ಬ್ರಿಟಿಷರು ಭಾರತಕ್ಕೆ ಕಾಲಿರಿಸಿದಾಗ ಅವರಿಗೆ ಇಲ್ಲಿಯ ವೈವಿಧ್ಯಗಳನ್ನು ಕಂಡು ತಲೆಕೆಟ್ಟಿರಬೇಕು. ಬಗೆಬಗೆಯ ಭಾಷೆ, ಸಮುದಾಯಗಳು, ಆಚರಣೆಗಳು, ಭೌಗೋಳಿಕತೆ ಇತ್ಯಾದಿಗಳನ್ನೆಲ್ಲ ಒಂದು ಬಲವಾದ ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂಬುದನ್ನು ಅವರು ಮನಗಂಡಿದ್ದರಲ್ಲದೆ ಭಾರತವನ್ನು ಯಾವುದಾದದರೂ ಒಂದು ನಿದರ್ಿಷ್ಟ ಪರಿಭಾಷೆಯಲ್ಲಿ ವಿವರಿಸಲು ಅವರು ಹೆಣಗುತ್ತಿದ್ದರು. ಇಂಥ ಒಂದು ಪ್ರಯತ್ನದ ಪರಿಣಾಮವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರು ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೆಳೆಸಿದರು. ಲಭ್ಯವಿರುವ ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಪ್ರತೀತಗೊಳಿಸಿ, ಅದನ್ನು ಅಧಿಕೃತಗೊಳಿಸುವುದು ವಸಾಹತು ಕಾಲದ ಗ್ರಂಥ ಸಂಪಾದನಾ ಶಾಸ್ತ್ರದ ಮುಖ್ಯ ಕೆಲಸ. ಆ ಕ್ರಮವನ್ನು ನಾವು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದೇವೆ.
ಉದಾಹರಣೆಗೆ ಗಮನಿಸಿ, ವ್ಯಾಸರು ಬರೆದ ಮಹಾಭಾರತದ ನೂರಾರು ಪಠ್ಯಗಳನ್ನು ಸಂಗ್ರಹಿಸಿ, ಅವುಗಳಿಂದ ‘ಒಂದು ಅಧಿಕೃತ’ ಮಹಾಭಾರತವನ್ನು ಸಿದ್ಧಪಡಿಸಿಕೊಡಲು ಬ್ರಿಟಿಷರು ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ವಿಷ್ಣು ಎಸ್. ಸೂಕ್ತಂಕರ್ ಅವರನ್ನು 1919ರಲ್ಲಿ ಕೇಳಿಕೊಂಡರು. ಸೂಕ್ತಂಕರ್ ಅವರು ಪಿ.ವಿ ಕಾಣೆ, ಆರ್ ಡಿ.ಕರಮರ್ಕರ್, ವಿ.ಜಿ.ಪರಾಂಜಪೆ, ವಿಂಟರ್ನೀಟ್ಜ ಮೊದಲಾದ ಸಮರ್ಥ ವಿದ್ವಾಂಸರ ತಂಡದೊಂದಿಗೆ ಸುಮಾರು 15 ವರ್ಷಗಳ ಕಾಲ ದುಡಿದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ ಪ್ರದೇಶಗಳಲ್ಲಿ ಲಭ್ಯವಿದ್ದ ಸುಮಾರು 160 ಹಸ್ತ ಪ್ರತಿಗಳನ್ನು ಸಂಗ್ರಹಿಸಿದರು. ಅವೆಲ್ಲವುಗಳನ್ನು ಅಧ್ಯಯನ ಮಾಡಿ ‘ಮೂಲಕ್ಕೆ ಹತ್ತಿರ ಅನ್ನಬಹುದಾದ ಪಠ್ಯವೊಂದನ್ನು ಸಿದ್ಧಪಡಿಸಿ, ಅದನ್ನು ಪೂನಾದ ಭಂಡಾರ್ಕಾರ್ ಓರಿಯಂಟಲ್ ರಿಸರ್ಚ ಇನ್ಸ್ಟಿಟ್ಯೂಟ್ನಿಂದ ಪ್ರಕಟಿಸಿದರು( 1933). ಹಾಗೆ ಪ್ರಕಟಿಸುವಾಗ “ವ್ಯಾಸರು ಬರೆದ ಮೂಲ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಸಾಧ್ಯವಿಲ್ಲದ ಕೆಲಸ, ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ ಅಷ್ಟೆ’ ಅಂದು ಬಿಟ್ಟರು. ಪ್ರಖಾಂಡ ಪಂಡಿತನೊಬ್ಬ ಮಾತ್ರ ಹೇಳಬಹುದಾದ ಬಹುದೊಡ್ಡ ಮಾತದು. ಬಹುಪಠ್ಯಗಳ ಅಭ್ಯಾಸಕ್ರಮದ ಬಗ್ಗೆ ಆಸಕ್ತಿ ಇರುವ ಯಾರೇ ಆದರೂ ಸೂಕ್ತಂಕರ್ ಅವರು ತಾವು ಸಂಪಾದಿಸಿದ ಮಹಾಭಾರತ ಕೃತಿಗೆ ಬರೆದ ಮುನ್ನುಡಿಯನ್ನೊಮ್ಮೆ ಓದಬೇಕು.
ವಿ.ಎಸ್. ಸೂಕ್ತಂಕರ ಅವರ ಅಸಾಮಾನ್ಯ ಕೆಲಸದಿಂದ ನಾವೆಲ್ಲ ಕಲಿಯಬಹುದಾದ ಪಾಠ ಬಹಳ ದೊಡ್ಡದು. ನಮ್ಮ ದೇಶದಲ್ಲಿ ಸಮುದಾಯಗಳು ಕಾವ್ಯವನ್ನು ತನಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಳ್ಳುತ್ತದೆ, ತನ್ನ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಪುನಾರಚಿಸಿಕೊಳ್ಳುತ್ತದೆ. ವ್ಯಾಸರ ಭಾರತವು ತಮಿಳುನಾಡಲ್ಲಿ ದ್ರೌಪದಿ ಕೇಂದ್ರಿತವಾಗಿ ಬೆಳೆದರೆ, ಮಧ್ಯ ಪ್ರದೇಶದಲ್ಲಿ ಭೀಮ ಕೇಂದ್ರಿತವಾಗಿ ಬೆಳೆಯಿತು. ಹಿಮಾಲಯದ ಗಡವಾಲಿನಲ್ಲಿ ಅದು ಹಿಡಿಂಬಿ ಕೇಂದ್ರಿತ ಭಾರತ. ಕರಾವಳಿಯ ಯಕ್ಷಗಾನಗಳಲ್ಲಿ ‘ಖಳ’ನಾಯಕರೇ ನಿಜವಾದ ಅರ್ಥದಲ್ಲಿ ನಾಯಕರು.
ಇಷ್ಟಿದ್ದರೂ ನಮ್ಮ ವಿಮಶರ್ೆಯು ಈ ಬಗೆಯ, ಸಾಮುದಾಯಿಕ ರಚನೆಗಳತ್ತ ಹೆಚ್ಚು ಗಮನಹರಿಸಿಲ್ಲ. ಹಾಗೆ ಗಮನ ಹರಿಸದ್ದರಿಂದ ನಮ್ಮಲ್ಲಿ ಭಿನ್ನ ಪಠ್ಯಗಳ ಅಧ್ಯಯನ ನಡೆಯಲೇ ಇಲ್ಲ. 20ನೆ ಶತಮಾನದ ಆರಂಭಿಕ ಹಂತದಲ್ಲಿ ಕನ್ನಡ ಗ್ರಂಥಗಳನ್ನು ಸಂಪಾದಿಸಿಕೊಟ್ಟ ಹಿರಿಯರು ಮುಖ್ಯ ಪಠ್ಯ ಅಂತ ತಾವು ಗ್ರಹಿಸಿದ ಪಾಠಗಳ ಬುಡದಲ್ಲಿ ಅಡಿ ಟಿಪ್ಪಣಿಯಾಗಿಯಾದರೂ ಭಿನ್ನ ಪಠ್ಯಗಳನ್ನು ನೀಡುತ್ತಿದ್ದರು. ಈಗ ಅದೂ ನಿಂತಿದೆ. ಕಳೆದ ವರ್ಷ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ಜೈನಕಾವ್ಯ ಸಂಪುಟಗಳಿಂದ ಅಡಿ ಟಿಪ್ಪಣಿಗಳನ್ನೂ ಕೂಡಾ ಪೂರ್ಣವಾಗಿ ಕಿತ್ತೆಸೆಯಲಾಗಿದೆ. ಬಹುರೂಪಿಗಳಾಗಿದ್ದ ಪಠ್ಯಗಳನ್ನು ಏಕರೂಪಗೊಳಿಸುವ ವಸಾಹತು ವಿಧಾನವೇ ಇಲ್ಲಿ ಮುಂದುವರಿದಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸಬಹುದು.
ಇನ್ನೊಂದು ಉದಾಹರಣೆಯನ್ನು ಗಮನಿಸೋಣ.ಕನ್ನಡಕ್ಕೆ ಬಹಳ ಅನನ್ಯವಾದ ವಚನಗಳನ್ನು ನಾವು ‘ಸಾಮೂಹಿಕ ಸೃಷ್ಟಿ’ ಎಂದೇನೋ ಕರೆದಿದ್ದೇವೆ. ಆದರೆ ವಚನಗಳನ್ನು ಸಂಪಾದನೆ ಮಾಡುವಾಗ ‘ಇದು ಬಸವಣ್ಣನ ವಚನ, ಅದು ಅಕ್ಕನ ವಚನ’ ಎಂಬಿತ್ಯಾದಿಯಾಗಿ ಗುರುತಿಸಿ, ಬೇರ್ಪಡಿಸಿ, ಸಂಕಲಿಸಿ ಪ್ರಕಟಿಸಿದ್ದೇವೆ; ಚಚರ್ಿಸಿದ್ದೇವೆ. ಅಂದರೆ ತಮ್ಮ ಪಠ್ಯಗಳ ಮೇಲೆ ಹಕ್ಕು ಸ್ಥಾಪಿಸಬಯಸದ ವಚನಕಾರರನ್ನು ಹಕ್ಕು ಸ್ಥಾಪಿಸಿಕೊಳ್ಳಲು ನಾವು ಒತ್ತಾಯಿಸಿದ್ದೇವೆ. ಬಸವಣ್ಣನವರ ಪ್ರಖ್ಯಾತ ವಚನವೊಂದು ಇಂತಿದೆ-
“ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡುವೆ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರ ಹೊನ್ನ ಕಳಸವಯ್ಯ”
ಪ್ರಭು ದೇವರ ಈ ಕೆಳಗಿನ ವಚನವನ್ನು ಗಮನಿಸಿ :
“ಕಾಲೇ ಕಂಭಗಳಾದುವೆನ್ನ
ದೇಹವೇ ದೇಗುಳಾದುವೆನ್ನ
ದೇಹವೇ ದೇಗುಲವಾಯಿತ್ತಯ್ಯ
ಎನ್ನ ನಾಲಿಗೆಯೆ ಗಂಟೆ
ಶಿರ ಸುವರ್ಣದ ಕಲಶ-ಇದೇನಯ್ಯ
ಮೇಲಿನ ಎರಡೂ ವಚನಗಳಲ್ಲಿ ಅನೇಕ ಸಾಮ್ಯಗಳಿವೆ. ಈಗ ನಾವು ಇವನ್ನು ‘ಇದು ಮೂಲತಃ ಯಾರದಿರಬಹುದು” ಎಂದು ಕೇಳಿಕೊಂಡು ಮುಂದುವರೆಯುವುದಕ್ಕಿಂತ, ಬೇರೆ ಬೇರೆಯವರ ವಚನಗಳನ್ನು ಜನರು ಹೇಗೆ ಸಂಮಿಶ್ರ ಮಾಡಿಕೊಂಡು ತಮಗೆ ಬೇಕಾದ ಪಠ್ಯಗಳನ್ನು ಸೃಷ್ಟಿ ಮಾಡಿಕೊಂಡರು ಎಂಬ ಅರಿವಿನಲ್ಲಿ ಮುಂದುವರೆದರೆ ನಮಗೆ ನಮ್ಮ ಸಮಾಜವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಸರ್ವಜ್ಞನ ಜನಪ್ರಿಯ ವಚನಗಳಲ್ಲಿ ಒಂದಾದ “ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು” ಎಂಬ ಸಾಲು ಪ್ರಭುದೇವರ ‘ಅನ್ನವನಿಕ್ಕಿ ನನ್ನಿಯ ನುಡಿದು’ ಎಂಬ ಸಾಲನ್ನು ನೆನಪಿಗೆ ತರುತ್ತದೆ ಅಲ್ಲವೇ?
ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಸಹೋದ್ಯೋಗಿ ಗೆಳೆಯ ಚೆಲುವರಾಜು ಅವರು ಲಕ್ಷ್ಮಣದಾಸ ಎಂಬ ಹಾಡುಗಾರರೊಬ್ಬರನ್ನು ಪರಿವಚಯಿಸಿದ್ದರು. ಹಂಪಿಯ ಬೀದಿಗಳಲ್ಲಿ ಹಾಡು ಹೇಳುತ್ತಾ ತಿರುಗಾಡುತ್ತಿದ್ದ ಅವರ ಕಂಠಶ್ರಿ ಅದ್ಬುತವಾಗಿತ್ತು. ಬಿಡುವಿದ್ದಾಗಲೆಲ್ಲ ಅವರು ನನ್ನ ಮನೆಗೆ ಬರುತ್ತಿದ್ದರು. ಆಗ ಪುಟ್ಟ ಹುಡುಗನಾಗಿದ್ದ ನನ್ನ ಮಗನನ್ನು ಹತ್ತಿರ ಕುಳ್ಳಿರಿಸಿಕೊಂಡು ಹಾಡು ಹೇಳುತ್ತಿದ್ದರು. ಆದರೆ ಅವರ ಹಾಡು ಕೇಳಿದಾಗಲೆಲ್ಲ ನಾನು ಬೆಚ್ಚಿ ಬೀಳುತ್ತಿದ್ದೆ. ಏಕೆಂದರೆ ಅವರ ಎಷ್ಟೋ ಹಾಡುಗಳು ಶಿಶುನಾಳ ಶರೀಫರ ತತ್ವಪದಗಳಿಂದ ಆರಂಭವಾಗಿ, ಪುರಂದರದಾಸರ ಕೀರ್ತನೆಯ ಸಾಲಿನೊಂದಿಗೆ ಮುಂದುವರೆದು ‘ಕೂಡಲ ಸಂಗಮದೇವಾ’ ಎಂದು ಕೊನೆಗೊಳ್ಳುತ್ತಿತ್ತು. ಸುಮಾರು ಏಳು ನೂರು ವರ್ಷಗಳ ಅವಧಿಯಲ್ಲಿ ರಚಿತವಾದ ಪಠ್ಯಗಳಿಂದ ತಮಗೆ ಬೇಕಾದ ಸಾಲುಗಳನ್ನು ಆರಿಸಿಕೊಂಡು 20ನೇ ಶತಮಾನಕ್ಕೆ ಬೇಕಾದ ಪಠ್ಯವೊಂದನ್ನು ಅವರು ಸೃಜಿಸುತ್ತಿದ್ದರು. ನನ್ನ ವೈಯಕ್ತಿಕ ಸಂಗ್ರಹದಲ್ಲಿರುವ ಲಕ್ಷ್ಮಣ ದಾಸರ ಹಾಡೊಂದರ ಕೊನೆಯ ಸಾಲುಗಳು ಇಂತಿವೆ-
“ಹೀನ ಕೃತ್ಯಗಳ ಮಾಡುತ ನದಿಯಲಿ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಕೂಡಲ ಸಂಗನ ನೆನೆಯದೆ
ಮೌನದ ಮಾಡಿದರೇನು ಫಲ?”
ಪುರಂದರದಾಸ ‘ಬೇವು ಬೆಲ್ಲದೊಡಲೇನು ಫಲ” ಕೀರ್ತನೆಯು ಬಸವಣ್ಣನ ಅಂಕಿತನಾಮದೊಂದಿಗೆ ಕೊನೆಯಾದಾಗ ನಾನು ಅವಕ್ಕಾಗಿದ್ದೆ.
ಉತ್ತರ ಕನರ್ಾಟಕದಾದ್ಯಂತ ಅತ್ಯಂತ ವೈಭವದಿಂದ ಜರುಗುವ ಹಂಪಿ ಜಾತ್ರೆ, ಮೈಲಾರನ ಜಾತ್ರೆ, ಕುಮಾರ ರಾಮನ ಜಾತ್ರೆ, ತಿಂಥಿಣಿ ಜಾತ್ರೆ, ಹುಲಿಗೆಮ್ಮನ ಜಾತ್ರೆ ಮೊದಲಾದೆಡೆಗಳಲ್ಲಿ ಲಕ್ಷ್ಮಣದಾಸರ ಹಾಗೆ ಹಾಡುವ ನೂರಾರು ಕಲಾವಿದರನ್ನು ನಾವು ಇಂದಿಗೂ ಕಾಣಬಹುದು. ಇವರುಗಳು ಹಾಡುವ ವಚನಗಳನ್ನು, ಕೀರ್ತನೆಗಳನ್ನು ಮತ್ತು ತತ್ವಪದಗಳನ್ನು ಇದೀಗ ನಾವು ಸಂಗ್ರಹಿಸಬೇಕು. ಅವು 21ನೇ ಶತಮಾನದ ಆರಂಭದ ಕಾಲದ ಪಠ್ಯಗಳಾಗಿ ಕನ್ನಡ ಸಂಸ್ಕೃತಿಯ ಬಗೆಗಣ ನಮ್ಮ ತಿಳುವಳಿಕೆಯನ್ನು ಅಗಾಧವಾಗಿ ವಿಸ್ತರಿಸಬಲ್ಲುವು. ನಮ್ಮ ಸಾಹಿತ್ಯ ಪರಂಪರೆಯಲ್ಲಿ ಪಠ್ಯದ ಹಕ್ಕನ್ನು ಯಾರೋ ಕಾದಿರಿಸಿಲ್ಲ. ಹಾಗಾಗಿ ಪಠ್ಯಗಳೆಲ್ಲ ಒಂದರೊಡನೊಂದು ಸೇರಿಕೊಂಡು, ಒಬ್ಬರ ಸೃಷ್ಟಿ ಎಲ್ಲರ ಸೃಷ್ಟಿಯಾಗಿ ಮಾರ್ಪಟ್ಟು, ಕಾಲಾತೀತವಾದ ಪಠ್ಯಗಳು ನಿಮರ್ಾಣಗೊಂಡಿವೆ. ಇದರ ಕಡೆಗೆ ನಮ್ಮ ಗಮನಹರಿಯಬೇಕಾದ್ದು ಇಂದಿನ ಅಗತ್ಯಗಳಲ್ಲೊಂದಾಗಿದೆ.
]]>
ಕತೆ ಬರೆಯುವವರ ಕೈಪಿಡಿ ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...
೧ ಪ್ರತಿಕ್ರಿಯೆ
ರವಿ ಮೂರ್ನಾಡು,ಕ್ಯಾಮರೂನ್
on June 18, 2012 at 7:47 PM
ಅತ್ತ್ಯುತ್ತಮ ಮಾಹಿತಿಯ ಲೇಖನ. ಹೌದು ಒಂದರಿಂದ ಇನ್ನೊಂದನ್ನು ಸೃಜಿಸುವುದು ಅದು ಭೂಮಿ ಹುಟ್ಟಿನಿಂದ ನಡೆಯುತ್ತಲೇ ಬಂದಿದೆ. ಅದು ಆಯಾಯ ಕಾಲಕ್ಕೆ ಹೊಸತರ೦ತೆ ಗೋಚರಿಸುವುದು. ಶೋಧಕ್ಕೆ ಇಳಿದಾಗ ನಾವೇ ಅವಕ್ಕಾಗಿ ಬಿಡುತ್ತೇವೆ. ಹಂಚಿಕೊಂಡಿದ್ದಕ್ಕೆ ನಿಮಗೆ ನಮಸ್ತೆ.
ಅತ್ತ್ಯುತ್ತಮ ಮಾಹಿತಿಯ ಲೇಖನ. ಹೌದು ಒಂದರಿಂದ ಇನ್ನೊಂದನ್ನು ಸೃಜಿಸುವುದು ಅದು ಭೂಮಿ ಹುಟ್ಟಿನಿಂದ ನಡೆಯುತ್ತಲೇ ಬಂದಿದೆ. ಅದು ಆಯಾಯ ಕಾಲಕ್ಕೆ ಹೊಸತರ೦ತೆ ಗೋಚರಿಸುವುದು. ಶೋಧಕ್ಕೆ ಇಳಿದಾಗ ನಾವೇ ಅವಕ್ಕಾಗಿ ಬಿಡುತ್ತೇವೆ. ಹಂಚಿಕೊಂಡಿದ್ದಕ್ಕೆ ನಿಮಗೆ ನಮಸ್ತೆ.