ಪೋಸ್ಟ್, ಪೋಸ್ಟ್!!

ಪೋಸ್ಟ್ ಮ್ಯಾನ್….!

ನಾಗರಾಜ್.ಎಂ

  ಟ್ರಿಣ್ ಟ್ರಿಣ್ ಸೈಕಲ್ ಬೆಲ್ಲಿನ ಸದ್ದು ಹೊರಗಡೆಯಿಂದ ಕೇಳಿಬಂದ ತಕ್ಷಣ ….ಲೇ ಮಗಾ …ಪೋಸ್ಟ್ ಮ್ಯಾನ್ ಬಂದ ಅಂತಾ ಕಾಣಿಸುತ್ತೆ …ಹೋಗಿ ಕೇಳೋ ..ಯಾವದಾದ್ರು ಪತ್ರ ಬಂದೈತಾ ಅಂತಾ ? ಎಲೆ ಅಡಿಕೆ ಜೊತೆ ಹೊಗೆಸೊಪ್ಪಿನ ತುಂಡು ಬಾಯಲ್ಲಿ ಇರಿಸಿಕೊಳ್ಳುತ್ತಾ ಮೂಲೆ ಕೋಣೆಯಲ್ಲಿ ಕುಳಿತಿದ್ದ ಅಜ್ಜಿ ಹೇಳಿದಾಗ, “ನಾಕು ಒಂದ್ಲೇ ನಾಕು , ನಾಕು ಎರಡ್ಲೆ ಎಂಟು” ಮಗ್ಗಿ ಉರು ಹಚ್ಚಿದ್ದ ನಂಗೆ ಹಾಗಿತ್ತು ಸುಗ್ಗಿ ! ಹೊರಗಡೆ ಹೋಗಲು ಯಾವ್ದಾದ್ರು ನೆಪ ಕಾಯುತ್ತಿದ್ದ ನಾನು , ಸರಿಯಜ್ಜಿ ಎಂದು ಒಮ್ಮೆಲೇ ಚಂಗೆಂದು ನೆಗೆದಿದ್ದೆ ರೋಡಿಗೆ ! ಶಂಕ್ರಣ್ಣ .. ಯಾವದಾದ್ರು ಕಾಗದ ಬಂದೈತಾ ? ಅಂತಾ ಪೋಸ್ಟ್ ಮ್ಯಾನ್ ಶಂಕ್ರಣ್ಣನನ್ನು ಕೇಳಿದಾಗ , ಮೇಲಿಂದ ಕೆಳಗಿನ ತನಕ ಅವ ನನ್ನ ನೋಡಿ…”ಎನಲೇ ನಾಗೇಶ ?…ಚೋಟುದ್ದ ಇದ್ದೀಯ …ಯಾರಲೇ ನಿಂಗೆ ಪತ್ರ ಬರಿತಾರೆ? ಮಾವನ ಮಗಳು ಯಾರಾರ ಇದಾರೇನು ಅಂತಾ ?” ಹಾಸ್ಯ ಮಾಡಿದಾಗ , ಏನು ಹೇಳಬೇಕೆಂದು ತೋಚದೆ ಪೆಚ್ಚಾಗಿದ್ದೆ ! ಉಸ್ಸಪ್ಪ ..ಈ ಸೈಕಲ್ ತುಳಿದು ತುಳಿದು ಸಾಕಾಯ್ತು ..ಅಬ್ಬಬ್ಬ ಏನು ಸುಡು ಬಿಸಿಲು..ಎಂದು ಕರ್ಚಿಪಿನಿಂದ ಮುಖ ಒರೆಸಿಕೊಳ್ಳುತ್ತಾ ಪೋಸ್ಟ್ ಮ್ಯಾನ್ ಶಂಕ್ರಣ್ಣ ಪಕ್ಕದ ಮನೆಯ ಬಸಣ್ಣನಿಗೆ ಬಂದ ಪತ್ರವನ್ನು ಕೊಟ್ಟಾಗ, ಹಂಗೆ ಸ್ವಲ್ಪ ಓದಿ ಹೇಳಪ್ಪ ಏನು ಬರದಾರೆ ಅಂತಾ ಬಸಣ್ಣ ಪೋಸ್ಟ್ ಮ್ಯಾನ್ಗೇ ಹೇಳಿದಾಗ …ಇದು ಬೇರೆ ಅಂತ ಗೊಣಗುತ್ತ ಅವ ಓದಿ ಹೇಳಿದ್ದ. ಅವ ಓದಿ ಮುಗಿಸೋದರಲ್ಲಿ ತಂದಿಟ್ಟಿದ್ದ ಮಂದವಾದ ಮಜ್ಜಿಗೆಯನ್ನು ಚಂದವಾಗಿ ಹೀರಿ ಮುಂದಕ್ಕೆ ಹೋದ ಪೋಸ್ಟ್ ಮ್ಯಾನ್ ಸೈಕಲ್ ಅನ್ನೇ ನೋಡುತ್ತಾ ನಿಂತಿದ್ದ ನಂಗೆ , ಮಗ್ಗಿ ಹೇಳೋದು ಆಯಿತೇನೋ ? ಅಂತಾ ಅಮ್ಮನ ಧ್ವನಿ ಕೇಳಿ ಮತ್ತೆ ಒಳಗಡೆ ಹೋಗಿ ಕೂತಿದ್ದೆ ! ಸ್ಕೂಲ್ ನಲ್ಲಿ ಟೀಚರ್ ಲೆಟರ್ ರೈಟಿಂಗ್ ಹೇಳಿಕೊಟ್ಟಾಗ ಮನೆಗೆ ಬಂದು ಚೆನ್ನಾಗಿ ಬರೆಯುವುದ ಅಭ್ಯಾಸ ಮಾಡಿದ್ದು ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಬಂದಾಗ ಅನುಕೂಲವಾಗಿತ್ತು… “ತೀರ್ಥರೂಪ ತಂದೆ – ತಾಯಿಯವರಿಗೆ ನಿಮ್ಮ ಪ್ರೀತಿಯ ಮಗ ನಾಗೇಶಿ ಮಾಡುವ ಶಿರ ಸಾಷ್ಟಾಂಗ ನಮಸ್ಕಾರಗಳು”…ಮೊದಲ ಬಾರಿಗೆ ಬರೆದ ಈ ಪತ್ರವನ್ನು ಆ ಕೆಂಪು ಡಬ್ಬದಲ್ಲಿ ಹಾಕುವಾಗ ಅಮ್ಮ- ಅಪ್ಪನ ನೆನಪಾಗಿ ಹಾಗೇ ಪತ್ರಕ್ಕೆ ಹಣೆಯೊತ್ತಿದ್ದೆ. ನನ್ನ ಪತ್ರವನ್ನು ಓದಿ ಅವರಿಗಾದ ಆನಂದ ಅಷ್ಟಿಷ್ಟಲ್ಲ. ಮರು ವಾರವೇ ಅಪ್ಪ ಅಮ್ಮ ಇಬ್ಬರೂ ಓಡೋಡಿ ಬಂದಿದ್ದರು ನನ್ನ ನೋಡಲು. ಅವರು ತಂದಿದ್ದ ಆ ಬುತ್ತಿ , ಚಪಾತಿ , ರವ ಉಂಡೆ ಹೂಂ 🙂 ಭರ್ಜರಿಯಾಗಿ ತಿಂದು ರೂಂ ನಲ್ಲಿ ಜೊತೆಗಿದ್ದ ಹುಡುಗರಿಗೂ ಕೊಟ್ಟು ನಲಿದಿದ್ದೆ. ಒಂದೇ ಒಂದು ಪತ್ರದಿಂದ ಹೆತ್ತವರಿಗಾದ ಆ ಸಂತೋಷ , ಅವರ ಪ್ರೀತಿನೋಡಿ ನನ್ನ ಕಣ್ಣುಗಳು ತೇವವಾಗಿದ್ದವು. ಹಾಗೇ ಮುಂದುವರಿಸಿದ್ದೆ ನನ್ನ ಪತ್ರ ವ್ಯವಹಾರ ಹೆತ್ತವರೊಂದಿಗೆ ! ಹಾಗು ಹೀಗೂ ಹೈಸ್ಕೂಲ್ , ಪಿಯುಸಿ ಮುಗಿಸಿ ಬೆಂಗಳೂರಿನಲ್ಲಿನ ಇಂಜಿನಿಯರಿಂಗ್ ಕಾಲೇಜ್ಗೆ ಸೇರಿದ್ದೆ. ಇದುವರೆಗೂ ಹೆಚ್ಚಾಗಿ ಹಳ್ಳಿ ಪ್ರದೇಶದಲ್ಲೇ ಹುಟ್ಟಿ ಬೆಳೆದಿದ್ದ ನನಗೆ, ಈ ಕಾಲೇಜ್ನಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದಿದ್ದ ಹುಡುಗ ಹುಡುಗಿಯರು …ಬಣ್ಣ ಬಣ್ಣದ ಜೀನ್ಸ್ ಬಟ್ಟೆ ತೊಟ್ಟು ಹಂಸ ನಡಿಗೆಯಲ್ಲಿ ನಡೆದು ಬರುತ್ತಿದ್ದ ಆ ನಾರ್ತ್ ಇಂಡಿಯನ್ ಹುಡುಗಿಯರು , ಬುರ್ರ್ ಬುರ್ರ್ ಅಂತ ದೂಳೆಬ್ಬೆಸಿ ಬೈಕಲ್ಲಿ ಹಿಂದುಗಡೆ ಹುಡುಗಿಯನ್ನು ಕೂರಿಸಿಕೊಂಡು ಹೀರೋಗಳ ತರಹ ಬರುತ್ತಿದ್ದ ಬೆಂಗಳೂರಿನ ಹುಡುಗರು …ಇವೆರನ್ನೆಲ್ಲ ನೋಡಿ ನನಗೂ ಜೀವನ ಕಲರ್ ಫುಲ್ ಆಗಿ ಕಾಣಿಸತೊಡಗಿತ್ತು. ಅದೇ ವೇಳೆಗೆ ನನ್ನ ಮಾವನ (ಅಮ್ಮನ ಅಣ್ಣ) ಸವಾರಿ ಬಂದಿಳಿದಿತ್ತು ನನ್ನ ರೂಮಿಗೆ …ಜೊತೆಯಲ್ಲಿ ಮಗಳು ನಿರುಪಮ. ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಅಮ್ಮಣ್ಣಿ ಕಾಲೇಜ್ ನಲ್ಲಿ ಪಿಯುಸಿ ಗೆ ಸೇರಿಸಲೆಂದು ಬಂದಿದ್ದ ಅವರನ್ನು ನಾನು ಹಾಗೇ ಒಂದು ಸುತ್ತು ಬೆಂಗಳೂರು ಅಡ್ಡಾಡಿಸಿದ್ದೆ. ಅಲ್ಲೇ ಹತ್ತಿರದ ಹಾಸ್ಟೆಲ್ ಒಂದರಲ್ಲಿ ಅವಳನ್ನು ಸೇರಿಸಿದ ಮೇಲೆ ಊರಿಗೆ ಹೋಗುವಾಗ ಮಾಮ ಹೇಳಿದ್ದರು ..ತಿಂಗಳಿಗೆ ಒಮ್ಮೆಯಾದರು ಬಂದು ನೀರು (ನಿರುಪಮ) ಬಗ್ಗೆ ವಿಚಾರಣೆ ಮಾಡ್ತಾ ಇರಪ್ಪ ನೀನು …ಅಂದಾಗ ಸರಿ ಮಾಮ ಅಂದು ಗೋಣಾಕಿದ್ದೆ. (ಮನದಲ್ಲೇ ಅಂದಿದ್ದೆ ..ನೀನೇನು ಹೇಳೋದು ಬೇಡ ಮಾವ ಅಂತಾ , ನಾನಿರುವುದೇ ಅದಕಾಗಿ 🙂 ! ) ಅವಳ ಕ್ಷೇಮದ ಬಗ್ಗೆ ವಿಚಾರಣೆ ಮಾಡಿದ ಹಾಗೂ ಆಯ್ತು , ಕ್ಯಾಲ್ಕುಲಸ್ ಲೆಕ್ಕ ಹೇಳಿಕೊಟ್ಟ ಹಾಗೂ ಆಯ್ತು ಅಂತ ಮನದಲ್ಲೇ ಕ್ಯಾಲ್ಕುಲೇಟ್ ಮಾಡಿ …ಮಾಮ ತಿಂಗಳಿಗೊಮ್ಮೆ ಅಂತ ಹೇಳಿದ್ದರೂ, ೧೫ ದಿನಕೊಮ್ಮೆ ಅವಳನ್ನು ನೋಡಲಿಕ್ಕೆ ಹೋಗಿಬರುತ್ತಿದ್ದೆ. ಹೀಗೆ ದಿನಗಳು ಉರುಳಿ ಎರಡನೇ ವರ್ಷದ ಇಂಜಿನಿಯರಿಂಗ್ ಕಾಲಿರಿಸಿದ್ದೆ. ಆಗಿನ್ನೂ ಸೆಲ್ ಫೋನ್ , ಇಂಟರ್ನೆಟ್, ಇಮೇಲ್ ಹಾವಳಿ ಇಲ್ಲದ ದಿನಗಳು. ಯಾರನ್ನರಾ ಮಾತಾಡಿಸಬೇಕು ಅಂದರೆ STD , ಲೋಕಲ್ ಕಾಲ್ ಮಾಡ ಬೇಕಾಗಿತ್ತು ..ಇಲ್ಲವೇ ಪತ್ರ ಬರೆಯಬೇಕಾಗಿತ್ತು. ಪರದೇಶದಿಂದ ಬಂದಂತಹ “ಪ್ರೇಮಿಗಳ ದಿನಾಚರಣೆ ” ಆಗ ತಾನೇ ನಮ್ಮ ಬೆಂಗಳುರಿನಂತಹ ದೊಡ್ಡ ದೊಡ್ಡ ನಗರಗಳಿಗೆ ಅಂಬೆಗಾಲಿಟ್ಟಿದ್ದ ದಿನಗಳು. ನನ್ನ ಕ್ಲಾಸ್ ಮೇಟ್ ಒಬ್ಬ ಒಂದು ದೊಡ್ಡ ಗ್ರೀಟಿಂಗ್ ಕಾರ್ಡ್ ತಂದು ಅದರಲ್ಲಿ ಅವನ ಹೆಸರು ಬರೆದು ಯಾವುದೊ ಹುಡುಗಿಗೆ ಕೊಡಲಿಕ್ಕೆ ಹೊರಟಿದ್ದ ನೋಡಿ ನಂಗೂ ಒಂತರ ಆಸೆ ಚಿಗುರಿತ್ತು ಮನದಲ್ಲಿ! ಆಗ ತಾನೇ ಬಂದಿದ್ದ ರವಿಚಂದ್ರನ್ ಅಭಿನಯಿಸಿದ್ದ “ಅಂಜದ ಗಂಡು ” ಸಿನೆಮಾ ನೋಡಿದ್ದ ನಾನು ಸ್ವಲ್ಪ ಧೈರ್ಯ ಮಾಡಿ ಹೇಗೂ ಸ್ವಲ್ಪ ಸಲಿಗೆಯಲ್ಲಿದ್ದ ಮಾವನ ಮಗಳು ನಿರುಪಮಗೆ ಪತ್ರ ಬರೆಯ ಬೇಕೆಂದು ಕೂತಿದ್ದೆ. ಯಾರೋ ರೆಡಿ ಮಾಡಿದ್ದ ಗ್ರೀಟಿಂಗ್ ಕಾರ್ಡ್ ತಂದು ಅದಕ್ಕೆ ಸಹಿ ಕೊಡುವುದಕ್ಕಿಂತ ನಾನೇ ಒಂದು ಕಾರ್ಡ್ ರೆಡಿ ಮಾಡಿ ಕೊಟ್ಟರೆ ಹೇಗೆ ? ಎಂದು ಯೋಚನೆ ಮಾಡಿ , ಬರೆಯಲು ಕೂತರೆ ..ಹೇಗೆ ಪ್ರಾರಂಭ ಮಾಡಬೇಕೆಂದೇ ತೋಚದಾಗಿತ್ತು! ಇಷ್ಟು ದಿನಾ ಅಪ್ಪ-ಅಮ್ಮಗೆ ಪತ್ರ ಬರೆದು ರೂಡಿಯಿದ್ದ ನನಗೆ ..ಮೊದಲ ಬಾರಿಗೆ ಪ್ರೇಮ ಪತ್ರ ಬರೆಯುವುದು ನಿಜಕ್ಕೂ ಕಬ್ಬಿಣದ ಕಡಲೆಯಂತಾಗಿತ್ತು ): … ಒಂದು, ಎರಡು …ಮೂರು..ಹತ್ತು ಬಾರಿ ಗೀಚಿ , ಪೇಪರ್ ಅನ್ನು ಕಿತ್ತಾಕಿ ರೂಮೆಲ್ಲ ಗಲೀಜಾಗಿತ್ತು! ಅಂತೂ ಇಂತೂ ತಲೆ ಕೆರೆದುಕೊಂಡು ಅರ್ಧ ದಿನ ಕುಂತು ಬರೆದ ಮೇಲೆ ಒಂದು ಕಾರ್ಡು ರೆಡಿಯಾಗಿತ್ತು! ಓ ನನ್ನ ಮಾವನ ಮಗಳೇ …ನಿರುಪಮ ನಾ ಆಗಬೇಕೆಂದಿರುವೆ ನಿನ್ನ ಪ್ರಿಯತಮ … ನಿನ್ನದೇ ನೆನಪಲ್ಲಿ, ಮಿಡಿಯುತ್ತಿದೆ ಮನ ಹಗಲಿರುಳು ಸರಿಗಮ…! ನನ್ನ ಕಾಲೇಜ್ನಲ್ಲಿ ಇರುವ ಹುಡುಗಿಯರಲ್ಲಿ ಯಾರೂ ಇಲ್ಲ ನಿನಗೆ ಸರಿಸಮ … ನೀ ನನ್ನ ಸಂಗಾತಿಯಾದರೆ , ಆಗುವುದು ನಮ್ಮ ಜೋಡಿ ಅನುಪಮ ! -ಇಂತಿ ನಿನ್ನ ಪ್ರೀತಿಯ …. ಈ ಮೇಲಿನ ಸಾಲುಗಳೊಂದಿಗೆ , ಎರಡು ಪ್ರೇಮ ಪಕ್ಷಿಗಳ ಚಿತ್ರ ಬರೆದು ಕಾರ್ಡು ರೆಡಿ ಪೋಸ್ಟ್ ಮಾಡಲೆಂದು ಡಬ್ಬಿ ಮುಂದೆ ಬಂದು ನಿಂತಾಗ ಕೈಗಳು ಕೊಂಚ ಅದುರುತ್ತಿದ್ದವು. ಸುತ್ತ ಮುತ್ತ ಯಾರಾದರು ನೋಡುತ್ತಿರುವರಾ ಎಂದು ಕಣ್ಣಾಡಿಸಿ , ಯಾರೂ ಇಲ್ಲದ್ದನ್ನು ಖಾತರಿ ಮಾಡಿಕೊಂಡು ಡಬ್ಬಿಯೊಳಗೆ ಹಾಕುವಾಗ ಕಾರ್ಡ್ ಮೇಲೆ ಹಾಗೇ ತುಟಿಯೊತ್ತಿದ್ದೆ ! ಪೋಸ್ಟ್ ಮಾಡಿಯಾದ ಮೇಲೆ ಏನು ಒಂತರ ಮನಸ್ಸಲ್ಲಿ ಭಯ, ಕಾತರ, ಚಡಪಡಿಕೆ …ಆ ದಿನವೆಲ್ಲ ಸರಿಯಾಗಿ ಊಟವೂ ಸೇರಲಿಲ್ಲ , ನಿದ್ದೆಯೂ ಸುಳಿದಿರಲಿಲ್ಲ. ಒಂದು ದಿನ ಆಯ್ತಾ , ಎರಡು , ಮೂರು ..ಹತ್ತು ದಿನವಾಯ್ತು ..ಏನು ಸುದ್ದಿ ಇಲ್ಲ .. ಏನರ ಕಾರ್ಡು ಅವಳ ಹಾಸ್ಟೆಲ್ ವಾರ್ಡನ್ ಕೈಗೆ ಸಿಕ್ಕು ಅವರೇನಾದರೂ ರಂಪ ಮಾಡಿರಬಹುದಾ ? ಅಥ್ವಾ ನಿರುಪಮ ಸಿಟ್ಟಾಗಿ ಮಾಮನ ಹತ್ತಿರ ಏನರ ಹೇಳಿರಬಹುದಾ ? ಮಾಮ ಏನರ ನಮ್ಮ ಅಮ್ಮ-ಅಪ್ಪನ ಬಳಿ ಹೇಳಿದರೆ ಏನು ಗತಿ ? ಓಹ್ ಯಾಕಾದ್ರು ಬರೆದನಪ್ಪ ಈ ಪತ್ರ …? ಅಂತ ಎಲ್ಲ ವಿಚಾರ ಸುರುಳಿಗಳು ಮನದಲ್ಲೇ ಗುಯ್ಯ್ ಅಂತಾ ತಿರುಗುತ್ತಿದ್ದರೂ…ಎಲ್ಲೋ ಒಂದು ಮೂಲೆಯಲ್ಲಿ ಅವಳು ಸಹಾ ಒಪ್ಪಿ ಪತ್ರ ಬರೆದರೂ ಬರೆಯ ಬಹುದು ಎಂದು ದಿನಾ ಪೋಸ್ಟ್ ಮ್ಯಾನ್ ಬರೋದನ್ನೇ ಬಕಪಕ್ಷಿಯಂತೆ ಕಾದು ಕೂತಿದ್ದೆ. ಈಗಿನಂತೆ ಫೇಸ್ ಬುಕ್ , ಟ್ವಿಟರ್ ,SMS, ಇಮೇಲ್ ಇದ್ದಿದ್ದರೆ ತಕ್ಷಣವೇ ಮೆಸೇಜ್ ಅವಳಿಗೆ ಹೋಯಿತೋ ಇಲ್ಲವೋ, ರೀಡ್ ಮಾಡಿದಳೋ ಇಲ್ವೋ ? ಅಂತ ಗೊತ್ತಾಗುತ್ತಿತ್ತು! ಹದಿನೈದು ದಿನಕೊಮ್ಮೆ ನೋಡಲು ಹೋಗುತ್ತಿದ್ದ ನನಗೆ ಇಪ್ಪತ್ತು ದಿನಗಳಾದರೂ ಹೋಗಲು ಏನೋ ಹಿಂಜರಿಕೆಯಾಗಿ ಹಾಗೇ ರೂಮಲ್ಲಿ ಮೈಕ್ರೋ ಪ್ರೋಸೆಸರ್ ಬುಕ್ ನಲ್ಲಿ ಕಣ್ಣಾಕಿದ್ದರೂ , ಮನದಲ್ಲಿ ಏನೋ ಬೇರೆ ಪ್ರೋಸೆಸ್ಸ್ ನಡಿತಾ ಇತ್ತು ! ಪೋಸ್ಟ್ ಅಂತಾ ಕೂಗು ಕೇಳಿ ಹೊರಗಡೆ ಬಂದಾಗ , ಪೋಸ್ಟ್ ಮ್ಯಾನ್ ” ನಾಗೇಶ …ನೋಡಪಾ ದಿನ ಕೇಳ್ತಿದ್ದೆ ಅಲ್ವಾ .. ಬಂದಿದೆ ನೋಡು ಪತ್ರ ಈ ದಿನ ನಿನಗೆ ” ಅಂತ ಹೇಳಿ ಕೊಟ್ಟು ಹೋದಾಗ , ಓಪನ್ ಮಾಡುವಾಗ ಆಗುತ್ತಿದ್ದ ಹೃದಯದ ಬಡಿತ ಪಕ್ಕದಲ್ಲಿ ನಿಂತಿದ್ದವರಿಗೂ ಕೇಳುವಂತಿತ್ತು 🙂 ಬರೆದಿದ್ದಳು ಅವಳು ಅದರಲ್ಲಿ … ಬಂದು ತಲುಪಿತು ನಿನ್ನ ಪತ್ರ .. ಅದ ಓದಿ, ಸುಳಿಯುತ್ತಿಲ್ಲ ನಿದ್ದೆ ಹತ್ರ .. ಗೊತ್ತಿಲ್ಲ..ಅದೇನು ಹಾಕಿರುವೆಯೋ ಮಾಟ ಮಂತ್ರ ಬುಕ್ ಓಪನ್ ಮಾಡಿದರೆ ಕಾಣುವುದು ನಿನ್ನದೇ ಚಿತ್ರ ..! -ನಿನ್ನವಳು ಹುರ್ರೇ ಅಂದು ಕುಣಿದಾಡಿದ್ದೆ ಅಲ್ಲೇ ಹೊರಗಡೆ ಹುಚ್ಚನಂತೆ …ಮಾರನೆ ದಿನ ಆ ಪೋಸ್ಟ್ ಮ್ಯಾನ್ಗೆ ಒಂದು ಸ್ವೀಟ್ ಬಾಕ್ಸ್ ಕೊಟ್ಟು ಥ್ಯಾಂಕ್ಸ್ ಅಂತಾ ಹೇಳಿದ್ದಾಗ ಅವ ಹಂಗೆ ಕಣ್ಣು ಮಿಟುಕಿಸಿ ನಕ್ಕಿದ್ದ ! ಹೀಗೆ ಆರಂಭವಾದ ನಮ್ಮ ಪ್ರೀತಿ …ನಾನು ಇಂಜಿನಿಯರಿಂಗ್ ಮುಗಿಸೋದರಲ್ಲಿ ಹತ್ತು ಹಲವಾರು ಪ್ರೇಮ ಪತ್ರಗಳು ಅಲ್ಲಿಂದ ಇಲ್ಲಿಗೆ , ಇಲ್ಲಿಂದ ಅಲ್ಲ್ಲಿಗೆ ರವಾನೆ ಆಗೋದು ಇರ್ಲಿ , ಪೋಸ್ಟ್ ಮ್ಯಾನ್ಗೆ ಹೆಚ್ಚು ಕೆಲಸ ಆಗಿತ್ತು ನಮ್ಮಿಂದ ! ಈಗ ಈ ಕಂಪ್ಯೂಟರ್ ಯುಗದಲ್ಲಿ … ಇಮೇಲ್ , ಫೇಸ್ ಬುಕ್ ನಂತಹ ಸಾಮಾಜಿಕ ತಾಣಗಳು ಬಂದ ಮೇಲೆ ಜನ ಹೆಚ್ಚು ಹೆಚ್ಚಾಗಿ ಬರೀ ಆನ್ ಲೈನ್ ಮೆಸೇಜಿಂಗ್,SMS , ಚಾಟ್ನಲ್ಲೆ ತಮ್ಮ ಪ್ರೇಮ ನಿವೇದನೆ , ಪ್ರೇಮ ಸಂಭಾಷಣೆ ನಡೆಸೋದಿರಲಿ , ಪ್ರೇಮಿಗಳ ದಿನಾಚರಣೆ , ಅಮ್ಮ – ಅಪ್ಪಂದಿರ ದಿನಾಚರಣೆ , ಹಬ್ಬ ಹರಿದಿನಗಳು ಏನೇ ಬರಲಿ ..ಆನ್ ಲೈನ್ ನಲ್ಲಿ ಸಿಗೋ ರೆಡಿಮೇಡ್ ಇ-ಗ್ರೀಟಿಂಗ್ ಕಾರ್ಡ್ ಅನ್ನು ಪಟ್ ಅಂತ ಕಳಿಸೋ ಪ್ರವೃತ್ತಿ ಜಾಸ್ತಿಯಾಗಿರೋದಿಂದ್ರ ಪೋಸ್ಟ್ ಮ್ಯಾನ್ಗೆ ಕೆಲಸವೇ ಕಡಿಮೆಯಾಗಿರೋದು ಕಟು ಸತ್ಯ ! ಮೊನ್ನೆ ಅಮೇರಿಕಾದಲ್ಲಿ ನ್ಯೂಸ್ ಚಾನೆಲ್ನಲ್ಲಿ ” ಸುಮಾರು ೪೦೦ ಪೋಸ್ಟ್ ಆಫೀಸ್ಗಳನ್ನೂ ಮುಚ್ಚುತ್ತಿರುವ, ಅದರಿಂದ ನೂರಾರು ಮಂದಿ ಕೆಲಸ ಕಳೆದುಕೊಳ್ಳುತ್ತಿರುವ ವಿಷಯ ” ಕೇಳಿ ಮನಸ್ಸಿಗೆ ಬೇಜಾರಾಗಿತ್ತು ! ಸ್ವತಃ ಕೈಯ್ಯಾರೆ ಪ್ರೀತಿಯಿಂದ ಪತ್ರ ಬರೆದು ಹಾಕಿದರೆ ಅದರಿಂದ ಸಿಗುವ ನಲಿವು , ಪ್ರೀತಿ , ಮಜಾ .. ಇ-ಮೀಡಿಯಾ ದಲ್ಲಿ ಕಳಿಸಿದ್ದಕ್ಕಿಂತ ಹೆಚ್ಚು ಎಂಬ ಭಾವನೆ ನನ್ನದ್ದು. ಈಗಲೂ ಸಾಧ್ಯವಾದಾಗಲೆಲ್ಲ ಮಾತೃಭೂಮಿ ಭಾರತದಲ್ಲಿರುವ ಅಪ್ಪ-ಅಮ್ಮಗೆ ಪತ್ರ ಬರೆದು ಹಾಕುತ್ತಿರುವೆ ! ನನ್ನ ಮನಕ್ಕೂ ತೃಪ್ತಿ , ಬರವಣಿಗೇನೂ ಇಂಪ್ರೂವ್ ಆಗುತ್ತೆ , ಮನೆಯವರೊಂದಿಗೆ ಪ್ರೀತಿನೂ ಜಾಸ್ತಿ ಆಗುತ್ತೆ, ಪೋಸ್ಟ್ ಮ್ಯಾನ್ಗು ಕೆಲಸ ಹೆಚ್ಚಿ ಅವರಿಗೂ ಜೀವನದಲ್ಲಿ ನೆಮ್ಮದಿ ಸಿಗುತ್ತೆ … ಅಲ್ವಾ ? ನೀವು ಹಾಗೇ ಸ್ವಲ್ಪ ರೂಡಿ ಮಾಡ್ಕೊಳ್ಳಿ ! ಮಡದಿ ನೀರು (ನಿರುಪಮ) ಬೇಸಿಗೆ ರಜ ಎಂದು ಮಗನೊಂದಿಗೆ ಊರಿಗೆ ಹೋಗಿದ್ದಾಳೆ …ಸರಿ …ಒಂದು ಪತ್ರ ಗೀಚಲು ಪ್ರಾರಂಭ ಮಾಡಬೇಕು ಈಗ …ಏನು ಬರೀ ಬೇಕು ಅಂತಾನೆ ಹೊಳಿತಿಲ್ಲ ತಲೆಗೆ ..ಸ್ವಲ್ಪ ಹೆಲ್ಪ್ ಮಾಡ್ತಿರಾ ?? ಓ ನನ್ನ ಪ್ರಿಯತಮೆ ನೀರೂ.. ನೀ ಬೇಗ ಬಂದು ನನ್ನ ಸೇರು ..! ನೀ ಇಲ್ಲದ ಜೀವನ ಬಲು ಬೋರು.. ನೀ ಬೇಗ ಬರದಿದ್ದರೆ…ಕುಡಿಯುವೆ ಬರೀ ಧಾರು !]]>

‍ಲೇಖಕರು G

July 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: