
ಪಿ ಆರ್ ವೆಂಕಟೇಶ್
ದುಃಖದ ಕುಲುಮೆಯಲಿ
ಹಾಡಲಾರದು ಹಕ್ಕಿ
ಬೇಲಿಯಾಚೆಯ ಮಾತು ಮೌನ ಬೆಂಕಿ
ಬಂಧನದ ಭಾವ
ಬಿತ್ತಿತಾದರು ಏನು?
ಪುಟಿದ ಕನಸುಗಳೆಲ್ಲ
ಕಸದ ಬಾನು
ಎಲ್ಲ ಸಾರಿಸಿ ನಡೆದ
ಎಲ್ಲೆ ಮೀರಿದೆ ಗಾಳಿ
ಯಾವ ಹಾಡಿನ ಧಾಟಿ
ಹಾಡಿ ಹೊರಟಿತೊ ಏನೊ

ಬಿಕ್ಕುತ್ತಿದೆ ಕಾದ ನೆಲ
ಕರುಳ ತುಂಬೆಲ್ಲ ಬಿರುಕ ಸುಪಾರಿ
ಕನಿಕರವ ಬದಿಗಿಟ್ಟ
ನೀರ್ಗುದೆರೆಯ ಓಟ
ದೇಶದೊರೆ ಕೈಯಲ್ಲಿ
ಲಗಾಮಿನ ಆಟ.
ನೆಲದ ಕರಳದು ಕೊನರಿ
ಕೆನೆಕನೆದು ಕಕ್ಕುತಿದೆ
ಬೀಜದೊಡಲಿನ ರಕ್ತ
ಗರ್ಭಪಾತದ
ಕೋವಿಡ್ ಕಾಮವನಪ್ಪಿ
ದೊರೆ ಹಡೆದ ಕಾನೂನು
ಕೌಳಕಂಬಳಿ ತೊಟ್ಟು
ಕರ್ಕಶವ ಕಕ್ಕಿದೆ.
ನಟ ಭಯಂಕರ ನಾನೆ
ನೀ ಕುಣಿವುದೇಕೆ?
ಹಾಡುಗಾರನು ನಾನೆ
ನೀ ಹಾಡುವುದೇಕೆ?
ಚರಿತ್ರೆ ಪಂಡಿತ ನಾನೆ
ನೀ ಬರೆವುದು ಏಕೆ?
ಎದೆಯ ನವಿಲಿನ ಕಾಲು
ಮಚ್ಚಮೊನೆಚಿಗೆ ಬಲೆ
ಹಾಡುಗಂಟಲತುಂಬ
ಸೋತ ಬೂದಿಯ ಒಲೆ
ಚರಿತ್ರೆ ಪೂಟದೊಳಗೆ
ರಕ್ತದೋಕುಳಿ ಕಲೆ
ಮತ್ತೆದೇ ಕುಣಿತ
ಮೋಹದಮಲಿನ ಮೆರೆತ
ಕಾಮಕ್ಕೆಲ್ಲಿದೆ ಕಣ್ಣು
ಜೊಲ್ಲು ನಾಲಿಗೆಯೊಳಗೆ
ರೈತ ಬೆವರಿನ ಹಣ್ಣು

ಕಾರ್ಪೊರೇಟ್ ಬಯಲೊಳಗೆ
ಅಂತರ್ಜಲಗಣಿ
ದೊರೆಯ ಮೈತುಂಬ
ಪ್ರಾಣಗಳ ಮುತ್ತುಮಣಿ.
ಕುಣಿದ ಹೆಜ್ಜೆಯಲಿ
ಸತ್ತ ಜೀವದ ಬೀಜ
ಭೂ ಒಡೆಯನೆದೆಯಲ್ಲಿ
ತೆರೆತೆನೆಯು ತಾಜ
0 ಪ್ರತಿಕ್ರಿಯೆಗಳು