ಪಶ್ಚಾತ್ತಾಪದ ಪುಟ ಅಥವಾ ಮನೆ ಮತ್ತು ಮೊದಲ ರಾತ್ರಿ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ 

ಪ್ರತಿ ಬುಧವಾರದ ಮಾವಲಿ ರಿಟರ್ನ್ಸ್ನಲ್ಲಿ ಅವರುಂಟು ನೀವುಂಟು.

ಮನೆಯ ಗೇಟ್ ಮುಂದೆ ನಿಂತು ವಿಳಾಸವನ್ನೊಮ್ಮೆ ಪರಿಶೀಲಿಸಿಕೊಂಡೆ. ಮನೆ ನಂಬರ್, ಕ್ರಾಸ್ ನಂಬರ್,ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಯಾಕೋ ನಾನು ಆ ಸ್ಥಳಕ್ಕೆ ಅಪರಿಚಿತನೇನೋ ಅನ್ನಿಸಿತು. ನನ್ನ ಮನೆಯ ವಿಳಾಸ ನನಗೆ ಮರೆತು ಹೋಗಲು ಹೇಗೆ ಸಾಧ್ಯ ? ಒಮ್ಮೆ ಆಲ್ಬರ್ಟ್ ಐನ್ ಸ್ಟೀನ್ ಗೆ ಹೀಗಾಗಿತ್ತಂತೆ. ಹಾಗೆಂದು ನಾನೇನು ಅವರಷ್ಟು ತಲೆಗೆ ಕೆಲಸ ಕೊಟ್ಟು ಅನ್ಯ ಮನಸ್ಕನಾಗಿದ್ದಿಲ್ಲ. ಸರಿಯಾಗಿ ನನ್ನ ಮನೆಗೇ ಬಂದಿದ್ದೇನೆ ಎಂಬುದು ಖಾತರಿಯಾಗಲು ಬಹಳ ಹೊತ್ತೇನು ಹಿಡಿಯಲಿಲ್ಲ . ಹೌದು ಪಾರ್ಕಿಂಗ್ ಗೆಂದು ಜಾಗ ಉಳಿಸಲು ಮನೆಗೆ ರಿವಾಲ್ವಿಂಗ್ ಗೇಟ್ ಹಾಕಿಸಿದ್ದು ಇನ್ನೂ ನೆನಪಿತ್ತು.

ಕಾಂಪೌಂಡಿಗೆ ಹಾಕಿಸಿದ್ದ ಹ್ಯಾಲೋ ಬ್ರಿಕ್ಸ್ ಮತ್ತದರ ಬಣ್ಣವೂ ಬದಲಾಗಿರಲಿಲ್ಲ. ಟೆರೇಸ್ ಮೇಲೆ ಹವ್ಯಾಸಗಳಿಗಾಗಿ ವಿಶೇಷವಾಗಿ ಕಟ್ಟಿಸಿಕೊಂಡಿದ್ದ ಹೆಂಚಿನ ಮಾಡು, ಮನೆಯ ಮುಂಭಾಗ ಆಕರ್ಷಣೀಯವಾದ ಎಲಿವೇಷನ್ ಮಾಡಿಸಿದ್ದೆನಲ್ಲ, ಅದರಿಂದಲಾದರೂ ಇದು ನನ್ನ ಮನೆ ಎಂದು ಸುಲಭವಾಗಿ ಪತ್ತೆ ಮಾಡಬಹುದಿತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ ಈ ನಗರ ಇನ್ನೂ ಇಷ್ಟು ಬೆಳೆದಿರದ ವರ್ಷಗಳಲ್ಲಿ ಆಗ ಹೊರವಲಯ ಎನಿಸಿದ್ದ ಈ ಜಾಗದಲ್ಲೊಂದು ನಿವೇಶನ ಕೊಂಡದ್ದು ಎಂಥ ಸಾಹಸ ಅಂತೀರಾ ? ಅದಾಗಿ ಬರೋಬ್ಬರಿ ಹನ್ನೆರಡು ವರ್ಷಗಳ ನಂತರ ನಾನು ಈ ಮನೆ ಕಟ್ಟಿಸಿದೆ.

ಅದಾಗಲೆ ಎದ್ದು ನಿಂತಿದ್ದ ಅನೇಕ ಮನೆಗಳಿಗೆ ಸರಿ ಸಮಾನವಾಗಿ ನಾನೂ ಇದನ್ನು ಕಟ್ಟಬೇಕಾದ ನೈತಿಕ ಒತ್ತಡ ಇತ್ತು. ಸ್ವಂತ ಸೂರೊಂದನ್ನು ಕಟ್ಟಿಕೊಳ್ಳುವುದು ಎಲ್ಲಾ ವರ್ಗದವರಿಗೂ  ಸಾಧನೆಯೇ ಸರಿ. ಹಾಗಾಗಿಯೇ ಅಲ್ಲವೆ ಈ ಮನೆಗೆ ನಾನು ‘ ನಮ್ಮನೆ’ ಎಂದು ಹೆಸರಿಟ್ಟಿದ್ದು ! ಅದನ್ನು ನೋಡಿದ ಮೇಲಂತೂ ನಾನು ನನ್ನದೇ ಮನೆಗೆ ಬಂದಿರುವುದು ಸುತಾರಾಂ ಖಾತರಿಯಾಯಿತು. ದಾರಿಯಲ್ಲಿ ಕತ್ತಲಿದ್ದ ಮಾತ್ರಕ್ಕೆ ಪ್ರತಿನಿತ್ಯ ಬರುವ ಮನೆಯ ದಾರಿಯನ್ನು ಯಾರಾದರೂ ಮರೆಯಲು ಸಾಧ್ಯವೆ ? ಹೌದು , ನಾನು ಈಗ ನಿಂತಿರುವುದು   ‘ನಮ್ಮನೆ’ ಯ ಮುಂದೆಯೇ. ಆದರೆ ಒಳ ಹೋಗಲು ಯಾಕೋ ಮನಸ್ಸು ಜಗ್ಗುತ್ತಿತ್ತು. ಏನೋ ಅಪರಾಧ ಮಾಡಿದಂಥ ಭಾವ ನನ್ನನ್ನು ಆವರಿಸಿತ್ತು.

ನನ್ನ ಈ ಅಸಹಜ ವರ್ತನೆಗೆ ಕಾರಣವೇನೆಂದು ಹೇಳಿಬಿಡುತ್ತೇನೆ. ಆ ದಿನ ಕೆಲಸ ಮುಗಿಸಿ ಸಂಜೆ ಕೆಲ ಗೆಳೆಯರೊಡನೆ ಸಣ್ಣದೊಂದು ಪಾರ್ಟಿ ಮಾಡಿ ಮನೆಗೆ ಹೊರಡುವಷ್ಟರಲ್ಲಿ ಸಮಯ ರಾತ್ರಿ ಹನ್ನೊಂದರ ಆಸುಪಾಸು.‌ ಮುಖ್ಯ ರಸ್ತೆಯ ಸರ್ಕಲ್ ಒಂದರ ಬಳಿ ಕಾರು ಯೂ ಟರ್ನ್ ತೆಗೆದುಕೊಂಡವನಿಗೆ ಕಂಡ ಆ ದೃಶ್ಯವಿದೆಯೆಲ್ಲ ! ಅದು ಥಟ್ಟನೆ ಕಾರಿನ ಬ್ರೇಕ್ ಹಾಕಿಸಿಬಿಟ್ಟಿತು. ಇಡೀ ನಗರ ಮಲಗಿರಬಹುದೆ ಎಂದುಕೊಂಡರೆ ,ಹೌದು ಎನ್ನಲಾಗದು.‌ ವಾಹನಗಳ ವಿರಳ ಸಂಚಾರ ಇನ್ನೂ ಇತ್ತು.

ಸರ್ಕಲ್ ನ ಬೀದಿ ದೀಪದ ಬೆಳಕು ಅವರಿಬ್ಬರ ಮೇಲೆ ಅಸ್ಪಷ್ಟವಾಗಿ ಬೀಳುತ್ತಿತ್ತು . ಅವರಿಬ್ಬರು ಎಂದರೆ ಯಾರು ? ನವ ದಂಪತಿಗಳು ! ಅದ್ಹೇಗೆ ಗೊತ್ತಾಗುತ್ತದೆ ಎಂದುಕೊಂಡಿರಾ ? ಮದುವೆಯಾದ ಹೊಸತರಲ್ಲೊಂದು ಕಳೆ ಮತ್ತು ಹುಮ್ಮಸ್ಸು ಇರುತ್ತದೆ ನೋಡಿ , ಅದು ಅವರಲ್ಲಿತ್ತು. ಆ ರಾತ್ರಿಯಲ್ಲಿ  ಅಲ್ಲಿ ಅವರಿಗೇನು ಕೆಲಸ ? ಅಲ್ಲಿ ಅವರ ಮೊದಲ ರಾತ್ರಿ ನಡೆಯುತ್ತಿತ್ತು.

ಹೌದು, ನಟ್ಟನಡು ರಸ್ತೆಯೊಂದರಲ್ಲಿ ನವ ದಂಪತಿಗಳು ತಮ್ಮ ಮೊದಲ ರಾತ್ರಿಯನ್ನು ಯಾವುದೇ ಆತಂಕವಿಲ್ಲದೆ ಆಚರಿಸಿಕೊಳ್ಳುತ್ತಿದ್ದರು. ಅವರ ಮಿಲನ ಮಹೋತ್ಸವವನ್ನು ದೂರದಿಂದಲೇ ನೋಡುತ್ತಿದ್ದ ನನಗೆ ಏನೋ ಅಶ್ಲೀಲವೊಂದನ್ನು ನೋಡುತ್ತಿದ್ದೇನೆ ಎಂದಾಗಲೀ, ಸಾರ್ವಜನಿಕ ಸ್ಥಳದಲ್ಲಿ ಇದೆಂಥಾ ಅಸಭ್ಯ ವರ್ತನೆ ಎಂದಾಗಲೀ ಅನ್ನಿಸಲೇ ಇಲ್ಲ . ಆ ರಾತ್ರಿ , ಆ ಸಮಯಕ್ಕೆ ಜಗದ ಎಷ್ಟೆಲ್ಲ ಗಂಡು – ಹೆಣ್ಣುಗಳು ಮಿಲನ ಸುಖ ಪಡುತ್ತಿರಬಹುದು ? ಮನೆಯಲ್ಲಿ ಭದ್ರವಾದ ಚಿಲಕಗಳ ರಕ್ಷಣೆಯಲ್ಲಿ ಸೇರುತ್ತಿರುವ ಜೋಡಿಗಳಿಗೆ ಮಿಲನ ಎಂಬುದು ಅದೆಂಥ ರಹಸ್ಯ ಕಾರ್ಯಾಚರಣೆ ! ಹೀಗೆ ರಸ್ತೆಯಲ್ಲಿ ಮೊದಲ ರಾತ್ರಿ ಮತ್ತು ಮುಂದಿನ ಎಲ್ಲಾ ರಾತ್ರಿಗಳನ್ನೂ ಕಳೆಯಬೇಕಾದವರಿಗೆ ಇದೆಷ್ಟು ಸಹಜ !

ಸಹಜವೆಂಬಂತೆ ಕೆಲ ಹೊತ್ತಿನ ನಂತರ ತಮ್ಮ ಬಟ್ಟೆಗಳನ್ನು ಧರಿಸಿಕೊಂಡರು. ಒಬ್ಬರನ್ನೊಬ್ಬರು ನೋಡಿ ತುಂಟ ನಗು ವಿನಿಮಯಿಸಿಕೊಂಡರು.ಅಲ್ಲಿಯೇ ರಸ್ತೆಯ ಒಂದು ಬದಿಯಲ್ಲಿ ಮಲಗಿಬಿಟ್ಟರು. ನಾನು ಅದುವರೆಗೂ ನೋಡಿದ್ದರ ಬಗ್ಗೆ ದಿಗ್ಭ್ರಾಂತನಾದೆ. ಅವರನ್ನು ಮಾತನಾಡಿಸುವ ಧೈರ್ಯ ನನ್ನ ಬಳಿ ಇರಲಿಲ್ಲ. ಧೈರ್ಯ ಇದ್ದಿದ್ದರೂ ಏನೆಂದು ಮಾತಾಡಿಸಬಹುದಿತ್ತು ? ಅವರ ಬಗ್ಗೆ ಪೋಲೀಸರಿಗೆ ಹೇಳಬೇಕಿತ್ತೆ ?

ನಾಗರಿಕ‌ ಸಮಾಜದಲ್ಲಿ ಇದನ್ನು ಸಹಿಸಲಾದೀತೆ ? ಗಂಡು- ಹೆಣ್ಣುಗಳ ಬೆತ್ತಲೆ ದೇಹಗಳು ಹೀಗೆ ಸಾರ್ವಜನಿಕವಾಗಿ ಪ್ರದರ್ಶನಗೊಳ್ಳುವುದು ಎಂದರೆ ಏನು ? – ಇವೇ ಮುಂತಾದ ಯೋಚನೆಗಳಲ್ಲಿ ತತ್ತರಿಸಿದ ನಾನು ಆ ಜಾಗದಲ್ಲಿ ಎಷ್ಟೊತ್ತು ಇರಲಾದೀತು ? ಮನೆಯ ಕಡೆ ಕಾರ್ ತಿರುಗಿಸಿಕೊಂಡು ಬಂದೆ. ಆ ದಿನವೇ ನೋಡಿ‌ ನನಗೆ ನನ್ನ ಮನೆ ಅಪರಿಚಿತವೆಂಬಂತೆ ಕಾಣಿಸಿದ್ದು…

ಏಕೆ ಹೀಗಾಗುತ್ತಿದೆ ಎಂದು ಮತ್ತೊಮ್ಮೆ ಪ್ರಶ್ನಿಸಿಕೊಂಡೆ. ಹಲವಾರು ಗಂಡು ಹೆಣ್ಣುಗಳು ಕಾರ್ ಗಳಲ್ಲಿ, ಬೈಕ್ ಗಳಲ್ಲಿ , ಫ್ಲೈಓವರ್ ಗಳ ಮೇಲೆ, ಬಸ್ಸಿನ ಕೊನೆಯ ಸೀಟಿನಲ್ಲಿ , ಥಿಯೇಟರ್ ಗಳಲ್ಲಿ ,ಪಾರ್ಕ್ ಗಳಲ್ಲಿ , ಮಾಲ್ ಗಳ ಬ್ರೇಕ್ ಔಟ್ ಪ್ರದೇಶಗಲ್ಲಿ , ಸೈಬರ್ ಸೆಂಟರ್ ಗಳಲ್ಲಿ, ಹಳ್ಳಿಯ ನಿರ್ಜನ ಕೆರೆ ಅಂಗಳದ ಮೂಲೆಯಲ್ಲಿ ರೊಮ್ಯಾನ್ಸ್ ಮಾಡುವುದನ್ನೋ  ಅಥವಾ ಸೇರುವುದನ್ನೋ ನಾನೇನು ಒಮ್ಮೆಯೂ ನೋಡಿಲ್ಲ ಎಂದೇನಿಲ್ಲ. ಆಗೆಲ್ಲ ನಕ್ಕು ಸುಮ್ಮನಾಗಿದ್ದೇನೆ ಅಥವಾ ಅಸಡ್ಡೆಯಿಂದ ಮೂಗು ಮುರಿದಿದ್ದೇನೆ. ಆದರೆ ಈ ಘಟನೆಯಿಂದ ನಾನು ಅಷ್ಟೊಂದು ವಿಚಲಿತನಾಗಲು ಬೇರೆಯದ್ದೇ ಕಾರಣ ಇತ್ತು …

ಆ ಇಬ್ಬರೂ ದಂಪತಿಗಳು ಪರಸ್ಪರ ತುಂಟ ನಗು ವಿನಿಮಯಿಸಿಕೊಂಡರು ಅಂದೆನಲ್ಲ,‌ ಆಗಲೇ ನನಗೆ ಅವನ ಮುಖ ಕಾಣಿಸಿದ್ದು. ಆ ಮುಖ ಪರಿಚಿತವಾದದ್ದೇ ಆಗಿತ್ತು. ನಮ್ಮ ಮನೆ ಕಟ್ಟಿಸಿದ ಮೇಸ್ತ್ರಿ ಕರೆತಂದ ಕೆಲವು ಕೆಲಸಗಾರರಲ್ಲಿ ಆತನೂ ಒಬ್ಬನಾಗಿದ್ದ. ಗೃಹ ಪ್ರವೇಶದ ದಿನ ಎಲ್ಲಾ ಕೆಲಸಗಾರರನ್ನೂ ಕರೆದು ಊಟ ಹಾಕಿದ್ದು ಬಿಟ್ಟರೆ ಅವರೇನಾದರು ಎಲ್ಲಿರುತ್ತಾರೆ ಎಂಬ ಬಗ್ಗೆ ನಾನಾದರೂ ಯಾಕೆ ತಲೆ ಕೆಡಿಸಿಕೊಳ್ಳಲು ಹೋಗಬೇಕಿತ್ತು ಅಲ್ಲವೆ ?

ನನ್ನ ಬೆಡ್ ರೂಂ ನ ಗೋಡೆಯೊಳಗೆ ಮಂಚವನ್ನು ಫಿಕ್ಸ್ ಮಾಡಿ ಮಲಗುವಾಗ ಮಾತ್ರ ಅದು ಹೊರಕ್ಕೆ ಬರುವಂತೆ ಬಟನ್ ಒತ್ತುವ ಸಿಸ್ಟಮ್ ಮಾಡಿಕೊಟ್ಟ ಐಡಿಯಾ ಇಂಜಿನಿಯರ್ ದೇ ಆದರೂ ಅದನ್ನು ಕಾರ್ಯಗತ ಮಾಡಿದ್ದು ಮಾತ್ರ ಇವನೇ ಆಗಿದ್ದ. ಅಂಥ ಕುಶಲಕರ್ಮಿಗೆ ಹೀಗೆ ರಸ್ತೆಯಲ್ಲಿ ತನ್ನ ಮೊದಲರಾತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆಯಾ ಎಂಬುದನ್ನು ನೆನೆದು ನಾನು ತತ್ತರಿಸಿ ಹೋದೆ. ಹಾಗಾಗಿಯೇ ನಮ್ಮ ಮನೆಯ ಮುಂದೆ ನಿಂತಾಗ ನಾನು ಗೋಲ್ಡನ್ ಕಲರ್ ನಲ್ಲಿ ಬರೆಸಿದ್ದ “ನಮ್ಮನೆ” ಎಂಬ ಬೋರ್ಡ್ ನನ್ನನ್ನು ಅಣಕಿಸುತ್ತಿರುವಂತೆ ಭಾಸವಾಗಿದ್ದು. ಒಂದು ಸಣ್ಣ ಪಶ್ಚಾತ್ತಾಪದೊಂದಿಗೆ ಕಾಲಿಂಗ್ ಬೆಲ್ ಒತ್ತಿ ಮನೆಯ ಒಳ ಹೋದೆ. ಸಾಮಾನ್ಯವಾಗಿ ಪಾರ್ಟಿ ಮುಗಿಸಿ ಬಂದ ರಾತ್ರಿ ಅವಳನ್ನು ಸೇರುತ್ತಿದ್ದ ನಾನು ಆ ದಿನ ಸೇರಲಿಲ್ಲ…

ಮರುದಿನ ಬೆಳಗ್ಗೆ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ; Couple consumated their marriage on the street as their house in the sulm was pulled down to carry out Slum Eradication Programme ಎಂದು ಬರೆದಿದ್ದರು. ಅದನ್ನು ಓದಿಯೂ ಈ ಬಗ್ಗೆ ನಾನು ಮನೆಯಲ್ಲಿ ಯಾರ ಬಳಿಯೂ ಚರ್ಚಿಸಲಿಲ್ಲ. ಈಗೆಲ್ಲ ನಾನು ಮಾಮೂಲಿನಂತೆಯೇ ನನ್ನವಳನ್ನು ಸೇರುತ್ತೇನೆ… ಹಾಗೆಯೇ ಅವರೂ ಸೇರುತ್ತಿರಬಹುದೇನೋ …

ಗುಜರಿ ಅಂಗಡಿಯಲ್ಲಿ ಸಿಕ್ಕ ಧೂಳು ಹಿಡಿದಿದ್ದ ಡೈರಿಯೊಂದನ್ನು, ಕುತೂಹಲಕ್ಕಾಗಿ ತಿರುವಿ ಹಾಕುವಾಗ ಸಿಕ್ಕ ಈ ಬರಹವನ್ನು ಓದಿದ ಹರೆಯದ ಹುಡುಗನೊಬ್ಬ, ತನ್ನ ಮೊದಲ ರಾತ್ರಿಯ ಬಗ್ಗೆ ಹೇಗೆ ಕನಸು ಕಟ್ಟಿಕೊಳ್ಳಬೇಕೆಂದು ತೋಚದೆ ಪಶ್ಚಾತ್ತಾಪದ ಆ ಪುಟವನ್ನು ಮಾತ್ರ ಹರಿದು ತನ್ನ ಬಳಿ ಇಟ್ಟುಕೊಂಡ…

September 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

3 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಮಾವಲಿ ಸರ್ ಸಹಜತೆಗೆ ಪಾರದರ್ಶಕ ಸತ್ಯ ಒದಗಿಸಿದ್ದೀರಿ….ಬೀದಿಯು ನಮ್ಮೊಳಗೆ ಬಯಲಾಗಿದೆ…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: