ನೆಲ ನೆಲ ನೆಲವೆಂದು…

ವಿಜಯಕಾಂತ ಪಾಟೀಲ

ಈ ನೆಲಮೋಹಕ್ಕೆ ಮಣ್ಣಮೋಹಕ್ಕೆ ಮರಳಾಗದವರುಂಟೇ..? ರಿಯಲ್ ಎಸ್ಟೇಟ್ ಮಂದಿಯಿಂದ ಹಿಡಿದು ಮಣ್ಣಾಟ ಆಡುವ ಚಿಣ್ಣರವರೆಗೂ ಈ ನೆಲದ ನಂಟು ಬೇಕು. ಮಗು ಜಗದ ಜಗುಲಿಯಲ್ಲಿರುವವರಿಗಂತೂ `ಈ ಮಣ್ಣು ನಮ್ಮದು, ಈ ಅರುಲ ರಾಡಿಯೂ ನಮ್ಮದು..!’ ಅನ್ನುವಷ್ಟು ಗುಂಗು. ರೈತಾಪಿ ಮಂದಿಯ ಮಟ್ಟಿಗೆ ಈ ನೆಲವೇ ಎಲ್ಲದೂ; ದೈವ ಅಂದರೂ ಸರಿ, ಉಸಿರು ಅಂದರೂ ಬರೋಬ್ಬರಿ.

ಹಸಿವು ದಾಹ ಮೋಹ ಎಲ್ಲವನ್ನೂ ಸಮದೂಗಿ ಬಾಗಿ ಅರ್ಪಿಸಿಕೊಳ್ಳುವ ಅಗಾಧ ಜೀವಭಾವ ಈ ನೆಲದವ್ವ; ಅವಳು ಧರಿಸಿದ ಹಳ್ಳ ಕೊಳ್ಳ ಕೆರೆ ಕಟ್ಟೆ ಬೆಟ್ಟ ಗುಡ್ಡ ಹೊಲ ಗದ್ದೆ ಹಸಿರು ಬಸಿರು ಬಿಸಿಲು ಬೇಗೆ ಮಳೆ ಚಳಿ ಬೆವರು ಬಳಲಿಕೆ ಈ ಎಲ್ಲವುಗಳ ಮೊತ್ತವೇ ನಮ್ಮ ಪಾಲಿನ ಭಕ್ತಿಯೂ ಹೌದು. ಈ ನೆಲಮೂಲ ಭಾವ ಎಂದೂ ಭ್ರಮೆಯಲ್ಲ; ಕಲ್ಪನೆಯೂ ಅಲ್ಲ. ವಾಸ್ತವದ ಸುಂದರ ಹಂದರವೇ ಈ ನೆಲದಾಯೀ.

ಇಂಥ ನೆಲದ ಅಪ್ಪಟ ನೆಂಟ ಅರ್ಥಾತ್ ನೆಲಾನುಬಂಧಿಗಳಲ್ಲಿ ನಾನೂ ಒಬ್ಬನೆಂದರೆ ನೀವು ನಂಬಲೇಬೇಕು..! ಆದರೂ ಈ ನೆಲ ನಲುಗುವ ನರಳುವುದನ್ನೂ ಅನುಭವಿಸುತ್ತಲೇ ಅದನೊಂಚೂರು ಹಂಚಿಕೊಳ್ಳುತ್ತಲೇ ಈ ನೆಲವೆಂಬ ಅತ್ಯಾಪ್ತನೊಟ್ಟಿಗೆ ಪಿಸುಮಾತೂ ಆಡಲೇಬೇಕು, ಎಂದರೆ.. ಅಕ್ಷರಗಳ ಸಾಲು ಹಾಗೂ ಹೀಗೂ ಹೋಯ್ದಾಡುವುದು ಸಹಜವೇ; ಹೀಗಿರಲಾಗಿ..

`ಕುಲ ಕುಲ ಕುಲವೆಂದು ಹೊಡೆದಾಡದಿರಿ.. ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರ.. ಬಲ್ಲಿರ..?’ ಎಂಬ ಕನಕರ ಕೀರ್ತನೆಯನ್ನು ನಾವೀಗ ಅದನ್ನೂ ಇಟ್ಟುಕೊಂಡೇ (ಕುಲಮೀರಲಾಗದಿರುವುದಕ್ಕೆ.. ಅದರಿಂದಲೇ ನಾಶವಾಗುತ್ತಿರುವುದಕ್ಕೆ..) ಅದರ ಧಾಟಿ ಹಿಡಿದು  ಹೀಗೂ ಹೋಯ್ಕೊಳ್ಳಬಹುದು: `ನೆಲ ನೆಲ ನೆಲವೆಂದು ಹೊಡೆದಾಡದಿರಿ.. ನಿಮ್ಮ ನೆಲದ ಒಳಗೇನಾದರೂ ಬಲ್ಲಿರಾ..ಬಲ್ಲಿರಾ..!’. ಈ ಹೊತ್ತು ನೆಲವನ್ನು ನಾವು ಮೆಟ್ಟುವ, ಕುಟ್ಟುವ, ತಿನ್ನುವ, ಕೊರೆಯುವ ಆಧುನಿಕ ಬಗೆಗಳನ್ನು ನೋಡಿದರೆ ಭಯವಷ್ಟೇ ಅಲ್ಲ, `ನಾವಿರುವ ತನಕವಾದರೂ ಈ ಮಣ್ಣು-ನೆಲ ನಮ್ಮದಾಗಿಯೇ ಇದ್ದೀತೆ, ಇವತ್ತು ನಡೆದಾಡಿದಂತೆ ನಾಳೆ ನಾವು ಹೀಗೆಯೇ ಈ ನೆಲದ ಮೇಲೆ ನಡೆದಾಡುತ್ತೇವೆಯೇ..?’ ಎಂಬ ಭಯಾನಕ ಆತಂಕವನ್ನು ಎದುರಿಸುತ್ತಿದ್ದೇವೆ.

ನೆಲವನ್ನೆಲ್ಲ ನುಂಗಿ ನೀರು ಕುಡಿದು, ಜೀವವಿದ್ದೂ ಇಲ್ಲದಂತಾಗಿರುವ ಇದರ ಸತ್ವ-ತತ್ವಗಳನ್ನು ತೂರಿ ಒಗೆದು, ಮುಗಿದೇ ಹೋದಂತಾಗಿರುವ ಈ ನೆಲವನ್ನು ಬಿಟ್ಟು ಚಂದ್ರಲೋಕದಲ್ಲಿ ಮನೆ ಮಾಡಲು, ಅಲ್ಲಿಯ ನೆಲ ಅಗೆಯಲು, ಬೆಳೆ ತೆಗೆಯಲು, ಏನೇನನ್ನೆಲ್ಲಾ ಅಲ್ಲಿ ನಿರ್ವಹಿಸಿ ಬಿಡಲು ಆ ಕಡೆ ನಿಗಾವಹಿಸಿದ್ದೇವೆ. ವಿಜ್ಞಾನದ ಆವಿಷ್ಕಾರಗಳು, ಅದರ ಹೊಸಹೊಸ ಹೊಳಹುಗಳನ್ನು `ಅಬ್ಬಾ’ ಎಂಬಂತೆ ಬಾಯಿ ತೆರೆದುಕೊಂಡು ಕೊಂಡಾಡುವ ನಾವು ಈ ನೆಲಕ್ಕೇನು ಕೊಟ್ಟಿದ್ದೇವೆ-ಮಾಡಿದ್ದೇವೆ-ಹೇಗದನ್ನು ನೋಡಿಕೊಂಡಿದ್ದೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳದೇ `ನಾಮಾವಶೇಷ’ದ ಮೋಡಿಗಳಿಗೆ ಒಳಗಾಗಿ ಪುಳಕಿತಗೊಳ್ಳುತ್ತಿದ್ದೇವೆ..!

ಈ `ಪುಳಕಿತ’ ಅನ್ನುವ ಶಬ್ಧದ ನಿಜದ ಅರ್ಥವನ್ನು ನಾವು ನಮ್ಮ ಬಾಲ್ಯ ಕಾಲದಲ್ಲಿ ಅನುಭವಿಸಿದಂತೆ ಇವತ್ತೇಕೆ ನಮ್ಮದಾಗಿಸಿಕೊಳ್ಳಲಾಗುತ್ತಿಲ್ಲ? ಈಗ ಈ `ಪುಳಕಿತ’ವು ತಾತ್ಕಾಲಿಕ ಸೂಖದ ಬೆನ್ನು ಹತ್ತಿ `ಕಳಂಕಿತ’ಗೊಂಡಿರುವುದು ನಮ್ಮ ಕಣ್ಣಿಗೆ ಮಣ್ಣು ಮೆತ್ತಿರುವುದನ್ನು ತೋರಿಸುತ್ತಿದೆಯೇ? ಎಂಥೋ ಏನೋ.. ನಾವು ಮಕ್ಕಳಾಗಿದ್ದಾಗಿನ ಮಣ್ಣಿನ ವಾಸನೆಯೂ ಈಗ ಬದಲಾಗಿದೆ; ಮೊದಲ ಮಳೆಗೆ ಆಗ ಹೊರ ಸೂಸುತ್ತಿದ್ದ ಘಮವೀಗ ಕೀಟನಾಶಕ-ರಸಾಯನಿಕಗಳ-ನಮ್ಮೆಲ್ಲ ಕರ್ಮಕಾಂಡಗಳ ರೊಜ್ಜಲಿನಲ್ಲಿ ಸಿಕ್ಕಿಹಾಕಿಕೊಂಡು `ಘಮ್ಮ್..!’ ಅನ್ನುತ್ತಿದೆ; ಈಗಿನ ಚಿಕ್ಕ ಮಕ್ಕಳಿಗೆ ಮಣ್ಣಿಗೊಂದು ವಾಸನೆ ಎಂಬುದಿದೆಯೆಂಬುದೇ ಗೊತ್ತಿಲ್ಲ..

ಅಂದರೆ.. ಕೊನೆಗೂ ಮಣ್ಣೇ ಕಾಣುವ ಮಣ್ಣನಾಳಿದ ನಾವು ಮಣ್ಣಿನಿಂದಲೇ ಉಸಿರು ಹಿಡಕೊಂಡುದುದನ್ನೇ ನಿರ್ಲಕ್ಷಿಸಿ ನೆಲದಾಯಿಯ ಕೋಪಕ್ಕೆ ತುತ್ತಾಗಿ ತಲೆಮೇಲೆ ಗುಡ್ಡಬೆಟ್ಟಗಳ ನಾವಾಗಿಯೇ ಕೆಡವಿಕೊಂಡು ಅದೇ ಮಣ್ಣೊಳಗೇ ಮಣ್ಣಾಗುತ್ತಿದ್ದೇವೆ; ನಾವು ಅದನ್ನು ಹೇಗೆ ನೋಡಿಕೊಂಡಿದ್ದೇವೆಯೋ ಅದೂ ನಮ್ಮನ್ನು ಜಾತ್ಯಾತೀತವಾಗಿ ಪಕ್ಷಾತೀತವಾಗಿ ನೋಡಿಕೊಳ್ಳುತ್ತಿದೆ; ಈ ಪ್ರಕೃತಿಯ ಮುಖ್ಯ ಭಾಗವಾಗಿರುವ ನೆಲಮಹಾರಾಜನೇನು ದಡ್ಡನೇ? ಆಡಳಿತ ಚೆನ್ನಾಗಿಯೇ ನಿಭಾಯಿಸುತ್ತಿದ್ದಾನೆ..!

ಇಷ್ಟಾಗಿಯೂ `ನಾವು ಮಣ್ಣಿನ ಮಕ್ಕಳೇ..!’ ಎಂದು ಢಾಣಾ ಡಂಗುರ ಸಾರುತ್ತಿದ್ದೇವೆ. ಮನೆ ಬಿಟ್ಟರೆ ಕಾರು, ಹೆಜ್ಜೆಕಿತ್ತಿಟ್ಟರೆ ಶೂ.. ಅರಮನೆ, ಮಹಲು, ಮಹಡಿ, ರೇಸಾರ್ಟ್, ವಿಮಾನ, ವಿದೇಶ ಎಂದು ಹಾರಾಡುವ ನಮ್ಮ ನಾಯಕರಿಗಂತೂ ನೆಲ ಕಾಣುತ್ತಿಲ್ಲ; ಆಕಾಶವೂ ಸಿಗುತ್ತಿಲ್ಲ; ಕಣ್ಣಿಗೆ ಧೂಳು ಬಿದ್ದು ಇಂಥವರು ಕಣ್ಣುಜ್ಜಿಕೊಳ್ಳುವ ಮಟ್ಟಿಗಾದರೂ ಅನುಭವಸ್ಥರಾಗಿದ್ದರೆ, ಹಾಳುಬಿದ್ದು ಹೋಗಲಿ, ಇವರನ್ನು ತಕ್ಕಮಟ್ಟಿಗಾದರೂ `ಮಣ್ಣಿನ ಮಕ್ಕಳೊ ನೆಂಟರೋ..’ ಅಂದು ಮನಕೊಪ್ಪದಿದ್ದರೂ ಹೊರ ಮಾತಿಗಾದರೂ ಒಪ್ಪಿಕೊಳ್ಳಬಹುದಿತ್ತು;

ಹಾಗಾದರೆ ಇಂಥವರೆಲ್ಲ ಅಂತರ್ ಪಿಶಾಚಿಗಳೇ (ಎರಡಕ್ಕೂ ಒಗ್ಗಿಕೊಳ್ಳದ)..? ಇಂಥವರ ಆಡಳಿತ- ಮೆರೆದಾಟದಲ್ಲಿ ಈ ಮಣ್ಣಿಗೆಲ್ಲಿಂದ ಅದರ ಮೂಲವಾಸನೆ ಬರಬೇಕು, ಇರಬೇಕು; ಅದು ನಮ್ಮ ಈಗಿನ ಪೀಳಿಗೆಯ ಮೂಗಿಗೆಲ್ಲಿ ಅಡರಬೇಕು, ಅಲ್ಲವೇ? ಈ ದಿಶೆಯಲ್ಲಿ ಏನೂ ಪಾಪ ಮಾಡದ ಈಚಿನ ನಮ್ಮ ಮಕ್ಕಳು ನಿಜದ ಮಣ್ಣ ಘಮವ ಸವಿಯಲೂ ವಂಚಿತರಾಗಿದ್ದಾರೆ; ಇದಕ್ಕೆ ಈತನಕ ಈ ಮಣ್ಣನಾಳಿದ, ಮಣ್ಣಿಂದಲೇ ಈ ಕಾಯ ಧರಿಸಿದ, ಉಂಡು ತಿಂದು ತೇಗಿದ ನಾವಲ್ಲದೇ ಇನ್ನಾರು ಕಾರಣರಾದಾರು..?

ಮತ್ತೆ ಈ ನೆಲದ ಗುಣವನ್ನೇ ಕಸಿದವರ ಮಧ್ಯೆಯೂ, ಬಿಟ್ಟೇನೆಂದರೂ ಬಿಡದ ಈ ನೆಲಾನುಬಂಧದ ಪ್ರೀತಿಗೆ ಶರಣಾಗಿ ಲಹರಿಯಾಡಬೇಕೆಂದರೆ… ಹೀಗೂ ಹರಿದಾಡಬಹುದೇನೋ..?

`ಹೌದು, ನಾನು ನೆಲ..! ನೆಲದ ಮರೆಯ ನಿಧಾನವೂ, ನೆಲದ ಮೇಲಿನ ಚರಾಚರವೂ ಸ್ಥಿರವೂ, ಎಲ್ಲವೂ ನನಗೆ ಪ್ರೀತಿ..!’ ಇಂಥ ನೆಲದ ಘಮ ಗೊತ್ತಾಗುವುದು ಕೂಡ ಬಹುತೇಕ ಮೊದಲ ಮಳೆ ಇಳೆಯ ಸೋಕಿ ಇಳಿದಾಗಲೇ. ಆಳ ಅಗಲ ಉದ್ಧಕ್ಕೂ ಆವರಿಸಿಕೊಂಡ ಈ ನೆಲ ಕಂಡಷ್ಟು ಸುಲಭಕ್ಕೆ ನಿಲುಕುವುದೂ ಇಲ್ಲ; ಒಲಿಯುವುದೂ ಇಲ್ಲ. ಅದಕ್ಕಾಗಿಯೇ ಮಣ್ಣನ್ನು ಮಾಯೆಗೋ ಮಾನಿನಿಗೋ ಹೋಲಿಸಿ ಮಾತನಾಡಲಾಗಿದೆ. ಇದರ ಬಗೆಗೆ ಬರೆದ ಕೊರೆದ ಅಕ್ಷರಗಳಿಗೂ ವಿಶೇಷ ಮನ್ನಣೆಯಿದೆ.

ಈ ನೆಲ ಅಲಿಯಾಸ್ ಮಣ್ಣಿನ ವ್ಯಾಮೋಹದಿಂದ (ಮೋಹದಿಂದಲ್ಲ) ನರಳಿದವರೇ ಹೆಚ್ಚು. ಈ ಹೊತ್ತಿನ ಮಣ್ಣಿನ-ನೆಲದ ಮೇಲಿನ ಅತಿಯಾದ ಪ್ರೀತಿ ವ್ಯವಹಾರವಾಗಿ ರೂಪಾಂತರಗೊಂಡ ಬಳಿಕ ನೆಲ ಸಿಡಿದೆದ್ದದ್ದೂ ಇದೆ. ಈ ವ್ಯಾಮೋಹವು ಕೆಲವರಿಗೆ ಲಾಭ ತಂದಿದ್ದೂ ಖರೆ. ಕೆಲವರನ್ನು ಮಣ್ಣು ಪಾಲು ಮಾಡಿದ್ದೂ ನಿಜ. ಈ ದಿಶೆಯಲ್ಲಿ ಇದು ಮಾಯೆಯೇ ಇರಬಹುದೇನೋ..!

ಬೆವರ ಜೀವಗಳಿಗೆ ಮಾತ್ರ ಮಣ್ಣು ಎಂದಿದ್ದರೂ ಜೀವಾಮೃತವೇ. ಎಲ್ಲ ಕಾಲಕ್ಕೂ ಅಂದರೆ ಬರ ನೆರೆ ಭೂಕಂಪನಗಳ ಸೆಳವಿಗೆ ಸಿಕ್ಕೂ ಮಣ್ಣ ಪೂಜಿಸುವ ಮಂದಿಗೆ ಇದು ಸಾಕ್ಷಾತ್ ಅಮ್ಮನೇ ದೇವತೆಯೇ. ಕೊರತೆ ಕಾಣಿಸಿದ್ದಕ್ಕಿಂತ ಇದು ಪೊರೆದದ್ದೇ ಹೆಚ್ಚು. ಹೀಗಾಗಿ ಈ ನೆಲ ರೈತ ಕೂಲಿಕಾರರ ಪಾಲಿಗೆ ದೇವರೇ. ಅವರ ಬದುಕಿಗೆ ಅನ್ನ ಕೊಟ್ಟಿದೆ. ಅರಿವೆ ಕೊಟ್ಟಿದೆ. ಉಸಿರು ಕೊಟ್ಟಿದೆ; ಅರಿವನ್ನೂ ವಿಸ್ತರಿಸಿದೆ; ಮಣ್ಣ ಮಾರುವ, ಅದರೊಳಗಣ ಕಣ್ಣ ಕೀಳುವ, ಗರ್ಭದೋಚುವ ರಕ್ಕಸರಿಗೆ ಖದೀಮರಿಗೆ ಕಾಲಾನುಕಾಲಕ್ಕೆ ಈ ನೆಲದವ್ವ ಪೆಟ್ಟು ಕೊಡುತ್ತಲೇ ಇದ್ದಾಳೆ.

ಇಂಥ ನೆಲಕ್ಕೊಂದು ದನಿಯಿದೆ ನಾದವಿದೆ ಭಾವವಿದೆ ಎಂದು ನಾವು ಭಾವಿಸುತ್ತಿಲ್ಲ ಅರ್ಥಾತ್ ಅಂದುಕೊಳ್ಳುತ್ತಿಲ್ಲ, ಅದೇಕೆಂದು ನಾನರಿಯೇ..!? ಆ ಭಾವಕೊರತೆಯೇ ಇಂದಿನೆಲ್ಲ ಸಮಸ್ಯೆಗಳ ಮೂಲವಾಗಿದೆಯೆಂದೆನಿಸುವುದರಲ್ಲಿ ಯಾವ ಉತ್ಪ್ರೇಕ್ಷೆಯಿಲ್ಲ. ಅದು ನಮ್ಮಂತೆಯೇ ಎಂಬ ಗುಣಾಕಾರ ಯಾ ಲೆಕ್ಕಾಚಾರ ತಪ್ಪಿದ್ದರಿಂದಲೂ, ಈ ನೆಲವೂ ನಾನೇ ಎಂದು ಗಣಿಸದಿರುವುದರಿಂದಲೇ ಈ ಎಲ್ಲ ಹಾಹಾಕಾರಗಳು ಹೂಂಕಾರಗಳು ಮೊರೆತಗಳು ಏರಿಳಿತಗಳು..!

`ಈ ಮಣ್ಣು ನಮ್ಮದು.. ಈ ಗಾಳಿ ನಮ್ಮದು.. ಕಲಕಲನೇ ಹರಿಯುತಿಹ ನೀರು ನಮ್ಮದು..!’- ಬಾಲ್ಯದಲ್ಲಿ ಆಕಾಶವಾಣಿಯಲ್ಲಿ ತೇಲಿಬರುತ್ತಿದ್ದ ಈ ಹಾಡಿನ ಸಾಲುಗಳು ನನ್ನ ಕಿವಿಯಲ್ಲಿನ್ನೂ ಅನುರಣನಗೊಳ್ಳುತ್ತಿವೆ. ಇಂಥ ಅನುರಣನದ ಜೊತೆಜೊತೆಗೇ ನಮ್ಮ ನೆಲ ಮಣ್ಣು ಜಲ ಪರಿಸರದ ಪ್ರೀತಿ ನಮ್ಮಲ್ಲಿ ಹೆಚ್ಚಾಗಬೇಕಲ್ಲವೇ? ನಾವು ಜತನದಿಂದ ಕಾಯ್ದುಕೊಳ್ಳುವ ನಮ್ಮ ಆರೋಗ್ಯದಂತೆಯೇ ನಮ್ಮ ನೆಲದ, ನೆಲದವ್ವನ ಆರೋಗ್ಯ ಕೂಡ ಕಾಪಿಟ್ಟು ಕಾಯುವುದು ನಮ್ಮತನ ಆಗಬೇಕಲ್ಲವೇ?

ಈ ಬೇಸಿಗೆ ಕಾಲದ ಬೇಗೆಯನ್ನು ನೆಲದವ್ವ ಎಷ್ಟು ತಾಳ್ಮೆಯಿಂದ ಸಹಿಸಿಕೊಳ್ಳುತ್ತಿದ್ದಾಳೆ ನೋಡಿ, ನಾವೋ ಯಂತ್ರ ಮುಖೇನ ತಾತ್ಕಾಲಿಕ ತಂಪು ಪಡೆದುಕೊಂಡು ಧನ್ಯರಾದಂತೆ ಕಾಣುತ್ತೇವೆ. ಆದರೆ ನಿಜಕೂ ನಮ್ಮ ಮನ ತಣಿಯಲು ಈ ಕೃತಕತೆಯಿಂದ ಸಾಧ್ಯವೇ..? ಬಿಸಿಲು ಮಳೆ ಚಳಿಯಾದಿಯಾಗಿ ಮನುಷ್ಯರಾದ ನಾವು ಕೊಡುವ ಉಪಟಳವನ್ನೂ ನಮ್ಮ ಈ ತಾಯೀ ಸಹಿಸಿಕೊಂಡೂ ನಮ್ಮನ್ನು ಪೊರೆದಿದ್ದಾಳೆ, ಪೊರೆಯುತ್ತಿದ್ದಾಳೆ; ತುತ್ತುಣಿದ್ದಾಳೆ, ಗುಟುರು ಕೊಟ್ಟಿದ್ದಾಳೆ. ನಾವು..??

ಈ ನೆಲದ, ಮಣ್ಣ ಮೇಲೆ ನಿಂತ-ಕುಂತ-ಮಲಗಿದ; ಇದರಿಂದಲೇ ನಮ್ಮ ಬದುಕು ಕಟ್ಟಿಕೊಂಡು ಸಿರಿವಂತರಾಗಿಯೋ ಉಪಜೀವನ ಸಾಗಿಸಿಯೋ ಹೆಜ್ಜೆ ಹಾಕುತ್ತಿರುವ ನಾವು ಈ ತಾಯಿ ಋಣವನ್ನು ಹೇಗೆ ತೀರಿಸಬೇಕು..? ಅವಳನ್ನು ಹೇಗೆ ನೋಡಿಕೊಳ್ಳಬೇಕು..?

ಈ ಇದರಗುಂಟ ಹರಿದಾಡುತ್ತಲೇ ಅರೆಹೊತ್ತು ಚಿಂತನೆ ಮಾಡೋಣವೇ..? ಅವಳ ಯೋಗಕ್ಷೇಮವನ್ನು ನೋಡುತ್ತಲೇ ನಮ್ಮ ಕೆಳಗಿನ ಬುನಾದಿಯನ್ನು, ಅದು ನಮ್ಮ ಉಸಿರಿಗೆ ಉಸಿರಾಗಿಯೂ ತುಳಿಸಿಕೊಳ್ಳುವ ಪರಿಯನ್ನು ನೆನೆದು ನಮ್ಮಂತೆಯೇ ಅದು ಅಂದುಕೊಂಡು ಪ್ರೀತಿಸೋಣವೇ..? ಸರಿ, ಈ ಧಗೆಯಲ್ಲೂ ಈ ನೆಲದಮ್ಮನಿಗೊಂದು ಸೆಲ್ಯೂಟು ಹೊಡೆದು ನಮ್ಮ ತನುಮನವ ತಕ್ಕಮಟ್ಟಿಗಾದರೂ ಸಂತಯಿಸಿಕೊಳ್ಳೋಣ, ಏನಂತೀರಿ..?

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅದು ಒಂದ ಮನೀ ಮನಷ್ಯಾ ಇದ್ದಂಗ..

ಅದು ಒಂದ ಮನೀ ಮನಷ್ಯಾ ಇದ್ದಂಗ..

ಮಾಲಾ ಮ ಅಕ್ಕಿಶೆಟ್ಟಿ ಅದ ಮನೀಗೀ ಬರೋದು ಯಾರಿಗೂ ಇಷ್ಟ ಇರಲಿಲ್ಲ. ಬ್ಯಾಡ ಬ್ಯಾಡ ಅಂದ್ರು ಅವ, ಈ ಸಣ್ಣ ಹುಡುಗ ಹೇಳ್ಯಾನ ಅಂದ ತಂದಿದ್ದ....

ನಾವು ಕಾಫಿ ಮಂದಿ..

ನಾವು ಕಾಫಿ ಮಂದಿ..

ಸುಮಾ ವೀಣಾ, ಹಾಸನ  “ಮಲೆನಾಡಿನ ಅಮೃತ”  ಅಂದರೆ ಕಾಫಿನೇ ಅಲ್ವೆ !   ಕೊರೆಯುವ ಮೈಚಳಿ  ಬಿಡಿಸಲು  ...

ರೇಮಂಡ್  ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ರೇಮಂಡ್ ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ಆರ್. ವಿಜಯರಾಘವನ್ ಆಲ್ಬರ್ಟ್ ಕಮೂ ತನ್ನ ಸ್ನೇಹಿತ ಮೈಕೆಲ್ ಗ್ಯಾಲಿಮಾರ್ಡ್ ಅವರೊಂದಿಗೆ ಇರುವ ಒಂದು ಛಾಯಾಚಿತ್ರವಿದೆ. ಅವರಿಬ್ಬರೂ ಕಾರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This