ಪಂಜರದಲ್ಲಿ ಸಿಕ್ಕಿಬಿದ್ದ ಒಂಟಿ ಪಕ್ಷಿ!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಪ್ರತಿಸಂಚಿಕೆಯನ್ನೂ ನವನವೋನ್ಮೇಷಶಾಲಿಯಾಗಿ ರೂಪಿಸುವ ‘ಸುಧಾ’ ‘ಮಯೂರ’ಗಳ ಕೆಲಸ ಸೃಜನಾತ್ಮಕವಾಗಿ ಹೆಚ್ಚು ಸವಾಲಿನದಾಗಿತ್ತು. ಲೇಖನ, ಕಥೆ, ಕಾದಂಬರಿಗಳ ಆಯ್ಕೆ ಜೊತೆಗೆ ಚಿತ್ರಗಳನ್ನು/ಒಳ್ಳೆಯ ಗುಣಮಟ್ಟದ ಕಲರ್ ಟ್ರಾನ್ಸ್ ಪರೆನ್ಸಿಗಳನ್ನು ಹೊಂದಿಸುವುದು ಕಷ್ಟದ ಕೆಲಸವಾಗಿತ್ತು.

ಸುಧಾ, ಮಯೂರಗಳ ಮುಖಪುಟ ಮಾಡ್ರನ್ ಪ್ರೋಸೆಸ್ ನಲ್ಲಿ ಪ್ರಿಂಟ್ ಆಗುತ್ತಿತ್ತು. ಮುಖಪುಟ ಚಿತ್ರದ ಟ್ರಾನ್ಸ್ ಪರೆನ್ಸಿಗಳನ್ನು ಮಾಡ್ರನ್ ಪ್ರೋಸೆಸ್ ನವರು ಬಡಪಟ್ಟಿಗೆ ಒಪ್ಪುತ್ತಿರಲಿಲ್ಲ. ರಿಪ್ರೊಡಕ್ಷನ್ ಚೆನ್ನಾಗಿ ಬರಲ್ಲ ಎಂದು ವಾಪಸು ಮಾಡುತ್ತಿದ್ದರು. ಆದ್ದರಿಂದ ಮುಖಪುಟದ ಲೇಖನದಂತೆಯೇ ಒಳ್ಳೆಯ ಗುಣಮಟ್ಟದ ಟಾನ್ಸಪರೆನ್ಸಿಗಳನ್ನು ತಲಾಶ್ ಮಾಡುವುದು ಕೆಲವೊಮ್ಮೆ ಹರಸಾಹಸವೇ ಆಗುತ್ತಿತ್ತು.

ಪುಣ್ಯವಶಾತ್ ನನಗೆ ಟಿ ಎಸ್ ಸತ್ಯನ್, ಇ ಹನುಮಂತರಾವ್, ಧೀರಜ್ ಚಾವ್ಡಾ, ಪೆರುಮಾಳ್, ಕೃಪಾಕರ ಸೇನಾನಿ, ರವೀಶ ಕಾಸರವಳ್ಳಿ, ಡಿ ಸಿ ನಾಗೇಶ್, ರಾಜಾರಾಮ್, ಮೈಸೂರಿನ ತಿಪ್ಪೇಸ್ವಾಮಿ ಅವರಂಥ ಹೆಸರಾಂತ ಛಾಯಾಚಿತ್ರ ಗ್ರಾಹಕರುಗಳ ಪರಿಚಯ/ಸ್ನೇಹ  ಇದ್ದುದರಿಂದ ಕಷ್ಟಕರವೆನಿಸಲಿಲ್ಲ. ಅವರುಗಳಲ್ಲಿ ಸತ್ಯನ್, ಹನುಮಂತ ರಾವ್, ಚಾವ್ಡಾ ಅವರುಗಳು ವ್ಯವಹಾರಿಕವಾಗಿ ಬಹಳ ಕಟ್ಟುನಿಟ್ಟಿನವರಾಗಿದ್ದರು.

ಒಂದು ಟ್ರಾನ್ಸ್ ಪರೆನ್ಸಿಯನ್ನು ಅಥವಾ ಪ್ರಿಂಟನ್ನು ಒಂದು ಮುದ್ರಣಕ್ಕೆ ಮಾತ್ರ ಉಪಯೋಗಿಸಬೇಕು, ಒಂದು ಮುದ್ರಣಕ್ಕೆ ಉಪಯೋಗಿಸಿದ ನಂತರ ಹಿಂದಿರುಗಿಸಬೇಕು, ಇಂತಿಷ್ಟು ಸಂಭಾವನೆ ನೀಡಬೇಕು -ಹೀಗೆ ಕೆಲವೊಂದು ಷರತ್ತುಗಳನ್ನು ವಿಧಿಸುತ್ತಿದ್ದರು. ಅವರುಗಳೆಲ್ಲ ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರ ಗ್ರಾಹಕರಾಗಿದ್ದರು. ಎಂದೇ ಅವರ ಸಲುವಾಗಿ 250ರಿಂದ 350ರವರೆಗೆ ವಿಶೇಷ ಸಂಭಾವನೆ  ಪಾವತಿಸಲು ಆಡಳಿತವರ್ಗದ ಅನುಮತಿ ಪಡೆದಿದ್ದೆ.

ಬೆಂಗಳೂರಿನ ಯುಪಿಎಸ್ ಯೂಥ್ ಫೋಟೋಗ್ರಾಫಿಕ್ ಸೊಸೈಟಿಯೂ ಕೆಲವೊಮ್ಮೆ ನಮ್ಮ ನೆರವಿಗೆ ಬರುತ್ತಿತ್ತು. ನಮ್ಮ ನಿದೇರ್ಶಶಕರುಗಳಲ್ಲಿ ಒಬ್ಬರಾದ ಶ್ರೀ ಕೆ ಎನ್ ಶಾಂತ ಕುಮಾರ್ ಅವರು ಸ್ವತಃ ಉತ್ತಮ ಕ್ರೀಡಾ ಛಾಯಾಗ್ರಾಹಕರೆಂದು ಮಾನಿತರಾಗಿದ್ದರು. ಒಲಿಂಪಿಕ್ ಕ್ರೀಡಾ ಸ್ಪರ್ಧೆಗಳ ಸಂದರ್ಭದಲ್ಲಿ ಅವರ ಸುಂದರ ಚಿತ್ರಗಳು ‘ಸುಧಾ’ದ ಚೆಲುವನ್ನು ಇಮ್ಮಡಿಗೊಳಿಸುತ್ತಿದ್ದವು.

ಒಂದೊಂದು ಸಂಚಿಕೆಯೂ, ಯುಗಾದಿ ವಿಶೇಷಾಂಕಗಳು ನಮ್ಮ ಸೃಜನಶೀಲತೆಗೆ, ಕಾರ್ಯಕ್ಷಮತೆಗೆ ಸವಾಲಾಗಿರುತ್ತಿದ್ದವು. ಈ ಪ್ರಕ್ರಿಯೆಯಲ್ಲಿ ಸುಧಾ/ಮಯೂರ ಹೆಚ್ಚು ಸೃಜನಶೀಲನಾಗುತ್ತಿದೆ, ವಿಚಾರ ಪ್ರಧಾನವಾಗುತ್ತಿದೆ, ಎಂಬ ಅಲ್ಪ ತೃಪ್ತಿಯೂ ದೊರೆಯುತ್ತಿತ್ತು. ಪ್ರತಿ ಸಂಚಿಕೆ ಹೊರಬಂದಾಗಲೂ ಅದರ ಸೌಂದರ್ಯಕ್ಕೆ ಹಿಗ್ಗುತ್ತಾ, ಅದರ ಸಮಗ್ರ ಚೆಲುವಿಗೆ ಎಲ್ಲಿ ಊನವಾಯಿತು ಎಂದು ಅವಲೋಕಿಸುತ್ತಾ, ಅದನ್ನು ತಪ್ಪಿಸಿ ಸುಧಾರಣೆಗೊಳ್ಳುವುದು ಹೇಗೆ ಎಂದು ಧ್ಯಾನಿಸುತ್ತಾ ನಾನು ಮತ್ತು ನನ್ನ ಸಹೋದ್ಯೋಗಿಗಳು  ಹೆಜ್ಜೆ ಹಾಕುತ್ತಿದ್ದೆವು.

ಸುಧಾ, ಮಯೂರಗಳ ಎರಡು ದೋಣಿಗಳ ಪಯಣ ಹೀಗೆ ಸಾಗುತ್ತಿದ್ದಂತೆ, 1994ರ ಜುಲೈ ತಿಂಗಳ ಒಂದು ದಿನ ಸಂಜೆ ಪ್ರಧಾನ ಸಂಪಾದಕರೂ ಮ್ಯಾನೇಜಿಂಗ್ ಡೈರೆಕ್ಟರೂ ಆಗಿದ್ದ ಶ್ರೀ ಕೆ ಎನ್ ಹರಿಕುಮಾರ್ ಅವರಿಂದ ಕರೆ ಬಂತು. ಎಲ್ಲಿ ಏನು ಪ್ರಮಾದವಾಗಿದೆಯೋ ಎಂಬ ಧಾವಂತದಲ್ಲೆ ನಾನು ಅವರ ಚೇಂಬರಿಗೆ ಧಾವಿಸಿದೆ. ಸುಧಾ, ಮಯೂರಗಳ ಬಗ್ಗೆ ಕೆಲವೊಂದು ಮಾತುಗಳನ್ನಾಡಿದ ನಂತರ ಶ್ರೀ ಹರಿಕುಮಾರ್  ಅವರು, ನಾನು ‘ಪ್ರವಾ’ದಲ್ಲೂ ಹೆಚ್ಚಿನ ಜವಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ತಾವು ಬಯಸುವುದಾಗಿ ಪೀಠಿಕೆ ಹಾಕಿದರು.

ಬಿಎಂಕೆ ನಂತರ ಅಸೋಸಿಯೇಟೆಡ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ ರಾಮಣ್ಣನವರು ನಿವೃತ್ತಿ ಹೊಂದಲಿದ್ದರು. ಅವರ ಜವಬ್ದಾರಿಯನ್ನು ನಾನು ವಹಿಸಿಕೊಳ್ಳಬೇಕೆಂದು ಆಡಳಿತವರ್ಗ ತೀರ್ಮಾನಿಸಿರುವುದಾಗಿ ಶ್ರೀ ಹರಿಕುಮಾರ್ ಅವರು ತಿಳಿಸಿದರು. ಹಾಗೂ ಇನ್ನಿಬ್ಬರು ನಿದೇರ್ಶಕರುಗಳನ್ನು ಭೇಟಿ ಮಾಡುವಂತೆಯೂ ತಿಳಿಸಿದರು. ಇನ್ನಿಬ್ಬರು ನಿರ್ದೇಶಕರುಗಳೂ ಇದೇ ಇಂಗಿತ ನೀಡಿದರು ಹಾಗೂ ನಾನು ಆ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಬಲ್ಲೆ ಎಂಬ ಭರವಸೆ ತಮಗಿರುವುದಾಗಿಯೂ ತಿಳಿಸಿ ಶುಭ ಕೋರಿದರು.

ಇದನ್ನು ನಾನು ಬಯಸಿರಲಿಲ್ಲ. ಇದು ನನಗೆ ಅನಿರೀಕ್ಷಿತವಾಗಿತ್ತು. ನಾನು ಸುಧಾ-ಮಯೂರಗಳ ಕೆಲಸದಲ್ಲಿ ತೃಪ್ತನಾಗಿದ್ದೆ. ಈ ಹೊಸ ಹೊಣೆಗಾರಿಕೆ ಬಗ್ಗೆ ನಾನು ಯೋಚಿಸುವಂತಾಯಿತು. ಮೊದಲನೆಯದಾಗಿ ಜಿ ಎಸ್ ಸದಾಶಿವ ನನಗಿಂತ ಸೇವೆಯಲ್ಲಿ ಹಿರಿಯರಾಗಿದ್ದರು. ಅವರ ನಂತರದ ಸೇವಾಹಿರಿತನ ನನ್ನದು. ಅವರನ್ನು ಕಡೆಗಣಿಸಿ ನನ್ನೇಕೆ ಆಯ್ಕೆ ಮಾಡಿದಾರೆ ಎಂಬ ಗುಂಗಿಹುಳ ನನ್ನ ತಲೆ ಹೊಕ್ಕಿತು.

ಸದಾಶಿವ ಮತ್ತು ನಾನು ಕೇವಲ ಸಹೋದ್ಯೋಗಿಗಳಷ್ಟೆ ಆಗಿರಲಿಲ್ಲ, ಆಪ್ತಮಿತ್ರರಾಗಿದ್ದೆವು. ಹೀಗಿರುವಾಗ ಅವರನ್ನು ನಾನು ಅಧೀನರಾಗಿ ಕಾಣುವುದು ಕನಸಿನಲ್ಲೂ ನನಗೆ ಅಸಾಧ್ಯವಾಗಿತ್ತು. ಜೊತೆಗೆ ಈ ಹುದ್ದೆಗಾಗಿ ನಾನು ತಮ್ಮ ವಿರುದ್ಧ ಲಾಬಿ ಮಾಡಿರಬಹುದೆ ಎನ್ನುವ ತಪ್ಪು ತಿಳಿವಳಿಕೆ ಸದಾಶಿವನಲ್ಲಿ ಮೂಡಬಹುದೇ ಎಂಬ ಆಲೋಚನೆಯೇ ನನ್ನಲ್ಲಿ ತೀವ್ರವಾದ ಮಾನಸಿಕ ತಳಮಳವನ್ನುಂಟು ಮಾಡಿತು.

ಇಡೀ ರಾತ್ರಿ ಇದೇ ಯೋಚನೆ. ಮರುದಿನ ಆಫೀಸಿಗೆ ಹೋದ ನಂತರ ನೇರವಾಗಿ ಸದಾಶಿವ ಕುಳಿತಿದ್ದ ಜಾಗಕ್ಕೆ ಹೋಗಿ ಹಿಂದಿನ ದಿವಸ ನನಗೆ ನಿದೇರ್ಶಶಕರುಗಳಿಂದ ದೊರೆತ ಸೂಚನೆಯನ್ನು ತಿಳಿಸಿದೆ. ಅವರು ನನನ್ನು ಅಭಿನಂದಿಸಲು ಮುಂದಾದರು. ನಾನು, “ಇಲ್ಲ ಸ್ವಲ್ಪ ತಡೆಯಿರಿ, ನನ್ನ ಮಾತನ್ನು ಮನಗೊಟ್ಟು ಕೇಳಿಸಿಕೊಳ್ಳಿ” ಎಂದೆ.

“ಹೇಳೀ” ಎಂದರು.

“ನೀವು ‘ಪ್ರವಾ’ ಸಂಪಾದಕೀಯದಲ್ಲಿ ನನಗಿಂತ ಹಿರಿಯರು/ಸೇವಾ ಹಿರಿತನ ಮತ್ತೆಲ್ಲ ಅರ್ಹತೆಗಳ  ಪ್ರಕಾರ ಈ ಹುದ್ದೆಗೆ ನೀವು ಅರ್ಹರು. ಅದು ನಿಮಗೇ ಸಿಗಬೇಕು. ಆದರೆ ಆಡಳಿತ ವರ್ಗ ಏಕೆ ಈ ನಿರ್ಧಾರ ತೆಗೆದುಕೊಂಡಿದೆಯೋ ನನಗೆ ತಿಳಿಯದು. ಎಂದೇ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಇದಕ್ಕಾಗಿ ಎಂದೂ ಪ್ರಯತ್ನಿಸಿದವನಲ್ಲ, ಅದೂ ನಿಮ್ಮ ವಿರುದ್ಧವಾಗಿ. ನೀವು ನನ್ನ ಈ ಮಾತುಗಳನ್ನು ನಂಬಬೇಕು”

ಸದಾಶಿವ ಎಂದಿನಂತೆ ನಿರುದ್ವಿಗ್ನರಾಗಿ ಮೆಲು ದನಿಯಲ್ಲಿ ನುಡಿದರು:

“ರಂಗನಾಥ ರಾವ್, ಡೋಂಟ್ ಗೆಟ್ ಎಕ್ಸೈಟೆಡ್ ಆರ್ ಎಮೋಷನಲ್. ಆಡಳಿತ ವರ್ಗದ ಈ ನಿರ್ಧಾರದಿಂದ ನಿಮ್ಮಷ್ಟೇ ನನಗೂ ಆಘಾತವಾಗಿದೆ. ಆಡಳಿತವರ್ಗ ಏಕೆ ನನ್ನ ಸೇವಾ ಹಿರಿತನವನ್ನು ಕಡೆಗಣಿಸತೋ ತಿಳಿಯದು. ಅಥವಾ ನನ್ನಲ್ಲಿ ಏನು ಕೊರತೆ ಕಂಡಿತೋ ತಿಳಿಯದು. ಆದರೆ ಆಡಳಿತ ವರ್ಗದ ಈ ನಿರ್ಧಾರದ ಹಿಂದೆ ಬೇರೆ ಪರಿಗಣನೆಗಳಿರಬೇಕು. ನಿಮ್ಮನ್ನು ತಪ್ಪು ತಿಳಿಯುವ ಪ್ರಶ್ನೆಯೇ ಇಲ್ಲ. ನೀವು ಈ ಹುದ್ದೆಗಾಗಿ ನನ್ನ ವಿರುದ್ಧ ಲಾಬಿ ಮಾಡಿದ್ದೀರಿ ಎಂದು ನಾನು ಕನಸುಮನಸಿನಲ್ಲೂ ಯೋಚಿಸಲಾರೆ. ಅಂಥ ಗಿಲ್ಟ್ ನಿಮ್ಮಲ್ಲಿ ಏಕೆ ಬಂತೋ ಗೊತ್ತಾಗುತ್ತಿಲ್ಲ. ನೀವು ಹೊಸ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಿ. ನಿಮಗೆ ನನ್ನ ಸಹಕಾರವಿರುತ್ತದೆ. ನಿಮಗೆ ಶುಭವಾಗಲಿ.”

ಆದರೆ ನೀತಿ, ನೈತಿಕತೆ ಎಂಬುದು ಇದೆಯಲ್ಲ. ಪ್ರತಿಯೊಂದು ನಿರ್ಧಾರದಲ್ಲೂ ನಮ್ಮ ನೈತಿಕ ಹೊಣೆ ಇರುತ್ತದೆ. ಸದಾಶಿವನಿಗೆ ಆಗುತ್ತಿರುವ ಅನ್ಯಾಯದಲ್ಲೀ ನಾನೂ ಭಾಗಿಯಾಗುತ್ತಿದ್ದೇನಲ್ಲ. ಇದರಲ್ಲಿ ನನ್ನ ಸ್ವಾರ್ಥ ಇರಬಹುದೆ? ಅಥವಾ ನಾನು ಸಾಂದರ್ಭಿಕ ಬಲಿಪಶುವೆ?

“ನಿಮಗೆ ಅನ್ಯಾಯವಾಗುತ್ತಿದೆ. ಅದಕ್ಕೆ ನೈತಿಕವಾಗಿ ನಾನೂ ಹೊಣೆಗಾರನಾಗುತ್ತೇನಲ್ಲ. ಎಂದೇ ನನಗೆ ಇದು ಬೇಡ ಎನ್ನಿಸುತ್ತಿದೆ. ಜೊತೆಗೆ ನಾನು ಈ ಹುದ್ದೆಯನ್ನು ಬಯಸಿರಲಿಲ್ಲ, ಇದರ ಆಕಾಂಕ್ಷಿಯಾಗಿರಲಿಲ್ಲ. ನನಗೆ ಬೇಡವೆನ್ನಿಸುತ್ತಿದೆ. ನಾನು ‘ಸುಧಾ’ದಲ್ಲಿ ಸುಖವಾಗಿದ್ದೇನೆ.”

“ರಂಗನಾಥ ರಾವ್, ಜರ್ನಲಿಸಮ್ ಈಸ್ ಎಂಟರಿಂಗ್ ಇನ್‍ ಟು ಎ ನ್ಯೂ ಎರಾ ಆಫ್ ಮ್ಯಾನೇಜ್‍ಮೆಂಟ್. ಕಾಲಿಟ್ ಕಾರ್ಪೊರೇಟ್ ಆರ್ ಸಮ್ ಥಿಂಗ್.. ಮುಂದಿನ  ದಿನಗಳು ಇಂದಿನಂತಿರುವುದಿಲ್ಲ. ದೇರ್ ವಿಲ್ ಬಿ ಹೈರಿಂಗ್ ಅಂಡ್ ಫೈರಿಂಗ್. ನಾವು ಇದಕ್ಕೆಲ್ಲ ಸಿದ್ಧವಾಗಬೇಕು. ನನ್ನ ಬಗ್ಗೆ ಕಾಳಜಿ ಮಾಡಬೇಡಿ. ನೀವು ಇದನ್ನು ಒಪ್ಪಿಕೊಳ್ಳದೇ ಹೋದರೆ ಹೇಡಿಯಾಗುತ್ತೀರಿ. ಆ ಜಾಗಕ್ಕೆ ನಮ್ಮಿಬ್ಬರ ಜೂನಿಯರ್ ಒಬ್ಬರು ಬರಬಹದು ಅಥವಾ ಹೊರಗಿನವರು ಬರಬಹುದು. ಆಗ ಇಲ್ಲಿ ನಿಮ್ಮ ಬದುಕು ಯಾತನಮಯವಾಗಬಹುದು, ಯೋಚಿಸಿ.”

“ವಾಟೆಬೌಟ್ ಯು?”

“ಇಟೀಸ ಆಲ್‍ರೆಡಿ ಸೀಲ್ಡ್ ಹಿಯರ್’

ಸದಾಶಿವ ಸ್ಥಿತಪ್ರಜ್ಞರಂತೆ ಮಾತಾಡಿದ್ದರು.

ತಮ್ಮ ಸೇವಾಹಿರಿತನವನ್ನು ಕಡೆಗಣಿಸಿದ್ದರಿಂದ ಸದಾಶಿವನಿಗೆ ಸಹಜವಾಗಿಯೇ ನೋವಾಗಿತ್ತು. ಪ್ರಜಾವಾಣಿಯ ಈವರೆಗಿನ ಬೆಳವಣಿಗೆಯಲ್ಲಿ ಅವರ ‘ಕೊಡುಗೆ’ ಇತ್ತು. ಆದರೆ ಅದು ಗಣನೆಗೆ ಬಂದಂತೆ ತೋರಲಿಲ್ಲ. ಅವರ ನೋವಿಗೆ, ಅವರಿಗೆ ಸಲ್ಲಬೇಕಾದ್ದನ್ನು ಅಪ್ರಯತ್ನಾಪೂರ್ವಕವಾಗಿ ಕಿತ್ತುಕೊಂಡು ನಾನು ಅವರ ನೋವಿಗೆ ಕಾರಣನಾದೆ ಎಂಬ ‘ಅಪರಾಧ ಪ್ರಜ್ಞೆ’ ನನ್ನನ್ನು ಕಾಡಿತು.

ಸದಾಶಿವ ನಂ. 16, ಮಹಾತ್ಮಗಾಂಧಿ ರಸ್ತೆಯೊಂದಿಗಿನ ಸಂಬಂಧದಿಂದ ದೂರವಾಗಲು ನಿಶ್ಚಯಿಸಿದ್ದಂತೆ ತೋರುತ್ತಿತ್ತು. ಕೆಲವೇ ದಿನಗಳಲ್ಲಿ ಅವರು ರಾಜೀನಾಮೆ ಕೊಟ್ಟರು. ಅವರು ಕನ್ನಡಪ್ರಭ ಸೇರಲಿದ್ದರು. ಅವರು ಕೇವಲ ನನ್ನ ಸಹೋದ್ಯೋಗಿ, ಸ್ನೇಹಿತ ಅಷ್ಟೇ ಆಗಿರಲಿಲ್ಲ. ನನ್ನ ನೈತಿಕ ಸ್ಥೈರ್ಯದ ಭಾಗವಾಗಿದ್ದರು. ಅವರನ್ನು ಕಳುಹಿಸುವುದು ನನಗೆ ಸುತರಾಂ ಇಷ್ಟವಿರಲಿಲ್ಲ.

ಅವರಿಗಾಗಿರುವ ನೋವನ್ನು ಹೇಗೆ ಶಮನಗೊಳಿಸಬಹುದು ಎಂದು ಯೋಚಿಸಿದೆ. ‘ಪ್ರವಾ’ಗೆ ಅವರೊಂದು ‘ಆಸ್ತಿ’ ಇದ್ದಂತೆ, ಅವರನ್ನು ಕಳೆದುಕೊಳ್ಳಲಾಗದು ಎಂದು ಶ್ರೀ ಹರಿಕುಮಾರ್ ಅವರಿಗೆ ತಿಳಿಸಿದೆ. ಅವರಿಗೆ ತಮ್ಮ ಸೇವಾಹಿರಿತನವನ್ನು ಕಡೆಗಣಿಸಿದ್ದರಿಂದ ನೋವಾಗಿದೆ ಎಂದೂ ತಿಳಿಸಿದೆ.

“ಓಕೆ ಅವರನ್ನೂ ಅಸೋಸಿಯೇಟೆಡ್ ಎಡಿಟರ್ ಮಾಡೋಣ, ರಾಜೀನಾಮೆ ವಾಪಸು ತೆಗೆದುಕೊಳ್ಳಲು ಹೇಳಿ” ಎನ್ನುವ ವೃತ್ತಿಪರ ಕಾಳಜಿಯನ್ನೂ ಔದಾರ್ಯವನ್ನೂ ಶ್ರೀ ಹರಿಕುಮಾರ್ ತೋರಿದರು. ಸದಾಶಿವನಿಗೆ ಇದನ್ನು ತಿಳಿಸಿ, “ನೀವು ಇಲ್ಲೇ ಇರಿ ನಮ್ಮಲ್ಲಿ ಈ ಸೇವಾ ಹಿರಿತನದ ಮುಜುಗರ ಉಂಟಾಗದು ಎಂದು ನಾನು ನಿಮಗೆ ಭರವಸೆ ಕೊಡುತ್ತೇನೆ” ಎಂದೆ. ಸದಾಶಿವ ಒಪ್ಪಲಿಲ್ಲ.

“ನಾನು ಈಗಾಗಲೇ ಕ್ವೀನ್ಸ್ ರಸ್ತೆಯಲ್ಲಿದ್ದೇನೆ, ರಂಗನಾಥ ರಾವ್ ನಿಮಗೆ ಒಳ್ಳೆಯದಾಗಲಿ” ಎಂದರು.

ಪ್ರಪ್ರಥಮವಾಗಿ ನನಗೆ ‘ಪ್ರವಾ’ದಲ್ಲಿ ನಾನು ಒಂಟಿ ಅನಿಸಿತು. ವೈಎನ್ಕೆ, ವೈಕುಂಠರಾಜು, ವಿ ರಾಜಗೋಪಾಲ, ಈಗ ಸದಾಶಿವ…

ಕಾರ್ಪೊರೇಟ್ ಕ್ಯೂಬಿಕ್‍ನ ಪಂಜರದಲ್ಲಿ ಸಿಕ್ಕಿಬಿದ್ದ ಒಂಟಿ ಪಕ್ಷಿ ನಾನು!

ಹಳೇ ತಲೆಮಾರಿನ ಪೈಕಿ ಉಳಿದವರು ನಾನು, ದೇವನಾಥ್, ಅರ್ಜುನದೇವ ಹೀಗೆ ಮೂರುನಾಲ್ಕು ಮಂದಿ ಮಾತ್ರ. ಉಳಿದವರೆಲ್ಲ ಹೊಸ ಪೀಳಿಗೆಯ ಪತ್ರಕರ್ತರು. ಸದಾಶಿವನೊಂದಿಗೆ ಮಾತ್ರ ನನ್ನ ಆಲೋಚನೆಗಳು, ಕೆಲಸಗಳನ್ನು ಮುಕ್ತವಾಗಿ, ನಂಬಿಕೆ-ವಿಶ್ವಾಸಗಳಿಂದ ಹಂಚಿಕೊಳ್ಳುವುದು ಸಾಧ್ಯವಿತ್ತು. ಈಗ ನಿಜವಾಗಿ ನಾನು ಒಂಟಿಯಾಗಿದ್ದೆ.

January 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This