ತೆ ಅಂದೆ. ‘ಇದಕ್ಕ ಇಷ್ಟ ಆಕ್ಕಿ ನೀ’ ಅಂದಳು ಗರ್ಭಿಣಿ ಸುಂದರಿ. ಅವಳನ್ನ ಆಟೋ ಹತ್ತಿಸಿ, ಆಕೆಯ ಅಂಗೈಯನ್ನ ಬೊಗಸೆಯಲ್ಲಿ ಹಿಡಿದು ‘ಆರೋಗ್ಯವಂತ, ಒಳ್ಳೆ ಭವಿಷ್ಯವಿರೋ ಮಗು ಹುಟ್ಟಲಿ’ ಅಂತ ಹಾರೈಸ್ತೀನಿ ಅಂದೆ. ‘ಥ್ಯಾಂಕ್ಸ್’ ಅಂದಳು. ‘ಆರೋಗ್ಯ ಹುಷಾರು’ ಅಂದೆ ‘ಸರಿ’ ಎನ್ನುವಂತೆ ತಲೆ ಅಲ್ಲಾಡಿಸಿದಳು. ಆಟೋ ಹೊರಟು ಬೆಂಗಳೂರಿನ ಎಲ್ಲಾ ಆಫೀಸಿನಿಂದ ಮನೆಗೆ ದೌಡಾಯಿಸುತ್ತಿದ್ದ ವೆಹಿಕಲ್ ಗಳಲ್ಲಿ ಒಂದಾಯಿತು. ಮತ್ತೊಮ್ಮೆ ಆಕಸ್ಮಿಕವಾಗಿ ಭೇಟಿಯಾಗುವ ಘಳಿಗೆ ಘಟಿಸಲು ಏಳು ವರ್ಷ ಕಾಯಬೇಕಾ? ಗೊತ್ತಿಲ್ಲ. ಇವತ್ತಿನವರೆಗೂ ನಾನು ಅವಳಿಗೆ ಕಾಯುತ್ತಿರಲಿಲ್ಲ ನನ್ನ ಪಾಡಿಗೆ ನಾನಿದ್ದೆ, ಇಷ್ಟು ವರ್ಷ ಸುಮ್ಮನಿದ್ದ ಮನಸ್ಸು ಈಗ ಅವಳನ್ನೇ ದೇನಿಸುತ್ತಿದೆ ಎಂಥಾ ವಿಚಿತ್ರ. ಮತ್ತೆ ಯಾಕಾದರೂ ಸಿಕ್ಕಳೋ ಅನ್ನಿಸಿತು. ಕೆಲವು ವಿಷಯಗಳು ನೆನಪಾಗದಿದ್ದರೇನೆ, ಕೆಲವು ವ್ಯಕ್ತಿಗಳು ಭೇಟಿಯಾಗದಿದ್ದರೆನೆ ಒಳ್ಳೇದು ಅನಿಸಿತು. ಏಳು ವರ್ಷಗಳ ನಂತರ ಭೇಟಿಯಾದ ಅವಳು ಕಾಲೇಜಿನ ದಿನದ ಹುಡುಗಿಯಾಗಿಯೇಯಿದ್ದಳು, ತಾಯಿಯಾಗುವವಳಿದ್ದಳು. ಈಗಿನಷ್ಟು ಅವತ್ತು ನಾನವಳನ್ನ ಬಯಸಲಿಲ್ಲ, ಈವತ್ತಿವರೆಗೂ ಅವಳು ನನ್ನ ಮರೆತಿಲ್ಲ. ರಸ್ತೆಯ ತುದಿಯಲ್ಲಿ ನಾನು, ಅವಳು ಕೂತ ಆಟೋ ಹೋದ ದಿಕ್ಕಿನತ್ತ ನಿರೀಕ್ಷೆಯ ಕಣ್ಣುಗಳಲ್ಲಿ ನೋಡುತ್ತಾ ಸುಮಾರು ಹೊತ್ತು ನಿಂತಿದ್ದೆ – ಒಬ್ಬನೇ. ಹಳೆಯ ಗಜಲ್ ಎಲ್ಲೋ ಮನದ ಮೂಲೆಯಲ್ಲಿ ಹಾಡುತ್ತಿತ್ತು; ‘ಏ ತುಮ್ಹಾರೆ ಘಮ್ ಕೆ ಚರಾಗ್ ಹೈ ಕಭಿ ಭುಜ್ ಗಯೇ ಕಭಿ ಜಲ್ ಗಯೇ’]]>

‍ಲೇಖಕರು G

February 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

5 ಪ್ರತಿಕ್ರಿಯೆಗಳು

 1. prakash hegde

  ನಾಗರಾಜು…
  ನಮ್ಮೊಳಗೆ ಹುದುಗಿರುವದನ್ನೂ ಕೆದಕಿ ಬಿಟ್ಟಿದ್ದೀರಿ…
  ಸೊಗಸಾದ ನಿರೂಪಣೆ….

  ಪ್ರತಿಕ್ರಿಯೆ
 2. Raghunandan

  ಗುಂಡಗಿರುವ ಭೂಮಿ ಮತ್ತೆ ಸೇರಿಸುತ್ತದೆ ಭಾವ-ಅನುಭಾವಗಳ
  ಆಪ್ತರಾಗಿದ್ದು ಮರೆತೇ ಹೋದೆವೇನೋ ಎನ್ನುವಂತ ಪರಿಚಯಗಳು ಯಾವುದೋ ತಿರುವಲ್ಲಿ ಅಚಾನಕ್ ಎದುರಾಗಿ ಕಾಡುತ್ತವೆ…
  ಆಪ್ತ ಬರಹ, ಮುದ ನೀಡಿತು.

  ಪ್ರತಿಕ್ರಿಯೆ
 3. ಉಷಾಕಟ್ಟೆಮನೆ

  ನಾವು ಹುಡುಗಿಯರೇ ಹೀಗಿರೊದು ಹುಡುಗ್ರಾ..ಅದು ನಿಮಗೆ ಅರ್ಥವಾಗೊಲ್ಲ ಅಷ್ಟೇ..!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: