ಪುರುಷೋತ್ತಮ ಬಿಳಿಮಲೆ ಬರೆಯುತ್ತಾರೆ: ಕೃಷ್ಣಪ್ಪನ ಕೀಚಕ ವೇಷ

ಪುರುಷೋತ್ತಮ ಬಿಳಿಮಲೆ

ಕೃಪೆ: ವಿಜಯ ಕರ್ನಾಟಕ

ನನಗೆ ಆರು ವರ್ಷ ತುಂಬುವವರೆಗೆ ಅಮ್ಮನೇ ನನ್ನ ತಲೆಕೂದಲನ್ನು ‘ಕೊಯ್ಯುತ್ತಿದ್ದರು’. ಕೂದಲು ಉದ್ದವಾದಾಗ ಅದರಲ್ಲಿ ಒಂದು ಮುಷ್ಠಿಯಷ್ಟು ಕೂದಲನ್ನು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿರುವ ಹರಿತವಾದ ಕತ್ತಿಯಿಂದ ಹುಲ್ಲು ಕೊಯ್ಯುವಂತೆ ಅಮ್ಮ ಕತ್ತರಿಸಿಬಿಡುತ್ತಿದ್ದರು. ‘ಕೂದಲು ಕೊಯ್ಯುವ’ ಈ ಕಾಯಕ್ರಮವನ್ನು ಅಮ್ಮ ನಿಲ್ಲಿಸಿದ್ದು ನಾನು ಶಾಲೆ ಸೇರಿದಾಗ. ಶಾಲೆಗೆ ಸೇರುವ ಕೆಲವು ದಿನಗಳ ಮುನ್ನ ಅಪ್ಪ ನನ್ನನ್ನು ಮನೆಯಿಂದ ಸುಮಾರು ಹತ್ತು ಕಿ.ಮೀ. ದೂರದಲ್ಲಿದ್ದ ಪಂಜ ಪೇಟೆಗೆ ತರದೊಯ್ದರು. ‘ಪಂಜದಲ್ಲಿ ಕೃಷ್ಣಪ್ಪ ಅಂತ ನನ್ನ ಸ್ನೇಹಿತ ಇದ್ದಾನೆ, ಅವನು ಮತ್ತು ನಾನು ಆಗಾಗ ಯಕ್ಷಗಾನ-ತಾಳಮದ್ದಲೆಯಲ್ಲಿ ಒಟ್ಟಾಗುತ್ತೇವೆ. ಅವನು ನಿನ್ನ ಕೂದಲನ್ನು ಕತ್ತರಿಯಲ್ಲಿ ಚೆನ್ನಾಗಿ ಕತ್ತರಿಸುತ್ತಾನೆ’ಅಂತ ಅಂದರು ಅಪ್ಪ. ‘ಕತ್ತರಿಯಲ್ಲಿ ಕೂದಲು ಕತ್ತರಿಸಿದರೆ ನೋವಾಗುವುದಿಲ್ಲ’ ಅಂತ ನನ್ನನ್ನು ಹುರಿದುಂಬಿಸಲಾಯಿತು. ಆ ದಿನ ಅಪ್ಪನೊಡನೆ ಪಂಜಕ್ಕೆ ತೆರಳಿದೆ.. ವೇಗವಾಗಿ ನಡೆಯುವ ಅಪ್ಪನನ್ನು ಹಿಂಬಾಲಿಸಲು ನಾನು ಕೆಲವೊಮ್ಮೆ ಓಡಬೇಕಾಗುತ್ತಿತ್ತು. ಅಪ್ಪ ನೇರವಾಗಿ ಕೃಷ್ಣಪ್ಪನ ಅಂಗಡಿಗೆ ಕರೆದೊಯ್ದು, ‘ಇವ ನನ್ನ ಮಗ. ಕೂದಲು ಸಣ್ಣದಾಗಿ ಕತ್ತರಿಸಬೇಕು, ನಾನೀಗ ಬರುತ್ತೇನೆ’ ಅಂತ ಹೇಳಿ ಎತ್ತಲೋ ಹೋದರು. ನಾನಾಗ ಸಂಪೂರ್ಣವಾಗಿ ಹೊಸದಾದ ಒಂದು ಲೋಕದಲ್ಲಿದ್ದೆ. ಕೃಷ್ಣಪ್ಪ ಮಾಸಿದ ಬಿಳಿ ಬಣ್ಣದ ಉದ್ದವಾದ ಒಂದು ನಿಲುವಂಗಿ ಹಾಕಿದ್ದ. ಅ ನಿಲುವಂಗಿಯ ಕೆಳಗೆ ಒಂದೆರಡು ಅಡಿ ಮಾತ್ರ ಕಾಣಿಸುವಂತೆ ಅಷ್ಟೇ ಮಾಸಿದ ಬಿಳಿ ಪಂಚೆ. ಬೇರೆಯವರ ಕೂದಲನ್ನು ಕತ್ತರಿಸುವ ಆತ ತನ್ನದೇ ಕೂದಲನ್ನು ಹೇಗೆ ಕತ್ತರಿಸಿಕೊಳ್ಳುತ್ತಾನೆ ಎಂಬ ಕುತೂಹಲದಿಂದ ಆತನ ತಲೆ ನೋಡಿದೆ. ಆತನ ತಲೆಕೂದಲು ನೀಳವಾಗಿದ್ದು, ಅದನ್ನು ಆತ ಪೂತರ್ಿಯಾಗಿ ಹಿಂದಕ್ಕೆ ಬಾಚಿಕೊಂಡಿದ್ದ.ಆ ಉದ್ದ ಕಾಲಿನ ಕುಚರ್ಿಯ ಮೇಲೇರಲು ನನಗೆ ಅಪ್ಪಣೆ ನೀಡಿದ. ಆದರೆ ಅದನ್ನೇರಲು ನನಗೆ ಅಸಾಧ್ಯವಾದದ್ದರಿಂದ ಆತನೇ ನನ್ನನ್ನು ಎತ್ತಿಕುಳ್ಳಿರಿಸಿದ. ನಾನು ಮೊದಲ ಬಾರಿಗೆ ಅಷ್ಟೊಂದು ಬೃಹತ್ತಾದ ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡು ನಾಚಿಕೊಂಡೆ. ಕೃಷ್ಣಪ್ಪ ಹೇಳತೊಡಗಿದ, ‘ಓಯ್ ರೋಯಿತಣ್ಣ (ಆಗಣ ನನ್ನ ಹೆಸರು ರೋಹಿತ), ನಿಮ್ಮ ತಂದೆಯದ್ದು ಭಾರೀ ಅರ್ಥ ಮಾರಾಯ್ರೆ. ಈ ಪಂಜದ ಸುತ್ತಮುತ್ತ ಅವರ ಹಾಗೆ ಯಕ್ಷಗಾನದಲ್ಲಿ ಅರ್ಥ ಹೇಳುವವರು ಬೇರೆ ಯಾರೂ ಇಲ್ಲ. ಬ್ರಾಹ್ಮಣರಿಗೆ ಸಮ ಸಮ ಅರ್ಥ ಹೇಳುತ್ತಾರೆ. ಮೊನ್ನೆ ಬಳ್ಪದಲ್ಲಿ ಅವರ ಕರ್ಣನ ಆರ್ಥಕ್ಕೆ ಜನ ಚಪ್ಪಾಳೆ ತಟ್ಟಿದ್ದರು. ವಿರಾಟಪರ್ವದಲ್ಲಿ ಅವರ ವಲಲನನ್ನು ಮೀರಿಸುವವರು ಈ ಪರಿಸರದಲ್ಲಿ ಯಾರೂ ಇಲ್ಲ’. ಅಪ್ಪನಿಂದ ಪೆಟ್ಟು ತಿಂದು ಮಾತ್ರ ಗೊತ್ತಿರುವ ನನಗೆ, ಅಪ್ಪನಿಗೆ ಹೀಗೊಂದು ಬೇರೆ ಆಯಾಮವಿದೆಯೆಂದು ತಿಳಿದಾಗ ಅವರ ಬಗ್ಗೆ ಗೌರವ ಮೂಡಿತೊಡಗಿತು. ನಾನು ಕತೆ ಕೇಳುತ್ತಿದ್ದ ರೀತಿಗೆ ಕೃಷ್ಣಪ್ಪ ಖುಷಿಗೊಂಡಂತಿದ್ದ. ಮುಂದಿನ ಸಲ ನಾನು ಹೋದಾಗ ಆತ ಇನ್ನಷ್ಟು ಕತೆಹೇಳಿದ. ‘ಕುರುಕ್ಷೇತ್ರ ಪ್ರಸಂಗದಲ್ಲಿ ಕೌರವನ ವೇಷ ಮಾಡುವುದು ಎಷ್ಟು ಕಠಿಣ ಎಂದು ಸ್ವಲ್ಪ ಅಭಿನಯಿಸಿಯೇ ತೋರಿಸಿದ. ಕೃಷ್ಣಪ್ಪನ ಕಥನ ಕ್ರಮಕ್ಕೆ ನಾನು ಮಾರುಹೊಗುತ್ತಿದ್ದೆ. ಅದು ಅವನಿಗೂ ತಿಳಿಯಿತೆಂದು ತೋರುತ್ತದೆ. ಮುಂದಿನ ಸಲ ಹೋದಾಗ ಆತ ನನ್ನನ್ನು ಕುಚರ್ಿಯಲ್ಲಿ ಕುಳಿತುಕೊಳ್ಳಿಸದೆ, ಪಕ್ಕದಲ್ಲಿದ್ದ ಮುರುಕು ಬೆಂಚಿನಲ್ಲಿ ಕುಳ್ಳಿರಿಸಿ ಕತೆ ಹೇಳತೊಡಗಿದ. ನಾನು ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಆತನ ಚೌರದಂಗಡಿಗೆ ತಲುಪಿದರೂ ಅಪರಾಹ್ನ ಮೂರು ಗಂಟೆಯವರೆಗೂ ಆತ ನನ್ನನ್ನು ಬಿಡುತ್ತಿರಲಿಲ್ಲ. ಜೊತೆಗೆ ಅಲ್ಲಿಗೆ ಬಂದವರಿಗೆಲ್ಲ ‘ಈ ಹುಡುಗನಿಗೆ ಯಕ್ಷಗಾನದಲ್ಲಿ ಒಳ್ಳೆಯ ಆಸಕ್ತಿ ಇದೆ ಮಾರಾಯ್ರೆ…’ ಅಂತ ಹೇಳಿ ನಾನು ಎದ್ದು ಹೋಗದಂತೆ ತಂತ್ರವನ್ನೂ ರೂಪಿಸುತ್ತಿದ್ದ. 1961ರ ಜನವರಿ ತಿಂಗಳು. ಕೃಷ್ಣಪ್ಪ ಹೇಳಿದ, ‘ಓಯ್ ರೋಯ್ತಣ್ಣ, ನಾಡಿದ್ದು ಫೆಬ್ರವರಿ ತಿಂಗಳಲ್ಲಿ ಪಂಜ ಜಾತ್ರ್ರೆ ಬರುತ್ತದೆ. ಈ ಸಲದ ಜಾತ್ರೆಯಲ್ಲಿ ಯಕ್ಷಗಾನ ಉಂಟು. ನನ್ನದು ಕೀಚಕ ವೇಷ.. ನೀವು ಬರಬೇಕು ಅಯಿತಾ’. ನನಗೆ ಸ್ವರ್ಗವೇ ಧರೆಗಿಳಿದುಬಂದಂತೆೆ. ಇಷ್ಟು ಕಾಲ ಕತೆ ಹೇಳಿದ ಕೃಷ್ಣಪ್ಪನೇ ವೇಷ ಹಾಕಿ ರಂಗಕ್ಕೆ ಬರುವುದೆಂದರೆ ಸಾಮಾನ್ಯವೇ? ಅದೇ ರಾತ್ರಿ ಅಪ್ಪನಿಂದ ಆಟಕ್ಕೆ ಹೋಗಲು ಅನುಮತಿ ಪಡೆದೆ. ಆಟದ ದಿನ ಬಂತು. ಆಟ ಸುರುವಾಗುವುದು ರಾತ್ರಿ ಹತ್ತು ಗಂಟೆಯ ಆನಂತರವೇ ಆದರೂ ನಾನು ಸಾಯಂಕಾಲ ಆರು ಗಂಟೆಗೇ ಅಲ್ಲಿ ಹಾಜರಿದ್ದೆ. ನೋಡ ನೋಡುತ್ತಿರುವಂತೆ ರಂಗಸ್ಥಳ ಸಿದ್ಧವಾಯಿತು. ಬಣ್ಣದ ಚೌಕಿಗೆ ಎಲ್ಲರಿಗೂ ಪ್ರವೇಶ ಸಿಗದು. ಒಳಗೆ ಪರಿಚಿತರಿದ್ದರೆ ಸ್ವಲ್ಪ ಕಾಲ ಒಳನುಗ್ಗಿ ಹಿಂದೆ ಬರಬಹುದು. ಮನುಷ್ಯರೆಲ್ಲ ಪುರಾಣ ಪಾತ್ರಗಳಾಗಿ ಮಾರ್ಪಡುವ ಆ ಚೌಕಿಯನ್ನು ಹೊಗಲು ಪುಣ್ಯ ಮಾಡಿರಬೇಕೆಂದೂ, ನಮ್ಮಂಥವರಿಗೆ ಅವೆಲ್ಲ ಲಭಿಸದೆಂದೂ ನಾವು ಮೊದಲೇ ತೀಮರ್ಾನ ಮಾಡಿಕೊಂಡದ್ದರಿಂದ ಚೌಕಿ ಪ್ರವೇಶಿಸುವ ಸಾಹಸಕ್ಕೇ ನಾವು ಇಳಿಯುತ್ತಿರಲಿಲ್ಲ. ಆದರೆ ಆದಿನ ಮಾತ್ರ ನನಗೆ ಕೃಷ್ಣಪ್ಪನಿಂದಾಗಿ ಅದೃಷ್ಟ ಖುಲಾಯಿಸಿತು. ಚೌಕಿಯ ಹೊರಭಾಗದಿಂದ ಮೆಲ್ಲಗೆ ಇಣುಕುತ್ತಿದ್ದ ನನ್ನನ್ನು ಕೃಷ್ಣಪ್ಪ ಗುರುತು ಹಿಡಿದು ‘ರೋಯ್ತಣ್ಣ ಬನ್ನಿ’ ಎಂದು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಂಡ. ಹೀಗಾಗಿ ಮಾನವ ನಿಮಿತ್ತರು ದೈವಾತ್ಮ ಸಂಭೂತರಾಗುವುದನ್ನು ನಾನು ಕಣ್ಣಾರೆ ಕಾಣುವಂತಾಯಿತು. ಕೃಷ್ಣಪ್ಪನದ್ದು ಆದಿನ ಕೀಚಕ ವೇಷ. ಆತನ ವೇಷ ರಂಗಪ್ರವೇಶವಾಗುವಾಗ ಮಧ್ಯರಾತ್ರಿ ಎರಡು ಗಂಟೆಯಾದರೂ ಆದೀತು. ಅದಕ್ಕೂ ಮೊದಲು ಬೇರೆ ಕೆಲವು ಪ್ರಸಂಗಗಳಿದ್ದುದರಿಂದ ನಾನು ಆಟ ನೋಡುವುದು, ನಿದ್ದೆ ಮಾಡುವುದು ಮಾಡುತ್ತಿದ್ದೆ. ನಡುರಾತ್ರಿಗೆ ಕೀಚಕ ಸಿದ್ಧನಾಗಿದ್ದ. ನಾನು ಕಣ್ಣ ಎವೆ ಮುಚ್ಚದೆ ಕೀಚಕನ ಪ್ರವೇಶ ನೋಡಲು ಸಿದ್ಧನಾಗಿದ್ದೆ. ಕೃಷ್ಣಪ್ಪ ಆದಿನ ಅತ್ಯುತ್ಸಾಹದಲ್ಲಿದ್ದ. ವೇಷ ಚೆನ್ನಾಗಿಯೇ ಆಗಬೇಕೆಂದು ಮೊದಲೇ ಸ್ವಲ್ಪ ಏರಿಸಿಕೊಂಡಿದ್ದ. ಕೀಚಕ ರಂಗಪ್ರವೇಶಿಸಿ ಸೈರೇಂದ್ರಿಯನ್ನು ಕಂಡು ಇನ್ನೂ ಹೆಚ್ಚು ಮತ್ತೇರಿಸಿಕೊಳ್ಳಬೇಕು, ಅಷ್ಟರಲ್ಲಿ ರಂಗದ ಎರಡೂ ಬದಿಯ ಗ್ಯಾಸ್ಲೈಟ್ ನಲ್ಲಿದ್ದ ಗ್ಯಾಸ್ ಕಡಿಮೆಯಾಗಿ ಭಗ್.. ಭಗ್.. ಅನ್ನ ತೊಡಗಿತು. ಅದರಲ್ಲಿ . ಅದನ್ನು ಸರಿ ಮಾಡುವವರು ಯಾರೂ ಬರಲಿಲ್ಲ. ಸೈರೇಂದ್ರಿಯನ್ನು ಕಂಡ ಕೀಚಕ ಹುಚ್ಚಾಗಿದ್ದ. ಆದರೆ ಗ್ಯಾಸ್ ಲೈಟ್ನ ಬೆಳಕು ಮಂದವಾಗುತ್ತಿತ್ತು. ಕೀಚಕ ಥಟ್ಟನೆ ನಿಲ್ಲಿಸಿದ. ‘ಎಲೈ ಸೈರೇಂದ್ರಿಯೇ ಸ್ವಲ್ಪ ತಡೆ’ ಎಂದು ಹೇಳಿ, ಭಾಗವತರ ಬಳಿ ಸಿಂಹಾಸನವೆಂದು ಇರಿಸಲಾದ ಮರದ ಕುಚರ್ಿಯನ್ನು ಇದಿರು ತಂದ. ಅದರ ಮೇಲೇರಿದ. ಗ್ಯಾಸ್ಲೈಟನ್ನು ಕೆಳಗಿಳಿಸಿದ. ಚೆನ್ನಾಗಿ ಗಾಳಿ ತುಂಬಿಸಿ ಮತ್ತೆ ಮೇಲೇರಿಸಿದ. ಕುಚರ್ಿಯನ್ನು ಮತ್ತೆ ಹಿಂದೆ ಇರಿಸಿ ‘ಎಲೈ ಸೈರೇಂದ್ರಿಯೇ ‘ ಅಂತ ಮುಂದವರಿಸಿದ.ಆಟ ಮುಂದರಿಯಿತು. ಆದರೆ ಗ್ಯಾಸ್ಲೈಟಿಗೆ ಗಾಳಿ ಹಾಕಿದ್ದು ಕೀಚಕನೋ ಅಥವಾ ಕೃಷ್ಣಪ್ಪನೋ ಅಂತ ಈ ಘಟನೆ ನಡೆದು ಅರ್ಧ ಶತಮಾನ ಕಳೆದರೂ ನನಗೆ ತಿಳಿದಿಲ್ಲ. ಮೊನ್ನೆ ಊರಿಗೆ ಹೋದಾಗ ಕೃಷ್ಣಪ್ಪನನ್ನು ಕಾಣಬೇಕೆಂದಿದ್ದೆ ಆದರೆ ಆತ ತೀರಿಕೊಂಡನೆಂದು ಯಾರೋ ಹೇಳಿದರು. ದೇವಮಾನವರೊಡನೆ ಸ್ವತಃ ಸಂಬಂಧ ಸಾಧಿಸಿದ್ದಲ್ಲದೆ, ನನಗೂ ಸಂಬಂಧ ಬೆಳೆಸಲು ಅನುವುಮಾಡಿಕೊಟ್ಟ ಆ ಕೃಷ್ಣಪ್ಪ ತುಂಬ ದೊಡ್ಡ ವ್ಯಕ್ತಿಯೇ ಆಗಿರಬೇಕು. ಚಿತ್ರ: ಇಂದಿನ ಪಂಜ ಪೇಟೆ ]]>

‍ಲೇಖಕರು G

May 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

 1. ಅಶೋಕವರ್ಧನ ಜಿ.ಎನ್

  ರೋಯ್ತಣ್ಣಾ
  ಆ ಡಾ| ಪುರುಶೋತ್ತಮ ಬಿಳಿಮಲೆ ತರಗತಿಯೊಳ್ಗೆ “ಕಲಾವಿದ ಏಕಕಾಲಕ್ಕೆ ವ್ಯಕ್ತಿಯಾಗಿಯೂ ಪಾತ್ರವಾಗಿಯೂ” ಇರಬೇಕೂಂತೇನೋ ಹೇಳ್ತಿದ್ರಲ್ಲಾ ಅದ್ನೇ ಕೃಷ್ಣಪ್ಪ ಆಡಕ್ಗೊತ್ತಿಲ್ದೇ ಹೋದ್ರೂ ಮಾಡಿ ತೋರ್ಸಿದ್ದಲ್ವಾ? ಚೆನ್ನಾಗಿತ್ತು ಚೆನ್ನಾಗಿತ್ತು.
  ಅಶೋಕವರ್ಧನ

  ಪ್ರತಿಕ್ರಿಯೆ
 2. D.RAVI VARMA

  ‘ಎಲೈ ಸೈರೇಂದ್ರಿಯೇ ಸ್ವಲ್ಪ ತಡೆ’ ಎಂದು ಹೇಳಿ, ಭಾಗವತರ ಬಳಿ ಸಿಂಹಾಸನವೆಂದು ಇರಿಸಲಾದ ಮರದ ಕುಚರ್ಿಯನ್ನು ಇದಿರು ತಂದ. ಅದರ ಮೇಲೇರಿದ. ಗ್ಯಾಸ್ಲೈಟನ್ನು ಕೆಳಗಿಳಿಸಿದ. ಚೆನ್ನಾಗಿ ಗಾಳಿ ತುಂಬಿಸಿ ಮತ್ತೆ ಮೇಲೇರಿಸಿದ. ಕುಚರ್ಿಯನ್ನು ಮತ್ತೆ ಹಿಂದೆ ಇರಿಸಿ ‘ಎಲೈ ಸೈರೇಂದ್ರಿಯೇ ‘ ಅಂತ ಮುಂದವರಿಸಿದ.ಆಟ ಮುಂದರಿಯಿತು. ಆದರೆ ಗ್ಯಾಸ್ಲೈಟಿಗೆ ಗಾಳಿ ಹಾಕಿದ್ದು ಕೀಚಕನೋ ಅಥವಾ ಕೃಷ್ಣಪ್ಪನೋ ಅಂತ ಈ ಘಟನೆ ನಡೆದು ಅರ್ಧ ಶತಮಾನ ಕಳೆದರೂ ನನಗೆ ತಿಳಿದಿಲ್ಲ. ಮೊನ್ನೆ ಊರಿಗೆ ಹೋದಾಗ ಕೃಷ್ಣಪ್ಪನನ್ನು ಕಾಣಬೇಕೆಂದಿದ್ದೆ ಆದರೆ ಆತ ತೀರಿಕೊಂಡನೆಂದು ಯಾರೋ ಹೇಳಿದರು. ದೇವಮಾನವರೊಡನೆ ಸ್ವತಃ ಸಂಬಂಧ ಸಾಧಿಸಿದ್ದಲ್ಲದೆ, ನನಗೂ ಸಂಬಂಧ ಬೆಳೆಸಲು ಅನುವುಮಾಡಿಕೊಟ್ಟ ಆ ಕೃಷ್ಣಪ್ಪ ತುಂಬ ದೊಡ್ಡ ವ್ಯಕ್ತಿಯೇ ಆಗಿರಬೇಕು….
  sir excellent .namma kelavu halligalalli krishnappa nanta adbuta daitya prathibhegalu ive,aadare avarannu noduva, avarodane maatanaaduva spandisuva manasugalu beku nimma krishnappanigondu preetipurvaka namaskaara
  RAVI VARMA HOSAPETE

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: