ನೇರಳೆಮರದ ಬಗ್ಗೆ ಇನ್ನಷ್ಟು

ಕಥೆಗಾರ ಕೇಶವ ಮಳಗಿಯವರ “ನೇರಳೆ ಮರ” ಕೃತಿ ಕುರಿತು ಈಗಾಗಲೇ ಬರೆದಿದ್ದೆವು. ಅದರ ಇನ್ನಷ್ಟು ವಿಸ್ತಾರ ಓದು ಇಲ್ಲಿದೆ. ಇದು ಮತ್ತೋರ್ವ ಕಥೆಗಾರ ನರೇಂದ್ರ ಪೈ ಅವರ ಬರಹ. ಅವರ “ಓದುವ ಹವ್ಯಾಸ” ಎಂಬ ಬ್ಲಾಗಿನಿಂದ ಎತ್ತಿಕೊಡುತ್ತಿದ್ದೇವೆ.
 neralemara.jpg
ದುಕು ಎಂಬ ಒಂದು ವಿಸ್ಮಯ ಬಾಲ್ಯ, ತಾರುಣ್ಯ, ಯೌವನ, ಪ್ರೌಢಾವಸ್ಥೆ, ನಡುವಯಸ್ಸು, ಮುದಿತನ ಎಲ್ಲದರಲ್ಲೂ ಬಿಚ್ಚಿಕೊಳ್ಳುವ ಬಗೆ ವ್ಯಕ್ತಿಯಿಂದ ವ್ಯಕ್ತಿಗೆ ವಿಶಿಷ್ಟವಾದದ್ದು. ಆದಾಗ್ಯೂ ಅದರಲ್ಲಿ ಅಷ್ಟಿಷ್ಟು ಸಾಮ್ಯವಿದ್ದೆ ಇರುತ್ತದೆ. ನಿಮ್ಮ ಬಾಲ್ಯದ ಸವಿನೆನಪುಗಳಲ್ಲಿ ನನ್ನ ಬಾಲ್ಯದ ಸ್ಮೃತಿಗಳಿರುತ್ತವೆ. ನಿಮ್ಮ ಅಪಮಾನದ ಘಳಿಗೆಗಳಲ್ಲಿ ನನ್ನ ಕಣ್ಣಲ್ಲೂ ನೀರು ತುಂಬಿಕೊಳ್ಳುತ್ತದೆ. ನಿಮ್ಮ ನಡುವಯಸ್ಸಿನ ನೋಟ ನನಗೆ ದೀವಟಿಗೆಯ ಹಾಗಿರುತ್ತದೆ. ಅದಕ್ಕೇ ಓಶೋ ಹೇಳಿರಬೇಕು, ದೇಹಗಳು ಬೇರೆ ಬೇರೆ, ಮನಸ್ಸು ಅಲ್ಲಿಷ್ಟು ಇಲ್ಲಿಷ್ಟು ಒಂದೇ ತರ ಎನಿಸುತ್ತೆ, ಆತ್ಮ ಮಾತ್ರ ನನಗೂ ನಿನಗೂ ಒಂದೇ…
ಬರಹಗಾರನ ಬಾಲ್ಯ, ಕನಸು, ಯೌವನ, ಬದುಕು ಬೇರೆಯವರಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಆದರೂ ನಮಗೆ ಅದರಲ್ಲಿ ವಿಚಿತ್ರ ಕುತೂಹಲ ಇದ್ದೇ ಇರುತ್ತದೆ. ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಕಾಣುವ ಹಂಬಲ, ಲಂಕೇಶರ ಹುಳಿ ಮಾವಿನ ಮರದ ನೆರಳು, ಹಣ್ಣಿನ ಸಿಹಿ ಹುಳಿ ಒಗರು ತಿಂದು ನೋಡುವ ಬಯಕೆ, ಭೈರಪ್ಪನವರ ಚಿತ್ತ ಭಿತ್ತಿಯ ಕಡೆ ನೆಟ್ಟ ನೋಟವ ನೆಟ್ಟು ಕಾಣುವ ಕುತೂಹಲ, ಕುವೆಂಪುರವರ ನೆನಪಿನ ದೋಣಿಯಲ್ಲಿ ತೇಲುವ ಸುಖವನ್ನು ಅನುಭವಿಸುವ ಕಾತರ, ಅಮೃತಾಪ್ರೀತಮರ ರಸೀದಿ ಟಿಕೇಟು ಕೊಂಡು ನುಡಿಯ ನೆರಳಿನಲ್ಲಿ ಹಾಯಾಗಿ ಮಲಗುವ ಆಸೆ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆನೆಂದ ಬಿ.ವಿ. ಕಾರಂತರ ಜೊತೆ ಇನ್ನೊಂದಿಷ್ಟು ಹೊತ್ತು ಇರಬೇಕೆಂಬ ತಲ್ಲಣ, ಕತ್ತಾಲೆ ಬೆಳದಿಂಗಳಲ್ಲಿ ಸಿಜಿಕೆ ಜೊತೆ ನಿಲ್ಲುವ ಮನಸ್ಸು, ಊರುಕೇರಿಯ ಅಲೆಯುತ್ತ ಸಿದ್ಧಲಿಂಗಯ್ಯನವರ ಜೊತೆ ಸುತ್ತುವ ಚಪಲ…..ನಮಗಿದ್ದೇ ಇದೆ. ಇದೆಲ್ಲ ಆತ್ಮಕಥಾನಕದ ಮಾತಾಯಿತು. ಚಿತ್ತಾಲರು, ತೇಜಸ್ವಿ, ಗೊರೂರು, ಅನಂತಮೂರ್ತಿ, ಜಯಂತ ಕಾಯ್ಕಿಣಿ ಇನ್ನೂ ಹಲವರು ಇನ್ನೊಂದೇ ಬಗೆಯಲ್ಲಿ ತಮ್ಮ ಬಾಲ್ಯವನ್ನು, ನೆನಪುಗಳನ್ನು ಹಂಚಿಕೊಂಡಿದ್ದಿದೆ. ಇವರ ಅಂಕಣಗಳೋ, ಪ್ರಬಂಧಗಳೋ, ಲೇಖನಗಳೋ, ಪ್ರವಾಸಕಥನಗಳೋ ನಮಗೆ ಇವರನ್ನು ನಮ್ಮವರನ್ನಾಗಿಸಿದ ಬೆರಗು ಗೊತ್ತೇ ಇದೆ. ಕೆಲವೊಮ್ಮೆ ಇನ್ಯಾರೋ ಬರೆದ ಈ ಬರಹಗಾರರ ಬಾಲ್ಯ, ಬದುಕು ಕೂಡ ಅಷ್ಟೇ ಕುತೂಹಲ ಮೂಡಿಸುತ್ತದೆ.
ಏನಂಥ ವಿಶೇಷ ಈ ಬರಹಗಾರರ ಬದುಕಿನಲ್ಲಿ? ಅದು ಬದುಕಿಗೆ ಅವರು ಸ್ಪಂದಿಸಿದ ವಿಶಿಷ್ಟ ರೀತಿಯಲ್ಲಿದೆ. ಹಾಗೆ ಸ್ಪಂದಿಸಿ ಈ ಬದುಕಿನಿಂದ ಪಡೆದುಕೊಂಡ ವಿಶಿಷ್ಟ ಅರಿವಿನಲ್ಲಿದೆ. ಹಿಂದೆಲ್ಲ ತಪಸ್ವಿಗಳು ಕಾಡಿಗೆ ಹೋಗಿ ಮರದ ಕೆಳಗೆ ಕಣ್ಮುಚ್ಚಿ ಕೂತು ನಡೆಸಿದ ಧ್ಯಾನ, ಚಿಂತನೆ, ತಪಸ್ಸನ್ನು ಒಂದು ರೂಪಕವಾಗಿ ಕಾಣಬಲ್ಲಿರಾದರೆ ಬರಹಗಾರನ ಬರವಣಿಗೆಯೊಂದಿಗಿನ ಸಖ್ಯವನ್ನು ಹಾಗೆಂದೇ ತಿಳಿಯಬಹುದು. ಒಬ್ಬ ಬರಹಗಾರ ಇನ್ಯಾವುದೇ ಒಬ್ಬ ಸಾಮಾನ್ಯ ಮನುಷ್ಯನಂತೆಯೇ ಯಾರ ನಿರ್ದೇಶನವಿಲ್ಲದೆ, ಸಂಭಾಷಣೆಯ ಸ್ಕ್ರಿಪ್ಟ್ ಇಲ್ಲದೆ, ನೇಪಥ್ಯದ ಅನೂಹ್ಯ ಸಂದಿಯಿಂದ ಗುನುಗುವ ಪ್ರಾಮ್ಟ್ ಇಲ್ಲದೆ ದಿಢೀರನೆ ಯಾರೋ ತಳ್ಳಿದಂತೆ ನೂಕಲ್ಪಟ್ಟು ಪ್ರವೇಶಿಸಿದ ಈ ಬದುಕೆಂಬೋ ರಂಗಸ್ಥಳದ ಮೇಲೆ ನಡೆಸಿದ ಎಲ್ಲ ರಂಗಚಲನೆ, ಮಾತು, ನಟನೆ, ಕಪಟ, ಕಸರತ್ತು, ಕೊಟ್ಟಿದ್ದು ಪಡೆದದ್ದು ಆಯಾ ಕಾಲಕ್ಕೇ ಅವನನ್ನು ಏನು ಮಾಡಿತು ಎಂಬುದನ್ನು ಕಂಡುಕೊಳ್ಳುತ್ತಲೇ ಅವನ್ನೆಲ್ಲ ಮಾಡುತ್ತಾನೆ ಎನ್ನಬೇಕು. ಇನ್ನೆಂದೋ ಮುಂದೆ ಬೀರುವ ಹಿನ್ನೋಟವಲ್ಲ ಇದು. time present ನಲ್ಲೇ ದಕ್ಕಬೇಕಾದದ್ದು. ಸಾಕ್ಷಿಪ್ರಜ್ಞೆಯಿಂದ ಬದುಕುವುದು ಎಂದು ಸರಳವಾಗಿ ಇದನ್ನು ಹೇಳಿಬಿಡಬಹುದಿತ್ತೇನೋ. ಅಂಥ ಪೂರ್ಣಬದುಕು ಒಬ್ಬ ಬರಹಗಾರನದ್ದಾಗಿರುತ್ತದೆ ಎಂಬ ಒಂದು ನಿರೀಕ್ಷೆ ನಮ್ಮದು. ಹಾಗಾಗಿ ಅದನ್ನು ಇಣುಕಿ ನೋಡುವ ಕುತೂಹಲ, ಕಾತರ!
ಕೇಶವ ಮಳಗಿಯವರ ನೇರಳೆ ಮರ ಈ ಯಾವ ಬಗೆಯ ಕಥಾನಕವೂ ಅಲ್ಲ ಅಥವಾ, ಅವೆಲ್ಲವೂ ಹೌದಾಗಿರುವ ಒಂದು ಕಥಾನಕ! ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ್ತ ಅವು ಮಾಡುವ ಚಮತ್ಕಾರವನ್ನು ಮಳಗಿಯವರು ಅಕ್ಷರಗಳಲ್ಲಿ ಹಿಡಿದುಕೊಡಲು ಇಲ್ಲಿ ಪ್ರಯತ್ನಿಸಿದ್ದಾರೆ. ಅನುಭವವೊಂದು ಬರಹಗಾರನನ್ನು ಕಾಡುತ್ತ, ತಟ್ಟುತ್ತ, ತಡವುತ್ತ, ತದುಕುತ್ತ, ಸಂತೈಸುತ್ತ, ಪೊರೆಯುತ್ತ, ತೊರೆಯುತ್ತ, ತಲ್ಲಣಗಳಿಗೆ ನೂಕುತ್ತ ಮತ್ತು ಕೈಹಿಡಿದೆತ್ತುತ್ತ ಕಥೆಗಾರನನ್ನು ಬೆಳೆಸುವ ಬಗೆಯೇ ವಿಲಕ್ಷಣವಾದದ್ದು. ಬರಹಗಾರನ ಸೂಕ್ಷ್ಮಪ್ರಜ್ಞ್ಮೆ ಅದನ್ನು ಗಮನಿಸುವ ಬಗೆ, ಅದಕ್ಕೆ ಸ್ಪಂದಿಸುವ ಬಗೆ ಮತ್ತು ಅದೆಲ್ಲ ತನ್ನ ಮೇಲೆ ಉಂಟು ಮಾಡುತ್ತಿರುವುದನ್ನು ಅರ್ಥೈಸಿಕೊಳ್ಳುತ್ತ, ಮುಂದೆ ತಾನು ಅವನ್ನು ತನ್ನ ಬರವಣಿಗೆಯಲ್ಲಿ ಮತ್ತೊಮ್ಮೆ ಉಂಟುಮಾಡಿಕೊಳ್ಳುವ ಪರಿಕರಗಳನ್ನು ಪಡೆದುಕೊಳ್ಳುತ್ತಲೇ ತನ್ನ ಬದುಕನ್ನು ಓದುಗನ ಮಡಿಲಿಗೆ ಒಡ್ಡುವುದಕ್ಕೆ ಸಜ್ಜಾಗುವ ಪ್ರಕ್ರಿಯೆ ಕುತೂಹಲಕರ ಅಂತ ನಿಮಗೆ ಅನಿಸಿದರೆ ಖಂಡಿತವಾಗಿಯೂ ಮಳಗಿಯವರ ಈ ಪುಸ್ತಕ ನಿಮಗಾಗಿಯೇ ಇರುವಂಥದ್ದು!
ಇಲ್ಲಿ ಭಾವ ಇದೀಗ ಅನುಭವಿಸಿದಷ್ಟೇ ಸ್ನಿಗ್ಧವಾಗಿವೆ. ಅನುಭವ ಮನಸ್ಸಿನಾಳದಲ್ಲಿ ಅಚ್ಚೊತ್ತಿದ ಚಿತ್ರಿಕೆಗಳಾಗುತ್ತವೆ. ಆಳದ ತಳಮಳ ಮನಸ್ಸಿಗಿಳಿಯುತ್ತದೆ. ಯಾಕೆಂದರೆ ಇಲ್ಲಿ ಮಳಗಿಯವರು ಪ್ರಾಮಾಣಿಕವಾಗಿ ಆಳವನ್ನು ತಡಕುತ್ತ ನಡೆಸಿದ ಶೋಧದಲ್ಲಿ ನಮ್ಮದು ಬರೇ ಅವರಿಗೆ ಜೊತೆಯಾಗುವ ಸರದಿ. ಜೊತೆಗೆ ನೀವೀದ್ದೀರೇ ಎಂಬ ಶಂಕೆಯ ಹಂಗೂ ಅವರಿಗಿದ್ದಂತಿಲ್ಲ! ಅಷ್ಟರಮಟ್ಟಿಗೆ ಇದೊಂದು ಸ್ವಗತ, ತನಗೇ ಬುದ್ಧಿ ಹೇಳಿಕೊಳ್ಳುವ, ಗದರುವ, ಉಪನ್ಯಾಸ ನೀಡುವ, ಲಲ್ಲೆಗರೆದು ಸಂತೈಸುವ, ಕಟುವಾಗಿ ಕೆಣಕಿ ಹಾದಿಗೆ ತರುವ ಮಳಗಿಯವರ ತತ್ವ ಬತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂಬುದೇ. ಹಾಗಾಗಿ ಇದನ್ನು ಸ್ವೀಕರಿಸಲು ಕೂಡ ಒಂದು ಮನಸ್ಥಿತಿಯ ಸಿದ್ಧತೆಯ ಅಗತ್ಯ ಕೂಡ ಕೆಲವೆಡೆ ಇದ್ದೇ ಇದೆ. ರೂಪಕಗಳ ಹಾದಿಯಿದು ಹೌದಾದರೂ ಶೋಧ ಸತ್ಯದ್ದು, ದರ್ಶನ ಅವ್ಯಕ್ತ ಜಗತ್ತಿಗೆ ಸೇರಿದ್ದು. ಅನೂಹ್ಯಗಳ ಅಗಮ್ಯವನ್ನರಸಿ ಹೊರಟ ಅಮೂರ್ತ ಬಿಂಬಗಳನ್ನು ಕನಸು ಮನಸಿನಲ್ಲಿ ಹೊತ್ತ ಕಥೆಗಾರನ ಜೊತೆ ಅಷ್ಟು ದೂರ ಸಾಗಲು ಇದೊಂದು ಅವಕಾಶ.
ಇಲ್ಲಿನ ಬರಹಗಳಿಗೆ ಅದೇ ನೇರಳೆ ಮರದ ವಿಚಿತ್ರ ಸುವಾಸನೆಯಿದೆ. ಮಳೆ ಮೋಡ ಕವಿದ ಸಂಜೆ ಇನ್ನೂ ಮೈತುಂಬ ತೊಟ್ಟಿಕ್ಕುವ ಮಳೆನೀರ ಗೆಲ್ಲುಗಳನ್ನು ಹೊತ್ತಿರುವ ಮತ್ತು ಅದೇ ಕಾರಣಕ್ಕೆ ನಿಗೂಢವಾಗಿಯೂ ದಟ್ಟವಾಗಿಯೂ ಕಾಣುವ ನೇರಳೇ ಮರದ ಕಪ್ಪು ಜಾಂಬಳಿ ಹಣ್ಣಿನ ರುಚಿಯೂ ಸಿಹಿ, ಒಗರು, ಹುಳಿ ಎಲ್ಲ ಸೇರಿದ ಸಂಕೀರ್ಣ; ಇಲ್ಲಿನ ಬರಹಗಳೂ. ಬಹುಷಃ ನಮ್ಮೆಲ್ಲರ ಬಾಲ್ಯಕ್ಕೂ ಒಂದಲ್ಲಾ ಒಂದು ಬಗೆಯಲ್ಲಿ ನೇರಳೆ ಮರದ ನಂಟಿದೆ, ನೆನಪುಗಳ ಋಣವಿದೆ. ರುಚಿಯ ಮಾತೆತ್ತಿದರೆ ಅಂಥ ಚಪಲವನ್ನೇನೂ ಹುಟ್ಟಿಸದ ಒಗರು ಬಿಯರಿನಂಥ ಈ ನೇರಳೆ ಹಣ್ಣು ಅದು ಹೇಗೆ ಮಾಯಕದ ಬಲೆ ಬೀಸಿ ನಮ್ಮ ಬಾಲ್ಯದ ನಗೆಯ ಮಲ್ಲಿಗೆಯ ಹಲ್ಲನ್ನೆಲ್ಲ ನೀಲ ನೇರಳೆಗೊಳಿಸಿತೋ….
ಪುಸ್ತಕಗಳು, ಹಕ್ಕಿಮರಿ, ಪ್ರೇಮಪತ್ರದ ಸಂಭ್ರಮ, ಖಾಲೀಕೋಣೆಯಲ್ಲಿ ರೂಪುಗೊಳ್ಳುವ ಬದುಕು, ಗಿಲಿಗಿಲಿ ಎಕ್ಕಾ, ಯಾರಿಲ್ಲ ಸಂಗಡ, ಗುಡುಗುಡು ಗುಡುಗು….ಎಂದೆಲ್ಲ ಹಂತಹಂತವಾಗಿ ತಡಕಿದ ಬೆಚ್ಚನೆಯ ಸ್ಮೃತಿಗಳಿಂದ “ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿ”ಯ ಕಾಯಕಕ್ಕೆ ಮಳಗಿಯವರು ರೂಪಕಗಳ ಲೋಕದ ಕಥನ ಎಂಬ ವಿವರ ನೀಡಿದ್ದಾರೆ. ಹಿಂಸೆ, ಮಾರುಕಟ್ಟೆ, ಆತ್ಮಹತ್ಯೆ, ರೈತ, ನೀರಾವರಿ, ನೆಲ-ಜಲ-ಪ್ರಕೃತಿ, ಶಿಕ್ಷಣ, ಯುಗಾದಿ, ಚಳಿ, ಕತ್ತಲೆ, ಹೂವು ಎಲ್ಲವೂ ಇಲ್ಲಿ ಕಥನದ ಪರಿಕರಗಳಾಗುತ್ತವೆ, ಎಲ್ಲೋ ಎಂತೋ ಹೇಗೋ ಕಥೆಗಾರನ ಮನಸ್ಸು, ಹೃದಯಗಳ ರಕ್ತ ಮಾಂಸಗಳಾಗಿ ಜೀವ ತಳೆಯುತ್ತವೆ. ಕೆಲವು ನೋವನ್ನು ಮೀಟಿದರೆ ಇನ್ನುಳಿದವು ಇಲ್ಲಿನ ಬದುಕನ್ನು ಸಹ್ಯಗೊಳಿಸುತ್ತವೆ. ಅದಾಗಿ ಬರೆದ ಬರಹಗಳು, ಆ ಹಾದಿಯೊಂದೇ ತನಗೆ ಉಳಿದಿರುವುದು ಎಂದು ನಿರ್ಧರಿಸಿ ಆಯ್ದುಕೊಂಡು ಹೊರಟವನದ್ದು. ಅಂದರಾಯಿತೆ? ಆಮೇಲೂ ತಮ್ಮ ಕಥೆಯನ್ನೇ ಮುಗಿಸಿ ಅದಕ್ಕೊಂದು ಪುಟ್ಟ ಪೂರ್ಣವಿರಾಮವನ್ನಿಟ್ಟು ಕತ್ತಲೆಯ ಅನೂಹ್ಯ ಜಗತ್ತಿಗೆ ಸೇರಿಹೋದ ಮಂದಿ ಕಥೆಗಾರನನ್ನು ಕಾಡಿದಂತೆಯೇ ಟೀಕಾಚಾರ್ಯರ, ಅವಕಾಶವಾದಿಗಳ ಸಾಂಸ್ಕೃತಿಕ ರಾಜಕಾರಣವೂ ತಲ್ಲಣಗೊಳಿಸಿದೆ.
ಈ ಎಲ್ಲ ತವಕ ತಲ್ಲಣಗಳ ನಡುವೆಯೇ ಈ ಪೂರ್ತಾ ನೇರಳೆ ಬಣ್ಣದ ಮುಖಪುಟದೊಳಗೆ ಆನಂದ ಕಲರಿನ ಹಾಳೆಗಳು ಫಡಫಡಿಸಿ ರೆಕ್ಕೆ ಬಡಿಯುತ್ತಿವೆ, ಮೆಲ್ಲಗೆ ಮನದಾಳದಲ್ಲಿ ಮಿಡಿಯುತ್ತಿವೆ, ಹೃದಯದಿಂದ ಉಸಿರಾಡುತ್ತಿವೆ.

‍ಲೇಖಕರು avadhi

February 26, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This