ಪ್ರಗತಿಯ ಹಂತಕೊ, ಪ್ರಲಯ ದುರಂತಕೊ…

 

ಅಕ್ಷತಾ ಕೆ

ದಣಪೆಯಾಚೆ…
 
ಈ ಜಗ ಓಡುತ್ತಿದೆ  
ಲಾಥೂರ್ನಲ್ಲಿ ಭೂಕಂಪವಾದಾಗ ಬೇರೆ ಊರುಗಳಲ್ಲಿ ಜೀವನಯಾಪನೆ ನಡೆಸುತಿದ್ದ ಲಾಥೂರಿನ ಹಲವಾರು ಜನರು ವಿಷಯ ತಿಳಿದು ಊರಿಗೆ ಬಂದಾಗ ಉರುಳಿ ಬಿದ್ದ ಮನೆಗಳಲ್ಲಿ ತಮ್ಮ ಮನೆ ಯಾವುದು, ಪಕ್ಕದವನ ಮನೆ ಯಾವುದು ಎಂಬುದನ್ನು ಗುರುತಿಸಲಾಗದೇ ಸೋತರಂತೆ. ನಮ್ಮ ಸ್ಥಿತಿಯು ಹಾಗೆ ಆಯಿತು ಉರುಳಿ ಬೀಳಿಸಿದ  ಸಾಲು ಸಾಲು ಕಟ್ಟಡಗಳ ಎದುರು, ಧೂಳು ತುಂಬಿದ ರಸ್ತೆಗಳಲ್ಲಿ ನಿಂತ ನಾವು ಗೆಳತಿಯರು ಮತ್ತೆ ಮತ್ತೆ ನೆನಪಿಸಿಕೊಂಡೆವು ಇಲ್ಲಿದ್ದದ್ದು ಏನು? ನಾವು ದಿನವೂ ಓಡಾಡುತಿದ್ದ ಜಾಗವೇ ಅದು, ಬಹಳ ಪರಿಚಿತದ ಇಕ್ಕೆಲಗಳೇ, ಗಣೇಶ ಭವನ ಹೊಟೇಲ್, ಅನನ್ಯ ಬುಕ್ ಸ್ಟಾಲ್, ರಾಯಲ್ ಮೆಡಿಕಲ್ಸ್, ಕಂಪ್ಯೂಟರ್ ಸೆಂಟರ್, ಟೆಲಿಫೋನ್ ಬೂತ್ ಇಷ್ಟೆ ಗುರುತಿಸಲು ಸಾದ್ಯವಾದ್ದು, ಇಲ್ಲೇನಿತ್ತು ಎಂಬ  ಚಿಕ್ಕ ಕುರುಹು ಇಲ್ಲದಂತೆ ಸಾಲು ಸಾಲು ಕಟ್ಟಡಗಳನ್ನು ಜೆಸಿಬಿ ಯಂತ್ರ ನೆಲಕ್ಕುರುಳಿಸಿತ್ತು. ಆ ಮರದಡಿಯಲ್ಲಿ ಕುಳಿತು ಹೂ ಮಾರುತಿದ್ದ ಆ ಯಮ್ಮ ಎಂದು ನೆನಪಿಸಿಕೊಂಡರೆ ಮರವೇ ಇರಲಿಲ್ಲ. ಅದು ಅಲ್ಲಿತ್ತು ಎಂಬುದಕ್ಕೆ ಚಿಕ್ಕದೊಂದು ಪುರಾವೆ ಸಹ. ಅಭಿವೃದ್ದಿಗೆ ತೆರುವ ಬೆಲೆ ಏನು ಸಣ್ಣದೇ.
 
ನಮ್ಮ ಶಿವಮೊಗ್ಗೆಯು ಸದ್ಯಕ್ಕೆ ಭೂಕಂಪದ ನಂತರದ ಸ್ಥಿತಿಯಲ್ಲೆ ಇದೆ. ಯಾವುದೇ ಜೀವ ಹಾನಿಯಾಗಿಲ್ಲ ಎಂಬ ಅಂಶವನ್ನು ಬಿಟ್ಟರೆ ಮತ್ತೆಲ್ಲ ಭೂಮಿ ಕಂಪಿಸಿದ ನಂತರದ ಸ್ಥಿತಿಯೇ. ರಸ್ತೆ ಅಗಲೀಕರಣಕ್ಕಾಗಿ ಇಡೀ ಬಿಎಚ್ ರಸ್ತೆಯ ಬಹುತೇಕ ಕಟ್ಟಡಗಳನ್ನು ಜೆಸಿಬಿ ಯಂತ್ರದಿಂದ ನೆಲಸಮಗೊಳಿಸಲಾಗಿದೆ.  ಯಾವುದೇ ಜೀವ ಹಾನಿಯಾಗಿಲ್ಲ ಎಂದು ಹೇಳಬಹುದು ಆದರೆ ನೂರಾರು ಜನರ ಬದುಕಿನ ಆಸರೆಯೇ ಕವಚಿ ಬಿದ್ದಿರುವಾಗ ಜೀವ ಹಾನಿಯಾಗಿಲ್ಲ ಎಂದು ನೆಮ್ಮದಿಯಾಗಿರಲು ಹೇಗೆ ಸಾದ್ಯ. ಆದರೆ ನಾನು ವಾಸಿಸುವ ಮಧ್ಯಮ ವರ್ಗದ ಬೀದಿಗಳಲ್ಲಿ, ಅದರಲ್ಲೂ ನೌಕರಿಯಲ್ಲಿರುವ ಹೆಂಗಸರು, ಮತ್ತು ನೌಕರಿದಾರರ ಪತ್ನಿಯರಲ್ಲಿ ಈ ರಸ್ತೆ ಅಗಲೀಕರಣದ ಕಾರ್ಯ ತುಂಬಾ ಹೆಮ್ಮೆಯನ್ನೆ ತಂದಿದೆ. ರಸ್ತೆ ಅಗಲ ಆದ್ಮೇಲೆ ಶಿವಮೊಗ್ಗದಲ್ಲಿ ಈಗಿರೋ ಒಂದು ಮಾಲ್ ಜೊತೆ ಮತ್ತು ಮೂರು ಮಾಲ್ ಪ್ರಾರಂಭ ಆಗತ್ತಂತೆ. ಎಲ್ಲ ಒಂದೆ ಕಡೆ ಸಿಗುತ್ತೇರಿ, ಜೊತೆಗೆ ಎರಡ್ಮೂರು ಮಾಲಿದ್ರೆ ಒಳ್ಳೇದು ಯಾಕೆಂದ್ರೆ ಅವರವರಲ್ಲಿ ಕಾಂಪಿಟೇಶನ್ ಆಗ್ಬಿಟ್ಟು ರೇಟ್ನ್ನು ಜಾಸ್ತಿ ಮಾಡಲ್ಲ. ಸೀರೆಗೊಂದು ಕಡೆ, ಅಕ್ಕಿಗೊಂದು ಕಡೆ, ಬಂಗಾರಕ್ಕೊಂದು ಕಡೆ, ಪಾತ್ರೆಗೊಂದು ಕಡೆ ಅಂತ ಅಲಿಯೋ ಪ್ರಶ್ನೆನೇ ಇರಲ್ಲ. ಒಟ್ನಲ್ಲಿ ಅಭಿವೃದ್ದಿ ಆಗ್ಬೇಕು ಬಿಡಿ ಏನು ಮಾಡಕ್ಕಾಗಲ್ಲ ಅದಕ್ಕಾಗಿ ಚಿಕ್ಕ ಪುಟ್ಟ ಲಾಸ್ಗಳನ್ನ ಸಹಿಸ್ಕೋ ಬೇಕು ಎಂಬೋದು ಅವರ ಮಾತಿನ ಓಘ.

ಇದಕ್ಕೆ ವ್ಯತಿರಿಕ್ತವಾಗಿ ರಸ್ತೆ ಅಗಲೀಕರಣಕ್ಕಾಗಿ ಉರುಳಿಸಿದ ಸಾಲು ಸಾಲು ಕಟ್ಟಡಗಳಲ್ಲಿ ಮಳಿಗೆಗಳನ್ನು ಬಾಡಿಗೆಗೆ ಪಡೆದು ಅದರಲ್ಲಿ ವ್ಯಾಪಾರ,ವ್ಯವಹಾರ ನಡೆಸುತಿದ್ದವರು, ಚಿಕ್ಕ ಪುಟ್ಟ ಶೆಡ್ ರೀತಿ ಹಾಕಿಕೊಂಡು ಅಲ್ಲಿ ವ್ಯಾಪಾರ ನಡೆಸುತಿದ್ದವರು ಅವರೆಲ್ಲರ ಬದುಕು ಬೀದಿಗೆ ಬಿದ್ದಿದೆ. ಅವರು ಯಾರೂ ಅಬಿವೃದ್ದಿಗಾಗಿ ಈ ಬೆಲೆ ತೆರುತ್ತೇವೆ ಎಂದು ಮಾತಾಡಲಾರರು. ಅವರಿಗೆ ಇದರಿಂದ ಎಂಥ ಶಾಕ್ ಆಗಿದೆ ಎಂದರೆ ಪ್ರತಿಭಟಿಸಲು ಕೂಡಾ ಅಶಕ್ಯರಾಗಿದ್ದಾರೆ. ತಮ್ಮ ವ್ಯಾಪಾರದ ವಸ್ತುಗಳನ್ನು ಜೆಸಿಬಿ ಯಂತ್ರದ ಬಾಯಿಂದ ಹೇಗೋ ಒದ್ದಾಡಿ ರಕ್ಷಿಸಿಕೊಂಡವರೀಗ ಇದೇ ಸಂದರ್ಭ ಎಂದು ಕಾದು ಕುಳಿತಿರುವ ಕಳ್ಳರ ಕೈಯಿಂದ ತಮ್ಮ ವಸ್ತುಗಳನ್ನು  ರಕ್ಷಿಸುವುದು ಹೇಗೆ ಎಂದು ತಿಳಿಯದೇ ಪರದಾಡುತಿದ್ದಾರೆ. ವ್ಯಾಪಾರಕ್ಕೆ ಆಧಾರವಾಗಿದ್ದ ಮಳಿಗೆ ನೆಲಸಮಗೊಂಡಿದೆ, ಬೇರೆ ಮಳಿಗೆಯ ವ್ಯವಸ್ಥೆ ಮಾಡೋಣ ಎಂದರೆ ಅದರ ಮಾಲೀಕರು ಇದೇ ಸಂಧರ್ಭ ಎಂದುಕೊಂಡು ಒಂದಕ್ಕೆ ನಾಲ್ಕರಷ್ಟು ಬಾಡಿಗೆ, ಅಡ್ವಾನ್ಸ್ ಎಲ್ಲ ಕೇಳುತಿದ್ದಾರೆ. ಬದುಕು ಬೀದಿಪಾಲು ಎನ್ನುತ್ತೇವೆ. ಆದರೆ ಇಂತ ಸಮಯದಲ್ಲಿ ಬೀದಿಯಲ್ಲಿ ಸಹ ಬದುಕಲು ಅವಕಾಶವಿಲ್ಲ. 
 
ನನ್ನ ಗೆಳತಿಯೊಬ್ಬಳು ಹೇಳುತಿದ್ದಳು ಅವಳ ಗಂಡ ಬಿ.ಹೆಚ್ ರಸ್ತೆಯಲ್ಲಿ  ಜೆರಾಕ್ಸ್  ಅಂಗಡಿ ಇರಿಸಿಕೊಂಡಿದ್ದಾತ. ಮೊನ್ನೆಯ ಕಾಯರ್ಾಚರಣೆಯಲ್ಲಿ ಅವನು ಬಾಡಿಗೆಗೆ ಪಡೆದಿದ್ದ ಮಳಿಗೆಯಿದ್ದ ಕಟ್ಟಡವನ್ನು ನೆಲಕ್ಕುರಿಳಿಸಲಾಗಿದೆ. ಈಗ ಕೆಲಸವಿಲ್ಲ. ಬೇರೆ ಮಳಿಗೆ ನೋಡೋಣವೆಂದರೆ ಹೆಚ್ಚು ಬಾಡಿಗೆ ಕೇಳುತಿದ್ದಾರೆ. ಕೊಡಲು ಸಾಧ್ಯವೇ ಇಲ್ಲ. ದಿನಾ ಹೋಗೋದು ಮಳಿಗೆಗಳನ್ನು ವಿಚಾರಿಸೋದು ಯಾವುದು ಸಿಗಲಿಲ್ಲ ಅಂತ ಜೋಲು ಮುಖ ಹಾಕ್ಕೊಂಡು ಮನೆಗೆ ಬರೋದು ಅಲ್ಲಾಗೋ ನಿರಾಶೆ, ಸಿಟ್ಟು ಇವನ್ನೆಲ್ಲ ನನ್ನ ಮೇಲೆ ಮಕ್ಕಳ ಮೇಲೆ ಬಯ್ದು, ಕೈ ಮಾಡಿ ತೀರಿಸ್ಕೊಳ್ಳೋದು ನನಗಂತೂ ಸಾಕಾಗಿ ಹೋಗಿದೆ. ಒಂದು  ನೆಮ್ಮದಿ ಏನು ಅಂದ್ರೆ ಹೋದ ವರ್ಷ ನಮಗೆ ಒಳ್ಳೆ ಲಾಭ ಸಿಕ್ಕಿತ್ತು ಈಗ ಊಟಕ್ಕೇನು ಕೊರತೆ ಇಲ್ಲ. ಆವತ್ತಿಂದವತ್ತು ಅನ್ನೋ ಎಷ್ಟೋ ಸಂಸಾರಗಳಿದ್ವಲ್ಲ ಅವುಗಳ ಕಥೆ ಅಂತೂ ತುಂಬಾ ಕಷ್ಟ ಅಂದ್ಲು. ನಮಗೆ ಸ್ವಲ್ಪ ನೋವಾದ್ರೆ ಬೇರೆಯವರ ನೋವು ತಿಳೀತದೆ. ಅದಲ್ಲದೆ ಮೂರಂತಸ್ತಿನ ಹವಾ ನಿಯಂತ್ರಿತ ಕಟ್ಟಡದಲ್ಲಿ ಕುಳಿತು ಆದೇಶ ಹೊರಡಿಸುವವರಿಗೆ ಇಂಥದೆಲ್ಲ ಕಣ್ಣಿಗೆ ಬೀಳುವುದಾದರೂ ಹೇಗೆ.
 
ಆದರೆ ಈಗ ಅಭಿವೃದ್ದಿಯಾಗಿ ಥರೇವಾರಿ ಮಾಲ್ಗಳು ಎದ್ದು,  ಫ್ಲೈ ಓವರ್ ನಿಮರ್ಾಣಗೊಂಡು ಸುಂಯ್ ಅಂತ ಕಾರಲ್ಲಿ, ಬೈಕ್ಲ್ಲಿ ಹೋಗುವ ಕನಸನ್ನು ಕಾಣುತಿರುವವರಿಗೆ ಮಾಲ್ಗಳಲ್ಲಿ ಎಲ್ಲ ಸಿಗಬಹುದು ಆದರೆ ಮಾಲ್ ಗಳಲ್ಲಿ ಚೌಕಾಸಿಗೆ ಎಲ್ಲಿ ಅವಕಾಶವಿದೆ ಹೇಳಿ? ಅದಕ್ಕಿಂತ ಹೆಚ್ಚಾಗಿ ಗಾಂಧಿ ಬಜಾರಿನ ಮೂಲೆ ಅಂಗಡಿಯಿದೆಯಲ್ಲ ಅಲ್ಲಿ ಸಿಗೋ ಬೇಳೆ ಕಾಳುಗಳ ಕ್ವಾಲಿಟಿ, ವೈವಿಧ್ಯತೆನೇ ಬೇರೆ, ರಸಗುಲ್ಲಾ ತಿನ್ನ ಬೇಕು ಅಂದ್ರೆ ಚೋರ್ ಬಜಾರ್ ಪಕ್ಕದ ಗಲ್ಲಿಯಲ್ಲಿ ಒಂದು ಪುಟ್ಟ ಸ್ವೀಟ್ ಸ್ಟಾಲ್ ಇದೆ ಅಲ್ಲೆ ಹೋಗಬೇಕು ನೋಡಿ, ಆ ಸಾಬರ ಅಂಗಡಿಯಲ್ಲಿ ಸಿಗೋ ಮೆಹಂದಿಯ ಗುಣ ಬೇರೆ ಯಾವುದಕ್ಕೂ ಇಲ್ಲ ನೋಡಿ, ಶಾರದಾ ಆಯಿಲ್ಸ್ನಲ್ಲಿ ಏನೇ ಕಿರಾಣಿ ಸಾಮಾನು ತಗಂಬನ್ನಿ ಅದು ಚೆನ್ನಾಗಿಲ್ಲ ಅಂತ ತಿಂಗಳ ನಂತರ ತಗಂಡು ಹೋಗಿ ವಾಪಾಸ್ ಕೊಟ್ರು ತಗೊಂತಾನೇ ಅಂತೆಲ್ಲ ವೈವಿಧ್ಯಮಯ ರುಚಿಗಳಿಗೆ ನಮ್ಮನ್ನು ತೆರೆದುಕೊಂಡಿದ್ವಲ್ಲ ಅದೇ ಮುಚ್ಚಿ ಹೋಗುತ್ತದಲ್ಲ. ಜೊತೆಗೆ ಗ್ರಾಹಕ ಮತ್ತು ವ್ಯಾಪಾರಿಯ ನಡುವಿನ ಸಂಬಂಧವು. ಆದರೆ ಅಭಿವೃದ್ದಿಯ ಕನಸಿನಲ್ಲಿರುವವರಿಗೆ ಈ ಪುರಾಣವೆಲ್ಲ ಯಾಕೆ ಬೇಕು. ಪು.ತಿ ನರಸಿಂಹಾಚಾರ್ಯರ ಪದ್ಯವೊಂದು
 
ಗಳಿಗೆ ಗಳಿಗೆಗೂ ಹೊಸ ಹೊಸ ರೀತಿಗೆ
ಈ ಜಗವೋಡುತಿದೆ 
ಪ್ರಗತಿಯ ಹಂತಕೊ 
ಪ್ರಲಯ ದುರಂತಕೊ
ಹಳತ ನೋಡಿ ತಾ ಕಿಲ ಕಿಲ ನಗುತಲಿ 
ಓ ಜಗ ವೋಡುತಿದೆ’ ಎನ್ನುತ್ತದೆ. 
 
ಇಂದು ನಡೆಯುತ್ತಿರುವುದು ಅದೇ.

‍ಲೇಖಕರು avadhi

October 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This