‘ಪಹಾಡ್ ಗಂಜ್’ ಎಂಬ ನಿಗೂಢ ದುನಿಯಾ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

‌ಅಪರಾತ್ರಿಯ ಹೊತ್ತಿನಲ್ಲಿ ಅಲೆದಾಡುತ್ತಿದ್ದ ನಾನಂದು ದಿಲ್ಲಿಯ ‘ಪಹಾಡ್ ಗಂಜ್’ ಏರಿಯಾದಲ್ಲಿದ್ದೆ.

ದೇಶದ ರಾಜಕೀಯ ಶಕ್ತಿಕೇಂದ್ರವಾಗಿರುವ ದೆಹಲಿಯಲ್ಲಿ ಸಾಮಾನ್ಯವಾಗಿ ಎಲ್ಲಾ ಪ್ರವಾಸಿಗರು ನೋಡ ಬಯಸುವ ಜಾಗಗಳನ್ನು ನೋಡುವುದೇ ಒಂದು. ಹಳೇದಿಲ್ಲಿಯ ಇಕ್ಕಟ್ಟಾದ ಗಲ್ಲಿಗಳಲ್ಲಿ ಸುತ್ತಾಡುವ ಮೋಜೇ ಇನ್ನೊಂದು.

ಹಾಗೆಂದು ಹೊತ್ತಲ್ಲದ ಹೊತ್ತಿನಲ್ಲಿ ಇಂಥಾ ಗಲ್ಲಿಗಳಲ್ಲಿ ಸುತ್ತಾಡುವುದೆಂದರೆ ಒಂದು ರೀತಿಯಲ್ಲಿ ಅಪಾಯದ ಜೊತೆ ಚೆಲ್ಲಾಟವಾಡಿದಂತೆಯೇ. ಸೂರ್ಯಾಸ್ತದ ನಂತರ ಸಾಮಾನ್ಯವಾಗಿ ಎಲ್ಲಾ ಮಹಾನಗರಗಳಲ್ಲೂ ಬೇರೆಯದೇ ಲೋಕವೊಂದು ತೆರೆದುಕೊಳ್ಳುತ್ತದೆ. ಅದು ಇದ್ದೂ ಇಲ್ಲದಂತಿರುವ ಅಪರಾಧ ಲೋಕದ್ದು.

”ಪಹಾಡ್ ಗಂಜ್ ಏರಿಯಾ ಎಂದರೆ ಅಗ್ಗದ ಹೊಟೇಲುಗಳಿರುವ ಜಾಗ. ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಿಂದ ಬರುವ ಹಿಪ್ಪಿಗಳು ಇಲ್ಲೇ ಉಳಿದು ಕೊಂಡಿರುತ್ತಾರೆ,” ಎಂಬ ಹಲವರ ಮಾತುಗಳಿಂದ ಪ್ರೇರಿತನಾಗಿ ಶಹರದ ಈ ಭಾಗದ ಕಾಣದ ಮುಖವನ್ನೊಮ್ಮೆ ನೋಡಲೇಬೇಕೆಂಬ ವಿಚಿತ್ರ ಆಸೆಯೊಂದು ನನ್ನಲ್ಲಿ ಮೊಳಕೆಯೊಡೆದಿತ್ತು.

ಆದರೆ ಸವಾಲುಗಳೂ ಅಷ್ಟೇ ಇದ್ದವು. ಹಳೇದಿಲ್ಲಿಯೆಂದರೆ ಒಂದು ರೀತಿಯಲ್ಲಿ ಗೊಂದಲದ ಮಹಾಸಾಗರವಿದ್ದಂತೆ. ಇಲ್ಲಿ ಎಲ್ಲವೆಂದರೆ ಎಲ್ಲವೂ ಇದೆ. ಹೀಗಾಗಿ ಈ ಜಾಗದ ಬಗ್ಗೆ ಒಂದಷ್ಟು ತಿಳಿದುಕೊಂಡಿರುವವರು ತಮ್ಮ ವಾಹನಗಳನ್ನು ಯಾವ ಕಾರಣಕ್ಕೂ ಇಲ್ಲಿಯ ಗಲ್ಲಿಗಳ ಒಳಗೆ ಕೊಂಡೊಯ್ಯುವ ಭಂಡಧೈರ್ಯ ಮಾಡುವವರಲ್ಲ.

ಏಕೆಂದರೆ ಆ ರಸ್ತೆಯಲ್ಲಿ ದಾರಿಹೋಕರು, ಜಾನುವಾರುಗಳು, ಕೈಗಾಡಿಗಳು, ಅಂಗಡಿಗಳು… ಹೀಗೆ ಎಲ್ಲರನ್ನೂ, ಎಲ್ಲವನ್ನೂ ಏಕಕಾಲದಲ್ಲಿ ಕಾಣಬಹುದು. ವಿಪರೀತವೆಂಬಷ್ಟಿರುವ ಇಂಥಾ ಪ್ರದೇಶಗಳಲ್ಲಿರುವ ಜನಜಂಗುಳಿಯು ಯಾರಲ್ಲಾದರೂ ಅನಾಮಿಕ ಭಾವವೊಂದನ್ನು ತರುವುದು ಸಹಜ.

ಹೀಗಾಗಿ ಅಪರಾಧ ಲೋಕದ ಕುಳಗಳಿಗೆ ತಲೆತಪ್ಪಿಸಿಕೊಂಡು ತಿರುಗಾಡುವುದಕ್ಕೆ ಹಳೇದಿಲ್ಲಿಗಿಂತಲೂ ಪ್ರಶಸ್ತವಾದ ಜಾಗವು ಬೇರೊಂದಿರಲಿಕ್ಕಿಲ್ಲ.

ಅಂದು ‘ಪಹಾಡ್ ಗಂಜ್’ನ ರೆಸ್ಟೋರೆಂಟ್ ಒಂದರಲ್ಲಿ ಕುಳಿತು ನಾನು ನೆಲ್ಸನ್ ಎಂಬ ಯುವಕನ ಮಾತುಗಳಿಗೆ ಕಿವಿಯಾಗುತ್ತಿದ್ದೆ. ಆತನ ಮಾತುಗಳು ಆತ ಹೀರುತ್ತಿದ್ದ ಬಿಯರ್ ಗಿಂತಲೂ ತಣ್ಣಗಿದ್ದವು. ಆದರೆ ನಾನಂದುಕೊಂಡಂತೆ ಆತ ಹಿಪ್ಪಿಯಾಗಿರಲಿಲ್ಲ. ಬದಲಾಗಿ ಓರ್ವ ಜರ್ಮನಿ ಮೂಲದ ವಿದ್ಯಾರ್ಥಿಯಾಗಿದ್ದ.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಏನನ್ನಾದರೂ ಸಾಧಿಸುವ ಬಗ್ಗೆ ಕನಸುಗಳನ್ನು ಹೊತ್ತಿದ್ದ ಇಪ್ಪತ್ತೈದರ ಆಸುಪಾಸಿನ ಯುವಕ. ‘ಪಹಾಡ್ ಗಂಜ್’ ಬಗ್ಗೆ ಅವನಿಗೇನೂ ಗೊತ್ತಿದ್ದಂತೆ ಕಾಣಲಿಲ್ಲವಾದ್ದರಿಂದ ನನಗೆ ಒಂದು ಮಟ್ಟಿನ ನಿರಾಸೆಯಾಗಿದ್ದಂತೂ ಹೌದು. ಉಳಿದುಕೊಳ್ಳಲು ಅಗ್ಗದ ಹೊಟೇಲುಗಳು ಸಿಗುತ್ತವೆ ಎಂಬ ಏಕೈಕ ಕಾರಣವು ಆತನನ್ನು ವಿಮಾನ ನಿಲ್ದಾಣದಿಂದ ‘ಪಹಾಡ್ ಗಂಜ್’ವರೆಗೆ ಎಳೆದುಕೊಂಡು ಬಂದಿತ್ತು.

ಆ ಸಂಜೆಯ ವಿಚಿತ್ರವೆಂದರೆ ನಾವಿಬ್ಬರೂ ಅಂದು ಲೋಕಾಭಿರಾಮವಾಗಿ ಮಾತಾಡುತ್ತಾ ಕುಖ್ಯಾತ ಅಪರಾಧಿಯಾಗಿದ್ದ ಚಾರ್ಲ್ಸ್ ಶೋಭರಾಜ್ ಬಗ್ಗೆ ಹರಟೆ ಹೊಡೆಯತೊಡಗಿದ್ದೆವು. ‘ಬಿಕಿನಿ ಕಿಲ್ಲರ್’ ಕುಖ್ಯಾತಿಯ ಚಾರ್ಲ್ಸ್ ದಿಲ್ಲಿಗೂ ಇರುವ ನಂಟು ಬಹಳ ವಿಶೇಷವಾದದ್ದು.

ತನ್ನ ಮಾತಿನ ಮೋಡಿಯಿಂದಲೇ ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ತರುಣ ಚಾರ್ಲ್ಸ್ ಹೋದಲ್ಲೆಲ್ಲಾ ಪ್ರವಾಸಿಗರನ್ನು ನಿರ್ದಯವಾಗಿ ದೋಚುತ್ತಿದ್ದ. ಮಾದಕ ದ್ರವ್ಯಗಳನ್ನು ಬಳಸಲಾಗುತ್ತಿದ್ದ ಈ ದುಸ್ಸಾಹಸಗಳಲ್ಲಿ ಕೊಲೆಗಳೂ ಆಗಿದ್ದವು. ಹಲವು ದೇಶಗಳ ಪೊಲೀಸ್ ಇಲಾಖೆಗಳು ಆತನನ್ನು ಹುಡುಕುತ್ತಿದ್ದವು ಕೂಡ.

ಇಂತಿಪ್ಪ ಚಾರ್ಲ್ಸ್ ಒಂದು ಹಂತದಲ್ಲಿ ದಿಲ್ಲಿಯ ತಿಹಾರ್ ಜೈಲಿನ ಅತಿಥಿಯಾಗಿ ಕೆಲ ಕಾಲ ಅಲ್ಲಿದ್ದ. ಇದ್ದಷ್ಟು ದಿನ ತಿಹಾರ್ ಕಾರಾಗೃಹದಲ್ಲೂ ರಾಜನಂತೆ ಮೆರೆದ. ಆ ದಿನಗಳಲ್ಲಿ ಹಲವು ಹಿರಿಯ ಅಧಿಕಾರಿಗಳು ಆತನ ಕೈಗೊಂಬೆಗಳಂತೆ ವರ್ತಿಸುತ್ತಿದ್ದರು ಎಂಬುದು ಹಲವೆಡೆ ದಾಖಲಾಗಿದೆ.

ಸ್ಮಗ್ಲಿಂಗ್ ವಿಚಾರದಲ್ಲಿ ಆತನನ್ನು ಮೀರಿಸುವವರೇ ಇರಲಿಲ್ಲವಂತೆ. ”ನಾನು ಮನಸ್ಸು ಮಾಡಿದರೆ ಆನೆಯೊಂದನ್ನೂ ಕೂಡ ಸಲೀಸಾಗಿ ಕಸ್ಟಮ್ಸ್ ಅಧಿಕಾರಿಗಳ ಕಣ್ಣುತಪ್ಪಿಸಿ ಕೊಂಡೊಯ್ಯಬಲ್ಲೆ,” ಎಂದು ಕುಹಕದ ಶೈಲಿಯಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಮಹಾನುಭಾವನಾಗಿದ್ದ ಈ ಭೂಪ.

ಇನ್ನು ತಿಹಾರ್ ಜೈಲಿನ ಹಲವು ಜೈಲರುಗಳಿಗೂ, ಅಧಿಕಾರಿಗಳಿಗೂ ಸಿಹಿತಿಂಡಿಯಲ್ಲಿ ಅಮಲಿನ ಪದಾರ್ಥವನ್ನು ಬೆರೆಸಿ ಜೈಲಿನಿಂದ ಕಾಲ್ಕಿತ್ತ ಪ್ರಸಂಗವು ಭಾರೀ ಸುದ್ದಿಯಾಗಿತ್ತು.

ಚಾರ್ಲ್ಸ್ ಶೋಭರಾಜನನ್ನು ಇಂದು ಜಗತ್ತೇ ಮರೆತಿರಬಹುದು. ಆದರೆ ತಿಹಾರ್ ಕಾರಾಗೃಹದ ಮಂದಿ ಆತನನ್ನು ಎಂದಿಗೂ ಮರೆಯುವಂತೆಯೇ ಇಲ್ಲ. ಆತನಂತಹ ಒಬ್ಬನೇ ಒಬ್ಬ ಮಹಾಚಾಣಾಕ್ಷ ಅಪರಾಧಿ ಕಾರಾಗೃಹದ ಆಡಳಿತ ಮಂಡಳಿಗೂ, ಅಲ್ಲಿಯ ಭದ್ರತಾ ಸಿಬ್ಬಂದಿಗಳಿಗೂ ದುಃಸ್ವಪ್ನವಾಗಬಲ್ಲ.  

ಅಷ್ಟಕ್ಕೂ ‘ಪಹಾಡ್ ಗಂಜ್’ನಲ್ಲಿ ನಾನೇನು ಮಾಡುತ್ತಿದ್ದೇನೆ ಎಂಬುದು ನೆಲ್ಸನ್ನನಿಗೆ ಕೌತುಕದ ಸಂಗತಿಯಾಗಿತ್ತು. ”ಇಲ್ಲಿಯ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಸಂಗೀತ ಸಂಜೆಗಳಿರುತ್ತವೆ ಎಂಬುದನ್ನು ಕೇಳಿದ್ದೇನೆ. ಅದನ್ನು ನೋಡಲೆಂದು ಬಂದೆ,” ಎಂದು ಉತ್ತರಿಸಿದೆ. ಅದು ಸತ್ಯವೂ ಆಗಿತ್ತು.

ಆದರೆ ಕಳೆದ ಒಂದೆರಡು ತಾಸುಗಳ ಅಲೆದಾಟದಲ್ಲಿ ಅವುಗಳು ನನಗೆ ಸಿಕ್ಕಿರಲಿಲ್ಲವೆಂಬುದು ಬೇರೆ ವಿಚಾರ. ಬಹುಶಃ ಈ ತಲಾಶೆಗಾಗಿ ನಾನು ಮಾಡಬೇಕಿದ್ದ ತಯಾರಿಗಳು ವ್ಯವಸ್ಥಿತವಾಗಿರಲಿಲ್ಲ. ಏನಾದರೂ ಎಡವಟ್ಟುಗಳಾದರೆ ನೆಚ್ಚಿಕೊಳ್ಳಲು ‘ಪ್ಲಾನ್-ಬಿ’ ಅನ್ನುವಂಥದ್ದಂತೂ ಮೊದಲೇ ಇರಲಿಲ್ಲ. ಆದರೂ ಹುಡುಕಾಟ-ಅಲೆದಾಟಗಳು ಮುಂದುವರಿದಿದ್ದವು.

ನೆಲ್ಸನ್ನನಿಗೆ ವಿದಾಯ ಹೇಳಿ ‘ಪಹಾಡ್ ಗಂಜ್’ನ ಮತ್ತೊಂದು ಭಾಗಕ್ಕೆ ಬರುವಷ್ಟರಲ್ಲಿ ಬರೋಬ್ಬರಿ ಎರಡು ತಾಸುಗಳು ಕಳೆದು ಹೋಗಿದ್ದವು. ಕಾಲ್ನಡಿಗೆಯಲ್ಲಿ ಅಲೆದಾಡುತ್ತಿದ್ದ ಪರಿಣಾಮವೋ ಏನೋ. ನಾನು ಹೆಚ್ಚು ದೂರವನ್ನೇನೂ ಕ್ರಮಿಸುತ್ತಿಲ್ಲ ಎಂದು ಪದೇಪದೇ ಸಿಗುತ್ತಿದ್ದ ರಸ್ತೆಗಳು ಸಾರಿ ಹೇಳುವಂತಿದ್ದವು.

ಇನ್ನು ಸಂಪೂರ್ಣವಾಗಿ ಕತ್ತಲಾವರಿಸಿದ್ದ ಪರಿಸರದಲ್ಲಿ ಬೆಳ್ಳಿಬಟ್ಟಲಿನಂತೆ ಹೊಳೆಯುತ್ತಿದ್ದ ಚಂದಮಾಮನೀಗ ಮತ್ತಷ್ಟು ಪ್ರಕಾಶಮಾನವಾಗಿ ಕಾಣುತ್ತಿದ್ದ. ಹೀಗಾಗಿ ಇಷ್ಟಿಷ್ಟೇ ನಿರ್ಜನವಾಗುತ್ತಿದ್ದ ‘ಪಹಾಡ್ ಗಂಜ್’ನ ಗಲ್ಲಿಗಳಲ್ಲಿ ಭಯಪಡುವಂಥದ್ದೇನಿರಲಿಲ್ಲ.

ಏಕಾಂಗಿಯಾಗಿ ಸಾಕಷ್ಟು ಅಲೆದಾಡಿದ ನಂತರ ಕೊನೆಗೂ ನಾನು ಸರಿಯಾದ ಜಾಗಕ್ಕೇ ಬಂದು ಸೇರಿದ್ದೆ. ರೆಸ್ಟೋರೆಂಟಿನ ಒಂದು ಭಾಗದಲ್ಲಿ ಆರ್ಕೆಸ್ಟ್ರಾ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಕಾಣುವಂತೆ ನಾಲ್ಕೈದು ಮಂದಿ ಹಾಡುಗಾರರು ಬಾಲಿವುಡ್ ಹಾಡುಗಳನ್ನು ಸೊಗಸಾಗಿ ಹಾಡುತ್ತಿದ್ದರು.

ಕುಮಾರ್ ಸಾನು, ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್ ಕಂಠಸಿರಿಯ ತೊಂಭತ್ತರ ದಶಕದ ರೋಮ್ಯಾಂಟಿಕ್ ಬಾಲಿವುಡ್ ಹಾಡುಗಳು ಅತ್ತ ತೀರಾ ಆಧುನಿಕವೂ ಅಲ್ಲದ, ಇತ್ತ ತೀರಾ ಹಳೆಯದೂ ಅಲ್ಲದ ‘ಪಹಾಡ್ ಗಂಜ್’ ಏರಿಯಾದ ವಿಲಕ್ಷಣ ಕಳೆಗೆ ರೂಪಕವೆಂಬಂತಿತ್ತು.

ಹೊತ್ತು ಮುಳುಗುತ್ತಾ ಜನಜಂಗುಳಿಯ ಸಂಖ್ಯೆಯು ಹೆಚ್ಚಾಗುತ್ತಿದ್ದಂತೆ ಸಂಗೀತ ಸಂಜೆಗಳು ಮತ್ತಷ್ಟು ರಂಗೇರುವುದು ಸಾಮಾನ್ಯ. ಇಲ್ಲೂ ಕ್ರಮೇಣ ಹಾಗಾಯಿತು. ಹಾಡುಗಾರಿಕೆಯೇನೋ ಸೊಗಸಾಗಿತ್ತು. ಆದರೆ ಆಸ್ವಾದಿಸುವ ಮಂದಿಯ ನಿರೀಕ್ಷೆಗಳೇ ಬೇರೆಯೆಂಬಂತಿದ್ದವು. ಹೀಗಾಗಿ ಆರ್ಕೆಸ್ಟ್ರಾ ತಂಡದ ಉತ್ಸಾಹವೆಲ್ಲಾ ಉಡುಗಿ ಹೋಗಿದ್ದು ಮಾತ್ರ ಸತ್ಯ.

ಏಕೆಂದರೆ ಕಲಾವಿದರಿಂದ ಸುರಕ್ಷಿತ ದೂರದಲ್ಲಿ ಟೇಬಲ್ಲುಗಳನ್ನು ಇರಿಸಿದ್ದರೂ ಪೆಗ್ಗುಗಳನ್ನು ಇಳಿಸಿಕೊಂಡ ಕೆಲ ಗ್ರಾಹಕರು ಅಸಭ್ಯವಾಗಿ ವರ್ತಿಸುತ್ತಿದ್ದಿದ್ದು ದಂಗಾಗಿಸುವಂತಿತ್ತು. ಕೆಲ ಬೆರಳೆಣಿಕೆಯ ಪುಂಡರಂತೂ ವರ್ಷಗಳ ಹಿಂದೆ ಮುಂಬೈಯಲ್ಲಿ ಸಕ್ರಿಯವಾಗಿದ್ದ ಡ್ಯಾನ್ಸ್ ಬಾರ್ ಗಳಲ್ಲಿದ್ದಂತೆ ಕಲಾವಿದರತ್ತ ನೋಟುಗಳನ್ನೆಸೆಯುವುದು, ಪ್ರಶಂಸೆಯ ನೆಪದಲ್ಲಿ ಅಸಂಬದ್ಧ ಕಾಮೆಂಟುಗಳನ್ನು ಸುಖಾಸುಮ್ಮನೆ ದೊಡ್ಡ ದನಿಯಲ್ಲಿ ಅರಚುವುದು ಸಾಮಾನ್ಯವಾಗಿತ್ತು.

”ಆಜ್ ತೋ ಜಾನೇಮನ್, ದಿಲ್ ಹೈ ತುಮ್ಹಾರಾ…” ಎಂಬ ಸೊಗಸಾದ ಹಾಡನ್ನು ಆರ್ಕೆಸ್ಟ್ರಾ ತಂಡದ ತರುಣಿಯೊಬ್ಬಳು ಸುಂದರವಾಗಿ ಹಾಡಿದ ನಂತರವಂತೂ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸಿದಂತೆ ಕಂಡಿತು. ”ಒನ್ಸ್ ಮೋರ್, ಒನ್ಸ್ ಮೋರ್…” ಎಂದು ಹೇಳುತ್ತಲೇ ಒಂದೇ ಹಾಡನ್ನು ಬೆನ್ನುಬೆನ್ನಿಗೆ ಮೂರು ಬಾರಿ ಹಾಡಿಸಿ ಆಕೆಯನ್ನು ಸುಸ್ತು ಮಾಡಿಸುವಲ್ಲಿ ನೆರೆದಿದ್ದ ಕೆಲ ಗ್ರಾಹಕರ ಸಮೂಹವು ಯಶಸ್ವಿಯಾಗಿತ್ತು.

ಆರ್ಕೆಸ್ಟ್ರಾ ತಂಡದತ್ತ ನೋಟುಗಳನ್ನೆಸೆಯುವ ಹಮ್ಮಿನಲ್ಲಿ ಕಲಾವಿದರಿಗೆ ನೀಡಬೇಕಾಗಿರುವ ಕನಿಷ್ಠ ಗೌರವವನ್ನೂ ಈ ವಿದ್ಯಾವಂತ ಜನಸಮೂಹವು ನೀಡದಿದ್ದಿದ್ದು ನಿಜಕ್ಕೂ ದೊಡ್ಡ ದುರಂತ.

ಕೇವಲ ಸಂಗೀತವಷ್ಟೇ ಇದ್ದಿದ್ದ ಅಂದಿನ ಸಂಜೆಯಲ್ಲಿ ಬಲವಂತವಾಗಿ ಅಶ್ಲೀಲತೆಯನ್ನು ತುರುಕಿ ಶಿಸ್ತಿನ ಕಲಾವಿದರಿಗೆ ಮುಜುಗರವನ್ನು ತರಬೇಕಾದ ಅನಿವಾರ್ಯತೆಯಾದರೂ ಏನಿತ್ತು? ಮೇಲ್ನೋಟಕ್ಕೆ ಸಭ್ಯರಂತೆ ಕಾಣುವ ಅದೆಷ್ಟೋ ಮಂದಿ ಜಗತ್ತು ತನ್ನನ್ನು ಗಮನಿಸುತ್ತಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಅದೇಕೆ ರಾಕ್ಷಸರಾಗಿ ಬಿಡುತ್ತಾರೆ? ಗೊತ್ತಿಲ್ಲ!

ಇಂಥಾ ಸಂಗೀತ ಸಂಜೆಗಳಲ್ಲಿ ಇವುಗಳೆಲ್ಲಾ ನಿತ್ಯದ ಸಂಗತಿಯೇ? ನಿತ್ಯದ ಸಂಗತಿಯೆಂಬ ಮಾತ್ರಕ್ಕೆ ಎಲ್ಲವನ್ನೂ ಒಪ್ಪಿಕೊಳ್ಳಲಾಗುವುದೇ? ಹೊಟ್ಟೆಪಾಡಿಗಾಗಿ ತಮ್ಮ ಒಂದಷ್ಟು ಪ್ರತಿಭೆಯನ್ನೇ ಅವಲಂಬಿಸಿರುವ ಕನಸುಕಂಗಳ ಅದೆಷ್ಟೋ ಜೀವಗಳು ಎಂತೆಂಥಾ ಸಂದರ್ಭಗಳಿಗೆ ಸಾಕ್ಷಿಯಾಗಬೇಕು? ಹೀಗೆ ಬಹಳಷ್ಟು ಪ್ರಶ್ನೆಗಳನ್ನು ಹೊತ್ತು ಅಂದು ಭಾರವಾದ ಮನಸ್ಸಿನೊಂದಿಗೆ ನಾನು ಹಿಂದಿರುಗಬೇಕಾಯಿತು. 

ಇತ್ತ ಸಂಗೀತ ಸಂಜೆಯ ಅನುಭವವು ಸಾಲದ್ದೆಂಬಂತೆ ನಾನು ಉಳಿದುಕೊಂಡಿದ್ದ, ಅಷ್ಟೇನೂ ದುಬಾರಿಯಲ್ಲದ ಹೊಟೇಲಿನಲ್ಲಿ ನಡೆಯುತ್ತಿದ್ದ ಪುಟ್ಟ ಮಾತಿನ ಚಕಮಕಿಯೊಂದು ಕುತೂಹಲ ಹುಟ್ಟಿಸುವಂತಿತ್ತು. ಹೊಟೇಲ್ ಸಿಬ್ಬಂದಿಯು ಉಳಿದುಕೊಂಡಿದ್ದ ಗ್ರಾಹಕನೊಬ್ಬನಿಗೆ ತಾನು ರೂಮಿನಲ್ಲಿ ‘ಎಲ್ಲಾ ಬಗೆಯ ಸೇವೆಗಳನ್ನೂ’ ಒದಗಿಸಬಲ್ಲವನೆಂದು ಮನವರಿಕೆ ಮಾಡುತ್ತಿದ್ದ. ‘

“ನನಗೆ ಬೇಕಿರುವುದನ್ನು ನಾನು ಕೇಳಿ ಪಡೆದುಕೊಳ್ಳುವೆ. ‘ಎಲ್ಲಾ ಬಗೆಯ ಸೇವೆಗಳು’ ನನಗೇನೂ ಬೇಡ”, ಎಂದು ಆ ಗ್ರಾಹಕ ತುಸು ಖಾರವಾಗಿಯೇ ಹೊಟೇಲ್ ಸಿಬ್ಬಂದಿಗೆ ಹೇಳುತ್ತಿದ್ದ. ಹೊಟೇಲ್ ಸಿಬ್ಬಂದಿಯು ಇಂಥಾ ವಿಶೇಷ ಸೇವೆಗಳಿಗೆ ‘ಗರಂ ಸೇವಾ’ ಎಂದು ಕರೆಯುತ್ತಿದ್ದಿದ್ದನ್ನು ಇಲ್ಲಿ ಹೇಳಲೇಬೇಕು. ಹೀಗೆ ಈ ಒತ್ತಾಯದ ಬೇಕು-ಬೇಡಗಳ ಹೇರುವಿಕೆಯಲ್ಲಿ ಇಬ್ಬರ ನಡುವೆ ಪುಟ್ಟ ವಾಗ್ವಾದವೊಂದು ಶುರುವಾಗಿತ್ತು.

ಒಟ್ಟಿನಲ್ಲಿ ‘ಪಹಾಡ್ ಗಂಜ್’ ಏರಿಯಾದ ರಾತ್ರಿಯ ಮುಖಗಳು ನನ್ನಂಥಾ ಹೊಸಬನಿಗೆ ಅಂದು ಖುಲ್ಲಂಖುಲ್ಲಾ ಕಾಣತೊಡಗಿದ್ದವು. ಹೊಟೇಲಿನಲ್ಲಿ ಉಳಿದುಕೊಳ್ಳಲು ಬಂದಿದ್ದ ಬುದ್ಧಿವಂತ ಗ್ರಾಹಕನು ಮಧ್ಯವರ್ತಿಗಳ ಗಾಳಕ್ಕೆ ಮತ್ತು ಕ್ಷಣಿಕ ಸುಖದ ಆಮಿಷಕ್ಕೆ ಬೀಳದಿದ್ದ ಪರಿಣಾಮವಾಗಿ ಅಂದು ಹೊಟೇಲ್ ಸಿಬ್ಬಂದಿಗೆ ಡೀಲ್ ಗಿಟ್ಟಲಿಲ್ಲ.

ಅಸಮಾಧಾನದಿಂದ ಗೊಣಗಿಕೊಂಡು ಹೋದ ಆತ ಮತ್ತೆ ಹೊಟೇಲಿನ ನಮ್ಮ ಭಾಗದ ಕಾರಿಡಾರಿನತ್ತ ತಲೆ ಹಾಕಲಿಲ್ಲ. ಇದರಿಂದ ಆಗಿದ್ದೇನೆಂದರೆ ರೂಂ ಸರ್ವೀಸ್ ಅಲಭ್ಯತೆಯಿಂದಾಗಿ ಮಲಗುವ ಮುನ್ನ ನೆಮ್ಮದಿಯಾಗಿ ಒಂದು ಲೋಟ ನೀರು ತರಿಸಿ ಕುಡಿಯುವುದಕ್ಕೂ ದುಸ್ತರವಾಗಿದ್ದು. 

ಇಂದಿಗೂ ದಿಲ್ಲಿಯಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಅಗ್ಗದ ಹೋಟೇಲುಗಳ ತಲಾಶೆಯಲ್ಲಿ ಬರುವ ವಿದೇಶಿ ಪ್ರವಾಸಿಗರಿಗೆ ‘ಪಹಾಡ್ ಗಂಜ್’ ನೆಚ್ಚಿನ ತಾಣ.

ಅಸಲಿಗೆ ‘ಪಹಾಡ್ ಗಂಜ್’ ಬಗ್ಗೆ ಉಲ್ಲೇಖವಿಲ್ಲದ ದಿಲ್ಲಿ ಟೂರಿಸ್ಟ್ ಗೈಡ್ ಗಳೇ ಇರಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಈ ಏರಿಯಾ ಹಳೇದಿಲ್ಲಿಗೆ ಸಂಬಂಧಪಟ್ಟಂತೆ ಬಹುಪ್ರಾಮುಖ್ಯತೆಯಿರುವ ಸ್ಥಳವಾಗಿದೆ. ಬೆನ್ನಿಗಂಟಿಸಿಕೊಂಡಿರುವ ಭಾರದ ಬ್ಯಾಕ್-ಪ್ಯಾಕ್ ಗಳೊಂದಿಗೆ ಅಲೆದಾಡುವ ವಿದೇಶೀಯರನ್ನು ಕಾಣುವುದು ಇಲ್ಲಿ ನಿತ್ಯದ ದೃಶ್ಯ.

ಈ ವಿದೇಶಿಯರ ಇರುವಿಕೆಯಿಂದಲೇ ಇಲ್ಲಿ ಕರೆನ್ಸಿ ವಿನಿಮಯಗಳಿಂದ ಹಿಡಿದು ಪುಟ್ಟ ಕ್ಲಿನಿಕ್ ಗಳವರೆಗೆ ಎಲ್ಲಾ ಬಗೆಯ ವ್ಯವಹಾರಗಳು ಭರ್ಜರಿಯೆಂಬಂತೆ ನಡೆಯುತ್ತಿವೆ. 

ಅಂದಿನ ಭೇಟಿಯ ನಂತರ ನೆಲ್ಸನ್ ಇ-ಮೈಲ್ ಒಂದನ್ನು ಕಳಿಸಿದ್ದರೂ ಆತನೊಂದಿಗೆ ದೀರ್ಘಕಾಲದ ಸಂಪರ್ಕವನ್ನು ಇಟ್ಟುಕೊಳ್ಳುವುದು ಸಾಧ್ಯವಾಗಲಿಲ್ಲ. ಇತ್ತ ಮತ್ತೆ ಮರಳುವೆನೆಂಬ ನೆಪದಲ್ಲಿ ‘ಪಹಾಡ್ ಗಂಜ್’ ಅಲೆದಾಟವನ್ನು ಒಂದು ಸಂಜೆಗಷ್ಟೇ ನಾನು ಮೊಟಕುಗೊಳಿಸಿದ್ದೆ.

ಇಂದಿಗೂ ಅಲ್ಕಾ ಯಾಗ್ನಿಕ್ ದನಿಯಲ್ಲಿ ‘ದಿಲ್ ಹೈ ತುಮ್ಹಾರಾ’ ಹಾಡು ಕೇಳಿದಾಗಲೆಲ್ಲಾ ಆ ಸ್ಫುರದ್ರೂಪಿ ಗಾಯಕಿಯ ಕಣ್ಣುಗಳಲ್ಲಿದ್ದ ಅಸಹಾಯಕತೆ ನೆನಪಿಗೆ ಬಂದು ಕಣ್ಣು ಅದೇಕೋ ಮಂಜಾಗಿ ಬಿಡುತ್ತದೆ.

August 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This