ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವ ಆಸೆ…

ಕೆ.ಎಲ್.ಚಂದ್ರಶೇಖರ್  ಐಜೂರ್
ಹಜಾಮ ಬಂದ ನೋಡ್ರೋ ಅನ್ನುತ್ತಿದ್ದ ಅದೇ ಜನ ಈಗ ‘ಏನ್ಸಾರ್ ಹೇಗ್ ನಡೀತಿದೆ  ಬಿಜ್ನೆಸ್ಸು?’ ಅಂತ ಕೇಳ್ತಾರೆ. ಅವರು ಹಜಾಮ ಎಂದಾಗ ನಾನು ಅನುಭವಿಸಿದ ನೋವು ಈಗವರು ತೋರಿಸುತ್ತಿರುವ ಕಾಳಜಿ ಕರಗುವಂತೆ ಮಾಡುವುದಿಲ್ಲ….’
ಹಾಗಂತ ಹೇಳಿ ದೊಡ್ಡ ನಗೆಯೋದಿಗೆ ನನ್ನನ್ನು ಸ್ವಾಗತಿಸಿ ಹೆಗಲ ಮೇಲೆ ಕೈಯಿಟ್ಟು ಮಾತಾಡಿದವರು ಮುತ್ತುರಾಜ್. ಬನಶಂಕರಿ ಷಾಪಿಂಗ್ kaamplekna ಹೊಟ್ಟೆಯೊಳಗಿರುವ ‘ಅಮೇರಿಕನ್ ಹೇರ್ dresars’ ನ ಮಾಲೀಕ ಮುತ್ತುರಾಜ್, ಈಗೊಂದಿಷ್ಟು ವರ್ಷಗಳಿಂದ ಕಲಾವಿದನೆಂದು ಹೆಸರು ಮಾಡಿರುವ ವ್ಯಕ್ತಿ.
ಅದೇ ಆಗಷ್ಟೇ ಸಿಡಿಲಿನಂತೆ ಬಂದೆರಗಿದ ತನ್ನ ದೊಡ್ಡಮ್ಮನ ಸಾವಿನ ಸುದ್ದಿಯ ದುಃಖವನ್ನು ಒಂದೆಡೆ ಅದುಮಿಟ್ಟುಕೊಂಡು ನನ್ನೊಂದಿಗೆ ತನ್ನ ವೃತ್ತಿಜೀವನದ ಕಷ್ಟ ಸುಖಗಳೊದಿಗೆ ತನ್ನ ಗತಕಾಲದ ನೆನಪುಗಳನ್ನು ಕರೆದುಕೊಂಡ ಮುತ್ತುರಾಜ್ ಮಾತುಗಳು ಎಲ್ಲರನ್ನೂ ಕಲಕುವಂತದ್ದವು.
‘ನಾನು ಮೂಲತಃ ದೇವನಹಳ್ಳಿ ತಾಲ್ಲೂಕಿನವನು. ನನಗೆ ಹತ್ತು ವರ್ಷವಿದ್ದಾಗಲೇ ನನ್ನ ತಂದೆಯ ಜತೆಗೆ ಕ್ಷೌರಿಕ ವೃತ್ತಿಯ ಕಲಿಕೆಯಲ್ಲಿ ತೊಡಗಿ ಅವರೊಂದಿಗೆ ಹೊಟ್ಟೆಪಾಡಿಗಾಗಿ ಊರೂರು ಸುತ್ತುತ್ತಿದ್ದೆ. ನನಗಿನ್ನೂ ಗಾಯದ ಮಚ್ಚೆಯಂತೆ ಚೆನ್ನಾಗಿ ನೆನಪಿದೆ- ನನ್ನ ತಂದೆ ಊರಿನ ಎಲ್ಲಾ ಜನಗಳ ಬಳಿಗೂ ಹೋಗಿ ಅವರಿಗೆ ಕ್ಷೌರ ಮಾಡುತ್ತಿದ್ದರು. ಆದರೆ ಅವರು ದಲಿತ ಕೇರಿಗಳಿಗೆ ಮಾತ್ರ ಹೋಗುತ್ತಿರಲಿಲ್ಲ. ದಲಿತರ ಕೇರಿಯಿಂದ ಹೊಲೆಯರ ಯಂಕ ಮತ್ತದೇ ಜಾಗದಲ್ಲಿ ಪ್ರತ್ಯಕ್ಷನಾಗಿ ತಾನು ಪಡೆದುಕೊಂಡಿದ್ದ ಕತ್ತರಿಯನ್ನು ಮರಳಿ ನನ್ನ ತಂದೆಯವರಿಗೆ ಹಿಂತಿರುಗಿಸುತ್ತಿದ್ದ. ನಂತರ ತಂದೆ ಆ ಕತ್ತರಿಯನ್ನು ಸಗಣಿಯಿಂದ ತಿಕ್ಕಿ ತೊಳೆಯುತ್ತಿದ್ದರು. ನನಗಿದು ತಮಾಷೆಯಾಗಿ ಕಾಣುತ್ತಿತ್ತು.

ಅಷ್ಟೊತ್ತಿಗಾಗಲೇ ನಾನು ನನ್ನ ತಂದೆಯ ವೃತ್ತಿಯೊಂದಿಗೆ ನಂಟು ಬೆಳೆಸಿಕೊಂಡಿದ್ದೆ. ನಾನು  ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರಬೇಕಾದರೆ ನನ್ನ ಸ್ನೇಹಿತ ಹೊಲೆಯರ ನಾಣಿ ಹುಟ್ಟಿನಿಂದಲೂ ಕ್ಷೌರಿಕರನ್ನೇ ಕಾಣದವನಂತೆ ಉದ್ದಾನುದ್ದ ಕೂದಲು ಬಿಟ್ಟು ಎಲ್ಲರಲ್ಲೂ ಹಾಸ್ಯದ, ಗೇಲಿಯ ವಸ್ತುವಾಗಿದ್ದ. ಅದೊಂದು ದಿನ ನಾನು ಮನೆಯಲ್ಲಿ ಯಾರಿಗೂ ಕಾಣದಂತೆ ಕತ್ತರಿಯೊಂದನ್ನು ನನ್ನ ಬ್ಯಾಗಿನಲ್ಲಿ ಅವಿಸಿಟ್ಟು ಶಾಲೆಗೆ ಹೋಗಿ ಅಲ್ಲಿ ನನ್ನ ಸ್ನೇಹಿತ ನಾಣಿಯನ್ನು ಶಾಲೆಯ ಹಿಂದಕ್ಕೆ ಕರೆದುಕೊಂಡು ಹೋದೆ. ನನಗೆ ತಿಳಿದಿದ್ದ ಕ್ಷೌರಿಕ ಪ್ರಾವೀಣ್ಯತೆಯನ್ನು ಬಳಸಿಕಂಡು ಅವನ ಉದ್ದನೆಯ ಕೂದಲನ್ನು ನನ್ನ ಕತ್ತರಿಗೆ ಅರ್ಪಿಸಿದ್ದೆ.
ನಂತರ ನಾನು ಮನೆಗೆ ಬರುವಷ್ಟರಲ್ಲಿ ಅದು ಹೇಗೋ ಯಾರಿಂದಲೋ ನಾನು ನನ್ನ ಸ್ನೇಹಿತ ನಾಣಿಗೆ ಕ್ಷೌರ ಮಾಡಿದ್ದು ‘ಹೊಲೇರ ನಾಣಿಗೆ ಹಜಾಮತ್ ಮಾಡ್ದ’ ಎಂಬ ಸುದ್ದಿಯಾಗಿ, ಆ ಸುದ್ದಿ ನಾನು ಊರು ಬಿಡುವಂತೆ ಮಾಡಿತು. ಅದೊಂದು ದಿನ ಶಾಲೆ ಬಿಡಿಸಿ ನನ್ನ ತಂದೆ ರಾತ್ರೋರಾತ್ರಿ ನೆಂಟರೊಬ್ಬರ ಸಹಾಯದಿಂದ ನನ್ನನ್ನು ಮೈಸೂರಿನ ನೆಂಟರೊಬ್ಬರ ಮನೆ ತಲುಪುವಂತೆ ಮಾಡಿತು. ಮುಂದೆ ನಾನು ಮೈಸೂರಿಗೆ ಬಂದು ಬೆಳೆಯುತ್ತಾ ಹೋದಂತೆ ಈ ನಾಟಕ, ಸಿನಿಮಾ, ಮೈಸೂರಿನ ಟೌನ್ ಹಾಲ್ ಎಲ್ಲವೂ ನನ್ನ ಬದುಕಿನ ಭಾಗವಾಗಿ ಹೋಯಿತು.
ಗೆಳೆಯರನ್ನು ಕಟ್ಟಿಕೊಂಡು ಕುರುಕ್ಷೇತ್ರ ನಾಟಕ ಮಾಡುತ್ತಿದ್ದಾಗ ಅತಿಥಿಯಾಗಿ ಬಂದ ಖ್ಯಾತ ನಟ ಉದಯ್ ಕುಮಾರ್ ನನ್ನ ಅಭಿನಯ ನೋಡಿ ಅವರ ಉದಯ ಕಲಾನಿಕೇತನದೊಳಕ್ಕೆ ಕರೆದುಕೊಂಡರು.ಅವರು ನನ್ನ ಕ್ಷೌರಿಕ ವೃತ್ತಿ ಮತ್ತು ನಟನೆಯ ಪ್ರವೃತ್ತಿ ಎರಡನ್ನೂ ಗೌರವಿಸಿ ನಾನು ಮೈಸೂರಿನಲ್ಲಿ ಬೆಳೆಯುವಂತೆ ಉತ್ತೇಜಿಸಿದರು.
1991 ರಲ್ಲಿ ಮೈಸೂರಿನಲ್ಲೇ ಇದ್ದೆ. ಅವತ್ತೊಂದು ದಿನ ಪತ್ರಿಕೆಗಳ ಮುಖಪುಟದ ತುಂಬಾ ನೆಲ್ಸನ್ ಮಂಡೇಲಾರ ಫೋಟೋ ಮತ್ತು ಲೇಖನಗಳಿದ್ದವು. 27 ವರ್ಷಗಳ ಕಾಲ ಅವರು ಆಫ್ರಿಕಾದ ಜೈಲಿನಲ್ಲಿದ್ದು ಬಿಡುಗಡೆಯಾದ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿ ಕರಗಿ ಹೋಗಿದ್ದೆ. ನೆಲ್ಸನ್ ಮಂಡೇಲಾರ ಬಗ್ಗೆ ಸಿಕ್ಕಷ್ಟು
ತಿಳಿದುಕೊಂಡೆ. ಮುಂದೆ ಕಲೆ ಮತ್ತು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದ ಮೇಲೆ ನನ್ನ ಜಾತಿ ಮತ್ತು ವೃತ್ತಿಯ ಕಾರಣಗಳಿಗಾಗಿ ನಾನು ಬಾಡಿಗೆಗೆ ಮನೆ ಸಿಗದೆ ಪರಿತಪಿಸುವಂತಾದೆ. ದೊಡ್ಡ ಹುದ್ದೆಯಲ್ಲಿದ್ದ, ದೊಡ್ಡ ಪತ್ರಿಕೆಗಳಲ್ಲಿದ್ದ ನನ್ನ ಜಾತಿಯವರನ್ನು ಗುರುತಿಸಿ ಅವರನ್ನು ಹುಡುಕಿಕೊಂಡು ಹೋದಾಗ ಅವರೆಲ್ಲಾ
ನನ್ನಿಂದ ತಪ್ಪಿಸಿಕೊಂಡು ದೂರ ಹೋಗುತ್ತಿದ್ದರು.
ಮುಂದೆ ಹೇಗೋ ನನ್ನ ಕ್ಷೌರಿಕ ವೃತ್ತಿಯ ಮೂಲಕ ಬೆಂಗಳೂರಿನಲ್ಲಿ ನನ್ನ ಪುಟ್ಟ ಬದುಕನ್ನು ಕಟ್ಟಿಕೊಂಡೆ. ಜುಲೈ 18, 1997 ನಾನು ಮರೆಯಲಾಗದ ದಿನ. ಅವತ್ತು ನನ್ನ ಹೀರೋ ನೆಲ್ಸನ್ ಮಂಡೇಲಾ ಹುಟ್ಟಿದ ದಿನ. ಅವತ್ತು ಬೆಂಗಳೂರಿನಲ್ಲಿ ತೊಡಗಿಕೊಂಡಿರುವ ನನ್ನದೇ ವೃತ್ತಿಯ 25 ಜನರ ಪುಟ್ಟ ತಂಡ ಕಟ್ಟಿಕೊಂಡು, ಬೆಂಗಳೂರಿನ ಎಲ್ಲಾ ಸ್ಲಮ್ಮುಗಳಲ್ಲೂ ಅಲೆದು ಸಿಕ್ಕಷ್ಟು ಮಂದಿಗೆ ಉಚಿತ ಕ್ಷೌರ ಮಾಡಿದೆವು. ಹಳೆಯ ಸೆಂಟ್ರಲ್ ಜೈಲ್ ಪ್ರವೇಶಿಸಿ ಅಲ್ಲಿನ ಖೈದಿಗಳಿಗೆ ಉಚಿತ ಕ್ಷೌರ ಮಾಡಿದೆವು. ಇವತ್ತಿಗೂ ಆ ಖೈದಿಗಳು ನನ್ನನ್ನು ಅಭಿಮಾನದಿಂದ ನೋಡುತ್ತಾರೆ.
1999ರಲ್ಲಿ ಅಸ್ಪೄಶ್ಯತಾ ಆಂದೋಲನ ಎಂಬ ಬ್ಯಾನರ್ ಕಟ್ಟಿಕೊಂಡು ನಮ್ಮ ಪುಟ್ಟ ತಂಡ ಈ ನಾಡಿನ ಎಲ್ಲಾ ಜಿಲ್ಲೆಗಳಿಗೂ ಹೋಗಿ, ವಿಶೇಷವಾಗಿ ದಲಿತರ ಕೇರಿಗಳ ದೇವಸ್ಥಾನದ ಚಾವಡಿ, ಅಶ್ವಥ್ಥ ಕಟ್ಟೆಗಳಲ್ಲಿ ಅಂಬೇಡ್ಕರ್, ಗಾಂಧಿ, ನೆಲ್ಸನ್ ಮಂಡೇಲರ ಫೋಟೋಗಳನ್ನು ತೂಗು ಹಾಕಿ ‘ಅಸ್ಪೃಶ್ಯತೆಗೆ ದಿಕ್ಕಾರ’
ಎಂಬ ಬೀದಿ ನಾಟಕ ಆಡಿಸುತ್ತಾ ಎಲ್ಲರಿಗೂ ಕ್ಷೌರ ಮಾಡುತ್ತಿದ್ದೆವು.
‘ಹಜಾಮ’ ಎನ್ನುವ ಪದ ನನಗೆ ನೋವುಂಟುಮಾಡಿದೆ, ನಿಜ. ಆದರೆ ಈ ವೃತ್ತಿಯಲ್ಲಿ ನನಗೆ ಅವಮಾನ, ಅನುಮಾನ ಮತ್ತು ಸನ್ಮಾನಗಳು ದೊರೆತಿವೆ. ನಾನು ಕತ್ತರಿ ಹಿಡಿದು ಬೀದಿಗೆ ಬಂದ ಮೇಲೆ ನನ್ನನ್ನು ಪತ್ರಿಕೆಗಳು ಗುರುತಿಸಿದವು. ನನ್ನನ್ನು ಬೆಂಬಲಿಸಿ ಅನೇಕ ಸಾಹಿತಿಗಳು ಮಾತಾಡಿದರು. ಪ್ರೊ.ಜಿ.ವೆಂಕಟ
ಸುಬ್ಬಯ್ಯ, ಎ.ಎನ್.ಮೂರ್ತಿರಾಯರು, ನಿಟ್ಟೂರು ಶ್ರೀನಿವಾಸರಾಯರು, ಚೆನ್ನವೀರ ಕಣವಿ, ಹಾಮಾನಾ, ಯು.ಆರ್. ಅನಂತಮೂರ್ತಿ, ಡಾ ಎಲ್. ಹನುಮಂತಯ್ಯ, ಗಿರೀಶ್ ಕಾರ್ನಾಡ್, ಶಿವರಾಮ ಕಾರಂತರಂತಹ ದೊಡ್ಡ ಸಾಹಿತಿಗಳನ್ನು ಮುಟ್ಟಿ ಅವರಿಗೆ ಕ್ಷೌರ ಮಾಡಿದ ಸ್ಪರ್ಶಸುಖ ನನಗೆ ಸಿಕ್ಕಿದೆ. ನನ್ನ ವೃತ್ತಿಯ ಬಗ್ಗೆ ನನಗೆ ಪ್ರೀತಿ ಇದೆ. ಈ ವೃತ್ತಿ ನನಗೆ ಎಲ್ಲರ ಪ್ರೀತಿಯನ್ನು ಗಳಿಸಿಕೊಟ್ಟಿದೆ.
‘ಒಮ್ಮೆ ನೆಲ್ಸನ್ ಮಂಡೇಲಾರನ್ನು ಮುಟ್ಟಿ ಅವರಿಗೆ ಕ್ಷೌರ ಮಾಡಬೇಕೆಂಬ ಮಹತ್ವದ ಕನಸೊಂದು ನನ್ನಲ್ಲಿ ಹುಟ್ಟಿಕೊಂಡಿದೆ. ಸೌತ್ ಆಫ್ರಿಕಾದ ಎಂಬೆಸಿಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರೊಬ್ಬರು ನನಗೆ ಪಾಸ್ಪೋರ್ಟ್ ಕೊಡಿಸಿ ನೆಲ್ಸನ್ ಮಂಡೇಲಾರನ್ನು ಕಾಣುವ ನನ್ನ ಕನಸಿಗೆ ಬೆಂಬಲವಾಗಿ ನಿಂತಿದ್ದಾರೆ. ಬಹುಶಃ ಈ ವರ್ಷದ ಕೊನೆಯಲ್ಲಿ ನಾನು ಮಂಡೇಲರನ್ನು ಮುಟ್ಟುವ ನಿರೀಕ್ಷೆಯಲ್ಲಿದ್ದೇನೆ’.
ಹಾಗಂತ ಹೇಳಿ ದೀರ್ಘವಾದ ನಿಟ್ಟುಸಿರಿಟ್ಟು ಮಾತು ಮುಗಿಸಿದ ಮುತ್ತುರಾಜು ನನ್ನ ಕಣ್ಣನ್ನೇ ನೋಡುತ್ತಿದ್ದರು.

‍ಲೇಖಕರು avadhi

September 17, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

 1. ರಾಜಗೋಪಾಲ್ ಬಿ.ವಿ

  ಮುತ್ತುರಾಜ್ ಅವರ ಕಥಾನಕ ಕುತೂಹಲಕರವಾಗಿದೆ. ಜಾತಿವ್ಯವಸ್ಥೆಯ ರೋಗಕ್ಕೆ ಮದ್ದೇ ಇಲ್ಲವೆ?
  ಇತ್ತೀಚಿಗೆ ಲೋಕಾಯುಕ್ತ ಸಂತೋಷ್ ಹೆಗಡೆಯವರು ವಿನಾಕಾರಣ ಮಾತಿನ ಭರದಲ್ಲಿ ಕ್ಷೌರಿಕರಿಗೆ ನೋವುಂಟಾಗುವ ಮಾತನಾಡಿದ್ದರು, ಈ ಕುರಿತು ಪತ್ರಕರ್ತ ದಿನೇಶ್ ತಮ್ಮ ದೇಸೀಮಾತು ಬ್ಲಾಗ್‌ನಲ್ಲಿ ಬರೆದಿದ್ದಾರೆ. ಕುತೂಹಲವಿರುವವರು ಈ ಬರಹ ಓದಬಹುದು.
  http://desimaatu.blogspot.com

  ಪ್ರತಿಕ್ರಿಯೆ
 2. sanjaysarvharas

  Chandrashekhar aijoor is an excellent writer and he has sense of rebellion to unjust established social-cultural order.He writes for positive and true democratic change in social and political system of day.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: