ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಅಪ್ಪನೂ ರಾಕ್ಷಸನಾಗಿದ್ದು…

(ಇಲ್ಲಿಯವರೆಗೆ…)

ಹೇಗೆ ಜಗಳ ಶುರುವಾಯಿತೋ ಗೊತ್ತಿಲ್ಲ, ಚಿಟ್ಟಿ ಸಿಹಿ ನಿದ್ದೆಯಿಂದ ಏಳುವ ವೇಳೆಗೆ ಅಪ್ಪ, ಅಜ್ಜಿ ಜಟಾಪಟಿ ಜಗಳಕ್ಕೆ ಬಿದ್ದಿದ್ದರು. ಅಜ್ಜಿ ಅಳುತ್ತಾ, ಅಳುತ್ತಾ, `ನೋಡ್ದೇನೇ ಸುಬ್ಬಾ ನನ್ನ ಗತೀನಾ? ನನ್ನ ಮನೇಲಿ ನಾನೇ ಮಾತಾಡಬಾರ್ದಂತೆ’ ಎನ್ನುತ್ತಾ ಅತ್ತೆಗೆ ಒಪ್ಪಿಸುತ್ತಿದ್ದಳು. `ಮನೆ ಗಂಡ್ಸಿಗೆ ಇರೋ ಅಹಂಕಾರಾನೇ ಅದಲ್ವಾ? ಸುಮ್ನಿರು. ಇವ್ನು ನಿನ್ನ ಮಗ ಅಂತ ಅಂತಾ ಇದೀಯಾ. ನಿನ್ನಳಿಯ ಏನು ಕಡ್ಮೇನಾ? ನಾನೂ ಅನುಭವಿಸ್ತಾ ಇದೀನಿ’ ಎಂದಳು ಅತ್ತೆ. ಅದನ್ನೆಲ್ಲಾ ಕೇಳುತ್ತಿದ್ದ ಅಪ್ಪ ಅಜ್ಜಿಯ ಮೇಲೆ ಏಕಾಏಕಿ ರೇಗಿಬಿಟ್ಟ, `ನಮ್ಮಪ್ಪ ಮೂರು ಜನರನ್ನ ಮದುವೆಯಾದ. ಮೂವರೂ ಸತ್ರು. ನಿನ್ನ ಮದ್ವೆ ಆದ ಅವನೇ ಸತ್ತ, ಅಂಥಾ ಕಾಲು ನಿಂದು’. ಈ ಮಾತನ್ನ ಕೇಳಿದ್ದೇ ತಡ ಅಜ್ಜಿಗೆ ಅಳುವನ್ನ ಮೀರಿದ ಸಿಟ್ಟು ಬಂತು ಅಲ್ಲೇ ನಿಂತಿದ್ದ ಚಿಟ್ಟಿಯನ್ನು ಅವನ ಮುಂದೆ ಎಳೆದು ತಂದು `ನೋಡು ಇವಳಷ್ಟಿದ್ದೆ ಈ ಸುಬ್ಬನನ್ನು ಹಡೆದಾಗ. ನಿಮ್ಮಪ್ಪನ ಮದ್ವೆ ಆದಾಗ ನನಗೆ ಎಂಟು ವರ್ಷ. ನಿಮ್ಮಪ್ಪನಿಗೆ ಆಗ ಐವತ್ತೆರಡು. ನಾನಾಗೋ ಅಷ್ಟುಹೊತ್ತಿಗೆ ಸಂಸಾರ ಮಾಡಿದ್ದೀನಿ ಬೇರೆ ಯಾರೇ ಆಗಿದ್ದರೂ . . .’ ಎನ್ನುತ್ತಾ ಅಜ್ಜಿ ಅಳುವಿನ ನಡುವೆ ಪದಗಳನ್ನು ನುಂಗುತ್ತಾ ಮಾತಾಡತೊಡಗಿದಾಗ ಅಪ್ಪ ಎದ್ದು ನಡೆದಿದ್ದ.
ಅದು ಅಪ್ಪನ ಅಸಹಾಯಕತೆಯೋ, ಆಕ್ರೋಶವೋ ತಿಳಿಯದೆ ನಿಂತಿದ್ದಳು ಚಿಟ್ಟಿ. ಅತ್ತೆ ಅಜ್ಜಿಯನ್ನು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿ ದ್ದಳು. ಅಜ್ಜಿ ಮಾತ್ರ ಯಾವುದನ್ನೂ ಕೇಳದೆ. ಒಂದೇಸಮನೆ ವಟಗುಟ್ಟುತ್ತಲೇ ಇದ್ದಳು. ಚಿಟ್ಟಿ ಮಾತ್ರ ದಿಗ್ಭ್ರಾಂತ ಸ್ಥಿತಿಯಲ್ಲೆ ಉಳಿದಳು.
ಅಜ್ಜಿ ಅವತ್ತೆಲ್ಲಾ ಅಳುತ್ತಲೇ ಕಳೆದಳು. `ತಾನೇನು ಕೇಳಿದೆ? ಅಪರೂಪಕ್ಕೆ ಬಂದ ಮಗಳಿಗೆ ಒಂದು ಸೀರೆಯನ್ನು ತಂದುಕೊಡು ಅಂತ ಮಾತ್ರ.. ಅದೂ ಆಗಿಲ್ಲ ಅಂದ್ರೆ ಜೊತೇಲಿ ಹುಟ್ಟಿದ್ದಕ್ಕೆ ಏನು ಬಂತು ಭಾಗ್ಯ?’ ಎನ್ನುತ್ತಾ ಅಜ್ಜಿ ತನ್ನ ಗತವೈಭವವನ್ನು ನೆನೆಪಿಸಿಕೊಳ್ಳುತ್ತಿದ್ದಳು. ತನ್ನ ಗಂಡನ ಬಳಿಯಿದ್ದ ಬಿಳಿ ಕುದುರೆ, ಅದಕ್ಕಿದ್ದ ಮಾಲೀಶು ಸಾಬು, ಅರಬ್ಬ ದೇಶದಿಂದ ತನಗೆ ಬರುತ್ತಿದ್ದ ಅತ್ತರು, ನೂರಾರು ಎಕರೆ ಜಮೀನು, ಮಣಗಟ್ಟಲೆ ಬಂಗಾರ, ಮನೆಯಲ್ಲಿ ಪುಟ್ಟ ಗೌರಿಯಂಥ ನಾಕನೆ ಹೆಂಡತಿ ಇದ್ದರೂ ಊರ ಗಣಿಕೆಯರೊಂದಿಗೆ ಗಂಡನ ಸಹವಾಸ, ಇಷ್ಟರ ಮಧ್ಯೆ ಹತ್ತನೆಯ ವಯಸ್ಸಿಗೆ ಗರ್ಭಪಾತ ಆಗಿ ಹನ್ನೊಂದನೆಯ ವಯಸ್ಸಿಗೆ ಮಗಳು ಹುಟ್ಟಿದ್ದು. . . . ಹೀಗೆ ಅಜ್ಜಿಯ ಮಾತಿಗೆ ನಿಲುಗಡೆಯೇ ಇರಲಿಲ್ಲ. ಪಾಪ ಅಜ್ಜಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾಳಲ್ಲಾ? ಎಂದುಕೊಂಡಳು ಚಿಟ್ಟಿ.
ಅಜ್ಜನ ಫೋಟೋ ಕಡೆಗೆ ನೋಡುತ್ತಾ, `ಅರೆ ಬೊಚ್ಚುಬಾಯಿಯ ಅಜ್ಜ, ನೀನು ನನ್ನ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದಾದರೂ ಹೇಗೆ?’ ಎಂದುಕೊಂಡಳು. ಅತ್ತೆ ಮಾತ್ರ `ಅದೇನ್ ಗಂಡ್ಸರೋ ಏನೋ ಎಷ್ಟಿದ್ರೂ ಸಾಲ್ದು. ಅಪ್ಪನ ಬುದ್ಧೀನೇ ಇವನಿಗೂ ಬಂದಿರೋದು. ಮನೆಗೊಬ್ರು ಇಂಥಾವ್ರ ಇಬರ್ೆಕು. ಹೋಗ್ಲಿ ಬಿಡು ಇವನು ತಂದುಕೊಡೋ ಸೀರೆಯಿಂದಾನೇ ನಾನ್ ಜೀವ್ನ ಮಾಡ್ಬೇಕಿಲ್ಲ’ ಎಂದಳು. ನಾಳೆ `ತವರಿಂದ ಏನು ತಂದೆ?’ ಅಂತ ಯಾರಾದ್ರೂ ಕೇಳಿದ್ರೆ ಸಾಕ್ಷಿಗಾಗಿ ಏನೂ ಇಲ್ಲದ್ದನ್ನ ನೆನೆದು. ಅಮ್ಮ ಮುಖ ಕಿವುಚುತ್ತಾ ಎದ್ದು ಹೊರನಡೆದಳು. ಅಮ್ಮನಿಗೆ ಅಪ್ಪನನ್ನು ಬೈದಿದ್ದಕ್ಕೆ ಬೇಜಾರಾಯ್ತಾ? ಅತ್ತೆಗೆ ಸೀರೆ ತಂದುಕೊಡಲಾರದ್ದಕ್ಕೆ ಬೇಜಾರಾಯ್ತಾ? ಎನ್ನುವುದು ಅರ್ಥವಾಗದೆ ನಡೆಯುತ್ತಿರುವ ನಾಟಕವನ್ನು ನೋಡುತ್ತಾ ಕೂತಳು ಚಿಟ್ಟಿ. ಅಮ್ಮ ಒಳಗಿನಿಂದ `ಚಿಟ್ಟಿ ಬಾರೆ ಪಾತ್ರೆ ತೊಳ್ಕೊಂಡ್ ಬರೋಣ’ ಎಂದು ಕೂಗಿದಳು. ಚಿಟ್ಟಿ ಮನಸ್ಸಿಲ್ಲದ ಮನಸ್ಸಿನಿಂದ ಹೊರಟಳು.
ಮನೆಯ ಹಿಂದಿನ ನೆಲಬಾವಿಯ ಬಳಿ ಶುಕ್ರವಾರದ ಮುತ್ತೈದೆ ಪದ್ದಕ್ಕ ತನ್ನ ಕೊಂಡೆಯಲ್ಲಿ ಒಣಗಿದ ಹೂವನ್ನು ತೆಗೆಯದೆ, ಮುಖವನ್ನೂ ತೊಳೆಯದೆ ಪಾತ್ರೆ ತೊಳೆಯುತ್ತಾ ಕೂತಿದ್ದಳು. ಚಿಟ್ಟಿಗೆ ಅವಳನ್ನ ನೋಡಿ ಏನೇನೋ ಅನ್ನಿಸಿತಾದರೂ ಮಾತಾಡದೆ ಅಮ್ಮನ ಮಗ್ಗುಲಲ್ಲಿ ಕೂತು ಪಾತ್ರೆಯನ್ನು ಉಜ್ಜತೊಡಗಿದಳು. ಅಮ್ಮ ಮಾತ್ರ ತನ್ನ ಅಸಮಾಧಾನವನ್ನು ತೋಡಿಕೊಳ್ಳುವವಳಂತೆ ಪದ್ದಕ್ಕನ ಜೊತೆ ಮಾತಿಗಿಳಿದಿದ್ದಳು. ಪದ್ದಕ್ಕ ನಮ್ಮನೆಯಲ್ಲಿ ಏನೇನು ನಡಿತಾ ಇದೆ ಎಂದು ಗೊತ್ತಿರುವವಳಂತೆ, ` ಅಲ್ಲಾರೀ ನಿಮ್ಮತ್ತೆ ಏನು ಸಾಚಾನಾ ಇಷ್ಟೆಲ್ಲಾ ಹೇಳಿಕೊಳ್ತಾರೆ, ಇವ್ರ ಮತ್ತೆ ಜಗುಲಿ ಮನೆ ನರಸಿಂಗರಾಯರ ವಿಷ್ಯ ಯಾರಿಗೆ ಗೊತ್ತಿಲ್ಲ ಹೇಳಿ? ಗಂಡ ಹೊರಗ್ ಹೋದ್ರೆ ಸಾಕು ಆ ಮನುಷ್ಯ ಬೆಕ್ಕಿನ ಹಾಗೆ ಮನೆಯೊಳಗೆ ಬರ್ತಾ ಇದ್ನಂತೆ. ನಿಮ್ಮತ್ತೆ ಅವ್ರ ಜೊತೆ ಚಕ್ಕಂದ ಆಡ್ತಾ ಇದ್ರಂತೆ. ಒಂದ್ ದಿನ ಹೀಗೆ ಕೂತಿರೋವಾಗ ನಿಮ್ಮಾವ ಬಂದು ನೋಡಿ ಕೋಪದಿಂದ ನಿಮ್ಮತ್ತೆ ಕೂದ್ಲನ್ನ ಹಿಡಿದು ಹೊಡೀಲಿಕ್ಕೆ ಹೋದ್ರಂತೆ. ಮೋಟುದ್ದ ಜಡೆಗೆ ಹಾಕಿದ್ದ ಚೌರಿ, ಅದಕ್ಕೆ ಹಾಕಿದ್ದ ಬಂಗಾರದ ಜಡೆ ಬಿಲ್ಲೆ ಎರಡೂ ಕೈಗೆ ಬಂದು ಅದನ್ನ ಎತ್ತಿ ಎಸುದ್ರಂತೆ’ ಎಂದಳು.
ಚಿಟ್ಟಿಗೆ ಹರಳುಗಳನ್ನು ಕಳೆದುಕೊಂದ ಜಡೆಬಿಲ್ಲೆಯನ್ನು ಅಜ್ಜಿ ಹಬ್ಬದ ದಿನ `ಹಾಕ್ಕೊಳ್ಳೆ’ ಎಂದು ಕೊಡುತ್ತಿದ್ದುದು ನೆನಪಾಯ್ತು. ಆದ್ರೂ ಅಮ್ಮ ಅಜ್ಜಿಯ ವಿಷಯವನ್ನು ಪದ್ದಕ್ಕನ ಜೊತೆ ಮಾತಾಡುತ್ತಿರುವುದು ಚಿಟ್ಟಿಗೆ ಇಷ್ಟವಾಗಲಿಲ್ಲ. ಕೇಳುವುದೆಲ್ಲಾ ಕೇಳಿಯಾದ ಮೇಲೆ ಪದ್ದಮ್ಮ `ನಮ್ಮನೇವ್ರು ಕಾಯ್ತಾ ಇರ್ತಾರೆ, ಲಕ್ವ ಹೊಡೆದಾಗಿಂದ ಎಲ್ಲಾ ಕೆಲ್ಸಾನೂ ನಾನೇ ಮಾಡ್ಬೇಕು’ ಎನ್ನುತ್ತಾ ಎದ್ದಾಗ- ಅಮ್ಮ `ನೋಡಿ ನೀವು ಇಷ್ಟೆಲ್ಲಾ ಆದ್ಮೇಲೂ ಗಂಡನ್ ಸೇವೇನ ನಿಸ್ವಾರ್ಥವಾಗಿ ಮಾಡ್ತಿದೀರಾ ಅಂದ್ಮೇಲೆ ಆ ದೇವ್ರು ಕಣ್ಬಿಟ್ಟು ನೋಡೋದು ಖಂಡಿತಾ’ ಎಂದು ಪ್ರಶಂಶೆ ಮಾಡಿದಳು. `ಮಾಡ್ಬೇಕಲ್ವಾ ಅವ್ರೇ ತಾನೆ ನಂಗೆ ದೇವ್ರು’ ಎಂದಳು ಪದ್ದಮ್ಮ. ಅವಳ ಮುಖದಲ್ಲಿ ಕಾಣುತ್ತಿದ್ದುದು ಸಂತೋಷವೋ ದುಃಖವೋ ಎಂದು ಹುಡುಕುವುದರೊಳಗೆ ಪದ್ದಮ್ಮ ಅಲ್ಲಿಂದ ಸಾಗಿದ್ದಳು. ಚಿಟ್ಟಿ ಒಂದು ಕ್ಷಣ ಗೊಂದಲಕ್ಕೆ ಬಿದ್ದಳು. `ಇವಳನ್ನೇನಾ ನಾನು ಪೊದೆಯಲ್ಲಿ ಕಂಡಿದ್ದು?!’ ಅಮ್ಮನನ್ನು ಕೇಳೋಣ ಅಂದ್ರೆ ಅವಳ ಮನಃಸ್ಥಿತಿ ಖಂಡಿತಾ ಈಗ ಸರಿಯಿಲ್ಲ. ಅದೂ ಅಲ್ದೆ ಇದು ಹೇಳೋ ವಿಷ್ಯ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದಳು ಚಿಟ್ಟಿ.
ಅದೇ ದಿನ ಗಾಳಿ ಬೀಸಿದ ಹಾಗೆ ಚಿಟ್ಟಿಯ ಕಿವಿಗೆ ಬಂದು ಮುಟ್ಟಿದ ಸಂಗತಿಯೊಂದು ಅವಳನ್ನ ತಲ್ಲಣಗೊಳಿಸಿತ್ತು. ಸಿಂಗೊಂಡನಹಳ್ಳಿಯ ಪಟೇಲ ಶಾಂತಪ್ಪನಿಗೂ ಅವನ ಹೆಂಡತಿ ನಂಜಕ್ಕನಿಗೂ ಮಾರಾಮಾರಿ ನಡೆದಿತ್ತು. ಜಗಳ ಹಳ್ಳಿಯಲ್ಲಿ ಸಾಮಾನ್ಯವಾದರೂ ಈ ಜಗಳದ ಕಾರಣ ಮಾತ್ರ ಚಿಟ್ಟಿಯ ಎದೆಯಲ್ಲಿ ಮಾತ್ರವಲ್ಲ ಊರಲ್ಲಿ ಕೂಡಾ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿತ್ತು.
`ಅಲ್ಲ ಕಣೆ ಅವ್ರುಬ್ರೂ ಜಗಳ ಹಾಗ್ ಆಡ್ತಾ ಇದ್ರೆ ಅವ್ರ ಮಗಳು ಕಮಲ ಕಟ್ಟೆಗೆ ಕೂತು ಅವ್ರುನ್ನೆ ನೋಡ್ತಾ ಇದ್ಲು ಅಂತೀನೀ…’ ಎಂದಳು ಸರೋಜಾ. `ಕಟ್ಟೆಗೆ ಕೂತ ಕಮಲ ಬೇರೆ ಏನು ಮಾಡಲು ಸಾಧ್ಯವಿತ್ತು. ಅದೂ ಅಪ್ಪ ಅಮ್ಮರ ನಡುವೆ. . . . ಹೌದು ಅಷ್ಟು ಜಗಳ ಆಗಿದ್ದಾದ್ರೂ ಯಾಕೆ?’ ಚಿಟ್ಟಿ ಸರೋಜಾಳನ್ನು ಪ್ರಶ್ನಿಸಿದಳು. ಸರೋಜಾಳ ಮಾತನ್ನು ಕುತೂಹಲದಿಂದ ನೋಡ್ತಿದ್ದ ಎಲ್ಲರಿಗೂ ಕಿರಿಕಿರಿಯಾಯ್ತು. `ಹೇಳೊ ಮುಂಚೇನೇ ಬಾಯ್ ಹಾಕ್ಬೇಡ’ ಎಂದಳು ನಕ್ಕತ್ತು. ಸರೋಜಾ ಮಾತ್ರ ಧ್ಯಾನಸ್ಥಿತಿಯಲ್ಲಿದ್ದವಳಂತೆ ಯಾವುದನ್ನೂ ಗಮನಿಸದೆ ಮಾತನ್ನು ಮುಂದುವರೆಸಿದ್ದಳು.
ಮದುವೆಯಾಗಿ ಮೂರೇ ತಿಂಗಳಿಗೆ ಗಂಡನನ್ನು ಕಳೆದುಕೊಂಡು ಮನೆಗೆ ಸೇರಿದ್ದ ಮಗಳನ್ನು ನೋಡಿ ಆ ಭಗವಂತ ಇಂಥಾ ಕಷ್ಟವನ್ನು ಕೊಡಬಾರದಿತ್ತು ಎಂದು ಶಾಂತಪ್ಪ ಮತ್ತು ಅವನ ಹೆಂಡತಿ ನಂಜಕ್ಕ ಕಣ್ಣೀರು ಹಾಕಿದ್ದರು. ಗಂಡನ ಮನೆಯವರು ನಾವೇ ನೋಡ್ಕೋತೀವಿ ಅಂತ ಹೇಳಿದರೂ ಕೇಳದೆ ನಂಜಕ್ಕನೇ ಮುಂದೆ ನಿಂತು `ಗಂಡನಿಲ್ಲದ ಮನೆಯಲ್ಲಿ ಒಂಟಿ ಹೆಣ್ಣು ಬದುಕೋದಾದ್ರೂ ಹೇಗೆ? ಬಳ್ಳಿಗೆ ಕಾಯಿ ಭಾರ ಅಲ್ಲ, ಮಗಳು ಮನೆಗೆ ಭಾರ ಅಲ್ಲ. ಮನೇಲ್ ಹುಟ್ಟಿದ್ ಕೂಸು ಮನೇ ಸೇರಿದೆ. ಇಲ್ಲೆ ಇಲರ್ಿ ಬಿಡಿ’ ಎಂದಿದ್ದಳು ಖಂಡತುಂಡವಾಗಿ. ಶಾಂತಪ್ಪ ಏನೂ ಮಾತಾಡಲಿಲ್ಲ. ತಂದೆಯ ಮನಸ್ಸಿನಲ್ಲಿ ಏನೆಲ್ಲಾ ನಡೀಬಹುದು ಎನ್ನುವ ಅಂದಾಜಿದ್ದ ಜನ ಶಾಂತಪ್ಪನನ್ನು `ಪಾಪ’ ಎಂದಿದ್ದರು. ದುಃಖದ ಮಡಿಲಲ್ಲಿದ್ದ ಕಮಲಾಗೆ ಅಪ್ಪ ಅಮ್ಮ ಏನ್ ಹೇಳ್ತಾರೋ ಅದನ್ನ ಕೇಳೋದಷ್ಟೇ ಉಳಿದಿದ್ದಿದ್ದು.
ದಿನ ಕಳೆದ ಹಾಗೆ ಸ್ವಲ್ಪ ಸ್ವಲ್ಪವಾಗಿ ಚೇತರಿಸಿಕೊಂಡು ಗೆಲುವಾಗುತ್ತಿದ್ದ ಕಮಲಳನ್ನು ಒಂಟಿಯಾಗಿ ಬಿಟ್ಟು ನಂಜಕ್ಕ ತೋಟಕ್ಕೆ ಓಡಾಡತೊಡಗಿದ್ದಳು. ಆಸೆಯಿಂದ ಕಟ್ಟಿಕೊಂಡ ತೋಟದಲ್ಲಿ ಬಿಟ್ಟ ಫಲವನ್ನು ಕಣ್ತುಂಬಿಕೊಳ್ಳುತ್ತಿದ್ದಳು. `ನಂಜಕ್ಕ ಫಲಾನ ಉಣ್ಣಬೇಕು ನೋಡಿ ಸಂತೋಷ ಪಡೊದಲ್ಲ’ ಎಂದ ಜನಕ್ಕೆ `ನಾವ್ ಬೆಳದದ್ದು ನಾಕ್ ಜನ ತಿಂದ್ರೆ ತಾನೇ ಸಮಾಧಾನ’ ಎಂದು ಕೊಟ್ಟು ಸಂತೋಷಪಡುತ್ತಿದ್ದಳು ತಿಳಿ ಮನಸ್ಸಿನ ನಂಜಕ್ಕ.
ಊರ ಪಟೇಲ ಅನ್ನೋ ಕಾರಣಕ್ಕೆ ಶಾಂತಪ್ಪ ಪಂಚಾಯ್ತಿ ತೀರ್ಮಾನ ಅಂತ ಹೊರಟುಬಿಡುತ್ತಿದ್ದ. ನಾಟಕ, ಸಿನೆಮಾ ಹುಚ್ಚ. ಅದರ ಹಿಂದೆ ಬಿದ್ದ ಅವನಿಗೆ ಮನೆ ಬೇಡವಾಗಿತ್ತು. ನಂಜಕ್ಕನೇ ಕಚ್ಚೆ ಕಟ್ಟಿ ಜಮೀನು ಉಳುಮೆ, ಬಿತ್ತನೆ ಎಲ್ಲಾ ಮಾಡಿದಳು. ಹಣಕ್ಕೆ ಕೊರತೆ ಅಂತಾನೋ, ತಿನ್ನಾಕ್ಕಿಲ್ಲ ಅಂತಲೋ ಅಲ್ಲ. ಒಂಟಿತನ ಕಾಡಬಾರದು ಅಂತ. ಗಮನ ಬಂದಾಗ ಹೆಂಡತಿಯ ಕಡೆ ನೋಡುತ್ತಿದ್ದ ಶಾಂತಪ್ಪ, ವರ್ಷಕ್ಕೆ ಒಂದರಂತೆ ಹತ್ತಾರು ಮಕ್ಕಳು ಹುಟ್ಟಿ ಮನೆ ತುಂಬಾ ಗಲಗಲ ಸದ್ದು ತುಂಬಿಕೊಂಡಿತ್ತು. ನಂಜಕ್ಕ ತಾನು ನೆಟ್ಟ ಗಿಡ, ತನ್ನ ಹೊಟ್ಟೆಯ ಮಕ್ಕಳು ಹೀಗೆ ಒಟ್ಟಿಗೆ ಬೆಳೆಯುವುದನ್ನ ನೋಡುತ್ತಾ ಹಿಗ್ಗುತ್ತಿದ್ದಳು. ಅಂಥಾ ನಂಜಕ್ಕ ಮಗಳ ಕಾರಣಕ್ಕೆ ಇವತ್ತು ಬೀದಿಯಲ್ಲಿ ಬಂದು ನಿಂತಿದ್ದಳು.
ಕಮಲ ಈಚೆಗೆ ಗಂಡನ ಸಾವಿನಿಂದ ಹೊರಬಂದು ಅಮ್ಮನಿಗೆ ಅಡುಗೆ ಸಹಾಯಕ್ಕೆ ನಿಲ್ಲುತ್ತಿದ್ದಳು. ಸಪ್ಪಗಿದ್ದ ಮಗಳು ಬರಬರುತ್ತಾ ಗೆಲುವಾಗುವುದನ್ನ ನೋಡಿ ನಂಜಕ್ಕನಿಗೆ ಮನಸ್ಸಿಗೆ ಸಮಾಧಾನ ಆಗಿತ್ತಲ್ಲವಾ? ಹಾಗೇ ತನ್ನ ಗಂಡ ಪಟೇಲ್ ಶಾಂತಪ್ಪ ಕೂಡಾ ಈಚೀಚಲಾಗಿ ಮನೆಯಲ್ಲೇ ಹೆಚ್ಚು ಹೊತ್ತು ಉಳಿಯತೊಡಗಿದ್ದ. ಮಗಳ ಪರಿಸ್ಥಿತಿಯ ಕಾರಣಕ್ಕೆ ಅಪ್ಪ ಮೆತ್ತಗಾದ ಅಂತ ಊರೇ ಅಂದು ಕೊಳ್ಳತೊಡಗಿತ್ತು. ನಂಜಕ್ಕ ಕೂಡಾ ಹಾಗೇ ಅಂದುಕೊಂಡಳು. ನಿಧಾನವಾಗಿ ಮಗಳು ಅಪ್ಪನಿಗೆ ಬೇಕಾದ ಅಡುಗೆಯನ್ನು ಅವನನ್ನು ಕೇಳೇ ಮಾಡತೊಡಗಿದ್ದಳು. ಅಪ್ಪ ಸುಖವಾಗಿ ಉಂಡು, ಕೆಲಸವಿದ್ದರೆ ಹೊರಗೆ, ಇಲ್ಲದಿದ್ದರೆ ಒಳಗೆ ಉಳಿಯತೊಡಗಿದ್ದ. ಹೀಗೆ ದಿನಾ ನಡೆಯುತ್ತ ಬಂದಿತ್ತು. ಆದ್ರೆ ಅವತ್ತು ಬೆಳಗ್ಗೆ ತೋಟಕ್ಕೆ ಹೊರಟ ನಂಜಕ್ಕ ಕೋಲು ಗುದ್ದಲಿಯನ್ನು ಮರೆತುಹೋದ ಕಾರಣಕ್ಕೆ ವಾಪಾಸು ಬಂದಿದ್ದಳು. ಬಂದವಳಿಗೆ ತನ್ನ ಗಂಡ ಮತ್ತು ಮಗಳು ಇದ್ದ ಸ್ಥಿತಿಯನ್ನು ನೋಡಿ ಆಘಾತವಾಗಿತ್ತು. ಜಗತ್ತಿನಲ್ಲಿ ಇದಕ್ಕಿಂತ ಕೆಟ್ಟದ್ದು ಇನ್ಯಾವುದಾದರೂ ಇದ್ಯಾ? ಅವಳ ಎದೆ ಒಡೆದುಹೋಗಿತ್ತು. ಇದೆಲ್ಲಾ ತನ್ನ ಗಂಡನ ಬಲವಂತದಿಂದಲೇ ಆಗಿದ್ದಿರಬೇಕು ಎನ್ನುವ ನಿರ್ಧಾರಕ್ಕೆ ಬಂದ ಅವಳು `ನನ್ನ ಮಗಳನ್ನ ಹಾಳು ಮಾಡಿಬಿಟ್ಯಲ್ಲಾ?’ ಎಂದು ಅವನನ್ನು ನಿಲ್ಲಿಸಿ ಕೇಳಿದ್ದಳು.
ಅದಕ್ಕೆ ಶಾಂತಪ್ಪ `ಇದ್ರಲ್ಲಿ ಹಾಳು ಮಾಡೋದೇನು? ನೀನ್ ನೆಟ್ಟ ಮರದ ಹಣ್ನನ್ನ ನೀನ್ತಾನೆ ತಿನ್ನೋದು? ಅದೇ ಥರ ಇದು ತಿಳ್ಕಾ’ ಎಂದುಬಿಟ್ಟಿದ್ದ. ನಂಜಕ್ಕ ತಲೆ ತಲೆ ಚೆಚ್ಚಿಕೊಂಡಳು `ಮೂಳಾ ಅದು ಮರ ಇದು ಹೆಣ್ಣು ಜೀವ ವ್ಯತ್ಯಾಸ ಇದೆ’ ಶಾಂತಪ್ಪನೂ ಪಟ್ಟು ಬಿಡಲಿಲ್ಲ, ನಂಜಕ್ಕನೂ ಪಟ್ಟು ಬಿಡಲಿಲ್ಲ. ಇದೆಲ್ಲದಕ್ಕು ಮೂಲವಾದ ಕಮಲ ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಕೂತೇ ಇದ್ದಳು. ಏನೂ ಮಾತಾಡದೆ ಹಾಗೆ ಕೂತ ಮಗಳ ಕಡೆಗೆ ನೋಡಿದ ನಂಜಕ್ಕನಿಗೆ ಹೊಟ್ಟೆಯಲ್ಲಿ ಸಂಕಟವಾಗಿ ತಿಕ್ಕಲು ತಿರುಗಿ ಅಲ್ಲೆ ಇದ್ದ ಬರಲನ್ನು ತೆಗೆದುಕೊಂಡು `ಪಾಪಿ ಮುಂಡೆ’ ಎನ್ನುತ್ತಾ ಹೊಡೆಯತೊಡಗಿದಳು. ಬಿಡಿಸಲು ಬಂದ ಶಾಂತಪ್ಪನಿಗೂ ಸರಿಯಾಗೆ ಪೆಟ್ಟುಬಿತ್ತು. ಅಷ್ಟರವರೆಗೆ ಏನಂದರೂ ಸಹಿಸಿಕೊಂಡಿದ್ದ ಕಮಲ ಅಪ್ಪನಿಗೆ ಪೆಟ್ಟು ಬಿದ್ದ ತಕ್ಷಣ ಎದ್ದು ನಿಂತಳು. ನಂಜಕ್ಕನ ಕೈಗಳನ್ನು ಹಿಡಿದು `ನಾನು ಬೇಕಾಗೇ ಹಾಳಾದೆ ಏನ್ ಮಾಡ್ತೀಯಾ?’ ಎಂದಳು ಸಹಜವಾಗೇ. ಅವಳ ಮಾತನ್ನ ಕೇಳಿದ ಮೇಲೆ ನಂಜಕ್ಕ ಕೆಳಕ್ಕಿಳಿದು ಹೋದಳು. ಇದನ್ನ ನಾನು ಬಿಡಲ್ಲ ಪಂಚಾಯ್ತಿ ಸೇರುಸ್ತೀನಿ ಇಂಥಾ ಅನ್ಯಾಯಾನ ಬಿಟ್ರೆ ಊರು ಕೆಟ್ಟು ಹೋಗುತ್ತೆ’ ಎಂದು ಹೊರಟು ನಿಂತ ನಂಜಕ್ಕನನ್ನು ಒಳಗೆ ತಳ್ಳಿ ಅಪ್ಪ ಮಗಳು ಇಬ್ಬರೂ ಹೊಡೆದಿದ್ದರು.
ಚಿಟ್ಟಿಗೆ ಗಾಬರಿ `ಇದು ಸಾಧ್ಯಾನಾ?’. ಸರೋಜಾ ತಾನು ಮನೇಲಿ ಕೇಳಿಕೊಂಡು ಮಾತನ್ನ ಇಲ್ಲಿ ಒಪ್ಪಿಸುತ್ತಿದ್ದಳು `ಯಾಕಿಲ್ಲ ಬ್ರಹ್ಮದೇವನೇ ತಾನು ಹುಟ್ಟಿಸಿದ ಸರಸ್ವತಿಯನ್ನು ಕಂಡು ಮೋಹಿಸಿರಲಿಲ್ವಾ? ಮದುವೆ ಮಾಡಿಕೊಳ್ಳಲಿಲ್ವಾ?’ ತಾನು ದಿನ ಶಾರದೆಯೇ ಕರಗಳ ಜೋಡಿಸಿ…ಎಂದು ಪ್ರಾರ್ಥನೆ ಮಾಡುತ್ತಿರುವ ತಾಯಿ ಶಾರದೆ, ವಿದ್ಯೆಯ ಅಧಿದೇವತೆ ಬೇಡ ಅಂತ ತಳ್ಳ ಬಹುದಾದಷ್ಟು ಶಕ್ತಿ ಇದ್ದವಳು. ಅವಳೂ ಕಮಲಳ ಹಾಗೇ ತನ್ನ ಅಪ್ಪನಿಂದ ಹಾಳಾದವಳಾ? ಛೇ ಇರಲಿಕ್ಕಿಲ್ಲ. `ಇಲ್ಲ ಕಣೆ ಈ ಕಥೇನಾ ನಾನು ಕೇಳೇ ಇಲ್ಲ. ಇದೆಲ್ಲಾ ಸುಳ್ಳು’ ಎಂದಳು ಚಿಟ್ಟಿ. ಸರೋಜಾ `ಹೌದು’ ಅಂತ ವಾದ ಮಾಡಿದಳು. ಚಿಟ್ಟಿಗೆ ವಾದ ಮುಂದುವರೆಸುವ ಮನಸ್ಸಿರಲಿಲ್ಲ ಸುಮ್ಮನಾಗಿಬಿಟ್ಟಳು
ಸ್ಕೂಲಿಂದ ಮನೆಗೆ ಬರುವುದರೊಳಗೆ ಮನೆಯಲ್ಲಿ ನಗುವಿನಲೆ ತುಂಬಿತ್ತು. ಬೆಳಗಾದ ಜಗಳದ ಯಾವ ಸೂಚನೆಯೂ ಅಲ್ಲಿರಲಿಲ್ಲ. ಅಪ್ಪ ಅತ್ತೆಗೆಂದು ಸೀರೆ ತಂದಿದ್ದ, ಜೊತೆಗೆ ಅಮ್ಮನಿಗೂ. ಪುಟ್ಟಿ ಜಿಲೇಬಿ ತುಂಡನ್ನು ಹಿಡುದು `ಅಪ್ಪ ತಂದಿದೆ’ ಎಂದಳು. ಚಿಟ್ಟಿಗೂ ಜಿಲೇಬಿ ತಿನ್ನುವ ಆಸೆಯಾಯ್ತು. ಅಷ್ಟರಲ್ಲಿ ಅಪ್ಪ ಜಿಲೇಬಿ ತುಂಡನ್ನು ಹಿಡಿದು ಬಾ ಮಗಳೇ ಎಂದು ಪ್ರೀತಿಯಿಂದ ಕರೆದ. ಚಿಟ್ಟಿ ಜಿಲೇಬಿ ಆಸೆಗೋ ಅಪ್ಪ ಹಾಗೆ ಕರೆದದ್ದಕ್ಕೋ ಓಡಿ ಹೋಗಿ ಅವನ ತೊಡೆಯ ಮೇಲೆ ಕೂತು ಜಿಲೇಬಿ ತಿನ್ನತೊಡಗಿದಳು. ಅಪ್ಪ ಅವಳ ತಲೆಯನ್ನು ಸವರುತ್ತಾ `ನನ್ನ ಮಗಳು ರಾಜಕುಮಾರಿ’ ಅಂದ. ಅಪ್ಪ ಅಷ್ಟು ಸಂತೋಷವಾಗಿದ್ದುದ್ದನ್ನ ಚಿಟ್ಟಿ ನೋಡೇ ಇರಲಿಲ್ಲ. ಪಾಯಸ ಮಾಡುತ್ತಿದ್ದ ಅಮ್ಮ ಅಡುಗೆ ಮನೆಯಿಂದ ಹಣಕಿ ನೋಡಿ ನಕ್ಕಳು. ಅತ್ತೆ ನಾಳೆ ಊರಿಗೆ ಹೊರಡುವ ತಯಾರಿ ನಡೆಸಿದ್ದಳು. ಅಜ್ಜಿ ಅವಳಿಗೋಸ್ಕರ ಇರೋದನ್ನೆ ಗಂಟು ಕಟ್ಟುತ್ತಾ `ಸುಬ್ಬಾ ಚಟ್ನಿಪುಡಿ ಇಟ್ಟಿದ್ದೀನಿ, ಸಾರಿನ ಪುಡಿ ಈಸಲ ತುಂಬಾಚೆನ್ನಾಗಿ ಆಗಿದೆ. . .’ ಇತ್ಯಾದಿ ಹೇಳುತ್ತಿದ್ದಳು.
ಅಪ್ಪನ ಕೈ ಚಿಟ್ಟಿಯ ಬೆನ್ನ ಮೇಲೆ ಆಡತೊಡಗಿತು. ಅವನು ಅವಳನ್ನ ಹತ್ತಿರಕ್ಕೆ ಎಳೆದುಕೊಂಡು ಹಣೆಗೆ ಮುತ್ತನ್ನು ಕೊಟ್ಟ. ಚಿಟ್ಟಿಯ ಮೈ ನಡುಗಿತು, ಮೈಮೇಲೆ ಏನೋ ಹರಿದಾಡಿತೇನೋ ಎನ್ನುವ ಅನುಭವವಾಗಿ ಅಪ್ಪನ ಕೈಯ್ಯನ್ನು ಕೊಸರಿಕೊಂಡು, ತೊಡೆಯಿಂದ ಜಿಗಿದು ರೂಮಿಗೆ ಓಡಿದಳು. ಅಪ್ಪ `ಏಯ್ ಚಿಟ್ಟಿ ಏನಾಯ್ತೇ?’ ಎಂದು ಕೂಗಿದ. `ಏನೋ ನೆನಪಾಗಿರುತ್ತೆ ಬಿಡೋ’ ಎಂದಳು ಅಜ್ಜಿ ಗಂಟುಗಳನ್ನು ಕಟ್ಟುತ್ತಾ.
ಚಿಟ್ಟಿ ನಡುಗುತ್ತಾ ಕೂತಳು. ಅವಳ ಒಳಗೆ ಭಯ ಅನ್ನೋದು ಊರ ಹೊರಗಿನ ಮುನಿಯಪ್ಪನ ದೊಡ್ಡಾಲದ ಮರದಂತೆ ಕ್ಷಣ ಕ್ಷಣಕ್ಕೂ ಬೆಳೆಯುತ್ತಾ ಹೋಯಿತು. ಮೀಸೆ ಹೊತ್ತ ಪಟೇಲ್ ಶಾಂತಪ್ಪ, ಅವನ ಮಗಳು ಕಮಲ ಹಾಗೂ ಅಸಹಾಯಕ ನಂಜಕ್ಕ ಎಲ್ಲರೂ ಅವಳ ಕಣ್ಣೆದುರಲ್ಲಿ ಹಾದುಹೋದರು. ನಂಜಕ್ಕನಿಗೆ ಈ ಅನ್ಯಾಯ ಆಗಬಾರದಿತ್ತು.
ಚಿಟ್ಟಿ ಅವತ್ತೆಲ್ಲಾ ಅಪ್ಪನನ್ನು ಮಾತಾಡಿಸುವುದಿರಲಿ ಅವನ ಕಡೆಗೂ ನೋಡಲಿಲ್ಲ. `ಚಿಟ್ಟಿ ಅಪ್ಪ ಮಾತಾಡುಸ್ತಾ ಇದಾರೆ, ಸುಮ್ನೇನೇ ಇದೀಯಲ್ಲಾ?’ ಎಂದಳು ಅಮ್ಮಾ. `ಹುಂ’ ಎನ್ನುತ್ತಾ ಅನ್ನದ ಅಗುಳನ್ನ ಆರಿಸುತ್ತಾ ಕೂತಳು ಚಿಟ್ಟಿ. ಯಾವತ್ತೂ ಹೀಗೆ ಮಂಕಾದ ಅವಳನ್ನ ನೋಡಿ ಅಭ್ಯಾಸವಿರದ ಎಲ್ಲರಿಗೂ `ಅರೆ ಇವಳಿಗೇನಾಯ್ತು?’ ಎನ್ನುವ ಅಚ್ಚರಿ.
ಚಿಟ್ಟಿ ಅಪ್ಪನೊಂದಿಗೆ ಮಾತ್ರವಲ್ಲ ಮನೆಯ ಯಾರೊಂದಿಗೂ ಮಾತಾಡಲಿಲ್ಲ. ಸಮಯಕ್ಕೂ ಮುಂಚೆ ಮಲಗಿದ್ದ ಚಿಟ್ಟಿಗೆ ಕನಸೊಂದು ಬಿತ್ತು. ಆ ಕನಸಲ್ಲಿ ಪಟೇಲ್ ಶಾಂತಪ್ಪ ತನ್ನ ದಪ್ಪ ಮೀಸೆಯನ್ನು ತೀಡಿಕೊಂಡು, ತುಟಿಯ ಕೆಳಗೆ ಬಾಗಿದಂತಿದ್ದ ಕೋರೆಗಲ್ಲುಗಳನ್ನು ಚಿಲಿಯುತ್ತಾ ಹತ್ತಿರಕ್ಕೆ ಬರತೊಡಗಿದ. ಇದ್ದಕ್ಕಿದ್ದ ಹಾಗೇ ಅವನು ತನ್ನ ಅಪ್ಪನಾದ, ಕ್ಷಣ ಹೊತ್ತಿಗೆ ಭಾರತಿಯ ಅಪ್ಪ ಮಂಜಣ್ಣನಾದ, ನಂತರ ಸರೋಜಾಳ ಅಪ್ಪ ರಾಮೇಗೌಡ್ರು, ಕೊನೆಗೆ ಆ ಜಾಗಕ್ಕೆ ನಕ್ಕತ್ತುವಿನ ಅಪ್ಪ ಮೈದು ಸಾಬರೂ ಬಂದರು. ಎಲ್ಲರೂ ಒಂದಾಗಿ, ಒಂದಿದ್ದು ಹಲವರಾಗಿ, ಚಿಟ್ಟಿಯನ್ನು ಸುತ್ತ ತೊಡಗಿದರು. ಚಿಟ್ಟಿ ಅವರ ಕೇಕೆಯನ್ನು ಸಹಿಸಲಾಗದೆ ಅಲ್ಲಿಂದ ಓಡತೊಡಗಿದಳು. ಎಲ್ಲಿ ಏನು ಎಂದು ನೋಡದೆ ಓಡುತ್ತಾ, ಓಡುತ್ತಾ, ಚಕ್ರತೀರ್ಥದ ಒಡಲಿನಿಂದ ಸಮುದ್ರದ ದಂಡೆಗೆ ಬಂದಳು. ಅಲ್ಲಿಗೂ ಎಲ್ಲರೂ ಅವಳನ್ನು ಅಟ್ಟಿಸಿಕೊಂಡು ಬಂದರು. ಅವರ ಕೇಕೆ ಅವಳನ್ನ ಮತ್ತೆ ಮತ್ತೆ ಭಯದ ನೆರಳಿಗೆ ದೂಡುತ್ತಿತ್ತು. `ನನ್ನ ಹತ್ತಿರಕ್ಕೆ ಬರಬೇಡಿ’ ಎನ್ನುತ್ತಾ ಇನ್ನಷ್ಟು ದೂರಕ್ಕೆ ಓಡತೊಡಗಿದಳು. ಹೀಗೆ ಓಡುತ್ತಾ, ಓಡುತ್ತಾ ಅವಳ ಕಾಲುಗಳಲ್ಲಿ ಸೋಲು ಕಾಣಿಸಿಕೊಂಡಿತು. ಅದಕ್ಕೆ ತಕ್ಕನಾಗಿ ಅವಳ ಕಾಲಿಗೆ ಬಳ್ಳಿಯೊಂದು ತೊಡರಿ ನೆಲಕ್ಕೆ ಬಿದ್ದಳು. ಇನ್ನು ನನ್ನ ಕಥೆ ಮುಗಿಯಿತು ಎಂದು ಅಂದುಕೊಂಡ ಚಿಟ್ಟಿಗೆ ಅಚ್ಚರಿ!
ದಂಡೆಯಲ್ಲಿ ಅಲ್ಲಿಯವರೆಗೆ ತನ್ನನ್ನು ಅಟ್ಟಿಸಿಕೊಂಡು ಬಂದ ದೊಡ್ದ ಗುಂಪು ಕಾಣಲಿಲ್ಲ. ಅಂದರೆ ಯಾರೂ ಬರದೆಯೂ ಇಷ್ಟು ಹೊತ್ತು ನಾನು ಹೆದರಿ ಓಡಿ ಬಂದೆನೇ? ಎನ್ನುವ ಗಾಬರಿ ಅವಳಲ್ಲಿ ಮನೆ ಮಾಡಿತು ಹೀಗೆಂದುಕೊಂಡ ಅವಳಿಗೆ ಇದ್ದಕ್ಕಿದ್ದ ಹಾಗೆ ಮತ್ತೆ ಕೇಕೆ ಕೇಳತೊಡಗಿತು. ಆ ಕೇಕೆ ಕ್ಷಣ ಕ್ಷಣಕ್ಕೂ ಅವಳಿಗೆ ಹತ್ತಿರವಾಗುತ್ತಾ ಬಂದಿತು. ಇವರೆಲ್ಲರಿಗಿಂತ ಜೋಸೆಫನೇ ವಾಸಿ ಅನ್ನಿಸಿಬಿಟ್ಟಿತು. ಆದ್ರೆ ಈಗ ಮಾಡೋದೇನು? ಚಿಟ್ಟಿ ಚೀರಿದಳು `ನನ್ನನ್ನು ಏನೂ ಮಾಡಬೇಡಿ’ ಎಂದು. ಪುಟ್ಟಿ ಅವಳ ಹತ್ತಿರಕ್ಕೆ ಬಂದು `ಯಾಕೆ ಚಿಟ್ಟೀ ಕೂಗ್ತಾ ಇದೀಯಾ ಹುಷಾರಿಲ್ವಾ ತಲೆ ನೋಯುತ್ತಾ?’ ಎಂದು ಕೇಳಿದಳು. ಸಮಾಧಾನ ಮಾಡಿಕೊಂಡ ಚಿಟ್ಟಿ `ಇಲ್ಲ ಕಣೆ’ ಎಂದು ಕ್ಷಣ ಕಾಲ ಯೋಚಿಸುವವಳಂತೆ ಕೇಳಿದಳು. `ಅಪ್ಪನನ್ನ ನೋಡಿದ್ರೆ ನಿಂಗೆ ಏನನ್ನಿಸುತ್ತೆ?’. ಪುಟ್ಟಿ ಹಿ ಹಿ ಹಿ ಎಂದು ನಗುತ್ತಾ `ಅಷ್ಟೂ ಗೊತ್ತಾಗಲ್ವಾ ಅಪ್ಪ ಅನ್ಸುತ್ತೆ’ ಎಂದಳು. ಚಿಟ್ಟಿಗೆ ನಿರಾಸೆ. ಪುಟ್ಟಿಗೆ ಅದಕ್ಕಿಂತ ಗೊತ್ತಾಗೋಕ್ಕೆ ಸಾಧ್ಯತೆ ಇಲ್ಲ ಎನ್ನುವುದೂ ಅವಳ ತಲೆಗೆ ಹೊಳೆಯಲಿಲ್ಲ ಛೇ ಎಂದಳು. ಅವಳ ಹತ್ತಿರಕ್ಕೆ ಬಂದು ಅವಳ ಗಲ್ಲವನ್ನು ಹಿಡಿದೆತ್ತಿ `ಯಾಕೆ ಚಿಟ್ಟಿ? ನಿಂಗೆ ಬೇರೆ ಏನಾದ್ರೂ ಅನ್ನಿಸುತ್ತಾ?’ ಎಂದಳು. ಚಿಟ್ಟಿ ತಲೆ ಆಡಿಸಿದಳು. ಆಡಲಿಕ್ಕೆ ಮಾತು ಬರಲಿಲ್ಲ. ಅವಳ ಮನಸ್ಸಿನ ತುಂಬಾ ಅಪ್ಪ ಅಂದ್ರೆ ರಾಕ್ಷಸ ಎನ್ನುವುದೇ ತುಂಬಿ ಹೋಗಿತ್ತು. ದುಗುಡ ಹೊರಗೆ ಇಣುಕಲೋ ಬೇಡವೋ ಎನ್ನುವ ಹಾಗೆ ಅವಳ ಕಣ್ಣ ತುದಿಯಲ್ಲಿ ಕೂತು ಆಡುತ್ತಿತ್ತು.
ಆ ರಾತ್ರಿ ಚಿಟ್ಟಿಗೆ ನಿದ್ದೆ ಬರಲಿಲ್ಲ. ಅಪ್ಪ ಅಮ್ಮ ಇಬ್ಬರೂ ರೂಮಿನ ಒಳಗೆ ಬಂದರು. ಅಪ್ಪ ಹಾಸಿಗೆಯಲ್ಲಿ ಮಲಗುತ್ತಾ `ಆ ಶಾಂತಪ್ಪನಿಗೆ ಬುದ್ಧಿ ಬೇಡ್ವಾ ಮಗಳು ಅಂತಾನೂ ನೋಡ್ದೆ. . . . ನಾಳೆ ಪಂಚಾಯ್ತಿ ಇದ್ಯಂತೆ. ಬಹುಶಃ ಅವನಿಗೆ ಬಹಿಷ್ಕಾರ ಹಾಕ್ತಾರೆ ಅನ್ಸುತ್ತೆ’ ಎಂದ. `ಒಳ್ಳೆ ಅಪ್ಪ ಸಿಕ್ಕೋಕೂ ಪುಣ್ಯಾ ಮಾಡಿರಬೇಕು’ ಎಂದಳು ಅಮ್ಮ. ಯಾರ ವಿಷಯಕ್ಕೆ ಹೇಳ್ತಾ ಇದ್ದಾಳೆ ಅನ್ನೋದು ಅರ್ಥವಾಗದ ಅಪ್ಪ ಅಮ್ಮನ ಕಡೆಗೆ ನೋಡಿ, ನಂತರ `ಚಿಟ್ಟೀನ ಚೆನ್ನಾಗ್ ನೋಡ್ಕೋಬೇಕು. ಪಾಪದ ಹುಡ್ಗಿ ಏನೂ ಗೊತ್ತಾಗಲ್ಲ’ ಎಂದ. ಸೀನುವನ್ನು ಮಡಿಲಲ್ಲಿ ಮಲಗಿಸಿಕೊಂಡು ತಟ್ಟುತ್ತಿದ್ದ ಅಮ್ಮ ಅವನು ಬಾಯೊಳಗೆ ಹಾಕಿಕೊಂಡಿದ್ದ ಬೆರಳನ್ನ ಅನವಿಗೆ ಎಚ್ಚರವಾಗದಂತೆ ಮೆಲ್ಲನೆ ತೆಗೆದು ಕೆಳಗಿಟ್ಟಳು.
(ಮುಂದುವರೆಯುವುದು…)

‍ಲೇಖಕರು avadhi

September 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ ಕೊನೆಯ ಭಾಗ : ಚಿಟ್ಟಿ ಸಿರೀಶ ಆಗಿದ್ದಳು

(ಇಲ್ಲಿಯವರೆಗೆ...) ಚಿಟ್ಟಿ ಎಲ್ಲರೂ ಬೆರಗಾಗುವ ಹಾಗೇ ಓದಿದಳು, ‘ಪರ್ವಾಗಿಲ್ವೆ ಚಿಟ್ಟಿಗೆ ಈಗ ತುಂಬಾ ಜವಾಬ್ದಾರಿ ಬಂದಿದೆ!’ ಅಂತ...

ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಸೈಕಲ್ ಜೊತೆಯಲ್ಲೇ ಬಿಡುಗಡೆಯನ್ನೂ ತಂದಿತ್ತು

(ಇಲ್ಲಿಯವರೆಗೆ) ಕೊಟ್ಟ ಮಾತಿಗೆ ಅಪ್ಪ ತಪ್ಪಲಿಲ್ಲ, ಅವಳ ಹುಟ್ಟುಹಬ್ಬದ ಹಿಂದಿನ ದಿನ ‘ಚಿಟ್ಟಿ ನಾಳೆ ಸೈಕಲ್ ತಂದುಬಿಡೋಣ’ ಅಂತ ಹೇಳಿದಾಗ...

ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ಚಿಟ್ಟಿಯ ಸೈಕಲ್ ಸವಾರಿ

(ಇಲ್ಲಿಯವರೆಗೆ) ಮನೆಯಲ್ಲಿ ಯಾರಿಗೂ ಮಾತಾಡುವುದು ಬೇಕಿರಲಿಲ್ಲ. ಅವಮಾನವೋ, ಸಿಟ್ಟೋ, ನಿರಾಸೆಯೋ ಒಂದೂ ಅರ್ಥವಾಗದ ಸ್ಥಿತಿ. ಚಿಟ್ಟಿ ಎಲ್ಲದಕ್ಕೂ...

0 ಪ್ರತಿಕ್ರಿಯೆಗಳು

Trackbacks/Pingbacks

  1. ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಚಿಟ್ಟಿ ಚಿಟ್ಟೆಯಾಗುತ್ತಿದ್ದಾಳೆ… « ಅವಧಿ / avadhi - [...] ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಚಿಟ್ಟಿ ಚಿಟ್ಟೆಯಾಗುತ್ತಿದ್ದಾಳೆ… September 10, 2013 by Avadhikannada (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This