ಪುಟ್ಟಾರಿ ಆನೆಯೊಂದಿಗೆ…

ತಮ್ಮಣ್ಣಬೀಗಾರ

ಪುಟ್ಟಾರಿ ಆನೆ ಪುಟ್ ಪುಟ್’

ಮಕ್ಕಳಿಗಾಗಿ ಕಾದಂಬರಿ.

ಲೇಖಕರು: ಡಾ.ಆನಂದ ಪಾಟೀಲ

ಮೊದಲ ಮುದ್ರಣ: 2020

ಪುಟಗಳು: 388

ಬೆಲೆ: 500ರೂ.

ಪ್ರಕಾಶಕರು: ಅಭಿನವ

ತರಗತಿಯಲ್ಲಿ ಕುಳಿತಿರುವುದು… ಆದರೆ ಪಾಠವನ್ನು ಗಮನಿಸದೆ ಯಾವುದೋ ಹೂವಿನ ತೋಟಕ್ಕೋ, ಮದುವೆಯ ಊಟಕ್ಕೋ ಅಥವಾ ಗೆಳೆಯರೊಂದಿಗೆ ಆಟಕ್ಕೋ ಹೋಗಿಬಿಡುವುದು… ಅಲ್ಲಿಯ ಸಂಗತಿಯಲ್ಲಿ ಒಂದಾಗುತ್ತ ಮೈಮರೆತುಬಿಡುವುದು ಎಲ್ಲ ಮಕ್ಕಳಿದ್ದಾಗಿನ ಸಹಜ ಸಂಗತಿಗಳೇ.

ಆದರೆ ಪಾಠದ ತನ್ಮಯತೆ ಹಾಗೂ ಹೊರಲೋಕದ ಸುತ್ತಾಟ ಎಲ್ಲ ಒಟ್ಟೊಟ್ಟಿಗೆ ಆಗುವಂತಿದ್ದರೆ… ಮಕ್ಕಳ ಖುಷಿ ಇನ್ನೂ ಹೆಚ್ಚಾಗುತ್ತದೆ. ಯಾರಿಗೂ ಕಾಣದೆ ಸದಾ ನಮ್ಮೊಂದಿಗೇ ಇರುವ, ನಮ್ಮ ಎಲ್ಲ ಗ್ರಹಿಕೆಗಳನ್ನು ಗ್ರಹಿಸುತ್ತ ಸ್ನೇಹಿತನಂತೆ, ತಾಯಿಯಂತೆ ಅದಕ್ಕೆ ಉತ್ತರ ನೀಡುವ ಸಂಗಾತಿ ಎಲ್ಲಿ ಸಿಗಲು ಸಾಧ್ಯ…!

ಕಲ್ಪನೆಯೇ ಒಂದು ರೀತಿ ಖುಷಿ ಕೊಡುತ್ತದೆ. ಶಾಲೆಯ ವಾತಾವರಣ, ಅಜ್ಜಿಯ ಎಡಬಿಡದ ನೆನಪು, ಅಮ್ಮನ ಪ್ರೀತಿ, ಅಪ್ಪ ಹಾಗೂ ಪ್ರೀತಿಯ ರಂಜು ಚಿಕ್ಕಪ್ಪ, ಇಲಿ ಗುಬ್ಬಿ ಕಾಗೆ ಗುಜ್ಜಾರಿಯಂತಹ ಪಾತ್ರಗಳೊಂದಿಗೆ ‘ಪುಟ್ಟ್ಟಾರಿ ಆನೆ ಪುಟ್ ಪುಟ್’ ಅಂತ ಪುಟ್ಟ ಬಾಲಕಿಯೊಂದಿಗೆ ಸೇರಿಕೊಂಡು ನಮ್ಮನ್ನೆಲ್ಲ ಆಪ್ತ ಲೋಕಕ್ಕೆ ಕೊಂಡೊಯ್ಯುವುದು “ಪುಟ್ಟಾರಿ ಆನೆ ಪುಟ್ ಪುಟ್” ಮಕ್ಕಳ ಕಾದಂಬರಿಯಲ್ಲಿ ಸಾಧ್ಯವಾಗಿದೆ.

ಡಾ.ಆನಂದ ಪಾಟೀಲರು ಕನ್ನಡದ ಮಕ್ಕಳಿಗೆ ಹೊಸ ಉಣಿಸನ್ನು ನೀಡುತ್ತ ಬಂದವರು. ಇಪ್ಪತ್ತೋಂದಕ್ಕೂ ಹೆಚ್ಚು ವರ್ಷಗಳಿಂದ ‘ಸಂಧ್ಯಾ ಸಾಹಿತ್ಯ ವೇದಿಕೆ’ ಹುಟ್ಟು ಹಾಕಿ ಗೆಳೆಯರೊಂದಿಗೆ ಸೇರಿಕೊಂಡು ಮಕ್ಕಳ ಸಾಹಿತ್ಯದ ಎಲ್ಲ ಸಂಗತಿಗಳ ಕುರಿತು ತಜ್ಞರೊಂದಿಗೆ ಮಾತುಕತೆ, ಹೊಸ ಪುಸ್ತಕಗಳ ಅವಲೋಕನ, ಮಕ್ಕಳ ಓದು ಹಾಗೂ ಸಂವಾದವನ್ನೆಲ್ಲ ಆಗಿಸುತ್ತ ಅವಿಶ್ರಾಂತರಾದವರು.

ಕನ್ನಡ ಮಕ್ಕಳ ಸಾಹಿತ್ಯದ ಹೊಸ ಹೊಳಹುಗಳನ್ನು ಗುರುತಿಸಿ ಬೆನ್ನು ತಟ್ಟಿದವರು. ಜಗತ್ತಿನ ಹೆಚ್ಚಾಗಿ ಇಂಗ್ಲೀಷ ಹಿಂದಿ ಮಕ್ಕಳ ಸಾಹಿತ್ಯದ ಬಹು ಮುಖ್ಯ ಸಂಗತಿಗಳನ್ನು ಕನ್ನಡದ ಆಸಕ್ತರಿಗೆ ಹಂಚಿದವರು ಮತ್ತು ಕನ್ನಡದ ಸತ್ವವನ್ನು ದೇಶದುದ್ದಕ್ಕೂ ಬಿತ್ತಲು ಪ್ರಯತ್ನಿಸುತ್ತಿರುವವರು. ಅವರ ‘ಪುಟ್ಟಾರಿ ಆನೆ ಪುಟ್ ಪುಟ್’ ಮಕ್ಕಳ ಕಾದಂಬರಿ ಅಭಿನವ ಪ್ರಕಾಶನದವರು ಪ್ರಕಟಿಸಿದ್ದಾರೆ.

ಅಭಿನವ ಹಾಗೂ ಸಂಧ್ಯಾದವರು ಸೇರಿ ರೂಪಿಸಿದ ‘ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ ಸುಗ್ಗಿ’ ಮಾಲಿಕೆಯಲ್ಲಿ ಇದು ಹತ್ತನೆಯದು. ಕನ್ನಡದ ಮಕ್ಕಳಿಗೆ ದೀರ್ಘ ಹೊಸ ಓದನ್ನು ಈ ಮಾಲಿಕೆಯ ಮೂಲಕ ಆಗು ಮಾಡಿದ ಅಭಿನವ, ಸಂಧ್ಯಾ ಹಾಗೂ ಕಾದಂಬರಿಯ ಲೇಖಕರು ಮಕ್ಕಳ ಪ್ರೀತಿಯ ಖುಷಿಯಲ್ಲಿ ಮಿಂದಿದ್ದಾರೆ.

ಪುಟ್ಟಾರಿ ಆನೆ… ಕಾದಂಬರಿ ೩೮೮ ಪುಟಗಳಷ್ಟು ವಿಸ್ತಾರವಾಗಿದೆ. ಇಂಗ್ಲೀಷ ಸಾಹಿತ್ಯ ಓದುವ ಮಕ್ಕಳಿಗೆ ಇಂತಹ ವಿಸ್ತಾರ ಓದು ಹೊಸದಲ್ಲವಾದರೂ ಭಾರತೀಯ ಭಾಷೆಗಳಲ್ಲಿ ಹೊಸದೆನ್ನಬಹುದು. ಕನ್ನಡದಲ್ಲಿ ಇದೊಂದು ಹೊಸ ಪ್ರಯೋಗ ಮತ್ತು ಹೆಮ್ಮೆ.

ರೈಲ್ವೆ ಪ್ರಯಾಣದೊಂದಿಗೆ ಹುಟ್ಟಿಕೊಳ್ಳುವ ಸಂಗತಿಯೇ ಈ ವಿಸೃತ ಕಥೆಗೆ ಕಾರಣ ಎಂದು ಪಾಟೀಲರು ಹೇಳಿದ್ದಾರೆ. ಲೇಖಕರು ರೈಲ್ವೆಯಲ್ಲಿ ಸಿಗುವ ಹುಡುಗಿಯೊಂದಿಗೆ ಮಾತಿಗಿಳಿಯುತ್ತ ಅವಳಲ್ಲಿರುವ ಪುಟ್ಟ ಆನೆಯ ಗೊಂಬೆಯನ್ನು ಕಾಣುತ್ತಾರೆ. ಆ ಕುರಿತು ಮಾತುಕಥೆ ನಡೆಯುತ್ತದೆ. ಹುಡುಗಿಯು ಆ ಆನೆಯ ಕುರಿತಾಗಿ ಹೊಂದಿರುವ ಪ್ರೀತಿ ಹಾಗೂ ತಾದಾತ್ಮತೆ ಲೇಖಕರಲ್ಲಿ ಕಾದಂಬರಿ ಮೊಳಕೆಯೊಡೆಯುವಂತಾಗುತ್ತದೆ.

ಅಜ್ಜಿ ಸಾಯುವ ಮೊದಲು ಯಾರಿಗೂ ತಿಳಿಯದಂತೆ ಪುಟ್ಟ ಬೆಳ್ಳಿಯ ಡಬ್ಬದಲ್ಲಿದ್ದ ಪುಟ್ಟಾರಿ ಆನೆಯನ್ನು ಪುಟ್ಟಿಗೆ ನೀಡಿರುತ್ತಾಳೆ. ಈ ಪುಟ್ಟ ಆನೆಯೇ ಮಗುವಿನ ಸುತ್ತಲಿನ ಜಗತ್ತನ್ನೆಲ್ಲ ಅನಾವರಣ ಗೊಳಿಸುತ್ತ… ಕನಸಿನ ಲೋಕಕ್ಕೆ, ಅಲ್ಲಲ್ಲ ಇಲ್ಲದ ಲೋಕಕ್ಕೆಲ್ಲಾ ಕೊಂಡೊಯ್ಯುತ್ತ ಮಕ್ಕಳ ಗೆಳೆಯನಾಗಿ ಬಿಡುತ್ತದೆ.

ಕಥೆಯನ್ನು ಓದುತ್ತ ಹೋದಂತೆ ಪುಟ್ಟಾರಿ ಎಷ್ಟು ಆಪ್ತವಾಗಿ ಬಿಡುತ್ತದೆ ಎಂದರೆ ನಮ್ಮ ಕಿಸೆಯಲ್ಲೋ, ಅಂಗೈಯಲ್ಲೋ ಅಥವಾ ನಮ್ಮ ಪುಸ್ತಕ, ಸ್ಕೂಲ ಬ್ಯಾಗ, ಹಾಸಿಗೆ ಎಲ್ಲೆಲ್ಲೂ ಪುಟ್ಟಾರಿ ಇರಬಹುದೇನೋ ಅನ್ನಿಸ ತೊಡಗುತ್ತದೆ. ಅಷ್ಟು ಪುಟ್ಟದಾದ ಆನೆಯೊಂದು ಹೇಗೆಲ್ಲಾ ವಿಸ್ತರಿಸಿಕೊಳ್ಳುವುದು, ಹೇಳುವುದು, ಮಾರ್ಗದರ್ಶಿಸುವುದು ಅಸಹಜ ಎಂದು ನಮಗೆ ಅನಿಸುವುದೇ ಇಲ್ಲ.

ದೊಡ್ಡವರ ಜಗಳಗಳು ಹೇಗೆಲ್ಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಎನ್ನುವ ನಿಖಿಲಾಳ ಪ್ರಸಂಗದಂತಹ ಎದೆಯನ್ನು ಆದೃ ಗೊಳಿಸುವ ಸಂಗತಿಗಳೊಟ್ಟಿಗೆ… ಇದ್ದಕ್ಕಿದ್ದ ಹಾಗೆ ಕಾಡುಗಳು ತೆರೆದುಕೊಳ್ಳುವುದು, ಅಲ್ಲಿ ನಡೆಯುವಾಗ ಅಪಾಯವೇನೂ ಇಲ್ಲ ಎಂದು ಧೈರ್ಯ ತುಂಬುವುದು ಎಲ್ಲ ಇದೆ. ಅಂದರೆ ಮಕ್ಕಳ ಖುಷಿ, ದಿಗಿಲು, ತುಂಟತನ, ಕನಸು ಎಲ್ಲ ಸ್ತರದಲ್ಲೂ ಕಾದಂಬರಿ ಹರಡಿಕೊಂಡಿದೆ ಎಂದು ದೃಢವಾಗಿ ಹೇಳಬಹುದು.

ಬಹು ಎತ್ತರದ ಬೆಳ್ಳನೆಯ ಕಂಬ, ಪುಟಾಣಿ ರಾಕ್ಷಸರು ಎಲ್ಲ ನಮಗೆ ಹಾಗೂ ಮಕ್ಕಳಿಗೆ ಖುಷಿ ನೀಡದೇ ಇರದು. ಕ್ಲಾಸಿನಲ್ಲೇ ಸುಂಟರ ಗಾಳಿ ಶುರುವಾಗುವುದು, ಕ್ಲಾಸಿದ್ದೂ ಇಲ್ಲದಂತಾಗುವುದು, ಅದಕ್ಕೆ ಪುಟ್ಟಾರಿ ಸುಳ್ಳು ಜಗತ್ತು ಎಂದು ಹೇಳುವುದು ಎಲ್ಲ ಮಕ್ಕಳ ಖುಷಿಗೆ ಹಾಗೂ ಅವರ ಕಲ್ಪನಾ ವಿಸ್ತಾರಕ್ಕೆ ಹೊಸ ಸರ‍್ಪಡೆಯಾಗುತ್ತದೆ.

ಹುಡುಗನ ಡೈರಿಯೊಂದು ಹೇಳುವ ಸಂಗತಿ ನಮಗೆಲ್ಲಾ ಕಣ್ಣೀರು ತರಿಸಿದರೆ… ಒಂದು ಕಡೆ ಓದೋದು ಅದೇ ವೇಳೆಯಲ್ಲಿ ಪುಟ್ಟಾರಿ ಜೊತೆ ಸಾಗೋದು, ಹಾರೋದು, ಚಿಕ್ಕದಾಗಿ ಬದಲಾಗಿ ಕಾಗೆ ಹತ್ತಿರ ಮರದ ಮೇಲೆ ಹೋಗಿ ಕುಡ್ರೋದು ಎಲ್ಲ ಖುಷಿ ನೀಡುತ್ತದೆ.

ಅಜ್ಜಿ ತನ್ನ ಸಾವಿನ ಮೊದಲು ನೀಡಿದ ಪುಟ್ಟಾರಿಯೊಂದಿಗೆ ವಿಸ್ತರಿಸಿಕೊಳ್ಳುವ ಕಥೆ ರಂಜೂ ಚಿಕ್ಕಪ್ಪನ ಸಾವಿನ ನಂತರ ಮುಗಿಯುತ್ತದೆ. ಪುಟ್ಟಾರಿ “ನಿನ್ನೊಡನಿರುತ್ತ ನಿನ್ನ ಲೋಕದವನೇ ಆಗಿಬಿಡುತ್ತೇನೆ… ಆಗ ಬೇಸರ ನನಗೂ ಕಾಡುತ್ತದೆ…” ಎನ್ನುತ್ತ ನಿಸರ್ಗದ ಎಲ್ಲ ವಿದ್ಯಮಾನಗಳು ಸ್ವಾಭಾವಿಕವಾಗಿ ನಡೆಯುತ್ತಲೇ ಇರುತ್ತವೆ ಎಂಬುದನ್ನು ಓದುಗರಿಗೆ ಮುಟ್ಟಿಸುತ್ತದೆ.

ಕೊನೆಯಲ್ಲಿ ಶಾಲೆಯ ಸುಂದರ ಪರಿಸರ, ನೊಂದ ಮಕ್ಕಳೆಲ್ಲ ತಿರುಗಿ ಖುಷಿಯಲ್ಲಿ ಸೇರುವುದು, ಹೂ ಅರಳುವುದು, ಶಿಕ್ಷಕರು ಮಕ್ಕಳೆಲ್ಲ ಒಂದಾಗುವುದು ಎಲ್ಲ ತೋರಿಸುವ ಪುಟ್ಟಾರಿ ಹಾಗೂ ಇದೆ, ಹೀಗೂ ಇದೆ ಎಂಬುದನ್ನು ಮಕ್ಕಳಿಗೆ ತಾನಾಗಿ ತಲುಪಿಸುತ್ತದೆ. “ಅವರು ಎಲ್ಲಿಗೆ ಹೋಗುತ್ತಾರೋ ನನಗೆ ಗೊತ್ತಿಲ್ಲ.

ಯಾಕೆಂದರತೆ ಎಲ್ಲಿಗೆ ಬೇಕಾದರೂ ಹೋಗಬಹುದು. ಅದಕ್ಕೆ ಕೊನೆ ಎಂಬುದೇ ಇಲ್ಲ” ಎನ್ನುವ ಲೇಖಕರ ಮಾತು ಕಥೆಗಳ ಗುಂಟ ಮಕ್ಕಳ ಸಾಗುವಿಕೆ ನಿರಂತರ ಹಾಗೂ ಬೇರೆ ಬೇರೆ ಕಥೆಗಳ ಮೂಲಕ ಅವರು ತಮ್ಮ ಸುತ್ತಲಿನ ಜಗತ್ತಿಗೆ ಚಾಚಿಕೊಂಡು ವಿಸ್ತರಿಸಿಕೊಳ್ಳುತ್ತಾರೆ ಎಂಬುದನ್ನು ಹೇಳುತ್ತದೆ.

ಹೌದು ಲೇಖಕರೇ ಹೇಳಿದಂತೆ ಪುಟ್ಟಾರಿಯ ಪ್ರೀತಿ ಬಾಲಕಿಯೊಂದಿಗೆ ಕೊನೆಯವರೆಗೂ ಇರುವಂತೆ ರೂಪಿಸಿದ್ದಾರೆ. ಈ ಪ್ರೀತಿ ಎಲ್ಲ ಮಕ್ಕಳಿಗೂ ಹರಡಿಯೇ ಹರಡುತ್ತದೆ ಹಾಗೂ ಮಕ್ಕಳು, ಹಿರಿಯರೂ ಎಲ್ಲರೂ ಪುಟ್ಟಾರಿಯನ್ನು ಎತ್ತಿಕೊಳ್ಳುತ್ತಾರೆ ಎನ್ನುವುದು ನನ್ನ ನಂಬಿಕೆ. ಇಂತಹ ಹೊಸತೊಂದನ್ನು ಕನ್ನಡದ ಮಕ್ಕಳ ಪ್ರೀತಿಗೆ ನೀಡಿದ ಡಾ. ಆನಂದ ಪಾಟೀಲರಿಗೆ ವಂದನೆಗಳು.

‍ಲೇಖಕರು Avadhi

November 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

2 ಪ್ರತಿಕ್ರಿಯೆಗಳು

  1. ಧನಪಾಲ ನಾಗರಾಜಪ್ಪ

    ಓದಿದೆ ಸರ್. ಆಪ್ತವಾದ ಪುಸ್ತಕ ಪರಿಚಯ.

    ಪ್ರತಿಕ್ರಿಯೆ
  2. ತಮ್ಮಣ್ಣ ಬೀಗಾರ

    ಧನ್ಯವಾದಗಳು ಧನಪಾಲ ಅವರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: