ಪ್ರಕಾಶ್ ಹೆಗಡೆ ಹೆಸರೇ..ಬೇಡ…

Fullscreen capture 9252009 80103 AMನಮ್ಮೆಲ್ಲರ ಮಿತ್ರ ಪ್ರಕಾಶ ಹೆಗಡೆಯವರ ಬಹುಮುಖ ಪ್ರತಿಭೆಯನ್ನು ಕಂಡಾಗ ವಿಸ್ಮಯವಾಗುತ್ತದೆ. ತಮ್ಮ ವೃತ್ತಿಯಾದ  ಸಿವಿಲ್ ಇಂಜನಿಯರಿಂಗದಲ್ಲಿ ಕುಶಲತೆ ಹಾಗು ಪ್ರಾಮಾಣಿಕತೆಯಿಂದ ಮಿಂಚುತ್ತಿರುವ ಪ್ರಕಾಶರು, ಸುಮಾರು ಆರು ತಿಂಗಳುಗಳ ಹಿಂದೆ ಅಂತರಜಾಲದಲ್ಲಿ ತಮ್ಮದೇ ಆದ ಬ್ಲಾಗ್ ಪ್ರಾರಂಭಿಸಿದರು. ನೋಡ ನೋಡುತ್ತಿರುವಂತೆಯೇ ಈ ತಾಣವು ಕನ್ನಡದ ಅತ್ಯಂತ ಜನಪ್ರಿಯ ತಾಣಗಳಲ್ಲೊಂದಾಗಿದೆ.
ಈ ತಾಣದಲ್ಲಿ ಬರುತ್ತಿರುವ ವಿಷಯಗಳ ವೈವಿಧ್ಯತೆಯೂ ಸಹ ಅಚ್ಚರಿಗೊಳಿಸುವಂತಹದು. ಇಷ್ಟಾಗಿ  ಈ ಎಲ್ಲ ಲೇಖನಗಳ ಆಂತರ್ಯದಲ್ಲಿ ಒಂದು ಮನೋಧರ್ಮವಿದೆ. ಅದು ಪ್ರಕಾಶರ ಸ್ನೇಹಪರತೆ, ಅವರ ಜೀವನೋಲ್ಲಾಸ ಹಾಗೂ ವಿನೋದಮಯ ವ್ಯಕ್ತಿತ್ವ. ಅವರ ತಾಣದಲ್ಲಿಯ ಲೇಖನಗಳಲ್ಲಿ ಅವರ ಶಾಲಾಜೀವನದ ವೃತ್ತಾಂತಗಳಿವೆ, ಅವರ ವೃತ್ತಿಯ ಕತೆಗಳಿವೆ, ಅವರ ತರುಣಪ್ರೇಮದ ಸೆಳಕುಗಳಿವೆ, ಅವರ ಸಹಧರ್ಮಿಣಿಯ ಜೊತೆಗಿನ ರಸಿಕ ಸಾಂಗತ್ಯಗಳಿವೆ. ಈ ಎಲ್ಲ ಕತೆಗಳನ್ನು ಅವರು ಕುತೂಹಲ ಕೆರಳುವಂತೆ ನಗುನಗುತ್ತ ನಮ್ಮ ಮುಂದಿಡುತ್ತಾರೆ, ಏನನ್ನೂ ಮುಚ್ಚಿಟ್ಟುಕೊಳ್ಳದೆ, ಒಬ್ಬ ಗೆಳೆಯನು ತನ್ನ ಆಪ್ತ ಗೆಳೆಯನಿಗೆ ಹೇಳುವಂತೆ. ಹೀಗಾಗಿ ಈ ಲೇಖನಗಳಲ್ಲಿ ಬರುವ ಪಾತ್ರಗಳಾದ ನಾಗು, ಉಮಾಪತಿ, ಗಪ್ಪತಿ, ರಾಜಿ, ವಿಜಯಾ ಇವರೆಲ್ಲ ನಮಗೂ ಪ್ರೀತಿಯ ಆಪ್ತರಾಗಿ ನಮ್ಮ ಮನದಲ್ಲಿ ನಿಂತು ಬಿಡುತ್ತಾರೆ. ಅದಕ್ಕೆಂದೇ ನಾನು ಅವರನ್ನು ನಮ್ಮೆಲ್ಲರ ಮಿತ್ರ ಎಂದು ಸಂಬೋಧಿಸಿದ್ದು.
ಅಂತರಜಾಲ ತಾಣದಲ್ಲಿಯ ಈ ಲೇಖನಗಳು ಪುಸ್ತಕ ರೂಪದಲ್ಲಿ ಹೊರಬಂದು, ಕನ್ನಡ ನಾಡಿನ ಓದುಗರನ್ನು ತಣಿಸಲಿ ಎನ್ನುವದು ನಮ್ಮೆಲ್ಲರ ಅಪೇಕ್ಷೆಯಾಗಿತ್ತು. ಅದೀಗ ನನಸಾಗಿದೆ. ಪ್ರಕಾಶ ಹೆಗಡೆಯವರು ಇನ್ನೂ  ಬಹು ಕಾಲದವರೆಗೆ ನಮಗೆ ತಮ್ಮ ಸಾಹಿತ್ಯದ ರುಚಿಯನ್ನು ನೀಡಲಿ
ಎಂದು ಹಾರೈಸುತ್ತೇನೆ.
-ಸುನಾಥ
prakash hegade copyq
ನಗೆಮನೆಯ ಗುತ್ತಿಗೆದಾರ
ಮನೆ ಕಟ್ಟಿಸುವ ಎಂಜಿನಿಯರ್ಗಳ ಬಗ್ಗೆ ನನಗೆ ಮೊದಲಿನಿಂದಲೂ ತುಸು ಅನುಮಾನವೇ. ‘ಐದು ಲಕ್ಷದಲ್ಲಿ ಮುಗಿಸಬಹುದು’ ಎಂದು ಎಸ್ಟಿಮೇಟ್ ಕೊಟ್ಟು ಕೊನೆಗೆ ಹತ್ತು ಲಕ್ಷಕ್ಕೆ ಒಯ್ದು ಮುಟ್ಟಿಸುತ್ತಾರೆ. ಹದಿನೈದೂ ಆದೀತು. ಬಜೆಟ್ ಮೀರಿ, ಇದ್ದಬದ್ದ ಬ್ಯಾಲೆನ್ಸ್ ಎಲ್ಲವನ್ನೂ ಪೂತರ್ಿ ಮುಗಿಸುವಂತೆ ಮಾಡುತ್ತಾರೆ. ಈಗ ಆಗಿದ್ದೂ ಅದೇ. ಈಚೆಗಷ್ಟೆ ಪರಿಚಿತರಾದ ಪ್ರಕಾಶ ಹೆಗಡೆ ‘ಐದಾರು ಪುಟ ಓದಿ’ ಎಂದು ತಮ್ಮ ಹಸ್ತಪ್ರತಿಯ ಪ್ರಿಂಟೌಟ್ ಕೊಟ್ಟವರು, ಪೂತರ್ಿ ಓದಿ ಮುಗಿಸುವಂತೆ ಮಾಡಿದ್ದಾರೆ.
ಇದು ಅವರ ಮೊದಲ ಕೃತಿಯಂತೆ. ಫೌಂಡೇಶನ್ ಚೆನ್ನಾಗಿದೆ. ಹೊಸ ಬಗೆಯ ಹಾಸ್ಯ ಬರವಣಿಗೆಗೆ ಗಟ್ಟಿ ಅಡಿಪಾಯವನ್ನೇ ಹಾಕಿ ತೋರಿಸಿದ್ದಾರೆ. ಕಾಲೇಜು ಬದುಕಿನ ಎಲ್ಲ ಮೋಜು, ಮಜಾಕು ಇವರದ್ದೇ ಗುತ್ತಿಗೆ ಆಗಿತ್ತೆಂದು ಕಾಣುತ್ತದೆ. ಗೆಳೆಯರ ಠೋಳಿ ಕಟ್ಟಿಕೊಂಡು ಇವರು ಏನೆಲ್ಲ ಕಿತಾಪತಿ ಮಾಡಿದ್ದಾರೆಂದರೆ ನಮಗೂ ಒಬ್ಬೊಬ್ಬ ನಾಗು, ಒಬ್ಬೊಬ್ಬ ದಿವಾಕರನಂಥವರು ಗೆಳೆಯರಾಗಿ ಇರಬಾರದಿತ್ತೆ ಎನ್ನಿಸೀತು. ಕನ್ನಡ ಹಾಸ್ಯ ಸಾಹಿತ್ಯಕ್ಕೆ ಡಾಕ್ಟರ್ಗಳು, ಪೊಲೀಸರು, ಮಾಸ್ತರು, ಗು-ಮಾಸ್ತರು ಹೀಗೆ ನಾನಾ ವೃತ್ತಿಯವರು ದೊಡ್ಡ ಕೊಡುಗೆ ಕೊಟ್ಟಿದ್ದು ಗೊತ್ತಿತ್ತು. ತೀರ ಗಂಭೀರ ಲೆಕ್ಕಾಚಾರದ ಸಿವಿಲ್ ಎಂಜಿನಿಯರ್ಗಳು ಹೀಗೆಲ್ಲ ಪುಟಪುಟದಲ್ಲಿ ನಗೆ ಹೊಮ್ಮಿಸಬಹುದು ಎಂಬ ಕಲ್ಪನೆ ಇರಲಿಲ್ಲ.
‘ಒಂದು ಘನಗಂಭೀರ ಸಂಗತಿಯನ್ನು ನಿಮಗೆ ಹೇಳಿಬಿಡುತ್ತೇನೆ. ಈ ಬದುಕಿನಲ್ಲಿ ಯಾರೂ ಏನನ್ನೂ ಗಂಭೀರವಾಗಿ ಪರಿಗಣಿಸಬಾರದು’- ಹೀಗೆಂದು ಯಾರೋ ಬಟ್ಲರ್ ಎಂಬಾತ ಹೇಳಿದ್ದು ನೆನಪಿಗೆ ಬರುತ್ತದೆ. ಈ ಲೇಖಕರಿಗೆ ಬದುಕಿನ ಎಲ್ಲ ಮುಖಗಳಲ್ಲೂ ಲಘು ಹಾಸ್ಯ, ದೀರ್ಘಹಾಸ್ಯದ ಪ್ರಸಂಗಗಳೇ ಎದುರಾಗುತ್ತವೆ. ಲಕಿ.
ಇಟ್ಟಿಗೆ-ಸಿಮೆಂಟು ಎಂಬ ಒರಟು ಹೆಸರಿನ ಬ್ಲಾಗ್ ಆರಂಭಿಸಿ ಆ ಮೂಲಕ ನವಿರಾದ ಹಾಸ್ಯಮಂಜರಿಯನ್ನು ಹೆಣೆಯುತ್ತ ಬಂದ ಇವರು ಮೂಲತಃ ಟಾಯ್ಲೆಟ್ಟು, ಬಾಥ್ರೂಮು ಮುಂತಾದ ಹಿಂಬ್ಲಾಗಿನ ಮೂಲಕ ಕನ್ನಡ ಹಾಸ್ಯ ಸಾಹಿತ್ಯಲೋಕವನ್ನು ಪ್ರವೇಶಿಸಿದರೂ ಅಲ್ಲಿ ಅಗತ್ಯ ಬೇಕಾಗಿದ್ದ ಒಂದಿಷ್ಟು ಫ್ರೆಶ್ ಸಂಚಲನವನ್ನು ಮೂಡಿಸಿದ್ದಾರೆ.
ಅಲ್ಲಿ ಹೊಸ ಪ್ರಕಾಶ ಇಣುಕಿದೆ.
ನಾಗೇಶ ಹೆಗಡೆ

‍ಲೇಖಕರು avadhi

November 14, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. armanikanth

    prakash hegade avara book odutaaa mai maretu kulitiddaagale namma bus 2 stop munde hogittu.naanu heege mai maretu avara pustakadalli mulugi hogiddaaga raatri samaya 9.55.idenu swamy ivattu istu doora bandrooo iliyalilvalla anta conductor kelidaagale naanu daari tappida vichaara gottaadaddu.nakku nakku sustaaguvantha pustaka kotta prakash avarige namaskara.

    ಪ್ರತಿಕ್ರಿಯೆ
  2. prakash hegde

    ಶುಭ ಹಾರೈಸಿ, ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ನನ್ನ ನಮನಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: