ನೋಡಿ ಸ್ವಾಮಿ, ನಾವಿರೋದೇ ಹೀಗೆ…

“ಶಿವಾ ಮಡಗಿದಂಗಿರು” ಅಂತಾರೆ.

ಎಲ್ಲರೂ ಹೀಗೆ ಮಡಗಿದಂಗಿರೋದು ಅವರವರ ಸ್ವಂತ ಚರಿತ್ರೆಗಳಲ್ಲಿ ಮಾತ್ರ. ಅಂದರೆ ಪ್ರೊಫೈಲುಗಳಲ್ಲಿ. ಮೊನ್ನೆ ಒಂದಿಷ್ಟು ಪುಸ್ತಕ ಎದುರಿಗಿಟ್ಟುಕೊಂಡು ಕೂತಾಗ ಯಾಕೋ ಈ ಪ್ರೊಫೈಲುಗಳ ಕಡೆ ಮನಸ್ಸು ಹೊರಳಿತು. ಇದಕ್ಕಾಗಿ ಕನ್ನಡದ ಹಲವು ಬ್ಲಾಗುಗಳನ್ನೂ ಹೊಕ್ಕಿ ಬಂದದ್ದಾಯಿತು. ಲೇಖಕರು, “ಬ್ಲಾಗಿ”ಗಳು ಬರೆದುಕೊಂಡ ತಮ್ಮ ಪ್ರೊಫೈಲುಗಳ ವೈವಿಧ್ಯಗಳು ಗೊತ್ತಾದವು. ಹೊಸದಾಗಿ ಓದಿದ್ದರ ಜೊತೆಗೆ ಮುಂಚೆ ಓದಿದ್ದ ಕೆಲವು ಕೂಡ ಧುತ್ತನೆ ನೆನಪಿನ ಜಗುಲಿಯಲ್ಲಿ ಬಂದು ಪೋಸು ಕೊಟ್ಟವು. ಅವುಗಳಲ್ಲಿ ಕೆಲವಂತೂ ಬಲು ಇಷ್ಟವಾದವು. ಅಂಥವುಗಳಲ್ಲಿ ಮೂರನ್ನು ಇಲ್ಲಿ ಒಟ್ಟಿಗೆ ಕೊಡ್ತಿದ್ದೇವೆ. ಇದು, ಅವುಗಳ  ಅಪೀಲ್ ಆಗೋ ಗುಣ ಮತ್ತು ನಾಚದೆ, ಮರೆಮಾಚದೆ ಬಾಜೂ ಬಂದು ಕೂತು “ನಾ ಇಷ್ಟೆ” ಎಂದು ಒಪ್ಪಿಸಿಕೊಳ್ಳುವ ಅಂತರಂಗ ಶುದ್ಧಿ ಗುಣಕ್ಕಾಗಿ.

ನಾವು ಆಯ್ದುಕೊಂಡ ಮೊದಲನೇ ಪ್ರೊಫೈಲು ರವಿ ಬೆಳಗೆರೆ ಅವರದು. “ಅಫಿಡವಿಟ್ಟು” ಎಂಬ ಇಂಟರೆಸ್ಟಿಂಗ್ ಆದ ಹೆಸರಿಂದ ಹಿಡಿದು “ಅನ್ ಇಂಟರೆಸ್ಟಿಂಗ್” ಅನ್ನೋ ಕಡೇ ಶಬ್ದದವರೆಗೂ ಇದು ಡಿಫರೆಂಟಾಗಿದೆ. ನಾವು ಅವರ ಈ ಪ್ರೊಫೈಲನ್ನು ಎತ್ತಿಕೊಂಡಿರೋದು ೨೦೦೨ರಲ್ಲಿ ಪ್ರಕಟವಾದ ಪುಸ್ತಕವೊಂದರಿಂದ. ಅವರ ಆಗಿನ ವಯಸ್ಸು ೪೪. ಇರಲಿ. ಅವರ ವಯಸ್ಸು ೪೪ನ್ನು ದಾಟಿದೆ ಅಂತಾ ಹೇಳೋರಾದ್ರೂ ಯಾರು? ಆದ್ರೂ ಇರ್ಲಿ, ಗೊಂದಲಕ್ಕೆ ಬೀಳದ ಹಾಗೆ ಓದುಗರಿಗೆ ಪಕ್ಕಾ ಲೆಕ್ಕ ಸಿಗ್ಲಿ ಅನ್ನೋ ಒಂದೇ ಒಂದು ಸದುದ್ದೇಶದಿಂದ ಆ ಇನ್ಫರ್ಮೇಷನ್ನನ್ನೂ ಇಲ್ಲಿ ಅಂಟಿಸಿದ್ದೇವೆ.

ಎರಡನೇ ಪ್ರೊಫೈಲು ಜಿ ಎನ್ ಮೋಹನ್ ಅವರದು. ಕ್ಯೂಬಾದ ಬಗ್ಗೆ ಬರೆವಾಗ ಎಂಥ ಕಾವ್ಯಾತ್ಮಕತೆಯಿಂದ ಆ ಕಥೆ ಹೇಳುವ, ಕಾವ್ಯದಲ್ಲಿ ಗಾಂಭೀರ್ಯದ ಮುದ್ರೆ ಮೂಡಿಸುವ ಸಹಜ ಕೌಶಲ್ಯ ಅವರಿಗಿದೆ. ಹೌದೊ ಅಲ್ಲವೊ ಅನ್ನುವ ಹಾಗೆ ಹಾಸ್ಯವನ್ನೂ ಹಚ್ಚಿ ಪರಿಣಾಮಕಾರಿಯಾಗಿ ಬರೆಯಬಲ್ಲರು ಎಂಬುದಕ್ಕೆ ಈ ಪ್ರೊಫೈಲು ಒಂದು ಪ್ರೂಫ್. ಇದರ ಜೊತೆಗೆ ಅವರ ಮಗಳು ಕಿನ್ನರಿ ಬರೆದಿರುವ ಅವರದೇ ಚಿತ್ರವಿದೆ.

ಕಡೆಯದು ಸುಶ್ರುತ ದೊಡ್ಡೇರಿ ಎಂಬ ಮಿತ್ರರದು. ನಾವು ಮಾಡಿಕೊಂಡ ವರ್ಗೀಕರಣದ ಪ್ರಕಾರ, ಮೊದಲ ಇಬ್ಬರು ಲೇಖಕರಾದರೆ ಇವರು ಪಕ್ಕಾ ಬ್ಲಾಗಿ. “ಮೌನಗಾಳ” ಎಂಬ ಸ್ವಂತ ಬ್ಲಾಗ್ ಅಲ್ಲದೆ, ಮಿತ್ರರ ಜೊತೆ ಸೇರಿ “ಮೋಟುಗೋಡೆಯಾಚೆ ಇಣುಕಿ” ಎಂಬ ಮುದ್ದು ಬರುವಂತಿಪ್ಪ, “ಥೂ, ಎಂಥಾ ಪೋಲಿ!” ಎಂದು ಬೆನ್ನು ತಟ್ಟಿಸಿಕೊಳ್ಳಬಲ್ಲಂಥ ಒಂದು ಬ್ಲಾಗನ್ನೂ ಮೆಂಟೈನ್ ಮಾಡ್ತಿದ್ದಾರೆ.

ಇಷ್ಟು ಸಾಕು. ಮುಂದಿರುವುದು ನೀವೂ ಮೂರು ಪ್ರೊಫೈಲುಗಳೂ.

————————————————————————

ಅಫಿಡವಿಟ್ಟು

ravibelagere.jpgರವಣಿಗೆಯೊಂದರಿಂದಲೇ ಅನ್ನ ಮತ್ತು ಆತ್ಮಸಂತೋಷ ದುಡಿದುಕೊಳ್ಳಲು ತೀರ್ಮಾನಿಸಿದಂತೆ ಬದುಕುತ್ತಿರುವವನು ನಾನು. ಬರವಣಿಗೆ ಬಿಟ್ಟು ಬೇರೆ ಏನನ್ನೂ ಮಾಡಲು ನನಗೆ ಬಾರದು ಅಂತ ತೀರ್ಮಾನಿಸಿ ಆಗಿದೆ.

ನನಗೀಗ ನಲವತ್ನಾಲ್ಕು ವರ್ಷ ವಯಸ್ಸು. ಹುಟ್ಟಿದ್ದು ೧೯೫೮ರ ಮಾರ್ಚ್ ೧೫ರಂದು, ಬಳ್ಳಾರಿಯಲ್ಲಿ. ಎರಡು ವರ್ಷ ತುಮಕೂರಿನ ಸಿದ್ಧಗಂಗಾ ಹೈಸ್ಕೂಲಿನಲ್ಲಿ ಓದಿದುದನ್ನು ಬಿಟ್ಟರೆ ಬಿ.ಎ.ವರೆಗಿನ ವ್ಯಾಸಂಗ ನಡೆದದ್ದು ಬಳ್ಳಾರಿಯಲ್ಲಿ. ನಂತರ ಓದಿದ್ದು ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗಾಗಿ; ಧಾರವಾಡದಲ್ಲಿ. ಕೆಲಕಾಲ ಬಳ್ಳಾರಿ, ಹಾಸನ ಮತ್ತು ಹುಬ್ಬಳ್ಳಿಯ ಕಾಲೇಜುಗಳಲ್ಲಿ ಇತಿಹಾಸ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಅದಕ್ಕೆ ಮುಂಚೆ ಮತ್ತು ಅದರ ನಂತರ ಸರಿಸುಮಾರು ಒಂಬತ್ತು ವೃತ್ತಿ ಬದಲಿಸಿದೆ. ಹೈಸ್ಕೂಲು ಮೇಷ್ಟ್ರು, ಹೊಟೇಲ್ ಮಾಣಿ, ರೂಮ್ ಬಾಯ್, ರಿಸೆಪ್ಶನಿಸ್ಟ್, ಹಾಲು ಮಾರುವ ಗೌಳಿ, ದಿನಪತ್ರಿಕೆ ಹಂಚುವ ಹುಡುಗ, ಮೆಡಿಕಲ್ ರೆಪ್ರೆಸೆಂಟೇಟಿವ್, ಪ್ರಿಂಟಿಂಗ್ ಪ್ರೆಸ್ ನ ಮಾಲಿಕ, ಥೇಟರಿನಲ್ಲಿ ಗೇಟ್ ಕೀಪರ್, ಕಾಲೇಜಿನಲ್ಲಿ ಉಪನ್ಯಾಸಕ, ಮನೆಪಾಠದ ಮೇಷ್ಟ್ರು – ಹೀಗೆ ನಾನಾ ಕಡೆ ಮೈಕೈ ಮೆತ್ತಗಾಗಿಸಿಕೊಂಡು ದುಡಿದೆ. ಕರ್ನಾಟಕದ ಅಷ್ಟೂ ಪತ್ರಿಕೆಗಳಿಗೆ ಬರೆದೆ. ಅನೇಕ ಪತ್ರಿಕೆಗಳಿಗೆ ಕೆಲಸ ಮಾಡಿದೆ. ತುಂಬ ಚಿಕ್ಕ ವಯಸ್ಸಿಗೇ ನನಗಿಂತ ಜಾಸ್ತಿ ವಯಸ್ಸಾದ ಪತ್ರಿಕೆಗಳಿಗೆ ಸಂಪಾದಕನಾದೆ. ಈತನಕ ಸರಿಸುಮಾರು ಇಪ್ಪತ್ತು ಪುಸ್ತಕಗಳು ಪ್ರಕಟವಾಗಿವೆ. ಖುಷ್ವಂತ್ ಸಿಂಗ್, ಚಲಂ, ಪ್ರೊತಿಮಾ ಬೇಡಿ, ಬ್ರಿಗೇಡಿಯರ್ ಜಾನ್.ಪಿ ದಳವಿ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, ವಿನೋದ್ ಮೆಹ್ತಾ ಮುಂತಾದವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಪ್ರಶಸ್ತಿ ಕೊಟ್ಟಿದ್ದಾರೆ. ಸಣ್ಣ ಕತೆ ನನ್ನ ಅತಿ ಇಷ್ಟದ ಪ್ರಕಾರ. ಅದರಲ್ಲೂ ಪ್ರಶಸ್ತಿ, ಬಹುಮತಿಗಳು ಬಂದಿವೆ.

ಸದ್ಯಕ್ಕೆ ನಾನು “ಹಾಯ್ ಬೆಂಗಳೂರ್!” ಕನ್ನಡ ವಾರ ಪತ್ರಿಕೆಯ ಸಂಪಾದಕ. ಪ್ರಾರ್ಥನಾ ಎಜುಕೇಶನ್ ಸೊಸೈಟಿಯ ಸಂಸ್ಥಾಪಕ ಕಾರ್ಯದರ್ಶಿ. ಒಬ್ಬ ಹೆಂಡತಿ, ಮೂವರು ಮಕ್ಕಳ ತಂದೆ. ನನ್ನ ಬಗೆಗಿನ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್!

ರವಿ ಬೆಳಗೆರೆ

* * *

ನಾ ಹುಟ್ಟಿದ್ದು ವಡ್ರಳ್ಳಿ

mo.pngನಾ ಹುಟ್ಟಿದ್ದು ವಡ್ರಳ್ಳಿ… ಬೆಳೆದದ್ದು ಬ್ಯಾಡರಳ್ಳಿ… ಮದುವೆ ಆಗಿದ್ ಹಾರ್ನಳ್ಳಿ… ಎಂಬ ಟಿ.ಪಿ.ಕೈಲಾಸಂರವರ ಟಿಪಿಕಲ್ ಹಾಡಿನಂತೆ ನಾನು ಬೆಂಗಳೂರು, ಮಂಗಳೂರು ಹಾಗೂ ಕಲ್ಬುರ್ಗಿಯ ನಡುವಿನ ಪಥಿಕ. ಈಗ ಹೈದ್ರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ ಎಂಬ ಮಾಯಾನಗರಿಯಲ್ಲಿ ವಾಸ. ಈಟಿವಿ ಕನ್ನಡ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥ.

ಎಂ.ಬಿ.ಸಿಂಗ್, ಜಿ.ಎಸ್.ಸದಾಶಿವರೆಂಬ ಮಾಂತ್ರಿಕರ ಅಖಾಡಾದಲ್ಲಿ ತಾಲೀಮು. ಪ್ರಜಾವಾಣಿಯಲ್ಲಿ ೧೨ ವರ್ಷಗಳ ಕಾಲ ಪ್ರಯೋಗ. ಈ ಕಾರಣದಿಂದಾಗಿಯೇ ಕಡಲ ಕಿನಾರೆಯ ನಗರಿ ಮಂಗಳೂರಿಗೆ, ಇವ ನಮ್ಮವ ಇವ ನಮ್ಮವ ಎನ್ನುವ ಕಲ್ಬುರ್ಗಿಗೆ ಪಯಣ. ಕೊಟ್ಟಿದ್ದಕ್ಕಿಂತ ಪಡೆದ ಅನುಭವವೇ ಸಾಕಷ್ಟು.

ಮಂಗಳೂರು ಎಂಬ ನಗರಿ ಮನಸಲ್ಲಿ ಕೂರಿಸಿದ್ದ ಚಿತ್ರಸಂತೆಯಿಂದಾಗಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಜಿಗಿತ. ಪೆನ್ ಬದಲು ಕ್ಯಾಮರಾ ಮೂಲಕ ಮಾತಾಡುವ ಅವಕಾಶ. ಈಟಿವಿಯಲ್ಲಿ ಹಿರಿಯ ವರದಿಗಾರನಾಗಿ, ಪ್ರಿನ್ಸಿಪಲ್ ಕರೆಸ್ಪಾಂಡೆಂಟ್ ಆಗಿ ನಂತರ ಈಗ ಮುಖ್ಯಸ್ಥ.

ಚಲನಚಿತ್ರ, ಟಿವಿ, ಜಾನಪದ ಹೀಗೆ ಸಿಕ್ಕಿದ್ದೆಲ್ಲಾ ಬರೆಯುತ್ತಾ ಕೊನೆಗೆ ಇವೆಲ್ಲಾ ಬೇಡ ಎಂದು ತೀರ್ಮಾನಿಸಿ ಮಾಧ್ಯಮ ವಿಶ್ಲೇಷಣೆ ಎಂಬ ಬಸ್ ಸ್ಟಾಂಡ್ ನಲ್ಲಿ ವಾಸ. ಈ ಕಾರಣಕ್ಕಾಗಿಯೇ ಜಗತ್ತು ಅರಿಯುವ ಅವಕಾಶ. ಕ್ಯೂಬಾದಲ್ಲಿ ಜರುಗಿದ ಅಂತಾರಾಷ್ಟ್ರೀಯ ಯುವ ಪತ್ರಕರ್ತರ ಸಮಾವೇಶದಲ್ಲಿ ಭಾರತದ ಪ್ರತಿನಿಧಿ. ಈ ಪುಸ್ತಕಕ್ಕೆ ಆಧಾರ. ನಂತರ ಈಟಿವಿಯ ವತಿಯಿಂದ ಸಿಎನ್ ಎನ್ ಚಾನಲ್ ಜೊತೆಗೆ ಕೈ ಕುಲುಕಲು ಅಮೆರಿಕಾಗೆ ಪಯಣ.

ಬರೆದದ್ದು ಹಲವಷ್ಟು. ಆದರೆ ಇಷ್ಟವಾಗಿದ್ದು ಈ ಪ್ರವಾಸ ಕಥನ. ಎಕ್ಕುಂಡಿಯ ಬೆನ್ನು ಹತ್ತಿದ “ಎಕ್ಕುಂಡಿ ನಮನ”. ಮಾಧ್ಯಮದ ಬಗ್ಗೆ ಬರೆದದ್ದು ಈಗ ನ್ಯೂಸ್ ಪೇಪರ್ ಭಾಷೆಯಂತೆ ನಿನ್ನೆಯ ಇತಿಹಾಸ ಅಥವಾ ಇಂದಿಗೆ ರದ್ದಿ. ಜಾನಪದದ ಬಗ್ಗೆ ಎಡಿಟ್ ಮಾಡಿದ ಪುಸ್ತಕಕ್ಕಿಂತ ಬರೆದ ಮುನ್ನುಡಿ “ಮಡಿಲಕ್ಕಿ”ಯೇ ಇಷ್ಟ. “ಸೋನೆ ಮಳೆಯ ಸಂಜೆ” ಕವನ ಸಂಕಲನ ಪ್ರೀತಿಯ ಹೂಗುಚ್ಛವೇ ಎಂಬ ಅನುಮಾನ. ಪ್ರೀತಿ ಸೋನೆಯಲ್ಲಿ ತೊಯ್ದಿದ್ದು ಮಾತ್ರ ದಿಟ.

ಯಾಕೋ ಗೊತ್ತಿಲ್ಲ ಗಾಳಿಪಟ ಅಂದ್ರೆ ತುಂಬಾ ಇಷ್ಟ. ಗೂಡು ಕಟ್ಟಿಕೊಂಡು ಯಾರ ಕೈಗೂ ಸಿಗದೆ ಒಳಗೇ ಉಳಿಯುತ್ತಲ್ಲಾ ಹುಳ ಅದನ್ನ ಕಂಡ್ರೆ ನಂಗೂ ಹಾಗಾಗ್ಬೇಕು ಅನ್ನೋ…. ಚಿನ್ನ ಚಿನ್ನ ಆಸೈ.

ಜಿ.ಎನ್.ಮೋಹನ್

* * *

ನಾನು ಹುಟ್ಟಿದ್ದು ನನಗೆ ನೆನಪಿಲ್ಲ

sushruta.jpgಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬಿ.ದೊಡ್ಡೇರಿ ಎಂಬ ಪುಟ್ಟ ಹಳ್ಳಿಯಲ್ಲಿ ಸಾವಿರದೊಂಭೈನೂರ ಎಂಬತ್ತದೈನೇ ಇಸವಿ ಮೇ ತಿಂಗಳ ಹನ್ನೆರಡೇ ತಾರೀಖು ರಾತ್ರಿ ಹತ್ತು ಗಂಟೆ ಹೊತ್ತಿಗೆ ಗೌರಮ್ಮ ಮತ್ತು ಶ್ರೀಧರ ಮೂರ್ತಿ ಎಂಬ ದಂಪತಿಗಳ ಪುತ್ರನಾಗಿ ನಾನು ಹುಟ್ಟಿದ್ದು ನನಗೆ ನೆನಪಿಲ್ಲ; ಕೇಳಿ ತಿಳಿದಿದ್ದೇನೆ ಅಷ್ಟೆ. ನನಗೆ ನೆನಪಿರುವುದು ಅಂದರೆ ಅದೇ ಊರಿನಲ್ಲಿ ಗೆಳೆಯರೊಂದಿಗೆ ಅನ್ನ-ಆಸೆ, ಚಿನ್ನಿ-ದಾಂಡು, ಕಳ್ಳ-ಪೋಲೀಸ್, ಕೆರೆ-ದಡ, ಹುಲಿ-ಹಸು ಆಟಗಳನ್ನು ಆಡಿದ್ದು. ಅಪ್ಪ ನನಗಾಗಿ ಬಾಲಮಂಗಳ ತಂದುಕೊಡುವುದರೊಂದಿಗೆ ನಾನು ಪಠ್ಯೇತರ ಓದಿಗೆ ನನ್ನನ್ನು ತೊಡಗಿಸಿಕೊಂಡೆ. ಸಾಹಿತ್ಯಾಸಕ್ತನಾಗಿದ್ದ ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳ ಮೇಲೆ, ಮನೆಗೆ ಬರುತ್ತಿದ್ದ ಮ್ಯಾಗಜೀನುಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಹಾಗೇ ಸಾಹಿತ್ಯದಲ್ಲಿ ಆಸಕ್ತಿ ಕುದುರಿತು. ಈಗಂತೂ ಫುಲ್-ಟೈಮ್ ಸಾಹಿತ್ಯಾಸಕ್ತ!

ನನ್ನ ಡಿಪ್ಲೋಮಾ ಓದನ್ನು ಸೊರಬದಲ್ಲಿ ಮುಗಿಸಿ ಮುಂದೆ “ಏನೇನೋ” ಮಾಡಬೇಕು ಎಂದುಕೊಂಡು, ಕನಸಗಳನ್ನು ತುಂಬಿದ ದೊಡ್ಡ ಮೂಟೆಯೊಂದನ್ನು ಹೊತ್ತುಕೊಂಡು ಬೆಂಗಳೂರಿಗೆ “ಹಾರಿ” ಬರುವುದರೊಂದಿಗೆ ನನ್ನ ಬದುಕಿನ ಎರಡನೇ ಮಜಲು ಶುರುವಾಗಿದೆ. ನನ್ನ ಸಾಹಿತ್ಯಾಸಕ್ತಿಯನ್ನು ತಣಿಸಲೋಸುಗ ಓದಿದ, ಓದುತ್ತಿರುವ ಫಲವಾಗಿ ಈಗೀಗ ಅಷ್ಟಿಷ್ಟು ಬರೆಯುತ್ತಿದ್ದೇನೆ. ಹಿಂದೆ ಮೂರ್ನಾಲ್ಕು ಬಾರಿ ಕವಿತೆ-ಗಿವಿತೆ ಗೀಚಿ ಅದು ಆ-ಈ-ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಸುಳ್ಳೇನಲ್ಲ. ಈಗ, ನಾನು “ಈಗಿನ ಕಾಲದವ”ನಾದ್ದರಿಂದ, ಬರೆದಿದ್ದನ್ನೆಲ್ಲ ಒಂದು ಬ್ಲಾಗು ಓಪನ್ನು ಮಾಡಿ ಅದರಲ್ಲಿ ಬಸಿದಿಡುವುದನ್ನು ರೂಢಿಸಿಕೊಂಡಿದ್ದೇನೆ. ಆ ಬ್ಲಾಗಿನಲ್ಲಿ ನನ್ನ ಸವಿನೆನಪುಗಳು, ಭಾರೀ ಕನಸುಗಳು ಮತ್ತು ಇವುಗಳ ತಪನೆಯಲ್ಲೇ ಕಳೆದುಹೋಗುತ್ತಿರುವ ನನ್ನ “ಇವತ್ತು”ಗಳ ಚಿತ್ರಣ ನಿಮಗೆ ಸಿಗುತ್ತದೆ.

ಸುಶ್ರುತ ದೊಡ್ಡೇರಿ

‍ಲೇಖಕರು avadhi

July 16, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: