ಪತ್ತೇದಾರನೇ ಪತ್ತೆಯಾದಾಗ…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

ಆ ಸಂಜೆ ಕೊಡಗಿನ ಆ ಊರಿನಲ್ಲಿ ಬಸ್ಸಿನಿಂದಿಳಿದಾಗ ಇನ್ನೂ ಮಳೆಯಾಗುತ್ತಿತ್ತು. ತುಂಬಾ ಮಳೆ ಜೋಪಾನ ಎಂಬ ಮಾಹಿತಿ ಮೊದಲೇ ಸಿಕ್ಕಿತ್ತು. ಉದ್ದನೆ ರೇನ್‌ಕೋಟು, ಟೋಪಿ, ಛತ್ರಿ ಜೊತೆಗೆ ಗೆಳೆಯನೊಬ್ಬನಿಂದ ಎರವಲು ಪಡೆದಿದ್ದ ಗಮ್‌ಬೂಟು ಮಳೆಯ ವಿರುದ್ಧ ರಕ್ಷಣೆ ಕೊಟ್ಟಿತ್ತು. ‘ನೀನು ಆ ಊರಿಗೆ ಹೋಗುವುದು, ನಿನಗೆ ವಹಿಸಿದ ಕೆಲಸ ಮಾಡುವುದು ಯಾರಿಗೋ ತಿಳಿಯಬಾರದು. ಅದಕ್ಕೆ ನಿನ್ನನ್ನ ಕಳುಹಿಸುತ್ತಿರುವುದು. ವಿಚಾರ ವಿವರವಾಗಿ ತಿಳಿದು ಬರಬೇಕು’ ಅಂತ ಮಾತೃಛಾಯಾದ ಮ್ಯಾನೇಜರ್‌ ಪದ್ಮಾ ಸುಬ್ಬಯ್ಯನವರು ಸ್ವಲ್ಪ ನಿಗೂಢವಾಗಿ, ಹಾಗೆಯೇ ‘ನೀನೇ ಇದಕ್ಕೆ ಸರಿ’ ಅಂತ ಸ್ವಲ್ಪ ಉಬ್ಬಿಸಿಯೇ ಹೇಳಿದ್ದರು (೧೯೮೯).

ನಾನು ಆ ಊರಿಗೆ ಹೊಸಬ. ಊರು ನನಗೆ ಹೊಸತು. ಹೊಟ್ಟೆ ಹಸಿಯುತ್ತಿತ್ತು. ಸುಮಾರು ಐದಾರು ಗಂಟೆಗಳ ಬಸ್‌ ಪ್ರಯಾಣದಲ್ಲಿ ಏನೂ ತಿಂದಿರಲಿಲ್ಲ. ಮೊದಲು ಲಾಡ್ಜ್‌ನಲ್ಲಿ ರೂಮು ಹಿಡಿಯಬೇಕು. ಆ ಊರಿಗೇ ಹೋಗುವ ಕುರಿತು ಮನೆಯಲ್ಲೂ ನಾನು ಹೇಳಿರಲಿಲ್ಲ! ಮೂರು ದಿನಗಳ ಕಾಲ ಬೇರಾವುದೋ ಊರಿಗೆ ಕೆಲಸದ ಮೇಲೆ ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ್ದೆ. ಆದರೂ ಬಸ್‌ನಲ್ಲಿ ಪಕ್ಕದಲ್ಲಿ ಕುಳಿತಿದ್ದ ಯಾರೋ ದೊಡ್ಡ ಮೀಸೆಯ ಮಧ್ಯವಯಸ್ಕರು ಆ ಊರಿಗೆ ಯಾಕೆ ಹೋಗುತ್ತಿದ್ದೀರಿ, ಯಾರ ಮನೆಗೆ ಎಂದು ಮೇಲಿಂದ ಮೇಲೆ ಕೇಳೀ ಕೇಳೀ ಭಯೋತ್ಪಾದಕರೇ ಆಗಿಬಿಟ್ಟಿದ್ದರು.

ಇನ್ನೂ ಆಗ ಕಾಲೇಜು ಮುಗಿಸಿ ಎಳೆಎಳೆಯಾಗಿದ್ದ ನನ್ನನ್ನ ಏನು ಕೆಲಸ, ಯಾವ ಊರು, ವೆಜಿಟೇರಿಯನ್ನೋ, ನಾನ್‌ ವೆಜಿಟೇರಿಯನ್ನೋ ಎಂದೆಲ್ಲಾ ವಿಚಾರಿಸಿದ್ದರು. ಬೆಟ್ಟಗಳ ಪ್ರದೇಶದಲ್ಲಿ ಅಲ್ಲೆಲ್ಲೋ ಬಸ್‌ ಡ್ರೈವರ್ ವಿಶ್ರಾಂತಿಗೆ ನಿಂತಾಗ, ಆ ದೊಡ್ಡ ಮೀಸೆಧಾರಿ ಬನ್ನಿ ಒಂದು ಪಫ್‌ ಎಳೆಯೋಣ ಎಂದು ಆಹ್ವಾನಿಸಿದ್ದರು. ಆಮೇಲೆ ಡ್ರಿಂಕ್ಸ್‌ ಅಭ್ಯಾಸವಿದೆಯಾ ಅಂತ ಕೇಳಿ ಮುಜುಗರ ಉಂಟು ಮಾಡಿದ್ದರು.

ಯಾಕೆ ಆ ಊರಿಗೆ ಎಂಬ ಪ್ರಶ್ನೆಗೆ ಏನೋ ಹೇಳಲು ಹೋಗಿ ಬಾಯಿ ತಪ್ಪಿ ಮಳೆ ಅಂದ್ರೇನೇ ನಮಗೆ ಸರಿಯಾಗಿ ಗೊತ್ತಿಲ್ಲ. ನಿಮ್ಮ ಊರಲ್ಲಿ ದಿನವೆಲ್ಲಾ ಸುರಿಯೋ ಮಳೆ ನೋಡೋಕೆ ಬಂದಿದ್ದೀನಿ. ಹಾಗೆ ಸ್ವಲ್ಪ ಕಾಡು, ಕಾಫಿ ತೋಟ… ಹಾಗಾದ್ರೆ ನಮ್ಮ ಮನೇಗೇ ಬನ್ನಿ. ನಮ್ಮ ತೋಟದಲ್ಲೇ ಇರಿ. ಕಾಡಿಗೆ ಹತ್ತಿರ. ಮೂರು ದಿನವ್ಯಾಕೆ ಒಂದ್ವಾರ ಇರಿ. ನನಗೂ ಮಾತಾಡಕ್ಕೆ ಜನ ಸಿಕ್ಕ ಹಾಗೆ ಆಗುತ್ತೆ… ನಯವಾಗಿ ನಿರಾಕರಿಸಿ, ನಾನು ಮಾತು ಕಡಿಮೆ. ಒಬ್ಬನೇ ಇರಕ್ಕೆ ಇಷ್ಟ ಅಂತೆಲ್ಲಾ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದೆ.

ನಾನು ಹೋಗಬೇಕಾದ ಊರು ಸಮೀಸುತ್ತಿದ್ದಂತೆಯೇ ಆ ಆತ ‘ಇಲ್ಲ ಬಿಡಿ ನಿಮ್ಮನ್ನ ನೋಡಿದರೆ ನೀವು ಮಳೆ ನೋಡೋಕ್ಕೆ ಬರ್ತಿರೋ ತರ ಕಾಣಲ್ಲ. ಕಾಡು ಬೆಟ್ಟ ನೋಡಕ್ಕೆ ಯಾರೂ ಒಬ್ರೊಬ್ಬರೇ ಬರಲ್ಲ ಅಂತ ನಗೆಯಾಡಿದ್ದರು. ನಿಮಗೇನೋ ಬೇರೆ ಕೆಲಸ ಇರಬೇಕು. ನನಗೆ ಹೇಳಲ್ಲ ಅಷ್ಟೆ’ ಅಂದು ಬಿಡೋದೆ?

ಇವರಿಗ್ಯಾಕೆ ಇಷ್ಟೆಲ್ಲಾ ಇಲ್ಲದ ಕುತೂಹಲ, ನಾನು ಬಂದಿರೋದು ಇನ್ವೆಸ್ಟಿಗೇಷನ್ನಿಗೆ, ತನಿಖೆ ಮಾಡಕ್ಕೆ. ಇದ್ದ ಎರಡು ಮಕ್ಕಳು ಸತ್ತು ಹೋಗಿದ್ದ ಕುಟುಂಬವೊಂದು ಈಗ ಮಕ್ಕಳನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ. ಅದರ ಸತ್ಯಾಸತ್ಯತೆಯನ್ನು ತಿಳಿಯಕ್ಕೆ ಬಂದಿದ್ದೀನಿ ಅಂತೆಲ್ಲಾ ಹೇಳಕ್ಕಾಗುತ್ತಾ?

ನನ್ನ ಬಗ್ಗೆ ನಾನೇನೂ ವಿವರ ಕೊಡದಿರುವ ಕಾರಣ ಅವರ ಬಗ್ಗೆ ನಾನೇನೂ ಕೇಳಲಿಲ್ಲ. ಯಾವುದೋ ಕಾಫಿ ತೋಟದ ಮಾಲೀಕನಿರಬಹುದೋ ಅಥವಾ ಅಲ್ಲಿ ಕೆಲಸ ಮಾಡುವವರೋ ಅಂತ ಅಂದುಕೊಂಡು ಸುಮ್ಮನಾದೆ. ಅಷ್ಟು ಹೊತ್ತಿಗೆ ನನಗೆ ಹೇಳಿ ಮಾಡಿಸಿದಂತೆ ಆ ಮನುಷ್ಯ ಊರು ಪ್ರವೇಶಿಸುತ್ತಿದ್ದಂತೆಯೇ ಅದ್ಯಾವುದೋ ಹ್ಯಾಂಡ್‌ಪೋಸ್ಟ್‌ ಸ್ಟಾಪ್‌ನಲ್ಲಿ ಇಳಿದರು. ತಮ್ಮ ಹೆಸರು, ತಮ್ಮ ತೋಟದ ಹೆಸರು, ಕಾಡಿನ ಮಧ್ಯದ ದಾರಿ ಹೇಳಿ ಬೇಕಾದರೆ ಬನ್ನಿ ಎಂದು ಉಚಿತ ಆಹ್ವಾನ ಕೊಟ್ಟು ಹೋಗಿದ್ದರು.

ಬಸ್‌ ಇಳಿದು, ರೈನ್‌ಕೋಟ್‌ ತೊಟ್ಟು, ಟೋಪಿಯೇರಿಸಿ, ಛತ್ರಿ ಬಿಡಿಸಿ, ಕೈಯಲ್ಲಿದ್ದ ಸಣ್ಣ ಬ್ಯಾಗ್‌ ಹಿಡಿದು ಮಳೆಯ ಹನಿಗಳ ಮಧ್ಯದಲ್ಲೇ ಹೆಜ್ಜೆ ಹಾಕಿದೆ. ಯಾಕೋ ಏನೋ ಎಲ್ಲರೂ ನನ್ನೇ ನೋಡ್ತಿರೋ ಹಾಗೆ ಭಾಸವಾಯಿತು. ನಾನು ಇಲ್ಲಿಗೆ ತನಿಖೆಗೆ ಬಂದಿರೋದು ಅಂತ ಇವರಿಗೆಲ್ಲಾ ಗೊತ್ತಾಗಿಬಿಡ್ತಾ ಎನ್ನುವ ಅನುಮಾನ ಸುಳಿಯಿತು! ಹೇಗೆ ಜನರಿಂದ ಬಚ್ಚಿಟ್ಟುಕೊಂಡು ನನ್ನ ಕೆಲಸ ಮಾಡುವುದು ಎಂಬ ಆತಂಕ ಆಗಲೇ ಶುರುವಾಗಿತ್ತು.

ಬಸ್‌ ಸ್ಟಾಂಡಿನಿಂದ ಹೊರಗೆ ಬಂದೆ. ಪದ್ಮಾ ಸುಬ್ಬಯ್ಯ ಹೇಳಿದ್ದರು, ಬಸ್‌ಸ್ಟಾಂಡಿನಿಂದ ಬಲಕ್ಕೆ ತಿರುಗಿದರೆ ಸುಮಾರು ನಡೆದುಕೊಂಡು ಹೋಗಬಹುದಾದಷ್ಟು ದೂರದಲ್ಲಿ ಒಂದು ಟ್ರಾಕ್ಟರ್‌ ಅಂಗಡಿ ಇದೆ, ಅದರ ಪಕ್ಕದಲ್ಲಿ ಒಂದು ಚಿಕ್ಕ ಲಾಡ್ಜ್‌ ಇದೆ. ಅದೇ ಸೂಕ್ತ ಎಂದಿದ್ದರು. ಅದರತ್ತ ಹೆಜ್ಜೆ ಹಾಕಿದೆ. ಆಗಲೂ ಹತ್ತಾರು ಕಣ್ಣುಗಳು ನನ್ನನ್ನೇ ಹಿಂಬಾಲಿಸುತ್ತಿವೆ! 

ಲಾಡ್ಜ್‌ನ ರಿಸೆಪ್ಷನಿಸ್ಟ್‌ ಕೇಳುವ ಮಾಮೂಲಿ ಪ್ರಶ್ನೆಗಳು ಅವತ್ತು ವಿಶೇಷವಾಗಿ ಕೇಳಿಸಿತು… ಹೆಸರು, ವಯಸ್ಸು, ವಿಳಾಸ, ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗ್ತೀರಿ, ಎಷ್ಟು ದಿನ ಇರ್ತೀರಿ, ಇಲ್ಲಿ ಲೋಕಲ್‌ ಅಡ್ರೆಸ್‌ ಏನು, ಇಲ್ಲೇನು ಕೆಲಸ (ಅಫಿಷಿಯಲ್‌ ಅಥವಾ ಅಲ್ಲ), ಒಬ್ರೇನಾ, ಸಿಂಗಲ್‌ ರೂಮ್‌ ಸಾಕಾ? ಸದ್ಯ, ಆಗೆಲ್ಲಾ ಐಡಿ ತೋರಿಸಿ ಅಂತ ಕೇಳ್ತಿರಲಿಲ್ಲ. ಲೋಕಲ್‌ ಅಡ್ರೆಸ್‌ ಇಲ್ಲ ಅಂದರೆ ಒಪ್ಪಿಕೊಳ್ತಿದ್ರು.

ರೂಮು ಸೇರಿದವನೇ ಬ್ಯಾಗು ಇಟ್ಟು, ಹೊರ ಬಂದೆ. ಮೊದಲು ತಿನ್ನಬೇಕು. ಲಾಡ್ಜನಲ್ಲಿ ರೆಸ್ಟೋರೆಂಟ್‌ ಇರಲಿಲ್ಲ. ರಿಸೆಪ್ಷನ್‌ನಲ್ಲಿ ಸಸ್ಯಾಹಾರಿ ಹೊಟೆಲ್‌ ಬಗ್ಗೆ ವಿಚಾರಿಸಿದೆ. ಆ ತರಹ ಬರೀ ವೆಜ್ ಹೊಟೆಲ್ ಕಷ್ಟ. ಅಡ್ಜಸ್ಟ್ ಮಾಡ್ಕೋಬೇಕು ಎನ್ನುವ ಸಲಹೆ.  ಹೊರಬಂದೆ. ಮಳೆಯ ಮಧ್ಯದಲ್ಲೇ ಎಲ್ಲರಂತೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನ ಮಧ್ಯದಲ್ಲಿ ಕಚಿಪಿಚಿ ಮಾಡಿಕೊಂಡು ನಡೆದೆ ಒಂತರಾ ಮಜವಿತ್ತು. ಆದರೂ ಗಂಬೀರವದನನಾಗಿ ಹೋಗುತ್ತಿದ್ದೆ.

ಹತ್ತಿರದಲ್ಲಿ ವೆಜ್-ನಾನ್ವೆಜ್ ಎರಡೂ ಇದೆ ಎನ್ನುವ ಹೊಟೆಲ್‌ ಕಂಡಿತು. ರಾತ್ರಿಯ ಕಪ್ಪಿನತ್ತ ಸಮಯ ಓಡುತ್ತಿತ್ತು. ಮಳೆ ಇನ್ನೂ ಹನಿಯುತ್ತಲೇ ಇತ್ತು. ಹೊಟೆಲ್‌ ಪ್ರವೇಶಿಸಿದೊಡನೆಯೇ ಜನರ ಕಣ್ಣು ನನ್ನ ಮೇಲೆ! ಎಲ್ಲರೂ ನನ್ನೇ ನೋಡ್ತಿದ್ದಾರಾ ಅಥವಾ ನಾನೇ ಎಲ್ಲರನ್ನೂ ನೋಡ್ತಿದ್ದೀನ? ವಿಚಿತ್ರವಾದ ಅನುಭವ. ಅನುಮಾನ. ಒಳಗೆಯೂ ಸ್ವಲ್ಪ ಕತ್ತಲು ಕತ್ತಲು.

ಮೂಲೆಯೊಂದರ ಟೇಬಲ್‌ ಹತ್ತಿರ ಕುಳಿತು ಟೋಪಿ ತೆಗೆದಿಟ್ಟೆ. ಊಟ ಅಂತ ಇರಲಿಲ್ಲ. ದೋಸೆ ಹೇಳಿದೆ. ಬಂತು. ತಿಂದೆ. ತಿಂದು ಸುಮಾರು ಸಮಯವಾಯಿತು. ಹೊಟೆಲ್‌ಗೆ ಬಂದು ಹೋಗುವ ಜನರನ್ನೆಲ್ಲಾ ನೋಡ್ತಾ ಇದ್ದೆ. ಅರೆ, ಬಿಲ್‌ ಕೊಡಲಿಲ್ಲವಲ್ಲ. ಎಷ್ಟು ಹೊತ್ತಾಯಿತು, ಎಂದುಕೊಂಡು ಸ್ವಲ್ಪ ದೂರದಲ್ಲಿ ನಿಂತಿದ್ದ ಸರ್ವರ್‌ನನ್ನು ಕೇಳಿದೆ. ಅವನು ಇಲ್ಲ ಎಂದು ಕೈಯಾಡಿಸಿದ. ನಾನು ಬಿಡಲಿಲ್ಲ. ಹತ್ತಿರ ಕರೆದು ‘ಬಿಲ್‌, ಬಿಲ್‌ ಕೊಡಪ್ಪಾ’ ಎಂದೆ. ಅವನು ಮತ್ತೆ ‘ಇಲ್ಲ ಸಾರ್‌. ಬೇಡ ಅಂದ್ರು’ ಅಂದ. ‘ಯಾರು?’ ಅವನು ಕೈ ತೋರಿದ್ದು ಗಲ್ಲದಲ್ಲಿ ಕುಳಿತಿದ್ದ ಒಬ್ಬ ಗಡ್ಡಧಾರಿ ಮನುಷ್ಯನನ್ನ.

ಅವನ್ಯಾಕೆ ಬೇಡ ಅನ್ನಬೇಕು ಎಂದು ಟೋಪಿ ಧರಿಸಿ ಎದ್ದು ಹೋಗಿ ಗಲ್ಲದ ಮುಂದೆ ನಿಂತೆ. ‘ಬಿಲ್‌’ ಕೇಳಿದೆ. ಅವನು ಬೇಡ ಎಂಬಂತೆ ಕೈಯಾಡಿಸಿದ. ಯಾಕೆ ಬೇಡ ಎಂದು ಕೇಳುವಾಗ ಅವನನ್ನ ಗಮನಿಸಿದೆ. ಮುಖದಲ್ಲಿ ತೆಳುನಗು. ನನಗೆ ಅಯೋಮಯ. ಇವನ್ಯಾರು, ನನ್ನ ಯಾಕೆ ಬಿಲ್‌ ಬೇಡ ಅಂತಾನೆ. ನನ್ನ ಮುಖ ನೋಡಿ ನಗುವುದೇನಿದು. ಮತ್ತೆ ಕೇಳಿದೆ, ‘ನಾನು ತಿಂದ ತಿಂಡಿಗೆ ಬಿಲ್‌ ಕೊಡಬೇಕು’.

‘ಬೇಡ ಬಿಡಿ. ನೀವು ನಮ್ಮ ಗೆಸ್ಟ್‌’.

ಆಗಲೇ ಇನ್ನಷ್ಟು ಕಂಗಳು ನನ್ನ ಕಡೆ ತಿರುಗಿದವು. 

ಹೆಚ್ಚು ಮಾತನಾಡಬಾರದೆಂದು ಅಂದುಕೊಂಡರೂ, ಬಿಲ್‌ ಹಣ ಕೊಡದೆ ಹೋದರೆ ಹೇಗೆ? ‘ನೀವು…’ ‘ನಾನಪ್ಪಾ ನಿಮ್ಮ ಕ್ಲಾಸ್‌ಮೇಟ್‌! ಕ್ಲಾಸ್‌ಮೇಟ್‌ಗಳನ್ನೇ ಮರೆತುಬಿಡುವುದಾ?’ ಆಗ ಮತ್ತೆ ಸರಿಯಾಗಿ ನೋಡಲು ಯತ್ನಿಸಿದೆ. ಇಲ್ಲ ಗುರುತು ಸಿಗಲಿಲ್ಲ. ಆದರೆ ಈ ದನಿ ಆ ನಗುಮುಖ… ಇಲ್ಲ ಗೊತ್ತಾಗಲಿಲ್ಲ. ‘ನಾನು ರಾಜಶೇಖರ… ಕ್ರಿಮಿನಾಲಜಿ ಕ್ಲಾಸ್‌ನಲ್ಲಿ ಜೊತೆಯಲ್ಲಿರುತಿದ್ದೆವಲ್ಲ’. (ಅಷ್ಟು ಹೊತ್ತೂ ನಿಗೂಢತೆಯನ್ನು ಸೂಚಿಸುವ ಜೇಮ್ಸ್‌ಬಾಂಡ್‌ ಸಿನೆಮಾದ ಮ್ಯೂಸಿಕ್‌ ತಲೆಯಲ್ಲಿ ಓಡ್ತಿದ್ದಿದ್ದು  ಥಟಕ್‌ ಅಂತ ನಿಂತು ಹೋಯ್ತು!) ಸ್ವಲ್ಪ ಸ್ವಲ್ಪ ನೆನಪಾಯಿತು.

ರಾಜಶೇಖರ ಗಲ್ಲದಿಂದ ಇಳಿದು ಬಂದ. ನನಗಿಂತಲೂ ಸುಮಾರು ಅರ್ಧಮುಕ್ಕಾಲು ಅಡಿ ಎತ್ತರದ ಕಟ್ಟುಮಸ್ತು ಆಸಾಮಿ. ನೆನಪಾಯಿತು. ಮಹಾರಾಜಾ ಕಾಲೇಜು (೧೯೮೪-೮೭). ಅಪರಾಧಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮನಃಶ್ಶಾಸ್ತ್ರದ ವಿದ್ಯಾರ್ಥಿಗಳ ಗುಂಪಿನವನು ಇವನು. ನಾನು ಅಪರಾಧಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಆಡಳಿತದ ವಿದ್ಯಾರ್ಥಿ. ನಮ್ಮ ಗುಂಪು ಬೇರೆ. ಒಂದೇ ಕಾಲೇಜಿನಲ್ಲಿ ಜೊತೆಗಿದ್ದರೂ ಈ ಎರಡೂ ಗುಂಪುಗಳು ಅಷ್ಟು ಬೆರೆಯುತ್ತಿರಲಿಲ್ಲ. ಆ ಕಾಂಬಿನೇಷನ್ನಿನ ಹುಡುಗ ಹುಡುಗಿಯರೆಲ್ಲಾ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾಗುವ ತಯ್ಯಾರಿ ಗುಂಗಿನಲ್ಲೇ ಇರುತ್ತಿದ್ದರು. ಸಾಮಾನ್ಯವಾಗಿ ಹಾಡು, ಕತೆ, ಕವನ, ಲೇಖನ, ನಾಟಕಗಳಿಗೆ ಆ ಗುಂಪಿನವರು ಅಷ್ಟಾಗಿ ಬರುತ್ತಿರಲಿಲ್ಲ. ನಮ್ಮ ಗುಂಪಿಗೆ ಅದೇ ಜಗತ್ತು!

ಇನ್ನೊಂದು ಮೂಲೆ ಟೇಬಲ್‌ನಲ್ಲಿ ಮತ್ತೆ ಕುಳಿತು ಮಾತು ಆರಂಭಿಸಿದೆವು. ಸ್ವಲ್ಪ ಹೊತ್ತಿನಲ್ಲೇ ನಮ್ಮ ಮಾತು  ಬಹುವಚನದಿಂದ ಏಕವಚನಕ್ಕೂ, ನೀನ್ಯಾಕಿಲ್ಲ, ನೀನೇನು ಮಾಡ್ತಿದ್ದೀ, ಇತ್ಯಾದಿಯತ್ತ ಹೊರಳಿತು. ಅವನು ಡಿಗ್ರಿಯಾದ ಮೇಲೆ ಮುಂದೆ ಓದಲು ಹೋಗಲಿಲ್ಲ. ಪೊಲೀಸ್‌ ಇಲಾಖೆಯ ಪ್ರಕಟನೆಗಳಿಗಾಗಿ ಕಾಯುತ್ತಿದ್ದ. ಮಧ್ಯದಲ್ಲಿ ಈ ಹೊಟೆಲ್‌ ಗುತ್ತಿಗೆಗೆ ತೆಗೆದುಕೊಂಡು ನಡೆಸುತ್ತಿದ್ದ. ವ್ಯಾಪಾರ ಪರವಾಗಿಲ್ಲ. ಆ ಊರಿನ ಹತ್ತಿರದ ಹಳ್ಳಿಯಲ್ಲಿ ಮನೆ. ಬೈಕಿನ ಮೇಲೆ ಓಡಾಡ್ತಾನೆ. 

ನಾನ್ಯಾಕಲ್ಲಿ… ಹೇಳಲೋ ಬೇಡವೋ, ಬಹಳ ಕಷ್ಟವಾಯಿತು. ಅಂತೂ ಇಂತೂ ಮೆಲು ದನಿಯಲ್ಲಿ ನಾನು ಬಂದ ವಿಷಯ ತಿಳಿಸಿದೆ. ಯಾವ ಮನೆ, ಯಾರು. ಹೇಳಿದೆ. ಅವನಿಗೆ ಆ ಮನೆವರು ಅಷ್ಟು ಗೊತ್ತಿರಲಿಲ್ಲ. (ನಾನೂ ನೋಡಿರುವುದು ಆ ಮನೆಯವರ ಫೋಟೋ ಮತ್ತು ಇರುವುದು ಅವರ ವಿಳಾಸ ಮಾತ್ರ ಅಷ್ಟೆ). ಅವರು ನಡೆಸುತ್ತಿದ್ದ ಅಂಗಡಿ ಗೊತ್ತು ಎಂದ. ನನ್ನ ಓಡಾಟಕ್ಕೆ ಸಹಾಯ ಮಾಡಲು ತಾನೇ ತಕ್ಷಣ ಸಿದ್ಧನಾದ (ಕ್ರಿಮಿನಾಲಜಿ ಓದಿದ್ದು ಸಾರ್ಥಕವಾಯಿತು – ಇಬ್ಬರಿಗೂ!). ಅಲ್ಲಿನ ಪೊಲೀಸ್‌ ಪರಿಚಯಯ ಚೆನ್ನಾಗಿದೆಯೆಂದು ಹೇಳಿದ.

ನಾವು ಮತ್ತೆ ಮಾರನೇ ದಿನ ಬೆಳಗ್ಗೆ ಬೆಳಗಿನ ಉಪಹಾರಕ್ಕೆ ಅಲ್ಲೇ ಭೇಟಿಯಾಗುವುದೆಂದು ನಿರ್ಧಾರವಾದ ಮೇಲೆ ಎದ್ದೆ. ಹೊರಗೆ ಮಳೆ ಜೋರಾಗಿತ್ತು.
***

ಕೊಡಗಿನ ಒಂದೂರಿನ ಆ ಕುಟುಂಬ ಸಾಕಷ್ಟು ಸ್ಥಿತಿವಂತರು. ಮೊದಲ ಮಗನಿಗೆ ಅಂಗವಿಕಲತೆ. ಮತ್ತೆ ಮಕ್ಕಳು ಬೇಡ ಎಂದು ಗಂಡ ಹೆಂಡತಿ ನಿರ್ಧರಿಸಿಬಿಟ್ಟಿದ್ದರು. ಆದರೂ ಸಾಕಷ್ಟು ವರ್ಷಗಳ ನಂತರ ಅವಳಿಜವಳಿ ಗಂಡು ಮಕ್ಕಳಾಗಿತ್ತು. ಕಾಫಿ ತೋಟದೊಡನೆ ಚಿಕ್ಕದೊಂದು ವ್ಯಾಪಾರದ ಅಂಗಡಿಯಿತ್ತು. ಅವಳಿಜವಳಿಯ ಶೈಶವದಲ್ಲೇ ದುರಾದೃಷ್ಟವಶಾತ್‌ ಮನೆಯ ಯಜಮಾನ ಹೃದಯಾಘಾತದಿಂದ ನಿಧನರಾದರು. ಮನೆಯ ಯಜಮಾನಿಯ ಸಹಾಯಕ್ಕೆ ಬಂದವರು ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ಒಬ್ಬ ನಂಬಿಕಸ್ತ ಕೆಲಸಗಾರರು. ತೋಟ ಮತ್ತು ಅಂಗಡಿಯ ಕೆಲಸಗಳು ಕೆಡದಂತೆ ನೋಡಿಕೊಂಡರು. ಕೆಲ ಕಾಲದಲ್ಲಿ ಆ ನಂಬಿಕೆ ಮದುವೆಯ ಸ್ವರೂಪ ಪಡೆಯಿತು.

ಆದರೆ ಇನ್ನೊಂದು ಆಘಾತ ಕಾದಿತ್ತು. ಒಂದು ಕಾಫಿ ಕಾಲದಲ್ಲಿ ಅವಳಿಜವಳಿ ಗಂಡು ಮಕ್ಕಳು ಕಾಫಿ ತೊಳೆಯುವ ತೊಟ್ಟಿಯಲ್ಲಿ ಬಿದ್ದು ಸತ್ತು ಹೋಗಿದ್ದರು. ಮನೆಯವರು, ಕೆಲಸಗಾರರೆಲ್ಲರೂ ಇದ್ದ ಸಮಯದಲ್ಲೇ ಆದ ಅವಘಡ. ಸ್ವಾಭಾವಿಕವಾಗಿಯೇ ಅನುಮಾನದ ಬೆರಳುಗಳು ಇವರು ಅವರು ಎಂದು ತೋರಿತ್ತು. ಪ್ರಕರಣದ ಪೊಲೀಸ್‌ ತನಿಖೆ ಅದೊಂದು ಆಕಸ್ಮಿಕ ಎಂದು ದಾಖಲು ಮಾಡಿತ್ತು.

ಗೆಳೆಯ ರಾಜಶೇಖರನೊಡನೆ ಮಾರನೇ ದಿನ ಬೆಳಗ್ಗೆ ಬೈಕು ಹತ್ತಿ ಹೊರಟಾಗ ಅಷ್ಟೇನೂ ಕಣ್ಣುಗಳು ನನ್ನನ್ನು ಹಿಂಬಾಲಿಸಲಿಲ್ಲ!  (ಜೇಮ್ಸ್‌ಬಾಂಡ್‌ ಮ್ಯೂಸಿಕ್‌ ಆಗಲೇ ನಿಂತು ಹೋಗಿತ್ತು!) ಮಳೆಯೂ ನಿಂತಿತ್ತು.

ಮೊದಲು ಮಕ್ಕಳು ನಿಧನರಾದರು ಎಂದು ಹೇಳಲಾದ ತೋಟಕ್ಕೆ ಹೋದೆವು. ಅಲ್ಲೇ ಏನೋ ನೋಡಲು ಬಂದೆವು ಎಂದು ಹೇಳಿ ಕಾವಲುಗಾರನೊಂದಿಗೆ ಅದೂ ಇದೂ ಮಾತನಾಡಿ ಕಾಫಿ ತೊಳೆಯುವ ತೊಟ್ಟಿ ಅಲ್ಲಿನ ಸುತ್ತಮುತ್ತಲಿನ ಪರಿಚಯ ಮಾಡಿಕೊಂಡಾಯ್ತು! ತೋಟದಲ್ಲಿ, ಕಾಡಿನಲ್ಲಿ ಅವಘಡಗಳಾಗಿ ಸಾಯುವ ಜನರ ಬಗ್ಗೆ ಮಾತನಾಡುತ್ತಿದ್ದಾಗ, ಆಟವಾಡುತ್ತಿದ್ದಾಗ ಮಕ್ಕಳು ತೊಟ್ಟಿಯಲ್ಲಿ ಬಿದ್ದು ಸತ್ತು ಹೋದ ಮಕ್ಕಳ ಬಗ್ಗೆ ಕಾವಲುಗಾರನೇ ಬೇಸರದಿಂದ ಹೇಳಿದ. ಅದೆಷ್ಟು ಕಾಲ ಪೊಲೀಸರು ಮೇಲಿಂದ ಮೇಲೆ ಬಂದು ವಿಚಾರಣೆ ಮಾಡಿದ್ದರು ಎಂದೂ ತಿಳಿಸಿದ.

ಮಕ್ಕಳನ್ನು ತಮ್ಮ ಯಜಮಾನರು, ಯಜಮಾನ್ತಿ ಎಷ್ಟು ಪ್ರೀತಿ ಮಾಡ್ತಿದ್ರು ಹೀಗಾಯ್ತಲ್ಲ ಅಂತ ನಿಜವಾದ ದುಃಖದಲ್ಲಿ ವಿವರಿಸಿದ. ಹೊಸ ಯಜಮಾನರು ಒಳ್ಳೇರು ಅಂತಂದ. ಅಲ್ಲಿಂದ ಪೊಲೀಸ್‌ ಠಾಣೆ. ಆಮೇಲೆ ನಾನು ತಿಳಿಯಲು ಬಂದಿದ್ದ ಕುಟುಂಬ ನಡೆಸುವ ಅಂಗಡಿಯಲ್ಲಿ ಒಂದಿಷ್ಟು ವ್ಯಾಪಾರ ಮಾಡಿ ಅಲ್ಲಿನ ಜನರನ್ನು ‘ಕಿರುಗಣ್ಣಿನಲ್ಲಿ’ ಪರೀಕ್ಷಿಸಿದೆ! ಜೊತೆಯಲ್ಲಿ ಸ್ಥಳೀಯ ಅಂಗನವಾಡಿಗೂ ಹೋಗಿ ಅದೂ ಇದೂ ಮಾತನಾಡುತ್ತಾ ನಿಧನ ಹೊಂದಿದ ಮಕ್ಕಳ ಜನ್ಮ ದಿನಾಂಕ ಮತ್ತಿತರ ಮಾಹಿತಿಯನ್ನು ಪಡೆದೆವು.

ಕೊನೆಗೆ ಮೂರನೇ ದಿನ ಪ್ರಶ್ನೆಯಲ್ಲಿದ್ದ ಕುಟುಂಬದ ಮನೆಗೆ ಹೋಗುವುದೆಂದೂ ಅಲ್ಲಿಗೆ ರಾಜಶೇಖರ ಬರುವುದು ಬೇಡವೆಂದು ನಿರ್ಧಾರವಾಯಿತು.

ನಾನೊಬ್ಬನೇ ಹೋದೆ!

‘ಬನ್ನಿ ಬನ್ನಿ’ ಸ್ವಾಗತ. ‘ನೀವು ಬಂದು ಮೂರು ದಿನ ಆಯ್ತು. ಇವತ್ತು ಬರ್ತಿದ್ದೀರಾ ಮನೆಗೆ’. ಮನೆಯ ಯಜಮಾನ್ತಿ ನಗುನಗುತ್ತಲೇ ಕರೆದರು.

ಕೊಂಚ ಆಶ್ಚರ್ಯವಾದರೂ, ಸುಧಾರಿಸಿಕೊಂಡು ಕುಳಿತೆ. ʼನಾನು ಬಂದಿರುವುದು ನಿಮಗೆ ಹೇಗೆ…?ʼ ʼಏ, ಈ ಚಿಕ್ಕೂರಿನಲ್ಲಿ  ಹೊಸಬರು ಯಾರೇ ಬಂದ್ರೂ ಗೊತ್ತಾಗುತ್ತೆ. ಯಾರ ಮನೇನಲ್ಲಿ ಏನು ಬೇಯಿಸ್ತಿದ್ದಾರೇಂತ ತಿಳಿದು ಹೋಗುತ್ತೆ. ನಾವೇ ಸುಮ್ನಿದ್ವಿ. ನೀವು ತೋಟಕ್ಕೆ ಹೋಗಿದ್ದಾಗ ಬಂದು ಎಲ್ಲಾ ತೋರಿಸೋಣ ಅಂತ ಎದ್ದಿದ್ದೆ. ಇವ್ರೆ ಬೇಡ ಸುಮ್ನಿರು ಅಂದ್ರು… ನಿಮಗೆ ಬೇಕಾದ ಎಲ್ಲ ಮಾಹಿತಿ ಸಿಕ್ಕಿತೆ?ʼ ಎಂದು ಆಕೆ ಹಸನ್ಮುಖರಾಗಿಯೇ ಕೇಳಿದರು.

ಮುಂದಿನದೆಲ್ಲಾ ಔಪಚಾರಿಕ ಮಾತುಕತೆ. ಅವರ ಮೊದಲ ಗಂಡ ಮತ್ತು ಮಕ್ಕಳ ಫೋಟೋ ಆಲ್ಬಮ್ಮುಗಳು, ಅವರ ಕುಟುಂಬದ ಹಿರಿಯರ ದೊಡ್ಡ ದೊಡ್ಡ ಫೋಟೋಗಳು, ಮನೆಯ ಹಜಾರದಿಂದ ಹಿಡಿದು ಹಿತ್ತಲವರೆಗೆ ಓಡಾಟ, ದೊಡ್ಡದಾದ ಬಚ್ಚಲಮನೆ, ಅಡುಗೆ ಮನೆ… ಮಕ್ಕಳ ಕೋಣೆ, ಅಲ್ಲಿ ಅದೆಷ್ಟೊಂದು ಆಟದ ವಸ್ತುಗಳು, ಅಂಗವಿಕಲತೆಯಿರುವ ಮೊದಲ ಮಗನ ಕೋಣೆ ಮತ್ತವನ ಚಿಕಿತ್ಸೆ, ಆರೈಕೆಯ ವ್ಯವಸ್ಥೆ ತೋರಿಸಿದರು. ಅದೂ ಇದೂ ಮಾತಿನಲ್ಲಿ ನನ್ನ ರೇನ್‌ಕೋಟು, ಗಂಬೂಟು, ಟೋಪಿ ವೇಶ ಕೂಡಾ ಬಂದು ಹೋಯ್ತು!

ಸಂಜೆ ಅವರ ಮನೆಯಲ್ಲೇ ಊಟ ಮಾಡಿ, ರಾಜಶೇಖರನನ್ನು ಭೇಟಿಯಾಗಿ ವಂದನೆ ಹೇಳಿ ಬಸ್‌ ಹತ್ತಿದೆ. ಆ ರಾತ್ರಿ ಕೊಡಗು ಬಿಡುವವರೆಗೂ ಭಾರೀ ಮಳೆ.
***

ಪದ್ಮಾಸುಬ್ಬಯ್ಯನವರಿಗೆ ಎಲ್ಲ ಅನುಭವ ಹೇಳಿ ಪತ್ತೇದಾರ ಪತ್ತೆಯಾಗಿಯೇಬಿಟ್ಟಿದ್ದ ಎಂದು ವಿವರಿಸುವಾಗ ಆಫೀಸಿನಲ್ಲಿ ನನ್ನ ಕತೆ ಕೇಳಿದವರೆಲ್ಲಾ ನಕ್ಕಿದ್ದೇ ನಕ್ಕಿದ್ದು. ಅಂತಹ ಊರುಗಳಲ್ಲಿ ಏನಾದರೂ ಯಾಮಾರಿದರೆ ಒಳ್ಳೆಯ ಉದ್ದೇಶವಿದ್ದರೂ ಬೀಳುವ ಗೂಸಾಗಳ ಬಗ್ಗೆಯೂ ಆತಂಕವಾಗುವಂತೆ ಹೇಳಿದ ಪದ್ಮಾ ಸುಬ್ಬಯ್ಯನವರು, ಸದ್ಯ ನಿನಗೆ ನಿನ್ನ ಫ್ರೆಂಡ್‌ ಸಿಕ್ಕಿದ್ನಲ್ಲಾ ಅದೃಷ್ಟ ಎಂದಿದ್ದರು.

ಮುಂದಿನ ದಿನಗಳಲ್ಲಿ ನಡೆದ ಪ್ರಕ್ರಿಯೆಯಂತೆ ನಾನು ಭೇಟಿ ಕೊಟ್ಟಿದ್ದ ಕುಟುಂಬದವರು ಅನಾಥರಾಗಿದ್ದ ಅವಳಿಜವಳಿ ಹುಡುಗರನ್ನೇ ಫಾಸ್ಟರ್‌ ಕೇರ್‌ನಲ್ಲಿ ಬರಮಾಡಿಕೊಂಡರು. ಮುಂದೆ ಅವರನ್ನೇ ದತ್ತು ಪಡೆದರು. ಹಲವು ವರ್ಷಗಳ ಕಾಲ ಅವರೊಡನೆ ನಾನೂ ಸಂಪರ್ಕದಲ್ಲಿದ್ದೆ.

‍ಲೇಖಕರು ವಾಸುದೇವ ಶರ್ಮ

January 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

೧ ಪ್ರತಿಕ್ರಿಯೆ

  1. Kamalakar

    ಒಳ್ಳೇ ಕತೆ. ಸ್ವಾರಸ್ಯಕರವಾದ. ನಿರಾಳವಾಗಿರುತ್ತೇ ನಿನ್ನ ಬರವಣಿಗೆ. ಓದಲು ಹಗುರ. ಎಲ್ಲೂ ಬಿಗಿ ಬಿಡದೆ ಕೊನೆವರೆಗೂ ಓದುವಂತೆ ಹಿಡಿದುಕೊಳ್ಳುತ್ತೆ. ಚೆನ್ನಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: