ನೆಲದೊಡಲನ್ನು ನಿರಂತರ ತೋಯಿಸುವ ಮಳೆ…

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ.

। ಕಳೆದ ವಾರದಿಂದ ।

ನಾನು ಕುಳಿತಿದ್ದ ಅಂಗಳ ಚಿಲ್ಲನೆ ಚಿಮ್ಮುವ ಹನಿಗಳ ಆಟಕ್ಕೆ ನೀರಾಗಿ ಹೋಗುತ್ತಿತ್ತು. ಕೆಲವೇ ಮಾರುಗಳ ಹತ್ತಿರದಲ್ಲಿರುವ ಹೇಮಾಂಗಣದ ಬೃಹತ್ಕಟ್ಟಡವೂ ಕಾಣದಂತೆ ಮಾಯವಾಯಿತು. ಬೆನ್ನ ಹಿಂದಿದ್ದ ಅರಣ್ಯ ರೌದ್ರಾವತಾರದಲ್ಲಿ ಮೊರೆಯುತ್ತಿತ್ತು. ಗಾಳಿಯ ಇರುಚಲಿಗೆ ಮಳೆಯ ಹನಿಗಳು ಆಯತಪ್ಪಿ ಸುತ್ತತೊಡಗಿದವು.

ನಾನು ಕುಳಿತಿದ್ದ ಹೆಂಚಿನ ಸೂರು ಅಸಹಾಯಕವಾಯಿತು. ಸುತ್ತುಗಟ್ಟಿ ಹೊಡೆಯುತ್ತಿದ್ದ ನೀರ ಹನಿಗಳ ಲೀಲೆಗೆ ನಾನು ಹಣ್ಣುಗಾಯಿ ನೀರುಗಾಯಿ ಆಗಿ ನಿರ್ವಹವಿಲ್ಲದೇ ಮೈಯೊಡ್ಡಿ ಕುಳಿತೆ. ನನ್ನ ಕೊಡೆ ಪ್ರಯೋಜನಕ್ಕೆ ಬರುವ ಸಾಧ್ಯತೆಯೇ ಇರಲಿಲ್ಲ. ಕೂಗಿಕೊಂಡರೆ ಮಂಜುನಾಥನಿಗೆ ಕೇಳುವ ಸಾಧ್ಯತೆಯೂ ಇರಲಿಲ್ಲ.

ಮೈ ಮೇಲೆ ದೆವ್ವ ಬರಿಸಿಕೊಂಡು ಹಾಗೇ ನಿಶ್ಚಲವಾಗಿ ಕುಳಿತೆ. ನೋಡು ನೋಡುತ್ತಿದ್ದಂತೆ ಕತ್ತಲಾಯಿತು. ಮಳೆ ಮಾತ್ರ ಬಿಡಲಿಲ್ಲ. ನಿನ್ನೆ ಹೋದ ಕರೆಂಟು ಇಂದೂ ಬಂದಿರಲಿಲ್ಲ. ಮಳೆಗೆ ಬೆನ್ನು ಒಡ್ಡಿಕೊಂಡೇ ಹೇಮಾಂಗಣದ ನನ್ನ ಕೊಠಡಿಗೆ ಪ್ರಾಯಾಸದಿಂದಲೇ ಸೇರಿಕೊಂಡೆ. ಮಂಜುನಾಥ ಪ್ರತಿಷ್ಠಾನದ ಕಚೇರಿಗೆ ಬೀಗ ಹಾಕಿ ಆಗಲೇ ಹೊರಟು ಹೋಗಿದ್ದ.

ಆ ಬಿರುಮಳೆಯ ಕತ್ತಲ ಸಾಮ್ರಾಜ್ಯದಲ್ಲಿ ನಾನು ಒಬ್ಬನೇ! ಮಳೆ ನಿರಂತರವಾಗಿ ಹೊಡೆಯುತ್ತಲೇ ಇತ್ತು. ನನ್ನ ಕೊಠಡಿಯಲ್ಲಿ ಹಚ್ಚಿಟ್ಟಿದ್ದ ಮುಂಬತ್ತಿಯ ಮಂದ ಬೆಳಕು ನನ್ನೊಳಗೊಂದು ಜೀವದ್ರೌವ್ಯವನ್ನು ತುಂಬುತ್ತಿತ್ತು. ಇಷ್ಟೊತ್ತಿನವರೆಗೂ ನಾನು ನನ್ನ ರಾತ್ರಿ ಊಟದ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ. ಈಗೇನು ಮಾಡುವುದು?

ಗುಂಡನಿಲ್ಲದ ಈ ದಿನ ನಾನು ಅನಾಥನಾದೆ ಎನ್ನಿಸಿತು. ಈ ಬಿರುಮಳೆಯ ಕಗ್ಗತ್ತಲಲ್ಲಿ ಒಬ್ಬನೇ ಗಡಿಕಲ್ಲಿಗೆ ಹೋಗಿ ಬರುವ ಯಾವ ಧೈರ್ಯವೂ ನನ್ನಲ್ಲಿರಲಿಲ್ಲ. ನನ್ನ ಕೈ ಚೀಲ ಹುಡುಕಾಡಿದೆ. ಒಂದು ಪ್ಯಾಕೆಟ್ ಬಿಸ್ಕೆಟ್ ಇತ್ತು, ಸಮಾಧಾನವಾಯಿತು. ಸುಮಾರು ರಾತ್ರಿ ಹತ್ತು ಗಂಟೆಗೆ ಕಣ್ಣು ಎಳೆದಂತಾಗಿ ನಿದ್ದೆ ಬಂತು.

ನಿನ್ನೆಯೂ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ಹಾಗಾಗಿ ಮಲಗಿದೆ. ಒಂದು ಗಂಟೆಯ ರಾತ್ರಿಯಲ್ಲಿ ಮತ್ತೆ ಎಚ್ಚರವಾಯಿತು. ಅದೇ ಮಳೆ, ಅದೇ ದುಮ್ಮಿಕ್ಕುವ ನೀರು, ಅಂಗಳದ ಕಟ್ಟೆಯೊಡೆದು ನೀರು ಚಿಮ್ಮಿ ಹರಿಯುವ ಸದ್ದು. ಮನುಷ್ಯನಿಗೆ ಭಯವಾದಾಗ ಅಥವಾ ಕಷ್ಟ ಬಂದಾಗ ದೇವರ ನೆನಪಾಗುತ್ತದಂತೆ.

ದೇವರ ಬಗ್ಗೆ ನಂಬಿಕೆ ಇಲ್ಲದವನು ಅದೃಶ್ಯ ಶಕ್ತಿಯ ಮೊರೆಯಾದರೂ ಹೋಗುತ್ತಾನಂತೆ. ನನಗೂ ಹಾಗೇ ಆಯಿತು. ಮೇಲೆ ಕವಿಶೈಲದ ಶಿಲ್ಪವನದಲ್ಲಿ ಶಾಂತ ಚಿತ್ತತೆಯಿಂದ ವಿಹರಿಸುತ್ತಿರುವ ಕುವೆಂಪು ಆತ್ಮ, ಕೆಳಗೆ ತಪೋವನದಲ್ಲಿ ವಿರಮಿಸಿರುವ ತೇಜಸ್ವಿ ಆತ್ಮಗಳನ್ನು ಕರೆಯತೊಡಗಿದೆ.

ಜೇನು ಕುರುಬ ಮತ್ತು ಇರುಳ ಬುಡಕಟ್ಟಿನ ಜನರು ತಮ್ಮ ಹಿರಿಯರ ಆತ್ಮಗಳನ್ನು ಕರೆದು ತಮ್ಮ ಕಷ್ಟ-ಸುಖಗಳ್ನು ಹೇಳಿಕೊಳ್ಳುತ್ತಾರೆ. ಒಬ್ಬನ ಮೈಮೇಲೆ ಬರುವ ಹಿರಿಯರು ಅವರ ಕಷ್ಟ ಶಮನ ಮಾಡುವ ಭರವಸೆ ನೀಡುತ್ತಾರಂತೆ. ಹಾಗೆ ನಾನು ಕೂಡ ಕನ್ನಡದ ಆ ಎರಡು ದಿವ್ಯಾತ್ಮಗಳನ್ನು ನೆನೆಯುತ್ತಲೇ ಬೆಳಗಿನ ಜಾವ ನಿದ್ರೆಗೆ ಜಾರಿದೆ.

ಬೆಳಗ್ಗೆ ಮಳೆಯ ರಭಸ ಕಡಿಮೆಯಾಗಿತ್ತಾದರೂ ನೀಲಾಕಾಶವನ್ನು ಕಾಣಲು ಸಾಧ್ಯವಿರಲಿಲ್ಲ. ನಿದ್ದೆ ಸರಿ ಇಲ್ಲದ್ದರಿಂದ ಆಯಾಸದಿಂದಾಗಿ ಬೆಳಗಿನ ವಾಕ್‌ಗೆ ಹೋಗಲಿಲ್ಲ. ಕರೆಂಟ್ ಇಲ್ಲದ್ದರಿಂದ ಬಿಸಿ ನೀರಿನ ಪ್ರಶ್ನೆಯೇ ಇರಲಿಲ್ಲ. ಸೂರ್ಯನ ಬೆಳಕೇ ಇಲ್ಲದ್ದರಿಂದ ಸೋಲಾರ್ ಕೆಲಸ ಮಾಡುತ್ತಿರಲಿಲ್ಲ. ಆ ವಾತಾವರಣದಲ್ಲಿ ಸ್ನಾನ ಮಾಡಬೇಕೆಂಬ ಯಾವ ಉತ್ಸಾಹವೂ ಇರಲಿಲ್ಲ.

ನಮ್ಮ ಬಯಲು ಸೀಮೆಯ ಹಳ್ಳಿಗಳಲ್ಲಿ ನಾವೆಲ್ಲ ಹುಡುಗರಾಗಿದ್ದ ಸಂದರ್ಭದಲ್ಲಿ ವಾರಕ್ಕೆ ಒಮ್ಮೆ ಸ್ನಾನ ಮಾಡುತ್ತಿದ್ದ ದಿನಗಳು ನೆನಪಿಗೆ ಬಂದವು. ಹಾಗೆಯೇ ಇದ್ದರಾಯಿತು ಎಂದುಕೊಂಡು ಹಲ್ಲುಜ್ಜಿ ಮುಖ ತೊಳೆದುಕೊಂಡೆ. ನಮ್ಮ ವಾರಕ್ಕೊಮ್ಮೆ ಸ್ನಾನದ ಸುದ್ದಿ ಕೇಳಿದರೂ ಮಲೆನಾಡಿಗರು ನಗಾಡುವುದು ನಿಶ್ಚಿತ.

ಇಲ್ಲಿ ಬಡವರಿರಲಿ, ಬಲ್ಲಿದರಿರಲಿ, ಕೃಷಿ ಕಾರ್ಮಿಕರಿರಲಿ ಎಲ್ಲರೂ ದಿನಕೊಮ್ಮೆ ಸ್ನಾನ ಮಾಡುತ್ತಾರೆ. ಬ್ರಾಹ್ಮಣರು, ಭೂ ಮಾಲೀಕರು ಬೆಳಗ್ಗೆ ಸ್ನಾನ ಮಾಡಿದರೆ, ಶ್ರಮ ಜೀವಿಗಳು ದುಡಿದು ಬಂದ ನಂತರ ರಾತ್ರಿಯಲ್ಲಿ ಸ್ನಾನ ಮಾಡುತ್ತಾರೆ. ಇವರಿಗೆ ಯಥೇಚ್ಛವಾದ ನೀರೂ, ಒಲೆಗೆ ಬೇಕಾದ ಸಾಕಷ್ಟು ಉರುವಲುಗಳೂ ಸಿಗುತ್ತವೆ.

ಆದರೆ ಬಯಲು ಸೀಮೆಗೆ ಇವೆರಡರ ಕೊರತೆಯೇ ಹೆಚ್ಚು. ಬೆಳಗ್ಗೆ ಸುಮಾರು ಹನ್ನೊಂದು ಗಂಟೆಗೆ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಹೇಮಾಂಗಣದ ಕಚೇರಿಗೆ ಬಂದರು. ‘ಏನ್ಸಾರ್ ಈ ಮಲೆನಾಡು ಮಳೆ?’ ಎಂದು ಉದ್ಘರಿಸಿದೆ. ಅವರು ಅಡಿಕೆ ತೋಟದ ಮಾಲೀಕ.

ಅವರ ಚಿಂತೆಯೇ ಬೇರೆಯಾಗಿತ್ತು. ‘ನಮ್ಮ ಅಡಿಕೆ ಎಲ್ಲ ಕೊಳೆರೋಗ ಬಂದು ಹೋಯ್ತು ಮಾರಾಯರೆ, ಮಳೆ ಎಷ್ಟಾದರೂ ಹೊಡೆಯಲಿ, ಹಾಗೆಯೇ ಹಗಲಲ್ಲಿ ಬಿಸಿಲೂ ಹೊಡೆದರೆ ತಾಪತ್ರಯವಿಲ್ಲ. ಇದು ಹಾಗಲ್ಲ, ಸೂರ್ಯನದರ್ಶನವೇ ಇಲ್ಲ’ ಎಂದು ಮಲೆನಾಡಿನ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ವಿವರಿಸಿದರು.

ಪ್ರಕಾಶ್ ಮತ್ತೂ ಒಂದು ಸುದ್ದಿಯನ್ನು ಹೊತ್ತು ತಂದಿದ್ದರು. ತೀರ್ಥಹಳ್ಳಿಯ ಸುತ್ತಮುತ್ತ ಅದರಲ್ಲಿಯೂ ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯ ಕಾಡಿನಲ್ಲಿ ಈ ವರ್ಷ ಬಿದಿರು ಸತ್ತು ಹೋಗಿದೆ. ಕಳೆದ ಬೇಸಿಗೆಯಲ್ಲಿ ಬಿದಿರು ಅಕ್ಕಿ ಯಥೇಚ್ಛವಾಗಿ ಉತ್ಪಾದನೆಯಾಗಿತ್ತು. ಬಿದಿರಿನಲ್ಲಿ ಒಮ್ಮೆ ಬಿದರಕ್ಕಿ ಬಂದರೆ ಅಲ್ಲಿಗೆ ಆ ಮರಗಳ ಆಯಸ್ಸು ಮುಗಿದಂತೆಯೇ ಸರಿ.

ಇದು ಒಂದೆರಡು ಮರಗಳ ಕಥೆಯಲ್ಲ. ಸಾಮೂಹಿಕವಾಗಿ ಕಾಡಿನ ಎಲ್ಲ ಬಿದಿರು ಮೆಳೆಗಳೂ ಬಿದಿರಕ್ಕಿ ಬಿಟ್ಟು ಒಣಗಿ ನಿಲ್ಲುತ್ತವೆ. ಈ ಘಟನೆ ಈ ಬಾರಿ ಶಿವಮೊಗ್ಗ ತೀರ್ಥಹಳ್ಳಿ ಸುತ್ತಲ ಕಾಡಿನಲ್ಲಿ ಸಂಭವಿಸಿದೆ. ಆದರೆ ಈಗ ಆಗಿರುವ ಕಥೆ ಏನೆಂದರೆ, ಸಾಮೂಹಿಕವಾಗಿ ಒಣಗಿ ನಿಂತಿದ್ದ ಬಿದಿರು ಮೆಳೆಗಳು ಮಳೆಗಾಳಿಯ ರಭಸಕ್ಕೆ ಉರುಳಿ ಬೀಳುತ್ತಿವೆ.

ಅಂಥ ಉದ್ದುದ್ದನೆಯ ಅನೇಕ ಬಿದಿರು ಮೆಳೆಗಳು ವಿದ್ಯುತ್ತಂತಿಗಳ ಮೇಲೆ ಒರಗಿ ಬಿದ್ದಿರುವುದರಿಂದ ಸಾಕಷ್ಟು ಕಡೆ ವಿದ್ಯುತ್ ಲೈನ್ ಹಾಳಾಗಿ ಹೋಗಿದೆ. ಆ ಲೈನುಗಳ ದುರಸ್ತಿಗೆ ಇನ್ನೂ ಸಾಕಷ್ಟು ಸಮಯ ಹಿಡಿಯುವುದರಿಂದ ಈ ವಾರ ಕರೆಂಟು ಬರುವುದು ಅನುಮಾನ ಎಂಬುದು ಅವರ ಮಾತಿನ ಸಾರಾಂಶವಾಗಿತ್ತು.

ಈಗಾಗಲೇ ಕರೆಂಟ್ ಇಲ್ಲದ ಎರಡು ರಾತ್ರಿಗಳನ್ನು ಕಳೆದಿದ್ದ ನನಗೆ ಒಂದಷ್ಟು ಧೈರ್ಯ ತಾನಾಗಿಯೇ ಬಂದಿತ್ತು. ‘ಹೇಗಾದರಾಗಲಿ, ನೋಡಿಯೇ ಬಿಡೋಣ, ಈ ಮಣ್ಣಿನ ಹಿರಿಯರು ಇಂಥ ಅದೆಷ್ಟು ಕತ್ತಲ ರಾತ್ರಿಗಳನ್ನು ಕಳೆದಿಲ್ಲ? ಅದೆಂಥೆಂಥಾ ರಣ ಮಳೆಗಳನ್ನು ನೋಡಿಲ್ಲ? ನನಗಾದರೋ ತಂಗಲು ಭದ್ರವಾದ ಕಟ್ಟಡವೊಂದಿದೆಯಲ್ಲಾ’ ಎಂದುಕೊಂಡು ನನ್ನನ್ನು ನಾನೇ ಸಮಾಧಾನ ಪಡಿಸಿಕೊಂಡೆ.

ಅಂದು ಬೆಳಗ್ಗೆಯೂ ಕೇವಲ ಒಂದೆರಡು ಬಿಸ್ಕೆಟ್‌ಗಳನ್ನು ತಿಂದು ಹಸಿವನ್ನು ಕೊಂಚ ಶಮನ ಮಾಡಿಕೊಂಡಿದ್ದೆ. ನಾನಿನ್ನೂ ಬೆಳಗಿನ ತಿಂಡಿಯನ್ನು ಮಾಡಿರದ ವಿಷಯ ತಿಳಿದ ಪ್ರಕಾಶ್ ನನ್ನನ್ನು ಜೊತೆ ಕರೆದುಕೊಂಡು ಕವಿ ಮನೆಯ ಕಡೆಗೆ ಹೆಜ್ಜೆ ಹಾಕಿದರು. ಕವಿ ಮನೆಯ ಬಾಜುವಿನಲ್ಲೇ ಇರುವ ಸುಧಾಕರನ ಅಂಗಡಿಯಲ್ಲಿ ಒಂದಿಷ್ಟು ಅವಲಕ್ಕಿ ತಿಂದೆ.

ನನಗೆ ಅವಲಕ್ಕಿ ಅಂದರೆ ಅಷ್ಟಕ್ಕಷ್ಟೆ. ಆದರೂ ಆ ಸಂದರ್ಭಕ್ಕೆ ಅದು ಬಹುರುಚಿಕರವಾಗಿ ಕಂಡಿತು. ಕವಿ ಮನೆಯ ಹಿಂದಿನ ಬೆಟ್ಟ ಸಾಲಿನಲ್ಲಿ ದಟ್ಟ ಮೋಡ ಮುಸುಕಿತ್ತು. ಆ ಆಹ್ಲಾದಕರ ದೃಶ್ಯವನ್ನು ನೋಡುತ್ತಾ ಎರಡು ಪ್ಲೇಟ್ ಅವಲಕ್ಕಿ ತಿಂದು, ಎರಡು ಲೋಟ ಬಿಸಿಬಿಸಿ ಕಷಾಯ ಕುಡಿದೆ.

ಗುಂಡ ರಜೆ ಹಾಕಿರುವ ವಿಷಯ ತಿಳಿದ ಪ್ರಕಾಶ್ ಅವನು ಬರುವವರೆಗೆ ನನಗೆ ಊಟ ತಿಂಡಿಯ ವ್ಯವಸ್ಥೆ ಮಾಡಿ ಹೇಮಾಂಗಣಕ್ಕೆ ತಲುಪಿಸುವಂತೆ ಸುಧಾಕರ್‌ಗೆ ಸೂಚಿಸಿದರು. ನನ್ನಿಂದಾಗಿ ಅವರಿಗೂ ಒಂದು ಸಮಸ್ಯೆ ಬಗೆ ಹರಿದಿತ್ತು. ಗುಂಡ ಹಗಲು ಹೊತ್ತು ಕನ್ನಡ ವಿಶ್ವವಿದ್ಯಾಲಯದ ಕೆಲಸ ಮಾಡಿದರೆ ರಾತ್ರಿ ಹೊತ್ತು ಪ್ರತಿಷ್ಠಾನದ ಹೇಮಾಂಗಣದ ಕಾವಲುಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ.

ಈಗ ಅವನಿಲ್ಲ, ಹೇಗಾದರೂ ನಮ್ಮ ಪ್ರೊಫೆಸರ್ ಇದ್ದಾರಲ್ಲ! ಕಾವಲಿನ ಸಮಸ್ಯೆ ಬಗೆ ಹರಿದಿದೆ ಎಂಬುದು ಅವರ ಮನದಾಳವಾಗಿತ್ತು. ಅದನ್ನು ಅವರು ತಮಾಷೆ ಸ್ವರೂಪದಲ್ಲಿ ಹೇಳಿದರು ಕೂಡ. ಆದರೆ ನಾನೀಗಾಗಲೇ ನಿರ್ಧರಿಸಿದ್ದೆ. ಇಂದು ನಾನೊಬ್ಬನೇ ಯಾವುದೇ ಭಯವಿಲ್ಲದೆ ಮಲೆನಾಡಿಗರಂತೆಯೇ ಇರಬೇಕು ಎಂದು.

ಸುಧಾಕರನ ಅಂಗಡಿಯಲ್ಲಿ ನನ್ನ ಟಾರ್ಚಿಗೆ ಹೆಚ್ಚುವರಿಯಾಗಿ ಎರಡು ಶೆಲ್ ಹಾಗೂ ಮತ್ತಷ್ಟು ಮೊಂಬತ್ತಿ ಖರೀದಿಸಿದೆ. ಕೆಲವು ಕುರುಕು ತಿಂಡಿಗಳ ಪೊಟ್ಟಣವನ್ನು ಸುಧಾಕರ ಕೊಟ್ಟರು. ಪ್ರಕಾಶ್ ಜೊತೆಯಲ್ಲಿ ಕವಿಮನೆಯನ್ನು ಒಂದು ಸುತ್ತು ಹಾಕಿ ಹೇಮಾಂಗಣಕ್ಕೆ ಹಿಂತಿರುಗಿದೆ. ಅಂದು ಮಧ್ಯಾಹ್ನಕ್ಕೆ ಮತ್ತೆ ಸಾಧಾರಣ ಮಳೆ ಆರಂಭವಾಯಿತು.

ಅಂದಿನ ವಿಶೇಷವೆಂದರೆ ಬಿಟ್ಟು ಬಿಟ್ಟು ಸುರಿಯುವ ಮಳೆ. ಇನ್ನೇನು ಮಳೆ ಕಡಿಮೆಯಾಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತದೇ ಮಳೆಯ ರೇಜಿಗೆ. ಅಂದು ಭೋರ್ಗರೆಯುವ ಮಳೆಯಲ್ಲ, ಗಾಳಿಯ ರಭಸವೂ ಇಲ್ಲ. ಆದರೆ ಯಾರ ಹಂಗೂ ನನಗಿಲ್ಲ ಎಂಬಂತೆ ಸುಖಾಸುಮ್ಮನೆ ಸುರಿದು ನೆಲದೊಡಲನ್ನು ಇನ್ನಿಲ್ಲದಂತೆ ತೋಯಿಸುವ ನಿರಂತರ ಮಳೆ.

। ಮುಂದಿನ ವಾರಕ್ಕೆ ।

October 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ...

೧ ಪ್ರತಿಕ್ರಿಯೆ

  1. Shyamala Madhav

    ಕುಪ್ಪಳಿಯ ಈ ಮಳೆಯನುಭವ ಪುಸ್ತಕವಾಗಿ ಬರುವುದನ್ನು ಕಾಯುತ್ತೇನೆ..
    ತುಂಬಾ ರೋಚಕವಾಗಿದೆ ಸರ್. ಅಂದು ಹೋಗಿ ಕಂಡುಬಂದುದರಿಂದ ಈಗಲ್ಲಿ ನಿಮ್ಮೊಡನೇ ಇರುವಂತೆ ಅನಿಸುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: