'ಪಿಂಕ್' ಚಿತ್ರ ನೋಡಿ ಬಂದ ತಕ್ಷಣ..

ಬೇಡಾ ಎಂದರೆ ‘ಬೇಡವೆಂದೇ’ ಅರ್ಥ..

girija shastriಗಿರಿಜಾಶಾಸ್ತ್ರಿ

‘ಪಿಂಕ್’ ಚಲನ ಚಿತ್ರ ನೋಡಿಕೊಂಡು ಬಂದ ತಕ್ಷಣ ನಮ್ಮ ಹೋರಾಟದ ಉಪಾಯಗಳು ಅದರ ಸ್ವರೂಪ ಹಾಗೂ ವ್ಯಾಖ್ಯೆಯನ್ನೇ ಬದಲಾಯಿಸಬೇಕಾಗಿದೆ ಎಂದು ಅನ್ನಿಸಿತು.

ಒಮ್ಮೆ, ಫ್ಲೇವಿಯಾ ಅಗ್ನೀಸ್, ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವ ತಪ್ಪು ಕಲ್ಪನೆ ನಮ್ಮ ಸಮಾಜದಲ್ಲಿ ಹರಡಿರುವುದರ ಬಗ್ಗೆ ಮಾತನಾಡುತ್ತಾ, ಇಲ್ಲ ಹೆಣ್ಣಿಗೆ ಹೆಣ್ಣೇ ಶತ್ರು ಎಂದು ಮೇಲು ನೋಟಕ್ಕೆ ಕಾಣುತ್ತದಾದರೂ, ಇದು ಅಧಿಕಾರವಿಲ್ಲದವರು ಮತ್ತು ಅಧಿಕಾರವಿರುವವರ ನಡುವೆ ನಡೆವ ಹೋರಾಟ. ಜೊತೆಗೆ ಅವಳಿಗೆ ಪಿತೃಪ್ರಧಾನ ವ್ಯವಸ್ಥೆಯೇ ಮಾದರಿಯೂ ಆಗಿರುತ್ತದೆ. ಆದುದರಿಂದ ಹೆಣ್ಣಿಗೆ ಹೆಣ್ಣು ಶತ್ರುವಾಗಿ ಕಾಣುತ್ತಾಳೆಯೇ ಹೊರತು, ವಾಸ್ತವವವಾಗಿ ಅದು ಹಾಗಿಲ್ಲ. ಎಂದು ಹೇಳಿದ್ದರು.

pink4‘ಅತ್ತೆಗೊಂದು ಕಾಲ ಸೊಸೆಗೊಂದು ಕಾಲ’ ಎನ್ನುವ ಗಾದೆ ಕೂಡ ಅಧಿಕಾರ ಕೇಂದ್ರಿತ ನೆಲೆಯ ಮೇಲೆಯೇ ಬೆಳಕು ಚೆಲ್ಲುತ್ತದೆ. ಬಹುಶಃ ನಮ್ಮ ಇಂದಿನ ಎಲ್ಲಾ ರೀತಿಯ ಹೋರಾಟದ ಸ್ವರೂಪವನ್ನೂ ಈ ಕಣ್ಣುಗಳಿಂದಲೇ ಕಾಣಬಹುದೇನೋ.

ನನಗೆ ಅನ್ನಿಸುವುದೆಂದರೆ, ಸ್ತ್ರೀವಾದವಾಗಲೀ, ದಲಿತವಾದವಾಗಲೀ ಅಡ್ರೆಸ್ ಮಾಡಬೇಕಾಗಿರುವುದು ಪಿತೃ ಪ್ರಧಾನತೆಯನ್ನೋ, ಮೇಲುಜಾತಿಯ ವ್ಯವಸ್ಥೆಯನ್ನೋ ಅಲ್ಲ ಎಂಬುದು.

ಮೇಲುನೋಟಕ್ಕೆ ಇವು ಕಣ್ಣಿಗೆ ಕಾಣುವ ತತಕ್ಷಣದ ವೈರಿಗಳಾಗಿರಬಹುದು ಆದರೆ ನಿಜವಾಗಿ ನೋಡಿದರೆ ಕಣ್ಣಿಗೆ ಕಾಣದ ಅಧಿಕಾರ ಶಾಹಿಯೇ ನಿಜವಾದ ಶತ್ರು.

ಈ ಅಧಿಕಾರವೆಂಬ ಪ್ರಭುತ್ವದ ವಿಸ್ತಾರವಾದ ಛತ್ರ ಛಾಯೆಯಲ್ಲಿ ಗಂಡಸರು, ಹೆಂಗಸರು, ಬ್ರಾಹ್ಮಣರು, ದಲಿತರು ಸಮಾಜದ ಯಾವುದೇ ಜಾತಿಗೆ ಸೇರಿದವರು ಇರಬಹುದು. ಇವರೆಲ್ಲಾ ಅಧಿಕಾರದ ವ್ಯವಸ್ಥೆಯಲ್ಲಿ ಛಿದ್ರ ಛಿದ್ರವಾಗಿ ಹಂಚಿಹೋಗಿರುವುದರಿಂದ ಯಾವುದನ್ನು, ಯಾರನ್ನು ಹೋರಾಟಕ್ಕೆ ಟಾರ್ಗೆಟ್ ಮಾಡಿಕೊಳ್ಳಬೇಕೆಂಬ ಸ್ಪಷ್ಟ ಕಲ್ಪನೆಗೆ ದಕ್ಕುವುದಿಲ್ಲ.

ಶತ್ರು ಯಾರು ಮಿತ್ರನಾರು ಎಂಬುದು ಗೊತ್ತಾಗುವುದಿಲ್ಲ. ಹಾಗೆಯೇ ಅಧಿಕಾರ ಹೀನ ಜನತೆ ಕೂಡ ಅನೇಕ ಶ್ರೇಣಿಗಳಲ್ಲಿ ಹರಿದು ಹಂಚಿ ಹೋಗಿರುವುದರಿಂದ ಸಂಘಟನೆ ಎನ್ನುವುದು ಸಾಧ್ಯವಾಗುವುದಿಲ್ಲ. ಮನೆಯ ಕೆಲಸದಾಳಿನ ಮೇಲೆ ಮನೆಯ ಪುರುಷರೇ ನಡೆಸಿದ ಅತ್ಯಾಚಾರದ ವಿರುದ್ಧ ಮನೆಯೊಡತಿಯೊಬ್ಬಳು ಹೋರಾಡಲು ಸಾಧ್ಯವಾಗುವುದು ಕೇವಲ ‘ದಾಮಿನಿ’ಯಂತಹ ಸಿನಿಮಾಗಳಲ್ಲಿ ಮಾತ್ರವೇನೋ. ವಾಸ್ತವದಲ್ಲಿ ಇದು ಅಸಾಧ್ಯ ಎನ್ನುವ ಕಾರಣಕ್ಕಾಗಿಯೇ ನಮಗೆ ಆ ಸಿನಿಮಾ ಬಹಳ ಇಷ್ಟವಾಗುತ್ತದೆ. ಈ ನಿಟ್ಟಿನಲ್ಲಿ “who killed Jessica”  ಚಲನಚಿತ್ರದ ನೆನಪೂ ಆಗುತ್ತದೆ.

‘ಪಿಂಕ್’ ಸಿನಿಮಾದಲ್ಲಿ ಕೂಡ ‘ದಾಮಿನಿ’ ಸಿನಿಮಾದಂತೆಯೇ ಅಧಿಕಾರವಿಲ್ಲದ, ಯಾವುದೇ ಸಾಮಾಜಿಕ ವರ್ಚಸ್ಸಿಲ್ಲದ ಸಾಮಾನ್ಯ ಉದ್ಯೋಗಸ್ಥಳಾದ ಮೀನಲ್ ಮತ್ತು ಅವಳ ಗೆಳತಿಯರಿಗೆ, ಮಂತ್ರಿಯ ಮಗನ ವಿರುದ್ಧ ನಡೆಸುವ ಮೊಕದ್ದಮೆಯಲ್ಲಿ ಜಯ ಲಭಿಸುತ್ತದೆ. ಮೊಕದ್ದಮೆಯ ಸ್ವರೂಪವೇ ಅಧಿಕಾರ ಶಾಹಿಯಾದ ಫ್ಯೂಡಲ್ ವ್ಯವಸ್ಥೆಯ ಪೊಳ್ಳುತನದತ್ತ ಬೊಟ್ಟುಮಾಡಿ ತೋರಿಸುತ್ತದೆ.

ನಿರ್ದೇಶಕ ಅನಿರುದ್ಧ ರಾಯ್

ನಿರ್ದೇಶಕ ಅನಿರುದ್ಧ ರಾಯ್

ಪಿಂಕ್ ಸಿನಿಮಾ, ಮೀನಲ್, ಆಂಡ್ರಿಯಾ ಮತ್ತು ಫಲಕ್ ಎನ್ನುವ ಮೂರು ಗೆಳತಿಯರು ತಮ್ಮ ಮೇಲೆ ರಾಜಕೀಯ ಪ್ರಭಾವ ಉಳ್ಳ ಕೆಲ ಹುಡುಗರು ನಡೆಸಿದ ಅತ್ಯಾಚಾರಾದ ವಿರುದ್ಧ ನಡೆಸುವ ಹೋರಾಟದ ಕತೆ. ಮೀನಲ್ ನಡು ರಾತ್ರಿಯವರೆಗೆ ಕೆಲಸ ಮಾಡುವ ಈವೆಂಟ್ ಮ್ಯಾನೇಜರ್ ಅದರೆ, ಫಲಕ್ ಕಾರ್ಪೋರೆಟ್ ಕಂಪನಿಯೊಂದರಲ್ಲಿ ದುಡಿಯುವ ಹೆಣ್ಣು. ಆಂಡ್ರಿಯಾ, ಮೈತುಂಬ ಬಟ್ಟೆತೊಟ್ಟಿದ್ದರೂ ‘ಗಂಡಸರ ಚಲ್ಲಾಟ’ಕ್ಕೆ ಈಡಾಗುವ ಮೇಘಾಲಯದ ಹೆಣ್ಣುಗಳ ಪೈಕಿ ಒಬ್ಬಳು.

ಈ ಮೂವರು ಡೆಲ್ಲಿಯ ಸುಸಜ್ಜಿತವಾದ ಫ್ಲ್ಯಾಟೊಂದರಲ್ಲಿ ಒಟ್ಟಿಗೇ ಇರುತ್ತಾರೆ. ಸಿನಿಮಾ ಪ್ರಾರಂಭವಾಗುವುದೇ ಈ ಮೂವರು ಹುಡುಗಿಯರು ಸರಿರಾತ್ರಿ ಕಾರಿನಲ್ಲಿ ಧಾವಂತದಿಂದ ಮನೆಗೆ ಸಾಗುವ ದೃಶ್ಯದಿಂದ. ಇನ್ನೊಂದು ಕಡೆಗೆ ಇದಕ್ಕೆ ಸಮನಾಂತರವಾಗಿ, ಮಂತ್ರಿಯೊಬ್ಬನ ಮಗನಾದ ರಕ್ತಸಿಕ್ತ ರಾಜವೀರ್ ನನ್ನು ಅವನ ಸಂಗಡಿಗರು ಕಾರಿನಲ್ಲಿ ಆಸ್ಪತ್ರೆಯೆಡೆಗೆ ಒಯ್ಯುವ ದೃಶ್ಯ ತೆರೆದುಕೊಳ್ಳುತ್ತದೆ.

ಮೂವರು ಗೆಳೆತಿಯರು ರಾಕ್ ಸಂಗೀತ ಕಾರ್ಯಕ್ರಮದಲ್ಲಿ ಭೇಟಿಯಾದ ರಾಜ್ವೀರ್ ಮತ್ತು ಅವನ ಗೆಳೆಯರು ಸಭ್ಯರಾಗಿ ಕಂಡುದುದರಿಂದ ಅವರ ಜೊತೆ ಪಾರ್ಟಿ ಮಾಡಿ, ಸಹಜವಾದ ಸ್ನೇಹ ಸಲುಗೆಯಿಂದ ವರ್ತಿಸಿದಾಗ ಅವರನ್ನು ಸುಲಭವಾಗಿ ದಕ್ಕುವ ಹುಡುಗಿಯರೆಂದು ಭಾವಿಸಿ ಅವರ ಮೇಲೆ ಅತ್ಯಾಚಾರವೆಸಗಲು ಆ ಹುಡುಗರು ಪ್ರಯತ್ನಿಸುತ್ತಾರೆ. ಈ ಪ್ರಯತ್ನದಲ್ಲಿ ಮೂವರು ಹುಡುಗಿಯರೂ ಅತ್ಯಾಚಾರಕ್ಕೆ ಬಲಿಯಾಗದೇ ಹೇಗೋ ತಪ್ಪಿಸಿಕೊಂಡು ಮನೆಗೆ ಓಡಿ ಬರುತ್ತಾರೆ.

ಮೀನಲ್ ಎನ್ನುವ ಹುಡುಗಿ ಹೀಗೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಮಂತ್ರಿಯ ಮಗನಿಗೆ ಗಾಜಿನ ಬಾಟಲಿಯಿಂದ ಹೊಡೆದು ಗಂಭೀರ ಗಾಯ ಮಾಡಿರುತ್ತಾಳೆ. ಈ ಪ್ರಕರಣವನ್ನು ಅವಳು ಅಷ್ಟಕ್ಕೇ ಬಿಡದೇ ಪೊಲೀಸ್ ಠಾಣೆಯಲ್ಲಿ ಮಂತ್ರಿಯ ಮಗನ ವಿರುದ್ಧ ಕೇಸ್ ದಾಖಲಿಸುತ್ತಾಳೆ.

ಹೆಣ್ಣೊಬ್ಬಳು ಪೋಲೀಸ ಠಾಣೆಯಲ್ಲಿ FIR ದಾಖಲಿಸುವಂತಹ ‘ದುಸ್ಸಾಹಸ’ಕ್ಕೆ ಕೈಹಾಕುವುದು ಅವಳು ತಂದುಕೊಳ್ಳುವ ಅನೇಕ ಅಪಾಯಗಳಿಗೆ ನಾಂದಿಯಾಗುತ್ತದೆ. ಅವಳು ಹೀಗೆ ಧೈರ್ಯ ತೆಗೆದುಕೊಳ್ಳುವುದರಿಂದ ಅವಳಿಗೆ ಸಮಾಜದಲ್ಲಿ ಚಾರಿತ್ರ್ಯ ಹೀನಳೆಂಬ ಹಣೆಪಟ್ಟಿಯನ್ನು ಕಟ್ಟಲಾಗುವ ವಾಸ್ತವ ಸಂಗತಿಯನ್ನು ಇಲ್ಲಿ ಅನನ್ಯವಾಗಿ ಅನಾವರಣಗೊಳಿಸಲಾಗಿದೆ.

ಆರೋಪಿಯ ಸ್ಥಾನದಲ್ಲಿ ನಿಲ್ಲಬೇಕಾದವಳು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಮಂತ್ರಿಯ ಮಗ ಮತ್ತು ಅವನ ಸಹಚರರು, ಹಣಕ್ಕಾಗಿ ಶ್ರೀಮಂತ ರಾಜವೀರ್ ನನ್ನು ಬಲೆಗೆ ಹಾಕಿಕೊಳ್ಳಲು ಮೀನಲ್ ಪ್ರಯತ್ನಿಸಿದಳೆಂಬ ಆರೋಪದ ಮೇಲೆ ಅವಳ ವಿರುದ್ಧವೇ ಮೊಕದ್ದಮೆ ಹೂಡುತ್ತಾರೆ. ಕಾನೂನು ಅವಳಿಗೆ ರಕ್ಷಣೆಯನ್ನು ನೀಡುವ ಬದಲು ಅವಳನ್ನು ಬಂಧಿಸುವ ಬಲೆಯಾಗುತ್ತದೆ. ಕಾನೂನಿನ ಪೂರ್ವಗ್ರಹೀತ ನಿಯಮಗಳು ಅವಳನ್ನು ಅನೇಕ ಕಷ್ಟಪರಂಪರೆಗೆ ದೂಡುವುದನ್ನು ‘ಪಿಂಕ್’ ಚಿತ್ರ ವಿಶಿಷ್ಟವಾಗಿ ಕಟ್ಟಿಕೊಡುತ್ತದೆ.

ದೀಪಕ್ ಸೆಹಗಲ್ (ಅಮಿತಾಬ್ ಬಚ್ಚನ್) ಎನ್ನುವ ವೃದ್ಧ ಅನುಭವೀ ವಕೀಲ ಈ ಹುಡುಗಿಯರ ಮೊಕದ್ದಮೆಯ ಪರ ವಹಿಸಿ ಅವರ ಗೆಲುವಿಗೆ ಕಾರಣನಾಗುತ್ತಾನೆ. ಇದೊಂದು ಕನಸು. ನಿಜವಾದ ಅಪರಾಧಿಗಳಿಗೆ ಶಿಕ್ಷೆದೊರೆಯಬೇಕೆಂಬ ಕನಸು ಅಷ್ಟೇ.

ಹುಡುಗಿಯೊಬ್ಬಳು ಧರಿಸುವ ಉಡುಪು, ಅವಳ ಚಲನವಲನ, ಅವಳ ಹಾವಭಾವ, ಅವಳ ಸ್ವತಂತ್ರ ಪ್ರವೃತ್ತಿ, ನಿರ್ಭಿಡೆಯ ಸ್ವಭಾವ, ಅವಳು ಗಳಿಸುವ ಸಂಬಳ, ಅವಳ ಮನೆತನ, ಸಹೋದ್ಯೋಗಿಗಳ ಜೊತೆಗೆ ಅವಳ ವರ್ತನೆ, ಅವಳು ಮದ್ಯಪಾನ ಸೇವಿಸುತ್ತಾಳೋ ಇಲ್ಲವೋ, ಕನ್ಯೆಯೋ ಅಲ್ಲವೋ, ಎಂಬ ಅನೇಕ ವೈಯಕ್ತಿಕ ವಿಷಯಗಳು ಅವಳ ಚಾರಿತ್ರ್ಯವನ್ನು ಅಳೆಯುವ ಮಾನದಂಡಗಳಾಗಿರುವುದರ ಒಂದು ದೊಡ್ಡ ವ್ಯಂಗ್ಯವನ್ನು ಮೊಕದ್ದಮೆಯ ಪ್ರಕ್ರಿಯೆಗಳು ಬಯಲಾಗಿಸುತ್ತವೆ.

pink2

ಇದರ ಪರಾಕಾಷ್ಠೆಯೆಂದರೆ ಅಪರಾಧಿ ಸ್ಥಾನದಲ್ಲಿ ನಿಂತ ಮೀನಲ್ ಎಂಬ ಹುಡುಗಿಯ ಪರವಾದ ವಕೀಲನೇ (ಸೆಹಗಲ್) ಅವಳನ್ನು ‘ನೀನು ಕನ್ಯೆಯೋ ಅಲ್ಲವೋ, ಅಲ್ಲವಾದರೆ ಅದನ್ನು ಯಾವಾಗ ಯಾರಿಂದ ಕಳೆದುಕೊಂಡೆ ‘? ಮುಂತಾದ ಪ್ರಶ್ನೆಗಳನ್ನು ತುಂಬಿದ ಕೋರ್ಟ್ ನಲ್ಲಿ ಕೇಳುವುದು ನಾಯಾಧೀಶರೇ ಮುಜುಗರಪಟ್ಟು ಅದನ್ನು ಇನ್ ಕ್ಯಾಮರಾದಲ್ಲಿ ಖಾಸಗಿಯಾಗಿ ನಡೆಸಲು ಆದೇಶ ಕೊಡುವುದು, ಮೀನಲ್ ಅದನ್ನು ನಿರಾಕರಿಸಿ ಸಾರ್ವಜನಿಕವಾಗಿಯೇ, ತಾನು ಕನ್ಯತ್ವವನ್ನು ಕಳೆದುಕೊಂಡಿರುವುದಾಗಿ ಹೇಳುವ ಧಾಷ್ಟ್ರ್ಯವನ್ನು ತೋರುವುದಲ್ಲದೇ, ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ತಿಳಿಸುವುದು, ಈ ಎಲ್ಲವೂ ಹೆಣ್ಣಿನ ಕನ್ಯತ್ವದ ಸುತ್ತ ಹರಡಿರುವ ಪಾವಿತ್ರ್ಯದ ಬಗೆಗಿನ ಸಾಮಾಜಿಕ ಹುಸಿ ಮೌಲ್ಯಗಳಿಗೆ ಕನ್ನಡಿ ಹಿಡಿದು ತೋರಿಸುತ್ತದೆ ಅದಕ್ಕಿಂತ ಮುಖ್ಯವಾಗಿ ಅವಳ ಲೈಂಗಿಕ ಸ್ವಾತಂತ್ರ್ಯದ ಮೇಲೂ ಬೆಳಕು ಚೆಲ್ಲುತ್ತದೆ.

ಈ ಚಿತ್ರದ ಬಹಳ ಮಹತ್ವದ ಸಂದೇಶವೆಂದರೆ ಸಾಕ್ಷಿ ವಿಚಾರಣೆಯ ನಂತರ ಸೆಹಗಲ್ ಮಾಡುವ ವಾದ. ಈ ವಾದದ ಶಕ್ತಿ ಕೇಂದ್ರವೆಂದರೆ, ಅಪರಾಧಿ ಸ್ಥಾನದಲ್ಲಿ ನಿಂತಿರುವ ಕಕ್ಷಿದಾರಳಾದ ಮೀನಲ್ ತನ್ನ ಮೈ ಮುಟ್ಟಲು ಬಂದ ಮಂತ್ರಿಯ ಮಗನಿಗೆ ‘ಬೇಡ’ ಎಂದು ಅವನ ಆಹ್ವಾನವನ್ನು ನಿರಾಕರಿಸುವ ವಿಚಾರ. ಹೆಣ್ಣೊಬ್ಬಳು ತನ್ನ ಎದುರಿರುವ ಗಂಡಸಿಗೆ ‘ಬೇಡ’ ಎಂದು ಹೇಳಿದರೆ, ‘ನೀನು ಬೇಡ, ಬಲತ್ಕರಿಸಬೇಡ, ಮುಂದುವರೆಯ ಬೇಡ’ ಎಂದೇ ಅರ್ಥ.

ಅವಳ ನಕಾರಾತ್ಮಕ ಸೂಚನೆ ಅವಳ ಲೈಂಗಿಕ ಆಯ್ಕೆಯ ಹಕ್ಕನ್ನೇ ನಿರ್ದೇಶಿಸುತ್ತದೆ. ಹೆಣ್ಣು ಅಪರಿಚಿತಳಾಗಿರಬಹುದು, ಪರಿಚಿತಳಾಗಿರಬಹುದು, ಸ್ನೇಹಿತೆಯಾಗಿರಬಹುದು, ಪ್ರೇಯಸಿಯಾಗಿರಬಹುದು, ಸಹೋದ್ಯೋಗಿಯಾಗಿರಬಹುದು, ಲೈಂಗಿಕ ಕಾರ್ಯಕರ್ತೆಯಾಗಿರಬಹುದು ಇಲ್ಲವೇ ಒಬ್ಬ ಮಡದಿಯೇ ಆಗಿರಬಹುದು, ಅವಳು ‘ಬೇಡ’ ಎಂದರೆ ಬೇಡವೆಂದೇ ಅರ್ಥ. ಅದನ್ನು ಉಲ್ಲಂಘಿಸಿ ಗಂಡು ಮುಂದುವರೆಯುವುದು ಅತ್ಯಾಚಾರವೇ ಆಗುತ್ತದೆ.

ಹೆಣ್ಣು ಕಡಿಮೆ ಬಟ್ಟೆಯನ್ನು ಧರಿಸುವವಳು, ಮದ್ಯಪಾನ ಮಾಡುವಳು, ಕನ್ಯತ್ವವನ್ನು ಕಳೆದುಕೊಂಡವಳು, ಗಂಡಸರ ಜೊತೆ ನಿರ್ಭಿಢೆಯಿಂದ ಸ್ನೇಹದಿಂದ ವರ್ತಿಸುವವಳು, ರಾಕ್ ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಳು ಸ್ವತಂತ್ರವಾಗಿ ಒಬ್ಬಳೆ ಜೀವಿಸುವವಳು, ಎಂಬ ಕಾರಣಕ್ಕೆ ಯಾವ ಗಂಡಿಗೂ ಅವಳನ್ನು ಬಲತ್ಕರಿಸುವ ಹಕ್ಕಿಲ್ಲ ಎಂಬ ಸಂದೇಶವನ್ನು ಸೆಹಗಲ್ ನ ವಾದ ನೀಡುತ್ತದೆ. ಗಂಡಿನ ಸ್ವೇಚ್ಛಾಚಾರವನ್ನೇ ಧೀರೋದ್ಧಾತ್ತವಾಗಿ, ವೈಭವೀಕರಿಸುವ ಹೆಣ್ಣನ್ನು ಹುಸಿ ಪಾವಿತ್ರ್ಯದಲ್ಲಿ ನರಳಿಸುವ ಫ್ಯೂಡಲ್ ಆದ ಧೋರಣೆಯೇ ಇಂದಿಗೂ ನಮ್ಮ ಸಮಾಜವನ್ನು ಆಳುತ್ತಿರುವುದರ ದುರಂತವನ್ನು ಅದು ಬಯಲು ಮಾಡುತ್ತದೆ.

ನಮ್ಮ ಸಮಾಜ ಹೆಣ್ಣಿನ ಚಲನವಲನವನ್ನು ಮಾತ್ರ ಗಮನಿಸುತ್ತದೆ, ಅವಳ ಮೇಲೆ ಈ ವಿಷಯದಲ್ಲಿ ನಿರ್ಬಂಧ ಹೇರುತ್ತದೆ. ಆ ಸಮಯದಲ್ಲಿ ಆಗುವ ಅನಾಹುತಕ್ಕೆ ಅವಳನ್ನೇ ಹೊಣೆಯಾಗಿಸುತ್ತದೆ. ಆದರೆ ಸಮಾಜ ನಿಜವಾಗಿ ಗಮನಿಸಬೇಕಾಗಿರುವುದು ಗಂಡಿನ ಚಲನವಲನಗಳನ್ನು ಆಗ ಮಾತ್ರ ಹೆಣ್ಣಿನ ಸ್ವತಂತ್ರ ಚಲನೆಗೆ ಒಂದು ಅರ್ಥ ಬರುತ್ತದೆ ಅವಳು ಸುರಕ್ಷಿತವಾಗಿರುತ್ತಾಳೆ ಎಂಬ ಮಹತ್ವದ ಸಂದೇಶವನ್ನು ಈ ಸಿನಿಮಾ ಸಾರುತ್ತದೆ.

ಮೊಕದ್ದಮೆಯ ಸ್ವರೂಪ ಕೆಲವು ಕಡೆ ಅತಿಭಾವುಕತೆಯಿಂದ ಕೂಡಿ ಹಾಸ್ಯಾಸ್ಪದವೆನಿಸಿದರೂ ಅದು ಕಟ್ಟಿ ಕೊಡುವ ಕನಸು, ನೀಡುವ ಸಂದೇಶ ಬಹಳ ಅನನ್ಯವಾಗಿದೆ.

ಈ ನೆಲೆಯಲ್ಲಿ ಸಮಾನತೆಯ ವ್ಯಾಖ್ಯೆಯನ್ನೂ ನಾವು ಬದಲಾಯಿಸಬೇಕಾಗಿದೆ. ಸಮಾನತೆ ಎನ್ನುವುದು ಒಂದು ಆದರ್ಶವಷ್ಟೆ ಅದು ವಾಸ್ತವಾಗಿ ಇರಲು ಸಾಧ್ಯವಿಲ್ಲ. ಯಾವ ಕ್ಷಣದಲ್ಲಿಯೂ ಯಾವುದರ ಬಗ್ಗೆಯೂ ಜಜ್ಮೆಂಟಲ್ ಆಗದಿರುವುದೇ ಸಮಾನತೆ ಎಂದು ಭಾವಿಸುವುದೇ ವಾಸ್ತವಕ್ಕೆ ಹತ್ತಿರವಾಗಬಹುದು. ಆಗ ಅದಕ್ಕೊಂದು ವ್ಯಾಪಕವಾದ ಚೌಕಟ್ಟು ಸಿಗುತ್ತದೆ.

ನೊಂದವರ ನೋವಿನ ಬೂಟಿನಲ್ಲಿ ನೋಯದವರು ಕಾಲಿಟ್ಟು ನೋಡಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಆದರೆ ಅಧಿಕಾರ ಎಂಬುದು ಯಾವತ್ತೂ ಅಹಂಕಾರ ಮೂಲವಾದುದು. ಕಣ್ಣಿಗೆ ಕಟ್ಟಿಕೊಂಡ ಈ ಅಹಂಕಾರದ ಪಟ್ಟಿಯಿಂದಾಗಿ ಅಧಿಕಾರ ವ್ಯವಸ್ಥೆ ನೋವಿಗೆ ಕಾರಣವಾಗುವ ಬೂಟನ್ನು ಗಮನಿಸಲಾರದು. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅರಿತುಕೊಳ್ಳಬೇಕಾದ ಅಧಿಕಾರ ವ್ಯವಸ್ಥೆ ಫ್ಯೂಡಲ್ ಆದ ಮೌಲ್ಯಗಳನ್ನು ಆತುಕೊಳ್ಳುವುದರಿಂದಲೇ ಇಂದು ಸಮಾಜದಲ್ಲಿ ಹಿಂಸೆ ತಾಂಡವವಾಡುತ್ತಿದೆ.

ಅದು ಗಂಡು ಹೆಣ್ಣಿನ ಮೇಲೆ, ಹೆಣ್ಣು ಗಂಡಿನ ಮೇಲೆ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯವಾಗಬಹದು, ದಲಿತರ ಮೇಲಿನ ದೌರ್ಜನ್ಯವಾಗಬಹುದು ಇಲ್ಲವೇ ಕೋಮುವಾದವಾಗಿರಬಹುದು. ಬ್ಯೂರಾಕ್ರಸಿಯಾಗಿರಬಹುದು, ಈ ಎಲ್ಲಾ ನೆಲೆಯಲ್ಲಿಯೂ ಅಧಿಕಾರಶಾಹಿ ವ್ಯವಸ್ಥೆಯ ವಿರುದ್ಧ ಅಧಿಕಾರ ಹೀನ ಜನತೆ ನಡೆಸುವ ಸಂಘರ್ಷವೇ ಆಗಿದೆ.

ಅಧಿಕಾರಶಾಹಿ ವ್ಯವಸ್ಥೆಯೆನ್ನುವುದು ಅಧಿಕಾರ ಹೀನರ ವಿರುದ್ಧ ಪ್ರತಿ ತಂತ್ರಗಳನ್ನೂ ರೂಪಿಸುತ್ತದೆ. ಇದಕ್ಕೆ ಇಲ್ಲಿ ಬರುವ ಒಬ್ಬ ಲೇಡಿ ಇನ್ಸ್ ಪೆಕ್ಟರ್ ಸಾಕ್ಷಿ. ಮಂತ್ರಿಯ ಆದೇಶಕ್ಕೆ ಒಳಗಾಗಿ ಅವರು ಕೊಡುವ FIR ವರದಿಯನ್ನು ಮೀನಲ್ ದಾಖಲಿಸಿರುವುದಕ್ಕಿಂತ ಮುನ್ನವೇ ದಾಖಲಿಸಿರುವಂತೆ ತೋರುವ ಹಾಗೆ ದಾಖಲೆ ಪುಸ್ತಕದ ಹಿಂದಿನ ತಾರೀಖಿನಲ್ಲಿ ದಾಖಲಿಸುವುದು. ಅದರ ಆಧಾರದ ಮೇಲೆ ಮೀನಲ್ ಳನ್ನು ಬಂಧಿಸುವುದು. ಅವಳಿಗೆ ಜಾಮೀನು ಸಿಗದಂತೆ ಅನೇಕ ತೊಂದರೆಗಳನ್ನು ಕೊಡುವುದು. ಅಧಿಕಾರದ ವ್ಯವಸ್ಥೆ ರೂಪಿಸುವ ತಂತ್ರಗಳ ಪ್ರತೀಕವಾಗಿದೆ.

ಆದರೆ ವ್ಯವಸ್ಥೆಯ ಈ ಹುನ್ನಾರಗಳನ್ನು ಬಯಲಾಗಿಸುವ ಸಾಧನಗಳೂ ಇದರ ಅಡಿಯಲ್ಲೇ ಹುಟ್ಟಿಕೊಳ್ಳುತ್ತವೆ ಎನ್ನವುದಕ್ಕೆ ಇಲ್ಲಿ ಬರುವ ಇನ್ನೊಬ್ಬ ಮಹಿಳಾ ಪೊಲೀಸ್ ಳು ಈ ಎಲ್ಲಾ ಹುನ್ನಾರಗಳನ್ನೂ ವಕೀಲ ಸೆಹಗಲ್ ಗೆ ಗುಪ್ತವಾಗಿ ದಾಟಿಸುವುದೇ ಸಾಕ್ಷಿ. ಇದೂ ಕೂಡ ಮೇಲು ನೋಟಕ್ಕೆ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಭ್ರಮೆಯನ್ನು ನೋಡುಗರ ಮೇಲೆ ಹೇರುತ್ತದೆ. ಆದರೆ ನಿಜವಾಗಿ ಇವರೆಲ್ಲಾ ಅಧಿಕಾರಶಾಹಿ ವ್ಯವಸ್ಥೆಯ ದಾಳಗಳೇ ಆಗಿದ್ದಾರೆ ಎಂಬುದು ನಿಜ. ಅಧಿಕಾರಶಾಹಿ ವ್ಯವಸ್ಥೆಯ ಈ ಎಲ್ಲಾ ಹುನ್ನಾರಗಳಿಗೆ ನಮ್ಮ ನ್ಯಾಯ ವ್ಯವಸ್ಥೆ ಕೂಡ ಹೊರತಾಗಿಲ್ಲ ಎನ್ನುವುದೇ ಒಂದು ದೊಡ್ಡ ದುರಂತವಾಗಿದೆ.

‍ಲೇಖಕರು Admin

September 23, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..

ಆಕ್ಟ್ 1978: ಬೇರೆ ಕಣ್ಣು, ಬೇರೆ ನೋಟ..

ಮಂಸೋರೆ ನಿರ್ದೇಶನದ 'ಆಕ್ಟ್ 1978' ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ವೀಕ್ಷಕರು ಮತ್ತೆ ಚಲನಚಿತ್ರ ಮಂದಿರಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ....

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ಗೊರೂರು ಶಿವೇಶ್ High noon  ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ  ಫ್ರೆಡ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This