ಪೆಕರ ಫಕೀರ…

ಮಹದೇವ ಹಡಪದ

ಪೆಕರ ಅನ್ನೋ ಅಡ್ಡ ನಾಮೆ ಬಂದದ್ದು ಫಕೀರನ ಬುದ್ಧಿವಂತಿಕೆಗೆ ಸಿಕ್ಕ ಗೌರವವಾಗಿತ್ತು. ನವಿಲುಗರಿಯಿಂದ ಆಶೀರ್ವದಿಸುವ, ದೂಪಧಾರಿ, ಅಲ್ಲಾಹುವಿನ ಕುದುರಿ- ಮುಧೋಳ ಸೈಯ್ಯದಸಾಬ ದರ್ಗಾದಲ್ಲಿ ಕೂತಿರುತ್ತಿದ್ದ ಫಕೀರನೆಂಬ ಸಂತನ ಅನುಗ್ರಹದಿಂದ ಈ ನಮ್ಮ ಪೆಕರ ಹುಟ್ಟಿದ್ದ…. ಹಾಗಾಗಿ ಅವನ ತಾಯಿಯೇ ಅವನಿಗೆ “ಫಕೀರ” ಅನ್ನೋ ಹೆಸರಿಟ್ಟದ್ದಳು. ಓದಲು ಶಾಲೆಗೆ ಹೋಗು ಅಂದ್ರೆ ಹಳ್ಳ-ಕೊಳ್ಳ, ಭೂಮಿ-ಸೀಮಿ ಸುತ್ತಿ ಮನೆಗೆ ಬರುತ್ತಿದ್ದ. ಮಾಸ್ತರರಿಗೂ ಅವನ ಕಂಡರೆ ಎಲ್ಲಿಲ್ಲದ ಅಕ್ಕರಾಸ್ಥೆ, ಫಕೀರ ಶಾಲೆಗೆ ಬರಲಿ ಬಿಡಲಿ ದಿನ ಸಾಯಂಕಾಲ ಅವರ ಮನೆಗೆ ತಪ್ಪದೆ ನೀರು ಸೇದುತ್ತಿದ್ದ ಕಾರಣಕ್ಕಾಗಿ ಅವನ ಮೇಲೆ ಅವರೆಂದೂ ಕೈ ಮಾಡುತ್ತಿರಲಿಲ್ಲ. ಅದೇ ಪ್ರಿತಿಯಿಂದ ಅವನನ್ನು ತರಗತಿಯಿಂದ ತರಗತಿಗೆ ಪಾಸು ಮಾಡುವುದು ಅವರಿಗೆ ನೀರು ಕುಡಿದಷ್ಟು ಸುಲಭದ ಕೆಲಸವಾಗಿತ್ತು. ಫಕೀರ ಹೆಚ್ಚು ಉಪಯೋಗವಾಗುತ್ತಿದ್ದದ್ದು ಹೀಗೆ… ಮುದುಕರ ಕೈ ಕೋಲಿಗೆ ಆಸರಾಗುವುದು. ಬಾಣಂತಿಯರ ಮನೆಗೆ ಬೆರಣಿ-ಬೇವಿನಸೊಪ್ಪು ತಂದುಕೊಡೊದು, ಹಾದಿ ಮ್ಯಾಲಿನ ಕಲ್ಲು ಮುಳ್ಳು ತಗದ ಹಾಕೋದು. ಗರತಿ ಹೆಣ್ಣಮಕ್ಕಳಿಗೆ ಅಂಗಡಿಯಿಂದ ಸಾಮಾನು ಸರಂಜಾಮ ತಂದು ಕೊಡೋದು, ಎಳೆ ಕೂಸಗಳನ್ನ ಎತ್ತಿ ಆಡಿಸೋದು ಅಲ್ಲದ ಗೊತ್ತ್ಯಾದ ಒಂಟಿ ಕುಟುಂಬಗಳ ಆಸರಕ್ಕ ನಿಂತು ರಾಶಿ ತೂರಿಕೊಡೊದು… ಹಿಂಗ ಊರ ಮಂದಿಯ ಕಣ್ಣೊಳಗ ಪುಕ್ಕಟೆ ಭಿಡೆಕ್ಕ ದುಡಿಯುವ ಆಳುಮಗನ್ಹಂಗ ಪಕೀರ ಕೆಲಸ ಮಾಡುತ್ತಿದ್ದ ಕಾರಣಕ್ಕಾಗಿಯೇ ಅವನಿಗೆ ಪೆಕರ ಅನ್ನೋ ಬಿರುದು ಸಿಕ್ಕಿದ್ದು.

ಕಲೆ : ಸೃಜನ್

ಅವನ ತಾಯಿಗೆ ಮಗ ಓದಿ ದೊಡ್ಡ ಮನಶ್ಯಾ ಆಗೋದು ಅಂದ್ರ ಬಸ್ಸಿನ ಡ್ರಾಯವರ್ ಆಗಬೇಕು ಅಂಬೋದು ದೊಡ್ಡ ಆಸೆ. ಒಂದು ಕಾಲಕ್ಕ ಈ ಡ್ರೈವರ್ ಮಹಾಶಯರು ಹಳ್ಳಿಹುಡುಗಿಯರ ಕನಸಿನ ಚಿತ್ರಗಳಾಗಿದ್ದರು. ದಾರಿ ಮ್ಯಾಲ ಸಿಗೋ ಹುಡುಗಿಯರಿಗೆಲ್ಲ ಐಸ್ ಕ್ಯಾಂಡಿ ಹಾರ್ನ್ ಹೊಡೆದು ಮರಳು ಮಾಡತಿದ್ದದ್ದು ಕಂಡು ಚಿತ್ತಾಗಿದ್ದ ಆ ಹೆಣಮಗಳ ಕಣ್ಣಾಗ ಡ್ರೈವರ್ ಅಂದ್ರ ಹೀರೋ ಆಗಿದ್ದ, ಹ್ಯಾರಿಪಾಟರ್, ಸ್ಪೈಡರಮ್ಯಾನ್, ಹಿಮ್ಯಾನ್ ಅಂತ ಈಗೇನು ಹೇಳ್ತಿವಲ್ಲ ಅವೆಲ್ಲ ಆಗಿನ ಕಾಲಕ್ಕ ಅವನೊಬ್ಬನೇ ಆಗಿದ್ದ. ಬಂವೋಂ………ಅಂತ ಟ್ರಕ್ಕು, ಬಸ್ಸು, ಟಿಪ್ಪರ್, ಕಾರುಗಳು ಬೆಳಗಾಂವ ಬಾಗಲಕೋಟಿ ಹೈದರಾಬಾದ್ ರಸ್ತೆ ಮ್ಯಾಲ ಓಡ್ಯಾಡತಿದ್ದರ ಆಕೀ ಕಣ್ಣಾಗ ಒಂದ ನಮೂನಿ ಥ್ರಿಲ್ ಮೂಡತಿತ್ತು. ಆಕಿಗೆ ಡ್ರೈವರ್ ಅಂದ್ರ ಪಾರೋತಿ-ಪರಮೇಶ್ವರನ ವಾಹಕ ನಂದಿ, ಸಾಕ್ಷಾತ್ ಬಸವಣ್ಣನೇ ಇವನು ಅಂದುಕೊಂಡಿದ್ದಳೋ ಏನೋ… ಹಂಗಾಗಿ ಡ್ರೈವರ್ ವಿಶೇಷವಾದ ದೇವರು ಅನ್ನೋ ಭಾವದಲ್ಲಿ- ಆ ಸ್ಟೇರಿಂಗು, ಆ ಹಾರ್ನು, ಆ ಗ್ಲಾಸು, ಆ ಗೇರುಗಳನ್ನ ಕುತೂಹಲದಿಂದ ನೋಡತಿದ್ದಳು. ಒಂದ ದಿನ ತುಳಸಿಗೇರಿ ಹಣ್ಮಪ್ಪನ ಜಾತ್ರಿಗೆ ಹೊಂಟ ನಿಂತಾಗ ಕೂಲಂಕುಶವಾಗಿ ತನ್ನನ್ನೆ ನೋಡುತ್ತಿದ್ದ ಈ ಹೆಣಮಗಳ ಮ್ಯಾಲ ನೇಸರಗಿ ದಾದಾ ಕಣ್ಣಿಟ್ಟು -ಒಂದು ಕಣ್ಣ ಮುಚ್ಚಿ ತೆಗೆದು- ಗುರಿ ಹೊಡೆದ ನೋಡ್ರೀ, ಪಾರಿ ಅಲ್ಲೇ ಗೇರ್ ಬಾಕ್ಸ್ ಮ್ಯಾಲ ಲಬಕ್ಕನ ಬಿದ್ದುಬಿಟ್ಟಳು. ಹಿಂಗ ಸುರುವಾದ ನಗು, ನಾಚಿಕೆ, ಮಾತು, ಮುತ್ತುಗಳು ಮದುವೆಗೆ ಸಮಾಪ್ತಗೊಂಡವು. ಖರೇ ಹೇಳಬೇಕಂದ್ರ ಈಗಾಗಲೇ ಆ ದಾದಾ ನಾಲ್ಕು ಹೆಂಡ್ರನ್ನ ಮದುವೆಯಾಗಿದ್ದ. ಹಂಗಾಗಿ ಸರತಿ ಪ್ರಕಾರ ಇವಳ ಮನೆಗೆ ಬರೋದು ತಿಂಗಳಕ್ಕ ಒಂದೇ ಸಲ… ಇದು ಒಂಥರ ಪಾಳೆಪ್ರಕಾರದ ಸಂಸಾರದ ಗುಟ್ಟಾದ್ದರಿಂದ ಆಕೀ ಮನಸಿನ್ಯಾಗ ಡ್ರೈವರಗಳ ಮ್ಯಾಲಿನ ಭಕ್ತಿಗೆ ಏನು ಫರಕ ಬರಲಿಲ್ಲ. ಹಿಂಗ ತಿಂಗಳಿಗೆ ಒಂದ ಸಲ ಬರುತ್ತಿದ್ದ ನೇಸರಗಿಯಾಂವನ ಕಾಯುವುದರೊಳಗ ಸಾಕಬೇಕಾಗಿ ಹೋಗುವುದನ್ನ ತಪ್ಪಿಸಿಕೊಳ್ಳಲಿಕ್ಕ ಪಾರೋತಿ ಒಂದು ಗುರುವಾರ ಮುಧೋಳ ದರ್ಗಾದ ಮುಂದೆ ನವಿಲುಗರಿಯಿಂದ ಆಶೀರ್ವಾದ ಮಾಡುತ್ತಿದ್ದ ಫಕೀರನಲ್ಲಿ ಸಹಾಯ ಕೇಳಿದಳು. ಅವನು ಮಂತ್ರಿಸಿಕೊಟ್ಟ ಬೂದಿ ತಂದು ಜೋಪಾನವಾಗಿ ನಾಗೊಂದಿ ಮ್ಯಾಲ ತಗದಿಟ್ಟು ಗಂಡ ಡ್ರೈವರ್ ಮಾವಾ ಬರೋದನ್ನ ಕಾದು ಕುಳಿತಿದ್ದಳು. ಗೋವಾಕ್ಕ ಹೊಸಪೇಟೆಯಿಂದ ಮ್ಯಾಂಗನೀಸ್ ಹೊಡಿಯುತ್ತಿದ್ದ ನೇಸರಗಿ ದಾದಾ ಕುಂತಕುಂತಲ್ಲೆ ಕುಂತೂ ಕುಂತು ಕುಂಡಿಗೆ ಹೀಟ ಆಗಿ ಸಣ್ಣ ಸಣ್ಣ ಗುಳ್ಳೆಗಳಾಗಿ ಚರಮಗೀತೆ ಹಾಡತಿರಬೇಕಾದರ, ಯರಗಟ್ಟಿ ಡಾಕ್ಟರ್ ಔಸುದ್ದೆ ಬರೆದುಕೊಟ್ಟು ಎಂಟದಿನ ಗಾಡಿ ಮ್ಯಾಲ ಹೋಗಧಂಗ ತಾಕೀತು ಮಾಡಿ ಕಳಿಸಿದರು. ಪಾರಿ ಮನೆಮುಂದ ಬಂದು ಹಾರ್ನ ಹೊಡೆಯುತಲೇ ಈಕೀಗ ಎಲ್ಲಿಲ್ಲದ ಹಿಗ್ಗು ಬಂದು ಮೈ ಹೊಕ್ಕಂಗಾಯ್ತು. ಫಕೀರಸಾಬ ಮಂತ್ರಿಸಿಕೊಟ್ಟಿದ್ದ ಬೂದಿ ಚಿಟಿಯನ್ನೊಮ್ಮೆ ಮುಟ್ಟಿ ನೋಡಿ, ಎರಡೂ ಕಣ್ಣಿಗೊತ್ತಿಕೊಂಡಳು. ಅವತ್ತು ಸಂಜಿಮುಂದ ಅವನ ಮೈ ಕಸುವು ಅವಳ ಉಸುರಿನ ಕೂಡ ಬೆರೆತು ಒಂದಾಗಿ ಬೆವರು ಸುರಿಸುವಾಗ.. ಪಾರಿ ಬೇತ ಮಾಡಿ ಅವನ ಉಡುದಾರಕ್ಕ ಫಕೀರಸಾಬನ ಬೂದಿ ಚೀಟಿ ಗಂಟು ಹಾಕಿದಳು. ಅದಾಗಲೇ ಅಲ್ಲಿ ಮೊದಲಿನ ಮೂರು ಹೆಂಡತಿಯರ ಚೀಟಿಗಳು ಇದ್ದದ್ದು ಇವಳ ಗಮನಕ್ಕ ಬರಲಿಲ್ಲ. ಆ ಈ ನಾಲ್ಕೂ ತಂತ್ರಚೀಟಿ ಅಂದ್ರ ಹೆಂಡತೇರು ಶಕ್ತಿ ದೇವತೆಯರ ಅವತಾರ ತಾಳಿ ದಾದಾನ ಮ್ಯಾಲ ಗುದ್ದಾಟ ಸುರುಮಾಡಿದರು, ಆ ಶಕ್ತಿಗಳ ಮ್ಯಾಲ ಈ ಶಕ್ತಿಗಳು ಎರಗಿ ದಾದಾ ತಿಂಗಳೊಪ್ಪತ್ತಿನ್ಯಾಗ ಸೊರಗಿ ಸಣಕಲ ಕಡ್ಡಿ ಆಗಿಬಿಟ್ಟ. ಇರಲಿ ಆದರ ಒಂದ ದಿನ ನಸಕನ್ಯಾಗ ರಾಮನಗರ ಹತ್ತಿರ ಗಿಡವೊಂದಕ್ಕ ದಾದಾನ ಟ್ರಕ್ಕು ಗುದ್ದಿ ಡ್ರಾಯವರ್ ಮಾವ ಸೀರಿಯಸ್ಸಾಗಿ ಬೆಳಗಾಂವ ದವಾಖಾನೆಯೊಳಗ ಆಡ್ಮಿಟ್ ಆದ. ಅಷ್ಟೊತ್ತಿಗಾಗಲೇ ಪಾರಿಗೆ ಮೂರು ತಿಂಗಳು ತುಂಬಿತ್ತು. ಮುಂದ ದಾದಾ ಉಜಳಣಿ ಆಗಲಿಲ್ಲ. ನಮ್ಮ ಕತಾನಾಯಕ ಫಕೀರ ಹುಟ್ಟುವ ಮೊದಲೇ ಕಣ್ಮುಚ್ಚಿ ದೇಹಬಿಟ್ಟ.ನಮ್ಮ ದೇಶದ ಮಹಾನ್ ನಾಯಕರು, ಶ್ರೀಮಂತ ಬಂಡವಾಳದಾರರು, ಅವತಾರಪುರುಷರ ಪೂರ್ವಾಶ್ರಮದ ಕತೀನೂ ಹಿಂಗ ಇರ್ತಾವೂ ಅನ್ನೋದಾದರ, ನಮ್ಮ ಫಕೀರನೂ ಒಬ್ಬ ಮೇಧಾವಿ ಆಗತಾನು ಅನ್ನುವ ಭರವಸೆ ಮ್ಯಾಲ ಅವನ ಈ ಹುಟ್ಟಿನ ಕತೆಯೂ ದಾಖಲೆಗೊಳ್ಳಲೇಬೇಕು. ಕಾಳಕಪ್ಪಿನ ಅಮಾಸೆ ರಾತ್ರಿಯ ಸಟ್ಟಾನ ಸರೂ ರಾತ್ರಿಗೆ, ಚರ್ಚಿನ ಗಂಟೆ ಬಾರಿಸಿದ ತುಸು ಹೊತ್ತಿಗೆ ಗೂಗೆಯ ಘೂತ್ಕಾರ, ನಾಯಿಯ ವೊವ್ವೋ ವವ್ವ ಅರಚಾಟದ ನಡುವೆ ನಮ್ಮ ಕತಾ ನಾಯಕ ಜನ್ಮ ತಳೆದ…, ಪಾರಿಯ ಕಳಾಹೀನ ತ್ರಾಸಿನ ಮುಖದೊಳಗೆ ‘ಗಂಡ ಮಗ’ ಅನ್ನೋ ಶಬುದ ಖುಷಿಯೇನೋ ಕೊಟ್ಟಿತ್ತು. ಆದರ ಅವರ ಬಯಕೆ ಹೆಣ್ಣು ಮಗು ಆಗಬೇಕು ಅನ್ನೋದು ನೆನಪಾಗಿ, ಅದರ ಜೊತೆಜತೆಗೆ ಅವರು ಇಲ್ಲದ್ದು ನೆನಪಾಗಿ ಕಣ್ಣೀರು ಕೋಡಿಹರಿಯಿತು.]]>

‍ಲೇಖಕರು G

May 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

    • ವಿಠ್ಠಲ ದಳವಾಯಿ

      Khare khare. Mahadev idinnu bekittu. Hw r u aroli & mahadev?

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: