ಪಿ ಸಾಯಿನಾಥ್ ನೆಪದಲ್ಲಿ..

ಗೆಳೆಯನಿಗೆ ಒಲಿದ ಪಿ ಸಾಯಿನಾಥ್ ಪ್ರಶಸ್ತಿ ಮೂಲಕ ಪತ್ರಿಕೋದ್ಯಮದತ್ತ ಸಣ್ಣದೊಂದು ನಿರೀಕ್ಷೆ!!!

ರಾಘವೇಂದ್ರ ತೆಕ್ಕಾರ್

ಲೇಖಾನುಭವ

ಹಿಂದಿ, ಒರಿಯಾ ಮತ್ತು ತೆಲುಗು ಭಾಷೆಗೆ ಒಲಿದ ಪಿ. ಸಾಯಿನಾಥ್ ಪ್ರಶಸ್ತಿ ಈ ಸಾರಿ ಕನ್ನಡಕ್ಕೆ ಲಭಿಸಿದೆ. ಕೃಷಿ ರಂಗದಲ್ಲಿ ಆಕ್ಟಿವಿಸಂ ಜೊತೆ ಜೊತೆಗೆ ಬರಹ ಮೂಲಕವಾಗಿ ಕೆಲಸ ಮಾಡುತ್ತಿರುವ ಗಾಯತ್ರಿ ಹಾಗೂ ಮಲ ಹೊರುವ ಪದ್ದತಿಯ ವಿರುದ್ದ ಕೆಲಸ ಮಾಡುತ್ತಿರುವ ಪತ್ರಕರ್ತ ಸಂಶೋಧಕ ಮಿತ್ರ ದಯಾನಂದ್ ಮಡಿಲಿಗೆ ಈ ಪ್ರಶಸ್ತಿ ಸಂದಿದೆ. ದಾಖಲೆ ಕಾನೂನಿನ ಮೂಲಕ ಸತ್ತೆ ಹೋಗಿದೆ ಎಂದು ತೋರಿಸಲ್ಪಟ್ಟ ಮಲ ಹೊರುವ ಪದ್ದತಿಯು ಇನ್ನೂ ಜೀವಂತವಿರುವದನ್ನು ತೋರಿಸಿಕೊಟ್ಟ ದಯಾನಂದ್ ಹಾಗೂ ಬಳಗದವರ ಕಾರ್ಯವೈಖರಿಯನ್ನು ಹತ್ತಿರದಲ್ಲೆ ಬಲ್ಲೆನಾದ್ದುದ್ದರಿಂದ ಪಿ. ಸಾಯಿನಾಥ್ ಪ್ರಶಸ್ತಿಯ ಆಶಯಗಳಿಗೆ ಪೂರಕವಾದ ವ್ಯಕ್ತಿಗಳಿವರು ಅನ್ನುವದರಲ್ಲಿ ಎರಡು ಮಾತಿಲ್ಲ. ನಾನು ದೂರದಿಂದಲೆ ನೋಡಿ ಗೌರವಿಸುತಿದ್ದ ಮೇರು ವ್ಯಕ್ತಿ ದೇವನೂರು ಮಹಾದೇವ್ ಅವರು ಈ ಪ್ರಶಸ್ತಿಯನ್ನು ಕೊಡಮಾಡಿದ್ದು ಕೂಡ ಹೆಮ್ಮೆಯ ವಿಷಯವೆ ಸರಿ.

“ಪುಸ್ತಕ ಕೊಳ್ಳಲು ಬೇಕಾದ 300 ರೂ ಇಲ್ಲದ ಜರ್ನಲಿಸಂ ಕಲಿಕೆಯ ದಿನಗಳಲ್ಲಿ ರೂಮಿಂದ ರೂಮಿಗೆ ಸರಿದಾಡುತಿದ್ದ ಹಾಗೂ ಕೆಲವೋಮ್ಮೆ ಕದ್ದು ಓದುತಿದ್ದ ಪುಸ್ತಕ ಅಂದ್ರೆ ಪಿ. ಸಾಯಿನಾಥ್ ಅವರ “Everybody loves a good drought ” ಪುಸ್ತಕ. ಸುಮಾರು ೩೪ ಬಾರಿ ಮುದ್ರಣಗೊಂಡು ಹಲವಾರು ಭಾಷೆಗೆ ಅನುವಾದಗೊಂಡಿರುವ ಈ ಪುಸ್ತಕ ಪತ್ರಿಕೋದ್ಯಮ ಮಂದಿಗೆ ದಾರಿ ತೋರುವ ಒಂದು ಪಠ್ಯ ಅಂದರೆ ತಪ್ಪಿಲ್ಲ, ಜರ್ನಲಿಷ್ಟ್ ಅಂತಾದರೆ ಪಿ ಸಾಯಿನಾಥ್ ತರದಲ್ಲಿ ಮುಂದುವರಿಯಬೇಕು”, ದಯಾ ಯಾವತ್ತೂ ಹೇಳುತಿದ್ದ ಮಾತಿದು.ತನ್ನ ಮುಂದಿನ ನಡೆಯನ್ನೂ ಆಯ್ದುಕೊಂಡಿದ್ದು ಈ ನಿಟ್ಟಿನಲ್ಲೆ, ಬಹುಶಃ ತನ್ನ ಮಾರ್ಗದರ್ಶಿಯ ಹೆಸರಲ್ಲೆ ಇರುವ ತನ್ನ ಮಾರ್ಗದರ್ಶಿ ಪುಸ್ತಕದಿಂದಾಗಿ ಬಂದ ದುಡ್ಡಲ್ಲೆ ಹುಟ್ಟಿರುವ ಪಿ. ಸಾಯಿನಾಥ್ ಪ್ರಶಸ್ತಿ ತನಗೆ ಮುಂದೊಂದು ದಿನ ಸಿಗಲಿದೆಯೆಂದು ನಿರೀಕ್ಷೆ ಮಾಡಿರಲಾರರು.ಇಂತಿರಬೇಕಾದರೂ ಹುಡುಕಿಕೊಂಡು ಬಂದ ಪ್ರಶಸ್ತಿಯನ್ನ ಪಡೆಯುವ ಗೆಳೆಯನ ಖುಷಿಯಲ್ಲಿ ನಾವೂ ಭಾಗಿಯಾಗಿರಬೇಕಿದ್ದದ್ದೂ ಕರ್ತವ್ಯ ಅನಿಸಿಯೆ ಜುಲೈ 1 ಪತ್ರಿಕೋದ್ಯಮ ದಿನದ ಆ ಸುಂದರ ಕಾರ್ಯಕ್ರಮದಲ್ಲಿ ನಾವೂ ಭಾಗಿಯಾಗಿದ್ದೂ ಹಾಗೂ ದೇವನೂರು ಮಹಾದೇವ್ ಹಾಗೂ ಪಿ ಸಾಯಿನಾಥ್ ಅವರಂತಹ ಲೆಜೆಂಡ್ ಗಳನ್ನು ಕಣ್ತುಂಬಿಕೊಂಡಿದ್ದು.

ಯಾವುದೋ ಒಂದು ಮಾಧ್ಯಮ ಸಂಸ್ಥೆಗೆ ಸೇರಿಕೊಂಡು ದುಡಿದು ಸಂಪಾದನೆ ಮಾಡುವಂತದ್ದು ಅತ್ಯಂತ ಸೇಫ್ ವೇ ಫಾರ್ ಲೀಡಿಂಗ್ ಲೈಫ್ ಅಂತ ತಿಳುಕೊಂಡು ಹೆಜ್ಜೆ ಇಡುತ್ತಿರುವ ಪತ್ರಕರ್ತರ ಬಳಗಾನೆ ದೊಡ್ಡದು. ಹೀಗಿರಬೇಕಾದರೆ ಪ್ರೀ ಲಾನ್ಸ್ ಜರ್ನಲಿಸಂ ಮೂಲಕ ತಾನು ಮಾಡ ಹೊರಟಿರುವ ಕಾರ್ಯಗಳಿಗೆ ಎಲ್ಲೂ ತೊಡಕಾಗದಂತೆ ಹೇಳಬೇಕಾದ ಮಾತು ಕಟ್ಟುಪಾಡುಗಳಿಗೊಳಪಟ್ಟು ಮರೆಯಾಗಬಾರದೆಂದ ಸ್ಪಷ್ಟತೆಯೊಳಗೆ ಹಣದ ಮೋಹವ ಬದಿಗಿಟ್ಟು ಸಾಮಾಜಿಕ ದೃಷ್ಟಿಕೋನದೊಂದಿಗೆ ಆಕ್ಟಿವಿಸಂ ಜೊತೆ ಜೊತೆಗೆ ಕೆಲಸ ಮಾಡುವ ಪತ್ರಕರ್ತರ ಬಳಗ ಬೆರಳೆಣಿಕೆಯಷ್ಟು.ದಯಾ ಆರಿಸಿಕೊಂಡಿದ್ದು ಪ್ರೀ ಲಾನ್ಸ್ ಜರ್ನಲಿಸಂ ಅನ್ನು. ಪಿ ಸಾಯಿನಾಥ್ ಹೇಳುವಂತೆ ಅವರೂ ಕೂಡ ೧೩ ವರುಷ ಮಾಡಿದ್ದು ಪ್ರೀ ಲಾನ್ಸ್ ಜರ್ನಲಿಸಂನನ್ನೆ.ಬಹುಶಃ ಇವತ್ತು ಕೋರ್ಟ್ ಸರ್ಕಾರಕ್ಕೆ ಸಫಾಯಿ ಕರ್ಮಾಚಾರಿ ವಿಷಯದಲ್ಲಿ ಅಧಿಕಾರಿ ಬಳಗವನ್ನು ಮ್ಯಾನ್ ಹೋಲ್ಗಳ ಒಳಗಿಳಿದು ಚಿತ್ರಿಕರಿಸಿ ಅಂತ ಛೀಮಾರಿ ಹಾಕುತ್ತಿರುವದರ ಹಿಂದೆ ದಯಾ ಮತ್ತು ಅವರ ಬಳಗದವರ ಶ್ರಮ ದೊಡ್ಡದು.ತಾರ್ಕಿಕವಾಗಿ ಅಂತ್ಯ ಕಾಣುವವರೆಗೆ ನಾವೂ ಈ ಬಗ್ಗೆ ಮುಂದುವರಿಯಲೆ ಬೇಕಾಗಿದೆ ರಾಘೂ, ಯಾಕೋ ನನ್ನ ಸುಖ ಸಂತೋಷಗಳಿಗಾಗಿ ಆ ಜನಗಳ ಕಷ್ಟಗಳನ್ನೂ ಅವರುಗಳ ಜೊತೆಗೆ ಇದ್ದೂ ನಮ್ಮವ ಅನಿಸಿಕೊಂಡ ಮೇಲೆ ಬಿಟ್ಟು ಕೊಡಲಾಗುತ್ತಿಲ್ಲ. ಕನಿಷ್ಟ ೩ ರಿಂದ ೪ ವರುಷ ನಾನು ನನ್ನ ಬಳಗ ಈ ನಿಟ್ಟಲ್ಲಿ ಕೆಲಸ ಮಾಡಲೇಬೇಕು ಅನ್ನುವ ದಯಾ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಪ್ರತಿಕ್ರಿಯೆಗಂತ ಉಳಿಯೋದು ಒಂದು ಮೆಚ್ಚುಗೆಯ ನೋಟವಷ್ಟೆ. ಈ ಪ್ರಶಸ್ತಿ ನನ್ನ ಟೀಂ ಗೆ ಸಂದಿದ ಗೌರವ ಅನ್ನುತ್ತಲೆ ನನ್ನ ಜವಬ್ದಾರಿ ಬದ್ದತೆ ಕಾಯ್ದುಕೊಳ್ಳುವಲ್ಲಿ ಈ ಪ್ರಶಸ್ತಿ ಸಹಕಾರಿಯಾಗಲಿದೆ ಅನ್ನುವ ದಯಾ ಮಾತುಗಳಲ್ಲಿ ನನಗೆ ಕಾಣುವದು ಸಂತಸಕ್ಕಿಂತಲೂ ಮಿಗಿಲಾದದ್ದೂ ಪಿ ಸಾಯಿನಾಥ್ ಅವರೆಡೆಗಿರುವ ಗೌರವದ ಗುರು ಸಮರ್ಪಣಾ ಭಾವ ಹಾಗೂ ಸರಳತೆ. ಸಂಪಾದಕೀಯ, ವರ್ತಮಾನದಂತ ಬ್ಲಾಗ್ ಮೂಲಕ ಸಣ್ಣದಾಗಿ ತೊಡಗಿಕೊಂಡು ಎಲ್ಲಾ ಮಹತ್ತರ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಕ್ಕೆ ತನ್ನ ಕೆಲಸ ಕಾರ್ಯಗಳನ್ನೂ ತಲುಪಿಸುವಲ್ಲಿ ದಯಾ ಯಶಸ್ವಿಯಾಗಿದ್ದು ನಮಗೆಲ್ಲರೀಗೂ ಗೊತ್ತೆ ಇರುವಂತದ್ದೂ ಅಷ್ಟೇ ಏಕೆ ಪೇಸ್ ಬುಕ್ ಅಂತ ಸಾಮಾಜಿಕ ತಾಣವನ್ನು ಮಾಧ್ಯಮವಾಗಿ ಬಳಸಿಕೊಂಡು CNN-IBN ಅಂತ ರಾಷ್ಟ್ರೀಯಾ ಛಾನಲ್ಗಳಿಗೆ ಈ ಮಲಹೊರುವ ಪದ್ದತಿ ಇಶ್ಯೂ ಅನ್ನು ತೆಗೆದುಕೊಂಡು ಹೋಗಿ ಚರ್ಚೆಯನ್ನು ಹುಟ್ಟು ಹಾಕಿದವರೂ ದಯಾ. ಕೆಂಡಸಂಪಿಗೆ ಎಂಬ ಬ್ಲಾಗಿನಲ್ಲಿ ರಸ್ತೆ ನಕ್ಷತ್ರ ಅನ್ನೋ ಕಾಲಂ ಮೂಲಕ ಹಲವು ಲೈಫುಗಳನ್ನು ಕಟ್ಟಿ ಕೊಟ್ಟ ದಯಾ, ನಮ್ಮನ್ನೆ ನಾಚಿಸುವಂತೆ ಮಾಡಿದ್ದೂ ನಾವೆಂತ ಸಮಾಜದಲ್ಲಿದ್ದೇವೆ ಅನ್ನುವ ಯೋಚನೆಗೆ ತೆರೆದಿಟ್ಟಿದ್ದು ಹಳೆಯ ಮಾತು. ಪ್ರಶಸ್ತಿ ದಿನದ ಸಂತೋಷಕ್ಕೆ ಉಡುಗೋರೆ ಅಂತಲೋ ಏನೋ ಅದೆ “ರಸ್ತೆ ನಕ್ಷತ್ರ” ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಹೃದಯರೊಬ್ಬರು ಕೇಳಿಕೊಂಡಿದ್ದು ದಯಾ ಸಮ್ಮತಿ ಸೂಚಿಸಿದ್ದು ನಡೆಯಿತು.ಗೆಳೆಯರಾಗಿ ನಾವುಗಳು ಖುಷಿಪಡಲು ಇಷ್ಟಿಷ್ಟೆ ಹಿಡಿಯಾದ ವಿಷಯಗಳೆ ಸಾಕು.ಯಾವನಿಗೊತ್ತು ರಸ್ತೆ ನಕ್ಷತ್ರ ಬದುಕುಗಳ ತೆರೆದಿಡುವ ದಯಾರ ಹಿಂದಿರುವ ಕಳಕಳಿಯು ಇನ್ನೆಷ್ಟು ಬದುಕುಗಳಿಗೆ ಆಸರೆಯಾಗಬಲ್ಲದೋ ಏನೊ?. ಇವೆಲ್ಲವನ್ನೂ ಹೇಳಿದ ಕಾರಣ ಇಷ್ಟೆ, ದಯಾ ಒಬ್ಬ ಪತ್ರಕರ್ತನಾಗಿ ತನ್ನ ಆಶಯಗಳಿಗೆ ಮಾಧ್ಯಮವನ್ನು ಬಳಸಿಕೊಂಡ ರೀತಿ ಅಚ್ಚರಿಪಡಿಸುವಂತದ್ದೂ.ಯಾವುದೇ ಮಾಧ್ಯಮವಾಗಲಿ ಬಳಸಿಕೊಳ್ಳುವಂತೆ ಬಳಸಿಕೊಂಡರೆ ವಿಷಯ ತಲುಪಬೇಕಾದ್ದಲ್ಲಿ ತಲುಪುತ್ತದೆ ಅನ್ನುವದನ್ನು ಮೇಲಿನೆಲ್ಲವುದರಿಂದ ನಾನು ದಯಾರನ್ನ ನೋಡಿ ತಿಳಿದುಕೊಂಡೆ ಅನ್ನುವದು ಸತ್ಯ ಮಾಧ್ಯಮ ಚೌಕಟ್ಟಿನೊಳಗೆ ಇದ್ದುಕೊಂಡು ಹಲವು ಉತ್ತಮ ಕೆಲಸ ಮಾಡುವ ಪತ್ರಕರ್ತರೂ ಇಲ್ಲವೆಂದಲ್ಲ.ಆದರೆ ಮಾಧ್ಯಮ ಸಂಸ್ಥೆಗೆ ಈ ಬಗ್ಗೆ ಎಷ್ಟೂ ಕಾಳಾಜಿ ಇರುತ್ತೆ ಅನ್ನುವದೂ, ವರುಷಾನುಗಟ್ಟಲೆ ನ್ಯಾಯಾಲಯ ಸುತ್ತಾಟ ನ್ಯಾಯ ಕೊಡಿಸುವಲ್ಲಿನ ಬದ್ಧತೆಯನ್ನೂ ಈ ಸಂಸ್ಥೆಗಳೂ ಎಷ್ಟರ ಮಟ್ಟಿಗೆ ಹೊಂದಿವೆ ಎಂಬುದರ ಮೇಲೆ ಪತ್ರಕರ್ತರ ಈ ತೆರನಾದ ಕೆಲಸ ನಿರ್ಧಾರಗೊಳ್ಳುತ್ತದೆ. ಈ ತರದ ಸಂಸ್ಥೆಗಳ ಸಂಖ್ಯೆಯು ಹಾಗೂ ಈ ತರನಾದ ಮನೋಭಾವ ಹೊಂದಿರುವ ಪತ್ರಕರ್ತರ ಬಳಗನೂ ವಿರಳವಾಗುತ್ತಿದೆ ಅನ್ನುವದೂ ಸತ್ಯ.ಈ ರೀತಿಯಲ್ಲಿ ಬದಲಾವಣೆಯನ್ನು ನಿರಿಕ್ಷಿಸಿದಾಗ ದಯಾ ಮೂಲಕ, ಗಾಯತ್ರಿ ಅವರ ಮೂಲಕ ಕನ್ನಡದ ಮೊತ್ತ ಮೊದಲ ಪಿ ಸಾಯಿನಾಥ್ ಪ್ರಶಸ್ತಿ ಮೂಲಕ ಕೊಂಚವಾದರೂ ಬದಲಾವಣೆಯತ್ತ ಇವುಗಳು ಸ್ಪೂರ್ತಿಯಾಗಬಲ್ಲುದೇನೊ?ಈ ರೀತಿಯ ಒಂದು ಆಶಾವಾದವನ್ನು ಇಟ್ಟು ಕೊಳ್ಳಬಹುದೇನೊ!!!. ಬಹುಶಃ ಪಿ. ಸಾಯಿನಾಥ್ ಪ್ರಶಸ್ತಿಯಲ್ಲದೆ ಬೇರಾವುದೇ ಮೀಡಿಯಾ ಪ್ರಶಸ್ತಿ ಬಗ್ಗೆ ಮೇಲಿನ ಆಶಾವಾದವನ್ನು ತೋರ್ಪಡಿಸಿದ್ದರೆ ಅಭಾಸವೆನಿಸುತಿತ್ತು. ಆದರೆ ಪಿ. ಸಾಯಿನಾಥ್ ಪತ್ರಿಕೋದ್ಯಮದ ಮಂದಿಯ ದಾರಿದೀಪ.ಆ ಪ್ರಶಸ್ತಿಗೆ ಸಲ್ಲುವ ಗೌರವ ಅಂತದ್ದೂ ಅನ್ನುವದೂ ನಮ್ಮೆಲ್ಲರಿಗೂ ತಿಳಿದ ವಿಚಾರ. ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ಈ ಪ್ರಶಸ್ತಿಯು ಪ್ರತಿ ವರುಷ ಸಿಗುವಂತೆ ಕನ್ನಡಕ್ಕೆ ಅನುವಾದಗೊಂಡಿರುವ “Everybody loves a good drought “(ಬರ ಅಂದ್ರೆ ಎಲ್ಲಾರೀಗೂ ಇಷ್ಟ)ಪ್ರತಿಗೆ ಸಾಯಿನಾಥ್ ಅವರಿಗೆ ಕೊಡಬೇಕಾಗಿದ್ದ ಗೌರವಧನದ ಮೂಲಕ ಕರ್ನಾಟಕದಲ್ಲಿ ಸ್ಥಾಪಿತಗೊಳ್ಳುತ್ತಿದೆ ಅಂದಿದ್ದು ಕನ್ನಡದ ಪತ್ರಿಕೋದ್ಯಮಕ್ಕೆ ಒಂದು ಟಾನಿಕ್ ಆಗಿ ಒದಗಲಿ. ಬಡವರ ಹಸಿವೂ, ಕಷ್ಟ, ಸಾಮಾಜಿಕ ದೃಷ್ಟಿಕೋನದಡಿಯಲ್ಲಿ ಎಲ್ಲಾ ಪತ್ರಕರ್ತರೂ ತಮ್ಮನ್ನೂ ತಾವೂ ತೊಡಗಿಸಿಕೊಳ್ಳುವಲ್ಲಿ ಇದು ಸಹಕಾರಿಯಾಗಲೆಂದು ಆಶಿಸೋಣ.  ]]>

‍ಲೇಖಕರು G

July 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾಧ್ಯಮಕ್ಕೆ ಮರ್ಯಾದೆ ಇದೆ ಅಲ್ಲವೇ.. ಸಾವಿಗೆ ಘನತೆ ಇದೆ ಅಲ್ಲವೇ..

ಮಾತಿನ ಶೈಲಿ, ಪ್ರಸ್ತುತಪಡಿಸುವಿಕೆ,  ನಿರೂಪಣೆ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿದವರು. ನಿರೂಪಣೆ ಕುರಿತ ಇವರ ಕೃತಿ 'ಮಾತಲ್ಲ ಗೀತೆ'.  ಕರೋನ...

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಪ್ರಧಾನಮಂತ್ರಿ ಎಮ್ಮೆ ಯೋಜನೆ: ಪಿ. ಸಾಯಿನಾಥ್ ಹೇಳಿದ ಕತೆ.

ಕೇಸರಿ ಹರವೂ  ಮಹಾರಾಷ್ಟ್ರದ ವಿದರ್ಭ ಜಿಲ್ಲೆ ಬಹಳ ಮುಂಚಿನಿಂದಲೂ ಹತ್ತಿ ಬೆಳೆಗೆ ಹೆಸರುವಾಸಿಯಾಗಿತ್ತು. ಅಲ್ಲಿಯ ರೈತರು ಹತ್ತಿ ಬೆಳೆಯನ್ನು...

5 ಪ್ರತಿಕ್ರಿಯೆಗಳು

 1. Nataraju S M

  ಗೆಳೆಯ ದಯಾನಂದ್ ಕುರಿತು ಅವಧಿಯಲ್ಲಿ ಪ್ರಕಟವಾಗಿರುವ ಎರಡನೇ ಬರಹವಿದು. ಈ ಲೇಖನ ಓದಿ ಖುಷಿಯಾಯಿತು. ಆದರೆ ಕೌಂಟರ್ ಮೀಡಿಯ ಪ್ರಶಸ್ತಿಯ ಮತ್ತೊಬ್ಬ ವಿಜೇತರು ಗಾಯತ್ರಿ ಮೇಡಂ. ಅವರ ಕುರಿತು ಸಹ ಯಾರಾದರು ಒಂದು ಲೇಖನ ಬರೆದಿದ್ದರೆ ಚೆನ್ನಾಗಿರುತ್ತಿತ್ತು..

  ಪ್ರತಿಕ್ರಿಯೆ
  • prasad raxidi

   ನೀವೆನ್ನುವುದು ನಿಜ ದಯಾ ಅವರಿಗೆ ಪ್ರಶಸ್ತಿ ಬಂದದ್ದು ನಮಗೆಲ್ಲಾ ಖುಷಿ ಹೆಮ್ಮೆ ಎರಡನ್ನೂ ತಂದಿದೆ.. ಪತ್ರಿಕೆಗಳಲ್ಲೂ ವರದಿ ಮಾಡುವಾಗ ಗಾಯತ್ರಿ ಅವರ ಹೆಸರು ಹೆಡ್ ಲೈನ್ ನಲ್ಲಿ ದಯಾ ಜೊತೆಯಲ್ಲಿ ಬಂದದ್ದು ಕಡಿಮೆ (ನಾನು ನೋಡಿದ್ದು ಕಡಿಮೆ ಇರಬಹುದು)ಆದರೆ ಹಾಗಾಗಬಾರದೆಂದು ನನ್ನ ಅನಿಸಿಕೆ.

   ಪ್ರತಿಕ್ರಿಯೆ
 2. ರಾಘವೇಂದ್ರ ತೆಕ್ಕಾರ್

  ರಕ್ಷಿದಿ ಸಾರ್ ನೀವು ಹೇಳುವದು ನಿಜ. ನನ್ನ ಮಟ್ಟಿಗೆ ಸೀಮಿತವಾಗಿ ನಾನು ಹೇಳೋದಾದರೆ ಗಾಯತ್ರಿ ಅವರನ್ನೂ ನಾನು ನೋಡಿದ್ದೆ ಮೊನ್ನೆಯ ಕಾರ್ಯಕ್ರಮದಲ್ಲಿ.ಅವರ ಒಂದರ್ಧ ಘಂಟೆಯ ಮಾತುಗಳು ಅವರ ಬಗ್ಗೆ ಅಲ್ಪ ವಿಚಾರಗಳನ್ನಷ್ಟೆ ತಿಳಿಯುವಂತಿತ್ತು.ಕಾರ್ಯಕ್ರಮದ ನಿರೂಪಕರೂ ಹೇಳಿದಂತೆ ತಿಳಕೊಂಡಿದ್ದೆಂದರೆ ಗಾಯತ್ರಿ ಅವರ ಬಗ್ಗೆ ಹೇಳ ಹೊರಟರೆ ಒಂದು ಇಡಿ ದಿನ ಮೀಸಲಿಡಬೇಕೆಂದು.ಸಾವಯವ ಕೃಷಿ ಮೂಲಕ ಹರಪನ ಹಳ್ಳಿ ಮುತ್ತಿತರ ಕಡೆಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ ಅಂತಲೂ ತಿಳಿದುಕೊಂಡನಷ್ಟೆ.ಗಾಯತ್ರಿ ಅವರ ಬಗ್ಗೆ ಹಾಗೂ ಈ ರೀತಿಯಲ್ಲಿ ಕೆಲಸ ಮಾಡುವ ಮಂದಿಯನ್ನೂ ತಿಳಿದುಕೊಳ್ಳುವ ಕುತೂಹಲ ಮತ್ತು ಆಸಕ್ತಿ ಎರಡನ್ನೂ ಈ ಕಾರ್ಯಕ್ರಮ ನನಗೆ ಕೊಟ್ಟಿದೆ ಅಂದರೆ ತಪ್ಪಿಲ್ಲ. ಏನೆ ಆದರೂ ಗಾಯತ್ರಿ ಅವರ ಬಗ್ಗೆ ಪೂರ್ಣ ಅರಿವಿಲ್ಲದೆ ಬರೆಯುವದು ಸರಿಯಲ್ಲವೆಂದು ನಾ ಬರೆದಿಲ್ಲ,ಅಷ್ಟೆ ವಿನಹಃ ಮತ್ಯಾವೂದೆ ಕಾರಣದಿಂದಲ್ಲ. ಆದರೆ ದಯಾ ವಿಷಯ ಹಾಗಲ್ಲ ನಾ ಸಮೀಪದಿಂದ ಬಲ್ಲೆನಾದ್ದುದ್ದರಿಂದ ಆ ಕೆಲ ವಿಷಯಗಳನ್ನಷ್ಟೆ ದಾಖಲಿಸಿದೆ. ಅಷ್ಟಕ್ಕೂ ಮೇಲಿನ ಲೇಖನದ ಆಶಯ ಇಂತಹ ಪತ್ರಿಕೋದ್ಯಮ ಮಂದಿ ಬೆಳೆಯಲಿ ಅನ್ನುವದೆ ಆಗಿರುವದರಿಂದ ಇದಕ್ಕೆ ಪೂರಕವಾಗಿ ದಯಾರ ಬಗ್ಗೆ ಕೆಲ ವಿಚಾರಗಳನ್ನು ಬರೆದೆ.

  ಪ್ರತಿಕ್ರಿಯೆ
  • prasad raxidi

   ಇಲ್ಲ ಇದು ನಿಮ್ಮ ಬಗೆಗಿನ ಆಕ್ಷೇಪ ಖಂಡಿತ ಅಲ್ಲ, ನಿಮ್ಮ ಲೇಖನ ನನಗೆ ತುಂಬ ಇಷ್ಟವಾಯಿತು. ದಯಾ ಬಗ್ಗೆ ಕೂಡಾ ನನಗೆ ಗೊತ್ತು. ನಾನು ಒಂದೆರಡು ಪತ್ರಿಕೆಗಳಲ್ಲಿ ಬಂದ ವರದಿಯನ್ನು ನೋಡಿ ಹೀಗೆ ಹೇಳಿದೆ ಅಷ್ಟೆ. ಎಲ್ಲ ಕಡೆಯೂ ಮಹಿಳೆ ಎರಡನೆಯವಳಾಗಿಯೇ ಉಳಿದುಬಿಡಬಾರದೆಂಬ ಅನಿಸಿಕೆಯಷ್ಟೇ ನನ್ನದು..ಹಾಗೇ ನಿಮ್ಮಂತ ಯುವಕರ ಆಸಕ್ತಿಗಳೂ ನಾಳಿನ ಬಗ್ಗೆ ಭರವಸೆಯನ್ನು ಮೂಡಿಸುತ್ತವೆ…

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: