ಪುಸ್ತಕ 'ದಂಧೆ'

-ಬಿ ಆರ್ ಸತ್ಯನಾರಾಯಣ
ನನ್ದೊಂದ್ಮಾತು

ಕನ್ನಡ ಪುಸ್ತಕೋದ್ಯಮದ ದುಸ್ಥಿತಿಗೆ ತೇಜಸ್ವಿ ಬರಹಗಾರರು, ಪ್ರಕಾಶಕರು ಮತ್ತು ಸರ್ಕಾರವನ್ನು ನೇರ ಹೊಣೆಗಾರರನ್ನಾಗಿಸುತ್ತಾರೆ. ಮೊದಲಿಗೆ ತೇಜಸ್ವಿ ಗುರುತಿಸುವಂತೆ, ಬರಹಗಾರರ ಹೊಣೆಗೇಡಿತನವನ್ನು ನೋಡೋಣ. ಪ್ರಸ್ತುತ ಕನ್ನಡದಲ್ಲಿ ಬರದೇ ಬದುಕು ಸಾಗಿಸಬೇಕಾದ ವೃತ್ತಿ ಬರಹಗಾರರು ಇಲ್ಲ ಎಂಬುದು ತೇಜಸ್ವಿಯವರ ಮೊದಲ ಆಕ್ಷೇಪ.
ಇರುವವರೆಲ್ಲಾ ಪಾರ್ಟ್‌ಟೈಮ್ ಬರಹಗಾರರೆಂದೇ ಹೇಳಬಹುದು. ಬರೆಯುವುದು ಒಂದು ತರ ಶೋಕಿಯಾಗುತ್ತಿದೆ. ಬರೆದುದ್ದು ಪುಸ್ತಕ ರೂಪದಲ್ಲಿ ಬಂದರೆ ಸಾಕು. ಸಾಹಿತಿ ಎಂಬ ಲೇಬಲ್ ಅಂಟಿಸಿಕೊಂಡುಬಿಡುತ್ತಾರೆ. ತಾವು ಬರೆದುದ್ದನ್ನು ಬೇರೆಯವರು ಓದುತ್ತಿದ್ದಾರೊ ಇಲ್ಲವೋ ಎಂಬುದರ ಬಗ್ಗೆ ಇವರಿಗೆ ಪ್ರಾಥಮಿಕ ಜ್ಞಾನವೂ ಇಲ್ಲ. ತಮ್ಮ ಪುಸ್ತಕದ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆಯೂ ಯೋಚಿಸುವ ವ್ಯವಧಾನವೂ ಇಲ್ಲ. ಇಂದು ಕನ್ನಡದಲ್ಲಿ ಒಂದೂ ಪೈಸೆ ಗೌರವಧನ ಪಡೆಯದೆ ತಮ್ಮ ಪುಸ್ತಕಗಳು ಪ್ರಕಟವಾದರೆ ಸಾಕು ಎಂದು ಪ್ರಕಾಶಕರಿಗೆ ಕೊಟ್ಟು ಬಿಡುವ ಲೇಖಕರ ಸಂಖ್ಯೆಯೇ ಶೇಕಡಾ ಎಂಬತ್ತನ್ನು ಮೀರಬಹುದು. ಇದರಲ್ಲಿ ಹೆಚ್ಚಿನವರು ಸಾಹಿತ್ಯ ಕ್ಷೇತ್ರಕ್ಕೆ ಹೊಸಬರಿರುತ್ತಾರೆ. ಪ್ರಕಟವಾದ ಪುಸ್ತಕದ ಒಂದಷ್ಟು ಕಾಪಿಗಳನ್ನು ಪಡೆದುಕೊಂಡು, ಪತ್ರಿಕೆಗಳಿಗೆ, ಸ್ನೇಹಿತರಿಗೆ ಹಂಚಿ ಉಳಿದಿದ್ದನ್ನು ಅಟ್ಟಕ್ಕೆ ಸಾಗಿಸಿ ಸುಮ್ಮನಾಗಿಸಿಬಿಡುತ್ತಾರೆ. ಇನ್ನು ಇಂತಹವರ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರೂ ಅಷ್ಟೆ. ಸರ್ಕಾರಿ ಗ್ರಂಥಾಲಯಗಳಿಗೆ ಒಂದಷ್ಟು ಪ್ರತಿಗಳನ್ನು ಮಾರಿ ಹಾಕಿದ ಬಂಡವಾಳ ಹಿಂತೆಗೆದುಕೊಂಡು ಸುಮ್ಮನಾಗಿಬಿಡುತ್ತಾರೆ.
ಮೊದಲ ಬಗೆಯ ಬರಹಗಾರರಲ್ಲದೆ ಉಳಿದ ಶೇಕಡಾ ಇಪ್ಪತ್ತು ಬರಹಗಾರರೂ ಸಿರಿಯಸ್ಸಾಗೇನೂ ಬರವಣಿಗೆಯನ್ನು ತಗೆದುಕೊಂಡವರಲ್ಲ. ತಾವು ಆಗಾಗ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು, ಮಂಡಿಸಿದ ಪ್ರಬಂದಗಳನ್ನು, ಕೊನೆಗೆ ಎಲ್ಲೋ ಮಾಡಿದ ಭಾಷಣಗಳನ್ನು ಬರಹ ರೂಪಕ್ಕೆ ತಂದು ಪುಸ್ತಕ ಪ್ರಕಟಣೆಗೆ ಕೊಟ್ಟುಬಿಡುತ್ತಾರೆ. ಇವರೆಲ್ಲರೂ ಸ್ವಲ್ಪ ಸಾಹಿತ್ಯ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಹೆಸರು ಮಾಡಿದಂತವರು. ಆದರೆ ಇವರೂ ತಮ್ಮ ಪುಸ್ತಕದ ಮಾರುಕಟ್ಟೆಯ ಬಗ್ಗೆ ಯಾವುದೇ ಫೀಡ್‌ಬ್ಯಾಕ್ ಹಾಗೂ ಓದುಗರ ಅಭಿರುಚಿಯ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ. ನಿಜವಾಗಿ ಸಾಹಿತ್ಯವನ್ನು ಸೀರಿಯಸ್ಶಾಗಿ ತೆಗೆದುಕೊಂಡು ತಾವು ಬರೆದುದ್ದು ಮಾರಾಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮನಗಂಡು, ಓದುಗರ ಪ್ರತಿಕ್ರಿಯೆಗಳನ್ನು ಗಮನಿಸಿ ಮುಂದಡಿಯಿಡುವ ಕನ್ನಡ ಬರಹಗಾರರ ಸಂಖ್ಯೆ ಬೆರಳೆಣಿಕೆಯಷ್ಟಿಲ್ಲ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.
ಇನ್ನು ಪ್ರಕಾಶಕರು. ಇವರಿಂದಲೇ ಇಡೀ ಪುಸ್ತಕೋದ್ಯಮ ಈ ಮಟ್ಟಿನ ದುಸ್ಥಿತಿಗೆ ಇಳಿದಿದೆ ಎಂಬುದು ತೇಜಸ್ವಿಯವರ ಎರಡನೇ ಆಕ್ಷೇಪಣೆ. ಪಠ್ಯಪುಸ್ತಕಗಳನ್ನು ಮಾತ್ರ ಪ್ರಕಟಿಸುವ ಪ್ರಕಾಶಕರು ಶಿಕ್ಷಣ ಕ್ಷೇತ್ರದ, ತನ್ಮೂಲಕ ಇಡೀ ದೇಶದ ಸಂಸ್ಕೃತಿಯ ದುಸ್ಥಿತಿಗೆ ಕಾರಣರಾಗಿದ್ದಾರೆ. ಇದರಲ್ಲಿ ಬರಹಗಾರರ ಪಾಲೂ ಇದೆ. ಕೇವಲ ಪಠ್ಯಪುಸ್ತಕಗಳನ್ನೇ ಬರೆಯುವ ವೃತ್ತಿಬರಹಗಾರರು ಅಲ್ಲಲ್ಲಿ ಸಿಗುತ್ತಾರೆ. ಹೆಸರನ್ನು ಹಾಕಿಕೊಳ್ಳದೇ ಕನ್ನಡ ಪಠ್ಯಪುಸ್ತಕಗಳಿಗೆ ಗೈಡ್ ಬರೆಯುವ ಅಧ್ಯಾಪಕರೂ ನಮ್ಮ ನಡುವೆ ಇದ್ದಾರೆ. ಕನ್ನಡವನ್ನು ಮಾತೃಭಾಷೆಯನ್ನಾಗಿ ಉಳ್ಳ ಒಬ್ಬ ವಿದ್ಯಾರ್ಥಿ, ಕನ್ನಡ ಪಠ್ಯವನ್ನು ಗೈಡ್ ಮುಖಾಂತರ ಓದುವ ದುಸ್ಥಿತಿಯೇ ಭಯಂಕರವಾದದ್ದು. ಇನ್ನು ಕೆಲವರು ಸರಸ್ವತಿಯ ಸೇವೆ ಎಂದೋ ಕನ್ನಡದ ಸೇವೆ ಎಂದೋ ಪುಸ್ತಕಗಳನ್ನು ಪ್ರಕಟಿಸುವವರು. ಇವರು ಪುಸ್ತಕೋದ್ಯಮಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಇರುವವರು. ಇವರಿಂದಲೂ ಬರಹಗಾರರಿಗೆ ಯಾವುದೇ ರೀತಿಯ ಫೀಡ್‌ಬ್ಯಾಕ್ ಸಿಗುವುದಿಲ್ಲ.
ರಾಜ್ಯ ಹಾಗೂ ಕೇಂದ್ರಸರ್ಕಾರದ ಯಾವ ಯಾವ ಸ್ಕೀಮ್‌ಗಳಲ್ಲಿ ಎಷ್ಟೆಷ್ಟು ಹಣವಿದೆ ಎಂಬುದನ್ನು ತಿಳಿದು ಆ ಸ್ಕೀಮಿಗೆ ಬೇಕಾದಂತಹ ಪುಸ್ತಕಗಳನ್ನು ಮುದ್ರಿಸುವ ಒಂದು ಪ್ರಕಾಶಕ ವರ್ಗವಿದೆ. ಇವರು ಕೆಲವೇ ದಿನಗಳಲ್ಲಿ, ಬೇಡಿಕೆಯಿರುವ ಎಲ್ಲಾ ವಿಷಯಗಳ ಪುಸ್ತಕಗಳನ್ನು ಬರೆಯಿಸಿ ಮುದ್ರಿಸಿ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಆಯಾಯ ಸ್ಕೀಮಿನ ಸರ್ಕಾರಿ ಅಧಿಕಾರಿಗೆ ಇದರಲ್ಲಿ ಸಿಂಹಪಾಲು ಲಾಭವಿದೆ. ಆದರೆ ಬರಹಗಾರನಿಗೂ ಓದುಗನಿಗೂ ಯಾವುದೇ ಲಾಭವಿಲ್ಲ.
ಇನ್ನು ಕೊನೆಯವರು ಕೇವಲ ಗ್ರಂಥಾಲಯಕ್ಕೆ ಸರ್ಕಾರ ಕೊಂಡುಕೊಳ್ಳುವ ಸೀಮಿತ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಪುಸ್ತಕ ಪ್ರಕಟಿಸಿ ಲಾಭ ಮಾಡುವವರು. ಇವರು ಸರ್ಕಾರ ಕೊಂಡುಕೊಳ್ಳುವ ನೂರೋ ಇನ್ನೂರೋ ಪ್ರತಿಗಳಲ್ಲೇ ತಾವು ಹಾಕಿದ ಬಂಡವಾಳವನ್ನು ವಾಪಸ್ ಪಡೆಯಬಲ್ಲ ಚಾಣಕ್ಯರು. ಇಲ್ಲೂ ಲೇಖಕರಿಗೆ ಗೌರವಪ್ರತಿಗಳೇ ಗತಿ. ಇಂತಹ ಪ್ರಕಾಶಕರಿಂದ ಸಂಭಾವನೆ ಪಡೆಯುವ ಲೇಖಕರ ಸಂಖ್ಯೆ ಶೇಕಡಾ ಐದೋ ಹತ್ತೋ ಇರಬಹುದು ಅಷ್ಟೆ. ಆದರೆ ಗ್ರಂಥಾಲಯಗಳಲ್ಲಿ ಮಾತ್ರ ಕಸದ ರಾಶಿಯಂತೆ ಪುಸ್ತಕಗಳನ್ನು ತುಂಬಿಕೊಳ್ಳುತ್ತಾರೆ. ಇದರಲ್ಲಿ ಪುಸ್ತಕ ಆಯ್ಕೆ ಸಮಿತಿಯವರು, ಗ್ರಂಥಾಲಯ ಅಧಿಕಾರಿಗಳು, ಗ್ರಂಥಪಾಲಕರು ಪಾಲು ಪಡೆಯುತ್ತಾರೆ. ಐದು ವರ್ಷ ಗ್ರಂಥಾಲಯಗಳಿಗೆ ಯಾವುದೇ ಪುಸ್ತಕ ಖರೀದಿಸದಿದ್ದರೆ, ಈ ಬಗೆಯ ಪ್ರಕಾಶಕರಲ್ಲೆ ಶೇಕಡಾ ತೊಂಬತ್ತಕ್ಕೂ ಹೆಚ್ಚುಜನ ತಮ್ಮ ಉದ್ಯೋಗ ಬದಲಾಯಿಸಬೇಕಾಗುತ್ತದೆ ಇಲ್ಲ ಬಿಡಬೇಕಾಗುತ್ತದೆ. ನಿಜವಾಗಿ ಕನ್ನಡ ಪುಸ್ತಕೋದ್ಯಮದಲ್ಲಿ, ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಾ ಮಾರುಕಟ್ಟೆಯನ್ನು ಬೆಳೆಸುತ್ತಾ ಬಂದಿರುವ ಪ್ರಕಾಶಕ ಸಂಸ್ಥೆಗಳ ಸಂಖ್ಯೆ ಹತ್ತನ್ನು ದಾಟುವುದಿಲ್ಲ.
ಇಂದು ಸರ್ಕಾರ ಎಲ್ಲವಕ್ಕೂ ಅನುಧಾನ ಕೊಡುತ್ತಾ ಎಲ್ಲವನ್ನೂ ಹಾಳು ಮಾಡುತ್ತಿದೆ. ಚಲನಚಿತ್ರೋದ್ಯಮಕ್ಕೆ, ಪುಸ್ತಕೋದ್ಯಮಕ್ಕೆ, ಕನ್ನಡದ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ, ಕೆಲವು ನಾಟಕ ಕಂಪೆನಿಗಳಿಗೆ ಎಲ್ಲವಕ್ಕೂ ಸರ್ಕಾರದ ಅನುದಾನವೇ ಉಸಿರಾಗಿದೆ. ಇಂದೊಮ್ಮೆ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಭೆಯಲ್ಲಿ ಚಂದ್ರಹಾಸ ಗುಪ್ತ ಎಂಬ ಅಧಿಕಾರಿಯೊಬ್ಬರು ಆಗಿನ ಸಾಹಿತ್ಯ ಪರಿಷತ್ ಪದಾಧಿಕಾರಿಗಳಗೆ ಒಂದು ಪ್ರಶ್ನೆ ಕೇಳಿದ್ದು ನೆನಪಾಗುತ್ತಿದೆ. ‘ಒಂದು ಆಪ್‌ಸೆಟ್ ಮುದ್ರಣ ಯಂತ್ರವನ್ನು ಇಟ್ಟುಕೊಂಡಿರುವವನು ನಾಲ್ಕಾರು ಜನಕ್ಕೆ ಕೆಲಸಕೊಟ್ಟೂ ಸಂಬಳ ಕೊಟ್ಟೂ ತಾನೂ ಲಾಭ ಮಾಡುತ್ತಾ ಇರಬೇಕಾದರೆ ಪರಿಷತ್ ಮೂರು ಆಫ್‌ಸೆಟ್ ಮುದ್ರಣ ಯಂತ್ರಗಳನ್ನು ಇಟ್ಟುಕೊಂಡೂ, ಅವುಗಳ ರಿಪೇರಿಗೆಂದು ಅನುದಾನಕ್ಕಾಗಿ ಸರ್ಕಾರಕ್ಕೆ ಕೈ ಚಾಚುತ್ತಿರುವುದೇಕೆ? ಈ ರೀತಿ ಅನುದಾನದಿಂದಲೇ, ನಡೆಯುವ ಪುಸ್ತಕೋದ್ಯಮದ ಅಗತ್ಯವಾದರೂ ಏನು?’ ಎಂದು ಪ್ರಶ್ನಿಸಿದ್ದರು. ತೇಜಸ್ವಿ ಇದನ್ನೇ ಇನ್ನೂ ನಿಖರವಾಗಿ ಖಾರವಾಗಿ ಹೇಳುತ್ತಾರೆ. ‘ನನ್ನಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟುಕೊಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ’ ಎಂದು. ತೇಜಸ್ವಿ ಈ ಮಾತನ್ನು ಹೇಳಿದ್ದು ರಂಗಾಯಣದ ಕಲಾವಿದರನ್ನು ಕುರಿತು. ಈ ಮಾತನ್ನು ಕೇಳಿದ ನಂತರ ರಂಗಾಯಣದ ಎಷ್ಟೋ ಜನ ಕಲಾವಿದರು ಹೊರಬಂದು ಸಿನಿಮಾ ಟೀವಿಗಳಲ್ಲಿ ತಮ್ಮ ಹೊಟ್ಟೆ ಪಾಡು ಕಂಡುಕೊಂಡರು. ಇದೇ ಮಾತು ಕೋಟಿಗಟ್ಟಲೆ ಅನುದಾನ ಪಡೆಯುತ್ತಿರುವ ಅಕಾಡೆಮಿಗಳು, ಪ್ರಾಧಿಕಾರಗಳು ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ. ಗ್ರಂಥಾಲಯಗಳ ಪುಸ್ತಕ ಖರೀದಿ, ಅಕಾಡೆಮಿಗಳ ಕಾರ್ಯನಿರ್ವಹಣೆ, ಪುಸ್ತಕ ಪ್ರಾಧಿಕಾರದ ದುಂದುವೆಚ್ಚದ ಪ್ರಕಟಣೆಗಳು ಇವನ್ನು ನೋಡಿದಾಗ ಸಾರ್ವಜನಿಕರ ಹಣವನ್ನು ಕೆಲವೇ ಮಂದಿ ಸೇರಿಕೊಂಡು ಮಜಾ ಉಡಾಯಿಸುತ್ತಿದ್ದಾರೆ ಎಂಬ ಅನುಮಾನ ಬಾರದಿರದು.
ಅನುದಾನ ಎಂಬುದು ಯಾವುದೇ ಕಲೆಗೆ, ಸಂಸ್ಥೆಗೆ ತತ್ಕಾಲಿಕವಾಗಿ ಇರಬೇಕಾದ್ದು. ಅದೇ ನಿರಂತರವಾದರೆ ಅದರಿಂದ ನಡೆಯುವ ಸಂಸ್ಥೆಗಳು ಸ್ವಂತಿಕೆಯನ್ನು ಕಳೆದುಕೊಂಡು ಬರೇ ಲೆಕ್ಕ ಕೊಡುತ್ತಾ ಕೂರಬೇಕಾಗುತ್ತದೆ ಎನ್ನುತ್ತಾರೆ ತೇಜಸ್ವಿ. ಕಡೆಗೆ ತೇಜಸ್ವಿ ಸರ್ಕಾರಕ್ಕೆ ‘ನೀವು ಕೊಟ್ಟ ಅನುದಾನ ಏನಾಗತ್ತಿದೆ ಎಂಬುದನ್ನಾದರೂ ಸರಿಯಾಗಿ ಗಮನಿಸಿ ಲೆಕ್ಕ ಕೇಳಿ’ ಎಂದು ಸಲಹೆ ಕೊಟ್ಟಿದ್ದರು. ನನ್ನ ಸ್ವಂತ ಅನುಭವದಿಂದ ಹೇಳುವುದಾದರೆ ನಮ್ಮ ಗ್ರಂಥಾಲಯದಲ್ಲಿರುವ ಸುಮಾರು ಮೂರುಸಾವಿರ ಕನ್ನಡ ಪುಸ್ತಕಗಳಲ್ಲಿ ಮುಕ್ಕಾಲುಪಾಲು ಪುಸ್ತಕಗಳನ್ನು ಕೇಳುವವರೇ ಇಲ್ಲ. ನಮ್ಮ ಸಂಗ್ರಹದಲ್ಲಿ ಬಹುತೇಕ ಪ್ರಕಟಣೆಗಳು ವಿಶ್ವವಿದ್ಯಾಲಯಗಳು, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪರಿಷತ್ತು ಪ್ರಕಟಿಸಿದಂತಹವುಗಳೇ ಆಗಿವೆ.

‍ಲೇಖಕರು avadhi

January 21, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

 1. Vasanth

  Sir,
  I just wanted to share my experience in college libraries
  In colleges book purchasing mafia is much more stronger now. The semester scheme is a blessing in disguise for many lecturers. Without any proper citations and readings they compile 20 to 30 pages of information and publish that as a semester book. In most of the cases the author himself a publisher. They compel college libraries to publish those books in bulk. This menace is very rampant. Principal (few exceptions) in most colleges because of extra commission! they go for semester books instead of good well researched ones.
  Thanks for the postings. Good one.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: