
ಅಣ್ಣಪ್ಪಸ್ವಾಮಿ ಜಿ ಎಂ
ನೇಸರ ಮೂಡಿ
ಕತ್ತಲು ಸರಿದು ಬೆಳಕು ಹರಡಿದೆ
ರೆಕ್ಕೆಗಳಡಿಯ
ಬೆಚ್ಚನೆಯ ಒಡಲು ಎಚ್ಚರವಾಗಿದೆ
ಕಣ್ಬಿಟ್ಟು ಗರಿಗೆದರಿ
ಆಸೆಯಿಂದ ನಾ ಮೇಲೆ ಹಾರಿದೆ
ಬಡಿದಂತಾಯಿತು ಏನೋ
ನೆಲಕ್ಕುರುಳಿದೆ ಒಮ್ಮೆಲೆ
ಓ.. ನೆನಪಾಯಿತು ನನಗೀಗ
ಪಂಜರದ ಗಿಳಿ ನಾನು
ಮಂದಿಯಾಸೆಗೆ ಬಂಧಿಯಾಗಿರುವೆ.
ಹಾರುವ ಆಸೆ ನನಗೆ
ಕೊಂಬೆಯಿಂದ ರೆಂಬೆಗೆ
ರೆಂಬೆಯಿಂದ ಕೊಂಬೆಗೆ
ಗರಿಬಿಚ್ಚಿ ಗುರಿಯಿಟ್ಟು ಆಗಸಕೆ
ಕುಕ್ಕಿ ತಿನ್ನುವ ಆಸೆ ತೆನೆ ಮೇಲೆ ಕುಳಿತು
ಹೊಲದೊಡೆಯನ ಕ್ಷಣ ಕಾಲ ಮರೆತು
ಮಿಂದೇಳುವ ಆಸೆ
ಹರಿವ ತಿಳಿ ನೀರಲಿ
ಬೆಚ್ಚ ಬಿಸಿಲಿಗೆ ಮೈಯೊಡ್ಡಿ
ಆದರೇನು ಮಾಡಲಿ
ಪಂಜರದ ಗಿಳಿ ನಾನು
ಮಂದಿಯಾಸೆಗೆ ಬಂಧಿಯಾಗಿರುವೆ

ಹಚ್ಚ ಹಸಿರಿನ ಬಯಲಿನಲಿ
ಗರಿಬಿಚ್ಚಿ ಕುಣಿವಾಸೆ
ಇಷ್ಟದ ಗೆಳೆಯನ ಜೊತೆ
ಸರಸವಾಡುವ ಆಸೆ
ಮೊಟ್ಟೆಯನ್ನಿಟ್ಟು ಮರಿ ಮಾಡಿ
ಕೊಕ್ಕಿನಿಂದ ಹೆಕ್ಕಿ ತಂದ
ಗುಟುಕು ನೀಡುವ ಆಸೆ
ಆದರೇನು ಮಾಡಲಿ
ಪಂಜರದ ಗಿಳಿ ನಾನು
ಮಂದಿಯಾಸೆಗೆ ಬಂಧಿಯಾಗಿರುವೆ.
0 ಪ್ರತಿಕ್ರಿಯೆಗಳು