ಪಿಜ್ಜಾ ಹಟ್ ನಲ್ಲಿ ರಾಗಿ ರೊಟ್ಟಿ!

urmile1.jpgಊರ್ಮಿಳೆ

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ…
ದಾಸರ ಪದ ಸಿ.ಡಿ. ತಟ್ಟೆಯಿಂದ ಚಿಮ್ಮಿ ಬರುತ್ತಿದೆ. ರಾಗಿ ಎಂಬುದನ್ನು ದಾಸರು ನೋಡಿದ ಬಗೆಯೇ ಬೇರೆ. ಯೋಗ್ಯ”ರಾಗಿ” ಭೋಗ್ಯ”ರಾಗಿ” ಭಾಗ್ಯವಂತ”ರಾಗಿ” ಎಂದು.

“ಆಗುವುದು” ದಾಸರ ನೋಟದಲ್ಲಿ ರಾಗಿಯಾಯಿತು.

ಮೊನ್ನೆ ಗೆಳೆಯರೊಬ್ಬರು ಹೇಳುತಿದ್ದರು. ಒಂದೊಂದು ಶಬ್ದಕ್ಕೂ ಒಂದೊಂದು ವಾಸನೆ ಇದೆ, ಬಣ್ಣ ಇದೆ, ಆಕಾರ ಇದೆ ಅಂತ. ಹೇಗಪ್ಪಾ ಅಂತ ಅಂದುಕೊಳ್ಳುವಾಗಲೇ, ಉದಾಹರಣೆಗೆ ಅವ್ವ ಹಾಗೂ ಮಮ್ಮಿ ಎಂದರು. ಹೌದಲ್ಲಾ ಅನಿಸಿತು.

“ನನ್ನವ್ವ ಫಲವತ್ತಾದ ಕಪ್ಪು ನೆಲ” ಎನ್ನುವ ಲಂಕೇಶರ ಕವಿತೆಗೂ “ಮಮ್ಮಿ ಮಮ್ಮಿ ಮಾರ್ಡ್ರನ್ ಬ್ರೆಡ್” ಎನ್ನುವ pizza1.jpgಜಾಹೀರಾತಿನ ಉಲಿಗೂ ಎಷ್ಟೊಂದು ವ್ಯತ್ಯಾಸವಿದೆ.

ಅವ್ವ ಎಂದಾಕ್ಷಣ ಆಕೆಯ ಅಗಾಧ ಪ್ರೀತಿ, ಸಹನೆ, ನಿಟ್ಟುಸಿರು, ಸೀರೆ, ಕುಬುಸ ಎಲ್ಲ ಎಲ್ಲಾ ನೆನಪಾಗುತ್ತದೆ. ಅದೇ ಮಮ್ಮಿ ಎಂದಾಗ ಏಕೆ ಈ ಯಾವುವೂ ಸುಳಿಯುವುದಿಲ್ಲ?

ರಾಗಿಯ ಮಾತು ಬಂದಾಗಲೂ ಹೀಗೇ…

ಮನೆಯಲ್ಲಿ ಮುದ್ದೆ ಉಣ್ಣುವ ನಾವು ಹೊರಗೆ ಮಾತ್ರ ರಾಗಿಮುದ್ದೆ ಬಗ್ಗೆ ಮಾತನಾಡಿಕೊಳ್ಳುವುದಕ್ಕೇ ಸಂಕೋಚ ಮಾಡಿಕೊಳ್ಳುತ್ತೇವೆ. ಚಪಾತಿ ಎಂಬುದಕ್ಕೂ ಮುದ್ದೆ ಎಂಬುದಕ್ಕೂ ಯಾಕೆ ಎಷ್ಟು ವಾಸನೆಯ ಅಂತರವಿದೆ. ಈರುಳ್ಳಿ ತಿಂದರೆ ಬಾಯಿ ವಾಸನೆ ಬರುತ್ತದೆ ಎಂಬ ಕಾರಣಕ್ಕೆ, ಯಾವ ಕಾರಣಕ್ಕೂ ಈರುಳ್ಳಿ ತಿನ್ನುವುದರಿಂದ ದೂರ ಇರುವ ಯಂಗ್ ಜನರೇಶನ್ ಇದೆ. ಯಾಕೆಂದರೆ, ಪಾಪ ಅವರು ಕಾನ್ಫಿಡೆನ್ಸ್ ನೀಡುವ ಕ್ಲೋಸ್ ಅಪ್ ಟೂತ್ ಪೇಸ್ಟ್ ಕಾಲದಲ್ಲಿ ಬದುಕುತ್ತಿದ್ದಾರೆ. ಈರುಳ್ಳಿ ಬೆಳ್ಳುಳ್ಳಿ ತಿಂದವರು ಪಾಪ ಪಟ್ ಪಟಾಕಿ ನಗೆ ನಗುತ್ತಾರೆ, ಪೆದ್ದರಂತೆ ಎಂದು ನಂಬಿಸಿಬಿಟ್ಟಿದೆ ಜಾಹೀರಾತು ಲೋಕ. ನಾವೂ ನಂಬಿದ್ದೇವೆ.

ರಾಗಿಗೂ ಈ ಗತಿ ಬಂತೆ?

ದೇವೇಗೌಡರು ರಾಗಿಮುದ್ದೆ ತಿನ್ನುತ್ತಾರೆ, ಪಂಚೆ ಉಡುತ್ತಾರೆ ಎಂಬ ಕಾರಣಕ್ಕಾಗಿಯೇ ಕಾಲಮಿಸ್ಟ್ ತವ್ಲೀನ್ ಸಿಂಗ್ ಇಂಡಿಯನ್ ಎಕ್ಸ್ ಪ್ರೆಸ್ಸಿನಲ್ಲಿ ದೇವೇಗೌಡರು ಪ್ರಧಾನಿಯಾದಾಗ “ಎಂತ ಕಾಲ ಬಂದೈತಿ, ದಿಕ್ಕು ತಪ್ಪಿದಂಗಾಗೈತಿ…” ಅಂತ ಹಲುಬಿದ್ದರು. ರಾಗಿಮುದ್ದೆ ಮುರಿಯುತ್ತಿದ್ದ ಕೈಗಳು ಏಕೋ ತಡವರಿಸುವ ಸ್ಥಿತಿ ಬಂದಿದೆ.

ಯಾವ ಜಾಹೀರಾತಲ್ಲೂ ಅಪ್ಪಿ ತಪ್ಪಿ ರಾಗಿ ಇಲ್ಲ. ಮುದ್ದೆ ಮುರಿಯುವ ದೃಶ್ಯ ಇಲ್ಲ. ಅನ್ನಪೂರ್ಣ ಆಟಾ, ಕ್ಯಾಪ್ಟನ್ ಕುಕ್ ಉಪ್ಪು, ಎಂಟಿಆರ್ ಜಾಮೂನ್ ಮಿಕ್ಸ್ ಗಳ ಕಾಲದಲ್ಲಿ ರಾಗಿಮುದ್ದೆಗೆ ಕೀಳರಿಮೆ ಬಂದುಬಿಟ್ಟಿದೆ.

ರಾಗಿಮುದ್ದೆ ಎಂದರೆ ಗೌಡರು, ಚಪಾತಿ ಎಂದರೆ ಉಳಿದ ಪಿಎಂಗಳು ಯಾಕೆ ನೆನಪಾಗಬೇಕು! ರಾಗಿ ಎಂದರೆ ಯಾಕೆ ಹರಳೆಣ್ಣೆ, ಚೆಂಡುಹೂ, ಚಪಾತಿ ಎಂದರೆ ಚೊಕ್ಕ ಯೂನಿಫ಼ಾರಂ ನೆನಪಾಗಬೇಕು. ಮೊಟ್ಟೆ ಬೇಡ, ನಾನ್ ವೆಜ್ ಇಡಬೇಡ ಎನ್ನುವ ಮಕ್ಕಳ ಟಿಫಿನ್ ಬಾಕ್ಸ್ ಮುದ್ದೆಗೆ ತವರಾಗುತ್ತದೆಯೇ?

ರಾಗಿ ಅಂಬಲಿ ಅಷ್ಟಿಷ್ಟು ಮಾರ್ಡ್ರನ್ ಆಗಲು ಉಟ್ ಬೈಸ್ ಹೊಡೆಯುತ್ತಲೇ ಇದೆ. ರಾಗಿ ಅಂಬಲಿಯನ್ನು ರಾಗಿ ಮಾಲ್ಟ್ ಎಂದು ಕರೆದರೂ ಕ್ಯಾರೇ ಎನ್ನುವವರಿಲ್ಲ. ಲಾಲ್ ಭಾಗ್ನಲ್ಲಿ ಕಬ್ಬನ್ ಪಾರ್ಕ್ ನಲ್ಲಿ ಜಾಗಿಂಗ್ ಮಾಡುವವರಿಗೆ ಥರಾವರಿ ರಸ ರೆಡಿ ಇರುತ್ತದೆಯೇ ಹೊರತು ರಾಗಿ ಅಂಬಲಿ ಅಲ್ಲ.

ಕನಕದಾಸರ ರಾಮಧಾನ್ಯ ಚರಿತೆ ಎಲ್ಲರಿಗೂ ಗೊತ್ತು. ಸಿದ್ಧಲಿಂಗಯ್ಯ ಈ ಕಥೆ ಹೇಳಿದಾಗಲೇ ನನಗೂ ಗೊತ್ತಾಗಿದ್ದು. ಅಕ್ಕಿಗೂ ರಾಗಿಗೂ ಜಗಳ ಬೀಳುತ್ತೆ. ಗುದ್ದಾಟ ಆಗುತ್ತೆ. ರಾಗಿ ಗೆಲ್ಲುತ್ತೆ. ಪರವಾಗಿಲ್ಲಪ್ಪ ರಾಗಿಗೂ ಒಂದು ಕಥೆ ಇದೆ.

ಆದ್ರೇನ್ಮಾಡೋದು, ಈಗ ಜನರೇಶನ್ ಬದಲಾಗಿದೆ. ಎಂಟಿವಿ ಸುಬ್ಬುಲಕ್ಷ್ಮಿಗೆ… ಅಂತಾ ಹಾಡೋ ಕಾಲದಲ್ಲಿ ರಾಮಧಾನ್ಯ ಚರಿತೆ ಹೇಳೋರು ಯಾರು? ನಾವಾದ್ರೂ ನಮ್ಮನೇಲಿ ನಮ್ಮ ಮಕ್ಕಳಿಗೆ ಹೇಳಿದ್ದೀವಾ? ಪಾಪ ಅನ್ನೋ ಹಾಗೆ ಮುಖ ನೋಡ್ತಾರೆ. ಓಲ್ಡ್ ಫೆಲೋ ಅಂತ ಮಾತಾಡ್ತಾರೆ. ಪ್ರತಿಯೊಬ್ಬರೂ ಆರ್ಕಟ್ ನಲ್ಲಿ ಬದುಕುತ್ತಿರುವಾಗ, ಬ್ಲಾಗ್ ನಲ್ಲಿ ಮಲಗಿರೋವಾಗ, ಬರ್ಗರ್ ಜಾಂಟ್ ನಲ್ಲಿ ಕಾಲು ಚಾಚ್ತಾ ಇರೋವಾಗ ರಾಗಿ ಕಥೆ ಯಾರಿಗೇಳ್ಬೇಕು?

ಎತ್ತಿನಾ ಬಂಡಿಯಾದರೇನು, ಪೋಂಟಿಯಾಕ್ ಕಾರ್ ಆದರೇನು, ಪೋಂಟಿಯಾಕ್ ಕಾರೇ ಇರಲಿ… ಅಂತಾ ಕಿ ರಂ ನಾಗರಾಜ್ ಹೇಳ್ತಾ ಇದ್ರು. ಕಾಲ ಆ ಥರಾನೇ ಆಗೋಗಿದೆ.

ರಾಗಿಮುದ್ದೆ – ಬಸ್ಸಾರು
ರಾಗಿಮುದ್ದೆ – ಅವರೇಕಾಯಿ ಸಾರು
ರಾಗಿಮುದ್ದೆ – ಉಪ್ಪೆಸ್ರು
ರಾಗಿಮುದ್ದೆ – ಹುಚ್ಚೆಳ್ಳು ಚಟ್ನಿ
ಕಾಂಬಿನೇಷನ್ ಪಿಜ್ಜಾ ಹಟ್ ನಲ್ಲಿ, ಕೆ ಎಫ್ ಸೀನಲ್ಲಿ ಸಿಗಲ್ಲ. ಮನೇಲಿ ಮಾಡಿಸ್ಕೊಂಡ್ರೆ ನಾಲ್ಕು ಜನ ನಾಲ್ಕು ದಿಕ್ಕು.

ಇದೆಲ್ಲಾ ಜ್ಞಾಪಕ ಬಂದಿದ್ದು
ರಾಗಿರೊಟ್ಟಿ ಅಂತಾ ಹೆಸರಿಟ್ಟಿದ್ದಕ್ಕೆ.         

‍ಲೇಖಕರು avadhi

June 18, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. Vallisha Shastry

    Raagi rotti and Raagi mudde is my all time favirite food. Even in America we prepare for parties. But as you said some people have some reservation about Raagi. Raagi is like outcasted food. You have written very nicely about the feelings. Raagi will feel good.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: