ನೋಡಬೇಕಾದ ಚಿತ್ರಗಳು : ಇನ್ ದಿ ಮೂಡ್ ಫಾರ್ ಲವ್

ಹಾರಿಬಿಟ್ಟ ಭಾವನೆಗಳ ಗಾಳಿಪಟ: ಇನ್ ದಿ ಮೂಡ್ ಫಾರ್ ಲವ್ – ಆರ್.ಕೇಶವಮೂರ್ತಿ ಗಾ೦ಧಿ ಕ್ಲಾಸ್ ಅಡುಗೆ ಮನೆಯಲ್ಲಿ ಸದ್ದು ಮಾಡುವ ಕುಕ್ಕರ್, ಸಿಗರೇಟಿನ ಹೊಗೆ, ಆಕೆಯ ಕಣ್ಣಂಚಿನಲ್ಲಿನ ತೇವ, ಟೇಬಲ್ ಮೇಲೆ ಕಾಣಿಸುವ ಪೇಪರ್, ಆಗಾಗ ಬರುವ ಮಳೆ, ಎರಡ್ಮೂರು ಬಾರಿ ಫ್ರೇಮ್ ತುಂಬಿಕೊಳ್ಳುವ ಹೈ ಹೀಲ್ಡ್ ಚಪ್ಪಲಿ, ಸ್ಲೋ ಮೋಷನ್್ನಲ್ಲಿ ಕಾಣಿಸಿಕೊಳ್ಳುವ ಹುಡುಗಿಯ ಕಾಲು, ಬೆಳಕಿಗಿಂತ ತುಸು ಹೆಚ್ಚಾಗಿಯೇ ರಾರಾಜಿಸುವ ಕತ್ತಲು, ಇಕ್ಕಟ್ಟಾದ ಮನೆ ಕಾರಿಡಾರ್, ಹತ್ತುವ ಮೆಟ್ಟಿಲು, ಸಣ್ಣದಾಗಿ ಸದ್ದು ಮಾಡುವ ಗಡಿಯಾರ, ಟೈಪಿಂಗ್ ಮಿಷನ್… ಇವು ಚಿತ್ರದಲ್ಲಿ ಕೆಲವಾರು ಸೆಕೆಂಡುಗಳ ಕಾಲ ಮತ್ತೆ ಮತ್ತೆ ಬಂದು ಹೋಗುತ್ತಿದ್ದರೂ ಸಿನಿಮಾ ಮುಗಿಯುವಷ್ಟರಲ್ಲಿ ಅವು ಚಿತ್ರದ ಒಂದೊಂದು ರೂಪಕಗಳಂತೆ ಗೋಚರಿಸುತ್ತವೆ. ಆ ಮೂಲಕ ನಿರ್ದೇಶಕನ ಕಲ್ಪನೆಯ ಪ್ರತಿ ಫ್ರೇಮ್್ನಲ್ಲೂ ಕಾಣಿಸಿಕೊಳ್ಳುವ ಸಣ್ಣ ಸಣ್ಣ ವಸ್ತುಗಳೂ ಪ್ರೇಕ್ಷಕನ ಗಮನ ಸೆಳೆಯುತ್ತವೆ. ಇದಕ್ಕೆ ತಕ್ಕಂತೆ ಪಾತ್ರಗಳು ಪರಸ್ಪರ ಎದುರಾದಾಗ ಬಾಯಿಮಾತಿಗಿಂತ ವ್ಯಕ್ತವಾಗುವ ಅವರ ದೇಹ ಭಾಷೆ ಹೇಳಬೇಕಾದ್ದನ್ನು ಹೇಳಲಾಗದ ತುಟಿಯಂಚಿನ ಗಂಡು-ಹೆಣ್ಣಿನ ಭಾವನೆಗಳಿಗೆ ಮೌನ ಸಾಕ್ಷಿಯಾಗುತ್ತವೆ. ಮಾತಿಗಿಂತ ಮೌನವೇ ಇಲ್ಲಿ ತನ್ನ ಹೆಚ್ಚುಗಾರಿಕೆ ತೋರಿಸಿದೆ. ಹೀಗಾಗಿ ಮಾತು ಭಾರ, ಮೌನ ಬಂಗಾರ ಎಂದು ಹೇಳುವ ಚಿತ್ರ ‘ಇನ್ ದಿ ಮೂಡ್ ಫಾರ್ ಲವ್’. ವಾಂಕರ್ ವಾಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಿರ್ಮಿಸಿರುವ ಚಿತ್ರ ಇದು. ಚಿತ್ರಕಥೆ ಬರೆಯುವಲ್ಲಿ ವಿಶೇಷ ತರಬೇತಿ ತೆಗೆದುಕೊಂಡ ವಾಂಗ್ ಹಾಂಕಾಂಗ್್ನ ಸಿದ್ಧ ಸೂತ್ರಗಳ ಸಿನಿಮಾ ತಯಾರಿಕೆಯಿಂದ ದೂರ ಸರಿದು ಹೊಸ ದಾರಿಯ ಚಿತ್ರ ನಿರ್ದೇಶನದ ಕೃಷಿಯಲ್ಲಿ ತೊಡಗಿಕೊಂಡವರು. ವಿಶೇಷ ಅಂದರೆ ವಾಂಗ್ ಇಲ್ಲಿಯವರೆಗೂ ನಿರ್ದೇಶಿಸಿರುವ ಬಹುತೇಕ ಚಿತ್ರಗಳು ಚೀನಾದ ಅತ್ಯುತ್ತಮ 100 ಚಿತ್ರಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಈತನ ಚಿತ್ರಗಳಲ್ಲಿ ಸಾಮಾನ್ಯವಾಗಿ ವಿಶ್ವದ ಪೂರ್ವ ಮತ್ತು ಪಶ್ಚಿಮ ಖಂಡಗಳ ಮಿಲನ, ಪ್ರೇಮ, ಬದುಕಿನ ಶೈಲಿಯಲ್ಲಾಗುತ್ತಿರುವ ಬದಲಾವಣೆಗಳು, ಒಂಟಿತನದ ಒಡ್ಡೋಲಗದಲ್ಲಿ ಸಿಕ್ಕಿಕೊಳ್ಳುವ ಹಾಗೂ ಪ್ರಧಾನವಾಗಿ ನಗರವನ್ನೇ ಅವಲಂಬಿಸಿರುವ ಜನರ ಜೀವನ, ಪರಸ್ಪರ ಸಂಬಂಧಗಳು ಚಿತ್ರದ ಪಾತ್ರ ಮತ್ತು ಕಥೆಯಾಗಿರುತ್ತವೆ. ಹೀಗಾಗಿಯೇ ‘ಇನ್ ದಿ ಮೂಡ್ ಫಾರ್ ಲವ್’ ಚಿತ್ರದಲ್ಲಿ ಕಂಡಿದ್ದನ್ನು ಈತನ ಬೇರೆ ಚಿತ್ರಗಳಾದ ‘ಚುಂಗ್್ಕಿಂಗ್ ಎಕ್ಸ್್ಪ್ರೆಸ್’, ‘ಡೇಸ್ ಆಫ್ ಬೀಯಿಂಗ್ ವೆಲ್’, ‘ಹ್ಯಾಪಿ ಟುಗೆದರ್’ ಹಾಗೂ ‘ಫಾಲನ್ ಏಂಜಲ್ಸ್’ ಸಿನಿಮಾಗಳಲ್ಲೂ ನೋಡಬಹುದು. 1987ರಲ್ಲಿ ಕ್ಯಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡ ಮೊದಲ ಚೀನಿ ನಿರ್ದೇಶಕ ವಾಂಗ್್ನ ‘ಇನ್ ದಿ ಮೂಡ್ ಫಾರ್ ಲವ್್’ ಚಿತ್ರ ಪ್ರಧಾನವಾಗಿ ಸಂಸಾರ, ಸಂಬಂಧ ಹಾಗೂ ಹೆಣ್ಣು, ಗಂಡಿನ ನಡುವಿನ ಭಾವನೆಗಳನ್ನು ಹೇಳುವ ಚಿತ್ರ. ಈ ಚಿತ್ರಕ್ಕೆ ಅತ್ಯುತ್ತಮ ನಟ, ನಿರ್ದೇಶಕ, ಚಿತ್ರ ಸೇರಿದಂತೆ 36 ಪ್ರಶಸ್ತಿ ದೊರೆತಿವೆ. ತಾಂತ್ರಿಕವಾಗಿಯೂ ಅತ್ಯುತ್ತಮ ಚಿತ್ರ ಎನ್ನಿಸಿಕೊಂಡಿರುವ ‘ಇನ್ ದಿ ಮೂಡ್ ಫಾರ್ ಲವ್್’ ಚಿತ್ರದ ಫ್ರೇಮ್್ಗಳಿಗೆ ಬಳಸಿರುವ ಕಲ್ಲರ್ ಕಾಂಬಿನೇಷನ್, ಆಗಾಗ ಬರುವ ರೀರೆಕಾರ್ಡಿಂಗ್ (ಹಿನ್ನೆಲೆ ಸಂಗೀತ), ಕ್ಲೋಸ್್ಅಪ್ ದೃಶ್ಯಗಳಿಗಿಂತಲೂ ಮಧ್ಯಮ (ಮಿಡ್ಲ್) ಹಾಗೂ ದೂರ ದೃಶ್ಯಗಳನ್ನು (ಲಾಂಗ್ ಶಾಟ್) ಹೆಚ್ಚು ಅವಲಂಬಿಸಿದ್ದರೂ ಪಾತ್ರಗಳ ಸಣ್ಣದೊಂದು ಚಲನೆಯೂ ಪ್ರೇಕ್ಷಕನ ಕಣ್ತಪ್ಪಿ ಹೋಗುವುದಿಲ್ಲ. ಈ ನಿಟ್ಟಿನಲ್ಲಿ ಚಿತ್ರದ ಛಾಯಾಗ್ರಾಹಕನ ಮಾಂತ್ರಿಕತೆಯ ಜಾದು ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಪ್ರಮುಖವಾಗಿ ‘ಕಾಣಿಸುವ’ ಹಾಗೂ ‘ಕೇಳಿಸುವ’ ಈ ಎರಡೇ ಅಂಶಗಳು ಪ್ರೇಕ್ಷಕನನ್ನು ಚಿತ್ರದ ಮುಂದೆ ಕೂರಿಸುತ್ತದೆ. ಹಾಗಂತ ಇಲ್ಲಿ ‘ಕಣ್ಣೋಟ’ಕ್ಕೆ ಹೆಚ್ಚು ಕೆಲಸ ಇಲ್ಲವೇ ಇಲ್ಲ ಎಂದು ಹೇಳಲಾಗದು. ಕಥೆ ಸರಳ. 1960ರ ದಶಕದಲ್ಲಿ ನಡೆಯುವ ಕಥೆ ಇದು. ಆಗ ಹಾಂಕಾಂಗ್್ನ ವಸತಿ ಪ್ರದೇಶಗಳು ನಮ್ಮ ರಾಜಧಾನಿಯಲ್ಲಿ ಕಂಡುಬರುವ ಸ್ಲಂಗಳಂತೆಯೇ ಒತ್ತೊತ್ತಾಗಿ ಮನೆಗಳನ್ನು ಒಳಗೊಂಡು ನಿರ್ಮಾಣವಾಗಿರುವ ವಠಾರಗಳು. ಉದ್ಯೋಗಸ್ಥೆಯಾಗಿರುವ ‘ಮಿಸೆಸ್ ಚಾಂಗ್’ ಹಾಗೂ ಪತ್ರಿಕೆಯೊಂದರ ಸಂಪಾದಕನಾಗಿರುವ ‘ಚೌ’ ವಠಾರವೊಂದಲ್ಲಿ ಬಾಡಿಗೆಗೆ ಬರುತ್ತಾರೆ. ಇವರ ಮನೆಗಳೆರಡೂ ಒಂದೇ ವಠಾರದಲ್ಲಿ ಅಕ್ಕ ಪಕ್ಕದಲ್ಲೇ ಇರುತ್ತವೆ. ಮಿಸೆಸ್ ಚಾಂಗ್್ಳ ಪತಿ ಮಿ. ಚಾಂಗ್ ಜಪಾನ್ ಕಂಪನಿಯೊಂದರ ಉದ್ಯೋಗಿ. ಈತ ಮನೆಯಲ್ಲಿರುವುದು ಕಡಿಮೆ. ಹೆಚ್ಚಾಗಿ ವಿದೇಶಗಳಲ್ಲಿ ಈತನ ಓಡಾಟ. ಇನ್ನು ‘ಚೌ’ ಪತ್ನಿ ಕೂಡಾ ಕೆಲಸದ ನಿಮಿತ್ತ ಹೊರಗಡೆ ಸುತ್ತಾಟವೇ ಹೆಚ್ಚಾಗಿರುತ್ತದೆ. ಗಂಡ ಇದ್ದರೂ ಆತನಿಂದ ದೂರ ಇರುವ ಹೆಂಡತಿ ಹಾಗೂ ಪತ್ನಿ ಇದ್ದರೂ ಆಕೆಯಿಂದ ದೂರ ಇರುವ ಗಂಡ. ಈ ದೂರವೇ ಇವರಿಬ್ಬರ ನಡುವೆ ಸ್ನೇಹ ಏರ್ಪಡಲು ಕಾರಣವಾಗುತ್ತದೆ. ಸ್ನೇಹ ಮತ್ತೊಂದು ಹಂತಕ್ಕೆ ಹೋಗಿ ಪರಸ್ಪರ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳುವವರೆಗೂ ತಲುಪುತ್ತದೆ. ವಿವಾಹಿತರಿಬ್ಬರ ಪ್ರೇಮ ಪ್ರಸಂಗ ಮುಂದೇನು? ಎಂಬಲ್ಲಿಗೆ ಚಿತ್ರ ತಲುಪುತ್ತದೆ. ಆದರೆ, ಚಿತ್ರ ಮುಗಿಯುವುದರೊಳಗೆ ನಿರ್ದೇಶಕ ವಾಂಗ್ ತಾನು ಹೇಳಬೇಕಾದ್ದನ್ನು ಹೇಳಿರುತ್ತಾನೆ. ಅಪರಿಚಿತ ಗಂಡು, ಹೆಣ್ಣಿನ ನಡುವೆ ಸ್ನೇಹ, ಸಂಬಂಧ ಬೆಳೆದರೂ ಎಲ್ಲೂ ಅದನ್ನು ವೈಭವೀಕರಿಸುವುದಿಲ್ಲ. ಅತಿರೇಕವಾಗಿಸಿಲ್ಲ. ಅಥವಾ ‘ಮಿಲನ’ವೊಂದೇ ಇವರಿಬ್ಬರ ಉದ್ದೇಶ ಎಂಬ ಕವಿ ಕಾಣದೇ ಹೋದ ‘ರವಿ’ ಕಂಡ ‘ಗಂಡ ಹೆಂಡತಿ’ಯ ಬೆಡ್್ರೂಮ್ ಕಥೆಯನ್ನೂ ನಿರ್ದೇಶಕ ಹೇಳಿಲ್ಲ. ಅಲ್ಲದೆ ಚೌ ಮತ್ತು ಮಿಸೆಸ್ ಚಾಂಗ್ ಎದುರಾದಾಗ ಮಾತುಗಳನ್ನೂ ಕಡಿಮೆ ಮಾಡುವ ನಿರ್ದೇಶಕ, ಹೆಣ್ಣು- ಗಂಡಿನ ನಡುವಿನ ಭಾವನೆಗಳ ವಿನಿಮಯಕ್ಕೆ ಮಾತು ವ್ಯರ್ಥ ಎಂದು ಪರೋಕ್ಷವಾಗಿ ಹೇಳುತ್ತಾನೆ. ಇಡೀ ಕಥೆಯಲ್ಲಿ ಮುಖ್ಯ ಅಥವಾ ಪ್ರಧಾನ ಅಂಶ ಎಂದು ನಿರ್ದಿಷ್ಟಪಡಿಸಿಕೊಳ್ಳದೆ ಆಯಾ ಪಾತ್ರಗಳ ನಿತ್ಯದ ಚಟುವಟಿಕೆಗಳನ್ನೇ ಬಳಸಿಕೊಂಡು ವಾಂಗ್ ತನ್ನ ಚಿತ್ರ ನಿರೂಪಿಸಿದ್ದಾನೆ. ಚಿತ್ರದ ಆರಂಭದಲ್ಲೇ ತೋರಿಸುವ ಇಕ್ಕಟ್ಟಾದ ಕಾರಿಡಾರ್, ಚಿಕ್ಕದಾದ ಬಾಗಿಲು, ಮೆಟ್ಟಿಲುಗಳು ಎರಡು ಪ್ರಧಾನ ಪಾತ್ರಗಳ ವಾಸ್ತವದ ನೆಲೆಯನ್ನು ಬಿಂಬಿಸುತ್ತವೆ. ಇಲ್ಲಿ ಮಿಸೆಸ್ ಚಾಂಗ್ ಮತ್ತು ಚೌ ಬಾಳ ಪಯಣ ಬೇರೆ ಬೇರೆ ಎಂದು ಹೇಳುತ್ತಲೇ ಇಬ್ಬರನ್ನು ಒಗ್ಗೂಡಿಸುವ ಮೂಲಕ ಜೀವನದಲ್ಲಿ ಆಸರೆ, ನಿಕಟ ಸಂಬಂಧದ ಅವಶ್ಯಕತೆ ಇದೆ ಎಂಬುದನ್ನು ನಿರ್ದೇಶಕ ತನ್ನದೇ ಧಾಟಿಯಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾನೆ. ಕೊನೆಗೂ ಇಬ್ಬರು ಬೇರ್ಪಟ್ಟಾಗ ಚೌ ಮಾತ್ರ ಆಕೆಯ ನೆನಪುಗಳನ್ನು ಹಾಗೆಯೇ ಉಳಿಸಿಕೊಂಡಿರುತ್ತಾನೆ. ಈ ಕಾರಣಕ್ಕೆ ಹಲವು ವರ್ಷಗಳ ನಂತರವೂ ಚೌ ಮಿಸೆಸ್ ಚಾಂಗ್್ಳನ್ನು ಹುಡುಕಿಕೊಂಡು ಬಂದಾಗ, ಪಾಳು ಬಿದ್ದ ಕಟ್ಟಡಗಳು, ಮಳೆ ಬಾರದೆ ಮಾಸಿದ ರಸ್ತೆಗಳು ಸಂಬಂಧಗಳ ಗಾಢ ವಾಸ್ತವಿಕತೆಯ ಸಂಕೇತಗಳಂತೆ ಆತನಿಗೆ ಕಾಣತೊಡಗುತ್ತವೆ. ನಿರ್ದೇಶಕ ಚಿತ್ರಕಥೆಯನ್ನು ಕಟ್ಟಿಕೊಡವಲ್ಲಿ ಹೊಸತನ ತೋರಿದ್ದಾನೆ. ಚಿತ್ರದಲ್ಲಿ ನೋಡುವ ಎರಡು ಪಾತ್ರಗಳ ಹೊರತಾಗಿಯೂ ಬೇರೆ ಬೇರೆ ಪಾತ್ರಗಳು ಇದ್ದರೂ ಅವು ನೇರವಾಗಿ ಮುಖಾಮುಖಿಯಾಗದ ರೀತಿಯಲ್ಲಿ (ಉದಾ: ಚೌನ ಪತ್ನಿ, ಚಾಂಗ್್ಳ ಗಂಡ) ಫ್ರೇಮ್್ಗಳನ್ನು ಕಂಪೋಸ್ ಮಾಡಿರುವುದು ಚಿತ್ರದ ಮುಖ್ಯ ಆಕರ್ಷಣೆಗಳಲ್ಲೊಂದು. ಈ ಕಾರಣಕ್ಕೆ ವಾಂಕರ್್ವಾಯ್್ನ ಚಿತ್ರಗಳು ಅತಿ ಸರಳವಾಗಿ ಅರ್ಥ ಮಾಡಿಕೊಳ್ಳಲಾಗದು. ಆದರೆ, ಚಿತ್ರಕಥೆಯ ಒಟ್ಟು ಸಾರಾಂಶ ಗಮನಿಸಿದಾಗ ‘ಕಥೆಯ ತಿರುಳು ಇಷ್ಟೇನಾ?’ ಎಂಬ ಅಭಿಪ್ರಾಯಕ್ಕೆ ಬರುತ್ತೇವೆ. ಅದು ವಾಂಗ್್ನ ಚಿತ್ರಗಳ ನಿರ್ದೇಶನದ ಶೈಲಿ ಕೂಡಾ ಹೌದು. ‘ಇನ್ ದಿ ಮೂಡ್ ಫಾರ್ ಲವ್’ ಚಿತ್ರವನ್ನು ಮತ್ತಷ್ಟು ಅರ್ಥಮಾಡಿಕೊಳ್ಳಬೇಕೆಂದರೆ ಈತನ ‘2046’ ಹಾಗೂ ‘ಡೇಸ್ ಆಫ್ ಬೀಯಿಂಗ್ ವೆಲ್’ ಚಿತ್ರಗಳನ್ನೂ ಒಮ್ಮೆ ನೋಡಬೇಕಾಗುತ್ತದೆ. ಯಾವುದೋ ‘ಕಾರಣ’ಕ್ಕಾಗಿಯೋ, ‘ಅಶ್ಯಕ’ ಎಂಬ ಮನಸ್ಥಿತಿಯಿಂದಲೋ ಅಥವಾ ಆ ‘ಸಂದರ್ಭ’ಗಳಿಗೆ ಮಣಿದು ಸೂಕ್ಷ್ಮ ಮನಸ್ಸಿನ ಗಂಡು ಮತ್ತು ಹೆಣ್ಣು ಒಂದಾದರೂ ಆ ಸಂಬಂಧ ಕೊನೆ ತನಕ ಉಳಿಯುವುದು ಅಸಾಧ್ಯ ಎಂಬ ಸತ್ಯವನ್ನು ಚಿತ್ರ ತೆರೆದಿಡುತ್ತದೆ. ‘ಮಾತು ವಿರಳ. ಮೌನ ಬಂಗಾರ. ಗಂಡು ಮತ್ತು ಹೆಣ್ಣಿನ ನಡುವಿನ ಭಾವನೆಗಳು ಮಾತ್ರ ಎಂದಿಗೂ ಅಮರ’ ಎಂಬ ವಾಣಿ ಚಿತ್ರ ನೋಡಿದ ಮೇಲೆ ಪ್ರೇಕ್ಷಕನಿಗೆ ಅನ್ನಿಸುತ್ತದೆ.  ]]>

‍ಲೇಖಕರು G

June 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This