ನೆನಪು ಮತ್ತು ಕನಲಿಕೆಯ ಹೈವೇ

ಹೈವೇ 7

———

ಬೆಳಗಿನ ಜಾವ ನಾವು ನಮ್ಮ ಮನೆಯ ಮುಂದಿನ ಹೈವೇ ರಸ್ತೆಯಲ್ಲಿ ಕಾಸುಗಳನ್ನು ಹುಡುಕುತ್ತಿದ್ದೆವು.

hoovu4.jpg

ಭಾಗ: ಹತ್ತು

ಮಿಡ್ಲ್ ಸ್ಕೂಲಿನಿಂದ ಸಂಜೆ ಮನೆಗೆ ಬಂದ ಕೂಡಲೇ ಮಡಕೆಗಳಲ್ಲಿ ರೊಟ್ಟಿ, ಹಿಟ್ಟು, ಅನ್ನ ಏನಾದರೂ ಇದ್ದರೆ ಹಾಕಿಕೊಂಡು ಯಾವುದಾದರೂ ಕತೆ ಪುಸ್ತಕಗಳು, ಮಾಸ ಪತ್ರಿಕೆಗಳನ್ನು ತೆರೆದು ಓದುತ್ತಾ ತಿನ್ನುತ್ತಿದ್ದೆವು. ಇಲ್ಲಿಯವರೆಗೂ ಅದು ಹಾಗೇ ನಡೆದುಕೊಂಡು ಬಂದಿದೆ. ಇವೊತ್ತಿಗೂ ನಮಗೆ ಊಟ ಮಾಡುವಾಗ ಪುಸ್ತಕವಿಲ್ಲದಿದ್ದರೆ ಪತ್ರಿಕೆ ಅಥವಾ ಓದಲು ಏನಾದರೂ ಇರಲೇಬೇಕು.

ಶನಿವಾರ ಮನೆಗೆ ಬಂದ ಕೂಡಲೇ ನಾನು ಮತ್ತು ನನ್ನ ಅಣ್ಣ ಎರಡು ಪಾಲಿಥೀನ್ ಕವರ್ ಗಳನ್ನು ಕೈಲಿಡಿದುಕೊಂಡು ವೆಂಕಟಾಲದಿಂದ ಸುಮಾರು ಆರು ಮೈಲಿ ದೂರದ ಹುಣಸಮಾರನಹಳ್ಳಿಗೆ ನಡೆದುಕೊಂಡು ಹೋಗುತ್ತಿದ್ದೆವು. ಹೈವೇ ಒಂದು ಬದಿಯಲ್ಲಿ ಅವನು, ಇನ್ನೊಂದು ಬದಿಯಲ್ಲಿ ನಾನು. ರಸ್ತೆಯಲ್ಲಿ ಬಿದ್ದ ಸ್ಕ್ರೂ, ನೆಟ್, ಬೋಲ್ಟು, ಬಾಲ್ಸ್, ಕ್ಲಾಂಪ್ ಗಳನ್ನು ಕವರ್ ಗೆ ಹಾಕಿಕೊಂಡು ಹೋಗುತ್ತಿದ್ದೆವು. ದೊಡ್ಡ ಕೋಳಿಗೂಡಿನಲ್ಲಿ ಅರ್ಧದಷ್ಟು ಕಬ್ಬಿಣಗಳನ್ನು ತುಂಬಿಸಿದ್ದೆವು. ವಾರ ಕಾಲ ನಮ್ಮ ಮನೆಯ ಬದುಕು ಈ ಚಿಲ್ಲರೆ ಕಬ್ಬಿಣ ತುಂಡುಗಳ ಮೂಲಕವೂ ತೂಗುತ್ತಿತ್ತು. ನನ್ನ ಅಣ್ಣನಿಗೆ ಎಷ್ಟೋ ಸಲ ಹಣದ ನೋಟುಗಳು ಸಿಕ್ಕಿವೆ. ಅಮ್ಮ ಆ ಹಣದಿಂದ ದೊಡ್ಡದೊಡ್ಡ ನಾಲ್ಕೈದು ದೇವರ ಫೋಟೋಗಳನ್ನು ಮಾಡಿಸಿಕೊಂಡಿದ್ದಳು.

ಪ್ಯಾಕ್ ಆಟ ಆಡಲು ಪನಾಮ, ಬರ್ಕ್ ಲೀ, ಸಿಸರ್, ಚಾರ್ ಮಿನಾರ್, ಗೋಲ್ಡ್ ಪ್ಲೇಕ್, ಮಾರ್ಲ್ ಬೋರೊ, ಮೋರ್, ವಿಲ್ಸ್ ಸಿಗರೇಟು ಪ್ಯಾಕುಗಳನ್ನು ದಾರಿಯುದ್ದಕ್ಕೂ ಹುಡುಕಿಕೊಂಡು ತುಂಬಿಕೊಳ್ಳುತ್ತಿದ್ದೆವು. ಆಟದಲ್ಲಿ ಸಿಸರ್, ಚಾರ್ ಮಿನಾರ್ ಸಿಗರೇಟು ಪ್ಯಾಕುಗಳಿಗೆ ಹೆಚ್ಚು ಮೌಲ್ಯವಿರುತ್ತಿರಲಿಲ್ಲ.

ಸ್ಕೂಲಿಗೆ ಹೋಗುವಾಗ ನನಗೆ ಒಂದು ಸಲ ಯಲಹಂಕದ ನೇರಳೆಮರದ ಹತ್ತಿರ ಸೊಪ್ಪು ಮಾರುವ ಅಜ್ಜಿಯ ಕೆಂಪುಬಣ್ಣದ ಸಣ್ಣ ಕೈಚೀಲ ಸಿಕ್ಕಿತು. ಅಜ್ಜಿ ಹಿಂಬಾಲಿಸುತ್ತಿರುವ ಭಯ ನನಗೆ ಸ್ಕೂಲು ತಲುಪುವವರೆಗೂ ಇದ್ದೇ ಇತ್ತು. ಸ್ಕೂಲಿನ ಹತ್ತಿರ ಹೋದ ನಂತರ ಕೈಚೀಲವನ್ನು ಬಿಚ್ಚಿ ನೋಡಿದೆ. ಹತ್ತು ರೂಪಾಯಿ ಚಿಲ್ಲರೆ ಕಾಸಿತ್ತು. ಚೀಲವನ್ನು ಎಸೆದುಬಿಟ್ಟೆ. ಸಂಜೆ ಸ್ಕೂಲಿನಿಂದ ಮನೆಗೆ ಹೋಗುವಾಗ ಚಿತ್ರ ಬರೆಯಲು ಸ್ಕೆಚ್ ಪೆನ್ನುಗಳ ಸೆಟ್ ಅನ್ನು ಕೊಂಡುಕೊಂಡೆ. ಸಾಕಷ್ಟು ಚಿತ್ರಗಳನ್ನು ಬರೆದೂ ಬರೆದು ಸ್ಕೆಚ್ ಪೆನ್ನುಗಳಲ್ಲಿ ಇಂಕು ಖಾಲಿಯಾದರೂ ಅದಕ್ಕೆ ನೀರು ಬೆರೆಸಿಕೊಂಡು ಬರೆಯುತ್ತಲೇ ಇದ್ದೆ.

ವೆಂಕಟಾಲದಿಂದ ದೇವನಹಳ್ಳಿ ರಸ್ತೆಯ ಕಡೆಗೆ ನಮ್ಮ ಎಂದಿನ ಪ್ರಯಾಣ ಶುರುವಾಗುತ್ತಿತ್ತು. ಪಾಲನಹಳ್ಳಿ, ಬಾಗಲೂರು ಕ್ರಾಸ್, ಬಿಎಸ್ ಎಫ್, ಇಂಡಿಯನ್ ಏರ್‍ ಫೋರ್ಸ್ ನ್ನು ದಾಟಿಕೊಂಡು ಹೋಗುತ್ತಿದ್ದೆವು. ಹೈವೇ ೭ರಲ್ಲಿ ಲಕ್ಷಾಂತರ ವಾಹನಗಳು ಸಂಚರಿಸುತ್ತಿದ್ದವು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಟೂರಿಸ್ಟ್ ಬಸ್ಸುಗಳು ರಾತ್ರಿಗಳಲ್ಲಿ ನಮ್ಮ ಮನೆಯ ಮುಂದೆ ನಿಂತುಕೊಳ್ಳುತ್ತಿದ್ದವು. ಪ್ರವಾಸಿಗರು ಅಡುಗೆ ಮಾಡಿಕೊಂಡು ತಿನ್ನುತ್ತಿದ್ದರು. ಆಗ ಅವರು ಮರೆತು ಬಿಟ್ಟುಹೋದ ಬಕೆಟ್ ಗಳು, ಜಗ್ ಗಳು, ಟೂತ್ ಪೇಸ್ಟ್ ಗಳು, ಹಲ್ಲುಜ್ಜುವ ಬ್ರಶ್ ಗಳು, ಸಿಗುತ್ತಿದ್ದವು. ಅಲ್ಲಲ್ಲಿ ಸಾಕಷ್ಟು ಟ್ರಕ್ ಗಳು ಕೆಟ್ಟು ನಿಂತಿರುತ್ತಿದ್ದವು. ರಿಪೇರಿಯಾದ ನಂತರ ಬಳಕೆಯಾಗದ ವಸ್ತುಗಳನ್ನು ಅಲ್ಲೇ ಬಿಸಾಡಿ ಹೋಗುತ್ತಿದ್ದರು. ಗ್ರೀಸ್, ಆಯಿಲ್ ಡಬ್ಬಗಳು ಸಿಗುತ್ತಿದ್ದವು. ಕೆಲವು ಸಲ ಟ್ರಕ್ ಗಳು ರಿಪೇರಿಯಾಗುವವರೆಗೂ ನಾವು ನೋಡಿಕೊಂಡು ಅಲ್ಲೇ ನಿಂತಿರುತ್ತಿದ್ದೆವು. ಸಾಧ್ಯವಾದರೆ ಸಹಾಯ ಮಾಡುತ್ತಿದ್ದೆವು. ದಿನಗಟ್ಟಲೆ ಕೆಟ್ಟು ನಿಂತ ಲೈಲ್ಯಾಂಡ್ ಟ್ರಕ್ ಗಳ ಡ್ರೈವರ್ ಗಳು, ಕ್ಲೀನರ್ ಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದೆವು. ಹೆಚ್ಚಾಗಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದ ಟ್ರಕ್ ಗಳು ಬರುತ್ತಿದ್ದವು. ಅವರವರ ರಾಜ್ಯಗಳ ವಿಶೇಷ ವಿನ್ಯಾಸದ ಬೀಡಿ, ಬೆಂಕಿಪೊಟ್ಟಣ, ಸಿಗರೇಟು ಪ್ಯಾಕುಗಳನ್ನು ನೋಡುವುದರಲ್ಲಿ ವಿಪರೀತ ಆಸೆಯಾಗುತ್ತಿತ್ತು. ಅವುಗಳಲ್ಲಿ ಗ್ಲೋಬ್ ಬ್ರಾಂಡ್ ನ ಬೆಂಕಿಪೊಟ್ಟಣ ಇಷ್ಟವಾಗುತ್ತಿತ್ತು. ಕಡ್ಡಿಗಳೆಲ್ಲ ಮುಗಿದು ಹೋದರೂ ಕೆಲವರು ಖಾಲಿ ಪೊಟ್ಟಣಗಳನ್ನು ಟ್ರಕ್ ನಲ್ಲಿ ಇಟ್ಟುಕೊಂಡು ಹೋಗುವಾಗ ನಮಗೆ ತೀವ್ರ ನಿರಾಸೆಯಾಗುತ್ತಿತ್ತು. ಯಾಕೋ ಕೇಳಲು ಮನಸ್ಸು ಬರುತ್ತಿರಲಿಲ್ಲ. ಬಹುಶಃ ನಮ್ಮಂತೆ ಅವರ ಮಕ್ಕಳೂ ಅಪ್ಪಂದಿರಿಗೆ ಖಾಲಿ ಬೆಂಕಿಪೊಟ್ಟಣಗಳನ್ನು ತರಲು ಹೇಳಿರಬೇಕೇನೊ.

ಪ್ರೇಮಿಗಳು ವಿಹರಿಸಲು ಸೂಕ್ತ ಸ್ಥಳವೆನಿಸಿಕೊಂಡಿರುವ ನಂದಿಬೆಟ್ಟಕ್ಕೆ ಪ್ರಧಾನ ರಸ್ತೆ ನಮ್ಮ ಊರಿನಿಂದ ಹಾದು ಹೋಗುವುದು. ಮೋಟಾರ್ ಬೈಕ್, ಕಾರುಗಳಲ್ಲಿ ಹೋಗುವವರು ಡ್ರಿಂಕ್ಸ್ ಮಾಡಿ ಬಿಯರ್ ಬಾಟಲ್ ಗಳನ್ನು ಹೈವೇ ಬದಿಯ ಹುಲ್ಲುಗಳಲ್ಲಿ ಎಸೆದು ಹೋಗುತ್ತಿದ್ದರು. ಅವುಗಳಲ್ಲಿ ಸಾಕಷ್ಟು ಒಡೆದು ಹೋಗಿರುತ್ತಿದ್ದವು. ಭಾನುವಾರದಂದು ರ್ಯಾಲಿ ಬೈಕ್ ಗಳು ಸುಂಟರಗಾಳಿಯಂತೆ ಕ್ಷಣಾರ್ಧದಲ್ಲಿ ಸಾಗಿಹೋಗುತ್ತಿದ್ದವು. ವಿಶ್ರಾಂತಿಗೆಂದು ಮಾವಿನ ಮರಗಳ ಕೆಳಗೆ ನಿಲ್ಲಿಸಿದಾಗ, ಕಾರಿನಷ್ಟು ಉದ್ದದ ಹೋಂಡಾ ಬೈಕ್, ಯಮಹಾ ಬೈಕ್ ಗಳನ್ನು ಗಂಟೆಗಟ್ಟಲೆ ದಿಟ್ಟಿಸುತ್ತಿದ್ದೆವು.

ಪಾಲನಹಳ್ಳಿಯ ನೀಲಗಿರಿ ತೋಪಿನಲ್ಲಿ ಕಾರುಗಳು ನಿಂತಿರುತ್ತಿದ್ದವು. ನಾವು ಹೋಗಿ ಕಾರನ್ನು ಹಿಡಿದುಕೊಂಡು ಮೆಲ್ಲಗೆ ತಲೆಯೆತ್ತಿ ಒಳಗೆ ನೋಡುತ್ತಿದ್ದೆವು. ಎಲ್ಲೆಲ್ಲಿಂದಲೋ ಕರೆದು ತಂದ ಹೆಣ್ಣುಗಳನ್ನು ಹುಡುಗರು ಬಟ್ಟೆ ಬಿಚ್ಚಿ ಸುಖಿಸುತ್ತಿದ್ದರು. ಗ್ಲಾಸಿನಿಂದ ಅವರಿಗೆ ನಾವು ನಿಂತು ನೋಡುತ್ತಿರುವುದು ಕಾಣುತ್ತಿದ್ದರೂ ತಮ್ಮ ತೀಟೆಯನ್ನು ತೀರಿಸಿಕೊಂಡೇ ನಿರ್ಗಮಿಸುತ್ತಿದ್ದರು. ಅವರು ಅಲ್ಲಿಂದ ಹೋಗುವವರೆಗೂ ಅಲ್ಲೇ ಎಲ್ಲಾದರೂ ಕುಳಿತಿದ್ದು, ಅವರು ಎಸೆದುಹೋದ ಬಿಯರ್ ಸೀಸೆಗಳನ್ನು ಹೊತ್ತೊಯ್ಯುತ್ತಿದ್ದೆವು.

ಬೆಳಗಿನ ಜಾವ ನಾವು ನಮ್ಮ ಮನೆಯ ಮುಂದಿನ ಹೈವೇ ರಸ್ತೆಯಲ್ಲಿ ಕಾಸುಗಳನ್ನು ಹುಡುಕುತ್ತಿದ್ದೆವು. ಏಕೆಂದರೆ ನಮ್ಮ ಅಮ್ಮನ ತಮ್ಮ ಮಾರಣ್ಣ, ದೊಡ್ಡಪ್ಪನ ಮಕ್ಕಳಾದ ಮುನಿಕೃಷ್ಣ, ಮುನಿರಾಜ ಇವರೆಲ್ಲರೂ ಮರಳು ಲಾರಿಗಳಲ್ಲಿ ಲೋಡ್, ಅನಲೋಡ್ ಮಾಡುತ್ತಿದ್ದರು. ದೇವನಹಳ್ಳಿಯಿಂದ ಬೆಂಗಳೂರಿಗೆ ಬರುವಾಗ ಬೆಂಕಿ ಪೊಟ್ಟಣದಲ್ಲಿ ಹತ್ತು ಪೈಸೆ, ಐದು ಪೈಸೆ, ನಾಲ್ಕಾಣೆ, ಎಂಟಾಣೆಯವರೆಗೂ ಕಾಸುಗಳನ್ನು ಪೇಪರ್ ನಲ್ಲಿ ಸುತ್ತಿಟ್ಟು, ನಮ್ಮ ಮನೆಯ ಮುಂದೆ ಎಸೆಯುತ್ತಿದ್ದರು. ಕೆಲವು ಸಲ ಟ್ರಕ್ ಗಳು ಅತೀ ವೇಗದಲ್ಲಿದ್ದಾಗ ಬೆಂಕಿಪೊಟ್ಟಣ ಬಿಚ್ಚಿಕೊಂಡು ಪುಡಿಗಾಸುಗಳು ಚೆಲ್ಲಾಪಿಲ್ಲಿಯಾಗಿ ಎಲ್ಲೆಲ್ಲೋ ಬಿದ್ದುಹೋಗುತ್ತಿದ್ದವು.

ದೇವನಹಳ್ಳಿಯಲ್ಲಿ ಕೃಷಿಕರು ಆಗ ಚಕ್ಕೋತ, ನೌಕಲ್, ಹೂಕೋಸು, ಆಲೂಗಡ್ಡೆ, ಬೀಟ್ ರೂಟ್ ಗಳನ್ನು ಸಮೃದ್ಧಿಯಾಗಿ ಬೆಳೆಯುತ್ತಿದ್ದರು. ಗೂಡ್ಸ್ ಟ್ರಕ್ ಗಳಲ್ಲಿ ಕೂಲಿಗೂ ಹೋಗುತ್ತಿದ್ದ ಇವರು, ತರಕಾರಿಗಳನ್ನು ಚೀಲದಲ್ಲಿ ತುಂಬಿಸಿ ನಮ್ಮ ಮನೆಯ ಮುಂದೆ, ಹುಲ್ಲು ಬೆಳೆದಿರುವ ಕಡೆ ಎಸೆಯಲು ನೋಡುತ್ತಿದ್ದರು. ರಸ್ತೆ ಬದಿಯಲ್ಲಿ ನರುಜುಗಲ್ಲುಗಳಿದ್ದದ್ದರಿಂದ ಚೀಲ ಒಡೆದುಹೋಗುವ ಸಂಭವ ಹೆಚ್ಚಿರುತ್ತಿತ್ತು. ಹೀಗೆ ಮಾರಣ್ಣ ಒಂದು ಮಧ್ಯಾಹ್ನ ಆಲೂಗಡ್ಡೆ ಚೀಲವನ್ನು ಎಸೆದಾಗ, ಗಟ್ಟಿನೆಲದ ಮೇಲೆ ಬಿದ್ದು ಚೀಲ ಒಡೆದುಹೋಗಿ ಆಲೂಗಡ್ಡೆಗಳು ಚರ್ಚಿನಿಂದ ಹಿಡಿದು ಸುಬ್ಬರಾಯಪ್ಪನ ಮನೆಯವರೆಗೂ ಉರುಳಾಡಿಕೊಂಡು ಹೋಗಿದ್ದವು. ನಮ್ಮ ಮನೆಯ ಸುತ್ತಮುತ್ತಲಿನ ಮುಸ್ಲಿಂ ಸಮುದಾಯದವರೆಲ್ಲರೂ ನಮ್ಮನ್ನು ತಳ್ಳಿ, ಒಂದು ಕಾಯಿ ಆಲೂಗಡ್ಡೆಯೂ ನಮಗೆ ಸಿಗದಂತೆ ಬಾಚಿಕೊಂಡರು. ಏನು ಮಾಡಬೇಕೆಂದು ಗೊತ್ತಾಗದೆ ನಾವು ಪರಿತಪಿಸಿದೆವು. ಚೀಲ ಒಡೆದು ಹೋಗಿದ್ದನ್ನು ಸರಿಯಾಗಿ ಗಮನಿಸಿದ್ದ ಮಾರಣ್ಣ ಆ ಸಂಜೆಗೆ ಮನೆಗೆ ಬಂದವನು, ನೆರೆಹೊರೆಯವರನ್ನು ತರಾಟೆಗೆ ತೆಗೆದುಕೊಂಡಿದ್ದ. ನಾವು ತೋರಿಸಿದ ಎಲ್ಲರ ಮನೆಗಳ ಮುಂದೆ ಅವನು ಹೋಗಿ ದಬಾಯಿಸಿ ಬರುತ್ತಿದ್ದಂತೆ ಅವನ ಬೆನ್ನಿಗೆ, ಅವನೇ ಹೊಲದಲ್ಲಿ ಆಯ್ದು, ನಮಗಾಗಿ ತಂದಿದ್ದ ಆಲೂಗಡ್ಡೆಗಳು ತಿರುಗಿ ಬಂದಿದ್ದವು.

ಆ ಸಂಜೆ ನಾವೆಲ್ಲರೂ ಒಲೆಯ ಮುಂದೆ ಕೂಡಿಕೊಂಡು ಆಲೂಗಡ್ಡೆಗಳನ್ನು ಕೆಂಡಗಳೊಳಗೆ ಇಟ್ಟು, ಸುಟ್ಟುಕೊಂಡು ತಿಂದೆವು.

‍ಲೇಖಕರು avadhi

March 7, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This