ಪತ್ರಿಕೆಗಳು ತಮ್ಮನ್ನೇಕೆ ವಿಮರ್ಶಿಸಿಕೊಳ್ಳಬಾರದು?

ಜನಗಳ ಮನ

-ವಿಶ್ವೇಶ್ವರ ಭಟ್

kamathಖ್ಯಾತ ಪತ್ರಕರ್ತ ಎಂ. ವಿ. ಕಾಮತ್ ಬಹಳ ವರ್ಷಗಳ ಕಾಲ ‘ಪ್ರೋಬ್’ ಎಂಬ ಮ್ಯಾಗಜಿನ್ ನಲ್ಲಿ ‘ಮೀಡಿಯಾ ವಾಚ್’ ಎಂಬ ಅಂಕಣ ಬರೆಯುತ್ತಿದ್ದರು. ಈ ಅಂಕಣವನ್ನು ತಪ್ಪದೇ ಓದುವಂತೆ ನಮ್ಮ ಮೇಷ್ಟ್ರಾದ ಡಾ. ಎ.ಎಸ್. ಬಾಲಸುಬ್ರಮಣ್ಯ ಹೇಳುತ್ತಿದ್ದರು. ಮೊದಲ ಅಂಕಣ ಓದಿದ್ದೇ ತಡ, ಪ್ರೋಬ್ ನ ಹಳೆಯ ಸಂಚಿಕೆಗಳನ್ನೆಲ್ಲ ಸಂಗ್ರಹಿಸಿ ಕಾಮತ್ ರ ಈ ಬರಹಗಳನ್ನೆಲ್ಲ ಓದಿದ್ದೆ. ಈ ಪತ್ರಿಕೆ ಪ್ರಕಟಣೆ ಸ್ಥಗಿತಗೊಳಿಸುವವರೆಗೆ ಮೀಡಿಯಾವಾಚ್ ಅಂಕಣವನ್ನು ತಪ್ಪಿಸಿಕೊಳ್ಳಲಿಲ್ಲ.

ಕಾಮತ್ ಅವರು ಎಲ್ಲ ಪ್ರಮುಖ ಇಂಗ್ಲಿಷ್ ಪತ್ರಿಕೆಗಳನ್ನು ಕೂಲಂಕಷವಾಗಿ ಓದಿ, ಅದಕ್ಕೊಂದು ಟಿಪ್ಪಣಿ ಬರೆಯುತ್ತಿದ್ದರು. ಯಾವುದಾದರೂ ಒಂದು ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಬೇರೆ ಬೇರೆ ಪತ್ರಿಕೆಗಳು ಹೇಗೆ ವರದಿ ಮಾಡಿವೆ, ವರದಿಯಲ್ಲಿ ಏನು ದೋಷವಿದೆ, ಪತ್ರಿಕೆಗಳ ನಿಲುವೇನು, ಬಿಟ್ಟುಹೋದ ಪ್ರಮುಖ ಅಂಶಗಳೇನು, ವರದಿಗಾರನ ವೈಶಿಷ್ಟ್ಯ, ಎಡವಿದ ಪರಿ… ಹೀಗೆ ವರದಿಗಾರಿಕೆಯ ಅನೇಕ ಮಜಲುಗಳನ್ನು ಅವರು ಸೂಕ್ಷ್ಮವಾಗಿ ಗಮನಿಸಿ ಬರೆಯುತ್ತಿದ್ದರು.

ಪತ್ರಿಕೆ, ಪತ್ರಕರ್ತರ ಬಗ್ಗೆ ವಿಶೇಷ ಆಸಕ್ತಿಯಿದ್ದವರಿಗೆ ಈ ಅಂಕಣ ವಿಶೇಷ ಅನುಭವ ನೀಡುತ್ತಿತ್ತು. ಒಬ್ಬ ಅನುಭವಿ, ನುರಿತ ಪತ್ರಕರ್ತ ಒಂದು ಘಟನೆಯನ್ನು ಸಾಮಾನ್ಯನಿಗಿಂತ ಹೇಗೆ ಭಿನ್ನವಾಗಿ ಗಮನಿಸುತ್ತಾನೆಂಬುದನ್ನು ಈ ಅಂಕಣ ಸೊಗಸಾಗಿ ನಿರೂಪಿಸುತ್ತಿತ್ತು. ವರದಿಗಾರರಿಗೆ ಓದುಗರ ಹೊರತಾಗಿ ತಮ್ಮ ವೃತ್ತಿಯಲ್ಲಿಯೇ ಇರುವ ‘ದೊಡ್ಡಣ್ಣ’ನೊಬ್ಬ ದಿಟ್ಟಿಸಿ ನೋಡುತ್ತಿದ್ದಾನೆಂಬ ಸಣ್ಣ ಎಚ್ಚರವೂ ಇದರಿಂದ ಸಿಗುತ್ತಿತ್ತು. ಆ ಅಂಕಣ ಬರಹಗಳನ್ನೆಲ್ಲ ಸೇರಿಸಿ ಪುಸ್ತಕ ಮಾಡಿದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉತ್ತಮ ಪಠ್ಯವಾಗುತ್ತಿತ್ತು. ಅಂಥ ಕೆಲಸವನ್ನು ವಿಶ್ವವಿದ್ಯಾಲಯಗಳಲ್ಲಿರುವ ಪತ್ರಿಕೋದ್ಯಮ ಪಾಠ ಮಾಡುವ ಅಧ್ಯಾಪಕರು ಮಾಡಿದರೆ ಚೆನ್ನಾಗಿರುತ್ತದೆ.

ಕನ್ನಡದಲ್ಲೂ ಇಂಥ ಪ್ರಯೋಗವನ್ನೇಕೆ ಮಾಡಬಾರದೆಂದು ಕೆಲವು ವರ್ಷಗಳಿಂದ ಗಾಢವಾಗಿ ಅನಿಸುತ್ತಿತ್ತು. ಈ ಕೆಲಸವನ್ನು ಪತ್ರಿಕಾ ಕಚೇರಿಯ ಹೊರಗಿನವರೊಬ್ಬರು ಮಾಡಿದರೇ ಸೂಕ್ತ ಎಂದೂ ಅನಿಸುತ್ತಿತ್ತು. ಕನ್ನಡ ಪತ್ರಿಕೆಗಳು ಟಿವಿ ಕಾರ್ಯಕ್ರಮಗಳನ್ನು ವಿಮರ್ಶೆ ಮಾಡುತ್ತವೆ. ಅದಕ್ಕಾಗಿ ಅರ್ಧಪುಟಗಟ್ಟಲೆ ಪುಟ ಮೀಸಲಿಟ್ಟ ಪತ್ರಿಕೆಗಳಿವೆ. ಆದರೆ ಯಾವ (ಕನ್ನಡ) ಪತ್ರಿಕೆಗಳೂ ತಮ್ಮ ವಿಮರ್ಶೆಗೇ ಅಂಕಣ ಮೀಸಲಿಟ್ಟ ನಿದರ್ಶನಗಳು ನೆನಪಾಗುತ್ತಿಲ್ಲ.

ಜಿಲ್ಲಾಪತ್ರಿಕೆ, ಟ್ಯಾಬ್ಲಾಯಿಡ್ ಹಾಗೂ ರಾಜ್ಯಮಟ್ಟದ ಪತ್ರಿಕೆಗಳು ಕನ್ನಡ ಪತ್ರಿಕೋದ್ಯವನ್ನು ಸಮೃದ್ಧ ಹಾಗೂ ಚಲನಶೀಲಗೊಳಿಸಿರುವ ಈ ದಿನಗಳಲ್ಲಿ ಪತ್ರಿಕೆಗಳ ಬಗ್ಗೆ ಒಂದಷ್ಟು ವಿಮರ್ಶೆ ಪತ್ರಿಕೆಯಲ್ಲೇ ಆದರೆ ಒಳ್ಳೆಯದು. ನಮ್ಮ ಪ್ರಯತ್ನಗಳನ್ನು ಬೇರೊಬ್ಬರು ಗುರುತಿಸಿದೆ, ಸುಮ್ಮನೆ ಹಾದುಹೋಗಬಹುದಾದ ಕೆಲವು ಪ್ರಯೋಗಗಳಿಗೆ ಗ್ರಹಿಕೆಯ ಮಹತ್ವದಿಂದ ಸ್ಥಾಯಿಗುಣ ಪಡೆದುಕೊಳ್ಳಬಹುದು. ಹಾಗೆಂದು ಇವರು ಮಾಧ್ಯಮ ಧರ್ಮಾಧಿಕಾರಿ (ಓಂಬುಡ್ಸ್ ಮನ್) ಅಲ್ಲ.

ಕಳೆದ ಒಂದೂವರೆ ದಶಕದಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸುದ್ದಿಮನೆ ಹೊಸ ಸ್ವರೂಪ ಪಡೆದುಕೊಂಡಿದೆ. ಹೊಸ ಪೀಳಿಗೆಯ ಪತ್ರಪತ್ರಕರ್ತರು ಮುಂಚೂಣಿಯಲ್ಲಿದ್ದಾರೆ. ಇದರ ಜೊತೆಗೆ ತಂತ್ರಜ್ಞಾನವೂ ಕೈಜೋಡಿಸಿದೆ. ಇಂಟರ್ನೆಟ್, ಈ-ಪೇಪರ್, ಬ್ಲಾಗಿಂಗ್, ಸಿಟಿಜನ್ ಜರ್ನಲಿಸಂ, …ಎಲ್ಲವೂ ಸ್ವೀಕಾರಾರ್ಹವಾಗಿದೆ. ಇವೆಲ್ಲ ನಮ್ಮ ಪತ್ರಿಕೆಯ ವರದಿಗಾರಿಕೆಯ ಮೇಲೂ ಪರಿಣಾಮವನ್ನುಂಟು ಮಾಡಿವೆ. ಓದುಗರಿಗೆ ಈ ಪರಿವರ್ತನೆಗಳು ತಲ್ಲಣವೆನಿಸಿ ಗೊಂದಲವೆಬ್ಬಿಸಬಾರದು. ಜತೆಗೆ ವಿಮರ್ಶೆಯಿಂದ ಹೊರಸೂಸುವ ಅನಿಸಿಕೆಗಳು ಪತ್ರಿಕೆ-ಪತ್ರಿಕೆಗಳ ಮಧ್ಯೆ ಸ್ನೇಹಸೇತುವಾಗಬೇಕು. ಅವೆಲ್ಲಕ್ಕಿಂತ ಮುಖ್ಯವಾಗಿ ವೃತ್ತಿಪರತೆಯನ್ನು ಹೆಚ್ಚಿಸಬೇಕು.

ಪತ್ರಿಕೆ ಮತ್ತು ಟಿ ವಿ ಎರಡರಲ್ಲೂ ಕೆಲಸ ಮಾಡಿ ಅನುಭವವಿರುವವರು, ಮಾಧ್ಯಮ ರಂಗದ ಬೆರಗುಗಳಿಗೆ ಸದಾ ಕಣ್ತೆರೆದುಕೊಂಡಿರುವ ಸೂಕ್ಷ್ಮ ಮನಸ್ಸಿನ ಪತ್ರಿಕಾಸ್ನೇಹಿಯೊಬ್ಬರು ಇಂತದ್ದೊಂದು ವಿಶಿಷ್ಟ ಅಂಕಣ ಬರೆಯಲು ಒಪ್ಪಿಕೊಂಡಿದ್ದಾರೆ.

ನಿಮಗೇನನಿಸುತ್ತದೆ ಹೇಳಿ.

‍ಲೇಖಕರು avadhi

July 17, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This