ಪಾತ್ರಧಾರಿ

ಅಮರೇಶ ಗಿಣಿವಾರ

ವಿರೇಶಪ್ಪಗೌಡ ಹೊರಗಿನಿಂದ ಎದ್ದು ಬಂದವನೇ “ಲೇ ಗೋವಿಂದ ಇವತ್ತ ಮಲ್ಲನಗೌಡ್ರನ್ನ, ಬಲದಂಡಪ್ಪನನ್ನ ಬಸವಣ್ಣ ಕಟ್ಟಿಗಿ ಬರಬೇಕೆಂದ ಹೇಳಿ ಬಾ” ಎಂದ. ಗೋವಿಂದ `ಮುಂಜಮುಂಜಾನಿ ಸುರುವಾತಿ ಗೌಡಂದು’ ಅನಕೋಂತ ಹೇಳಲು ಹೊರಟ. ವೀರೇಶಪ್ಪಗೌಡನ ಆಜ್ಞೆಯಂತೆ ಸಾಯಂಕಾಲ ಊರಮಂದಿ ಸೇರಿದರು. ಊರಿನ ದೈವದ ಮುಂದ ಹೇಳದೇನಂದ್ರ “ಈ ಸಲ ದೇವಿ ಜಾತ್ರಿ ಬಾಳ ಅದ್ದೂರಿಯಾಗಿ ಮಾಡಬೇಕ ಅನಕೊಂಡೀವಿ, ಇದರ ಜತಿಗಿ ಒಂದು ಬಯಲಾಟವನ್ನು ಆಡಿಸಬೇಕಂತ ನಿರ್ಣಯ ಮಾಡೀವಿ, ಇದಕ್ಕೆ ತಮ್ಮದೇನಾದ್ರೂ ತಕರಾರು ಇದ್ರ ಸೀದಕ್ಕ ಸೀದ ಹೇಳಿಬಿಡ್ರಿ” ಎಂದು ವಿರೇಶಪ್ಪಗೌಡ ಸುರುಮಾಡಿದ.

“ಈ ಕಾಲದಾಗ ಬೈಲಾಟಂತ ಬೈಲಾಟ ಯಾವೋನ್ ನೋಡ್ತಾನ” ದೈವದಾಗ ತತ್ತಿನಿಂಗ ಊದಿ ಬಿಟ್ಟ. ಮಲ್ಲನಗೌಡ ಒಂದು ಝುರಿ ಬೀಡಿ ಎಳದು “ಅಲ್ಲೆದಲ್ಲೇ ಮಾತಾಡಿದ್ರ ನಮಗೆಂಗ ತಿಳಿಬೇಕು, ಬೈಲಾಟ ಬ್ಯಾಡಂದ್ರ ಸಾಮಾಜಿಕ ನಾಟಕ ಆಡಸಂಬ್ರಿ” ಅದಕ್ಕೇನಂತ. “ಏನೂ ಬ್ಯಾಡ ಗೌಡ ಸಾಮಾಜಿಕ ನಾಟಕದಾಗ ಮಜಾ ಇರಂಗಿಲ್ಲಾ, ಯಾಕಂದ್ರ ದ್ರೌಪದಿ ಇರಂಗಿಲ್ಲಾ, ದುಶ್ಯಾಸನ ಇರಂಗಿಲ್ಲಾ” ಅಂತ ಬಲದಂಡಪ್ಪ ಗೋಣು ಮುರಿದ. 

ಯಕ್ಷಗಾನ ಬೈಲಾಟ ಅಂತ ಮಾತಾಡಿದ್ರ ನಾವು ಕೇಳಂಗಿಲ್ಲ, ಆಗಂಗಿದ್ರ ಸಾಮಾಜಿಕ ಆಗಬೇಕು, ಬೇಕಿದ್ರ ಅದರಾಗ ಸ್ವಲ್ಪ ಬೈಲಾಟದ ಪಾತ್ರಗಳು ಹಾಕಿ ಯಾರ ಬ್ಯಾಡಂದಾರ, ಇಲ್ಲಂದ್ರ ಬರೇ ತೇರಷ್ಟೇ ಎಳದು ಮಕ್ಕಂಬಿಡಂಬ್ರಿ ಅಂತ ಮಲ್ಲನಗೌಡ `ಛೂ’ ಬಿಟ್ಟಾಗ, ವೀರೇಶಪ್ಪಗೌಡ ಎಷ್ಟು ಎದ್ರು ಸೂಳೆಮಕ್ಕಳು ಐದಿರ್ಯಲೇ ಹಾಳಾಗಿ ಹೋಗ್ರಾ ನಿಮ್ಮಮ್ಮನ ಅಂದಾಗ ಎಲ್ಲರೂ ತಮ್ಮ ತಮ್ಮ ಪಂಜೆ ಜಾಡಿಸಿ ಎದ್ದು ಹೋದರು. 

`ಆಹೋ ಭ್ರಷ್ಟಳೇ ನಾನು ಬಂದು ಬಾಳ ಹೊತ್ತಾಯಿತು, ಒಂದು ಚೆಂಬು ನೀರು ತಗಂಡು ಬರುವಂತಳಾಗು ನಾರಿಮಣಿ ಧಿಮಣಿ’ ಎಂದ ಈರಣ್ಣ. ಅವಾಗ ಇದ್ದ ಕಸೆಲ್ಲಾ ಮೂಲಿಗಿ ನೂಕಿ ಹರಪಡದೋನು ಕುಡುದು ಬಂದಾನಂತೇಳಿ ಅಡಸಲ ಬಡಸಲ ಸೀರೆ ಸಿಗಸಿ ನೀರು ಕೊಟ್ಲು. ಇಟತನ ಯಕ್ಕಡೆ ಹೋಗಿದ್ರನು ದಾನ ಶೂರ ಕರ್ಣರು ಎಂದಾಗ, `ಆಹೋ ಮನ್ಮತಿ ನನ್ನಗೊಡವೆ ನಿನಗೇತರ ನಂಟು ಸುಮ್ಮನಿರುವೆಯಾ ಇಲ್ಲಾ, ಮುರಿಯುವೆ ನಿನ್ನ ಮೂವತ್ತೆರಡ ಹಲ್ಲಾ’ ಎಂದ. ತಿರಗಿ ಮುಸುರೆ ತಿಕ್ಕಕಂತ ನಡದ್ಲು `ನಾಟಕದಾಗ ಪಾತ್ರ ಮಾಡಬ್ಯಾಡ ಅಂತ ವಡ್ಕಂಡೆ, ಕೇಳಿತೆನು ಬರೆ ಅದೇ ಹುಚ್ಚು ಮಾತೆತ್ತಿದರ ನಾಟಕದ ಮಾತು ಯಾರನ್ನ ಏನಂದಾರ ಶಿವ ಶಿವ’ ಎಂದು ಗುನುಗಿದಳು.

ಪಂಚಮಿ ಸೋಮವಾರ ಇವತ್ತು ಅಣ್ಣ ಬರತಾನಂತ ಹೊಸ ಸೀರೆ ಉಟ್ಟು ಮನೆ ಮುಂದಿನ ಚಂಡಿ ಹೂ ತುರುಬಿಗೆ ಚುಚ್ಚಿಗೊಂಡು ಕುಂತಿದ್ಲು. ಇದನ್ನೋಡಿ ಈರ್ಯಾಗ ಸಿಟ್ಟು ಬಂತು. ತವರಮನೇರಿಗಿ ಕಾಯಕತ್ಯಾಳಂತ ಗೊತ್ತಾಯ್ತು. ಎಲೈ ನೀಚಳೇ `ಭಳಿರೇ ಅಲಲಲಲಲ, ತವರಮನೆಯ ಪುಂಡರಿಗಾಗಿ ಹೊಸ್ತಿಲಲ್ಲಿ ಕಾಯುತ್ತಿರುವೆಯಾ? ನಿನ್ನನ್ನು ಕಳಿಸುವರ್ಯಾರು ರತಿ, ಈರಣ್ಣನ ಸತಿ’ ಎಂದ. ಗಂಗವ್ವ ಗಾಭರಿಯಾಗಿ `ನಿನಗೇನು ಬಂದೈತಿ ಧಾಳಿವಡಿಲಿ ವರ್ಷಕ್ಕೊಮ್ಮಿ ಹಬ್ಬ ಬರತಾದ ಹಿಂಗ ಕುಡುದು ನಾಟಕ ಮಾಡಿದ್ರ ನಾನೇನು ಹೇಳ್ಲಿ’ ಎಂದು ಹಣೆ ಹಣೆ ಬಡಕೊಂಡಳು. ಗಂಗವ್ವನ ತವರಮನೇರು ಬಹಳಷ್ಟು ಸಲ ಈರನ ಕುಡ ಕಾಲ ಕೆದಿರಿದ ಮಂದಿ. ‌

ಇವ ಈರಣ್ಣ ಪಾವ ಹೊಲದಾಗ ಜೀವನ ನಡೆಸುತ್ತಿದ್ದ. ಗಂಗವ್ವನ ಮುದುವಿಯಾಗುವಾಗ ನದರಾಣಿ ಕೇಳಿದ್ದ. ಅವರು ಕೊಡ್ತೀವಿ, ಕೊಡ್ತೀವಿ ಅಂತ ಮುಂದಕ್ಕ ಹಾಕ್ಕೊಂಡು ಬಂದಿದ್ರು. ಕೊಡಲಿಲ್ಲ, ಅವತ್ತಿನಿಂದ ಕೂಲಿ ಮಾಡಿ ನಂತರ ಬಹಳ ನೊಂದಕೊಂಡು ಕುಡಿಯೋ ಚಟಕ ಬಿದ್ದಾಗ ದುಡದ ಕೂಲಿ ಸಾಲವಲ್ಲದು. ಅವ್ರ ನದರಾಣಿಗಿ ಕಾಯಕತ್ಯಾನ ಅದರ ಸುದ್ದಿನೇ ಇಲ್ಲಾ.. ಅಂತ ತಿಪ್ಲದಾಗ ಈರ್ಯ- ಕೀಚಕ, ಭೀಮ, ದುಶ್ಯಾಸನ ಅಂತ ವರ್ಷ ಒಂದು ನಾಟಕದಾಗ ಸೋಗು ಹಾಕ್ತಾನ. ನಾಟಕದಾಗ ಮುಯ್ಯ ಬಂಗಾರ ಬೀಳತಾವಂತ ವರ್ಷ ವರ್ಷ ಕಟ್ಟಿದರ, ಮುಯ್ಯದಕಿಂತ ಬಣ್ಣ ಹಚ್ಚಿದ್ದು ವೇಷ ಹಾಕಿದ್ದ ಸಾಲಾನ ಹೆಚ್ಚಾಗ್ಯೈತಿ.

ಗಂಗವ್ವ ಹಿತ್ತಲದಾಗ ಭಂಗ ಮಾಡತಾ ಕುಂತಿದ್ಲು, `ಇದರಲ್ಲೇನು ಬೇಡೋದು ಇಲ್ಲಾ, ಮೊದಲು ತಯಾರಾಗು, ಅವನ ಮುಖ ಏನ್ ನೋಡ್ತಿದ್ದಿ, ತಗಲುಗೊಂಬಿ ಕಂಡಂಗ ಕಾಣ್ತಾನ’ ಅಂತ ಗಂಗವ್ವಗ ಅಣ್ಣ ಗದರಿಸಿದ. ಧಕ್ಕನ ಎದ್ದು ನಿಯತ್ತಿರೋಳಂಗ `ಅಣ್ಣಾ ಒಂದು ಮಾತು ಮಾವನ ಕೇಳು’ ಅಂದಾಗ ಗಕ್ಕನೆ ಎಗರಿಬಿದ್ದು, `ಸಂಸಾರಸ್ಥರು ಭಿಕಾರಿ ಮುಂದ ಬಾಗಂಗಿಲ್ಲಾ ಇವನೇನ್ ಮಾಡ್ಕೊಂತಾನ ಮಾಡ್ಕೋಲಿ. ಮೊದಲು ಕೈಚೀಲ ತಗ ಹೋಗಾಮು…’ ಅಂದ. ರೋಷ ತಂದುಕೊಂಡ ಈರ್ಯಾ `ಎಲೈ ಅಳಿಯನಾದ ನತದೃಷ್ಟನೇ, ಉತ್ತರನ ಪೌರುಷ ಅಡುಗೆ ಮನೆಯೊಳಗೆ ಗೊತ್ತಿಲ್ಲವೇ, ನಿನ್ನ ತೋಳಿನ ಎಲುಬುಗಳು ನಾ ತಿನ್ನುವ ಮೀನದ ಎಲುಬುಗಳಂತೆ ಪೊರೆ ಮುಚ್ಚಿವೆ, ಇಗೋ ಅಂತ ಒಂದೇಟು ಗುದ್ದಿದರೆ ಫಟಾ ಫಟಾ ಎಂದವು ರಾಜಾ-ಅಧಿಕ ಧಿಮಾಕರಾಜ ಅಂದು ಗಂಭೀರ ನಗು ನಕ್ಕ.

ಈರಣ್ಣನ ತಂದಿ ಹೊಟ್ಟಿನಿಂಗಪ್ಪ ಹಳೆ ಮಂದಿ. ಉರದು ಉರಕಡ್ಲಿ ಆಗಿದ್ದ. ವಯಸ್ಸಾದರೂ ತನ್ನ ಬಿರುಸಿನ ಮಾತಿಗೆ ವಯಸ್ಸಾಗಿದ್ದಿಲ್ಲ. ಮಗಾ ನಾಟಕದ ಮಾತು ರೂಢ ಮಾಡಿಕೆಂಡಿದ್ದ, ಹೊಟ್ಟಿನಿಂಗ ಒಡುವು, ಅಲ್ಲೇದಲ್ಲೇ ಜೋಡಿಸಿ ಮಾತಾಡೋದು ರೂಢ ಮಾಡಿಕೊಂಡಿದ್ದ. ಸೊಸೆ ತವರಮನಿಗಿ ಹೇಳದ ಕೇಳದ ಹೊಂಟಾಳಂತ ಗೊತ್ತಾಗಿ

“ಲೇ ನೀಚ ನನ್ನ ಅಳಿಯಾ,,

 ನಾಚಿಕೆ ಬೇಕು ನಿನಗೆ 

ಈಚಲಗಿಡದ ಹೆಂಡ ಕುಡದ ನಮಗೆ                        

 ಕುಂಡೆ ಪಾಚಿಟ್ಟದ ಅಂತ ಮಾಡಿಯೇನು”       

ಯೇಸ್ ಜನ್ಮ ಹೋದರು ಮೈಮೇಲಿನ ಒಂದು ರೋಮ ಕೂಡ ಉದರಿಲ್ಲ. ಲೇ ಹಿಂದಕ್ಕ ನಿಮ್ಮ ತಂದೇರು ದಾಸರ ಭಕ್ತನಾದ ನನಗಿ `ಹುಚ್ಚಪ್ಪಗಳಿರಾ’ ಅಂದಿದ್ರು. ನನಗ ವಯಸ್ಸಿತ್ತಂದ್ರ ನಿಮ್ಮೆಲ್ಲರನ ವದ್ದು `ಲುಚ್ಚಪ್ಪಗಳಿರಾ’ ಮಾಡತಿದ್ದೆ. ಈಗ ಕಟ್ಯಾಕಿದಂಗ ಆಗ್ಯಾದ ಅಂತ ಹೆಂಡದ ಮಡಿಕಿ ಬಾಯಾಗಿಟ್ಟ.

ಲಗ್ನ ಆಗಿ ಮೂರು ವರ್ಷ ಆದ್ರೂನು ಗಂಗವ್ವ ತುಂಬಿದ ಮನಿಷೇಳು ಆಗಲಿಲ್ಲ. ಗಂಡನಮನೇರು ದುರ್ಯೋಧನ ವಂಶದೋರು, ಕರಿಯಾಕ ಬಂದರ ಕಳಸಂಗಿಲ್ಲ ಅಂತಾರ, ಬಲವಂತ ಮಾಡಿ ಎಳಕಂಡ ಹೋದರ, ಮತ್ತೆ ನಾವ್ ಕರಕೋಂಡ ಬರದಿಲ್ಲಂತಾರ ಒಟ್ಟಿನಲ್ಲಿ `ಮಳಿ ಬಂದಾಗ ಮೈ ತೊಳಕೋ ಮಂದಿ’ ಇದ್ದಂಗ. ಸೊಸಿ ನಡೋ ನೀರಿನ್ಯಾಗ ಕಂಬ ಆದಂಗ ಆಗ್ಯಾಳ. ಅವರಣ್ಣ ಬಲವಂತ ಮಾಡಿ ಗಂಗವ್ವನ ಎಳಕಂಡು ಹೋದ. 

ಹೊಟ್ಟಿನಿಂಗ ಮಗ ಈರ್ಯಾ ಇಬ್ಬರು ಕೂಡಿ ತಂದಿಮಗ ಅಂಬ ಅರಿವಿಲ್ದಂಗ ಹೆಂಡ ಎಟ್ಟುತಿದ್ರು. ಕುಡದಾಗ ಈರ್ಯಾ ಅಂತಿದ್ದ. “ನಾನು ಮಾಚಲಾಪುರದ ಗಂಗವ್ವನ ಬಿಟ್ಟೆನು, ಈಚಲಗಿಡದ ಹೆಂಡ ಬಿಡಂಗಿಲ್ಲಾ ಯಪ್ಪಾ” ಅಂದ. ಭಾಪುಭಾಪುರೇ ಧ್ವನಿ ಸಣ್ಣದು ಮಾಡಿ `ಬೀಜ ಇಲ್ಲದೋನು ಹುಟ್ಟಿದ್ಯಲ್ಲಲೇ ಈರ್ಯಾ,’ ಅಂದ. ಈರ್ಯಾ ಅಳುಕಿನಿಂದ ಬಾಯಿ ತೆರೆದ, ಗೋಡಿ ಅಂತ ಮನಸ್ಸಿನ್ಯಾಗ ಕಣ್ಣೀರು ಉದರಿದವು, ಸ್ವಲ್ಪ ಧೈರ್ಯ ತಗಂಡು `ಯಪ್ಪಾ ನೀ ಮಾಯಾಕಾರ್ತಿ ಅದ್ಯಾಳ ಹೊಟ್ಟ್ಯಾಗ ನಿಜ ಹೇಳಪ್ಪಾ, ನಿನ್ ಕಾಲ ತಗಂಡು ತೆಲಿಮ್ಯಾಗ ಇಟಗಂತೀನಿ ಹೇಳಪ್ಪಾ. ಲೇ `ನಿನ್ನ ತೊಲ್ಡು ಬೀಜ ಸರಿಗಿಲ್ಲಂತಲೇ ವಂಶ ಬೆಳಸೋ ತಾಕತ್ತಿ ಇಲ್ಲಂತ ಬಂಗಾಳಿ ಡಾಕ್ಟ್ರು ಹೇಳಿದ…’ ಹಂಗಿದ್ರ ಮದ್ವೀ ಯಾಕ್ ಮಾಡಿದಿ. `ಸುಮ್ಮನಲೇ ನಂದು ನಿಂದು ಇಬ್ಬರ ಮಾನ ಉಳಿಸಕಲೇ ಬದ್ಮಾಶ್’ ಎಂದು ಎದ್ದು ಹೊರ ನಡೆದ.

ಹೊಟ್ಟಿ ನಿಂಗಪ್ಪ ಊರಿಗೆ ಹೆಚ್ಚಾದವ, ಕೋರ್ಟುಕಛೇರಿ ಮನೆ ಮಾತಾಗಿದ್ದವು. ಆಂಧ್ರಾದ ಚಿರ್ತಾಪಲ್ಲಿ, ರೌಡೂರು, ಕುಂಬಳೂರು, ತುಂಬಳ, ಕಾಮಾರ ಮುಂತಾದ ಕೊಲೆಗಡುಕ ಊರುಗಳಲ್ಲಿ ಅಡ್ಡಾಡಿ ಬಂದಿದ್ದ. ಅವನ ಕಾಲದಲ್ಲಿ ಊರಿನಲ್ಲಿ ಬಲತ್ಕಾರ, ಖೂನಿ ಹಬ್ಬದೂಟವಾಗಿದ್ದವು. ಒಂದು ಸಾರಿ ಒಂದು ಹೆಂಡದ ಮಗಿ ಸಲುವಾಗಿ ಕೊಬ್ರಿದಾಸಗ ಚಾಕು ಹಾಕಿದ್ದ, ಊರಾಗಿನ ಮಂದಿ ಹೊಟ್ಟಿನಿಂಗ ಹಾಫ್‍ಮಲ್ಡ್ ಮಾಡ್ಯಾನ, ಹಾಫ್‍ಮಲ್ಡ್ ಮಾಡ್ಯಾನ ಅಂತ ಸುದ್ದಿ ಎಬ್ಬಿಸಿದ್ರು. ಓಣ್ಯಾಗ ಕಡುಕಿನ ಮಾತು ಬಂದವಂದ್ರ `ಹೊಟ್ಟೆ ಬಂತು’ ಅಂತಿದ್ರು. ಹತ್ತು ವರುಷದ ಹಿಂದೆ ಮೊಹರಂ ಹಬ್ಬದಾಗ ಕತ್ತಲಾಗಕ ಹತ್ತು ನಿಮಿಷ ಕಮ್ಮಿತ್ತು. ಬ್ಯಾಡ್ರು ಕುರುಬರು ಅಂತೇಳಿ ಮಾತಿಗಿ ಮಾತ ಸೇರಿ  ದೊಡ್ಡ ಗದ್ಲ ಸುರುವಾತಿ. ಅಗಸೆಮುಂದಿನಿಂದ ಕಲ್ಲು, ಕೆಬ್ಬಣ ಹಾರಿ ಹಾರಿ ಬಂದವು. ಹೊಟ್ಟಿನಿಂಗ `ಯಾರಿಗನ್ನ ಬಿಳಲಿ ಅವನಮ್ಮನ’ ಅಂತೇಳಿ ಕವಣ್ಯಾಗ ಕಲ್ಲಿಟ್ಟು ಹೊಗದ. ಹೊಟ್ಟಿನಿಂಗಗ ಯಾವ ಗುರಿಗಾರ ಬೀಸಿದ ಕಲ್ಲು ಹೊಟ್ಟೆನಿಂಗನ ತಲಿಗಿ ಬಿದ್ದು ತೂತು ಬಿದ್ದಾಗ ಬ್ಯಾಡರ ಮ್ಯಾಗ ಕೇಸು ಕೊಡಾಕಂತ ಹೋದ. ಜಮಾದರ “ಲೇ ಭೋಸುಡಿಕಿ ಯಾರ ಮ್ಯಾಲಂತ ಕೇಸು ಕೊಡ್ತೀಯಾ, ಅವರೆಸರು ಸಾಕ್ಷಿ ತಗಂಡು ಬಾ ಹೋಗಲೇ ಹೋಗು” ಎಂದಾಗ ನಿಂಗ ಹೊಟ್ಟಿ ಸವರಿಕೋಂತ ವಾಪಸ್ಸು ಬಂದಿದ್ದ.

ಗಂಗವ್ವ ಎಲ್ಲಾ ಮುಗಿಸಿಕೊಂಡು ಗಂಡನ ಮನಿಗಿ ವಾಪಸ್ಸು ಬಂದಳು. ಹೊರಸಿನ ಮ್ಯಾಲಿ ಮಾವ, ಗ್ವಾದ್ಲ್ಯಾಗ ಗಂಡ, ಒಬ್ಬರಿಗೊಬ್ಬರು ಖೂನ ಇಲ್ಲಂಬಂಗ ಕುಂತಿದ್ರು. ಮಾವ ಹೊಟ್ಟೆ ನಿಂಗ ಕೈ ಊರಿ ಎದ್ದ. ಏನಮ್ಮಾ ಸೊಸಿ ಆರಾಮ ಇದ್ಯಾ ಅಂದ. ಆರಾಮ ಮಾವ ಅಂದು, ಉಟ್ಟ ಸೀರೆ ಮ್ಯಾಲಿ ಎಲ್ಲೆದಲ್ಲೆ ಬಿದ್ದ ಮನಿ ಕೆಲಸ ಸುರು ಮಾಡಿದಳು. ಸ್ವಲ್ಪ ಹೊಲಕ ಹೋಗಿ ಬರತೀನಿ ಅಂತ ಈರ್ಯಾ ಹಗ್ಗ ತಗಂಡು ಹೋದ.

ಹೊಟ್ಟಿನಿಂಗಪ್ಪಗ ಸೇದಾಕ ತಂಬಾಕ ತಂದು ತಂದು ಕೊಟ್ಟು ತಾನು ಸೇದೋದು ಕಲಿತಿದ್ದ ನಾದ್ರ ನಾಗ್ಯ, ಇವ ಗತ್ತಿನ ರಾಜ, ಮಗ ತನಗಿಂತ ಮೀಸೆನ ಭಾಳ ದಪ್ಪ ಬೆಳೆಸಿದ್ದ. ತಂಬಾಕ ಸೇದಿ ಸೇದಿ ಮೀಸೆಲ್ಲಾ ಸುಟ್ಟು ಬಾಯಿ ಅನ್ನೋದು ಜೇರಗಂಡಿಯಾಗಿತ್ತು. ವಯಸ್ಸಿತ್ತು ಊರಿನ ಚಿನಾಲೇರು ನೀರಿಗಿ ಹೊಂಟ್ರ ಮೀಸೆ ಮ್ಯಾಲಿ ಕೈ ಇಟ್ಟು ತೊಡೆ ಚಪ್ಪರಿಸುತ್ತಿದ್ದ. ನಾದ್ರ ನಾಯಿನ ಕೆಣಿಕಿ ಲಕ್ಷಣ ಕಳಕಬಾರದಂತ ಮಂದಿ ನಾಗ್ಯನ ಮಾತಾಡಸ್ತಿದ್ದಿಲ್ಲ. ನಾಗ್ಯ ಇವತ್ತು ಮನಿಗಿ ಬಂದಾನಂದ್ರ, ಗಂಗವ್ವ ಬೈತೇಲಿ ತೆಗದು ರೆಡ್ಯಾಗಿ ಕುಂದ್ರತಿದ್ಲು. ಇವ ಆದಿವಾಸಿ ಕಂಡಂಗಾದ್ರು ಇವನ ಮ್ಯಾಲ ಭಾಳ ಕಕ್ಕುಲಾತಿ ಇತ್ತು ಗಂಗವ್ವಗ. ನಾಗ್ಯ ಯಕ್ಷಗಾನ ಮಾಡಿದಂಗ ಮಾಡ್ತಿದ್ದ. ತಂಬಾಕ ಸೇದವಾ, ಮೀಸೆ ತಿರುವವಾ, ಆಕಡೆ ಗಂಗವ್ವನ ನೋಡವಾ. ಹೊಟ್ಟಿನಿಂಗ ಹೊರಸಿನ ಮ್ಯಾಲ ಕುಂತಗಂಡು ತಂಬಾಕ ಎಳದ್ರ, ಮಗ ನಾಗ್ಯ ಹೊರಸಿನ ಕೆಳಗ ಕುಂತಗಂಡು ಗಂಗಿ ಮನಸು ಎಳಿತಿದ್ದ.  `ಹತ್ತು ಪಾಕೀಟು ಕುಡಿಯೋದು ಒಂದೇ, ಒಂದು ತಂಬಾಕಿನ ಝುರಿ ಎಳಿಯೋದು ಒಂದೇ’ ಅಂತ ಹೊಟ್ಟಿನಿಂಗ ಅಂದಾಗ, ನಾಗ್ಯ, ಹೌದು ಕಕ್ಕ ಹೌದು ಕಕ್ಕ ಅಂದ. ನಾಗ್ಯನ ತಲಿಗೇರಿತು `ಏ ಗಂಗವ್ವ ನಿರ ತಾಂಬ’ ಅಂದ್ರ, ಬಾರುಕೋಲು ಸೆಳದಂಗ ಆತಿ. `ಲೇ ನಾಗ್ಯಾ, ಈ ತಂಪಿನ್ಯಾಗ ಒಂದು ವಯ್ಯಾರದ ಪದ ಹಾಡಲೇ’ ಎಂದು ಹೊಟ್ಟಿನಿಂಗಪ್ಪ ಹೇಳಿದಾಗ, `ತಡಿ ನಿನ ಸೊಸಿ ನೀರ ತರಲಿ’ ಅಂದ. ಗಂಗವ್ವ ಸ್ವಲ್ಪ ಕಿಸದು ನೀರು ಇಟ್ಟು ಹೋದಳು. ನಾಗ್ಯಾ

`ನೀ ನಗಬ್ಯಾಡ ಜಗಲಿಯ ಮುಂದ ಕುಂತ

ಯವ್ವಾ ನೀ ನಗಬ್ಯಾಡ, ಸೊಕ್ಕಿನವ ನಾನು ಮಿಕ್ಕಿದವರುಳಿದಿಲ್ಲ

ನೀ ನಗಬ್ಯಾಡ’

ಬಾರಿ ಪದ ಐತೆಲ್ಲ್ಯಲೇ, ಸರಿಬಿಡು ನಾನ್ಯಾವಗ ನಕ್ಕಿನಲೇ “ಕಕ್ಕಾ ನೀನಲ್ಲ ಆತಮುಕ ಹೇಳಿನಿ ಆತಮುಕ” ಅಂದ. ಹೊತ್ತು ಮುಣಿಗಿತ್ತು ಈರ್ಯಾ ದುಡುದು ಕೈಯಾಗ ಹಗ್ಗ ಹಿಡ್ಕಂಡು ಬಂದ `ಲೇ ದುರಾತ್ಮ ತಂಬಾಕ ಎಳಿಬ್ಯಾಡಲೇ ಈಗ ಈಗ ಬಡಕಬಡಕ ಇದ್ದಿ ಇನ್ನೇಟು ಬಡಕಾಗಬೇಕಂತ ಮಾಡಿಯಲೇ’ ಅಂದು ಹಗ್ಗ ಗ್ವಾದ್ಲ್ಯಾಗ ಹಾಕಿದ. ಲೇ ನಾಗ್ಯಾ ಜೀವನದಾಗ ಒಂದಾರ ಒಳ್ಳೆ ಕೆಲಸ ಮಾಡಿಯೇನಲೇ ಅಂತ ಕೇಳಿದ್ರ, `ಹೇ ಕಕ್ಕಾ ಗೊತ್ತಿದ್ದು, ಗೊತ್ತಿದ್ದು ಹೀಂಗ ಕೇಳೋದಾ’ ಅಂದ. ಕಡ್ಡಿ ಗೀಚಲೇ ಇನ್ನೊಂದು ಝುರಿ ಎಳೆಮ ಅಂತ ಹೊಟ್ಟಿನಿಂಗ ಅಂದ.

 ಗಂಗವ್ವ ಈ ಕಡೆ ರಂಗೋಲಿ ಹಾಕುತ್ತಾ,                        

“ರಂಗೋಲಿ ಹಾಕಿದರ ಗಂಗೂಲಿ ಬರೋದಿಲ್ಲಾ,                                                                 

ರಂಗೋಲಿ ಯಾಕ ನಮ್ಮನಿಗಿ,                                                                              

ರಂಗೋಲಿ ಯಾಕ ನಮ್ಮನಿಗಿ ನಾಗೇಂದ್ರ,                                                                      

ಅಂಗೈಲಿ ಒಂದು ಮರಿ ಬೇಕು” ಎಂದು  ಹಾಡುತ್ತಾ ಕುಳಿತಳು.  ಹಿಂದಿನ ದಿನ ಕುಂಬಳೂರಿಗೆ ಹೋಗಿದ್ದ ಈರ್ಯಾ ಮುಂಜೇಲಿ ಹೆಂಡದ ಕೊಡ ಇಟಗೊಂಡು ಸೈಕಲ್‍ದಾಗ ಬಂದ. ಮಗ ಹೆಂಡ ತರತಾನ ಅಂತ ಹೊಟ್ಟಿನಿಂಗ ಕಾಯ್ತಾ ಕುಂತಿದ್ದ. ಯಪ್ಪಾ ಏಟನ್ನ ಕುಡೆಪ ಇವತ್ತು ಅಂದ. ಹೊಟ್ಟಿನಿಂಗ ಹೊಟ್ಟಿ, ಬಾಯಿ ಒಂದೇ ಸಲ ಸವರಿದ. `ಮಗಿ ತಾಂಬ ಅವಳವ್ನ ತಡ ಮಾಡೋದು ಬ್ಯಾಡ’ ಅಂದ. ತಂದಿ-ಮಗ ಯಾವ ಭೇದ ಇಲ್ಲದಂಗ ಖಾಲಿ ಮಾಡಿದ್ರು. ನಿಶೆದಾಗ ಏ ಗಂಗಿ ಅಂದ ಈರ್ಯಾ. “ಗಂಗಿ ಕಾಣವಲ್ಲಳಲೇ ನಿನ್ನೆ ರಾತ್ರ್ಯಾಗಲಿಂದ ಅವಳು ಹೋದ್ಲಲೇ, ಮರೇದಿ ತೆಗದ್ಲಲೇ ಈರ್ಯಾ” ಅಂದ. ಯಪ್ಪಾ “ಅಡ್ನಾಡಿ ಸೂಳೆಮಕ್ಕಳ್ನ ಕರಕಂಡ ಕರಕಂಡ ಕುಡಿದಿ, ತಂಬಾಕ ಸೇದಿದಿ, ಅವರ ನಮಗ ಇಟ್ರಲ್ಲಪ್ಪಾ” ಅಂದ ಈರ್ಯಾ. `ಹೋಗಲಬುಡಲೇ ಅವಳು, ಅವಳನ್ನ ಬೇಸಿರಲಿ’ ಅಂದು ನಿಂಗ ಅಂಗಾತ ಬಿದ್ದ. ಅಬಬಬಬ ಯಲೈ ನಾರಿ, ವಯ್ಯಾರಿ, ಮದನಕಠಾರಿ ಹಿಡಿದಿಯಲ್ಲಾ ನಿನ್ನ ಕೊನೆಯದಾರಿ. ನಿನ್ನ ಮೋಹಿಸಿದವನ ರುಂಡವಂ ಚಂಡಾಡದಿದ್ದರೆ ಬಾಪುರೇ, ಈರ್ಯನೆಂಬ ಹೆಸರ್ಯಾತಕ್ಕೆ ಕಾಂತೆ, ಗುಣವಂತೆ’ ಎಂದು ಈರ್ಯ ಕುಡ ಅಪ್ಪನಂತೆ ಅಂಗಾತ ಮಲಗಿದ. 

‍ಲೇಖಕರು Avadhi

September 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ಅನುಪಮಾ ಪ್ರಸಾದ್ ನಾನಾಗ ಹತ್ತನೇ ತರಗತಿಯಲ್ಲಿದ್ದಿರಬೇಕು. ಮನೆಯಿಂದ ಶಾಲೆಗೆ ಬರುವ ಕಾಲುದಾರಿಯ ಒಂದು ತಿರುವಿನಲ್ಲಿ ನನಗಿಂತ ಎರಡು ಮೂರು...

ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಎಂ ಆರ್ ಭಗವತಿ ಕೋಳಿ ಮೊಟ್ಟೆಯನ್ನೊಡೆದು, ಮೇಲಿನ ಚಿಪ್ಪನ್ನು ಸ್ವಲ್ಪ ತೆಗೆದು, ಒಳಗೆ ಹತ್ತಿಯನಿಟ್ಟು, ಪಿಳಿಪಿಳಿ ಕಣ್ಣನು ಬರೆದು, ಕೆಂಪು...

ನಟೋರಿಯಸ್ ಕೈದಿಗಳ ಜೊತೆಯಲ್ಲಿ..

ನಟೋರಿಯಸ್ ಕೈದಿಗಳ ಜೊತೆಯಲ್ಲಿ..

ಹುಲುಗಪ್ಪ ಕಟ್ಟೀಮನಿ ಸೆಪ್ಟೆಂಬರ್‍ 19 ಬಿ.ವಿ.ಕಾರಂತರ ಜನ್ಮದಿನ. ರಂಗಭೂಮಿಯಲ್ಲಿರುವವರಿಗೆ ಕಾರಂತರ ನೆನಪೇ ಒಂದು ರೋಮಾಂಚನ. ಅವರ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This