ಪೂಮಲೆಯಾಚೆಯ ನಾಡವನೆ, ನನ್ನವನೇ…

ಹುಲ್ಲಾಗು ಬೆಟ್ಟದಡಿ/ ಮನೆಗೆ ಮಲ್ಲಿಗೆಯಾಗು/ ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ/ ಬೆಲ್ಲ ಸಕ್ಕರೆಯಾಗು/ ದೀನ ದುರ್ಭಲರಿಂಗೆ/ ಎಲ್ಲರೊಳಗೊಂದಾಗು ಮಂಕುತಿಮ್ಮ…ಎನ್ನುವ ಡಿ ವಿ ಜಿ ವಾಣಿಯಂತೆ ನಮ್ಮ ಹರೀಶ್ ಖೇರ.

ಬೆಟ್ಟದಡಿ.. ಎಂಬ ಬ್ಲಾಗ್ ಅವರ ಕುಸುರಿಗೆಲಸಕ್ಕೆ ಸಾಕ್ಷಿ. ‘ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಯಬಹುದೆ?’ ಎಂಬ ಟ್ಯಾಗ್ ಲೈನ್ ಒಂದೇ ಸಾಕು ಅವರ ಬರಹದ ರೀತಿ ತಿಳಿಸಲು. ಒಂದು ಹುಲ್ಲಿನ ಕ್ರಾಂತಿ ಬರೆದ ಫುಕುವೋಕನನ್ನು ಎಲ್ಲರೂ ನೋಡುತ್ತಿದ್ದರೆ ಇವರು ಕವಿತೆ ಬರೆದ ಫುಕುವೋಕಾನ ಬೆನ್ನು ಹತ್ತುತ್ತಾರೆ.  “ವಿದೌಟ್ ಟಿಟ್ಸ್ ದೇರ್ ಈಸ್ ನೋ ಪ್ಯಾರಡೈಸ್.’ ಎಂಬ ಕೊಲಂಬಿಯಾದ ಟಿ ವಿ ಧಾರಾವಾಹಿಯ ಬೆನ್ನು ಹತ್ತುತ್ತಾರೆ. ಚಿರತೆ ಊರಿಗೆ ಬಂದದ್ದು, ಸುಧನ್ವ ಕವಿತೆ ಬರೆದದ್ದು, ಕಾಗಿನೆಲೆ ಅವರ ‘ಬಿಳಿಯ ಚಾದರ’ ಕಾಡಿದ್ದು ಎಲ್ಲವೂ ಇವರದೇ ಶೈಲಿಯಲ್ಲಿ ಇಲ್ಲಿ ಹಾಜರಾಗಿದೆ. ಕನ್ನಡದ ಬ್ಲಾಗ್ ಗಳು ಬೆಳೆಯುತ್ತಿರುವುದಕ್ಕೆ ಖೇರ ಮೈಲುಗಲ್ಲಾಗಿ ನಿಂತಿದ್ದಾರೆ.

ಖೇರ ಯಾರು. ಅವರೇ ಪರಿಚಯ ಮಾಡಿಕೊಳ್ಳುವುದು ಹೀಗೆ-
ಹೆಸರು- ಹರೀಶ್ ಕೇರ. ಕುಮಾರ ಪರ್ವತ, ಬಂಟಮಲೆ, ಪೂಮಲೆಗಳ ನಡುವಿನ ದಟ್ಟ ಕಣಿವೆಯಿಂದ ಹೊರಬಿದ್ದು ಇದೀಗ ಬರಹ ಮತ್ತು ಬದುಕಿನ ಉಲ್ಲಾಸ ವಿಷಾದಗಳ ಬೆಟ್ಟದಡಿಯಲ್ಲಿ.

ಕವಿ ಜಿ ಎಸ್ ಉಬರಡ್ಕ ಪೂಮಲೆಯಾಚೆಯ ನಾಡವನೆ, ನನ್ನವನೇ…ಎಂಬ ಕವಿತೆ ಬರೆದಿದ್ದಾರೆ. ಹರೀಶ್ ಖೇರ ಅವರಿಗೆ ಇದು ಅನ್ವಯಿಸುತ್ತದೇನೋ..?  ಖೇರ ಅವರ ಬರಹದ ರುಚಿ ಉಣಬಡಿಸಲು ಅವರ ಪುಟ್ಟ ಕಥೆಯೊಂದು ಇಲ್ಲಿದೆ.

 

ನ್ಯಾಯ

“ಎಲ್ಲಿಗೆ ಓಡುತ್ತಿದ್ದೀ, ನಿಲ್ಲು. ಬುರ್ಖಾ ತೆಗೆ”
“ನನ್ನನ್ನೇನೂ ಮಾಡಬೇಡಿ, ಪ್ಲೀಸ್”
“ಇಲ್ಲ ಏನೂ ಮಾಡುವುದಿಲ್ಲ. ಆದರೆ ಕೊಂಚ ನ್ಯಾಯ ವಿಚಾರಣೆ ನಡೆಸಬೇಕಾಗಿದೆ”
“ಏನದು ?”
“ನಿನ್ನೆ ನಮ್ಮ ಬೀದಿಯಲ್ಲಿ ನಮ್ಮ ಧರ್ಮದವನೊಬ್ಬನ ಕೊಲೆಯಾಯಿತು. ಅದನ್ನು ಮಾಡಿದ್ದು ನಿನ್ನ ಧರ್ಮದವರು”
“ಕೊಲೆಗಾರರು ಯಾರೆಂದು ನನಗೆ ಗೊತ್ತಿಲ್ಲ. ಆ ಧರ್ಮದಲ್ಲಿ ಹುಟ್ಟಿದ್ದು ನನ್ನ ತಪ್ಪಲ್ಲ. ನಿಮ್ಮ ಧರ್ಮದಲ್ಲಿ ಹುಟ್ಟುವುದು ನನ್ನ ಕೈಯಲ್ಲಿ ಇರಲಿಲ್ಲ”
“ನಾವು ಪ್ರಶ್ನೆ ಕೇಳದಿದ್ದರೆ ನೀನು ಉತ್ತರಿಸುವುದು ಬೇಕಾಗಿಲ್ಲ. ನಿನಗೆಷ್ಟು ಮಕ್ಕಳು ?”
“ಐದು ಮಂದಿ”
“ಅವರು ಈ ಕೊಲೆ ಮಾಡಿರಬಹುದು !”
“ಅವರೆಲ್ಲ ಮುಗ್ದ ಹೆಣ್ಣುಮಕ್ಕಳು”
“ಅಂದರೆ ಅವರು ನಮ್ಮ ಧರ್ಮದವರ ತಲೆ ಕೆಡಿಸಿ ನೀತಿ ತಪ್ಪಿಸುತ್ತಿರಬಹುದು. ಇರಲಿ, ನಿನ್ನ ಹೆಣ್ಣುಮಕ್ಕಳು ಇರುವಲ್ಲಿಗೆ ನಮ್ಮನ್ನೀಗ ಕರೆದೊಯ್ದರೆ ನಿನಗೆ ಈ ವಿಚಾರಣೆಯಿಂದ ಮಾಫಿ”
“ಅವರೆಲ್ಲ ಹಲವಾರು ವರ್ಷಗಳ ಹಿಂದೆ ಮದುವೆಯಾಗಿ ಈ ಊರನ್ನೇ ತೊರೆದು ಹೋಗಿದ್ದಾರೆ”
“ಹಾಗಿದ್ದರೆ ನಿನ್ನ ವಿಚಾರಣೆ ಮುಂದುವರಿಯುತ್ತದೆ. ನಮ್ಮ ಧರ್ಮದ ಅನೇಕ ಮಂದಿಯನ್ನು ಈ ಹಿಂದೆ ಕೊಲ್ಲಲಾಗಿದೆ. ಅದನ್ನು ನಿನ್ನ ಗಂಡ ಅಥವಾ ತಂದೆ ಮಾಡಿರಬಹುದು”
“ಅವರಿಬ್ಬರೂ ಸತ್ತು ಹಲವು ವರ್ಷಗಳಾದವು”
“ಅಂದರೆ ದೇವರು ಅವರಿಗೆ ಆಗಲೇ ಶಿಕ್ಷೆ ಕರುಣಿಸಿದ್ದಾನೆ ಅನ್ನು. ನಮ್ಮ ಧರ್ಮದ ಅನೇಕ ಮಹಿಳೆಯರ ಮೇಲೆ ನಿಮ್ಮ ಧರ್ಮದವರು ಅತ್ಯಾಚಾರ ಮಾಡಿದ್ದಾರೆ. ಅವರ ಆತ್ಮಗಳು ನ್ಯಾಯಕ್ಕಾಗಿ ಪರಿತಪಿಸುತ್ತಿವೆ”
“ಸರಿ, ನೀವು ನನಗೆ ಶಿಕ್ಷೆ ನೀಡುವುದಂತೂ ಖಚಿತ. ಈ ಕೃತ್ಯಗಳು ಯಾವಾಗ ನಡೆದವೆಂದು ಹೇಳಿ”
“೫೦೦ ವರ್ಷಗಳ ಹಿಂದೆ !”

‍ಲೇಖಕರು avadhi

April 10, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This