ಪುರುಷರ “ಶೃಂಗಾರಮಾಸ”

ನಾಗೇಶ ಹೆಗಡೆ

exlimatory.gifಹುಪಾಲು ಸಸ್ತನಿ ಪ್ರಾಣಿಗಳೆಲ್ಲ ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ತೋರಿಸುತ್ತವೆ. ಹಸುವಿಗೋ ಹೆಣ್ಣು ನಾಯಿಗೋ ಬೆದೆ ಬಂದಿದೆಯೆನ್ನುತ್ತೇವೆ. ಈ ವೇಳೆಯಲ್ಲಿ ಪ್ರಾಣಿಗಳು ಕ್ರೂರಿಗಳಾಗುತ್ತವೆ. ಸದೃಢ ಗಂಡುಗಳಿಂದಲೇ ಉತ್ತಮ ಸಂತಾನ ಪ್ರಾಪ್ತಿಯಾಗುವುದರಿಂದ ಹೆಣ್ಣುಗಳಿಗೆ ಬೆದೆ ಬಂದಾಗ ಗಂಡುಗಳಲ್ಲಿ ಪೈಪೋಟಿ ಪ್ರಾರಂಭವಾಗುತ್ತದೆ. ವರ್ಷದ ಉಳಿದೆಲ್ಲ ದಿನಗಳಲ್ಲಿ ಸ್ನೇಹದಿಂದಿರುವ ಸಭ್ಯ ಪ್ರಾಣಿಗಳೂ ಈ ವೇಳೆಗೆ ಕಾದಾಟ-ಬಡಿದಾಟಕ್ಕಿಳಿಯುತ್ತವೆ.

ಮನುಷ್ಯ ಪ್ರಾಣಿಯಲ್ಲಿ ಈ ಬೆದೆ ಪ್ರವೃತ್ತಿ ಯಾವಾಗ, ಏಕೆ ಮಾಯವಾಯಿತು? ಬೇಸಿಗೆ ಮಳೆಗಾಲವೆನ್ನದೇ ಹಗಲು ರಾತ್ರಿಯೆನ್ನದೆ, ಎಂದೆಂದರಂದು ಗಂಡು ಹೆಣ್ಣಿನ ಮಿಲನ ಸಾಧ್ಯವಾಯಿತೇಕೆ? ಬೆದೆ ಬರುವ ಲಕ್ಷಣಗಳು ಪೂರ್ತಿ ಅಳಿಸಿ ಹೋಗಿವೆಯೆ ಅಥವಾ ನಾವದನ್ನು ಬೇಕೆಂತಲೇ ಅದುಮಿಟ್ಟುಕೊಂಡಿದ್ದೇವೆಯೇ? ಕೊಲೆ, ಕಾದಾಟ ಅತ್ಯಾಚಾರ ಬಲಾತ್ಕಾರಗಳು ವರ್ಷದ ಕೆಲವು ತಿಂಗಳಲ್ಲಿ ಮಾತ್ರ ಹೆಚ್ಚಲು ಕಾರಣವೇನು?

ಸಂತಾನೋತ್ಪತ್ತಿಯಲ್ಲಿ ಎರಡು ಪ್ರಮುಖ ವಿಧಾನಗಳಿವೆ. ಲಕ್ಷಾಂತರ ಮರಿಗಳಿಗೆ ಜನ್ಮಕೊಟ್ಟು, ಅಷ್ಟೇನೂ ಕಾಳಜಿ ವಹಿಸದೇ ಬದುಕಿದಷ್ಟು ಬದುಕಿ ಉಳಿಯಲಿ ಎಂಬ ಮನೋವೃತ್ತಿಯ ಪ್ರಾಣಿಗಳದ್ದು ಒಂದು ವಿಧ (ಸಮುದ್ರ ಸಿಂಪಿ ವರ್ಷಕ್ಕೆ ೩೦ ಕೋಟಿ ಮೊಟ್ಟೆಗಳನ್ನಿಡುತ್ತದೆ). ಅಪರೂಪಕ್ಕೆ ಒಂದೇ ಮರಿಗೆ ಜನ್ಮಕೊಟ್ಟು ಜೋಪಾನವಾಗಿ ರಕ್ಷಿಸಿ ಪೋಷಿಸುವುದು ಇನ್ನೊಂದು ವಿಧ. ಚಿಂಪಾಂಜಿ ಹಾಗೂ ಒರಾಂಗುಟಾನ್ ಎಂಬ ಕಪಿ ಜಾತಿಯ ದಂಪತಿಗಳು ಆರು ವರ್ಷಕ್ಕೆ ಒಮ್ಮೆ ಸಂತಾನಭಾಗ್ಯ ಪಡೆಯುತ್ತವೆ. ಎಷ್ಟೇ ರಕ್ಷಣೆ ಕೊಟ್ಟು ಪೋಷಣೆ ಮಾಡಿದರೂ ಆಹಾರದ ಅಭಾವ, ರೋಗರುಜಿನ, ವೈರಿ ಕಾಟದಿಂದಾಗಿ ಈ ಒಂದು ಸಂತಾನವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಿ ಚಿಂಪಾಂಜಿ ಸಂತತಿ ಕ್ರಮೇಣ ನಶಿಸುತ್ತಿದೆ. ಹಿಂದೊಂದು ಕಾಲಕ್ಕೆ ಅಂದರೆ ಸುಮಾರು ೪೦ ಲಕ್ಷ ವರ್ಷಗಳ ಹಿಂದೆ ನಮ್ಮ ಪೂರ್ವಿಕರಿಗೂ ಇದೇ ಸಮಸ್ಯೆ ಬಂದಿರಬೇಕು. ವರ್ಷಕ್ಕೊಮ್ಮೆ ಬೆದೆ ಬರುವಂತಾದರೆ ಉಳಿಗಾಲವಿಲ್ಲ ಎಂಬುದು ತಂತಾನೇ ಮನವರಿಕೆಯಾಗಿರಬೇಕು. ಮಗುವಿನ ಪೋಷಣೆಗೆ ತಂದೆಯ ಬೆಂಬಲ ಬೇಕೆಂದು ಕುಟುಂಬ ವ್ಯವಸ್ಥೆ ರೂಢಿಗೆ ಬಂತು. ಬೆದೆಬಲ ಸಾಲದೆಂದು ಇತರ ಬಗೆಯ ಆಕರ್ಷಣೆಗಳನ್ನು ಸ್ತ್ರೀಯರು ಹೆಚ್ಚಿಸಿಕೊಂಡಿರಬೇಕು (ಮೇಕಪ್, ಮಿನಿಸ್ಕರ್ಟುಗಳೆಲ್ಲ ಇತ್ತೀಚಿನದು, ಬಿಡಿ).

ಆದರೂ ಮನುಷ್ಯರಲ್ಲಿ ಬೆದೆತನ ಪೂರ್ತಿ ಮಾಯವಾಗಿದೆಯೆಂದರೆ ವಿಜ್ಞಾನಿಗಳು ನಂಬುವುದಿಲ್ಲ. ನಮ್ಮಲ್ಲಿ ಏನಾದರೂ ಅವ್ಯಕ್ತ ಕುರುಹುಗಳು ಉಳಿದಿರಲೇಬೇಕೆಂದು ಅವರು ಹುಡುಕಾಡುತ್ತಿದ್ದಾರೆ. ಹೇಗೆ ಹುಡುಕುವುದು? ಎಲ್ಲಿ ಹುಡುಕುವುದು? ಮನುಷ್ಯ ಶರೀರವನ್ನು ತಡಕಾಡಿದರಂತೂ ಸುಲಭಕ್ಕೆ ಸಿಗುವ ವಸ್ತುವಲ್ಲ, ಅದು. ಋತುಮಾನಕ್ಕೆ ಅನುಸಾರವಾಗಿ ಮಾನವನ ಸ್ವಭಾವದಲ್ಲಿ ಏರುಪೇರಾಗುತ್ತಿದ್ದರೆ ಇದರಿಂದಲೇ ಅದಾಯಿತೆಂದು ಹೇಳಬಹುದು.

ಅದನ್ನೇ ವಿಜ್ಞಾನಿಗಳು ಮಾಡುತ್ತಿದ್ದಾರೆ. ಮನುಷ್ಯನ ಕ್ರೂರ ಗುಣಗಳನ್ನೆಲ್ಲ ಕ್ರೋಡೀಕರಿಸಿ ಅಬಲೆಯ ಮೇಲೆ ಅತ್ಯಾಚಾರ, ಕೊಲೆ, ಗೂಂಡಾಗಿರಿ ಹಾಗೂ ಡಕಾಯಿತಿ ಮಾಡಿದವರ ಸ್ಥಳ, ಕಾಲ, ಕೌಟುಂಬಿಕ ಹಿನ್ನೆಲೆಯನ್ನೆಲ್ಲ ಅಧ್ಯಯನ ಮಾಡುತ್ತಿದ್ದಾರೆ. ಅಮೆರಿಕದ ಇಬ್ಬರು ವಿಜ್ಞಾನಿಗಳು ಇತ್ತೀಚೆಗೆ ಅಲ್ಲಿನ ೧೬ ನಗರಗಳ ಅಪರಾಧ ವೈಖರಿಯನ್ನು ವಿಶ್ಲೇಷಣೆ ಮಾಡಿ ಪ್ರಕಟಿಸಿ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಅವರು ಪತ್ತೆ ಮಾಡಿದ್ದೇನೆಂದರೆ:

ಜುಲೈ-ಸೆಪ್ಟೆಂಬರ್ ಮಧ್ಯೆಯ ಎರಡು ತಿಂಗಳಲ್ಲಿ ಅತಿ ಹೆಚ್ಚು ಅತ್ಯಾಚಾರಗಳಾಗಿವೆ. ಅದೇ ಅವಧಿಯಲ್ಲಿ ಗೂಂಡಾಗಿರಿ ಪ್ರಕರಣಗಳೂ ಅತೀ ಹೆಚ್ಚಿವೆ; ಆದರೆ ಡಕಾಯಿತಿ ಮಾತ್ರ ಚಳಿಗಾಲದಲ್ಲಿ ಹೆಚ್ಚಿದ್ದು, ಕೊಲೆ ಕೇಸುಗಳು ವರ್ಷವಿಡೀ ಹಂಚಿಹೋಗಿವೆ.

ಹಾಗಿದ್ದರೆ ಜುಲೈ-ಸೆಪ್ಟೆಂಬರ್ ಅವಧಿಯಲ್ಲೇ ಮನುಷ್ಯರಿಗೆ ಬೆದೆ ಬರುತ್ತಿದೆಯೆ? ಈ ಕಾಲದಲ್ಲೇ ನಮ್ಮ ಶರೀರದಲ್ಲಿ ಬೆದೆಜನಕ ಹಾರ್ಮೋನುಗಳು ಸ್ರವಿಸುತ್ತವೆಯೆ? ಕೋತಿಕುಲದ ಪ್ರಾಣಿಗಳಲ್ಲೂ ಇದೇ ಅವಧಿಯಲ್ಲಿ ಬೆದೆ ಬರುತ್ತಿರುವುದರಿಂದ ನಮಗೂ ಇದೇ ಪ್ರಶಸ್ತ ಕಾಲವೆ?

ಈ ವಾದವನ್ನು ಎಲ್ಲರೂ ಒಪ್ಪುವುದಿಲ್ಲ. ಅಂತಾರಾಷ್ಟ್ರೀಯ ಖ್ಯಾತಿಯ ಗತಜೀವ ವಿಜ್ಞಾನಿ ಸ್ಟೀಫನ್ ಜೆ ಗೋಲ್ಡ್ ಎಂಬುವರಂತೂ ಈ ಬಗೆಯ ಸಂಶೋಧನೆ ನಡೆಯಕೂಡದೆಂದು ವಾದಿಸುತ್ತಾರೆ. ಅಪರಾಧ ಕೃತ್ಯಗಳು ಋತುಮಾನಕ್ಕನುಸರಿಸಿ ಏರುಪೇರಾಗುವುದು ಮೊದಲಿನಿಂದಲೂ ಪೊಲೀಸ್ ಇಲಾಖೆಯವರಿಗೆ ಗೊತ್ತಿದೆ. ಅದಕ್ಕವರು ಸರಳ ಕಾರಣವನ್ನೂ ನೀಡುತ್ತಾರೆ. ರೇಪ್ (ಅತ್ಯಾಚಾರ) ಹಾಗೂ ಗೂಂಡಾಗಿರಿ ಪ್ರಕರಣಗಳು ಬೇಸಿಗೆಯಲ್ಲೇ ಹೆಚ್ಚೇಕೆಂದರೆ ಅಮೆರಿಕದ ಚಳಿಗಾಲದಲ್ಲಿ ಮನೆಯ ಹೊರಗೆ ಹೆಜ್ಜೆ ಇಡುವುದೂ ದುಸ್ತರವಾಗುತ್ತದೆ. ಕಳ್ಳತನ ಚಳಿಗಾಲದಲ್ಲೇ ಹೆಚ್ಚೇಕೆಂದರೆ, ಉಣ್ಣೆಯ ಉದ್ದುದ್ದ ಕೋಟುಗಳಲ್ಲಿ ಶಸ್ತ್ರಾಸ್ತ್ರಗಳನ್ನು  ಬಚ್ಚಿಟ್ಟುಕೊಳ್ಳುವುದು ಸುಲಭ. ರಾತ್ರಿ ವೇಳೆಯಲ್ಲಿ ಜನಸಂಚಾರ ತೀರ ಕಡಿಮೆಯಾಗಿರುತ್ತದೆ. ಕೊಲೆ ಪ್ರಕರಣಗಳು ದಿಢೀರ್ ಆವೇಶದಲ್ಲಿ ಜರುಗುವುದರಿಂದ ಎಲ್ಲ ಋತುಗಳಲ್ಲೂ ಸುಮಾರು ಸರಿಸಮವಾಗಿ ನಡೆಯುತ್ತಿರುತ್ತವೆ.

ಇಷ್ಟು ಸರಳ ವಿವರಣೆಯಿರುವ ಘಟನೆಗಳಿಗೆ ಸಂಶೋಧನೆಯ ಮೆರುಗು ಹಚ್ಚಿ, ಮಾನವನ ಬೆದೆಗಾರಿಕೆಯನ್ನು ಪ್ರತಿಪಾದಿಸುವುದು ಸರಿಯಿಲ್ಲವೆಂಬುದು ಸ್ಟೀಫನ್ ಗೋಲ್ಡ್ ವಾದ.

ಹಾಗೆಂದು, ವಿಜ್ಞಾನಿಗಳ ಮಾತನ್ನೂ ನಿರಾಕರಿಸುವಂತಿಲ್ಲ. ಜುಲೈ-ಆಗಸ್ಟ್ ತಿಂಗಳುಗಳಲ್ಲೇ ಜನನ ನಿರೋಧಕ ಸಾಮಗ್ರಿಗಳ ಮಾರಾಟ ಹೆಚ್ಚುತ್ತವೆ. ಲೈಂಗಿಕ ಸೋಂಕು ರೋಗಗಳಿಂದಾಗಿ ವೈದ್ಯರ ಬಳಿ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತದೆ. ಕಾಮುಕ ಅಪರಾಧಗಳ ಬಗ್ಗೆ ಲೋಕಸಭೆಯಲ್ಲಿ ಗದ್ದಲವಾಗುವುದೂ ಮುಂಗಾರು ಅಧಿವೇಶನದಲ್ಲಿ. ತುಂಬು ಗರ್ಭಿಣಿಯರು ಹೆಚ್ಚಾಗಿ ಕಾಣಬರುವುದು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ (ಅಂದರೆ ಜುಲೈ-ಆಗಸ್ಟ್ ನಲ್ಲಿ ಗರ್ಭಾಂಕುರ). ಕೋತಿ, ನಾಯಿಗಳು ಬಹಿರಂಗವಾಗಿ ಕಾಮಕೇಳಿಯಾಡುವುದೂ ಶ್ರಾವಣ ಮಾಸದಲ್ಲಿ.

ವೈಜ್ಞಾನಿಕವಾಗಿ ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದವರು ಇನ್ನೊಂದು ನೇರ ಅಧ್ಯಯನ ಮಾಡಿದ್ದಾರೆ. ಪುರುಷರಲ್ಲಿ ಕಾಮತೃಷೆಯನ್ನು ಹೆಚ್ಚಿಸಬಲ್ಲ ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನು ಅಧಿಕವಾಗಿ ಸ್ರವಿಸುವುದೂ ಜೂನ್_ಸೆಪ್ಟೆಂಬರ್ ಅವಧಿಯಲ್ಲೇ ಎಂಬುದನ್ನು ಪತ್ತೆಹಚ್ಚಿದ್ದಾರೆ.

‍ಲೇಖಕರು avadhi

July 5, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

2 ಪ್ರತಿಕ್ರಿಯೆಗಳು

  1. S.R.Vijayshankar

    “This year’s June is next year’s junior” is a famous saying in English.(I just forgot the poet’s name. It is not Augdun Nash.Most of the marriages take place in June and before it is next June next generation(Junior) is born.most of the marriages take place in June is what English believe. Nagesh Hegde in his inimmitable style bring July as the core month of love. Does his science finding gets supported by common observation in English?
    Thanks for publishing the pieces of Nagesh Hegde.
    S.R.Vijayshankar

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: