ಪ್ಯಾಸೆಂಜರ್ ರೈಲು ಹಾಗೂ ನಾನು-ಇಬ್ಬರೂ ನಿಧಾನಿ

ಅಕ್ಷತಾ ಕೆ

ದಣಪೆಯಾಚೆ…
 
‘ಎಂಥ ಎಂಥ ಲೋಕಾನೋ, ಎಂಥ ಎಂಥ ಲೋಕಾನೋ’ ಎಂಬ ಇತ್ತೀಚಿನ ಯಾವುದೋ ಸಿನಿಮಾದ ಹಾಡು ಎಲ್ಲೆಂದರಲ್ಲಿ ಕಿವಿಗೆ ಬೀಳುವಾಗ ನನಗೆ ರೈಲಿನಲ್ಲಿ ನಾನು ಕಂಡ ವೈವಿಧ್ಯಮಯ ಲೋಕಗಳ ನೆನಪಾಗುತ್ತದೆ.
ಇತ್ತೀಚಿನ ಒಂದೆರಡು ವರ್ಷಗಳಲ್ಲಿ ನನ್ನ ಜೀವ ಮತ್ತು ಭಾವದ ಜೊತೆ ಬೆಸೆದ ಹಲವು ತಂತುಗಳು ರಾಜಧಾನಿಯಲ್ಲೆ ಬೀಡು ಬಿಟ್ಟಿರುವುದರಿಂದ ನಾನು ಎರಡು ತಿಂಗಳಿಗೊಮ್ಮೆಯಾದರೂ ಬೆಂಗಳೂರಿಗೆ ಭೇಟಿ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಮೊದ ಮೊದಲು ಬಸ್ಸೋ, ಟ್ರೈನೋ ಎಂದೆಲ್ಲ ಮೊದಲೇ ಯೋಚಿಸಿ ರಿಸರ್ವೇಶನ್ ಮಾಡಿಸಿ ಪ್ರಯಾಣದ ದಿನ ಹತ್ತಿರ ಬಂದಂತೆ ಈಗ ಹೋಗಲೋ, ಮತ್ತೊಮ್ಮೆ ಹೋಗಲೋ ಎಂದೆಲ್ಲ ಆತಂಕ, ಸಂಧಿಗ್ದತೆಗೆ ಬೀಳುತಿದ್ದ ನನಗೆ ಪ್ಯಾಸೆಂಜರ್ ಟ್ರೈನ್ಗಳಲ್ಲಿ ಓಡಾಡುವುದು ಅಭ್ಯಾಸವಾದ ಮೇಲೆ ಈ ಎಲ್ಲ ಗೊಂದಲಗಳು ತಪ್ಪಿವೆ.
ಕವಿತೆಯೊಂದು ಉಸುರುವಂತೆ ` ಹೀಗೆ ಹೊರಟುಬಿಡುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ ಯಾವುದಾದರೇನು ಬಸ್ಸು ಎಂದು ಹೊರಟೇಬಿಟ್ಟೆ’ ಎನ್ನುತ್ತದೆ. ಹಾಗೆ ನಾನು ಕೂಡಾ ಪ್ಯಾಸೆಂಜರ್ ಟ್ರೈನ್ನಲ್ಲಿ ಸೀಟಂತೂ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಬೆಂಗಳೂರಿನಲ್ಲಿರುವ ಯಾವುದೋ ಒಂದು ತಂತು ತುಸು ಎಳೆದರೂ ಸಾಕು ಹೊರಟೇಬಿಡುತ್ತೇನೆ.
train_boy
ಎಕ್ಸ್ಪ್ರೆಸ್ ಟ್ರೈನಿನಲ್ಲಿ ಕಿಟಕಿ ಪಕ್ಕ ಸೀಟು ಸಿಕ್ಕರೆ ಕಣ್ಣನ್ನು ಹೊರಕ್ಕೆ ನೆಡುವುದು, ರಾತ್ರಿಯ ಟ್ರೈನಾದರೆ ತಮ್ಮ ಪಾಡಿಗೆ ತಾವು ಮಲಗಿಕೊಳ್ಳುವುದು, ಪಕ್ಕದವನು ಗೊರಕೆಯ ಅಸಾಮಿಯಾಗಿದ್ದರೆ ಅವನಿಗೆ ಹಿಡಿಶಾಪ ಹಾಕುವುದು, ಲಗೇಜುಗಳು ಜಾಸ್ತಿಯಿದ್ದರೆ, ಅಮೂಲ್ಯವಾದ ವಸ್ತುವೇನಾದರೂ ಬಳಿ ಇದ್ದರೆ ಒಂದು ರೀತಿಯ ಭಯದಲ್ಲೆ ಅಲರ್ಟ್ ಆಗಿದ್ದು ನಿದ್ದೆ ಮಾಡದೇ ಅದನ್ನು ಕಾಯುವುದು ಈ ರೀತಿಯ ದೃಶ್ಯಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಆದರೆ ಪ್ಯಾಸೆಂಜರ್ ಟ್ರೈನಿನ ಪ್ರಯಾಣ ಎಲ್ಲವಕ್ಕಿಂತ ವಿಭಿನ್ನ.
ಚಲಿಸುತ್ತಿದೆಯೋ ಇಲ್ಲವೋ ಎಂದು ಒಳಗೆ ಕೂತವರಿಗೆ ಹಲವು ಬಾರಿ ಗೊಂದಲ ಹುಟ್ಟಿಸುವಷ್ಟು ನಿಧಾನಕ್ಕೆ ಚಲಿಸುವ, ಗಳಿಗೆಗೊಮ್ಮೆ ಕ್ರಾಸಿಂಗ್ ಕಾರಣಕ್ಕೆ ಎಕ್ಸ್ಪ್ರೆಸ್ಗಳಿಗೆಲ್ಲ ದಾರಿ ಮಾಡಿಕೊಟ್ಟು ನಿಂತೆ ಬಿಡುವ ರೈಲಿದು. ಇದಕ್ಕೆ ಬರುವ ಹೆಚ್ಚಿನ ಪ್ರಯಾಣಿಕರು ಕಾಲದ ಹಂಗಿಗೆ ಒಳಪಟ್ಟವರಲ್ಲ, ಶಿವಮೊಗ್ಗೆಯಿಂದ ಬೆಳಗಿನ ಜಾವ 5.15ಕ್ಕೆ ಹೊರಡುವ ರೈಲು ಮದ್ಯಾಹ್ನ 11.30ಕ್ಕೆ ಬೆಂಗಳೂರು ತಲುಪುತ್ತದೆಯಾದರೂ, 12.30ಕ್ಕೆ ತಲುಪಿದರೂ ಏನೀಗ ಎನ್ನುವ ಜಾಯಮಾನದ ಪ್ರಯಾಣಿಕರೇ ಹೆಚ್ಚು. ಆ ದೀರ್ಘ ಸಮಯದ ತನಕದ ಮಾತಾಡದೇ ಗುಮ್ಸುಮ್ ಆಗಿರುವುದಾದರೂ ಹೇಗೆ ಹೇಳಿ?
ಅದು ಎಕ್ಸ್ ಪ್ರೆಸ್ ಟ್ರೈನಿನ ಹಾಗೆ ಯಾರಿಗೆ ಯಾರೂ ಬೆನ್ನು ಹಾಕಿ ಕೂರುವುದಿಲ್ಲ, ಬಸ್ಸಿನ ಹಾಗೆ ಪ್ರಯಾಣ ಆಯಾಸ ತರುವುದಿಲ್ಲ, ರಾತ್ರಿ ಟ್ರೈನಿನ ಹಾಗೆ ಮಲಗುವ ವ್ಯವಸ್ಥೆಯು ಇಲ್ಲ. ಎಲ್ಲ ಎದುರು ಬದುರು ಸೀಟುಗಳು ಒಂದೊಂದು ಸೀಟಿನಲ್ಲೂ ನಾಲ್ಕು ಜನ ಕೂರುವ ವ್ಯವಸ್ಥೆ ಇದ್ದರೂ ಕನಿಷ್ಟ ಐದಾರು ಜನರಂತೂ ಕೂತೆ ಇರುತ್ತಾರೆ. ಆರು+ಆರು ಜನ ಎದುರು ಬದರು ಕೂತು ಮೌನವಾಗಿದ್ದರೆ ಸರ್ವಜನಾಂಗದ ಶಾಂತಿಯ ತೋಟ ಭಾರತದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತಿತ್ತೆ? ಆದ್ದರಿಂದ ಪರಸ್ಪರ ಮಾತುಕಥೆಯಲ್ಲಿ ತೊಡಗುತ್ತಾರೆ. ಮಾತು ಕಥೆಯಾಗಿ, ಹಾಡಾಗಿ ಹರಿಯುತ್ತದೆ. ಸಂಕಷ್ಟ ಕೇಳಿದಾಗೊಮ್ಮೆ ಛೆ ಎಂಬ ಉದ್ಗಾರ, ಸಂತೋಷದ ವಿಷಯ ಕೇಳಿದಾಗ ಕುಲುಕುಲು ನಗು ಎಲ್ಲ ಭೋಗಿಗಳಲ್ಲೂ ಅನುರಣಿಸುತ್ತದೆ.
ತಾಯಿಯ ಮಡಿಲಲ್ಲಿರುವ ಪುಟ್ಟ ಮಗು ರೈಲು ಪ್ರಯಾಣದ ಉದ್ದಕ್ಕೂ ಪಕ್ಕದ, ಎದುರಿನ ಸೀಟಿನಲ್ಲಿ ಕೂತ ಹಲವರ ಮಡಿಲೇರಿ ಮತ್ತೆ ಮರಳಿ ತಾಯಿಯ ಮಡಿಲಿಗೆ ಬರುತ್ತದೆ. ಸ್ವಲ್ಪ ಹೊತ್ತು ತಾಯಿಗೂ ವಿರಾಮ ಕೊಡಬೇಕೆನ್ನುವ ದೊಡ್ಡ ಮನದ ಜೀವಗಳು ಪ್ಯಾಸೆಂಜರ್ ರೈಲಿನಲ್ಲಲ್ಲದೆ ಇನ್ನೆಲ್ಲಿ ಕಾಣಲು ಸಾಧ್ಯ? ಪ್ಯಾಸೆಂಜರ್ ರೈಲಿನ ಮಹಿಳಾ ಭೋಗಿಯ ಲೋಕವಂತೂ ನನಗೆ `ಕಿರುಗೂರಿನ ಗಯ್ಯಾಳಿಗಳನ್ನೆ’ ನೆನಪಿಗೆ ತರುತ್ತದೆ. ಎರಡು ಜಡೆ ಸೇರುವುದಿಲ್ಲ ಎಂಬ ಪಭೃತಿಗಳು ಒಮ್ಮೆ ಈ ಭೋಗಿಯನ್ನು ಟಿಕೇಟ್ ಕಲೆಕ್ಟರ್ ನ ಮಾರುವೇಷದಲ್ಲಾದರೂ ಬಂದು ನೋಡಿ ಹೋಗಬೇಕು.
ಒಮ್ಮೆ ಒಬ್ಬ ತಾಯಿ ಪೂರ್ತಿ ಟಿಕೇಟ್ ತೆಗೆದುಕೊಳ್ಳಬೇಕಾದ ಮಗನಿಗೆ ಅರ್ಧ ಟಿಕೇಟ್ ಖರೀದಿ ಮಾಡಿದ್ದಳು, ಟಿಕೇಟ್ ಕಲೆಕ್ಟರ್ ಬಂದವನೇ ಅರ್ಧ ಟಿಕೇಟ್ ನೋಡಿ ಯಾವ ತರಗತಿಯಲ್ಲಿ ಓದುತ್ತೀಯ ಎಂದು ಕೇಳಿದ, ತಾಯಿ ವಯಸ್ಸು ಸುಳ್ಳು ಹೇಳು ಎಂದು ಮಗನಿಗೆ ಹೇಳಿಕೊಟ್ಟಿದ್ದಳು, ತರಗತಿಯನ್ನಲ್ಲ, ಅದಕ್ಕೆ ಹುಡುಗ ಬಹು ಉತ್ಸಾಹದಿಂದ ಎಂಟನೇ ತರಗತಿ ಎಂದ. ಕಲೆಕ್ಟರ್ ಪೂರ್ತಿ ಟಿಕೇಟ್ ಮಾಡಿಸುವಲ್ಲಿ ಅರ್ಧ ಟಿಕೇಟ್ ಮಾಡಿಸಿದ್ದೀರಾ 350 ರೂಪಾಯಿ ದಂಡ ಕಟ್ಟಿ ಎಂದು ಕೂತ. ಆ ಹೆಂಗಸು ದುಡ್ಡಿಲ್ಲ ಕಣಣ್ಣ ಅಂದ್ಲು. ಅದೆಲ್ಲ ನಂಗೊತ್ತಿಲ್ಲ, ತಿಪಟೂರಲ್ಲಿ ಇಳಿದುಕೊಂಡು ಟಿಕೇಟ್ ತಗಂಬನ್ನಿ ಅಂದ, ಅಣ್ಣಾ ಅಲ್ಲಿ ಇಳಿದು ಟಿಕೇಟ್ ತಗಳ್ಳೋ ತನಕ ಈ ರೈಲು ಹೊರಟುಬಿಡತ್ತೆ. ಇದು ಬಿಟ್ಟರೆ ರೈಲಿಲ್ಲ ಅಂದ್ಲು. ಅಲ್ಲಮ್ಮ ಬಸ್ಸಿಗಿಂತ ಅರ್ಧದಷ್ಟು ರೇಟು ಕಡಿಮೆ ಆದ್ರೂ ಹೀಗೆ ಮಾಡ್ತೀರಾ ಅಂದ್ರೆ ಹೇಗೆ? ಬಸ್ಸಿಗೆ ಅವನು ಕೇಳಿದಷ್ಟು ಕೊಟ್ಟು ಹೋಗಲ್ವಾ? ಟಿಕೇಟ್ ತಗೊಳ್ಳಿ ಇಲ್ಲಾ ಅಂದ್ರೆ ಪಕ್ಕದ ಸ್ಟೇಷನ್ನಲ್ಲಿ ಇಳ್ಕಂಡು ಒಯ್ತಾ ಇರಬೇಕು ಎಂದು ಫರ್ಮಾನು ಹೊರಡಿಸಿದ.
ಅಣ್ಣಾ ನೀನೆ ಈ ದುಡ್ಡು ತಗೋ ನನ್ನ ಕೈಲಿರೋದೆ ಇಷ್ಟು ಎಂದು ಐವತ್ತರ ಒದ್ದೆ ಮುದ್ದೆ ನೋಟನ್ನು ಕೊಡಲು ಹೋದಳು. ಏನಮ್ಮ ನಂಗೆ ಲಂಚ ಕೊಡಕ್ಕೆ ಬರ್ತೀಯಾ ಅದೆಲ್ಲ ನನ್ನ ಹತ್ರ ನಡೆಯಲ್ಲ ಬಿಟ್ಬಿಡು ಎಂದು ಹೇಳಿ ನಾನೆಷ್ಟು ಸ್ಟ್ರಿಕ್ಟ್ ನೋಡಿ ಎಂದು ಅಕ್ಕಪಕ್ಕದ ಹೆಂಗಸರತ್ತ ನೋಡಿದ. ಇಷ್ಟೊತ್ತು ಆ ಹೆಂಗಸಿನ ಬಗ್ಗೆ ನಿಜವಾಗಿಯು ಕರುಣೆ ಉಕ್ಕಿದ್ದರೂ ಏನು ಮಾಡಬೇಕೆಂದು ತೋಚದೆ ಕೂತಿದ್ದ ಹೆಂಗಸರೆಲ್ಲ ಕಲೆಕ್ಟರ್ ತಮ್ಮತ್ತ ಒಂದು ನಗೆ ಬೀರಿದ್ದೆ ಬೀರಿದ್ದು, ಇದೇ ಸಂದರ್ಭಕ್ಕೆ ಕಾದಿದ್ದವರಂತೆ ಅಯ್ಯೋ ಬಿಡಪ್ಪಾ ಏನು ಮಾಡಕ್ಕಾಯ್ತದೆ, ಏನೋ ನಡೆದು ಬಿಡ್ತು, ದೊಡ್ಡಮನಸು ಮಾಡು ಎಂದು ಒಬ್ಬರು ದೈರ್ಯ ಮಾಡಿ ಹೇಳಿದ್ದೆ ಸೈ ಎಲ್ಲ ಹೆಂಗಸರು ಹೌದು ಹೌದು ಎಂದು ಧ್ವನಿ ಎತ್ತಿಯೇ ಬಿಟ್ಟರು. ಅದರ ನಡುವೆಯೇ ಯಾರೋ ಮತ್ತೊಬ್ಬಾಕೆ` ರೈಲಿನ ಚಾರ್ಜು ಇಸ್ಟು ಕಡಿಮೆ ಇದೆ. ಬಸ್ಸಿಗೋದ್ರೆ ಡಬಲ್ ಖರ್ಚಾಯ್ತದೆ, ಹಂಗೆಲ್ಲ ಮೋಸ ಮಾಡಬಾರದು ಕಣಮ್ಮ ‘ಎಂದು ಆ ಹೆಂಗಸಿಗೆ ಹೇಳುತಿದ್ದದ್ದನ್ನು ಕೇಳಿದ ಕಲೆಕ್ಟರ್ ತನಗೊಬ್ಬ ಸಪೋರ್ಟರ್ ಸಿಕ್ಕಿದಳು ಎಂದು ಬಗೆದು ಅದೇ ಮತ್ತೆ ಎಂದು ಧ್ವನಿ ತೆಗೆದಿದ್ದನೊ ಇಲ್ಲವೋ ಅಷ್ಟರಲ್ಲೆ `ಏನೋ ತಪ್ಪಾಯ್ತು ಯಾರು ಮಾಡದಿದ್ದೇನು ನೀನು ಮಾಡ್ಲಿಲ್ಲ. ಇನ್ನು ಮುಂದೆ ಹಿಂಗೆ ಮಾಡ್ಬೇಡ ಸಾಹೇಬ್ರು ಮಾಫಿ ಮಾಡ್ತಾವರೆ ಬಿಡು’ ಎಂದು ಕಲೆಕ್ಟರ್ ಪರವಾಗಿ ಅವಳೇ ಘೋಷಿಸಿದಳು. ಅವನು ಪೂರ್ತಿ ಕಕ್ಕಾವಿಕ್ಕಿಯಾದ.
ಮತ್ತೊಬ್ಬಾಕೆ ತಾನೂ ಒಮ್ಮೆ ಸರತಿಯಲ್ಲಿ ನಿಂತು ಟಿಕೇಟ್ ತೆಗೆದುಕೊಳ್ಳಲು ಸಾಧ್ಯವಾಗದೆ ಹಾಗೆ ರೈಲೇರಿದ್ದನ್ನು ಆಗ ಟಿಕೇಟ್ ಕಲೆಕ್ಟರ್ ದಂಡ ಹಾಕಿದ್ದನ್ನು, ತನ್ನ ಬಳಿ ಟಿಕೇಟ್ಗಾಗುವಷ್ಟು ದುಡ್ಡು ಮಾತ್ರ ಇದ್ದುದನ್ನು, ಅದನ್ನು ನೋಡಿ ಅವನು ದಂಡ ಹಾಕದೆ ಬರಿಯ ಟಿಕೇಟ್ನ ದುಡ್ಡನ್ನು ಮಾತ್ರ ತೆಗೆದುಕೊಂಡು ಎಚ್ಚರಿಕೆ ಕೊಟ್ಟು ಕಳಿಸಿದ್ದನ್ನು ಚಿತ್ರವತ್ತಾಗಿ ಬಿಡಿಸಿ ಬಿಡಿಸಿ ಹೇಳತೊಡಗಿದಳು ಹಾಗೆ ತನ್ನ ಮಾನ ಕಾಯ್ದ ಆ ಕಲೆಕ್ಟರ್ನ್ನು ದೇವರು ಚೆಂದಾಗಿ ಇಟ್ಟಿರ್ತಾನೆ ಎನ್ನುವ ವಿಶ್ವಾಸವನ್ನು ಮತ್ತೆ ಮತ್ತೆ ಪ್ರಕಟಿಸತೊಡಗಿದಳು. ಇದನ್ನೆಲ್ಲ ಅಲ್ಲೆ ಇದ್ದು ಗಮನಿಸುತ್ತಾ ಗ್ರಹಿಸುತಿದ್ದ ಕಲೆಕ್ಟರ್ ತನ್ನ ಕರುಣೆಯನ್ನು ನಿರೀಕ್ಷಿಸುತ್ತಿರುವ ಈ ಹೆಂಗಸರ ವಿರುದ್ದ ನಾನು ಇನ್ನಷ್ಟು ಸ್ಟ್ರಿಕ್ಟ್ ಆದರೆ ಅವರೆಲ್ಲರು ಸೇರಿಕೊಂಡು ತನ್ನ ಮೇಲೆ ದಾಳಿ ಮಾಡಿದರೂ ಆಶ್ಚರ್ಯವೆ ಇಲ್ಲ ಎಂಬುದನ್ನು ಅರಿತುಕೊಂಡು, ಹೋಗ್ಲಿ ಇನ್ನೊಂದು ಸರ್ತಿ ಸರಿಯಾಗಿ ಟಿಕೇಟ್ ತಗಂಡು ರೈಲು ಹತ್ತಿ, ಈ ಸರ್ತಿ ಬಿಟ್ಟಿದ್ದೀನಿ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ. ಆ ಕ್ಷಣವಂತೂ ಹೆಂಗಸರ ಕಂಗಳಲ್ಲಿ ಅವನೇ ಪರಮ ದಯಾಳು ಏಸು ಕ್ರಿಸ್ತನ ತಮ್ಮ.
ಒಬ್ಬ ಹೆಣ್ಣುಮಗಳು ಅರಸೀಕೆರೆಯ ತವರು ಮನೆಯಿಂದ ತುಮಕೂರಿನ ಗಂಡನ ಮನೆಗೆ ಬಾಣಂತನ ಮುಗಿಸಿಕೊಂಡು ತನ್ನ ತಾಯಿ ಮತ್ತು ಪುಟ್ಟ ಕೂಸಿನೊಂದಿಗೆ ಹೋಗ್ತಾ ಇದ್ದಳು. ಮುದ್ದಾದ ಆ ಕೂಸು ಭೋಗಿಯ ಎಲ್ಲರ ಗಮನ ಸೆಳೆದಿತ್ತು. ಅಕ್ಕಪಕ್ಕದವರ ಬಳಿ ತಾಯಿ, ಮಗಳು ಮಾತುಕಥೆ ಬೆಳೆಸಿದ್ದರು. ಕನ್ನಡದ ಪ್ರಸಿದ್ಧ ಚಿತ್ರ ನಿರ್ದೇಶಕರ ಅಣ್ಣನ ಸೊಸೆಯಂತೆ ಆ ಹೆಣ್ಣುಮಗಳು, ಸಾಹಿತಿಯು ಆಗಿರುವ ಆ ಚಿತ್ರ ನಿರ್ದೇಶಕನ ಊರವರೇ ಒಬ್ಬರು ಎದುರಿನ ಸೀಟಿನಲ್ಲಿ ಕುಳಿತಿದ್ದರು. ನಮ್ಮೂರಿಗೆ ನಿಮ್ಮ ಮಾವ ತುಂಬಾ ಉಪ್ಕಾರ ಮಾಡವ್ರೆ ಕಣವ್ವ ಶಾಲೆ ಕಟ್ಟಿಸವ್ರೆ, ಆಸ್ಪತ್ರೆ ತರಿಸವ್ರೆ, ಆಟದ ಬಯಲು ಅವರೇ ಮಾಡಿಸಿಕೊಟ್ಟಿದ್ದು, ತಮ್ಮ ಹಸರಿನ ಜೊತಿಗೆ ಊರಿನ ಹೆಸರು ಸೇರಿಸ್ಕಂಡಿದ್ದಕ್ಕೂ ಸಾರ್ಥಕವಾಗೋ ಹಂಗೆ ಊರಿನ ಸೇವೆ ಮಾಡವ್ರೆ ಎಂದು ಆ ಮನುಷ್ಯ ಹೇಳಿದ್ದೆ ತಡ ಹೂಂ ಮಾಡವ್ರೆ ಮಾಡವ್ರೆ ಊರಿಗೆ ಮಾಡವ್ರೆ ಆದರೆ ಮನೆಮಂದಿಗೆ ಕಿಲುಬು ಕಾಸಿಂದು ಏನು ಮಾಡಿಲ್ಲ ಎಂದು ಆಳದ ಅಸಹನೆಯಿಂದ ನುಡಿದಳು ಆ ಹೆಣ್ಣುಮಗಳು.
ಮೊನ್ನೆ ಬೆಂಗಳೂರಿಗೆ ಹೋಗುವಾಗ ನಡೆದ ಘಟನೆಯನ್ನಂತೂ ನಾನೆಂದೂ ಮರೆಯಲಾರೆ. ಒಬ್ಬ ಹಸಿರು ಟವೆಲ್ಲಿನ ಯಜಮಾನರು ಬಾಣಾವರದಲ್ಲಿ ಹತ್ತಿ ನನ್ನ ಪಕ್ಕದಲ್ಲಿ ಕೂತಿದ್ದರು. ಅವರ ಮೊಬೈಲ್ ಹೊಡೆದುಕೊಳ್ಳುತ್ತಲೇ ಇತ್ತು ಅದರೆ ಅದು ಅವರಿಗೆ ಗೊತ್ತೆ ಆಗಿರಲಿಲ್ಲ. ನಿಮ್ಮ ಮೊಬೈಲ್ ರಿಂಗಾಗ್ತಿದೆ ಎಂದೆ. ಹೌದ್ರಾ ಎಂದು ಶರಟಿನ ಯಾವುದೋ ಮೂಲೆಯಲ್ಲಿ ಹುದುಗಿದ್ದ ಮೊಬೈಲ್ ತೆಗೆದು ಮಾತಾಡತೊಡಗಿದರು. ಅವರು ಮಾತಿಗೆ ತೊಡಗಿದ ಮೇಲೆ ನಾನ್ಯಾಕಪ್ಪ ಹೇಳಕ್ಕೋದೆ ಎಂದು ಪರಿತಪಿಸಿದೆ. ನಾವೆಲ್ಲ ಯಾವುದನ್ನೂ ಹಲ್ಕಾ ಪದಗಳೆಂದುಕೊಳ್ಳುತ್ತೇವೋ ಆ ಎಲ್ಲ ಪದಗಳನ್ನು ಬಳಸಿ ಈ ಮನುಷ್ಯ ಫೋನ್ ಮಾಡಿದವನನ್ನು ಬಯ್ಯುತಿದ್ದ.
ಆತ ಈ ಯಜಮಾನನ ಬಳಿ ಸಾಲ ಮಾಡಿ ಹೇಳಿದ ದಿನದಂದು ತೀರಿಸದೆ ಎರಡ್ಮೂರು ಸಾರಿ ಮೋಸ ಮಾಡಿದ್ದಾನೆ. ಈಗಲೂ ಸಾಲ ತೀರಿಸಲು ಮತ್ತೊಂದಿಷ್ಟು ಸಮಯ ಕೇಳಲು ಇವರ ಮನೆಗೆ ಬಂದಿದ್ದಾನೆ ಇವರು ಅಲ್ಲಿಲ್ಲ ಎಂದು ತಿಳಿದು ಅಲ್ಲಿಂದಲೇ ಫೋನ್ ಮಾಡಿದ್ದಾನೆ ಎಂಬುದು ಈ ಯಜಮಾನರ ಮಾತಿನಿಂದ ತಿಳಿಯಿತು. ಸುಮಾರು ಅರ್ಧಗಂಟೆ ಓತಪ್ರೋತವಾಗಿ ಬಯ್ದು ಕೊನೆಗೂ ಯಜಮಾನರು ಮತ್ತಷ್ಟು ಸಮಯ ಕೊಡಲು ಒಪ್ಪಿದರು ಈ ಸರ್ತಿ ಮಾತಿಗೆ ತಪ್ಪಿದರೆ ಜನರನ್ನು ಕರ್ಕಂಬಂದು ಬುರುಡೆ ಒಡಸ್ತೀನಿ ಎಂಬ ಎಚ್ಚರಿಕೆಯೊಂದಿಗೆ. ಇಷ್ಟು ಆಗಿ ರಾಜಿ ಸಂಧಾನ ನಡೆಯಿತಲ್ಲ ಸದ್ಯ ಎಂದು ಭೋಗಿಯಲ್ಲಿದ್ದವರೆಲ್ಲ ನಿಟ್ಟುಸಿರು ಬಿಡುವ ಹೊತ್ತಿಗೆ ಮಗಳ ಕೈಲಿ ಫೋನ್ ಕೊಡು ಎಂದು ಹೇಳಿದರು. ಮಗಳ ಧ್ವನಿ ಆ ಕಡೆಯಿಂದ ಕೇಳಿಸುತಿದ್ದಂತೆ ` ಅವ್ವಾ ಅವರಿಗೆ ಊಟ ಆಗಿದ್ಯಾ ಕೇಳು ಆಗಿಲ್ಲಾ ಅಂದ್ರೆ ಊಟ ಹಾಕಿ ಕಳಿಸು ಹಂಗೆ ಕಳಿಸಬೇಡ’ ಎಂದು ಇಷ್ಟು ಹೊತ್ತಿಲ್ಲದ ತಣ್ಣಗಿನ ಧ್ವನಿಯಲ್ಲಿ ಮಗಳಿಗೆ ಹೇಳಿ ಫೋನ್ ಇಟ್ಟರು. ಮನುಷ್ಯತ್ವದ ಮುಖಗಳು ಎಷ್ಟು ಬಗೆ?
ಹಾಗಂತ ಪ್ಯಾಸೆಂಜರ್ ರೈಲೇನು ಸರ್ವಜನಾಂಗದ ಶಾಂತಿಯ ನಳನಳಿಸುವ ತೋಟವಾಗೇ ಇರುತ್ತದೆಂಬುದು ನನ್ನ ಮಾತಿನ ಅರ್ಥವಲ್ಲ. ನಾನು ನನ್ನ ಗೆಳತಿಯೊಂದಿಗೆ ಒಮ್ಮೆ ಪ್ರಯಾಣ ಮಾಡುತಿದ್ದಾಗ ಎದುರಿನ ಸೀಟಿನಲ್ಲಿ ಇಬ್ಬರು ಮಹಿಳೆಯರು ಕುಳಿತಿದ್ದರು. ಅವರ ಪಕ್ಕ ಒಬ್ಬ ಬುರ್ಕಾಧಾರಿ ಹೆಂಗಸು ಬಂದು ಕೂರಲಿಕ್ಕೂ ಅವರಿಬ್ಬರ ಅಸಹನೆ ಸ್ಪೋಟಗೊಳ್ಳತೊಡಗಿತು. ಒಂದು ಹಂತದಲ್ಲಂತೂ ಆ ಇಬ್ಬರು ಸೇರಿ ಈ ಹೆಂಗಸನ್ನು ತಳ್ಳಿ ಬೀಳಿಸಲೂ ಹೋಗಿದ್ದರು.
ಅದನ್ನು ಗಮನಿಸುತಿದ್ದ ನಾನು ನನ್ನ ಗೆಳತಿ ಇಲ್ಲಿ ಬನ್ನಿ ಎಂದು ನಮ್ಮ ಸೀಟಿನಲ್ಲಿ ಜಾಗವಿಲ್ಲದಿದ್ದರೂ ಒತ್ತಿಕೂತು ಆ ಹೆಂಗಸನ್ನು ಕೂರಿಸಿಕೊಂಡು ದೂಡಿದ್ದ ಹೆಂಗಸರ ಕೆಂಗಣ್ಣಿಗೆ ಪಾತ್ರವಾದೆವು. ಆದರೆ ನಾವಿಬ್ಬರೂ ಅದನ್ನು ನಿರ್ಲಕ್ಷಿಸಿ ಬುರ್ಕಾದ ಹೆಂಗಸನ್ನು ಮಾತಾಡಿಸತೊಡಗಿದೆವು. ಮಾತಾಡುತ್ತಾ ಹೋದಂತೆ ಅಪರಿಚಿತತೆಯ ಪರದೆ ಕಳೆಯುತ್ತಾ ಹೋಯಿತು ಮುಖದ ಮೇಲಿದ್ದ ಮುಸುಕನ್ನು ಎತ್ತಿ ಆ ಹೆಂಗಸು ತಲೆಯ ಮೇಲೆ ಹಾಕಿಕೊಂಡು ತನ್ನನ್ನು ದೂಡಿದ ಹೆಂಗಸರಿಗೆ ಮುಖ ಕೊಟ್ಟು ಕೂತಳು. ಅವಳ ಮುಖದ ಮೇಲಿದ್ದ ಮಂದಸ್ಮಿತಕ್ಕೆ ಕರಗದವರು ಯಾರೂ ಇರಲಿಲ್ಲ? ಎದುರು ಕೂತಿದ್ದ ಹೆಂಗಸರು ಸಹ. ಎಂಟುಗಂಟೆಗಳ ಧೀರ್ಘ ಪ್ರಯಾಣದಲ್ಲಿ ಒಟ್ಟಿಗೆ ಕೂತ ಯಾರಿಗೂ ಯಾರ ಬಗ್ಗೆಯು ಅಸಹನೆ ಇಟ್ಟುಕೊಳ್ಳಲು ಸಾಧ್ಯವೂ ಇರಲಿಲ್ಲ. ಮತ್ತದಕ್ಕೆ ಕಾರಣವೂ ಇರಲಿಲ್ಲ. ಯಾರು ಬೇರೆ, ಯಾರು ನಮ್ಮವರು ಎಂಬೆಲ್ಲ ಪರದೆಗಳು ಕಳಚಿಬಿದ್ದು ಹೋಗಿತ್ತು. ಮಾತು, ನಗೆಯ ಕಲರವ ಎಲ್ಲರನ್ನು ಬೆಸೆದಿತ್ತು.
ಆಗಲೇ ಅನಿಸಿದ್ದು ಬೇರೆ ಜಾತಿ ಧರ್ಮ ಎಂದೆಲ್ಲ ಅಸಹನೆ ಮೂಡುವುದೆ ಅವರನ್ನು ಒಳಗೊಳ್ಳದೆ ಹೋಗುವುದರಿಂದ. ಒಡಗೂಡಿ ನಡೆದಾಗ ಎಲ್ಲರೂ ಒಂದೇ. ಮನುಷ್ಯತ್ವವನ್ನು, ಆಳದ ಅಸಹನೆಯನ್ನು, ಸಂಭ್ರಮವನ್ನು, ನಿಷ್ಕಪಟತೆಯನ್ನು, ಯಾರದೋ ನೋವಿಗೆ ಮಿಡಿವ ಮಾನವೀಯ ಹೃದಯಗಳನ್ನು ಹೀಗೆ ಹತ್ತು ಹಲವು ದೃಶ್ಯಾವಳಿಗಳನ್ನು ಅನಾವರಣಗೊಳಿಸುವ ಪ್ಯಾಸೆಂಜರ್ ರೈಲಿನಲ್ಲೆ ಪ್ರಯಾಣ ಮಾಡಲು ನಾನು ಬಯಸುತ್ತೇನೆ. ನನಗೇನೂ ಅವಸರವಿಲ್ಲ ಪ್ಯಾಸೆಂಜರ್ ರೈಲಿನಂತೆ ನಾನೂ ನಿಧಾನಿ.

‍ಲೇಖಕರು avadhi

December 3, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

3 ಪ್ರತಿಕ್ರಿಯೆಗಳು

  1. M G Harish

    ಇಂಥ ಚಿಕ್ಕ ಚಿಕ್ಕ ಘಟನೆಗಳೇ ನಮ್ಮ ಬದುಕನ್ನು ಎಂಜಾಯ್ ಮಾಡಲು ಸಹಕರಿಸುವುದು.. ಅಲ್ಲವಾ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: