ಪರಸಂಗ, ಇದು “ಬ್ಯಾಲ”ನ ಪರಸಂಗ

lokesh1.jpgಲಾವಿದರು ಮರೆಯಾದಂತೆ ಅವರ ಸಾಧನೆಗಳೂ ಮರೆತು ಹೋಗುವ ಕಾಲ ಇದು. ಕಲಾವಿದನೋರ್ವನ ನೆನಪನ್ನು, ಆತ ತನ್ನ ಕಾಲವನ್ನು ಕಂಡ ಬಗೆಯನ್ನು ದಾಖಲಿಸುವ, ಆತನ ಬಳಿಕವೂ ಅದನ್ನು ಉಳಿಸಿಕೊಳ್ಳುವ ಕೆಲಸ ಇವತ್ತಿನ ಜರೂರುಗಳಲ್ಲಿ ಒಂದು. ಇಂದು ನಮ್ಮ ನಡುವೆ ಇಲ್ಲದ ನಟ ಲೋಕೇಶ್ ಅವರ ವಿಚಾರದಲ್ಲಿ ಇಂಥ ದಾಖಲಾತಿಗೆ ಪ್ರೀತಿ ಮತ್ತು ಆಪ್ತತೆಯಿಂದ ಯತ್ನಿಸಿದ್ದು “ಅಗ್ನಿ” ಪತ್ರಿಕೆ. ಲೋಕೇಶ್ ಪರಸಂಗವನ್ನು ಅವರಿಂದಲೇ ಹೇಳಿಸಿ, ಪ್ರತಿ ವಾರವೂ ಆ ಕಥೆಗಾಗಿ ಪುಟವನ್ನು ಮೀಸಲಿಟ್ಟು ಅವರ ಅಮೂಲ್ಯ ನೆನಪುಗಳನ್ನು ದಾಖಲಿಸುವ ಮೂಲಕ ಅಗ್ನಿ ಪತ್ರಿಕೆ ಮಾಡಿದ್ದು ಸಾಂಸ್ಕೃತಿಕವಾಗಿ ಬಲು ಮಹತ್ವದ ಕೆಲಸ. ಲೋಕೇಶ್ ಬರೀ ನೆನಪಾಗಿ ಮಾತ್ರವಲ್ಲ, ಇನ್ನೂ ಇದ್ದಾರೆ, ಇಲ್ಲೇ ಕೂತು ಕಥೆ ಹೇಳುತ್ತಿದ್ದಾರೆ ಅನ್ನಿಸುವ ಹಾಗೆ ಮಾಡುವ ಆ ನೆನಪುಗಳ ಧಾರಾವಾಹಿಯನ್ನು ಅಗ್ನಿ ಈಗ ಪುಸ್ತಕ ರೂಪದಲ್ಲೂ (ಲೋಕೇಶ್ ಪರಸಂಗ, ನಿರೂಪಣೆ: ಡಿ ಸುಮನಾ ಕಿತ್ತೂರು) ತಂದಿದೆ.

ಆ ಪುಸ್ತಕದಲ್ಲಿನ ನೆನಪಿನ ಕೆಲವು ಸಾಲುಗಳನ್ನು ಇಲ್ಲಿ ಆಯ್ದು ಕೊಡುತ್ತಿದ್ದೇವೆ. ಈ ಪರಸಂಗ, ನಟ ಮತ್ತು ಸಾಹಿತಿಯೊಬ್ಬನ ಸಂಬಂಧ ಎಷ್ಟೊಂದು ಗಾಂಭೀರ್ಯತೆಯಿಂದ, ಉತ್ತಮ ನಿಲುವಿನಿಂದ ಒಡಮೂಡಿದ್ದ ಕಾಲವೊಂದಿತ್ತಲ್ಲ ಎಂಬುದರ ಕಥನವೂ ಆಗುತ್ತಿದೆ.

* * * 

lokesh.jpgಒಂದಿನ “ಎಲ್ಲಿಂದಲೋ ಬಂದವರು” ಚಿತ್ರದ ಚಿತ್ರೀಕರಣ ಆರಂಭಿಸಿದರು ಲಂಕೇಶ್. ನಂಜನಗೂಡು ಬಳಿಯ ಕುಪ್ಪೇಗಾಲದಲ್ಲಿ ಶೂಟಿಂಗಿಗೆ ಜಾಗ ಗೊತ್ತು ಮಾಡಿಕೊಂಡಿದ್ದರು. ಆ ಹಳ್ಳಿಯ ಜಮೀನ್ದಾರರೊಬ್ಬರ ಮನೆಯಲ್ಲಿ ನಮಗೆ ವಾಸ್ತವ್ಯ ಕಲ್ಪಿಸಲಾಗಿತ್ತು.

ಲಂಕೇಶರ ಚಿತ್ರದಲ್ಲಿ ನಟಿಸುವಾಗಿನ ಅನುಭವ ವಿಭಿನ್ನವಾಗಿತ್ತು. ನನಗೆ ಈ ಚಿತ್ರದಲ್ಲಿ ಡೈಲಾಗ್ ಅಂತ ಇದ್ದಿದ್ದು ಕೇವಲ ಎರಡು ಪೇಜ್ ಗಳು ಮಾತ್ರ! ಆಳು ಬ್ಯಾಲನ ಪಾತ್ರವಾದ್ದರಿಂದ ನನಗೊಂದು ಜೊತೆ ಬಟ್ಟೆ ಕೊಟ್ಟಿದ್ದರು. ಅದಕ್ಕೆ ನಾನು ಕೂತು ಬಣ್ಣ ಬಳಿದುಕೊಂಡಿದ್ದೆ. ಮಣ್ಣು, ಕೆಸರಿನಲ್ಲಿ ಹಾಕಿ ಕೊಳೆ ಮಾಡಿದರೆ, ಚಿತ್ರದ ಕಂಟಿನ್ಯುಟಿಗೆ ಧಕ್ಕೆಯಾಗಬಹುದು ಎನ್ನುವ ಆಲೋಚನೆ ನನ್ನದಾಗಿತ್ತು. ಆ ಪಾತ್ರದ ಬಗ್ಗೆ ನನಗಿದ್ದ ಕಾಳಜಿಯನ್ನು ಗಮನಿಸುತ್ತಿದ್ದರು ಲಂಕೇಶ್. ಕುಪ್ಪೇಗಾಲದಿಂದ ನಾಲ್ಕು ಕಿಲೋಮೀಟರ್ ದೂರವಿರುವ ತೋಟವೊಂದರಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿಗೆ ಬಸ್ ವ್ಯವಸ್ಥೆ ಇತ್ತು. ಆದರೂ, ನಾನು ಹಳ್ಳಿ ತಲುಪಲು ಕಟ್ ರೂಟ್ ಆಗಿದ್ದ ಗದ್ದೆಬದುಗಳನ್ನು ಹಾದು ಮನೆ ತಲುಪುತ್ತಿದ್ದೆ. ಮನೆಯಿಂದ ಹೊರಡುವಾಗಲೇ ಆಳಿನ ಕಾಸ್ಟ್ಯೂಮ್ ಹಾಕಿಕೊಂಡು ಹೋಗುತ್ತಿದ್ದೆ. ನಾನು ಗದ್ದೆಬದುಗಳಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಬೆಳಗಿನ ಕೆಲಸಕ್ಕೆಂದು ಕೂಲಿಯಾಳುಗಳೂ ಆ ಹಾದಿಯಲ್ಲೇ ಸಾಗುತ್ತಿದ್ದರು. ಇತ್ತ ಕಡೆಯಿಂದ ಮತ್ತು ಅತ್ತಲಿಂದ ಬರುವಾಗಲೂ ಅವರು ನನಗೆ ಭೇಟಿಯಾಗುತ್ತಿದ್ದರು. ಆ ಮಂದಿಗೆ ನಾನು ಲೋಕೇಶ್ ಅಥವಾ ನಟ ಅನ್ನುವುದರ ಯಾವ ಅರಿವೂ ಇರಲಿಲ್ಲ. ಬೆಳಗ್ಗೆ ಸಿಕ್ಕಿದ ಕೂಡಲೇ “ಏನ್ ಬುದ್ಧಿ ನೀವೂ ಕೆಲಸಕ್ಕೆ ಹೊರಟ್ರಾ…” ಅನ್ನುತ್ತಿದ್ದರು. ಹಾಗಾಗಿ ಅವರ ಆಳು-ಕಾಳು, ಸಾಹುಕಾರರ ಬಗೆಗೆ ಮಾತುಕತೆಯಾಡಿಕೊಂಡು ನಾನು ಅವರೊಡನೆ ಸಾಗುತ್ತಿದ್ದೆ.

ಕುಪ್ಪೇಗಾಲದಲ್ಲಿ ಸುಮಾರು ಮೂವತ್ತು ದಿನಗಳು ವಾಸ್ತವ್ಯ ಹೂಡಿದ್ದೆವು. ನಾನು ಪ್ರತಿದಿನವೂ ಅದೊಂದೇ ಬಟ್ಟೆಯಲ್ಲಿ ಹೋಗುತ್ತಿದ್ದುದನ್ನು ಅವರು ಗಮನಿಸಿದ್ದರು. ಒಂದು ವಾರ ನೋಡಿದರು, ಎರಡು ವಾರ ನೋಡಿದರು. ನಾನು ಆ ಬಟ್ಟೆಯನ್ನು ಬಿಚ್ಚುವಂತೆಯೇ ಕಾಣುವುದಿಲ್ಲ ಅಂದುಕೊಂಡು, “ಏನ್ ಬುದ್ಧಿ, ಬರುವಾಗ ನೀವು ಇನ್ನೊಂದ್ ಜೊತೆ ಬಟ್ಟೆ ತರಬಾರದಿತ್ತಾ…!” ಅಂತ ಒಂದಿನ ಕೇಳಿಯೇಬಿಟ್ಟರು. ಕಡೆಗೆ, ನಾನು ಶೂಟಿಂಗ್ ಗೆಂದು ಬಂದಿರುವುದಾಗಿಯೂ, ಶೂಟಿಂಗ್ ಮುಗಿಸಿ, ಮನೆಗೆ ಹೋದ ಮೇಲೆ ಅಲ್ಲಿ ಬೇರೆ ಬಟ್ಟೆ ಹಾಕಿಕೊಳ್ಳುವುದಾಗಿಯೂ ವಿವರಿಸಿ ಹೇಳಿದ ಮೇಲೆ, ಆ ಮಂದಿಯ ಸಂತೋಷ ಹೇಳತೀರದಾಗಿತ್ತು.

lankeshcolour.jpgಲಂಕೇಶರ ಪ್ರತಿಭೆ ಏನು ಅನ್ನುವುದನ್ನು ನಾನು ಹತ್ತಿರದಿಂದ ಕಾಣುವಂತಹ ಅವಕಾಶ ಒದಗಿದ್ದು ಅಲ್ಲಿ. ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಅದೇನಪ್ಪಾ ಅಂದ್ರೆ, ಪಾತ್ರಧಾರಿ ಬ್ಯಾಲ ಕಬ್ಬಿಣದ ಪೆಟ್ಟಿಗೆಯೊಂದನ್ನಿಟ್ಟುಕೊಂಡಿರುತ್ತಾನೆ. ಅದನ್ನು ಅವನ ಅರಿವಿಗೆ ಬಾರದಂತೆ ಮಕ್ಕಳು ತಂದು ಆಟ ಆಡುತ್ತಿರುತ್ತವೆ. ತನ್ನ ಪೆಟ್ಟಿಗೆ ಜೊತೆ ಆಟ ಆಡುತ್ತಿರುವ ಆ ಮಕ್ಕಳನ್ನು ಗದರಿಸಿ, ಅದನ್ನು ತೆಗೆದುಕೊಂಡು ಹೋಗುತ್ತಾನೆ. ಇದು ಚಿತ್ರೀಕರಣವಾಗುತ್ತಿದ್ದ ದೃಶ್ಯ.

ಈ ದೃಶ್ಯದ ನಂತರ ಪೆಟ್ಟಿಗೆಯೊಳಗೆ ಏನಿತ್ತು, ಅದನ್ನು ಯಾಕೆ ಕಿತ್ತುಕೊಂಡ ಎನ್ನುವುದರ ಚಿತ್ರೀಕರಣವಾಗಬೇಕಿತ್ತು. “ಏನಿಟ್ಟಿರ್ತೀರಿ ಅದರಲ್ಲಿ?” ಅಂತ ಕುತೂಹಲದಿಂದ ಲಂಕೇಶ್ ರನ್ನು ಕೇಳಿದೆ. ಆಗ ಆತ, “ಅದರಲ್ಲಿ ಒಂದು ಜೊತೆ ಗೆಜ್ಜೆ, ಬಳೆಗಳು ಮತ್ತು ಮುಷ್ಟಿಯಷ್ಟು ಕೂದಲಿರುತ್ತವೆ…” ಎನ್ನುವುದನ್ನು ಕೇಳಿ ಆ ಪಾತ್ರದ ಬಗ್ಗೆ ನಾನು ಥ್ರಿಲ್ ಆಗಿಹೋಗಿದ್ದೆ.

ತಾನು ಇಷ್ಟಪಡುವ ಹುಡುಗಿ ಬೇರಿನ್ಯಾರೊ ಪೇಟೆಯವನೊಬ್ಬನನ್ನು ಪ್ರೀತಿ ಮಾಡುತ್ತಿರುವುದನ್ನು ಕಂಡ ಬ್ಯಾಲ ತನ್ನ ಪ್ರೀತಿ ಬೇರಿನ್ಯಾರಿಗೂ ಸಿಗಬಾರದು ಎನ್ನುವ ತಳಮಳದಲ್ಲಿ ಆಕೆಯನ್ನು ಕೊಂದು ಬಳೆ, ಕೂದಲು, ಗೆಜ್ಜೆ ಕಸಿದುಕೊಂಡು ತಂದು ಅದನ್ನು ಅತೀ ಜತನದಿಂದ ಇಟ್ಟುಕೊಂಡಿರುತ್ತಾನೆ. ಅಂದರೆ, ಆ ಪಾತ್ರ ಅಷ್ಟರಮಟ್ಟಿಗೆ ಹುಡುಗಿ ಮೇಲೆ ಪೊಸೆಸಿವ್ ಆಗಿರುತ್ತೆ. ಅಂಥದೊಂದು ಪಾತ್ರದ ಸೃಷ್ಟಿ ಮಾಡಿದ್ದಾರಲ್ಲಾ ಲಂಕೇಶ್ ಎನ್ನುವ ಹೆಮ್ಮೆ ನನ್ನಲ್ಲಿತ್ತು.

ಆ ಪಾತ್ರವನ್ನು ಅವರು ಬ್ಯಾಲೆನ್ಸ್ ಮಾಡಿದ ರೀತಿಯೂ ಅದ್ಭುತವಾಗಿತ್ತು. ಬ್ಯಾಲ ಕೊಲೆಗಾರನಾದರೂ, ಮಾನವೀಯತೆಯುಳ್ಳ ಮನುಷ್ಯ ಎನ್ನುವುದನ್ನು ತೋರಿಸುವ ಅವರ ಚಾತುರ್ಯ ಅಲ್ಲಿ ಅಡಕವಾಗಿತ್ತು.

“ಎಲ್ಲಿಂದಲೋ ಬಂದವರು” ಚಿತ್ರದಲ್ಲಿ ನನಗೆ ಅತಿ ಇಷ್ಟವಾದ ದೃಶ್ಯವೆಂದರೆ, ಮನೆಯೊಡತಿಗೆ ಬ್ಯಾಲ ತನ್ನ ಹಿಂದಿನ ಕಥೆ ಹೇಳುವ ಪ್ರಸಂಗ. ಮನೆ ಆಳಾದರೂ, ಜಮೀನ್ದಾರನ ಹೆಂಡತಿಯೊಡನೆ ಆತ ಮಾತೃ ಸ್ನೇಹದಿಂದಿರುತ್ತಾನೆ. ಆಕೆ ಅಲ್ಲಿಯೇ ಕೆಲಸ ಮಾಡುವ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಳ್ಳುವಂತೆ ಬ್ಯಾಲನಿಗೆ ಒತ್ತಾಯಿಸುತ್ತಾಳೆ. ಆತ ಒಪ್ಪಿಕೊಳ್ಳುವುದಿಲ್ಲ. ಆ ಬೇಸರಕ್ಕೆ ಮನೆಯೊಡತಿ ಊಟ ಮಾಡುವುದಿಲ್ಲ. ಅನಿವಾರ್ಯವಾಗಿ ತನ್ನ ಹಿಂದಿನ ಕಥೆಯನ್ನು ಬ್ಯಾಲ ಹೇಳಲೇಬೇಕಾಗುತ್ತದೆ.

ನನಗೂ ಕುತೂಹಲವಿತ್ತು. ಎಷ್ಟು ನಾಜೂಕಾಗಿ ಆತನ ಹಿಂದಿನ ಕಥೆಯನ್ನು ನಿರೂಪಿಸಬಹುದು ಅಂತ.

ಈ ಸಾಹಿತಿಗಳು ನಿರ್ದೇಶಕರುಗಳಾದ್ರೆ ಒಂದು ಗೋಳಿದೆ. ಅವರು ಸ್ಪಾಟ್ ನಲ್ಲಿ ಡೈಲಾಗ್ ಬರೆಯೋದು ಹೆಚ್ಚು. ಅದೇ ರೀತಿ ಲಂಕೇಶರು ಕೂಡ ಸೆಟ್ ನಲ್ಲೇ ಹೆಚ್ಚಾಗಿ ಡೈಲಾಗ್ ಬರೆಯುತ್ತಿದ್ದರು. ಬ್ಯಾಲ ಹೇಳುವ ಕಥೆಯ ಡೈಲಾಗ್ ಷೀಟ್ ಕೊಟ್ಟುಬಿಡಿ ಸಾರ್ ಅಂದೆ. ಹತ್ತು ನಿಮಿಷದಲ್ಲಿ ಕೊಡ್ತೀನಿ ಅಂತ ಬರೆಯುತ್ತಾ ಕೂತರು ಲಂಕೇಶ್. ಆಮೇಲೆ ಕೊಟ್ಟ ಅವರ ಡೈಲಾಗ್ ಶೀಟ್ ನೋಡಿ ನಾನು ದಂಗು ಬಡಿದುಹೋಗಿದ್ದೆ. ಎಂಥಾ ರೊಮ್ಯಾಂಟಿಕ್ ಡೈಲಾಗ್ ಅಂತೀರಿ… ಅದನ್ನು ಓದುತ್ತಾ ನನ್ನೊಳಗೆ ಒಂಥರಾ ತಳಮಳ ಶುರುವಾಗಿತ್ತು. ನೀವುಗಳೂ ಆ ಚಿತ್ರ ನೋಡಿರ್ತೀರಿ…. “ಅವ್ವ ನಂಗೂ ಒಬ್ಳು ಹುಡುಗಿ ಇದ್ಲು. ಬೆಳದಿಂಗಳು ನೋಡಿದ್ರೆ ಬೊಗಸೆಯಲ್ಲಿ ಹಿಡಿದು ಇಬ್ರೂ ಒಟ್ಟಿಗೆ ಕುಡೀಬೇಕು ಅನ್ನಿಸ್ತಿತ್ತು…” ಈ ದೃಶ್ಯದ ಚಿತ್ರೀಕರಣವಾಗುತ್ತಿತ್ತು. ಈ ಟೇಕ್ ಮುಗಿಯುವಾಗ ಲಂಕೇಶ್ “ಕಟ್” ಹೇಳಿ ಮೌನವಾಗಿಬಿಟ್ಟರು. ಆವತ್ತು ನಾನು ಅವರ ಕಣ್ಣಲ್ಲಿ ನೀರು ಕಂಡೆ.

ಲಂಕೇಶರಂತಹ ಲಂಕೇಶ್ ಎಮೋಷನಲ್ ಸನ್ನಿವೇಶಕ್ಕೆ ಹಾಗೆ ಸ್ಪಂದಿಸಿದ್ದನ್ನು ಮೊದಲ ಬಾರಿಗೆ ಕಂಡೆನಾದ್ದರಿಂದ ನಾನೂ ಅಚ್ಚರಿಗೊಳಗಾಗಿದ್ದೆ. ಸುಮಾರು ಒಂದು ತಿಂಗಳು ಕಾಲ ಜೊತೆಯಲ್ಲಿದ್ದೆವು. ಆ ದಿನಗಳಲ್ಲಿ ಚರ್ಚಿಸಿದಂತಹ ಅನುಭವವಿದು. ಅವರ ಮಾತಿಗೂ, ಅವರ ಸ್ವಭಾವಕ್ಕೂ ಮತ್ತವರ ಬರವಣಿಗೆಗೂ ಅರ್ಥಾತ್ ಸಂಬಂಧಗಳಿರಲಿಲ್ಲ. ಅಂದರೆ ಥಟ್ಟಂತ ನೋಡಿದರೆ ಒರಟು ಮನುಷ್ಯ ಅನ್ನಿಸುತ್ತಿತ್ತು. ಆದರೆ ಆತ ಕೂತು ಮಾತನಾಡುವಾಗ ಎಷ್ಟೆಲ್ಲ ವಿಷಯಗಳನ್ನು ಮಾತನಾಡಲು ಸಾಧ್ಯವಿದೆ ಎನ್ನುವಂತಹ ವ್ಯಕ್ತಿಯಾಗಿದ್ದರು. ಅವರ ಕೃತಿಗಳನ್ನು ಓದಿದಾಗ ಇವರೇನಾ ಅವುಗಳನ್ನು ಬರೆದಿರೋದು ಎನ್ನುವ ಅಚ್ಚರಿ…

ನನಗೆ ತಿಳಿದಂತೆ ಲಂಕೇಶರಿಗೆ ಕೆಮೆರಾ ಟೇಕಿಂಗ್ ಬಗ್ಗೆ ಅಷ್ಟು ತಿಳಿದಿರಲಿಲ್ಲ. ಆದರೆ, ಸ್ಕ್ರಿಪ್ಟ್ ಮತ್ತು ಸೀನ್ ಟು ಸೀನ್ ಅನ್ನು ಬಹಳ ನಿಖರವಾಗಿ ಹೇಳುತ್ತಿದ್ದರು. ಹೆಚ್ಚಾಗಿ ಕೆಮೆರಾಮನ್ ನನ್ನು ಅವಲಂಬಿಸುತ್ತಿದ್ದರು. ಹಾಗಾಗಿ ಚಿತ್ರದ ಕೆಲವೊಂದು ಸನ್ನಿವೇಶದಲ್ಲಿ ನಾವಿಬ್ಬರೂ ಬಿಸಿಬಿಸಿ ಚರ್ಚೆ ನಡೆಸಿದ ಸಂದರ್ಭವೂ ಇತ್ತು. ಅದೊಂದು ದೃಶ್ಯದಲ್ಲಿ ನಾನು ಅತಿ ಕೋಪದಿಂದ “ಮಾದೇವಿ…” ಅಂತ ನಾಯಕಿಯನ್ನು ಕೂಗುವುದಿತ್ತು. ಆ ಶಾಟ್ ಮುಗಿದಾಗ, ಲಂಕೇಶ್ ಮುಸಿಮುಸಿ ನಗತೊಡಗಿದರು. “ಯಾಕ್ ಲಂಕೇಶ್ ನಗ್ತಿದ್ದೀರಾ…” ಅಂದೆ. “ಎಷ್ಟೇ ಆದ್ರೂ ನೀವು ನಾಟಕದವರು. ಧ್ವನಿ ಎತ್ತರ ಅಲ್ವೇ…” ಅಂದರು.

“ಇದಕ್ಕೆ ಡಬ್ಬಿಂಗ್ ಮಾಡಬೇಕು ತಾನೇ. ಅಲ್ಲಿ ನೋಡಿ ಹೇಳಿ…” ಅಂದೆ.

ನನ್ನ ಎಮೋಷನ್ ಬಿಲ್ಡಪ್ ಮಾಡಿಕೊಳ್ಳಲು ಚಿತ್ರೀಕರಣದಲ್ಲಿ ನಾನು ಧ್ವನಿ ಎತ್ತರಿಸಿದ್ದೆ. ಡಬ್ಬಿಂಗ್ ನಲ್ಲಿ ಅದನ್ನು ಎಷ್ಟು ಕಿರಿದಾಗಿ ಬೇಕಾದರೂ ಮಾಡಿಕೊಳ್ಳಬಹುದಿತ್ತು. ಆ ಸಾಧ್ಯತೆ ಬಗ್ಗೆ ಹೇಳಿದಾಗ, ತಕ್ಷಣವೇ “ಹೌದಲ್ರೀ… ಹಾಗಿದ್ರೆ ಈ ದೃಶ್ಯ ಚೆನ್ನಾಗಿ ಬರುತ್ತೆ.. ಸಾರಿ…” ತಮ್ಮ ತಪ್ಪನ್ನು ಅರಿತುಕೊಳ್ಳಲು ಸಾಧ್ಯವಿದ್ದ ವ್ಯಕ್ತಿಯಾಗಿದ್ದರು ಆತ.

ನನಗೆ ಅಡುಗೆ ಮಾಡುವ ಹವ್ಯಾಸವಿತ್ತು. ಚಿತ್ರೀಕರಣದಲ್ಲಿ ಬಿಡುವು ಸಿಕ್ಕರೆ, ನಾನೇ ಅಡುಗೆ ಮಾಡಿ, ಮುಂದೆ ನಿಂತು ಬಡಿಸುತ್ತಿದ್ದೆ. ಒಂದಿನ ಅವರು “ಲೋಕೇಶ್ ನಿಮ್ಗೆ ಫಾದರ್ ಲೀ ಅಫೆಕ್ಷನ್ ಕಣ್ರೀ…” ಅಂದರು.

“ಯಾಕೆ, ಮದರ್ ಲೀ ಅಫೆಕ್ಷನ್ ಆಗಲ್ವಾ ಇದು…” ಎಂದೆ.

“ಹೆಂಗೆ?” ಅಂತ ಕೇಳಿದರು ಲಂಕೇಶ್.

“ನನ್ನ ತಾಯಿ ನನ್ಗೆ ಆಪ್ಯಾಯಮಾನವಾದ ವ್ಯಕ್ತಿ. ಅದೇ ವ್ಯಕ್ತಿತ್ವ ನನಗೂ ಬಂದಿದೆಯಾದ್ದರಿಂದ ಇದು ಮದರ್ ಲೀ ಅಫೆಕ್ಷನ್ ಅಲ್ವಾ…” ಎನ್ನುವ ನನ್ನ ವಿವರಣೆಗೆ ನಕ್ಕು, “ಏನ್ರೀ ನೀವು… ಹಿಂಗೆಲ್ಲ ಮಾತಾಡ್ತೀರಾ…” ಅಂದಿದ್ದರು ಲಂಕೇಶ್.

“ಎಲ್ಲಿಂದಲೋ ಬಂದವರು” ಚಿತ್ರಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿಯೂ ಬಂತು. ಅದ್ಭುತ ಮೆಚ್ಚುಗೆಯೂ ದೊರೆಯಿತು. ಅದಾದ ನಂತರ ನಾನು ಲಂಕೇಶರನ್ನು ಭೇಟಿಯಾಗಲಿಲ್ಲ. ನನ್ನ ಮಗಳ ಮದುವೆಗೆ ಅಹ್ವಾನ ಪತ್ರಿಕೆ ನೀಡಲೆಂದು ಅವರ ಮನೆಗೆ ಹೋಗಿದ್ದೆ. ಅಷ್ಟರಲ್ಲಿ ಅವರ ಆರೋಗ್ಯವೂ ಕೆಟ್ಟಿತ್ತಂತೆ. “ಮಗಳ ಮದ್ವೆಯಿದೆ. ಬಹಳ ಲಿಮಿಟ್ಟಾಗಿ ಸಮಾರಂಭ ಮಾಡೋಣ ಅಂದ್ಕೊಂಡಿದ್ದೀನಿ…” ಎಂದಿದ್ದಕ್ಕೆ, “ಹೌದ್ರಿ, ಈ ಜನ-ಗಿನ ಹೆಚ್ಚಿಗೆ ಸೇರುವ ಸಮಾರಂಭಕ್ಕೆ ಕಡಿವಾಣ ಹಾಕಬೇಕು…” ಅಂತ ಸಲಹೆ ನೀಡಿದ ಅವರಿಗೆ ನಾನು ಮತ್ತೆ, “ನನ್ನ ಹೆಂಡ್ತಿಗೆ ಇದನ್ನ ಚೆನ್ನಾಗಿ ವಿವರಿಸಿ ಹೇಳಿ. ನಾಟಕದ ಪಾಂಪ್ಲೆಟ್ ಥರ ಇನ್ವಿಟೇಷನ್ ಹಂಚುತ್ತಿದ್ದಾಳೆ…” ಎಂದಿದ್ದಕ್ಕೆ, ನಾನು ಅಲ್ಲಿಂದ ಹೊರಬರುವವರೆಗೂ ಲಂಕೇಶ್ ಜೋರಾಗಿ ನಗುತ್ತಲೇ ಇದ್ದರು.

‍ಲೇಖಕರು avadhi

July 9, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

೧ ಪ್ರತಿಕ್ರಿಯೆ

 1. Nethrakere Udaya Shankara

  Vah ! Lokeshare edurige bandu ninthukondu kathe heluttiddante anisitu. Avadhiya putagalannu noduttidare ‘avadhi’ hodadde gottaguvudilla.
  Idu innoo chennagi beleyali.
  Vandanegalu
  Nethrakere Udaya Shankara

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: