‘ಪ್ರಜಾವಾಣಿ’ಯಲ್ಲಿ ಮೊದಲ ದಿನ,ಮೊದಲ ತೇದಿ….

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ.

ಕಳೆದ ಸಂಚಿಕೆಯಿಂದ

ಗೋಧೂಳಿ ಮುಹೂರ್ತ ಬಹಳ ಪ್ರಶಸ್ತವಾದ ಸಮಯ ಎನ್ನುವ ನಂಬಿಕೆ ಇದೆ. ಮೇಯಲು ಹೋದ ದನಕರುಗಳು ಮನೆಗೆ ಹಿಂದಿರುಗುವ ಸಂಜೆಯ ಸಮಯ. ೧೯೬೭ರ ನವೆಂಬರ್ ೧೭, ಅಂದು ಸಂಜೆ ಗೋಧೂಳಿ ಮುಹೂರ್ತದಲ್ಲಿ ಮನೆಗೆ ಬರುವ ಕರುವಿನಂತೆ ನಾನು `ಪ್ರಜಾವಾಣಿ’ಯುನ್ನು ಪ್ರವೇಶಿಸಿದ್ದೆ. ಹೆಬ್ಬಾಗಿಲಿನಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಎರಡನೆಯ ಹೆಜ್ಜೆಯನ್ನಿಟ್ಟಿದ್ದೆ. ಅದೊಂದು ಹೊಸ ನಡೆ.

ಸುದ್ದಿ ಸಂಪಾದಕ ಖಾದ್ರಿ ಶಾಮಣ್ಣವರ ಮುಂದೆ ಹೋಗಿ ನಿಂತೆ.

“ಏನು ಇಷ್ಟು ಬೇಗ ಬಂದಿರಿ. ನಿಮ್ಮ ಪಾಳಿ ಶುರುವಾಗುವುದು ೯ಕ್ಕೆ” ಎಂದು ಶಾಮಣ್ಣನವರು ಜಯಶೀಲ ರಾವ್, ಮುನಿಯಪ್ಪ ಹೀಗೆ ಅಲ್ಲಿದ್ದವರನ್ನು ಪರಿಚಯಿಸಿ, “ಬೇಗ ಬಂದದ್ದು ಒಳ್ಳೆಯದೇ ಆಯಿತು. ಬೆಳಗಿನಿಂದ ಬಂದಿರುವ ಸುದ್ದಿಗಳ ಮೇಲೆ ಕಣ್ಣು ಹಾಯಿಸಿ, ಇದು ಮುಖ್ಯ” ಎಂದರು. ತಮ್ಮೆದುರು ಇದ್ದ ಬೆಳಗಿನಿಂದ ಕಂಪೋಸ್ ಆಗಿದ್ದ ಗ್ಯಾಲಿಗಳನ್ನು ಕೊಟ್ಟರು. ನಾನು ಡೆಸ್ಕಿನ ಒಂದು ಮೂಲೆಯಲ್ಲಿ ಕುಳಿತು ಅವುಗಳನ್ನು ಅವಲೋಕಿಸತೊಡಗಿದೆ.

ನನ್ನ ಪಾಳಿಯ ಮುಖ್ಯ ಉಪ ಸಂಪಾದಕರು ಆರ್.ಶಾಮಣ್ಣ. ಆರ್.ಶಾಮಣ್ಣ ಕಾರ್ಯನಿರತ ಪತ್ರಕರ್ತರ ಸಂಘಟನೆಯ ನಾಯಕರಾಗಿ ಅಖಿಲ ಭಾರತ ಮಟ್ಟದಲ್ಲಿ ಪ್ರಭಾವಶಾಲಿಯಾಗಿದ್ದರು. ಯಾವಾಗಲೂ ಪತ್ರಕರ್ತರ ಕಿಸೆಗೆ ತುಸು ಭಾರ ಎನ್ನಿಸುವ ಸೂಟು ಟೈ ಧಾರಿಯಾಗಿರುತ್ತಿದ್ದರು.

ಲಂಡನ್‌ಗೆ

ಟಂಡನ್

~

ಮುರಾರ್ಜಿಗೆ

ಮೂತ್ರವೇ

ತೀರ್ಥ

ಇಂಥ ಸುದ್ದಿ ಶೀರ್ಷಿಕೆಗಳಿಂದಾಗಿ ` ಹೆಡ್‌ಲೈನ್ ಹಮ್ಮೀರ’ ಎಂದು ಖ್ಯಾತರಾಗಿದ್ದರು. ಪುಟ ವಿನ್ಯಾಸದಲ್ಲೂ ಅವರು ಅನುರೂಪತೆ/ ಸೌಂದರ್ಯ ಪ್ರಜ್ಞೆಗಳಿಗೆ ಮಾದರಿ ಎನಿಸಿಕೊಂಡಿದ್ದು ಅವರು ರೂಪಿಸಿದ ಪ್ರಥಮ ಪುಟ ವಿನ್ಯಾಸಕ್ಕೆ ಒಂದಕ್ಕೂ ಹೆಚ್ಚು ಸಲ ಕೇಂದ್ರ ವಾರ್ತಾ ಸಚಿವ ಶಾಖೆಯ ಪ್ರಶಸ್ತಿಗಳೂ ಬಂದು ಪ್ರಜಾವಾಣಿಯ ಕೊಂಬನ್ನು ಎತ್ತರಿಸಿದ್ದವು. ಈ ಆರ್ ಶಾಮಣ್ಣನವರ ಪಾಳಿಯಲ್ಲೇ   `ಪ್ರವಾ’ದಲ್ಲಿ ನನ್ನ ಮೊದಲ ದಿನದ ಕೆಲಸ ಆರಂಭ. ಶಾಮಣ್ಣ ೯ಕ್ಕೆ ಬಂದರು. ಖಾದ್ರಿಯವರು “ಶಾಮಣ್ಣ ನಿಮಗೊಬ್ಬರು ಹೊಸ ಸಹೋದ್ಯೋಗಿಯನ್ನ ಕೊಡುತ್ತಿದ್ದೇನೆ ನೋಡಿ ” ಎಂದು ನನ್ನ ಪರಿಚಯಿಸಿದರು.

ಆರ್. ಶಾಮಣ್ಣ ಕೈ ಕುಲುಕಿ ಸ್ವಾಗತಿಸಿದರು. ಹಿಂದಿನ ಪಾಳಿಯವರು ಹಸ್ತಾಂತರಿಸಿದ್ದ ಟೆಲಿಪ್ರಿಂಟರ್ ಕಾಪಿಗಳನ್ನು ನನ್ನ ಕೈಯಲ್ಲಿಟ್ಟು “ನೋಡಿ ಇದರಲ್ಲಿ ಯಾವುದಾದರೂ ಬರೆಯುವ ಸುದ್ದಿಗಳಿವೆಯಾ, ಹೇಗೆ” ಎಂದರು. ಒಂದು ಪಾಳಿಯಲ್ಲಿ ಮುಖ್ಯ ಉಪಸಂಪಾದಕರಲ್ಲದೆ ಮೂವರು ಉಪಸಂಪಾದಕರುಗಳಿರುತ್ತಿದ್ದರು. ಅಂದು ಒಬ್ಬ ಉಪಸಂಪಾದಕರಿಗೆ ವಾರದ ರಜೆ, ಮತ್ತೊಬ್ಬರು ರಜೆ ಹಾಕಿದ್ದರು. ಹೀಗಾಗಿ ಶಾಮಣ್ಣ ಮತ್ತು ನಾನು ಇಬ್ಬರೇ.

ಆಗ ಪ್ರಜಾವಾಣಿಯ ಮೂರು ಎಡಿಷನ್ ಗಳನ್ನು ಪ್ರಕಟಿಸಲಾಗುತ್ತಿತ್ತು. ಹುಬ್ಬಳ್ಳಿ, ಧಾರವಾಡ, ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಉತ್ತರ ಕನ್ನಡ ಹೀಗೆ ದೂರದ ಪ್ರದೇಶಗಳಿಗೆ ಹೋಗುವ ಡಾಕ್ ಎಡಿಷನ್ ೯ ಗಂಟೆಗೆ ಸಿದ್ಧವಾಗಿ, ೧೧ರೊಳಗೆ ಮುದ್ರಣ ಮುಗಿದು ವ್ಯಾನುಗಳು ಪೇಪರ್ ಕಟ್ಟುಗಳನ್ನ ತುಂಬಿಕೊಂಡು ಹೊರಡಬೇಕಿತ್ತು. ಈ ಡಾಕ್ ಎಡಿಷನ್‌ನ್ನು ಮಾರ್ನಿಂಗ್ ಎಡಿಷನ್ ಎಂದೂ ಕರೆಯಲಾಗುತ್ತಿತ್ತು. ಇದು ಮಧ್ಯಾಹ್ನದ ಪಾಳಿಯವರ ಹೊಣೆಯಾಗಿರುತ್ತಿತ್ತು. ಮೈಸೂರು ಎಡಿಷನ್ ಮತ್ತು ಸಿಟಿ ಎಡಿಷನ್  ರಾತ್ರಿ ಪಾಳಿಯವರ ಹೊಣೆ. ಮೈಸೂರು ಎಡಿಷನ್ ಪೇಜುಗಳನ್ನು ನಾವು ೧೦-೩೦ಕ್ಕೆ ಮುಗಿಸಿ ಮುದ್ರಣಕ್ಕೆ ಕೊಡಬೇಕಾಗಿತ್ತು.  

ಹನ್ನೆರಡರೊಳಗೆ ಮುದ್ರಣ ಮುಗಿದು ಹನ್ನೆರಡಕ್ಕೆ ಮೈಸೂರು ಎಡಿಷನ್ ಹೊತ್ತ ವಾಹನಗಳು ಹೊರಡಬೇಕಿತ್ತು. ಮಂಡ್ಯ, ಮೈಸೂರು, ಕೊಡಗು, ದಕ್ಷಣ ಕನ್ನಡ ಜಿಲ್ಲೆಗಳು ಈ ಎಡಿಷನ್ನಿನ ವ್ಯಾಪ್ತಿಯಲ್ಲಿ ಬರುತ್ತಿದ್ದವು.  ಸಿಟಿ ಎಡಿಷನನ್ನು ಲೇಟೆಸ್ಟ್ ನ್ಯೂಸ್ ಗಳೊಂದಿಗೆ ನಾವು ರಾತ್ರಿ ಎರಡಕ್ಕೆ ಮುಗಿಸಬೇಕಿತ್ತು. ಮೂರಕ್ಕೆ ಮುದ್ರಣ ಶುರುವಾಗಿ ನಾಲ್ಕು ಗಂಟೆಗೆ ವಾಹನಗಳ ಪಯಣ ಶುರುವಾಗಬೇಕಿತ್ತು. ಬೆಂಗಳೂರು ನಗರ ಮತ್ತು ಸುತ್ತಮುತ್ತಣ ಹೊಸಕೋಟೆ, ನೆಲಮಂಗಲ, ಮಾಗಡಿ ಇತ್ಯಾದಿ ಪಟ್ಟಣಗಳಲ್ಲದೆ ತುಮಕೂರು, ಕೋಲಾರ ಜಿಲ್ಲೆಗಳಿಗೂ ಸಿಟಿ ಎಡಿಷನ್ನೇ ಹೋಗುತ್ತಿತ್ತು.

ರಾತ್ರಿ  ಸುಮಾರು ೯-೩೦ರ ಸಮಯ. ಜಯಶೀಲ ರಾವ್ ಮತ್ತು ಒಬ್ಬಿಬ್ಬರು ವರದಿಗಾರರು ಹೊರತು ಉಳಿದವರೆಲ್ಲ ಮನೆಗೆ ಹೊಗಿದ್ದರು. ಶಾಮಣ್ಣ ಮೈಸೂರು ಎಡಿಷನ್ ಮಾಡಿಸಲೆಂದು ನೆಲಮಹಡಿಯಲ್ಲಿದ್ದ ಕಂಪೋಸಿಂಗ್ ವಿಭಾಗಕ್ಕೆ ಹೋಗಿದ್ದರು.

ಟ್ರಣ್..ಟ್ರಣ್…ಟ್ರಣ್…

ಟೆಲಿಫೋನ್ ಸದ್ದುಮಾಡಿತು. ಎತ್ತಿಕೊಂಡು ಹಲೋ ಎಂದಾಗ,” ಸಾರ್, ಸಂಪಾದಕರು, ಮಾತಾಡಿ” ಎಂದ ಆಪರೇಟರ್. ನನಗೆ ಜಂಘಾಬಲವೇ ಉಡುಗಿ ಹೋಯಿತು.

“ವಾಟ್ ಈಸ್ ದಿ ಲೀಡ್ ?”

-ಗುಂಡು ಹೊಡೆದಂತೆ ಬಂತು ಪ್ರಶ್ನೆ.

“ಫ್ರಂಟ್ ಪೇಜಿನಲ್ಲಿ ಲೀಡ್ ಫೊಟೊಗ್ರಾಫ್ ಯಾವುದು?”

“ಎಡಿಷನ್ ಡಿಲೇ ಆಗಿಲ್ಲ ತಾನೆ?

“ಟೆಲಿಪ್ರಿಂಟರಿನಲ್ಲಿ ಏನು ಲೇಟೆಸ್ಟ್? ಎನಿ ಅರ್ತ್ಶೇಕಿಂಗ್ ನ್ಯೂಸ್?”

ಒಂದಾದ ಮೇಲೊಂದು ಪ್ರಶ್ನೆಗಳು. ನಾನು ಎಲ್ಲದಕ್ಕು ತಡವರಿಸದೆ ಉತ್ತರಿಸಿದೆ. “ಯಾರದು?”ಕೊನೆಯಲ್ಲಿ ಕೇಳಿದರು.

“ನಾನು ರಂಗನಾಥ ರಾವ್ ಸಾರ್”

“ಗುಡ್”

ನಾನು ಮೊದಲ ಪರೀಕ್ಷೆಯಲ್ಲಿ ಪಾಸಾಗಿದ್ದೆ. ಮುಂಚಿತವಾಗಿ ಬಂದು ಸುದ್ದಿ ಸಂಪಾದಕರ ಆಣತಿಯಂತೆ ಗ್ಯಾಲಿಗಳನ್ನ, ಡಾಕ್ ಎಡಿಷನ್ ಪೇಜ್ ಪ್ರೂಫ್‌ಗಳನ್ನು ನೋಡಿದ್ದರಿಂದ ಕಷ್ಟವಾಗಲಿಲ್ಲ. ಜೊತೆಗೆ ಹಿಂದಿನ ಪಾಳಿಯ ಸೋದರ ಹೋಗುವ  ಮುನ್ನ “ರಾತ್ರಿ ಸಂಪಾದಕರು ಫೋನ್ ಮಾಡ್ತಾರೆ. ರಾಶಾ (ಆರ್ ಶಾಮಣ್ಣನನನ್ನು ನಾವು ಹೀಗೆ ಕರೆಯುತ್ತಿದ್ದೆವು) ಇಲ್ಲದಿದ್ದರೆ  ನೀನೆ ಫೋನ್ ಅಟೆಂಡ್ ಮಾಡಬೇಕಾಗುತ್ತೆ, ಹುಶಾರಾಗಿರು” ಎಂದು ಸೂಚನೆ ಕೊಟ್ಟಿದ್ದ.

ಸಂಜೆಯ ಮೀಟಿಂಗ್ ಮುಗಿಸಿಕೊಂಡು ಐದೂವರೆ ಆರಕ್ಕೆ ಟಿಎಸ್ಸಾರ್  ಆಫೀಸು ಬಿಡುತ್ತಿದ್ದರು. ರಾತ್ರಿ ಮಲಗುವ ಮುನ್ನ ಫೋನ್ ಮಾಡಿ ವಿಚಾರಿಸುವುದು ಅವರ ರೂಢಿಯಾಗಿತ್ತು. ರಾತ್ರಿ ಪಾಳಿ ಶುರವಿಗೆ ಮುಂಚೆಯೇ ಬಂದು ಬೆಳಗಿನಿಂದ ಹೋಗಿರುವ ಸುದ್ದಿಗಳು ಮತ್ತು ಮಾರ್ನಿಂಗ್ ಎಡಿಷನ್ ಲೀಡ್ ಇತ್ಯಾದಿಗಳನ್ನು ತಿಳಿದುಕೊಂಡಿದ್ದಲ್ಲಿ ಟಿಎಸ್ಸಾರ್ ಅವರ `ರಾತ್ರಿ ಕರೆ’ಯ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸುಲಭವಾಗುತ್ತಿತ್ತು. ಅವರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಿಸಿದರೆ “ಕಮ್ ಅಂಡ್ ಸೀ ಮಿ ಟುಮಾರೊ ಮಾರ್ನಿಂಗ್” ಎಂದು ಸಂಪಾದಕರು ತಾಕೀತು ಮಾಡುತ್ತಿದ್ದರು.

ಮರು ದಿನ ತಡಬಡಿಸಿದವನು  ಹೋದಾಗ, ರಾತ್ರಿ ಪಾಳಿ ಶುರುವಿಗೆ ಮುಂಚೆಯೇ ಬಂದು  ಬೆಳಗಿನಿಂದ ಆಗಿಹೋಗಿರುವ ಆಗು ಹೋಗುಗಳನ್ನು ತಿಳಿದುಕೊಂಡಿರಬೇಕೆಂದು ಒಂದಷ್ಟು ಶಿಸ್ತುಬದ್ಧ ಕೆಲಸದ ಪಾಠ ಹೇಳುತ್ತಿದ್ದರು. ಕೆಲವೊಮ್ಮೆ ಹಿಂದಿನ ದಿನ ತಾವು ಹೇಳಿದ್ದನ್ನು ಮರೆತುಬಿಟ್ಟಿರುತ್ತಿದ್ದರು, “ಏನು ಬಂದದ್ದು?” ಎಂದು ಕೇಳಿ ಕಾಫಿ ಕುಡಿಸಿ ಕಳಿಸಿಬಿಡುತ್ತಿದ್ದರು.

ರಾಶಾ ಅವರು ಮೈಸೂರು ಮುದ್ರಣ ಮುಗಿಸಿ ಮೇಲೆ ಬಂದರು. ಸಂಪಾದಕರು ಫೋನ್ ಮಾಡಿದ ವಿಷಯ ತಿಳಿಸಿದೆ. “ಸರಿ ಟೆಲಿಪ್ರಿಂಟರ್ ಕಾಪೀಸ್ ಕೊಡಿ”  ಎಂದು ರಾಶಾ  ನಾನು ಆರಿಸಿಟ್ಟಿದ್ದ ಕಾಪಿಗಳ ಮೇಲೆ ಕಣ್ಣು ಹಾಯಿಸಿ ಮೂರನ್ನು ಬರೆಯಲು ಕೊಟ್ಟರು. ಉಳಿದವನ್ನು “ನಾಳೆ ಹೋಗಬಹುದು” ಎಂದು ಟ್ರೇನಲ್ಲಿ ಇಟ್ಟರು.

“ಜಯಶೀಲ ಇನ್ನು ಮುಗೀಲಿಲ್ವ ನಿಂದು” ಕೇಳಿದರು.” ಜಯಶೀಲನ ಕಾಪಿಗೆ ಹೆಡಿಂಗ್ ಹಾಕಿ ಕಂಪೋಸಿಂಗ್‌ಗೆ ಕಳಿಸಿ. ನಿಮ್ಮದೂ  ಅಷ್ಟೇ ಕಂಪೋಸ್ ಆಗಿರಲಿ. ನಾನೀಗ ಸ್ವಲ್ಪ ಕೆಳಗೆ ಹೋಗಿರ‍್ತೇನೆ.” ಎಂದು ರಾಶಾ ಕೆಳಕ್ಕೆ ಧಾವಿಸಿದರು. ಅವರ ಪ್ರತಿನಿಧಿಯಾಗಿ ಕೋಟು ಕುರ್ಚಿಯಲ್ಲಿ ನೇತಾಡುತ್ತಿತ್ತು.

ಮಹಾತ್ಮ ಗಾಂಧಿ ರಸ್ತೆಯ ತುದಿಯಲ್ಲಿ, ಕಾವೇರಿ ಎಂಪೋರಿಯಂ  ಪಕ್ಕ ಆಗ ಗ್ರೀನ್ಸ್ ಬಾರ್ ಇತ್ತು. ಪತ್ರಕರ್ತರಲ್ಲಿ ಯತಿ ಬಾರ್ ಎಂದೇ ಪ್ರಸಿದ್ಧವಾಗಿತ್ತು. ಶಾಮಣ್ಣನವರು `ಯತಿ’ ಸೇವೆ ಸ್ವೀಕರಿಸಲು ಧಾವಿಸಿದ್ದರು. ಯತಿ ಅಂದರೆ ಯತಿರಾಜುಲು ನಾಯಿಡು. ಡಿ ಎಚ್/ಪಿ ವಿ ಪತ್ರಕರ್ತರೆಂದರೆ ಈ ಯತಿಗೆ ಬಲು ಮಮತೆ. ತೆಲುಗಿನವರು.

“ಏಮಿ ಚೇಸೇದೆ ಲಚುಮಿ, ಏಮಿ ಚೇಸೇದೆ ಲಚುಮಿ” ಎಂದೋ,   `ಗೌರಮ್ಮ ನೀ ಮಗುಡೆವರಮ್ಮ” ಎಂದೋ ಹಾಡು ಪಲುಕುತ್ತ ಪತ್ರಕರ್ತರಿಗೆ ವಿಶೇಷ ಮುತುವರ್ಜಿಯಿಂದ ಸೇವೆ ಸಲ್ಲಿಸುತ್ತಿದ್ದರು. ಅವರು ಹಾಡು ಗುನುಗಿದಂತೆ ಲಲನೆಯರು ಗ್ರಾಹಕರ ಸುತ್ತಮುತ್ತ ಸುಳಿಗಾಳಿಯಂತೆ ಚಲಿಸುತ್ತಿದ್ದರು.

ಜಯಶೀಲ ರಾವ್ ವರದಿ ಕೊಟ್ಟು ಹೋದರು. ಇಡೀ ಸಂಪಾದಕೀಯ ವಿಭಾಗದಲ್ಲಿ ನಾನು ಮತ್ತು ಅಟೆಂಡರ್ ಕೃಷ್ಣೋಜಿ  ಇಬ್ಬರೇ. ಪ್ರೂಫ್ ರೀಡಿಂಗ್ ವಿಭಾಗ ಕಂಪೋಸಿಂಗ್ ವಿಭಾಗಕ್ಕೆ ಹೊಂದಿಕೊಂಡಂತೆ ಕೆಳಗೇ ಇತ್ತು. ಏನಾದರೂ ಭಾರಿ ಸುದ್ದಿ ಬಂದೀತೇನೋ ಎಂದು ನಾನು ಪಿ.ಟಿ.ಐ ಮತ್ತು ಎ.ಎನ್.ಐ ವಾರ್ತಾ ಸಂಸ್ಥೆಗಳ ಟೆಲಿಪ್ರಿಂಟರುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕುಳಿತಿದ್ದೆ. ಆರ್.ಶಾಮಣ್ಣ ಒಂದು ಗಂಟೆ ಸುಮಾರಿಗೆ ಬಂದರು. ನಾನು ಬರೆದ ಸುದ್ದಿಗಳು ಹಾಗೂ ಜಯಶೀಲ ರಾವ್ ವರದಿ ಕಂಪೋಸ್ ಆಗಿ, ಪ್ರೋಫ್ ರೀಡಿಂಗ್ ಆಗಿ ಗ್ಯಾಲಿ ಬಂದಿತ್ತು.  ಶಾಮಣ್ಣ  ಅವುಗಳತ್ತ ಒಂದು ನೋಟ  ಬೀರಿ-

“ಸಿಟಿ ಎಡಿಷನ್ ಪೇಜುಗಳನ್ನ ಮಾಡಿಸ್ತೀರಾ?” ಎಂದು ಕೇಳಿದರು.

“ಮಾಡಿಸ್ತೀನಿ ಸಾರ್” ಎಂದೆ. ಮೊದಲ ಪುಟ, ನಗರದಲ್ಲಿ ಇಂದು ಪುಟ ಮತ್ತು ನಗರ ಸುದ್ದಿಗಳ ಪುಟ ಹೀಗೆ ಮೂರು ಪುಟಗಳನ್ನು ಮಾಡಿಸಬೇಕಿತ್ತು. ಕಂಪೋಸಿಂಗ್ ಸೆಕ್ಷನ್ನಿನಲ್ಲಿ ನಾರಾಯಣ ಅಂತ ಮೇಕಪ್ ಮ್ಯಾನ್.”ರಂಗನಾಥ ರಾಯರಿರ್ತಾರೆ ಅವರು ಹೇಳಿದ ಹಾಗೆ ಪೇಜು ಕಟ್ಟು” ಎಂದು ನಾರಾಯಣನಿಗೆ ತಿಳಿಸಿದರು. ನಾನು ಕೆಳಗೆ ಹೋದೆ. ನಾರಾಯುಣ ಮತ್ತಿಬ್ಬರು  ನನ್ನ ಕುಲಗೋತ್ರ ವಿಚಾರಿಸುತ್ತಾ ತಮ್ಮ ಕಷ್ಟಸುಖ ಹೇಳ್ಕೋತಾ ಪೇಜುಗಳನ್ನು ಮುಗಿಸಿದರು.

ಗಂಟೆ ಎರಡು ಬಾರಿಸಿತ್ತು. ಕೊನೆಯದಾಗಿ ಟೆಲಿಪ್ರಿಂಟರ್ ಮೇಲೆ ಲೇಟೆಸ್ಟ್ ಬಿಸಿಬಿಸಿ ಸುದ್ದಿ ಏನಾದರೂ ಇದೆಯ ಎಂದು ಕಣ್ಣು ಹಾಯಿಸಿ ಮನೆಗೆ ಹೊರಟೆವು. ವ್ಯಾನಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ  ಶಾಮಣ್ಣ ಅವಿನ್ಯೂ ರೋಡ್, ಬಳೇ ಪೇಟೆ ಮತ್ತು ಚಿಕ್ಕ ಪೇಟೆಗಳೂ ಸಂಧಿಸುತ್ತಿದ್ದ ಸರ್ಕಲ್‌ಗೆ ಹೋಗಲು ಡ್ರೈವರಿಗೆ ತಿಳಿಸಿದರು. ಅಲ್ಲಿ ಇಡ್ಲಿ, ದೋಸೆ, ಚಿತ್ರಾನ್ನ ಹೀಗೆ ನಮ್ಮಂಥ ರಾತ್ರಿ ಪಾಳಿಯವರ ಸೇವೆಗಾಗಿ ಸಿದ್ದವಿದ್ದ ತಿಂಡಿ ಗಾಡಿಗಳಿದ್ದವು. `ರಾಶಾ’ ನಮ್ಮೆಲ್ಲರಿಗೂ  ತಿಂಡಿ ಕೊಡಿಸಿದರು. ಹಸಿದ ಹೊಟ್ಟೆಗೆ ಹವಿಸ್ಸು ಲಭ್ಯವಾಗಿತ್ತು. ಇದು `ಪ್ರವಾ’ದಲ್ಲಿ ನನ್ನ ಮೊದಲ ರಾತ್ರಿ ಪಾಳಿಯ ಕೆಲಸದ ಪರಿ.

ರಾಶಾ ಮೈಸೂರು ಮುದ್ರಣ ಮುಗಿಸಿ `ಯತಿ’ಗೆ ಹೊರಡುವುದು ಮಾಮೂಲಾಗಿತ್ತು. ಒಂದೊಂದು ಅಲ್ಲಿಂದಲೇ ಫೋನ್ ಮಾಡಿ ಸಿಟಿ ಎಡಿಷನ್ ಮುಗಿಸಿ ಬಿಡಿ ಎಂದು ಆದೇಶ ನೀಡುತ್ತಿದ್ದರು. ನಾವು ಸಿಟಿ ಎಡಿಷನ್ ಮುಗಿಸಿ, ಅವರ ಕೋಟನ್ನು ಕೈಗೆತ್ತಿಕೊಂಡು ಕೆಳಗೆ ಬಂದು `ಯತಿ’ಯಲ್ಲಿ `ರಾಶಾ’ ಅವರನ್ನು ವ್ಯಾನಿಗೆ ಹತ್ತಿಸಿಕೊಂಡು ಮನೆಗೆ ಮುಟ್ಟಿಸಬೇಕಾಗುತ್ತಿತ್ತು.

ರಾತ್ರಿ ಪಾಳಿ ಕಳೆದು ಹಗಲಿನ ಪಾಳಿಯೂ ಮುಗಿಯಿತು. ನಾನು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನೇಮಕದ ಆಜ್ಞೆ ಬರಲೇ ಇಲ್ಲ. ಹಾಜರಾತಿ ಪುಸ್ತಕದಲ್ಲಿ ದ್ವಾರಕಾನಾಥ್ (ಸಂಪಾದಕೀಯ ವಿಭಾಗದ ಆಡಳಿತಾತ್ಮಕ ಕೆಲಸಗಳನ್ನು ನೋಡಿಕೊಳ್ಳುತ್ತಿದವರು) ಸುದ್ದಿ ಸಂಪಾದಕರ ಆಣತಿಯಂತೆ ನನ್ನ ಹೆಸರು ಬರೆದಿದ್ದರು. ನಾನು ಪ್ರತಿ ದಿನ ಸಹಿ ಮಾಡುತ್ತಿದ್ದೆ.

ತಿಂಗಳ ಕೊನೆಯಲ್ಲಿ ಅಕೌಂಟ್ಸ್ ವಿಭಾಗದವರು ಹಾಜರಾತಿ ಪುಸ್ತಕವನ್ನು ತರಿಸಿಕೊಂಡು ಪರಿಶೀಲಿಸಿ ಸಂಬಳದ ವ್ಯವಸ್ಥೆ ಮಾಡುವುದು ಅಲ್ಲಿನ ಪದ್ಧತಿ. ಕೃಷ್ಣಸ್ವಾಮಿ ರಾವ್ ಅಂತ ಚೀಫ್ ಅಕೌಟೆಂಟ್. ಅವರು ಖಾದ್ರಿಯವರಿಗೆ ಫೋನ್ ಮಾಡಿ- “ಸಾರ್,ಅಟೆಂಡೆನ್ಸ್ ರಿಜಿಸ್ಟರಿನಲ್ಲಿ  ರಂಗನಾಥ ರಾವ್ ಅಂತ ಹೊಸ ಹೆಸರು ಇದೆ. ಇವರ ನೇಮಕ ಆಗಿದೆಯೆ? ಸ್ಯಾಲರಿ ಎಷ್ಟು? ನಮಗೇನೂ ಮಾಹಿತಿ ಬಂದಿಲ್ಲ” ಎಂದು ಕೇಳಿದರಂತೆ. ಅಂದು ಬೆಳಿಗ್ಗೆ ಕೆಲಸಕ್ಕೆ ಹೋದಾಗ ಸುದ್ದಿ ಸಂಪಾದಕ ಖಾದ್ರಿ ಶಾಮಣ್ಣನವರಿಂದ ನನಗೆ ಬುಲಾವ್.

“ಏನಪ್ಪ, ಕೆಲಸಕ್ಕೆ ಒಂದು ಅರ್ಜೀನೂ ಗುಜರಾಯಿಸದೆ ಒಳಗೆ ಬಂದು ಸೇರಿಕೊಂಡು ಬಿಟ್ಟಿದೀಯಲ್ಲ. ಸಂಬಳ ಬೇಡವೇ? ಒಂದು ಅರ್ಜಿ ಬರೆದುಕೊಡು” ಎಂದು `ಸು.ಸಂ’ ತಾಕೀತು ಮಾಡಿದರು. ನಾನು ಉದ್ಯೋಗ ಕೋರಿ ಸಂಪಾದಕರಿಗೆ ಒಂದು ಅರ್ಜಿ ಬರೆದು ಖಾಶಾ ಅವರ ಕೈಯ್ಯಲ್ಲಿಟ್ಟೆ. ಅವರು ಅದನ್ನು ಟಿಎಸ್ಸಾರ್  ಬಳಿ ಒಯ್ದು ಅವರಿಂದ ಅದರ ಮೇಲೆ ಒಂದು ಶಿಫಾರಸು ಟಿಪ್ಪಣಿ ಹಾಕಿಸಿ ದ್ವಾರಕಾನಾಥ್ ಕೈಯ್ಯಲ್ಲಿ ಪ್ರಿಂಟರ್ಸ್ ಸಂಸ್ಥೆಯ  ಕಾಯದರ್ಶಿ ಶ್ರೀ ನೆಟ್ಟಕಲ್ಲಪ್ಪನವರ ಕಚೇರಿಗೆ ಕಳುಹಿಸಿದರು.

ನಂತರ ನೇಮಕಾದ ಆಜ್ಞೆ ಬಂತು. ಸಂಬಳ ೨೭೦ ರೂ. ಸಂಪಾದಕರ ಶಿಫಾರಿಸನನ್ವಯ ಆದ ಕೊನೆಯ ನೇಮಕ ನನ್ನದು. ಆನಂತರ ನಾಲ್ಕೈದು ಜನರನ್ನು ಆಡಳಿತ ವರ್ಗ ನೇರವಾಗಿ ನೇಮಕಮಾಡಿ ಕಳುಹಿಸಿತ್ತು. ಆಗ ಪರ್ಸನಲ್ ಡಿಪಾರ್ಟ್ಮೆಂಟ್ ಅಂತ ಇದ್ದಂತಿರಲಿಲ್ಲ. ಮುಂದೆ ಹೊಸ ತಲೆಮಾರಿನವರು ಅಧಿಕಾರ ವಹಿಸಿಕೊಂಡ ನಂತರ ನೇಮಕ ಇತ್ಯಾದಿಗಳಲ್ಲಿ ಶಿಸ್ತುಬದ್ಧ ಕ್ರಮ  ಶುರುವಾಯಿತು. ಅರ್ಜಿಗಳನ್ನು ಕರೆಯುವುದು, ಸಂಪಾದಕೀಯ ವಿಭಾಗ ಟೆಸ್ಟ್ ಕೊಟ್ಟು, ಮೌಲ್ಯಮಾಪನ ಮಾಡಿ ಉತ್ತರ ಪತ್ರಿಕೆಗಳನ್ನು ಕಳುಹಿಸುವುದು.

ಟೆಸ್ಟಿನಲ್ಲಿ ಪಾಸಾದವರನ್ನು ಮೌಖಿಕ ಸಂದರ್ಶನಕ್ಕೆ ಕರೆಯುವುದು ಇವೆಲ್ಲ ಕ್ರಮಬದ್ಧವಾಗಿ ಶುರುವಾಯಿತು. ಮೌಖಿಕ ಸಂದರ್ಶನದಲ್ಲಿ        ಸಂಪಾದಕರಾಗಲೀ ಸುದ್ದಿಸಂಪಾದಕರಾಗಲೀ ಇರಲು ಅವಕಾಶವಿರುತ್ತಿರಲಿಲ್ಲ. ನೇಮಕಗಳಲ್ಲಿ ಆಖೈರು ತೀರ್ಮಾನ ನಿರ್ದೇಶಕರುಗಳದೇ ಆಗಿರುತ್ತಿತ್ತು. ನಂತರದ ದಿನಗಳಲ್ಲಿ ಸಂಪಾದಕರೂ ಆಗಿದ್ದ ಮ್ಯಾನೇಜಿಂಗ್ ಡೈರೆಕ್ಟರ್ ಅವರು ಕಾರ್ಯನಿರ್ವಾಹಕ ಸಂಪಾದಕರ ಜೊತೆ ಟೆಸ್ಟಿನಲ್ಲಿ ಪಾಸಾದ ಅಭ್ಯರ್ಥಿಗಳ ಅರ್ಹತೆ ಇತ್ಯಾದಿಗಳ  ಬಗ್ಗೆ ಸಮಾಲೋಚಿಸುತ್ತಿದ್ದುದುಂಟು.

ನೇಮಕದ ಆಜ್ಞೆಯೂ ಬಂತು ಸಂಬಳದ ದಿನವೂ ಬಂತು. ಪ್ರಿಂಟರ್ಸ್(ಮೈಸೂರು) ಲಿಮಿಟೆಡ್ ಸಂಸ್ಥೆಯಲ್ಲಿ ತಿಂಗಳ ಮೊದಲ ದಿನವೇ ಸಂಬಳ. ಪ್ರಜಾವಾಣಿಯಲ್ಲಿ ಮೊದಲ ಸಂಬಳ ಪಡೆದದ್ದೂ ಒಂದು ವಿಶೇಷ ಅನುಭವವೇ. ಕಾರ್ಯದರ್ಶಿಗಳಾಗಿದ್ದ ಶ್ರೀ ಕೆ.ಎ. ನೆಟ್ಟಕಲ್ಲಪ್ಪನವರೇ ಸ್ವಹಸ್ತದಿಂದ ನೌಕರರಿಗೆ ಸಂಬಳ ಕೊಡುವುದು ಅಲ್ಲಿನ ಸಂಪ್ರದಾಯವಾಗಿತ್ತು. ನಾವು ಅವರ ಚೇಂಬರಿಗೆ ಹೋಗಿ ಸಂಬಳ ಪಡೆಯಬೇಕಿತ್ತು.

ಅಕೌಟೆಂಟ್ ಗುರುಮೂರ್ತಿಯವರು ಹೆಸರು ಹಿಡಿದು ಕರೆದಂತೆ ರಿಜಿಸ್ಟರಿನಲ್ಲಿ ಸಹಿ ಹಾಕಿ ಶ್ರೀ ನೆಟ್ಟಕಲ್ಲಪ್ಪನವರ ಮುಂದೆ ನಿಲ್ಲಬೇಕು. ಎದುರು  ನಿಂತವರನ್ನು ಆಪಾದಮಸ್ತಕ ನೋಡಿ, ಮೇಜಿನ ಮೇಲಿದ್ದ ಟ್ರೇನಿಂದ ಸಂಬಳದ ಕವರನ್ನು ತೆಗೆದು ಶ್ರೀ ನೆಟ್ಟಕಲ್ಲಪನವರು ನಮಗೆ ಕೊಡುತ್ತಿದ್ದರು. ಒಮ್ಮೊಮ್ಮೆ ಕುಶಲೋಪರಿ ವಿಚಾರಿಸುತ್ತಿದ್ದುದೂ ಉಂಟು. ಮನೆಯವರ ಬಗ್ಗೆ, ಕೆಲಸದ ಬಗ್ಗೆ. ಇದು ಸಿಬ್ಬಂದಿಯೊಂದಿಗೆ ಪ್ರಿಂಟರ್ಸ್ (ಮೈಸೂರು) ಮಾಲೀಕರು ಇಟ್ಟುಕೊಂಡಿದ್ದ ಆಪ್ತ ಸಂಬಂಧದ  ಶೈಲಿ.

ಪ್ರತಿ ವರ್ಷ ದೀಪಾವಳಿಗೆ ಮುಂಚೆ ಬೋನಸ್ ಕೊಡಲಾಗುತ್ತಿತ್ತು. ಸ್ವತ: ಗವರ‍್ನಿಂಗ್ ಡೈರೆಕ್ಟರ್ ಆಗಿದ್ದ ಶ್ರೀ ಕೆ.ಎನ್.ಗುರುಸ್ವಾಮಿಯವರೇ ಸ್ವಹಸ್ತದಿಂದ ಎಲ್ಲ ನೌಕರರಿಗೂ ಬೋನಸ್ ಕೊಡುತ್ತಿದ್ದರು. ಈ ಬೋನಸ್ ವಿತರಣೆ ಸಮಾರಂಭ ಒಂದು ಹಬ್ಬದಂತೆ ನಡೆಯತ್ತಿತ್ತು. ಲಕ್ಷ್ಮೀ ಪೂಜೆ, ಗುರುಸ್ವಾಮಿಯವರಿಂದ ಪುಟ್ಟ ಭಾಷಣ, ನಂತರ ಬೋನಸ್ ವಿತರಣೆ. ಬೋನಸ್ ಹಣವನ್ನು ಕುಟುಂಬದ ಕ್ಷೇಮಾಭಿವೃದ್ಧಿಗಾಗಿ  ಸದ್ವಿನಿಯೋಗ ಮಾಡಿ ಎಂದು ನೌಕರರಿಗೆ ಹಿತವಚನ ಹೇಳುವುದನ್ನು ಗುರುಸ್ವಾಮಿಯವರು ಮರೆಯುತ್ತಿರಲಿಲ್ಲ.

ನಾನು ಚಕಿತನಾದೆ. ಇದು ಊಳಿಗಮಾನ್ಯ ಮನೋಭಾವದ ಪಳೆಯುಳಿಕೆ `ಪ್ರದರ್ಶನವೋ’, ನಿಜವಾದ ಅಂತ:ಕರಣವೋ ಎಂದು ಗೊಂದಲವಾಯಿತು. ಆದರೆ ನೌಕರರ ಬಗೆಗಿನ ಈ ಪರಿಯ ಕುಶಲೋಪರಿಯಲ್ಲಿದ್ದ ಮಾನವೀಯತೆಯ ಸ್ಪರ್ಶವನ್ನಂತೂ ಅಲಕ್ಷಿಸುವಂತಿರಲಿಲ್ಲ.

ಮುಂದಿನ ವಾರಕ್ಕೆ

October 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This