ಪೋಗದಿರೆಲೋ ಬಾಗಿಲಿಂದಾಚೆಗೆ…

ಟಿ ಎಸ್ ಶ್ರವಣ ಕುಮಾರಿ

ಏಪ್ರಿಲ್‌ ತಿಂಗಳ ಮಧ್ಯಾಹ್ನ ಹನ್ನೆರಡು ಗಂಟೆಯ ಬಿಸಿಲಿನಲ್ಲಿ ಬಸ್‌ಸ್ಟಾಪಿನಿಂದ ಅರ್ಧ ಕಿಲೋಮೀಟರ್‌ ದೂರದ ತಮ್ಮ ಮನೆಗೆ ನಡೆದು ಬರುವಾಗ ರತ್ನಮ್ಮನಿಗೆ ಕಣ್ಣುಕತ್ತಲು ಬರುವಂತಾಗಿತ್ತು. ಕರೆಗಂಟೆ ಒತ್ತುವ ಕೆಲಸವಿಲ್ಲದಂತೆ ಮನೆಯ ಬಾಗಿಲು ಹಾರು ಹೊಡೆದಿತ್ತು. ಸೋಫಾ ಮೇಲೆ ಕಾಲುಚಾಚಿ ಮಲಗಿದ ಭಂಗಿಯಲ್ಲಿ ಕುಳಿತು ಎದುರಿಗಿನ ಟೀವಿಯಲ್ಲಿ ದೃಷ್ಟಿನೆಟ್ಟಿದ್ದ ರಂಗನಾಥನಿಗೆ ಅಮ್ಮ ಒಳಬಂದಿದ್ದು ಕೂಡಾ ಗಮನಕ್ಕೆ ಬರಲಿಲ್ಲ. ಚಪ್ಪಲಿ ಬಿಟ್ಟು ಬಾಗಿಲು ಹಾಕುವಾಗ ತಿರುಗಿನೋಡಿದವನು ʻಓ… ನೀನಾ…ʼ ಎನ್ನುವಂತೆ ಅಸಡ್ಡೆಯಿಂದ ಮತ್ತೆ ಮುಖತಿರುವಿ ಟೀವಿಯಲ್ಲಿ ಮಗ್ನನಾದ.

ಸುಸ್ತಾಗಿ ಒಳಬಂದ ರತ್ನಮ್ಮನ ಗಂಟಲಾರಿ ಹೋಗಿತ್ತು. ಕುರ್ಚಿಯ ಮೇಲೆ ಕುಸಿದಂತೆ ಕುಳಿತವರು “ರಂಗಾ ಒಂದ್ಲೋಟ ನೀರು ತಂಕೊಡ್ತೀಯಾ” ಎಂದರು ಕಣ್ಮುಚ್ಚುತ್ತಾ. ತಿರುಗಿ ಕೂಡಾ ನೋಡದೆ “ನೀನು ಹೋಗಿದ್ದಿದ್ದು ನಿನ್‌ಮಗಳ ಕೆಲಸಕ್ಕೆ ತಾನೇ. ಕರೀ ಅವಳ್ನೇ. ತಂಕೊಡ್ಲಿ” ಅಸಡ್ಡೆಯಿಂದ ಹೇಳಿ ಏಳುವ ಸೂಚನೆಯನ್ನೂ ತೋರಲಿಲ್ಲ. ಮೊದಲೇ ಸುಸ್ತಾಗಿದ್ದ ರತ್ನಮ್ಮನಿಗೆ ಅವನೊಂದಿಗೆ ಮಾತು ಮುಂದುವರಿಸಿ ಜಗಳಾಡುವ ಇಚ್ಛೆಯಿಲ್ಲದೆ ತಾವೇ ಎದ್ದುಹೋಗಿ ಕಾಲು ತೊಳೆದುಕೊಂಡು ಬಂದು ಅಡುಗೆಮನೆಗೆ ಹೋಗಿ ಒದ್ದೆಬಟ್ಟೆ ಸುತ್ತಿಟ್ಟಿದ್ದ ತಪ್ಪಲೆಯಿಂದ ಚೊಂಬುನೀರು ತೆಗೆದುಕೊಂಡು ಹಾಗೆಯೇ ಮೇಲೆತ್ತಿ ಗಂಟಲಿಗೆ ಸುರುವಿಕೊಂಡರು.

ಬೆಳಗ್ಗೆ ತಾವು ಮನೆಯಿಂದ ಹೊರಟಾದ ಮೇಲೆ ತಿಂಡಿ ತಿಂದ ರಂಗನಾಥ ಎಲ್ಲ ಪಾತ್ರೆಗಳನ್ನೂ ಹಾಗಾಗೇ ತೆರೆದಿಟ್ಟು ಕೂತಿದ್ದಾನೆ. ಉಪ್ಪಿಟ್ಟಿನ ಬಾಣಲೆ, ಮೊಸರಿನ ಪಾತ್ರೆ, ಉಪ್ಪಿನಕಾಯಿನ ಭರಣಿ, ಚಟ್ನಿಪುಡಿಯ ಡಬ್ಬಿ ಎಲ್ಲವೂ ʻನಾನು ಇಲ್ಲೇ ಇದ್ದೇನೆʼ ಎನ್ನುವಂತೆ ಮುಚ್ಚಳ ತೆರೆದುಕೊಂಡು ಕಟ್ಟೆಯ ಮೇಲೆ ಪರದೇಶಿಯಾಗಿ ಬಿದ್ದಿವೆ.

ಅಲ್ಲೇ ಇದ್ದ ಸ್ಟೂಲಿನ ಮೇಲೆ ಒಂದೈದು ನಿಮಿಷ ಸುಮ್ಮನೆ ಕುಳಿತು ಸ್ವಲ್ಪ ಸುಧಾರಿಸಿಕೊಂಡು ಎದ್ದವರೇ ಒಂದೊಂದನ್ನೇ ಎತ್ತಿಟ್ಟು, ತೊಳೆಯುವ ಪಾತ್ರೆಗಳನ್ನು ಸಿಂಕಿಗೆ ತುಂಬುತ್ತಿರುವಾಗಿನ ಶಬ್ದ ಕೇಳಿಸಿ ರೂಮಿನೊಳಗೆ ಬಾಗಿಲು ಹಾಕಿಕೊಂಡು ಕುಳಿತಿದ್ದ ಶುಭಾ ಅಡುಗೆಮನೆಗೆ ಬಂದು. “ಯಾವಾಗ್ಬಂದೆ? ಇದೇನು, ರಂಗ ತಿಂಡಿ ತಿಂದ್ಮೇಲೆ ಎಲ್ಲಾ ಹೀಗೆ ಬಿಸಾಕಿ ಹೋಗಿದ್ನೆ. ನಾನು ತಲೆಸ್ನಾನ ಮಾಡಿಕೊಂಡು ಬರ‍್ವಾಗ ಅವ್ನಿನ್ನೂ ತಿಂಡಿ ತಿಂದಿರ‍್ಲಿಲ್ಲ. ಬಟ್ಟೆಯೆಲ್ಲಾ ಮಡಚಿಡೋಣ ಅಂತ ರೂಮಿಗೆ ಹೋದೆ. ಆಮೇಲೆ ಮಂಜುಳಾನ ಫೋನ್‌ ಬಂತು, ಸುಮಾರು ಹೊತ್ತು ಮಾತಾಡ್ತಾ ಇದ್ಲು, ಈ ಕಡೆ ಗಮನ ಹೊರಟೋಯ್ತು. ಬಿಡು, ಈ ಕಡೆ ಬಾ. ನಾನೆಲ್ಲಾ ಕ್ಲೀನ್‌ ಮಾಡ್ತೀನಿ” ಎನ್ನುತ್ತಾ ಆರಲು ಬಿಟ್ಟಿದ್ದ ಕೂದಲನ್ನು ಗಂಟುಹಾಕಿಕೊಂಡು ಅಡುಗೆ ಕಟ್ಟೆಯ ಕಡೆ ಬಂದಳು. ರತ್ನಮ್ಮನೂ ಏನೂ ಮಾತಾಡದೆ ಬಂದು ಸ್ಟೂಲಿನ ಮೇಲೆ ಮತ್ತೆ ಕಣ್ಮುಚ್ಚಿಕೊಂಡು ಕುಳಿತರು.

ಅಮ್ಮ ಹಾಗೆ ಕುಳಿತಿರುವುದನ್ನು ನೋಡಿದಾಗಲೇ ಶುಭಾಳಿಗೆ ʻಈ ದಿನ ಹೋದ ಕೆಲಸ ಹಣ್ಣಾಗಿಲ್ಲವೆಂದುʼ ಅರ್ಥವಾಗಿ ಹೋಗಿತ್ತು. ಏನನ್ನೂ ಕೇಳಲು ಹೋಗದೆ ತಣ್ಣಗಿನ ನೀರಿಗೆ, ಸಕ್ಕರೆ ನಿಂಬೆಹಣ್ಣನ್ನು ಬೆರೆಸಿ ಪಾನಕ ಮಾಡಿ ಅಮ್ಮನ ಕೈಗೊಂದು ಲೋಟವನ್ನು ಕೊಟ್ಟು, ಇನ್ನೊಂದು ಲೋಟ ತೆಗೆದುಕೊಂಡು “ತೊಗೋಳೋ ರಂಗ” ಎನ್ನುತ್ತಾ ಅವನಿಗೂ ಕೊಟ್ಟುಬರಲು ಹೋದಳು. ರಂಗ ಅವಳ ಕಡೆಗೆ ತಿರುಗಿಯೂ ನೋಡದೆ, “ಅಮ್ಮ, ಮಗಳಿಬ್ಬರೂ ತಣ್ಣಗಿರೋ ಪಾನಕ ಕುಡ್ದು ತಂಪಾಗಿರಿ. ಈ ಮನೇಲಿ ಯಾರ‍್ಗೂ ಬೇಡ್ದೆ ದಂಡಪಿಂಡಕ್ಕೆ ಬಿದ್ದಿರೋನು ನಾಂತಾನೇ. ನಂಗ್ಯಾಕೆ ಈ ಉಪ್ಚಾರ” ಎಂದ ಅಸಹನೆಯಿಂದ.

ಬೇರೇನೂ ಮಾತಾಡದೆ ಎದುರಿಗಿದ್ದ ಸ್ಟೂಲಿನ ಮೇಲೆ ಪಾನಕದ ಲೋಟವನ್ನಿಟ್ಟು ಶುಭಾ ಒಳಸರಿಯುತ್ತಿದ್ದಂತೆಯೇ ʻಇಂದು ಜಗಳವಾಡಿಯೇ ಸಿದ್ಧʼ ಎಂದು ತೀರ್ಮಾನ ಮಾಡಿಕೊಂಡು ಕೂತಿದ್ದ ರಂಗ ಪಾನಕದ ಲೋಟವನ್ನೆತ್ತಿ ಅಡುಗೆಮನೆಯ ಕಡೆ ಬಿಸಾಡಿ “ಹೇಳ್ಳಿಲ್ವೇನೇ ನಿಂಗೆ, ನೀವಿಬ್ರೆ ಕುಡ್ಕೊಂಡು ಸಾಯ್ರೀಂತ” ಎಂದು ಕಿರುಚಿದ. ಆ ಲೋಟ ಹೋಗಿ ಸೀದಾ ರತ್ನಮ್ಮನವರ ಹಣೆಗೆ ಬಡಿದು, ಅವರ ಕೈಲಿದ್ದ ಲೋಟಕ್ಕೂ ತಾಗಿ ಆ ಲೋಟವೂ ಉರುಳಿ ರಾದ್ಧಾಂತವಾಯಿತು. ತಕ್ಷಣ ಗುಬುಟು ಬರದಂತೆ ಅಮ್ಮನ ಹಣೆಯನ್ನು ಒತ್ತಿಹಿಡಿದ ಶುಭಾ ಎರಡು ನಿಮಿಷ ಬಿಟ್ಟು ಫ್ರಿಜ್ಜಿನಲ್ಲಿದ್ದ ಐಸುಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ ಗುಬುಟಿನ ಮೇಲಿಟ್ಟುಕೊಳ್ಳುವಂತೆ ಅಮ್ಮನಿಗೆ ಕೊಟ್ಟು ಚೆಲ್ಲಿದ್ದ ಪಾನಕವನ್ನೆಲ್ಲಾ ಒರಸಿ ಶುಚಿಮಾಡತೊಡಗಿದಳು. ಪಾನಕದ ಸಿಹಿಯ ಜೊತೆಗೆ ಕಣ್ಣಿನ ಉಪ್ಪು ನೀರೂ ಬೆರೆತು ಇಡೀ ಮೈಯೆಲ್ಲಾ ಅಂಟಾದಂತಾಗಿ ರತ್ನಮ್ಮ ಎದ್ದು ಬಚ್ಚಲಿಗೆ ಹೋಗಿ ಮುಖ, ಮೈಕೈಯನ್ನೆಲ್ಲಾ ತೊಳೆದುಕೊಂಡು ಬಂದು ಸೀರೆ ಬದಲಿಸಲು ಹೋದರು.

ಕಣ್ಣಲ್ಲಿ ನೀರು ತುಂಬಿಕೊಂಡ ಶುಭಾ ಕುಕ್ಕರನ್ನು ಜೋಡಿಸಿ, ಪಲ್ಯಕ್ಕೆ ಹುರಳಿಕಾಯಿ ಹೆಚ್ಚತೊಡಗಿದಳು. ಅಷ್ಟು ಹೊತ್ತಿಗೆ ಬಂದ ರತ್ನಮ್ಮ, “ಕೊಡಿಲ್ಲಿ ನಾನು ಹೆಚ್ಚಿಕೊಡ್ತೀನಿ” ಎನ್ನುತ್ತಾ ಹುರಳಿಕಾಯಿಗೆ ಕೈಹಾಕಿದರು. “ಅಮ್ಮಾ, ನೀನು ಸಾಕಾಗಿ, ಸುಸ್ತಾಗಿ ಬಂದಿದೀಯ. ಕೂತ್ಕೋ ಒಂದು ಘಳಿಗೆ. ಇವತ್ತು ಭಾನುವಾರ ರಜಾ ಇದ್ಯಲ್ಲಾ; ನಾನು ಅಡುಗೆ ಮಾಡ್ತೀನಿ. ನಾಳೆಯಿಂದ ನಿಂಗೆ ತಪ್ಪಿದ್ದಲ್ಲ” ಎನ್ನುತ್ತಾ ಅವರನ್ನು ಒತ್ತಾಯದಿಂದ ಸ್ಟೂಲಿನ ಮೇಲೆ ಕುಳ್ಳಿರಿಸಿ ತನ್ನ ಕೆಲಸ ಮುಂದುವರೆಸಿದಳು. ಏನಾದರಾಗಲೀ ಈ ಘಳಿಗೆಯಲ್ಲಿ ಜಗಳವಾಡಲೇ ಬೇಕು ಎಂದು ತೀರ್ಮಾನ ಮಾಡಿಕೊಂಡಿದ್ದ ರಂಗ ಕುಳಿತಲ್ಲಿಂದಲೇ. “ಕೂತ್ಕೋಮ್ಮಾ, ಆ…ರಾ…ಮಾ…ಗಿ ಕೂತ್ಕೋ. ಮುದ್ದಿನ ಮಗಳು ಹೇಳ್ತಿದಾಳಲ್ಲಾ ಕೂತ್ಕೋ… ಮನೆಗೆ ಸೊಸೇನ ಕರ‍್ಕೊಂಬರೋ ಯೋಚ್ನೆಯೇನೂ ನಿಂಗಿಲ್ಲ, ಪಾಪ ಇನ್ನೂ ಮಗ್ಳಿಗೇ ಇನ್ನೊಂದು ಗಂಡು ಹುಡುಕ್ತಿದೀಯ. ಅವ್ಳು ಹೋದ್ಮೇಲೆ ನಿಂಗೆ ಅಯ್ಯೋ ಅನ್ನೋರ‍್ಯಾರು. ಇರೋ ತಂಕ ಮಾಡಿಸ್ಕೋ, ಮಾಡಿಸ್ಕೋ” ಎಂದ ವಿಷವನ್ನು ಕಾರುವಂತೆ.

ʻಮಾತಾಡಿದರೆ ಸುಮ್ಮನೇ ಕದನಕ್ಕೆ ಕಾರಣʼ ಎಂದು ಅಲ್ಲಿಯವರೆಗೂ ಮೌನವಾಗಿ ಕುಳಿತಿದ್ದ ರತ್ನಮ್ಮ ʻಏನಾದರೂ ಮಾತಾಡೋ ತಂಕ ಸುಮ್ಮನಿರಲ್ಲ; ಹಂಗಿಸ್ತಾನೆ ಇರ‍್ತಾನೆ; ಅದ್ರ ಬದ್ಲು ಅದೇನು ಕಾರ‍್ಕೋಬೇಕಾಗಿದ್ಯೋ, ಕಾರ‍್ಬಿಡ್ಲಿ. ಆಮೇಲಾದ್ರೂ ಈ ಮಾತು ನಿಲ್ಲತ್ತೆʼ ಅನ್ನಿಸಿ ಎದ್ದು ಹೊರಬಂದರು. “ಯಾಕೋ ರಂಗ ಹೀಗೆ ಆ ಮಗು ಮೇಲೆ ಕಿಡಿ ಕಾರ‍್ತಿ. ಅವ್ಳು ನಿನ್ನಕ್ಕಾನೇ ಅಲ್ವೇನೋ. ನಿಂಗಿನ್ನಾ ಎರಡ್ವರ್ಷಕ್ಕೆ ದೊಡ್ಡೋಳಷ್ಟೆ. ಇಷ್ಟು ಚಿಕ್ಕ ವಯಸ್ಸಿಗೇ ಗಂಡನ್ನ ಕಳ್ಕೊಂಡು ದಿಕ್ಕೇಡಿಯಾಗಿ ಮನೆಗೆ ಬಂದಿರೋವ್ಳ ಬಗ್ಗೆ ಹೀಗೆ ಉರಿಕಾರ‍್ತಿಯಲ್ಲ, ಇದು ಸರ‍್ಯೇನೋ. ಹೀಗೆಲ್ಲಾ ಮಾತಾಡ್ಬೇಡ್ವೋ, ಮೊದ್ಲೇ ಆ ಮಗು ನೊಂದಿದೆ. ಇನ್ನಷ್ಟು ನೋಯಿಸ್ಬೇಡ” ಎಂದರು ಅವನ ಭುಜದ ಮೇಲೆ ಕೈಯಿಡುತ್ತಾ. ಕೋಪದಿಂದ ಕೈಯನ್ನು ಕಿತ್ತೆಸೆದು “ನಿಜಾನಮ್ಮ, ನಿಂಗೆ ಅವ್ಳೊಬ್ಳೇ ಮಗ್ಳು. ಅವ್ಳನ್ನಾದ್ರೆ ಹೆತ್ತಿದೀಯ, ನನ್ನನ್ನ ರಾಗಿ ಕೊಟ್ಟು ಕೊಂಡ್ಕೊಂಡಿದೀಯ ಅಲ್ವಾ. ಮದ್ವೆಯಾಗಿ ಹೋದ್ಮೇಲೆ ಅವ್ಳ ಗಂಡನ್ನ ಕಳ್ಕೊಂಡಿದ್ದಕ್ಕೆ ನಾನು ಕಾರಣಾನ? ಅವ್ಳ ದುರಾದೃಷ್ಟಕ್ಕೆ ನಾನು ಹೊಣೇನಾ? ಅವ್ಳಿಗೇ ಇನ್ನೊಂದು, ಮತ್ತೊಂದು ಅಂತ ಹುಡುಕ್ತಿದೀಯೇ ಹೊರ‍್ತು, ಮಗಂಗೂ ಮದ್ವೆ ವಯಸ್ಸಾಗಿದೆ. ಮನೆಗೆ ಸೊಸೇನೂ ತರ‍್ಬೇಕು ಅಂತ ನೀನೇನಾದ್ರೂ ಯೋಚ್ನೆ ಮಾಡಿದೀಯಾ ಹೇಳು. ಮಾಡ್ದವ್ಳಿಗೆ ಮತ್ತೆ ಮತ್ತೆ ಮಾಡ್ತಿರು, ಇಲ್ದಿರೋವ್ರಿಗೆ ಇಲ್ವೇ ಇಲ್ಲ” ಭುಸುಗುಟ್ಟಿದ.

“ನಿಂಗೂನೂ ಹುಡುಕ್ತಾನೇ ಇದೀನಲ್ಲೋ. ನಂಗೂ ಆಸೆ ಇಲ್ವೇನೋ, ಮನೆಗೊಬ್ಬ ಸೊಸೆ ಬರ‍್ಬೇಕು, ಮನೇಲಿ ಮೊಮ್ಮಕ್ಳು ಆಡ್ಬೇಕು ಅಂತ. ಯಾವ್ದೂ ಸೆಟ್ಟಾಗ್ತಿಲ್ವಲ್ಲ. ಏನ್ಮಾಡೋದು. ನಿನ್ನೆ ಸಂಜೆ ಕೂಡಾ ಒಂದು ಹುಡುಗಿ ಬಂದಿತ್ತಲ್ವಾ. ಅವ್ರಿಂದ ಇನ್ನೂ ಉತ್ರ ಬಂದಿಲ್ಲ. ನಾವೇ ಕೇಳಕ್ಕಾಗತ್ತಾ, ಅವ್ರಾಗಿ ಹೇಳೋ ತಂಕ ಕಾಯ್ಬೇಕಲ್ವಾ?” ಹತಾಶೆಯಿಂದ ಹೇಳಿದರು. “ಅವ್ರಿಂದ ಉತ್ರ ಬರತ್ತೇಂತ ಬೇರೆ ಕಾಯ್ತಿದೀಯೇನಮ್ಮಾ? ಅವ್ರು ಮಾತಾಡಿದ್ದು ನೋಡಿದ್ರೆ ಗೊತ್ತಾಗ್ಲಿಲ್ವಾ. ಈ ಡಿಪ್ಲೋಮೋ ಹೋಲ್ಡರ್‌ಗೆ ಅವ್ರ ಡಿಗ್ರಿ ಓದಿರೋ ಮಗ್ಳು ಸೆಟ್ಟಾಗಲ್ಲಾಂತ. ಅವ್ರ ಮಗ್ಳು ನಂಗಿಂತ ಜಾಸ್ತಿ ಸಂಪಾದ್ನೆ ಮಾಡ್ತಾಳೇಂತ ಹೇಳಿದ್ಮೇಲೂ ಯಾವಾಸೆ ಇಟ್ಕೊಂಡು ಕಾಯ್ತಿದೀಯಾ ನೀನು” ವ್ಯಂಗ್ಯವಾಗಿ ಅವರನ್ನು ಚುಚ್ಚಿದ.

“ಅಷ್ಟೊಂದು ಮನಸ್ಸನ್ನ ಕಹಿ ಮಾಡ್ಕೋಬೇಡ್ವೋ. ಅದಾಗ್ದಿದ್ರೆ ಹೋಗ್ಲಿ ಬಿಡು, ಇನ್ನೊಂದು ನೋಡಿದ್ರಾಯ್ತು. ಈಗೇನು ನಿಂಗೆ ವಯಸ್ಸು ಮುಳ್ಗೋಗಿರೋದು. ಇನ್ನೂ ಮೂವತ್ತಷ್ಟೆ. ಯಾರಾದ್ರೂ ಲಕ್ಷಣವಾಗಿರೋ ಹುಡ್ಗೀನೇ ಸಿಕ್ತಾಳೆ. ಮೊನ್ನೆ ಬ್ರೋಕರ್‌ ಸೀತಾರಾಮಪ್ನೋರಿಗೂ ಮತ್ತೆ ಮತ್ತೆ ಜ್ಞಾಪಿಸಿ ಬಂದಿದೀನಿ” ಅವನನ್ನು ಅನುನಯಿಸುತ್ತಾ ಹೇಳಿದರು.

“ಆಯಪ್ಪಂಗೆ ಇನ್ನೂ ತನ್ನ ಮಗಂಗೇ ಹುಡ್ಗೀನ ಹುಡ್ಕಕ್ಕೆ ಆಗಿಲ್ಲ; ಇನ್ನ ನಂಗಾ ಹುಡುಕ್ತಾನೆ? ನೀನು ಹೇಳೋದೆಲ್ಲಾ ಇಂಥೋರಿಗೇ. ಅವ್ರಿಗೇ ಇನ್ಯಾರಾದ್ರೂ ಹುಡುಕಿ ಕೊಡ್ಬೇಕಾಗಿದೆ ಸೊಸೇನಾ. ನಿಜ ಹೇಳು ನಿನ್ಮಗಳಿಗೆ ಎರಡ್ನೇ ಮದ್ವೇಗಾದ್ರೂ ತೋರಿಸ್ತಿರೋಷ್ಟು ಆಸ್ಥೇನ ನೀನಾಗ್ಲಿ, ಆಯಪ್ಪ ಆಗ್ಲಿ ತೋರಿಸ್ತಿದೀರಾ?” ಇರಿಯುವಂತೆ ಕೇಳಿದ. “ನೀನು ಹಿಂಗೆಲ್ಲಾ ಮಾತಾಡಿ ನೋಯಿಸ್ಬೇಡ್ವೋ” ಕಣ್ಣಲ್ಲಿ ನೀರು ತಂದುಕೊಂಡರು ರತ್ನಮ್ಮ.

“ಇದಕ್ಕೇನ್‌ ಕಮ್ಮಿಯಿಲ್ಲಾ. ಗಂಡ ಸತ್ತೋಳಿಗೇ ಇನ್ನೊಂದು ಮದ್ವೆ ಮಾಡ್ಕೊಳಕ್ಕೆ ಜನ ಸಿಗ್ತಾರಂತೆ! ನೀನೂನೂ ಸಿಕ್ಕೇ ಸಿಕ್ತಾರೆ ಅಂತ ಹುಡುಕ್ತಿದೀಯಂತೆ! ಇನ್ನು ನನ್ನಂಥೋನಿಗೆ ಸಿಗಲ್ಲ ಅಂದ್ರೇನರ್ಥ? ನೀನು ನೆಟ್ಗೆ ಹುಡುಕ್ತಿಲ್ಲ. ನಿಂಗೆ ಮಗಳ ಮೇಲಿರೋಷ್ಟು ಪ್ರೀತಿ, ಕಕ್ಕುಲಾತಿ ಮಗನ ಮೇಲಿಲ್ಲ ಅಷ್ಟೇ. ಮಾಡು, ಅವ್ಳಿಗೇ ಇನ್ನೊಂದು ಮದ್ವೆ ಮಾಡು, ಅದು ಕೆಟ್ರೆ ಮತ್ತೊಂದು ಮಾಡು, ನಾನು ಕಾಯ್ತಾನೇ ಕೂತಿರ‍್ತೀನಿ ಮುದ್ಕ ಆಗೋವರ‍್ಗೂ” ಹೊಟ್ಟೆಯಲ್ಲಿದ್ದ ಕೆಂಡವನ್ನೆಲ್ಲಾ ಕಾರಿಕೊಂಡು ಅಲ್ಲಿಂದೆದ್ದು ತನ್ನ ರೂಮಿಗೆ ನಡೆದು ಬಟ್ಟೆ ಬದಲಿಸಿಕೊಂಡು ಹೊರಗೆ ಹೊರಟ.

ಕೋಪದಿಂದ ಆ ಬಿಸಿಲಲ್ಲಿ ಹೊರಟ ಮಗನನ್ನು ಕಂಡ ತಾಯಿಯ ಕರುಳು ಚುರಕ್ಕೆಂದಿತು. “ಈ ಪಾಟಿ ಬಿಸಿಲಲ್ಲಿ ಎಲ್ಲಿಗೆ ಹೊರಟ್ಯೋ. ಅಡುಗೆಯಾಗ್ತಿದೆ. ಊಟ ಮಾಡಿ ಒಂದು ಘಳಿಗೆ ಮಲಗಿದ್ದು ಸಂಜೆ ಬಿಸಿಲು ತಗ್ಗಿದ ಮೇಲೆ ಹೋಗೋವಂತೆ. ನೆತ್ತಿ ಸುಡೋ ಬಿಸಿಲಲ್ಲಿ ಹೋಗ್ಬೇಡ್ವೋ” ಅಂಗಲಾಚಿದರು. ಯಾವ ಉತ್ತರವನ್ನೂ ಕೊಡದೆ, ತನ್ನ ಪಾಡಿಗೆ ಚಪ್ಪಲಿಯನ್ನು ಮೆಟ್ಟಿಕೊಂಡು, ಹಿಂದೆಯೇ ಬಾಗಿಲನ್ನು ದಢಾರನೆ ಎಳೆದುಕೊಂಡು ಅಷ್ಟೇ ರಭಸವಾಗಿ ಗೇಟನ್ನೂ ದೂಡಿಕೊಂಡು ಹೊರಟ. ಆತಂಕದಿಂದ ನೋಡುತ್ತಾ ನಿಂತಿದ್ದ ರತ್ನಮ್ಮ ಹಾಗೇ ಸೋಫಾದಲ್ಲಿ ಕುಸಿದು ತಲೆಗೆ ಕೈಹಚ್ಚಿ ಕುಳಿತರು.

ಕೂಗುತ್ತಿದ್ದ ಕುಕ್ಕರನ್ನು ಆರಿಸಿ ಹೊರಬಂದ ಶುಭಾ ಅಮ್ಮನ ಪಕ್ಕದಲ್ಲಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಳು. ಒಂದೈದು ನಿಮಿಷ ತಡೆದು “ಅಮ್ಮಾ, ನೀನು ನೊಂದ್ಕೋಬೇಡ. ಅವ್ನು ಒರಟ, ಬಾಯಿಗ್ಬಂದಿದ್ದೇ ಮಾತಾಡ್ತಾನೆ. ಫ್ರೆಂಡ್ಸ್‌ ಎಲ್ರದೂ ಮದ್ವೆಯಾಗಿ ಒಬ್ಬಿಬ್ಬರಿಗೆ ಮಕ್ಕಳೂ ಆಗಿವೆ. ನಂದು ಮೂರ‍್ವರ‍್ಷದ ಹಿಂದೆ ಹೀಗಾಗಿಲ್ದಿದ್ರೆ ಇಷ್ಟೊತ್ತಿಗೆ ಅವ್ನಿಗೆ ಮದ್ವೆಯಾಗಿರೋದೋ ಏನೋ. ಆಕ್ಸಿಡೆಂಟು, ಕೇಸು ಎಲ್ಲಾ ರಗಳೆಗಳು ಮುಗಿಯೋ ತಂಕ ನಿಂಗೂ ಆ ಕಡೆ ಗಮ್ನ ಕೊಡಕ್ಕಾಗ್ಲಿಲ್ಲ. ಆಗ್ಲೆ ಆಗಿದ್ರೆ ಇನ್ನೂ ಚಿಕ್ಕ ವಯಸ್ಸಿತ್ತು, ಸಿಗೋದು ಸ್ವಲ್ಪ ಸುಲ್ಭ ಆಗ್ತಿತ್ತೇನೋ. ಈಗವ್ನಿಗೆ ಹತಾಶೆ ಹುಟ್ಬಿಟ್ಟಿದೆ.‌ ಅದ್ನ ನಿನ್ಮೇಲೆ, ನನ್ಮೇಲೆ ಕಾರ‍್ಕೊಂತಿದಾನೆ. ಅದ್ರಿಂದಾನಾದ್ರೂ ಅವ್ನಿಗಷ್ಟು ಸಮಾಧಾನವಾಗ್ಲಿ ಬಿಡು” ಎಂದಳು.

ಸ್ವಲ್ಪ ಹೊತ್ತು ಸುಮ್ಮನೇ ಕುಳಿತಿದ್ದ ರತ್ನಮ್ಮ “ಹಾಗಲ್ಲಾ ಶುಭಾ. ನಿಂಗೊತ್ತಿಲ್ಲ; ಆ ಮೂಲೆ ಮನೆ ರಂಗಾರೇರ ಹುಡ್ಗಿ ಇತ್ತು ನೋಡು, ಕಲಾಂತ. ಅವ್ಳೂ, ಇವ್ನು ಒಂದೇ ಕ್ಲಾಸೇಯ. ನಿನ್‌ ಮದ್ವೆಯಾದ್ಮೇಲೆ ಸದಾ ಇಲ್ಲಿ ನಮ್ಮನೆಗೆ ಬರೋದು. ಮೈಮೇಲೆ ಬಿದ್ಗಂಡೇ ಮಾತಾಡ್ಸೋದು. ನಂಗ್ಯಾಕೋ ಸರಿಹೋಗ್ಲಿಲ್ಲ. ವಯಸ್ಸಿಗೆ ಬಂದ ಮಕ್ಳು ಮನೇಲಿ ದೊಡ್ಡೋವ್ರಿಲ್ಲ, ಚಿಕ್ಕೋವ್ರಿಲ್ಲ – ಚೆಲ್ಲು ಬಡೀತಿದ್ರೆ ಏನ್‌ ಮರ‍್ಯಾದೆ ಹೇಳು. ಓದೋ ವಯಸ್ಸಲ್ಲಿ ಇದೇನೂಂತ ಇಬ್ರನ್ನೂ ಒಂದಿನ ಗದರ‍್ಕೊಂಡೆ. ಆವತ್ತಿಂದ ಅದು ಮನೇಗ್ಬರೋದೇ ಬಿಟ್ಬಿಡ್ತು. ಇವ್ನಿಗೆ ನನ್ಮೇಲೆ ಕೋಪ್ವೋ ಕೋಪ. ಅದೇನ್ಮಾತಾಯ್ತೋ ಅವ್ರ ಮಧ್ಯೆ, ಇವ್ನು ವಿಪ್ರೀತ ತಲೆಗೆ ಹಚ್ಕೊಂಡು ಓದು ಹಾಳ್ಮಾಡ್ಕೊಂಡ. ಅದು ಜಾಣೆ. ಇವ್ನ ಸಾವಾಸದಲ್ಲೇ ಇದ್ದಿದ್ರೆ ಏನಾಗ್ತಿತ್ತೋ. ಇಂಜಿನೀರ್‌ ಓದ್ಕೊಂಡು, ಒಳ್ಳೆ ಕೆಲ್ಸ ಹಿಡ್ಕಂಡು ಮದ್ವೇನೂ ಮಾಡ್ಕೊಂಡು ಹೋಯ್ತು. ಇವ್ನಿಗೆ ಅದನ್ನ ನಾನು ತಪ್ಪಿಸ್ದೆ ಅನ್ನೋ ಕೋಪ ಇನ್ನೂ ಹೋಗಿಲ್ಲ. ಅದೂ ಅಲ್ದೆ ಪುರೋಹಿತರ ಮನೆತನ ನಮ್ದು. ಯಾವ್ದೋ ಜಾತಿ ಹುಡ್ಗೀನ ಸೊಸೆ ಅಂತ ಒಪ್ಕೊಳಕ್ಕಾಗತ್ತಾ? ಅಷ್ಟು ಜಾಣೆ ಹುಡ್ಗಿ ಆಗೇನೋ ಬುದ್ದಿಕೆಟ್ಟು ಇವ್ನ ಜೊತೆ ಲಲ್ಲೆ ಬಡೀತಿತ್ತು. ಈಗಾದ್ರೆ ಅವ್ನನ್ನ ಮದ್ವೆಯಾಗ್ತಿತ್ತಾ ನೀನೇ ಹೇಳೂ.” ಎಷ್ಟೋ ದಿನದಿಂದ ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ಮಾತನ್ನು ಹೊರಹಾಕಿದರು.‌

“ಏನಾಗ್ತಿತ್ತು ಅಂತ ಈಗ್ಯಾರು ಹೇಳಕ್ಕಾಗತ್ತಮ್ಮಾ? ಆಗ್ಹೋಗಿರೋದ್ರ ಯೋಚ್ನೆ ಈಗ್ಯಾಕೆ. ಈಗದು ಅವ್ನ ತಲೇಲೂ ಇದ್ಯೋ ಇಲ್ವೋ, ನೀನು ಹಚ್ಕೊಂಡು ಕೊರಗ್ತಿದೀಯೇನೋ ಅಷ್ಟೇ. ವಯಸ್ಸಿಗೆ ಸಹಜ್ವಾಗಿ ಮದ್ವೆ ಬೇಕು ಅನ್ನಿಸ್ತಿದೆ. ಹುಡ್ಗಿ ಸಿಗ್ತಿಲ್ಲ. ಇನ್ನೂ ನಾಲ್ಕಾರು ಕಡೆ ಪ್ರಯತ್ನ ಪಡೋಣ. ಈಗೇಳು ಆಗ್ಲೆ ಗಂಟೆ ಎರಡಾಗ್ತಾ ಬಂತು. ನೀನು ಬೆಳಗ್ಗೆ ಒಂಭತ್ಗಂಟೇಗೆ ತಿಂಡಿ ತಿಂದಿರೋದು, ತಟ್ಟೆ ಹಾಕ್ತೀನಿ. ಅವ್ನು ಹನ್ನೊಂದು ಗಂಟೆಗೆ ತಿಂಡಿ ತಿಂದಿರೋದು; ಬಂದ್ಮೇಲೆ ಊಟ ಮಾಡ್ಕೋತಾನೆ” ಎಂದೆದ್ದಳು.

ರತ್ನಮ್ಮನಿಗೆ ಊಟವೂ ಸರಿಯಾಗಿ ಸೇರಲಿಲ್ಲ. ಮಜ್ಜಿಗೆ ಅನ್ನ ತಿನ್ನದೆಯೇ ಎದ್ದುಬಿಟ್ಟರು. ಅಮ್ಮನ ಮನಸ್ಥಿತಿ ಗೊತ್ತಿದ್ದ ಶುಭಾ ಮತ್ತೇನೂ ಮಾತನಾಡದೆ ಎಲ್ಲವನ್ನೂ ತೆಗೆದು ಓರಣ ಮಾಡಿ ಬರುವಾಗ ಮಂಕಾಗಿ ಸೋಫಾದ ಮೇಲೆ ಕುಳಿತಿದ್ದರು. “ಅಮ್ಮಾ, ನಿಂಗೂ ಸಾಕಾಗಿದೆ. ಬಿಸಿಲಲ್ಲಿ ಓಡಾಡಿ ಬಂದಿದೀಯ. ಮಲಕ್ಕೋ ಬಾ” ಎಂದು ಕರೆದಳು. “ಇಲ್ಲೇ ಸೋಫಾ ಮೇಲೇ ಉರುಳ್ಕೊಂಡಿರ‍್ತೀನಿ. ಅವ್ನು ಬಂದ್ರೆ ಎದ್ದು ಬಡಿಸಕ್ಕಾಗತ್ತೆ” ಎಂದರು. “ಸರಿ ಹಾಗೇ ಮಾಡು” ಎಂದು ಶುಭಾ ತನ್ನ ರೂಮಿಗೆ ಹೋಗಿ ಮಂಚದ ಮೇಲೆ ಉರುಳಿಕೊಂಡಳು.

ಅವಳ ಬಳಿಗೂ ತಕ್ಷಣ ನಿದ್ರೆ ಸುಳಿಯಲಿಲ್ಲ. ಅಮ್ಮನ ಬಗ್ಗೆಯೇ ಯೋಚಿಸತೊಡಗಿದಳು. ತಾನು ಕಂಡಾಗಿಂದಲೂ ಅಮ್ಮ ಮನೆಗಾಗಿ ಒದ್ದಾಡುತ್ತಲೇ ಇದ್ದಾಳೆ. ಅಪ್ಪ ಹಾರ್ಟ್‌ ಅಟ್ಯಾಕ್‌ ಆಗಿ ಹೋದಾಗ ತನಗೆ ಹತ್ತು ವರ್ಷ; ರಂಗನಿಗೆ ಏಳು. ವಿಧಿಯಿಲ್ಲದೆ ಅಮ್ಮ ಸ್ಕೂಲಿನಲ್ಲಿ ಟೀಚರಾಗಿ ಸೇರಿಕೊಂಡಿದ್ದು. ಅಪ್ಪನ ವಿಮೆ ಹಣದಲ್ಲಿ ಈಗ ಮನೆಯಿರುವ ಸೈಟು ಕೊಂಡು ಅಡುಗೆಮನೆ, ಬಚ್ಚಲುಮನೆ, ಲೆಟ್ರಿನ್‌ ಅಷ್ಟನ್ನೇ ಕಟ್ಟಿಕೊಂಡು ಬಂದು ಇಲ್ಲಿ ನೆಲೆಸಿದ್ದು. ನಂತರ ತಾನು ಕಾಲೇಜಿಗೆ ಸೇರುವ ಹೊತ್ತಿಗೆ, ಬೆಳೆಯುತ್ತಿರುವ ಹೆಣ್ಣುಮಗುವಿಗೊಂದು ಪ್ರತ್ಯೇಕ ಕೋಣೆ ಬೇಕೆಂದು ಕಾಸಿಗೆ ಕಾಸು ಸೇರಿಸಿ, ಬ್ಯಾಂಕಿನಲ್ಲೂ ಒಂದಷ್ಟು ಸಾಲ ಮಾಡಿ ಇನ್ನೆರಡು ರೂಮು, ಹಾಲು ವೆರಾಂಡ ಚಿಕ್ಕದಾಗಿ ಕಟ್ಟಿಸಿದ್ದಳು. ತಾನು ಡಿಗ್ರಿ ಪಾಸಾಗಿ ಎಲ್.ಐ.ಸಿ.ಯಲ್ಲಿ ಕೆಲಸ ಹಿಡಿದೆ. ರಂಗ ಪಿ.ಯು.ಸಿ.ಯಲ್ಲಿ ಫೇಲಾಗಿ ನಂತರ ಮೂರ‍್ನಾಲ್ಕು ಸಲ ಕಟ್ಟಿ ಹೇಗೋ ಅಂತೂ ಪಾಸು ಮಾಡಿಕೊಂಡು ಡಿಪ್ಲೊಮೋ ಸೇರಿಕೊಂಡ. ಅಷ್ಟರಲ್ಲಿ ತನ್ನ ಮದುವೆಯಾಗಿತ್ತು.

ಗಂಡ ರೆಪ್ರೆಸೆಂಟಿಟೀವ್.‌ ಊರೂರು ತಿರುಗುವ ಕೆಲಸ. ಮೂರ‍್ನಾಲ್ಕು ವರ್ಷ ಮಕ್ಕಳು ಬೇಡವೆಂದುಕೊಂಡಿದ್ದೆವು. ಅಷ್ಟರಲ್ಲಿ ಬಸ್‌ ಆಕ್ಸಿಡೆಂಟ್ನಲ್ಲಿ ತೀರಿಕೊಂಡಾಗ ʻಒಬ್ಬಳೇ ಇರುವುದು ಬೇಡʼ ಎನ್ನುವ ಅಮ್ಮನ ಬಲವಂತಕ್ಕೆ ಇಲ್ಲಿಗೆ ಬರುವಂತಾಯಿತು. ಮಕ್ಕಳೂ ಇಲ್ಲದೆ ನಾನೊಬ್ಬಳೇ ಇರುವುದು ಅವಳಿಗಿಷ್ಟವಿಲ್ಲ. ʻತಾನು ಹೋದ ಮೇಲೇನು ಗತಿ?ʼ ಎನ್ನುವುದು ಅವಳ ಯೋಚನೆ. ಇನ್ನೊಂದು ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡುತ್ತಿದ್ದಾಳೆ. ಇಲ್ಲದಿದ್ದರೆ ʻನೀನು ಈ ಮನೆಯ ಜೀತದಾಳಾಗಿಬಿಡ್ತೀಯಾʼ ಅನ್ನುತ್ತಿರುತ್ತಾಳೆ. ಮೊದಮೊದಲು ಬೇಡವೆಂದು ಅನ್ನಿಸುತ್ತಿದ್ದರೂ, ಈಚೀಚೆಗೆ, ಅಮ್ಮನ ಮಾತು ಸರಿಯೆನ್ನಿಸುತ್ತಿದೆ. ಸದಾ ಉರಿಕಾರುವ ಈ ರಂಗನ ಜೊತೆಗೆ ಜೀವಮಾನ ಪೂರ್ತಿ ಇರಲು ಸಾಧ್ಯವೇ! ಬೇರೆ ಆಸರೆಯಾದರೂ ಏನಿದೆ? ತನ್ನಂತೆಯೇ ಹೆಂಡತಿ ಕಳೆದುಕೊಂಡವರೋ, ಇಲ್ಲವೇ ಡೈವೋರ್ಸ್‌ ಆದವರೋ ಸಿಗಬಹುದೇನೋ. ಆ ಜೀವನ ಹೇಗಿರುತ್ತದೋ?! ಒಂದು ಕ್ಷಣ ಭಯವೇ ಆಯಿತು.

ರಂಗನಿಗೆ ಅಂಥ ಒಳ್ಳೆಯ ಕೆಲಸವೂ ಸಿಗಲಿಲ್ಲ. ಪ್ರಿಂಟಿಂಗ್‌ ಪ್ರೆಸ್ನಲ್ಲಿ ಕೆಲಸ. ಅವನ ದುಡಿಮೆ ಅವನಿಗೆ ಸಾಕು. ಏಡೆಡ್‌ ಸ್ಕೂಲಾದ್ದರಿಂದ ಅಮ್ಮನಿಗಷ್ಟು ಪಿಂಚಣಿ ಅವಳಿರುವ ತನಕವೂ ಬರತ್ತೆ. ತಾನಿಲ್ಲಿರುವುದರಿಂದ ತಿಂಗಳಿಗೆ ಒಂದಷ್ಟು ದುಡ್ಡು ಅಮ್ಮನ ಕೈಲಿಡುತ್ತೇನೆ. ಅಷ್ಟರ ಮೇಲೂ ಏನಾದರೂ ಬೇಕಾದರೆ ಕೊಡುತ್ತಿರುತ್ತೇನೆ. ರಂಗನಿಗೆ ದುಡಿಯುವ ಹೆಂಡತಿ ಸಿಕ್ಕರೆ ಮೇಲೆಂದು ಅಮ್ಮನ ಯೋಚನೆ. ಅದೂ ಸರಿಯೇ. ಅವನ ಕೆಲಸದಲ್ಲಿ ಅಂಥ ಒಳ್ಳೆಯ ಭವಿಷ್ಯವೇನೂ ಇಲ್ಲ. ನಾಳೆ ಸಂಸಾರ ನಡೆಸುವುದು ಹೇಗೆ? ಮನೆಗೆ ಬಾಡಿಗೆ ಇಲ್ಲ ಅಷ್ಟೇ. ಮಿಕ್ಕೆಲ್ಲವೂ ಸಂಬಳದಿಂದಲೇ ಸಾಗಬೇಕಲ್ಲಾ. ತಾನು ನಿರಂತರವಾಗಿ ಅವನಿಗೆ ಸಹಾಯ ಮಾಡುತ್ತೇನೆಂದುಕೊಳ್ಳಲು ಸಾಧ್ಯವೇ?

ನಾಳೆ ಹೇಗೋ… ಆದರೆ ಅವನಿಗೆ ಬರುತ್ತಿರುವ ಹುಡುಗಿಯರ ನಿರೀಕ್ಷೆ ಬೇರೆಯೇ ಇರುತ್ತದೆ. ಅವರನ್ನೇನು ಅನ್ನಲು ಸಾಧ್ಯ? ನಾನಾದರೂ ಮಾಡಿಕೊಂಡು ಬಿಡುತ್ತಿದ್ದೆನೇ?! ತನ್ನ ಮದುವೆಗೆ ಮುಂಚೆ ಅಮ್ಮನೂ ಹೀಗೇ ನಿರೀಕ್ಷೆ ಮಾಡುತ್ತಿದ್ದವಳೇ ಅಲ್ಲವೇ? ತನಗಿನ್ನೂ ಒಳ್ಳೆಯ ಕಡೆ ಸಿಗಬೇಕೆಂದೇ ಅವಳ ಆಸೆಯಿತ್ತು. ಆದರೆ ಅಷ್ಟೊಂದು ನೋಡಿ, ಮಾಡುವ ಜನಸಹಾಯ ಅವಳಿಗಿರಲಿಲ್ಲ, ಹಾಗಾಗಿ ಸ್ವಲ್ಪ ಕೊರತೆಯೆಂಬಂತೆಯೇ ಒಪ್ಪಿಕೊಂಡಳು. ಅದೂ ಹೀಗಾಗಬೇಕೆ… ಅವರು ಹೋಗಿ ಮುಂದಿನ ತಿಂಗಳಿಗೆ ನಾಲ್ಕು ವರ್ಷ… ಹಾಲಿನ ಗಡಿಯಾರ ನಾಲ್ಕು ಹೊಡೆದಿದ್ದು ಕೇಳಿಸಿತು. ರಂಗ ಬಂದಂತೆ ಕಾಣಲಿಲ್ಲ; ಎದ್ದು ಹಾಲಿಗೆ ಬಂದಳು. ರತ್ನಮ್ಮ ಸೋಫಾದ ಮೇಲೆ ಕುಳಿತೇ ಇದ್ದರು.

“ಯಾಕಮ್ಮಾ ಮಲಗ್ಲಿಲ್ವಾ?”‌ ಎನ್ನುತ್ತಾ ಬಂದು ಪಕ್ಕದಲ್ಲಿ ಕುಳಿತಳು. “ಅವ್ನು ಅಷ್ಟು ಕೋಪ ಮಾಡ್ಕೊಂಡು ಹೋದ. ನಿದ್ದೆ ಹೇಗ್ಬರತ್ತೇ ಶುಭಾ? ಏನೇನೋ ಯೋಚನೆಗಳು… ಇನ್ನೇನು ಅವ್ನಿಗೆ ಮೂವತ್ತೂ ದಾಟ್ಬಿಡತ್ತೆ. ಅವ್ನ ಆತಂಕಾನೂ ಸಹಜಾನೇ ಅಲ್ವೇನೆ? ಪಶು, ಪಕ್ಷಿಗಳನ್ನೇ ಕಾಮ ಬಿಟ್ಟಿಲ್ಲ. ಇನ್ನು ಇವ್ನು ಮನುಷ್ಯ. ಸನ್ಯಾಸೀನೇ? ಈಗ ಬರೀ ರೇಕ್ಕೊಂಡು ಮಾತಾಡ್ತಿದಾನೆ. ಆಮೇಲೆ ಏನಾದ್ರೂ ದುರ‍್ವ್ಯಸನ ಶುರು ಮಾಡ್ಕೊಂಡ್ಬಿಟ್ರೆ ಏನೇ ಮಾಡೋದು? ಈಗ ಆಫೀಸಿಗೋದ್ರೆ ನೆಟ್ಗೆ ಮನೇಗ್ಬರ‍್ತಿದಾನೆ. ನಾಳೆ ಅಲ್ಲಿ, ಇಲ್ಲಿ ಕಾಲಾಡಿಸ್ಕೊಂಡು ಬರಕ್ಕೆ ಶುರು ಮಾಡ್ಬಿಟ್ರೆ? ಮಧ್ಯಾಹ್ನದಿಂದ ಅದೇ ಯೋಚ್ನೆ ತಲೆ ಕೊರೀತಿದೆ ಕಣೆ. ನೋಡು ಕೋಪ ಮಾಡ್ಕೊಂಡು ಹೋದೋನು ಇಷ್ಟೊತ್ತಾದ್ರೂ ಮನೆಗ್ಬಂದಿಲ್ಲ” ಅಂದರು.

“ಅಮ್ಮಾ, ನೀನು ಏನೇನೋ ಯೋಚ್ನೆ ಮಾಡ್ಬೇಡ. ಫ್ರೆಂಡ್ಸ್‌ ಜೊತೆ ಹೊರಗೆಲ್ಲಾದ್ರೂ ತಿನ್ಕೊಂಡು, ಪಿಕ್ಚರ್‌, ಗಿಕ್ಚರ್‌ ನೋಡ್ಕೊಂಡು ನಿಧಾನ್ವಾಗಿ ಬರ‍್ತಾನೇನೋ, ಏಳು, ಎದ್ದು ಮುಖ ತೊಳ್ಕೋ, ಕಾಫಿ ಮಾಡ್ತೀನಿ. ಕುಡ್ದು ರೆಡಿಯಾಗಿ ಹಾಗೇ ದೇವಸ್ಥಾನಕ್ಕಾದ್ರೂ ಒಂದಷ್ಟು ಹೊತ್ತು ಹೋಗ್ಬಾ. ಹೊರಗ್ಹೋಗ್ಬಂದ್ರೆ ಸ್ವಲ್ಪ ಮನಸ್ಸು ನಿರಾಳವಾಗತ್ತೆ, ಏಳು” ಎನ್ನುತ್ತಾ ಬಲವಂತವಾಗಿ ಅಮ್ಮನನ್ನು ಎಬ್ಬಿಸಿದಳು. “ಅದೂ ಸರಿಯೇನೋ” ಎನ್ನುತ್ತಾ ರತ್ನಮ್ಮ ಎದ್ದರು. ಅಮ್ಮನೆಂದ ವಿಚಾರ ಶುಭಾಳ ತಲೆ ಕೊರಿಯತೊಡಗಿತು.

***

ರತ್ನಮ್ಮ ಬರುವಾಗ ಸಂಜೆ ಏಳೂವರೆಯಾಗಿತ್ತು. ಶುಭಾ ಟೀವಿ ನೋಡುತ್ತಾ ಕುಳಿತಿದ್ದಳು. ಬಂದವರೇ ಕಣ್ಣಲ್ಲೇ ʻಬಂದ್ನಾʼ ಎನ್ನುವಂತೆ ನೋಡಿದರು. ʻಇನ್ನೂ ಬಂದಿಲ್ಲʼ ಎನ್ನುವಂತೆ ತಲೆಯಾಡಿಸಿದ ಶುಭಾ “ರಾತ್ರೀಗೇನ್ಮಾಡ್ಲಿ?” ಕೇಳಿದಳು. “ಅಲ್ವೇ ಇಷ್ಟೊತ್ತಾದ್ರೂ ಮನೆಗ್ಬರ‍್ಲಿಲ್ವಲ್ಲೇ” ಎಂದರು ಆತಂಕದಿಂದ. “ಅಯ್ಯೋ ಬರ‍್ತಾನ್ಬಿಡು, ಏನು ಹುಡ್ಗೀನಾ ನೀನಷ್ಟು ಹೆದರ‍್ಕೊಳಕ್ಕೆ. ರಜದ್ದಿನ ಪೇಟೆ ಸುತ್ಕೊಂಡು ಬರ‍್ತಾನೆ. ನೀನು ಹೆದರ‍್ತೀಯಾ. ಅವ್ನೂ ನಿನ್ನ ಕುಣಿಸ್ತಾನೆ. ದೇವ್ರ ದೀಪ ಹಚ್ಚಕ್ಕೆ ಮರೆತ್ಬಿಟ್ಟೆ. ಕಾಲ್ತೊಳ್ಕೊಂಡು ದೀಪ ಹಚ್ಚು. ಸಾರು, ಪಲ್ಯ ಎಲ್ಲಾ ಸಾಕಷ್ಟಿದೆ. ಸ್ವಲ್ಪ ಅನ್ನಕ್ಕೊಂದಿಡ್ತೀನಿ” ಎನ್ನುತ್ತಾ ಶುಭಾ ಎದ್ದಳು. “ಏನೋ ನಿಂಗಿರೋ ಧೈರ್ಯ ನಂಗಿಲ್ಲ ಕಣೇ” ಎನ್ನುತ್ತಾ ರತ್ನಮ್ಮ ಎದ್ದರು. ʻನಂಗ್ತಾನೆ ಎಲ್ಲಿದೆ, ನಿನ್ಮುಂದೆ ಹಾಗಿದೀನಿ. ನನ್‌ ತಲೇಲೂ ಹುಳು ಬಿಟ್ಟಿದೀಯಾ ನೀನುʼ ಮನಸ್ಸಿನಲ್ಲೇ ಅಂದುಕೊಂಡು ಅಡುಗೆಮನೆಗೆ ಹೊರಟಳು.

ಇಬ್ಬರೂ ಟೀವಿಯ ಮುಂದೆ ಕುಳಿತರು. ಎಷ್ಟು ಆ ವಿಷಯ ಮಾತಾಡಬಾರದು ಅಂದುಕೊಂಡರೂ ತಡೆಯದೆ ರತ್ನಮ್ಮ “ಅವ್ನಿನ್ನೂ ಬರ‍್ಲಿಲ್ವಲ್ಲೇ” ಎಂದರು ಆತಂಕದಿಂದ. ಶುಭಾನೂ “ಫೋನಾದ್ರೂ ಮಾಡೋಣ ತಡಿ. ಇಷ್ಟೊತ್ತಿಗೆ ಸ್ವಲ್ಪ ಕೋಪ ಇಳ್ದಿರ‍್ಬೋದು ಅವ್ನಿಗೆ” ಅಂದುಕೊಂಡು ಕರೆಮಾಡಿದಳು. ಅವನ ರೂಮಿನಿಂದಲೇ ರಿಂಗ್‌ ಆದ ಶಬ್ದ ಕೇಳತೊಡಗಿತು. ಎದ್ದು ಅವನ ರೂಮಿಗೆ ಹೋಗಿ ಲೈಟ್‌ ಹಾಕಿದಳು. ಚಾರ್ಜಿಗೆ ಹಾಕಿದ್ದ ಮೊಬೈಲ್‌ ಅಲ್ಲೇ ಕುಳಿತಿತ್ತು. ಬಟ್ಟೆಗಳು, ಹೊದ್ದಿಕೆ, ಹಾಸಿಗೆ ಎಲ್ಲವೂ ಕಿತ್ತು ಬಿಸಾಡಿದಂತೆ ಇಡೀ ರೂಮು ಅಸ್ತವ್ಯಸ್ಥವಾಗಿತ್ತು. ತಡೆದುಕೊಳ್ಳಲಾಗದೆ ಒಂದೊಂದನ್ನೇ ಎತ್ತಿಡತೊಡಗಿದಳು. ಕಿತ್ತೆಸೆದಿದ್ದ ಬಟ್ಟೆಗಳನ್ನೆಲ್ಲಾ ಮಡಚಿ ಬೀರುವಿನಲ್ಲಿಡುವಾಗ ಮೂಲೆಯಲ್ಲಿ ಏನೋ ಮುಚ್ಚುಳ ತೆರೆದಿದ್ದ ಪ್ಯಾಕೆಟ್‌ ಕಾಣಿಸಿತು.

ಈಗ ಎಲ್ಲಾ ಕೆದಕ್ಕೊಂಡು ಕೂರೂದು ಬೇಡ ಅನ್ನಿಸಿ, ಬಾಗಿಲು ಮುಚ್ಚಿ, ಮೇಜನ್ನು ಓರಣ ಮಾಡಿ ಹಾಸಿಗೆಯನ್ನು ಕೊಡವಿ ಹಾಸಲೆಂದು ದಿಂಬನ್ನು, ಹೊದ್ದಿಕೆಯನ್ನು ಎಳೆದಳು. ದಿಂಬಿನ ಕೆಳಗಿಂದ ಮೂರ‍್ನಾಲ್ಕು ಪುಸ್ತಕಗಳು ಕೆಳಗೆ ಬಿದ್ದವು. ಮೇಜಿನ ಮೇಲಿಡಲೆಂದು ಕೈಗೆತ್ತಿಕೊಂಡವಳು ಕುತೂಹಲದಿಂದ ಅದರೆಡೆಗೆ ಕಣ್ಣಾಡಿಸಿದಳು. ನೋಡುನೋಡುತ್ತಿದ್ದಂತೆಯೇ ಬೆವೆತುಹೋದಳು. ರೂಮಿನೊಳಗೆ ಹೋದ ಮಗಳು ಎಷ್ಟು ಹೊತ್ತಾದರೂ ಹೊರಬರದಿದ್ದರಿಂದ “ಏನ್ಮಾಡ್ತಿದೀಯೇ ಅಲ್ಲಿ. ಅವ್ನ ಸಾಮಾನ್ಯಾವ್ದುನ್ನೂ ಮುಟ್ಬೇಡ. ರೇಕ್ಕೋತಾನೆ. ನನ್‌ ರೂಮೊಳ್ಗೆ ಯಾರೂ ಹೆಜ್ಜೆಯಿಡ್ಬೇಡಿ ಅಂತ ಬೈತಾನೆ. ನೀನು ತೆಗೆದಿಟ್ರೆ ಇನ್ನೊಂದು ಮಹಾಭಾರತವೇ ಆಗತ್ತೆ” ಎನ್ನುತ್ತಾ ರೂಮಿನ ಬಳಿ ಬಂದರು. ತಕ್ಷಣ ಆ ಪುಸ್ತಕಗಳನ್ನೆಲ್ಲಾ ದಿಂಬಿನಡಿಗೆ ಸರಿಸಿ, “ಹಾಗಾದ್ರೆ ಬಿದ್ದಿರ‍್ಲಿ ಬಿಡು ಬಂದೇ” ಎನ್ನುತ್ತಾ ಎಲ್ಲವನ್ನೂ ಮೊದಲಿನಂತೆಯೇ ಕೆದರಿ ಹೊರಬಂದಳು.

“ರೂಮನ್ನ ಅಷ್ಟು ಗಲೀಜಾಗಿಟ್ಕೊಂಡಿದಾನೆ. ʻನೀನು ಮಾಡ್ಬೇಡ, ನಾನು ಕ್ಲೀನ್‌ ಮಾಡ್ಕೊಡ್ತೀನೋʼ ಅಂದ್ರೂ ಕೇಳಲ್ಲ. ʻನನ್ರೂಮಿಗೆ ಯಾರೂ ಹೆಜ್ಜೆ ಇಡ್ಕೂಡ್ದುʼ ಅಂತ್ರೇಕ್ಕೋತ್ತಾನೆ. ಅದ್ಯಾವಾಗ ಬುದ್ಧಿ ಕಲೀತಾನೋ ಏನೋ. ನೋಡು… ಮೊಬೈಲ್‌ ಬೇರೆ ಮನೇಲೇ ಬಿಟ್ಟು ಹೋಗಿದಾನೆ. ಇಷ್ಟು ಹೊತ್ತಾದ್ರೂ ಬಂದಿಲ್ಲ. ಮನೇಲಿ ನಾವು ಹೇಗಿರ‍್ಬೇಕು. ಕಾಯೋವ್ರಿದಾರೆ ಮನೇಲಿ ಅನ್ನೋ ಯೋಚನೆ ಬೇಡ್ವಾ. ಆಗ್ಲೆ ಎಂಟೂವರೆ ಆಯ್ತು” ಅಲವತ್ತುಕೊಂಡರು. ʻಹಾಗಾದ್ರೆ ಬೀರುವಿನ ಮೂಲೆಯ ಕತ್ತಲಲ್ಲಿದ್ದ ಆ ರಟ್ಟಿನ ಪ್ಯಾಕೇಟು… ಅದು… ಅದಾ… ‌ʼ ಯೋಚನೆಯಲ್ಲಿ ಮುಳುಗಿದ್ದ ಶುಭಾಳಿಗೆ ಅಮ್ಮ ಹೇಳಿದ್ದು ಕಿವಿಗೆ ಬೀಳಲಿಲ್ಲ. “ಏನು ಯೋಚಿಸ್ತಿದೀಯೇ, ಎಲ್ಲಿ ಕಳ್ದು ಹೋಗಿದೀಯಾ ಎನ್ನುತ್ತಾ ತಾವು ಹೇಳಿದ್ದನ್ನೇ ಮತ್ತೊಮ್ಮೆ ಹೇಳಿದರು. ಒಳಗೆ ತಾನು ನೋಡಿದ್ದನ್ನು ಅಮ್ಮನಿಗೆ ಹೇಳಬೇಕೋ, ಬೇಡವೋ ಅನ್ನುವ ಯೋಚನೆಯಲ್ಲಿ ಬಿದ್ದ ಶುಭಾ ನಿಧಾನವಾಗಿ “ಹೋಗ್ಲಿ ಬಿಡು; ಇಬ್ರೂ ಕ್ಲೀನ್‌ ಮಾಡೋದು ಬೇಡ. ನಾಳೆ ಅವನ ಹೆಂಡ್ತಿ ಬಂದ್ಮೇಲೆ ಅವ್ಳೇ ಮಾಡ್ಕೊಳ್ಳಿ. ನಮಗ್ಯಾಕೆ ಬೈಗಳ” ಎನ್ನುತ್ತಾ ಟೀವಿಯನ್ನು ನೋಡುತ್ತಿರುವವಳಂತೆ ಅದರಲ್ಲಿ ಕಣ್ಣು ಹುದುಗಿಸಿದಳು.

“ಅದೇ ಆ ಮಹರಾಯಿತಿ ಎಲ್ಲಿದಾಳೋ…” ಎಂದರು ರತ್ನಮ್ಮ ಚಿಂತೆಯಿಂದ. “ಅದೆಲ್ಲಿದ್ರೂ ಇನ್ಮೇಲೆ ಇನ್ನೂ ಸ್ವಲ್ಪ ಗಮನವಹಿಸಿ ಹುಡುಕೋಣ. ಸದ್ಯಕ್ಕೆ ನನ್ಮದುವೆ ಯೋಚ್ನೆ ಪಕ್ಕಕ್ಕಿಡು. ಮೊದ್ಲು ಅವನ್ದಾಗ್ಲಿ. ಆಮೇಲೆ ಅದ್ರ ಬಗ್ಗೆ ಯೋಚ್ನೆ ಮಾಡೋವಂತೆ. ಈಗ ಆನ್ಲೈನ್‌ ಮ್ಯಾರೇಜ್‌ ಬ್ಯೂರೋಗಳೂ ಇವೆ. ಅದ್ರಲ್ಲೂ ಪ್ರಯತ್ನ ಪಡೋಣ. ನೀನು  ನಮ್ಜನ, ನಂಜಾತಿ ಅಂದ್ಕೊಂಡು ಕಣಿ ಮಾಡ್ತಾ ಕೂತ್ಕೋಬೇಡ. ಆ ಕಾಲ್ವೆಲ್ಲಾ ಈಗ ಹೊರ‍್ಟೋಯ್ತು. ಯಾವ್ದು ಸರಿಯಾದ್ದು ಬಂದ್ರೂ ಒಪ್ಕೋ ಅಷ್ಟೇ” ಎಂದಳು ಟೀವಿಯಿಂದ ಕಣ್ಣು ತೆಗೆಯದೆ.

“ಹಾಗಂತೀಯಾ…” ಎಂದವರೇ ಯೋಚನೆಯಲ್ಲಿ ಮುಳುಗಿದರು ರತ್ನಮ್ಮ. ಹಾಲಿನ ಗಡಿಯಾರ ಒಂಭತ್ತು ಗಂಟೆ ಹೊಡೆಯಿತು. “ಏಳು ಊಟ ಮಾಡೋಣ. ಅವನು ಬಂದ್ಮೇಲೆ ಮಾಡ್ಕೋತಾನೆ” ಎನ್ನುತ್ತಾ ಎದ್ದಳು. “ಅವ್ನಿನ್ನೇನೂ ಮಾಡ್ಕೊಂಡಿರಲ್ಲ ತಾನೆ? ಇಷ್ಟೊತ್ತಾದ್ರೂ ಬಂದಿಲ್ವಲ್ಲೇ” ಎಂದರು. “ಅಮ್ಮಾ ನೀನು ಏನೇನೋ ಯೋಚ್ನೆ ಮಾಡಿ ನನ್ನೂ ಹೆದ್ರಿಸ್ಬೇಡ. ಈಗ ಊಟಕ್ಕೇಳು” ಎಂದಳು. “ಯಾಕೋ ಮನಸ್ಸು ಬರ‍್ತಿಲ್ವೆ, ಅವ್ನೂ ಬರ‍್ಲಿ ಕಣೇ” ಎಂದರು. “ಈಗ್ನೀನೇಳು. ಅವ್ನೆಲ್ಲಾ ಮುಗಿಸ್ಕೊಂಡೇ ಬರ‍್ತಾನೆ. ಕಾಯೋದ್ರಲ್ಲಿ ಅರ್ಥವಿಲ್ಲ. ನಮ್ಕೆಲಸ ನಾವ್‌ ಮುಗ್ಸೋಣ” ಎನ್ನುತ್ತಾ ಬಲವಂತದಿಂದ ಎಬ್ಬಿಸಿದಳು. ಅವಳ ಬಲವಂತಕ್ಕೆಂಬಂತೆ ಎದ್ದು ಒಂದಿಷ್ಟು ತಿಂದ ಶಾಸ್ತ್ರ ಮಾಡಿ ಬಂದವರು ಮತ್ತೆ ಸೋಫಾದಲ್ಲೇ ಅವನನ್ನು ಕಾಯುತ್ತಾ ಕುಳಿತರು.

ಹತ್ತು ಗಂಟೆಯಾಗುತ್ತಾ ಬಂತು. “ನೀನು ಮಲಗಲ್ವಾ?” ಎನ್ನುತ್ತಾ ಶುಭಾ ಎದ್ದಳು. “ಇಲ್ಲ, ನಾನು ಕಾಯ್ತೀನಿ, ನೀನು ಮಲ್ಗು, ನಿಂಗೆ ಬೆಳಗ್ಗೆ ಆಫೀಸಿದೆ” ಎಂದ ರತ್ನಮ್ಮ ಟೀವಿಯಲ್ಲಿ ಕಣ್ಣು ಕೀಲಿಸಿ ಕುಳಿತರು. “ಸರಿ, ನಾನು ಮಲಗ್ತೀನಿ, ನೀನೂ ತುಂಬಾ ಲೇಟ್ಮಾಡ್ಕೋ ಬೇಡ. ಅವನೆಷ್ಟೊತ್ತಿಗೆ ಬರ‍್ತಾನೋ” ಎನ್ನುತ್ತಾ ರೂಮಿಗೆ ಹೊರಟಳು. ಮಲಗಿದ ಮೇಲೂ ನಿದ್ರೆ ಬರಲಿಲ್ಲ. ರಂಗನ ಯೋಚನೆಯೇ ತಲೆಯೆಲ್ಲಾ ತುಂಬಿಕೊಂಡಿತು. ಅಮ್ಮ ಹೆದ್ರಿರೋ ಹಾಗೆ ಅವ್ನು ಪ್ರಾಣಕ್ಕೇನೂ ಮಾಡ್ಕೊಂಡಿಲ್ದಿದ್ರೆ ಸಾಕು. ದೇವ್ರೇ ಅವ್ನು ಮನೆಗೆ ಬಂದ್ರೆ ಸಾಕಪ್ಪಾ… ಅನ್ನಿಸಿ ನಿದ್ರೆ ಬಾರದೆ ಮಗ್ಗಲು ಬದಲಾಯಿಸತೊಡಗಿದಳು. ಹನ್ನೊಂದು ಗಂಟೆಯ ಹತ್ತಿರ ಬಂತೇನೋ, ಇನ್ನೂ ಅಮ್ಮ ಬರಲಿಲ್ಲ. ಏನು ಮಾಡಲಿ…? ಎದ್ದು ಅಮ್ಮನ ಬಳಿ ಹೋಗಲೇ ಅಂದುಕೊಂಡಳು. ಹನ್ನೊಂದೂ ಹೊಡೆಯಿತು. ಎದ್ದು ಕುಳಿತಳು… ಗೇಟು ತೆರೆದ ಶಬ್ದ ಕೇಳಿಸಿತು. ʻಸದ್ಯ ಬಂದʼ ಎಂದುಕೊಂಡಳು. ಕಾಲಿಂಗ್‌ ಬೆಲ್ಲಾಯಿತು. ಅಮ್ಮ ಬಾಗಿಲು ತೆರೆದ ಸದ್ದು. ಎದ್ದು ಹೋಗಲೆಂದು ಎದ್ದಳು… “ಎಲ್ಹೋಗಿದ್ಯೋ ಇಷ್ಟೊತ್ತೂ, ಎಷ್ಟು ಆತಂಕ ಆಗಿತ್ತು ನಮ್ಗೆ…” ಅಮ್ಮ ಕೇಳುತ್ತಿದ್ದಳು.

“ಆತಂಕ ಪಡಕ್ಕೆ ನಾನೇನು ಮಗಳೇ…?” ವ್ಯಂಗ್ಯ ಎದ್ದು ಕಾಣಿಸುತ್ತಿತ್ತು ಮಾತಿನಲ್ಲಿ. ಎದ್ದು ಹೋದರೆ ಇನ್ನಷ್ಟು ಹದಗೆಡುತ್ತದೆಂದು ಮಂಚದ ಮೇಲೇ ಕುಳಿತಳು. “ಹೋಗ್ಲಿ, ಊಟಕ್ಕೇಳು, ಬಡಿಸ್ತೀನಿ” ಅಮ್ಮ ಹೇಳುತ್ತಿದ್ದಳು. “ನಂದಾಯ್ತು, ನೀನು ಮಲಕ್ಕೋ” ಎಂದವನೇ ಧಡಾರನೆ ರೂಮಿನ ಬಾಗಿಲು ಹಾಕಿಕೊಂಡ ಶಬ್ದ ಕೇಳಿಸಿತು. ಶುಭಾ ಮಂಚದ ಮೇಲುರುಳಿಕೊಂಡು ಗೋಡೆಯ ಬದಿಗೆ ಮುಖ ತಿರುಗಿಸಿದಳು.

ಲೈಟು ಆರಿಸಿಕೊಂಡು ಬಂದು ಪಕ್ಕದಲ್ಲುರುಳಿದ ರತ್ನಮ್ಮ “ಏನೋ ಗಬ್ಬು ಸೆಂಟ್ ವಾಸ್ನೆ ಬರ‍್ತಿದ್‌ ಹಾಗಿತ್ತು ಕಣೆ. ಕುಡ್ತಾ ಏನಾದ್ರೂ ಕಲ್ತಿರ‍್ಬೋದೇನೇ” ಎಂದರು ಆತಂಕದಿಂದ. ಏನೂ ಉತ್ತರ ಬರದಿದ್ದುದರಿಂದ “ನಿದ್ದೆ ಬಂತೇನೋ ಪಾಪ, ಮಲಗು, ಬೆಳಗ್ಗೆ ಕೆಲ್ಸಕ್ಬೇರೆ ಹೋಗ್ಬೇಕು. ಸದ್ಯ ಮನೇಗ್ಬಂದ್ನಲ್ಲಾ. ಎಷ್ಟು ಆತಂಕ ಆಗಿತ್ತು. ಗಣಪತಿ, ತಂದೆ, ಕಾಪಾಡಿದ್ಯಪ್ಪ. ನಾಳೆ ಬಂದು ನಿಂಗೆ ಇಪ್ಪತ್ತೊಂದು ನಮಸ್ಕಾರ ಹಾಕ್ತೀನಪ್ಪಾ” ಎನ್ನುತ್ತಾ ಕತ್ತಲಲ್ಲೇ ಕೈಮುಗಿದು ಆಕಳಿಸುತ್ತಾ ಉರುಳಿಕೊಂಡರು. ಐದು ನಿಮಿಷದಲ್ಲೇ ಸಣ್ಣಗೆ ಗೊರಕೆಯ ಶಬ್ದ ಕೇಳತೊಡಗಿತು. ಶುಭಾ ಎದ್ದು ತೆಳ್ಳಗಿನ ಬೆಡ್‌ಶೀಟನ್ನು ಅಮ್ಮನಿಗೆ ಹೊದಿಸಿ ಮಲಗಿಕೊಂಡಳು, ನಿದ್ದೆ ಮಾಡಲು ಪ್ರಯತ್ನಿಸುತ್ತಾ…

‍ಲೇಖಕರು Avadhi

December 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಡಾ. ಎಸ್.ಬಿ.ರವಿಕುಮಾರ್ ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ...

ಚರಿತ್ರೆಯಾದ ಋಣಾನುಬಂಧ

ಚರಿತ್ರೆಯಾದ ಋಣಾನುಬಂಧ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಅಂದ್ರೆ, ಮದ್ವೆ ಆಗ್ಲೇಬೇಕೂಂತೇನಿಲ್ಲ…!

ಅಂದ್ರೆ, ಮದ್ವೆ ಆಗ್ಲೇಬೇಕೂಂತೇನಿಲ್ಲ…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

೧ ಪ್ರತಿಕ್ರಿಯೆ

  1. T S SHRAVANA KUMARI

    ಕತೆಯನ್ನು ಪ್ರಕಟಿಸಿದ್ದಕ್ಕೆ ಧವನ್ಯವಾಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: