ಪಟದಲ್ಲಿದ್ದ ಶ್ರೀರಾಮಚಂದ್ರ ನಕ್ಕುಬಿಟ್ಟ…

ಜನ್ನುವಿನ ಪ್ರಚಂಡ ಕೋಪ

– ಸೌಮ್ಯ ಕಲ್ಯಾಣ್ ಕರ್

ಜನ್ನು ಸಿಟ್ಟಲ್ಲಿ ಧುಮುಧುಮು ಕುದಿಯುತ್ತಿದ್ದ. ಅಮ್ಮನ ಮೇಲೆ ಕೆಂಡದಂತಹ ಕೋಪ. ಅಮ್ಮ ನನಗಿಷ್ಟದ ಪುಂಡಿ ಮಾಡದೇ ಉಂಡಲೀಕ ಮಾಡಿದ್ದಾಳೆ ಅಂತ ಸಿಟ್ಟು ಪೋರನಿಗೆ. ಅದನ್ನೂ ಒತ್ತಾಯದಿಂದ ತುರುಕಿಸಿದ್ದಳು ಬಾಯಿಗೆ, ದೊಡ್ಡ ಕಣ್ಣು ತೋರಿಸಿ. ಅಪ್ಪ-ಅಜ್ಜಿ ಅಲ್ಲೇ ಕೂತು ಉಪದೇಶ ಮಾಡಿದ್ದರಿಂದ ಬಲವಂತವಾಗಿ ನುಂಗಿದ್ದ. ಕಣ್ಣ ತುಂಬಾ ನೀರು, ಅಮ್ಮ ಕೂಡಾ ಹೀಗೆ ಮಾಡಬಹುದಾ ಅಂತ ಹತಾಶೆ ಜನ್ನುವಿಗೆ. ಅಜ್ಜಿ-ಅಪ್ಪ ಹೊರ ಹೋದ ಕೂಡಲೇ ” ಅಮ್ಮ ನೀ ಚೆಂದಿಲ್ಲ, ಚಿಚ್ಚಿ ” ಎಂದರಚಿದ. ಅಮ್ಮ ಏನೂ ಮಾತಾಡದೆ ನಕ್ಕರು, ಜೊತೆಗೆ ಅಲ್ಲೇ ಮೆಟ್ಟುಗತ್ತಿಯಲ್ಲಿ ಸೌತೆ ಕೊಯ್ಯುತ್ತಿದ್ದ ದೇವಕಿಯತ್ತೆ ಕೂಡಾ ನಕ್ಕರು. ಇನ್ನಷ್ಟು ಸಿಟ್ಟು ಬಂತು ಪೋರನಿಗೆ, ಸಿಟ್ಟಿಗಿಂತ ಜಾಸ್ತಿ ಅವಮಾನ. ಇಬ್ಬರೂ ಸೇರಿ ನಕ್ಕರಲ್ಲ ಅಂತ. ” ಅಮ್ಮ ನೀ ನಗಬೇಡ, ಅತ್ತೆ, ನೀನೂ ನಗಬೇಡ….ಇಬ್ಬರೂ ತುಂಬಾ ತುಂಬಾ ತುಂಬಾ….ಅಂದ್ರೆ ತುಂಬಾ ಕೆಟ್ಟೋರು, ಇಬ್ಬರೂ ಚೆಂದಿಲ್ಲ, ನಾ ಮಾತಾಡಲ್ಲ, ಟೂ ಟೂ ” ಅಂತ ಅಳುವ ಸ್ವರದಲ್ಲಿ ಬೊಬ್ಬೆ ಹಾಕಿ ಸೀದಾ ಹೊರಗೆ ಬಂದ. ಅಮ್ಮ ಎದ್ದು ಬಾಗಿಲ ಬಳಿ ಹೋಗುವಷ್ಟರಲ್ಲಿ ಅವ ಮಾಯವಾಗಿದ್ದ. ದೇವಕಿಯತ್ತೆ ” ಸಿಟ್ಟೆಲ್ಲಾ ಇಳಿದು ಹೊಟ್ಟೆ ಚುರುಗಟ್ಟಿದ ಮೇಲೆ ಬರ್ತಾನೆ ಭಾಗೀ.., ಸಣ್ಣಂವ ಅಲ್ವಾ,ಮಧ್ಯಾಹ್ನ ಊಟಕ್ಕೆ ಅವನಿಗಿಷ್ಟದ ಬಾಳಕ ಕರಿಯೋಣ ಆಯ್ತಾ? , ಯೋಚ್ನೆ ಮಾಡ್ಬೇಡ, ” ಎಂದು ಸಮಾಧಾನ ಮಾಡಿದರು ಸಪ್ಪೆ ಮುಖ ಹಾಕಿ ಬಂದ ಅಮ್ಮನಿಗೆ. ನಿಗಿ ನಿಗಿ ಉರಿಯುತ್ತಿದ್ದ ಪುಟ್ಟ ಜನ್ನು ಬಾವಿಯ ಪಕ್ಕದ ಹಲಸಿನ ಮರದ ಕೆಳಗೆ ಕುಳಿತು ಬಿಕ್ಕಿ ಬಿಕ್ಕಿ ಅತ್ತ. ಅತ್ತು ಅತ್ತು ಸಮಾಧಾನವಾಗುತ್ತಿದ್ದಂತೆ ಮನಸ್ಸು ಮುಂದಿನ ತಂಟೆಗೆ ಸಿದ್ಧವಾಗತೊಡಗಿತು. ತಿಮ್ಮುವನ್ನು ಕರಕೊಂಡು ಹೋಗಿ ಇವತ್ತು ಸಂಜೀವ ಮಾಮನ ತೋಟದಿಂದ ಗೇರುಹಣ್ಣು ಕದಿಯಬೇಕು, ಗುಡ್ಡದ ನೆತ್ತಿಯಲಿರುವ ಕೇಪುಳ ಹಣ್ಣು ಕೆಂಪಾಗಿದ್ದರೆ ಕಿತ್ತು ತರಬೇಕು. ತಿಮ್ಮು ಹೇಳುತ್ತಿದ್ದ; ಕೆರೆ ಹಿಂದಿನ ನೇಜಿ ನೆಡುವ ಗದ್ದೆಯಲ್ಲಿ ಏಡಿ ಉಂಟಂತೆ.ಕಡ್ಡಿ ಕೊಟ್ಟರೆ ಪಟಕ್ಕಂತ ತುಂಡು ಮಾಡುತ್ತಂತೆ. ಒಂದನ್ನು ಹಿಡಿದು ಅದು ಹೇಗಿದೆ, ಎಷ್ಟು ಕೈ-ಕಾಲು ಇದೆ, ಕಡ್ಡಿ ಕೊಟ್ಟು ಹೇಗೆ ತುಂಡು ಮಾಡುತ್ತೋ ನೋಡಬೇಕು. ಅಮ್ಮನ ಮೇಲಿರುವ ಸಿಟ್ಟೆಲ್ಲಾ ಕರಗಿ, ಮಾಡಲಿರುವ ಕೆಲಸಗಳ ಬಗ್ಗೆ ಗಹನ ವಿಚಾರ ನಡೆಸಿದ ಜನ್ನು. ಸರಿ, ಯಾವುದಕ್ಕೂ ಮೊದಲು ತಿಮ್ಮುವನ್ನು ಕರೆಯೋಣ ಎಂದುಕೊಂಡವನಿಗೆ ತಿಮ್ಮುವುಗಾಗಿ ಚಡ್ಡಿಯ ಕಿಸೆಯಲ್ಲಿ ಅಡಗಿಸಿಟ್ಟಿದ್ದ ರವೆ ಉಂಡೆಯ ನೆನಪಾಯಿತು…ಅದನ್ನು ಕಂಡು ತಿಮ್ಮು ಎಷ್ಟು ಖುಷಿಪಡುತ್ತಾನಲ್ಲ ಯೋಚಿಸಿದವನು ಅವನ ಮನೆ ಕಡೆ ” ಭುರ್ರ್ರ್ರ್ರ್ರ್ರ್ರ್ರ್ರ್ರ್ ……” ಅಂತ ಸ್ಕೂಟರ್ ಬಿಟ್ಟುಕೊಂಡು ದೌಡಾಯಿಸಿದ. ತಿಮ್ಮು ಹಟ್ಟಿ ಹೊರಗೆ ಎಂದಿನಂತೆ ರಾಜು ನಾಯಿ ಕೂತಿದ್ದ. ಜನ್ನುವನ್ನು ನೋಡಿದವನೇ ವಿಶ್ವಾಸದಿಂದ ಬಾಲವಾಡಿಸುತ್ತಾ ಬಂದ. ಜನ್ನು, “ಏನೋ ರಾಜು, ” ಎಂದು ಅವನ ಮೈದಡವಿದ. ರಾಜುವಿಗೆ ಅಷ್ಟೇ ಸಾಕಾಯ್ತು. ಜನ್ನುವಿನ ಕೈ-ಕಾಲು ನೆಕ್ಕಲು ಶುರು ಮಾಡಿದ. ಜನ್ನುವಿಗೆ ಖುಷಿಯಾಗಿ ಅವನೊಂದಿಗೆ ಸ್ವಲ್ಪ ಹೊತ್ತು ಆಟವಾಡಿದ. ಆಮೇಲೆ ನೆನಪಾಯಿತು. ತಾನು ಬಂದಿದ್ದು ತನ್ನ ಗೆಳೆಯನಿಗೋಸ್ಕರ ಅಂತ. ” ಏ, ತಿಮ್ಮೂ…..” ಎಂದರಚಿದ. ಯಾರೂ ಓಗೊಡಲಿಲ್ಲ. ೨-೩ ಸಲ ಕರೆದ ಮೇಲೆ ಅವರಮ್ಮ ಬಂದರು. ” ಚಿಕ್ಕೊಡರೇ, ತಿಮ್ಮು ಅವರಪ್ಪನೊಟ್ಟಿಗೆ ಕೆಲಸಕ್ಕೆ ಹೋಗಿದ್ದಾನೆ ” ಎಂದರು ನರಳುತ್ತಾ. ಪಾಪ, ಅವರಿಗೆ ಯಾವತ್ತೂ ಜಡ್ಡು-ಜಾಪತ್ರ ಅಂತ ತಿಮ್ಮು ಹೇಳುತ್ತಿದ್ದದ್ದು ನೆನಪಾಯಿತು ಜನ್ನುವಿಗೆ. ಬೆಳಗಿನ ತಿಂಡಿ ಪುರಾಣದಿಂದ ಬೇಜಾರಾಗಿದ್ದ ಜನ್ನುವಿಗೆ ಇನ್ನೊಮ್ಮೆ ಆಶಾಭಂಗವಾಯ್ತು. ’ ನಾನೊಬ್ಬನೇ ಎಂಥ ಅಲಿಯುವುದು?, ತಿಮ್ಮುವಿದಿದ್ದದ್ದರೆ ಏನೆಲ್ಲಾ ಮಾಡಬಹುದಿತ್ತು, ನಾನೇನು ಒಂಟಿ ಭೂತವಾ ?’ ಅಂತ ಗೊಣ ಗೊಣ ಮಾಡಿಕೊಂಡು ಸಿಟ್ಟಲ್ಲಿ ಕಾಲಪ್ಪಳಿಸಿ ಜನ್ನು ಅಲ್ಲಿಂದ ಹೊರಟ. ರಾಜು ನಾಯಿ ಪಾಪ, ಇನ್ನೂ ಅಲ್ಲೇ ನಿಂತಿದ್ದ, ಜನ್ನು ಹೊರಟೊಡನೆ ಅವ ಕೂಡಾ ಹಿಂದೆಯೇ ಹೊರಟ. ಗಿರಿರಾಜ ಕೋಳಿ ಪಾಗರದ ಮೇಲೆ ಧಿಮಾಕಿನಿಂದ ನಿಂತಿತ್ತು. ಬೇರೆ ದಿನವಾದರೆ ಅದನ್ನು ಓಡಿಸಿಕೊಂಡು ಹೋಗಿ ಮುಟ್ಟುವ ಆಟವಾಡುತ್ತಿದ್ದ ಜನ್ನು, ಇವತ್ತು ಅದಕ್ಕೂ ಮನಸಿರಲಿಲ್ಲ. ಜನ್ನು ಪಾಗರ ದಾಟಿದೊಡನೆ ರಾಜ “ಕುಂಯಿ, ಕುಂಯಿ….: ಅಂತ ಅವನನ್ನು ಕರೆಯುವ ಪ್ರಯತ್ನ ಮಾಡಿದ. ಜನ್ನು ಓಗೊಡಲೇ ಇಲ್ಲ. ಸೀದಾ ಮುಂದೆ ಹೋಯಿತು ಸವಾರಿ.ಪೆಚ್ಚಾಗಿ ರಾಜು ನಾಯಿ ಅಲ್ಲೇ ಕೂತ. ಸ್ಕೂಟರ್ ಈಗ ಓಡಲಿಲ್ಲ, ನಿಧಾನವಾಗಿ ಕಾಲೆಳೆದುಕೊಂಡು ಬೆಟ್ಟುಗದ್ದೆಗೆ ಬಂದ. ಅಲ್ಲಿ ಪಕ್ಕದ್ದಲ್ಲೇ ಒಂದು ಚಿಕ್ಕ ಮಾವಿನ ಮರ. ಅದರ ಕೊಂಬೆ ಮೇಲೆ ಕೂತು ಅದರ ಎಲೆಗಳನ್ನ ಕಿತ್ತು ಕಿತ್ತು ಹಾಕಿದ. ’ ಅಮ್ಮ ಯಾವಾಗ್ಲೂ ಹೇಳ್ತಾರೆ ಗಿಡ, ಮರಕ್ಕೆ ನೋವಾಗುತ್ತೆ ಅಂತ. ಆದ್ರೆ ಆಗಲಿ. ಅಮ್ಮನ ಹತ್ರ ನಾ ಹೇಳೋದೇ ಇಲ್ಲ, ಕಿತ್ತಿದ್ದು ’ ಎಂದಂದುಕೊಂಡ. ಸ್ವಲ್ಪ ಹೊತ್ತಲ್ಲಿ ಅದೂ ತಪ್ಪು ಅನಿಸಿ ಕೀಳುವುದ ಬಿಟ್ಟು ಸುಮ್ನೆ ಕಾಲಾಡಿಸುತ್ತಾ ಕುಳಿತ. ಆಮೇಲೆ ಆಚೆ ಮನೆಯ ಕಮಲತ್ತೆಯ ಬಳಿ ಹೋಗೋಣವೆನಿಸಿತು. ಅಲ್ಲಿಗೆ ಹೊರಟ. ಅಲ್ಲಿ ಹೋದರೆ ಸುಟ್ಟ ಗೇರುಬೀಜ, ಇಲ್ಲವಾದರೆ ಏನಾದರೂ ತಿಂಡಿ ಕೊಡುತ್ತಾರೆ ಕಮಲತ್ತೆ ಅಂದುಕೊಂಡ. ಕಮಲತ್ತೆ ಮನೆ ಅಂಗಳದ ಕಮಾನಿಗೆ ಹಬ್ಬಿಸಿದ್ದ ಮಿಠಾಯಿ ಹೂವಿನ ಬಳ್ಳಿಯನ್ನು ಬಗ್ಗಿಸಿ ಹೂವೊಂದನ್ನು ಕಿತ್ತ. ಅಂಗಳಕ್ಕೆ ಬಂದು ನೋಡುತ್ತಾನೆ. ಜಗಲಿಯಲ್ಲಿ ಪಿರಿ ಪಿರಿ ಶೀನಜ್ಜ ಕೂತು ಎಲೆ-ಅಡಿಕೆ ಕುಟ್ಟುತ್ತಿದ್ದಾರೆ. ಯಾವಾಗಲೂ ಬೊಗಳಿ ಗಲಾಟೆ ಮಾಡುವ ಟೈಗರ್ ನಾಯಿ ದೂರದ ಬಾವಿಯಾಚೆಗೆ ತಣ್ಣಗೆ ಮಲಗಿದ್ದ. ಕೂಡಲೇ ಹೂವನ್ನು ಬೆನ್ನ ಹಿಂದೆ ಅಡಗಿಸಿಕೊಟ್ಟುಕೊಂಡ. ಅಜ್ಜನ ಹಾಗೂ ಟೈಗರ್ ಗಮನಕ್ಕೆ ಬಾರದಂತೆ ಹಿತ್ತಲ ಬಾಗಿಲ ಕಡೆ ಮೆತ್ತಗೆ ಜಾರಿಕೊಂಡ. ಟೈಗರ್ ನಾಯಿಗೆ ಇವನ ಬರುವು ತಿಳಿಯದಿರುತ್ತದೆಯೇ, ಅವನೋ ಬೆಳಗ್ಗೆಯಿಂದ ಹೊಟ್ಟೆ ನೋವಲ್ಲಿ ಬೊಗಳಲೂ ಉತ್ಸಾಹವಿಲ್ಲದೇ ಸುಮ್ಮಗೆ ಮಲಗಿದ್ದ. ಹಿಂದಿನ ಬಾಗಿಲಿನಿಂದ ಅಡುಗೆ ಮನೆಗೆ ಬಂದವ ” ಕಮಲತ್ತೆ ” ಎಂದು ಕರೆದ. ಒಲೆಯಲ್ಲಿ ಗಂಜಿ ಕೊತ ಕೊತ ಕುದಿಯುತಿತ್ತು. ಅದರ ಪರಿಮಳ ಅಲ್ಲೆಲ್ಲಾ, ಒಲೆಯ ಬಳಿಯೇ ಮೈ ಚಾಚಿ ಮಲಗಿದ್ದ ಪೀಚೂ ಬೆಕ್ಕು. ಒಮ್ಮೆ ಇವನನ್ನು ತಲೆ ಎತ್ತಿ ನೋಡಿ’ ಗುರ್ರ್ ’ ಎಂದು ಮತ್ತೆ ಮಲಗಿತು. ಬೇರೆ ಯಾರ ಸದ್ದೂ ಇರಲಿಲ್ಲ. ಅಲ್ಲಿಂದ ಅವರ ಹುಡುಕುತ್ತಾ, ಕೈಲಿರುವ ಹೂವನ್ನು ಗಿರಗಿಟ್ಲೆಯಂತೆ ತಿರುಗಿಸುತ್ತಾ, ಕೋಣೆಯಿಂದ ಕೋಣೆಗೆ ಸುತ್ತುತ್ತಾ ಕೊನೆಗೆ ಕಿಟ್ಟುಮಾಮನ ಕೋಣೆಗೆ ಬಂದ. ಆ ಕೋಣೆಗೆ ಬಂದರೆ ಜನ್ನುವಿಗೆ ಖುಷಿಯೋ ಖುಷಿ. ಯಾವತ್ತೂ ಮಾಮ ಇವನಿಗೆ ಚಿತ್ರದ ಪುಸ್ತಕಗಳನ್ನು ನೋಡಲು ಕೊಡುತ್ತಿದ್ದರು. ಅವರ ಕೋಣೆ ತುಂಬಾ ಪುಸ್ತಕಗಳೂ ಅಲ್ಲದೇ ಆಕರ್ಷಕ ವಸ್ತುಗಳು ಬೇರೆ. ಶಾಯಿ ಪೆನ್ನು, ಬಾಲ್ ಪೆನ್ನು, ಬಣ್ಣ ಬಣ್ಣದ ಬ್ರಷ್ಗಳು ( ಎಲ್ಲಾ ಹೆಸರೂ ಮಾಮನೇ ಹೇಳಿಕೊಟ್ಟದ್ದು ಜನ್ನುವಿಗೆ) ಇನ್ನೂ ಏನೇನೋ. ನೋಡಿದಷ್ಟು ಮುಟ್ಟಿದಷ್ಟೂ ಸಾಕಾಗುತ್ತಿರಲಿಲ್ಲ. ಇವತ್ತು ಮಾಮ ಇರಲಿಲ್ಲವಾದದ್ದರಿಂದ ಜನ್ನು ಏನೂ ಮುಟ್ಟದೆ ಅಲ್ಲೇ ಸುರುಳಿ ಸುತ್ತಿ ಗೋಡೆಗೆ ಒರಗಿಸಿಟ್ಟಿದ್ದ ಹಾಸಿಗೆ ಮೇಲೆ ಕುಳಿತು ಎಲ್ಲವನ್ನೂ ಕುತೂಹಲದಿಂದ ನೋಡಲಾರಂಭಿಸಿದ. ಹಾಗೆಯೇ ಎಷ್ಟು ಹೊತ್ತು ನೋಡಿದನೋ ಏನೋ, ಅವನ ಗಮನ ಮೇಜಿನ ಮೇಲೆ ಹರಿಯಿತು. ಕೂತಲ್ಲಿಂದ ಎದ್ದು ತುದಿ ಕಾಲ ಮೇಲೆ ನಿಂತು ಮೇಜಿನ ಮೇಲೆ ಏನಿದೆಯೆಂದು ಇಣುಕಿದ. ಮೊದಲೇ ಕುಳ್ಳಪ್ಪ ,ಅವನಿಗೆ ಅಷ್ಟೆತ್ತರದ ಮೇಜಿನ ಮೇಲಿದ್ದು ಕಂಡಿತೇ ? ಕೈಲಿದ್ದ ಹೂವನ್ನು ಆ ಮೇಜಿನ ಮೇಲಿಟ್ಟು ಕಿಟಕಿಯ ಪಕ್ಕ ಇಟ್ಟಿದ್ದ ಖುರ್ಚಿಯನ್ನು ಎಳೆದು ತಂದು ಅದರ ಮೇಲೆ ಹತ್ತಿ ನಿಂತ. ಈಗ ಮೇಜಿನ ಮೇಲಿದ್ದ ಹಾಳೆ ಸಮೇತ ಅಲ್ಲಿದ್ದ ಎಲ್ಲಾ ವಸ್ತುಗಳೂ ಕಂಡವು. ಅದರ ಮೇಲೆ ಅವನು ಇಷ್ಟರವರೆಗೆ ನೋಡಿದಕ್ಕಿಂತ ಅಗಲದ ಬಿಳಿ ಹಾಳೆಯಿತ್ತು. ಉದ್ದನೆಯ ಕೂದಲ ಹುಡುಗಿಯ ಚೆಂದದ ಚಿತ್ರ, ಅದರ ಪಕ್ಕದಲ್ಲೇ ಕಿಟ್ಟುಮಾಮನ ಬರಹವಿತ್ತು. ಹಾಳೆಯ ಪಕ್ಕದಲ್ಲಿ ಸುಮಾರು ಬಣ್ಣಗಳು, ಬ್ರಷ್ಗಳೂ ಇದ್ದವು. ಆ ಚಿತ್ರದಲ್ಲಿರುವ ಹುಡುಗಿ ಪೊರ್ಬುಗಳ ಮನೆಯ ಲವೀನಕ್ಕ ಥರನೇ ಕಂಡಳು. ಲವೀನಕ್ಕಗೂ ಉದ್ದ ಜಡೆ ಈ ಚಿತ್ರದ ಹುಡುಗಿಯ ಥರಾನೇ…. ಜನ್ನು ಏನು ದೊಡ್ಡವನೇ, ಮಾಮ ಬರೆದಿದ್ದು ಅರ್ಥವಾಗಲು ? ಆದರೂ ಏನು ಬರೆದಿದೆ ಅಂತ ತಿಳಿಯಬೇಕಿತ್ತು ಅವನಿಗೆ. ಯಾರನ್ನು ಕೇಳುವುದು ಅಂದುಕೊಂಡ. ಅಷ್ಟರಲ್ಲೇ ಕಿಟ್ಟು ಮಾಮನ ದನಿ ಕೇಳಿತು ಹೊರಗಿಂದ, ನಾನು ಖುರ್ಚಿ ಹತ್ತಿ ನೋಡಿದ್ದು ತಪ್ಪು ಅಂತ ತಿಳಿದ ಜನ್ನು ಧಡಬಡಿಸಿ, ಮೇಜಿನ ಮೇಲಿಟ್ಟ ಮಿಠಾಯಿ ಹೂವ ಎತ್ತಿ ಖುರ್ಚಿಯಿಂದ ಕೆಳಗಿಳಿಯಲು ನೋಡಿದ. ಆಗಲೇ ಆಯ್ತು ನೋಡಿ ಅನಾಹುತ! ಅಲ್ಲೇ ಇಟ್ಟಿದ್ದ ಬ್ರಷ್ ಉರುಳಿ ಚಿತ್ರದ ಮೇಲೆ ಅದೂ ಸರಿಯಾಗಿ ಹುಡುಗಿಯ ಹಣೆಯ ಮೇಲೆ ಕೆಂಪು ಬಣ್ಣದ ಚುಕ್ಕಿಯ ಮೂಡಿಸಿತು. ಖುರ್ಚಿಯಿಂದ ಕೆಳಗಿಳಿಯಲೂ ಧೈರ್ಯ ಸಾಲದೇ ನಡಗುತ್ತಾ ನಿಂತ. ಅಷ್ಟರಲ್ಲೇ ಬಾಗಿಲ ಬಳಿ ಬಂದಾಗಿತ್ತು ಕಿಟ್ಟು ಮಾಮ. ಅವರೋ ಈ ಪೋರನ ಕಂಡು ನಗಲು ಹೊರಟವರು ಖುರ್ಚಿಯ ಮೇಲೆ ಅವನು ನಿಂತಿದ್ದು ನೋಡಿ ಕೂಡಲೇ ಮೇಜಿನ ಕಡೆ ಧಾವಿಸಿ ಬಂದರು. ಚೆಲ್ಲಿದ್ದ ಬ್ರಷ್ ಅವರಿಗೆ ಕಥೆ ಹೇಳಿತು.” ಯಾಕೆ ಜನ್ನು ನಿನಗೆ ಅಧಿಕ ಪ್ರಸಂಗ!, ಹೋಗು ಇಲ್ಲಿಂದ ” ಎಂದು ಬೇಸರ ಹಾಗೂ ಸಿಟ್ಟಿನ ದನಿಯಲ್ಲಿ ನುಡಿದರು. ಜನ್ನು ಮೆಲ್ಲನೆ ಕೆಳಗಿಳಿದು ಗೋಡೆಗೊರಗಿ ನಿಂತ ಕೈಲಿ ಹೂವಿಟ್ಟುಕೊಂಡು. ಮತ್ತೆ ಕಣ್ಣಲ್ಲಿ ನೀರು!. ಏಷ್ಟು ಹೊತ್ತಾದರೂ ಮಾಮ ತಿರುಗಿ ನೋಡಲೇ ಇಲ್ಲ. ಎಂದೂ ಅವರಿಂದ ಬೈಸಿಕೊಳ್ಳದ ಪಾಪದ ಜನ್ನು ಅಲ್ಲಿಂದ ಹೊರಹೋದ. ದೇವರ ಮನೆಯ ಪಕ್ಕದ ಅಟ್ಟದ ಏಣಿಯಿಂದ ಕೆಳಗಿಳಿಯುತ್ತಿದ್ದ ಕಮಲತ್ತೆ ” ಜನ್ನೂ, ಯಾವಾಗ ಬಂದೆಯೋ, ಅಮ್ಮ ಏನು ಮಾಡ್ತಾ ಇದ್ದಾಳೆ ? ಏನು ತಿಂಡಿ ತಿಂದೆ ?” ಎಂದು ಕೇಳಿದರೂ ಜನ್ನು ಅವರ ಕಡೆ ನೋಡದೆ ಸೀದಾ ಹೊರಧಾವಿಸಿದ . ಕಮಲತ್ತೆ ಅವನ ಹಿಂದೆ ಓಡಿ ಬಂದರೂ ಅವನು ಹಿಂಬಾಗಿಲಿನಿಂದ ಕೊಟ್ಟಿಗೆ ಪಕ್ಕದಿಂದ ಅವನ ಮನೆ ಕಡೆ ದಾರಿಯ ಕಡೆ ಓಡಿಯಾಗಿತ್ತು. ಇಂದು ಎಲ್ಲಾ ಕಡೆಯೂ ಅವಮಾನ ಜನ್ನುವಿಗೆ. ಎಲ್ಲರ ಮೇಲೆಯೂ ಪ್ರಚಂಡ ಕೋಪ . ಕಣ್ಣತುಂಬಾ ನೀರು ತುಂಬಿಕೊಂಡು ಬಾಳೆಯ ತೋಟದ ನಡುವೆ ನುಸುಳಿ ಹೊರಬಂದ. ಅಲ್ಲೊಂದು ಕುಡಿಯುವ ನೀರಿನ ಹೊಂಡ, ಅಮ್ಮ ಅಲ್ಲಿಂದ ಯಾವಾಗಲೂ ನೀರು ತೆಗೆದುಕೊಂಡು ಹೋಗ್ತಾಳೆ. ಹತ್ತಿರ ಹೋದರೆ ಯಾರೋ ಚಿಕ್ಕ ಮಗು ಕೂತದ್ದು ಕಂಡಿತು. ಇನ್ನೂ ಮುಂದೆ ಹೋಗಿ ನೋಡುತ್ತಾನೆ. ತಿಮ್ಮು ತಂಗಿ ಅಪ್ಪಿ ಆ ಹೊಂಡದ ಬದಿಯಲ್ಲೇ ಕುಳಿತು ಉಚ್ಚೆ ಮಾಡುತ್ತಿದ್ದಾಳೆ! ಅದೂ ಆ ತಿಳಿ ನೀರಿನ ಹೊಂಡಕ್ಕೆ ಹೋಗಿ ಸೇರ್ತಾ ಇದೆ. ಮೊದಲೇ ಭಯಂಕರ ಕೋಪದಲ್ಲಿದ್ದ ಜನ್ನು ” ಏನೇ ಅಪ್ಪಿ, ಅಮ್ಮನ ನೀರಿನ ಹೊಂಡಕ್ಕೆ ಉಚ್ಚೆ ಮಾಡ್ತೀಯಾ ” ಎಂದು ದೊಡ್ಡದಾಗಿ ಕಿರುಚಿ ಸುಮಾರು ಎರಡೂವರೆ ವರ್ಷದ ಅಪ್ಪಿಯನ್ನು ಆ ನೀರಿನ ಹೊಂಡಕ್ಕೆ ದೂಕಿಯೇ ಬಿಟ್ಟ! ಆ ಚಿಕ್ಕ ಬಾಲೆಯೋ ಏನಾಗುತ್ತಿದೆಯೆಂದು ಅರಿವಾಗುವ ಮೊದಲೇ ನೀರಲ್ಲಿ ಬಿದ್ದಾಗಿತ್ತು. ಎರಡು ಸಲ ಮೇಲೆ ಬಂದು ಕೆಳಗೆ ಹೋಗಿಯಾಗಿತ್ತು. ಜನ್ನುವಿಗೆ ತಾನೇನು ಮಾಡಿದೆ ಅಂತ ಅರ್ಥವಾಗಿ ಹೆದರಿಕೆಯಾಗತೊಡಗಿತು. ” ಅಯ್ಯೋ! ಅಪ್ಪಿ ನೀರಿನಲ್ಲಿ ಬಿದ್ದಿದ್ದಾಳೆ” ಅಂತ ಜೋರಾಗಿ ಕಿರುಚತೊಡಗಿದ. ದೂರದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜ, ದೂಜ ಇಬ್ಬರೂ ಓಡಿ ಬಂದರು. ಮಂಜ ನೀರಿಗೆ ಇಳಿದವನೇ ಅಪ್ಪಿಯನ್ನು ಎತ್ತಿಕೊಂಡು ಬಂದ. ಪಾಪದ ಮಗು ನೀರಲ್ಲಿ ಮುಳುಗಿ ಪೂರ್ತಿ ಒದ್ದೆಮುದ್ದೆಯಾಗಿ ಅರೆ ಜೀವವಾಗಿತ್ತು. ಮಂಜ ಅವಳ ಹೊಟ್ಟೆಯಲ್ಲಿ ತುಂಬಿದ ನೀರ ಕಕ್ಕಿಸತೊಡಗಿದ. ಅನತಿ ದೂರದಲ್ಲಿ ನಿಂತಿದ್ದ ಜನ್ನುವಿನ ಕಾಲೆರಡೂ ನಡುಗುತ್ತಿದ್ದವು, ಕಣ್ಣಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ಅವನ ಎದೆ ಬಡಿತ ಅವನಿಗೇ ಕೇಳುತ್ತಿತ್ತು. ಮಂಜ-ದೂಜ ಅಪ್ಪಿಯ ಶುಶ್ರೂಷೆ ಮಾಡಿ ಅವಳನ್ನಪ್ಪಿ ಸಂತೈಸಿ ಹಿಂತಿರುವಷ್ಟರಲ್ಲಿ ಜನ್ನು ಅವನಗರಿಯದೇ ಸ್ವರ ತೆಗೆದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ್ದ. ಅಮ್ಮನ ಮೇಲಿನ ಸಿಟ್ಟು , ತಿಮ್ಮುವಿನ ಮೇಲಿನ ಆಕ್ರೋಶ, ಕಿಟ್ಟು ಮಾಮನ ಮನೇಲಿ ಮಾಡಿದ್ದ ತಪ್ಪಿನ ಅಪರಾಧೀ ಭಾವಗಳೆಲ್ಲಾ ಆ ಕಣ್ಣೀರಿನಲ್ಲಿ ಹರಿದು ಹೋದವು. ಪಾಪದ ಅಪ್ಪಿಗೋ ತನ್ನ ನೀರಿಗೆ ದೂಡಿದ್ದು ಜನ್ನು ಅಂತ ಗೊತ್ತೇ ಇರಲಿಲ್ಲ, ಗೊತ್ತಿದ್ದರೂ ಹೇಳುವಷ್ಟು ಬುದ್ಧಿ ಇರಲಿಲ್ಲ! ಅವಳನ್ನು ಸಮಾಧಾನಿಸುತ್ತಾ ” ಚಿಕ್ಕೊಡರೇ, ನೀವಿಲ್ಲದೇ ಇರುತ್ತಿದ್ದರೆ ಇವತ್ತು ಅಪ್ಪಿಯ ಕಥೆ ಗೋವಿಂದ ಆಗ್ತಾ ಇತ್ತು, ಗೊತ್ತಾ? ಇದರಮ್ಮನಿಗೂ ಯಾವಾಗ್ಲೂ ಕಾಯಿಲೆ, ಅಪ್ಪ ಎಲ್ಲೋ ಕೆಲಸದಲ್ಲಿರುತ್ತಾನೆ. ಪಾಪದ ಮಗು! ” ಎಂದು ದೂಜ ಹೇಳುತ್ತಾ ಇದ್ದಂತೆ ಮಂಜ ” ಅರೇ, ಅಳೋದು ಯಾಕೆ ? ಹೆದರಿಕೆ ಆಯ್ತಾ? ಹಾಗೆಲ್ಲಾ ಅಳಬಾರದು, ಮನೆಗೆ ನಡೀರಿ” ಅಂದ. ಅವನಷ್ಟು ಹೇಳಿದ್ದೇ ತಡ, ಬಿಟ್ಟ ಬಾಣದಂತೆ ಜನ್ನು, ಮನೆ ಕಡೆ ಪರಾರಿಯಾದ. ಮೂಗಿನ ಸಿಂಬಳ, ಕಣ್ಣ ನೀರು ಒರೆಸುವಷ್ಟೂ ವ್ಯವಧಾನವಿಲ್ಲದೇ ಮನೆಗೆ ಓಡಿ ಬಂದು ಸೀದಾ ಹೋದದ್ದು ದೇವರ ಕೋಣೆಗೆ. ಅವನ ಪುಣ್ಯಕ್ಕೆ ಅಲ್ಲಿ ಅಜ್ಜಿ-ಅತ್ತೆ ಇಬ್ಬರೂ ಇರಲಿಲ್ಲ. ಒಳ ಹೊಕ್ಕವನೇ ನೋಡಿದ್ದು ಹೂವಿನಹಾರ ತೊಟ್ಟು ನೀಲಾಂಜನದ ಬೆಳಕಿನಲ್ಲಿ ನಿಂತಿದ್ದ ಶ್ರೀರಾಮಚಂದ್ರ ದೇವರ ಪಟದೆಡೆಗೆ, ” ನಾನೇನೂ ಬೇಕಂತ ಮಾಡಿದ್ದಲ್ಲ, ಅವಳ್ಯಾಕೆ ಅಲ್ಲಿ ಉಚ್ಚೆ ಮಾಡಬೇಕಿತ್ತು ? ಆದ್ರೂ ನನ್ನ ತಪ್ಪಾಯ್ತು ಅಂತ ಕೇಳ್ತಾ ಇದ್ದೇನೆ. ನಿಂಗೆ ಅಮ್ಮ ಮಾಡುವ ನೈವೇದ್ಯದೊಂದಿಗೆ ಕೊಟ್ಟಿಗೆ ಹಿಂದಿನ ಗುಡ್ಡದ ಗೇರುಹಣ್ಣು ಕೊಡ್ತೇನೆ. ಯಾರಿಗೂ ಹೇಳಬಾರದು, ಗೊತ್ತಾಯ್ತಾ ?” ಅಂತ ಕಟ್ಟಾಜ್ನೆ ಮಾಡಿದ. ಅಡುಗೆಮನೆಯಿಂದ ಬಾಳಕ ಕರಿದ ಸುವಾಸನೆ ತೇಲಿ ಬಂತು, ಒಳಗೆ ಅಮ್ಮ ಮೆಲುದನಿಯಲ್ಲಿ ರಾಮರಕ್ಷಾ ಸ್ತೋತ್ರ ಹೇಳಿಕೊಳ್ಳುತ್ತಿದ್ದಿದ್ದು ಕೇಳಿಬಂತು. ಕಣ್ಣು-ಮೂಗು ಪುಟ್ಟ ಕೈಲೇ ಒರೆಸಿಕೊಳ್ಳುತ್ತಾ ಅಮ್ಮನೆಡೆಗೆ ಧಾವಿಸಿದ. ಪಟದಲ್ಲಿದ್ದ ಶ್ರೀರಾಮಚಂದ್ರ ನಕ್ಕುಬಿಟ್ಟ.]]>

‍ಲೇಖಕರು G

August 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

10 ಪ್ರತಿಕ್ರಿಯೆಗಳು

 1. Gopaal Wajapeyi

  ಮೈ ಮರೆತು ಓದಿದೆ. ಹಾಗೆ ಓದಿಸಿಕೊಂಡು ಹೋಗುವ ಶೈಲಿ ನಿಮ್ಮದು. ಕೊನೆಯಲ್ಲಿ ಅಪ್ಪಿಯನ್ನು ನೀರಿನ ಹೊಂಡಕ್ಕೆ ದೂಡಿದ ಪ್ರಸಂಗಡಿದ ಉಂಟಾಗುವ ಹಠಾತ್ ಬದಲಾವಣೆ ನಾನು ಉಸಿರು ಬಿಗಿಹಿಡಿಯುವಂತೆ ಮಾಡಿತು. ಒಂದು ಒಳ್ಳೆಯ ಕಥೆ, ಪ್ರಬಂಧ ನೀಡಿದ ನಿಮಗೆ ಥ್ಯಾಂಕ್ಸ್ .

  ಪ್ರತಿಕ್ರಿಯೆ
 2. -ರವಿ ಮೂರ್ನಾಡು,ಕ್ಯಾಮರೂನ್.

  ಚೆನ್ನಾಗಿದೆ ಲೇಖನ. ಅಭಿನಂದನೆಗಳು.
  ತನ್ನನ್ನು ಯಾರು ದೂಡಿದ್ದು ಅಂತ ಆ “ಪುಟ್ಟಿ” ಗೂ ಗೊತ್ತಿರಲಿಲ್ಲ, ಗೊತ್ತಿದ್ದರು ಹೇಳುವ ವಯಸಲ್ಲ. ಇಲ್ಲಿ ದೇವರುಗಳೇ ಮಾಡಿದ ತಪ್ಪಿಗೆ ದೇವರಲ್ಲಿಯೇ ಕ್ಷಮೆ ಕೇಳಿದ ಭಾವ ಸಂಚಾರವಾಯಿತು. ಮಕ್ಕಳು ದೇವರು.

  ಪ್ರತಿಕ್ರಿಯೆ
 3. D.RAVI VARMA

  ಒಳ ಹೊಕ್ಕವನೇ ನೋಡಿದ್ದು ಹೂವಿನಹಾರ ತೊಟ್ಟು ನೀಲಾಂಜನದ ಬೆಳಕಿನಲ್ಲಿ ನಿಂತಿದ್ದ ಶ್ರೀರಾಮಚಂದ್ರ ದೇವರ ಪಟದೆಡೆಗೆ, ” ನಾನೇನೂ ಬೇಕಂತ ಮಾಡಿದ್ದಲ್ಲ, ಅವಳ್ಯಾಕೆ ಅಲ್ಲಿ ಉಚ್ಚೆ ಮಾಡಬೇಕಿತ್ತು ? ಆದ್ರೂ ನನ್ನ ತಪ್ಪಾಯ್ತು ಅಂತ ಕೇಳ್ತಾ ಇದ್ದೇನೆ. ನಿಂಗೆ ಅಮ್ಮ ಮಾಡುವ ನೈವೇದ್ಯದೊಂದಿಗೆ ಕೊಟ್ಟಿಗೆ ಹಿಂದಿನ ಗುಡ್ಡದ ಗೇರುಹಣ್ಣು ಕೊಡ್ತೇನೆ. ಯಾರಿಗೂ ಹೇಳಬಾರದು, ಗೊತ್ತಾಯ್ತಾ ?” ಅಂತ ಕಟ್ಟಾಜ್ನೆ ಮಾಡಿದ. ಅಡುಗೆಮನೆಯಿಂದ ಬಾಳಕ ಕರಿದ ಸುವಾಸನೆ ತೇಲಿ ಬಂತು, ಒಳಗೆ ಅಮ್ಮ ಮೆಲುದನಿಯಲ್ಲಿ ರಾಮರಕ್ಷಾ ಸ್ತೋತ್ರ ಹೇಳಿಕೊಳ್ಳುತ್ತಿದ್ದಿದ್ದು ಕೇಳಿಬಂತು. ಕಣ್ಣು-ಮೂಗು ಪುಟ್ಟ ಕೈಲೇ ಒರೆಸಿಕೊಳ್ಳುತ್ತಾ ಅಮ್ಮನೆಡೆಗೆ ಧಾವಿಸಿದ. ಪಟದಲ್ಲಿದ್ದ ಶ್ರೀರಾಮಚಂದ್ರ ನಕ್ಕುಬಿಟ್ಟ.
  ನಿಮ್ಮ ಲೇಖನದಲ್ಲಿ ಮಗುವಿನ ಮುಗ್ಧಮನಸು, ಅದರ ಆ ಕ್ಷಣದ ಆಲೋಚನೆಗಳು , ನಂತರದ ಅಸ್ತೆ ಮುಗ್ದ ಮನಸಿನ ಪಶ್ಚಾತ್ತಾಪ , ಎಲ್ಲವು ಒಳ ಮನಸ್ಸನ್ನು ಮುಟ್ಟುವಂತೆ ಚಿತ್ರಿತವಾಗಿದೆ ಓದ ಓದುತಿದ್ದಂತೆ, ನಮ್ಮ ಬಾಲ್ಯದಲ್ಲಿ ಮಾಡಿದ ಈ ತರಹದ
  ಚೆಸ್ಟೆಗಳು ತದನಂತರದ ಶಿಕ್ಷೆ, ಕೋಪ, ತಾಪ ಎಲ್ಲವು ನೆನಪಿಗೆ ಬರುತ್ತದೆ, ನಿಮ್ಮ ಬರಹದಲ್ಲಿ ಆರ್ದ್ರತೆ ಇದೆ, ಅದು ಓದುಗರ ಮನಸ್ಸನ್ನು ತಟ್ಟಿ,ಮುಟ್ಟಿ ಒಂದು ಹೊಸ ಆಲೋಚನೆಯತ್ತ ಕೊಂದ್ಯ್ಯುತ್ತದೆ, ನಾನಂತೂ ನಿಮ್ಮ ಚಿಂತನೆಯನ್ನು, ತುಂಬಾ ಪ್ರೀತಿಯಿಂದ ಗೌರವಿಸುತ್ತೇನೆ
  ರವಿ ವರ್ಮ ಹೊಸಪೇಟೆ ,

  ಪ್ರತಿಕ್ರಿಯೆ
 4. Swanand hegde

  ಮತ್ತೆ ಬಾಲ್ಯ ನೆನಪಾಯಿತು…ತುಂಬಾ ಚೆನ್ನಾಗಿದೆ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: