ಪಿತೃಪಕ್ಷದ ನಕ್ಷತ್ರಿಕರು

gali.gif“ಗಾಳಿ ಬೆಳಕು”

 

 

ನಟರಾಜ್ ಹುಳಿಯಾರ್

ನ್ನಡ ನಾಡಿನ ರಾಜಕಾರಣಿಗಳ ದಿನನಿತ್ಯದ ಅವಿದ್ಯಾವಂತ ವರ್ತನೆ ಎಲ್ಲ ಸೂಕ್ಷ್ಮಜ್ಞರಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಈ ಬರಹ ಓದುವ ನಿಮ್ಮಲ್ಲಿ ಬಹುತೇಕರು ಪಿತೃಪಕ್ಷ ಇತ್ಯಾದಿಗಳನ್ನು ನಂಬುವವರೇ ಆಗಿರಬಹುದು. ಆದರೆ ನೀವ್ಯಾರೂ ದೊಡ್ಡ ಜವಾಬ್ದಾರಿ ಹೊರಬೇಕಾದ ಸಂದರ್ಭದಲ್ಲಿ ಯಡಿಯೂರಪ್ಪನವರಂತೆ ಪಿತೃಪಕ್ಷ ಇತ್ಯಾದಿಗಳನ್ನು ಲೆಕ್ಕ ಹಾಕುತ್ತಾ ಕಾಲಹರಣ ಮಾಡಿರಲಾರಿರಿ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಈ ಇಡೀ ಪಿತೃಪಕ್ಷದ ಹದಿನೈದು ದಿನ ಯಾರೂ ಕೆಲಸ ಮಾಡದಂತೆ ಸರ್ಕಾರಿ ಹಾಗೂ ಖಾಸಗಿ ರಜೆಗಳನ್ನು ಘೋಷಿಸಬಹುದೆಂದು ಕಾಣುತ್ತದೆ. ಮೊನ್ನೆ ಕೊಲ್ಲೂರಿನ ದೇವಾಲಯವೊಂದರಲ್ಲಿ ಶಲ್ಯ ಹೊದ್ದುಕೊಂಡು ಕೂತ ಯಡಿಯೂರಪ್ಪನವರ ಬಾಯಿಗೆ ಟೀವಿ ವ್ಯಕ್ತಿಯೊಬ್ಬರು ಮೈಕು ಹಿಡಿದರು. ಅದಕ್ಕಾಗಿ ಕಾದಿದ್ದವರಂತೆ “ನಾನು ತಾಯಿಗೆ ಎಲ್ಲವನ್ನೂ ನಿವೇದಿಸಿಕೊಂಡಿದ್ದೇನೆ. ಆಕೆಗೆ ಎಲ್ಲವೂ ಅರ್ಥವಾಗಿದೆ” ಎಂದು ಯಡಿಯೂರಪ್ಪ ಹೇಳಿಕೊಂಡರು. ಸದ್ಯ ಯಡಿಯೂರಪ್ಪನವರು ತಾಯಿಗೆ ಏನು ನಿವೇದಿಸಿಕೊಂಡರು ಎಂಬುದು ಮೈಕಿನಲ್ಲಿ ಬರಲಿಲ್ಲ.

ನಮ್ಮ ರಾಜಕಾರಣಿಗಳು ಕೊಲ್ಲೂರು ತಾಯಿಯ ಬಳಿ ನಿವೇದಿಸುವುದೇ ಒಂದು; ಭೋಪರಾಕು ಹಾಕುವ ಚೇಲಾಗಳ ಬಳಿ ನಿವೇದಿಸುವುದೇ ಮತ್ತೊಂದು; ತಲೆಹಿಡುಕ ದಲ್ಲಾಳಿಗಳ ಬಳಿ ನಿವೇದಿಸುವುದು ಇನ್ನೊಂದು ಹಾಗೂ ಅಂತಿಮವಾಗಿ ಮತದಾರರ ಬಳಿ ನಿವೇದಿಸುವುದೇ ಒಂದು ಎಂಬುದು ಎಲ್ಲರಿಗೂ ಗೊತ್ತಿದೆ. ಇವೆಲ್ಲದರ ನಡುವೆ, ಭಯ ಹೆಚ್ಚಿ, ತಮ್ಮ ಆಸೆ, ದುರಾಸೆಗಳನ್ನು ಗತಿಸಿ ಹೋದಪಿತೃಗಳಿಗೆ ನಿವೇದಿಸಿಕೊಳ್ಳುವ ಪಿತೃಪಕ್ಷದ ನಾಟಕಗಳೂ ನಡೆಯುತ್ತಿರುತ್ತವೆ. ಆದರೆ ಇದೆಲ್ಲವನ್ನೂ ಮೀರಿ ತಮ್ಮ ಅಂತಃಸಾಕ್ಷಿಗೂ ಏನನ್ನಾದರೂ ನಿವೇದಿಸಿಕೊಳ್ಳಬೇಕು ಎಂಬ ಸೂಕ್ಷ್ಮತೆ ನಮ್ಮ ಸಾರ್ವಜನಿಕ ಜೀವನದಿಂದ ಸಂಪೂರ್ಣವಾಗಿ ಮಾಯವಾಗಿರುವುದು ಮಾತ್ರ ಗಾಬರಿ ಹುಟ್ಟಿಸುತ್ತದೆ.

ಅದೇನೇ ಇರಲಿ, ನಮ್ಮ ಭಾವೀ ಮುಖ್ಯಮಂತ್ರಿಗಳು ಅಥವಾ ಖಾಯಂ ಭಾವೀ ಮುಖ್ಯಮಂತ್ರಿಗಳು ಪಿತೃಪಕ್ಷಕ್ಕೆ ಹೆದರಿಕೊಂಡು ಓಡುತ್ತಿದ್ದಾರೋ ಅಥವಾ ಪುತ್ರಪಕ್ಷವನ್ನು ರಕ್ಷಿಸುತ್ತಿರುವ ದೇವೇಗೌಡರಿಗೆ ಹೆದರಿ ದೇವಸ್ಥಾನಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದಾರೋ ಎಂಬುದು ಇನ್ನೂ ನಿಗೂಢವಾಗೇ ಇದೆ. ನಮ್ಮ ರಾಜಕಾರಣಿಗಳ ಪ್ರದರ್ಶಕ ದೈವಭಕ್ತಿಯ ಎದುರು, ತಂತಮ್ಮ ಕೆಲಸಗಳಲ್ಲಿ ಮುಳುಗಿರುವ ರೈತರು ಹಾಗೂ ಇತರೆ ಶ್ರಮಜೀವಿಗಳ ದೈವಭಕ್ತಿಯನ್ನು ಹೋಲಿಸಿ ನೋಡಿ: ದಿನನಿತ್ಯ ದೇವರನ್ನು ನೆನೆವ ಈ ಮುಗ್ಧರು ನಮ್ಮ ಆಸೆಬುರುಕ ರಾಜಕಾರಣಿಗಳಂತೆ ದಶದಿಕ್ಕುಗಳ ದೇವಸ್ಥಾನಗಳಲ್ಲಿ ಡೊಗ್ಗು ಸಲಾಂ ಹೊಡೆದು ಅಧಿಕಾರ ಬೇಡುವ ನೀಚ ಸ್ವಾರ್ಥದಲ್ಲಿ ಮುಳುಗಿರಲಾರರು. ಕೂಡಿಟ್ಟ ಹಣ ಹಾಗೂ ದಿನನಿತ್ಯದ ದೋಖಾ ಹೆಚ್ಚಿದಂತೆಲ್ಲಾ, ಅಥವಾ ಧಾರ್ಮಿಕ ಪರಿಭಾಷೆಯಲ್ಲೇ ಹೇಳುವುದಾದರೆ, ಪಾಪದ ಕೊಡ ತುಂಬಿದಂತೆಲ್ಲಾ ದೈವದರ್ಶನದ ತೆವಲು ಹೆಚ್ಚಾಗುತ್ತದೆ ಎಂದು ಕಾಣುತ್ತದೆ. ನಿಜಕ್ಕೂ ಅಸಹಾಯಕತೆಯಲ್ಲಿದ್ದು ದೇವರನ್ನು ನೆನೆಯುವ ಮುಗ್ಧರ ಭಕ್ತಿಯ ಜೊತೆಗೆ ರಾಜಕಾರಣಿಗಳ ದೈವದರ್ಶನದ ದಂಡಯಾತ್ರೆಗಳನ್ನು ಹೋಲಿಸಿ ನೋಡಿದರೆ ಈ ಸತ್ಯ ಇನ್ನಷ್ಟು ಸ್ಪಷ್ಟವಾಗುತ್ತದೆ.

ನಮ್ಮ ದೈನಂದಿನ ಆಡಳಿತದಲ್ಲಿ ಹಾಗೂ ರಾಜಕಾರ್‍ಅಣದಲ್ಲಿ ಪಿತೃಪಕ್ಷ, ಹೋಮಗಳ ಪರಿಭಾಷೆ ಬಳಸಿದಂತೆಲ್ಲಾ ರಾಜಕೀಯದ ಹಾಗೂ ಆಡಳಿತದ ಮೇಲೆ ಕಂದಾಚಾರಿಗಳ ಹಿಡಿತ ಹೆಚ್ಚುತ್ತಾ ಹೋಗುತ್ತದೆ. ಈ ಭ್ರಷ್ಟ ದೇಶದಲ್ಲಿ ಒಬ್ಬ ಜ್ಯೋತಿಷಿಗೆ ಲಂಚ ಕೊಟ್ಟು ಸುಳ್ಳು ಬೊಗಳಿಸುವುದು, ಎದುರಾಳಿ ರಾಜಕಾರಣಿಯನ್ನು ಹೆದರಿಸುವಂಥ ಜ್ಯೋತಿಷ್ಯ ಬಿತ್ತರಿಸುವುದು ಕಷ್ಟವೇನಲ್ಲ. ಯಾಕೆಂದರೆ, ಎಲ್ಲ ರಾಜಕಾರಣಿಗಳಿಗೂ “ನಿಮಗೆ ಮುಖ್ಯಮಂತ್ರಿ ಯೋಗವಿದೆ” ಎಂದು ಹೇಳಿ ಹಣ ಕೀಳುವ ಜ್ಯೋತಿಷಿಗಳು ಎಲ್ಲೆಡೆ ಇದ್ದಾರೆ. ಆದರೆ “ಶನಿ ಪ್ರವೇಶ”ದಿಂದಾಗಿ ಈ ಯೋಗ ತಪ್ಪಿಯೇ ತಪ್ಪುತ್ತದೆ! ಹೀಗಾಗಿ ವ್ರತ, ಹೋಮ ಮಾಡಿಸಿ ಹಣ ಕೀಳುವ ಸನಾತನ ದಂಧೆ ಅಡೆತಡೆಯಿಲ್ಲದೆ ನಡೆಯುತ್ತದೆ.

ಆಕ್ಸ್ ಫರ್ಡ್ ಗೆ ಹೋಗಿ ವಿದ್ಯಾಭ್ಯಾಸ ಮಾಡಿ ಬಂದರೆಂಬ ವದಂತಿಯಿರುವ ಎಸ್ ಎಂ ಕೃಷ್ಣ ಥರದವರು ಕೂಡ ಇಂಥ ಮೂಢನಂಬಿಕೆಗಳ ಲೋಕದಲ್ಲಿ ಮುಳುಗಿದ್ದರು. ಅಂಥದ್ದರಲ್ಲಿ ಅಷ್ಟೇನೂ ಓದಿದ ಕುರುಹು ಇಲ್ಲದ ಲೋಕೋಪಯೋಗಿ ಸಚಿವ ರೇವಣ್ಣನವರು ಅಶೋಕ ಖೇಣಿ ಎಂಬ ಭೂಗಳ್ಳನ ಹರಕು ಬಾಯಿಯ ವಿರುದ್ಧ ಗುಡುಗುತ್ತಾ, “ನನ್ನದು ಎಂಥ ನಕ್ಷತ್ರ ಎಂಬುದು ಆ ಖೇಣಿಗೆ ಗೊತ್ತಿಲ್ಲ” ಎಂದಿರುವುದು ಯಾರಿಗೂ ಅಚ್ಚರಿ ಹುಟ್ಟಿಸಲಾರದು.

ಯಾರದು ಯಾವ ನಕ್ಷತ್ರವಾದರೂ ಆಗಲಿ, ನಮ್ಮ ಬಡನಾಡಿನ ಬೆನ್ನು ಹತ್ತಿರುವ ನಕ್ಷತ್ರಿಕರಿಂದ ಮಾತ್ರ ನಮಗೆ ಸುಲಭದಲ್ಲಿ ಬಿಡುಗಡೆ ಇರುವಂತೆ ಕಾಣುತ್ತಿಲ್ಲ. ತಾವೂ ಮೂಢನಂಬಿಕೆಗಳಲ್ಲಿ ಮುಳುಗಿ, ಜನರಲ್ಲೂ ಅದನ್ನೇ ಬೆಳೆಸುವುದರ ಮೂಲಕವೇ ನೆಮ್ಮದಿಯಾಗಿರುವ ರಾಜಕಾರಣಿಗಳು, ಜನರನ್ನು ಪಿತೃಪಕ್ಷಗಳ ಕತ್ತಲೆಯಲ್ಲಿಟ್ಟಷ್ಟೂ ತಮ್ಮ ಪುತ್ರಪಕ್ಷಗಳ ರಾಜಕಾರಣ ನಿರಾತಂಕವಾಗಿ ನಡೆಯುತ್ತಿರುತ್ತದೆ ಎಂದು ನಿರ್ಲಜ್ಜವಾಗಿ ನಂಬಿದಂತಿದೆ.

‍ಲೇಖಕರು avadhi

October 3, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This