’ಪ್ರತಿಭಾ ಎಷ್ಟು ಅದ್ಭುತವಾಗಿ ಪ್ರೇಮಿಸುತ್ತಾಳೆ ! …’ – ಭಾರತಿ ಬರೆಯುತ್ತಾರೆ

– ಭಾರತಿ ಅಯ್ಯೋ! ಆಕೆಯೋ! ಆಕೆಯ ಬರಹವೋ!! …. ಇಷ್ಟೆಲ್ಲ ಬಿಚ್ಚಿ ಬರೆಯೋ ಅಗತ್ಯವೇನಿತ್ತು? ಆಕೆಯ ಮನೆ ಕಥೆ ಬಿಡಿ, ಆಕೆ ಬರೆದಿರೋ ಪಾತ್ರಗಳ ಮನೆಯವರ ಗತಿ ಏನು ಇದನ್ನೆಲ್ಲ ಓದಿದ ಮೇಲೆ? (ಅಯ್ಯೋ! ಅದೆಂಥಾ ಕಾಳಜಿ ಈ ಜಗದ ಗಂಡಸರ ಬಗ್ಗೆ!) … ಇದೆಂಥಾ ನಾಚಿಕೆಯಿಲ್ಲದೇ ಬರೆಯೋ ರೀತಿ ! ಬದುಕನ್ನ ದೇಹದ ಮಟ್ಟಕ್ಕೆ ‘ಇಳಿಸಿದ’ ಹೆಣ್ಣಪ್ಪಾ !! …. ಪ್ರತಿಭಾ ನಂದಕುಮಾರ್ ಬರ್ದಿರೋ ಅನುದಿನದ ಅಂತರಗಂಗೆ ಬಗ್ಗೆ ಓದಿ ಎಷ್ಟೆಲ್ಲ ಪ್ರತಿಕ್ರಿಯೆಗಳು! ಇದನ್ನೋದಿದ ಗಂಡಸರಿಗೆ ಅವಳ ಬಿಡುಬೀಸುತನಕ್ಕೆ ಒಂಥರಾ ಆತಂಕ ಮಿಶ್ರಿತ ಪುಳಕ, ಅವಳ ಬದುಕಿನಲ್ಲಿ ಬರುವ ಗಂಡಸರಂತೆ ಏನೂ ಆಗದ ತಮ್ಮ ಬದುಕಿನ ಬಗ್ಗೆ ಒಂಚೂರು ಹಳಹಳಿ, ಅಯ್ಯೋ ಈ ಪುಸ್ತಕದಲ್ಲಿನ ಗಂಡು ಪಾತ್ರಗಳು ತಾವಾಗಲಿಲ್ಲವಲ್ಲಾ ಅಂತ ಒಂದಿಷ್ಟು ವ್ಯಥೆ !! ಹೆಂಗಸರಿಗೆ ನಾವ್ಯಾಕೆ ಹೀಗೆ ಬರೆಯಲಾರೆವು ಅನ್ನೋ ಹಳಹಳಿ, ಓದುವಾಗ ಮಧ್ಯೆ ಮಧ್ಯೆ ಕಣ್ಣೀರಾದದ್ದನ್ನ ಯಾರಿಗೂ ಕಾಣದ ಹಾಗೆ ಬೇಗ ಒರೆಸಿಕೊಳ್ಳೋ ತವಕ, ಎದೆಯಲ್ಲಿನ ಗುಟ್ಟುಗಳ ಜೇನು ಹುಟ್ಟಿಗೆ ಕಲ್ಲು ತಗುಲಿ ಜೇನುಗಳು ಕಚ್ಚಿಬಿಟ್ಟರೆ ಅಂತ ತಾವೇ ಹೊಗೆ ಹಾಕಿ ಜೇನು ಚದುರಿಸಿ ಬೇಗ ಬೇಗ ಜೇನುತುಪ್ಪವನ್ನ ಹಿಂಡಿ ಬಾಟಲಿಯಲ್ಲಿ ತುಂಬಿಸಿಟ್ಟು … ಹುಳ ಹೋಯ್ತಪ್ಪ, ಇನ್ನೆಲ್ಲ ಸಿಹಿ ಸಿಹಿ ಅಷ್ಟೇ ಅಂತ ಉಶ್ ಅಂತ ನಿಟ್ಟುಸಿರು ಬಿಡೋ ಆತುರ, ಅಂತರಗಂಗೆಯನ್ನ ಅಂತರಾತ್ಮದಲ್ಲಿ ಮೋಹಿಸಿದ್ದು ಯಾರಿಗೂ ತಿಳಿಯದಿರಲಿ ದೇವರೇ ಅನ್ನೋ ಬೇಡಿಕೆ … ಪ್ರತಿಭಾ ಪುಸ್ತಕವೆಂದರೆ ಬೆಚ್ಚಿ ಬೀಳಿಸುವ ಹಾಗೆ ಇರುತ್ತವೆ ಅಂತ ಎಲ್ಲರಿಗೂ ಗೊತ್ತು. ನನ್ನ ಬೆಚ್ಚಿ ಬೀಳಿಸಿದ್ದು ಆಕೆ ಪುಸ್ತಕವನ್ನ ಆಕೆಯ ಗಂಡನಿಗೆ ಅರ್ಪಣೆ ಮಾಡಿದ್ದು! ಎರಡು ಕ್ಷಣ ಕಳೆದು ನನಗೆ ನಾಚಿಕೆಯಾಯ್ತು. ನನ್ನ ಚೌಕಟ್ಟಿನಲ್ಲಿ ಬೇರೆಯದೇ ಚಿತ್ರವಿತ್ತಲ್ಲ !! ಸಂಬಂಧಗಳು ‘ಹೀಗೇ’ ಇರಲು ಸಾಧ್ಯವಿಲ್ಲ. ಅವು ಅವತ್ತು ಹಾಗಿದ್ದವು, ಮತ್ತಿಷ್ಟು ದಿನ ಕಳೆದಾಗ ಹೀಗಾಗಿದ್ದವು .. ಮತ್ತೆ ಒಂದಿಷ್ಟು ದಿನ ಕಳೆದಾಗ ಹೇಗೂ ಆಗಿರೋ ಸಾಧ್ಯತೆಗಳಿವೆ ತಾನೇ? ಏನೋ ಆಗಿದ್ದವು ಸತ್ತು ಬಿಕ್ಕು ತರಿಸಿಲ್ಲವಾ? ಸಂಬಂಧಗಳೆಂದರೆ ಹೀಗೇನೆ. ನಮಗೇ ಗೊತ್ತಿಲ್ಲದ ಹಾಗೆ ಯಾವ ಯಾವುದೋ ದಿಕ್ಕಿನಲ್ಲೆಲ್ಲ ಹರಿದು, ಕಂಡ ಕಂಡ ಕೊಳೆ ರಾಡಿಯೆಲ್ಲ ಎತ್ತಿಕೊಂಡು ಹರಿಯುವಾಗ ಯಾವುದೋ ದೊಡ್ಡ ಕಸದ ಚೂರು ಎದುರಾದ ಯಾವುದೋ ಕಲ್ಲಿಗೆ ಎಡವಿ ಅಲ್ಲೇ ಸಿಕ್ಕಿಕೊಂಡು ಬಿಡುತ್ತೆ. ಅದನ್ನ ಅಲ್ಲೇ ಬಿಟ್ಟು ಹರಿದು ಮುಂದೆ ಸಾಗಿದ ಸಂಬಂಧ ಮೊದಲಿದ್ದ ಹಾಗೆ ಇರೋದಿಲ್ಲ. ಇನ್ನು ಕೆಲವು ಸಂಬಂಧಗಳು ರಾಡಿಯನ್ನು ಬಿಡದೇ ಎಲ್ಲ ಹೊತ್ತು ಹರಿದದ್ದರಿಂದ ಕೊನೆಯಲ್ಲಿ ಎದುರಾಗೋದೊಂದು ವೃಷಭಾವತಿ ಕೆರೆ ಅಲ್ಲವಾ? ಹೀಗೆ ಅನ್ನಿಸಿದ ತಕ್ಷಣ ಕೈಲಿದ್ದ ಚೌಕಟ್ಟನ್ನ ಪಟ್ ಅಂತ ಒಡೆದು ಹಾಕಿದೆ … ಅರ್ಪಣೆಯ ಪುಟ ಕರೆಕ್ಟಾಗಿ ಫಿಟ್ ಆಯಿತು! larger than life ಚಿತ್ರಗಳು ಅದ್ಭುತವಾಗಿರುತ್ತವೆ … ಅವಳು ‘ಅವನು’ ಅಂದಿದ್ದು ಇವನಿರಬಹುದು .. ‘ಇವನು’ ಅಂದಿದ್ದು ಅವನಾ? ಅಲ್ಲಿದ್ದುದು ಅವನಾ? ಇವನಾ? ಮೊದಲಲ್ಲಿ ಕೆಟ್ಟ ಕುತೂಹಲ! ಥೂ .. ಈ ಸಾಮಾನ್ಯ ಮಟ್ಟದ ಮನುಷ್ಯರಂತೆ ಯೋಚಿಸೋದನ್ನ ನಾನು ಇನ್ನೂ ಮೀರಿಲ್ಲ ಹಾಗಿದ್ದರೆ ಅನ್ನಿಸಿತು. ಆಮೇಲೆ ಅವನು, ಇವನು, ಆನು, ತಾನು, ಅವಳು, ಇವಳು ಎಲ್ಲ ಮೀರಿ ನಿಂತು ಓದೋದಿಕ್ಕೆ ಶುರು ಮಾಡಿದೆ .. ಪುಸ್ತಕ ಹೆಚ್ಚು ಆಪ್ತವಾಗುತ್ತಾ ಹೋಯ್ತು. ಆಕೆ ಶುರುವಿನಲ್ಲೇ ಹೇಳಿದ್ದಾಳೆ ‘ಬದುಕಿನ ಸಂಘರ್ಷಗಳ ಬಗ್ಗೆ ಮುಂದೆ ಬರೀತೀನಿ. ಇದು ನನ್ನ ಪ್ರೀತಿಗಾಗಿ ಹುಡುಕಾಟದ ಕಥೆ ಮಾತ್ರ’ ಎಂದು. ಆದರೂ ಎಷ್ಟೊಂದು ಜನರ ಪ್ರತಿಕ್ರಿಯೆ ‘ಅಯ್ಯೋ ಅಲ್ಲೇನಿದೆ ಬರೀ ಆಕೆಯ ಕಳ್ಳ ಪ್ರಣಯಗಳು’ ಅನ್ನೋದು ಮಾತ್ರ! ಅಲ್ಲಿ ಇನ್ನೂ ಏನೇನೋ ಇದೆ. ಕಾಣುವ ಮನಸ್ಸು ಇರಬೇಕಷ್ಟೇ. ಗಟ್ಟಿ ಮನಸ್ಸಿನ ಹೆಣ್ಣು. ಬದುಕು ತುಂಬ ಸುಗಮ ಅಂತ ಇಲ್ಲದಾಗ ಯಾವ ಯಾವುದೋ ಕೆಲಸ ಹುಡುಕಿ ಮಾಡೋದು ಮತ್ತು ಬದುಕು ಸಾಗಿಸೋದು ಮತ್ತು ಇದರ ಜೊತೆಗೆ ಪ್ರೀತಿಗಾಗಿ ಹುಡುಕಾಡೋದು ಇದೆಯಲ್ಲ ಅದು ಎಲ್ಲರಿಂದ ಸಾಧ್ಯವಿಲ್ಲದ ಮಾತು. ಮತ್ತೊಂದು ಸಲ ಬದುಕೋ ಅವಕಾಶ ಸಿಕ್ಕಿದರೆ ಏನನ್ನೂ ಬದಲಿಸದೇ ಮತ್ತೆ ಹೀಗೇ ಬದುಕೋದಿಕ್ಕೆ ಇಷ್ಟ ಪಡ್ತೀನಿ ಅಂತಾಳಲ್ಲ .. ಮೆಚ್ಚಿಬಿಟ್ಟೆ ಆಕೆಯ ಮಾತನ್ನು. Regret ಇಲ್ಲದ ಬದುಕು ಎಷ್ಟು ಚಂದ! ಅಲ್ಲಿ ಹೆಜ್ಜೆಯಿಡಬಾರದಿತ್ತು, ಇಲ್ಲಿ ನಡೆಯಬಾರದಿತ್ತು, ಇಲ್ಲಿ ಬಾಗಬಾರದಿತ್ತು, ಇಲ್ಲಿ ತುಳಿದಾಗ ಒದೆಯಬೇಕಿತ್ತು, ಅಲ್ಲಿ ಉಸಿರು ಕಟ್ಟಿಸಿದಾಗ ಹಾರಬೇಕಿತ್ತು … ಎಷ್ಟೊಂದು regret ನನಗಂತೂ ಕಾಡ್ತಲೇ ಇರುತ್ತವೆ. ಅಂಥದ್ದರಲ್ಲಿ ಹೀಗೆ ಯೋಚಿಸಿದ ಪ್ರತಿಭಾಗೆ ಒಂದು ಸಲಾಮ್! ಮೊದಮೊದಲಿಗೆ ಹೊಸಮನೆ ಪೂಜೆಯ ಕಥೆ ಓದುವಾಗಂತೂ ಅಲ್ಲಿ ನಾನೇ ಕೂತಿದ್ದೆ! ದೇವರಿಗೆ ಎಂದೂ ಪೂಜೆ ಮಾಡುವುದಿಲ್ಲ, ನಾನು ಅವನಿಗೆ make up ಮಾಡ್ತೀನಿ ಅನ್ನೋದು ನನ್ನ ಎಂದಿನ ಮಾತು ! ಹೂವಿಟ್ಟ ಮೇಲೆ ‘ಸಕತ್ತಾಗಿ ಕಾಣುತ್ತಪ್ಪ ನಿನಗೆ ಇದು’ ಅಂತ ಮಗುವಿಗೆ ಅಲಂಕಾರ ಮಾಡಿದ ಅಮ್ಮನ ಥರ ಗಣೇಶನ ಕಡೆಗೊಂದು ಮೆಚ್ಚುಗೆ ದೃಷ್ಟಿ ಹಾಯಿಸುವಂಥವಳು ನಾನು. ನೀತಿ ನೇಮಗಳ ಅಬ್ಬರದಲ್ಲಿ ಕಳೆದುಹೋಗೋ ಭಕ್ತಿ ಬಗ್ಗೆ ನಾನು ಅದೆಷ್ಟೊಂದು ಸಲ ಆಶ್ಚರ್ಯ ಪಟ್ಟಿದ್ದೇನೆ. ಇಲ್ಲಿ ಪ್ರತಿಭಾ ‘ಕನಕಾಂಬರವೇ ಯಾಕೆ ಸಿಕ್ಕಿಸಬೇಕು. ಒಂದಿಷ್ಟುದ್ದ ಮಲ್ಲಿಗೆ ಸಿಕ್ಕಿಸಬಾರದಾ’ , ‘ಅಂಗವಸ್ತ್ರಂ ಸಮರ್ಪಯಾಮಿ ಅಂತ ಹೂವು ಹಾಕಿ .. ಹಿಂದೂ ಧರ್ಮ ಫ಼ೇಮಸ್ ಆಗಿರೋದೇ ಆಪದ್ಧರ್ಮದಿಂದ ತಾನೇ?’ ಅನ್ನೋ ಮಾತುಗಳನ್ನು ಓದುವಾಗ ನಾನು ಪ್ರತಿಭಾ ಪ್ರತಿಬಿಂಬವಾಗಿಹೋಗಿದ್ದೆ ! ಹೊಸತಾಗಿ ಮನೆ ಪೂಜೆ ಮಾಡಿದ ದಿನ ಪೂಜೆಗೆ ಕೂತ ನನ್ನ ಗಂಡನ ಕುತ್ತಿಗೆಯಲ್ಲಿ ಜನಿವಾರವೇ ಇರಲಿಲ್ಲ. ಬೆಳಿಗ್ಗೆ ೬ ಕ್ಕೆ ಯಾವ ಅಂಗಡಿ ತೆಗೆದಿರಲ್ಲವಲ್ಲ ಅಂತ ಕೂತಾಗ ‘ಹಂಗೇ ಮಾಡಿ ಪರವಾಗಿಲ್ಲ’ ಅಂತ ಅದ್ದಕ್ಕೆ ಎಂಥದ್ದೋ ಸಮಜಾಯಿಷಿ ಕೊಟ್ಟ ಪುರೋಹಿತರ ನೆನಪಾಗಿ ನಗು ಬಂತು. ಕ್ಯಾಸೆಟ್ ಹಾಕಿ ಮಂತ್ರದ ಜೊತೆ ಪೂಜೆ ಮಾಡೋ ಅಮ್ಮ ಪಾಪ ಆ ವೇಗದ ಜೊತೆ ಏಗಲಾರದೇ ಪುರೋಹಿತರು ಅರಿಶಿನ, ಕುಂಕುಮ ಹಾಕಿ ಅನ್ನುವಾಗ ಹೂ ಹಾಕೋದನ್ನು, ಹೂ ಹಾಕಿ ಅನ್ನುವಾಗ ಮಂಗಳಾರತಿ ಮಾಡೋದನ್ನು, ಅಕ್ಷತೆ ಹಾಕಿ ಅನ್ನುವಾಗ ನೈವೇದ್ಯ ಮಾಡೋದನ್ನು ನೋಡಿ ಅವಳನ್ನು ರೇಗಿಸ್ತಾ ‘ಸರಿ ಈ ಚೆಂದಕ್ಕೆ ಅದನ್ಯಾಕೆ ಹಾಕ್ತಿ. ಆರಾಮವಾಗಿ ಭಕ್ತಿಯಿಂದ ಅವನಿಗೆ ಹೂ ಕುಂಕುಮ ಏರಿಸಬಾರದಾ?’ ಅಂತ ಕೇಳಿ ‘ನಿನಗಂತೂ ಭಯ ಭಕ್ತಿಯಿಲ್ಲ .. ತೆಪ್ಪಗಿರು’ ಅನ್ನೋ ಬೈಗುಳ ತಿಂದಿದ್ದೆ. ಪ್ರತಿಭಾ ಪುಸ್ತಕದ ಈ ಆರಂಭ ಓದುವಾಗ ಅದೆಲ್ಲ ನೆನಪಾಗಿ ಮಜಾ ಬಂತು. ಅಪ್ಪಟ ಗಂಡಸಿನ ಥರ ಅನ್ನುವ ಅವಳು ಎಷ್ಟೊಂದು ಕಡೆ ಅಪ್ಪಟ ಹೆಣ್ಣಷ್ಟೇ ಅನ್ನಿಸಿಬಿಟ್ಟಳು ನನಗೆ. ಪ್ರತಿ ಗಂಡಸು ಮೂಲತಃ ಆಕಾಶ ಅಂತ ಯಯಾತಿ ಕಾದಂಬರಿಯಲ್ಲಿ ಬರೆದಿದ್ದಾರಲ್ಲ ಅದೆಷ್ಟು ಸತ್ಯ! ಅವನ ವಿಸ್ತಾರದಲ್ಲಿ ಎಲ್ಲ ವಿಷಯಗಳೂ ಅಲ್ಲಿ, ಇಲ್ಲಿ ಆಗೀಗ ಮಿನುಗೋ ನಕ್ಷತ್ರಗಳು ಅಷ್ಟೇ .. ಪ್ರೀತಿ ಕೂಡಾ. ಹೆಣ್ಣು ಅಪ್ಪಟ crack .. ಆದಿ, ಅಂತ್ಯ, ಮಧ್ಯ ಎಲ್ಲ ಅದೇ! ಪ್ರೀತಿಸೋದಕ್ಕಿಂತ ಪ್ರೀತಿಸ್ತೀವಿ ಮತ್ತು ಪ್ರೀತಿಸಲ್ಪಡ್ತಿದ್ದೀವಿ ಅನ್ನೋ ಭಾವವನ್ನು ಹೆಚ್ಚು ಪ್ರೀತಿಸ್ತೀವೇನೋ ಅನ್ನೋದು ಕೂಡಾ ಒಂದೊಂದು ಸಲ ಹುಟ್ಟೋ ಅನುಮಾನ. ಪ್ರತಿಭಾ ಎಷ್ಟು ಅದ್ಭುತವಾಗಿ ಪ್ರೇಮಿಸುತ್ತಾಳೆ! ಮಧ್ಯರಾತ್ರಿಯವರೆಗೂ ಕೂತು ಪ್ರೀತಿಸಿದವನಿಗಾಗಿ ಕೊಲಾಜ್ ಮಾಡುತ್ತಾಳೆ, ಪತ್ರ ಬರೆಯುತ್ತಾಳೆ, ವಾಕಿಂಗ್ ಹೋಗುತ್ತಾಳೆ, ಪುಸ್ತಕ ಖರೀದಿಸುತ್ತಾಳೆ, ಸಿಗರೇಟಿಗೆ ಕಾಸು ನೀಡುತ್ತಾಳೆ … ಗೆಳೆಯನಾಗೇ ಉಳಿದವನ ಬಗ್ಗೆ ಮನಸ್ಸು ಮಿಡಿದಾಗಲೂ ಅವ ಸಿಗದಾದಾಗ ಮಿಡುಕುತ್ತಾಳೆ … ಯಾಕೆ ಪ್ರೀತಿಯನ್ನ ಹುಡುಕಾಡೋರಿಗೆ ಅದು ದಕ್ಕೋದೇ ಇಲ್ಲ? ಅಥವಾ ಅಷ್ಟೇನಾ ಬದುಕು ಅಂದರೆ … ಪ್ರೀತಿ ಪ್ರೇಮ ಮಣ್ಣು ಮಸಿ ಅಂತೆಲ್ಲಾ ಅಂದುಕೊಳ್ಳೋದು ಸುಮ್ಮನೆ ಮನಸ್ಸಿನ ಭ್ರಮೆಯಾ? ಅಂತೆಲ್ಲ ಹುಚ್ಚು ಹುಚ್ಚು ಯೋಚನೆಗಳು ಪುಸ್ತಕ ಕೆಳಗಿಡೋವರೆಗೂ. ಪ್ರೀತಿಸುತ್ತೀವಿ ಅಂದ ಕ್ಷಣ ಜೊತೆಗೇ package deal ಆಗಿ ಬರುವ ಆ possessiveness ಸಧ್ಯ ಪ್ರತಿಭಾಗೆ ಎಲ್ಲರಿಂದಲೂ ಎದುರಾಗದ್ದು ಆಕೆಯ ಭಾಗ್ಯ ಅನ್ನಿಸಿತು. ಎಷ್ಟೊಂದು ಜನ ಗಂಡಸರು .. ಅವರವರದ್ದೇ ದೌರ್ಬಲ್ಯಗಳ, ಕೀಳರಿಮೆಗಳ, ಧಿಮಾಕಿನಡಿಯಲ್ಲಿ ಅವರವರ ಕೈಲಾದಷ್ಟು ನೋಯಿಸಿದರೂ ಆಕೆ ಬದುಕನ್ನು ಆಕೆ ಯಾರ್ಯಾರಿಗೋ ಬದುಕದೇ ತನಗಾಗಿ ಬದುಕಿದ ರೀತಿ ಓದಿ ಮೂಕಳಾಗಿ ಕೂತೆ. ಎಂಥ ಪುಣ್ಯವಂತೆ. ಕಟ್ಟುಪಾಡು ಎದುರಾದಾಗ ಅನಿವಾರ್ಯ ಸಂಬಂಧದಲ್ಲಿ ಬಿಟ್ಟು ಮತ್ತೆ ಯಾವ ಸಂಬಂಧದಲ್ಲೂ ಅದಕ್ಕೆ ಬಗ್ಗದೆ ಕಿತ್ತೊಗೆದ ಪ್ರತಿಭಾ ಬಗ್ಗೆ ಓದುವಾಗ ಮಾತ್ರ ಒಂದು ಸಣ್ಣ ನಿಟ್ಟುಸಿರು ನನ್ನಿಂದ … ಬದುಕಿನ ಸಮುದ್ರದ ನೀರಲ್ಲಿ ಬಗ್ಗಿ ನೋಡಿಕೊಂಡೆ ನಾನು ಕಾಣುತ್ತೀನಾ ಅನ್ನುವ ಭ್ರಮೆಯಲ್ಲಿ … ಪ್ರತಿಬಿಂಬವಿರಲಿ, ಬಿಂಬವೇ ಇರಲಿಲ್ಲ !!]]>

‍ಲೇಖಕರು G

May 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

10 ಪ್ರತಿಕ್ರಿಯೆಗಳು

 1. sunil

  ಬದುಕಿನ ಲವಲೇಶಗಳನ್ನು….ಎಳೆ ಎಳೆಯಾಗಿ ತೆಗೆದಿಟ್ಟ ಪ್ರಾತಿಭಾ ರ ಭಾವಾರ್ಥ ಅಚ್ಚುಕಟ್ಟಾಗಿ ನಿನ್ನ ಬರಹದಲ್ಲಿ ಆಗಿದೆ ಭಾರತಿ ಅಕ್ಕ….ಯಾವಾಗಲು ಅದೇ ತಾನೇ ಆಗೋದು ಲೇಖಕ ಹೇಳಿದ್ದು ಓದುಗನಿಗೆ ಅರ್ಥ ಆಗಲ್ಲ…ಆದರೆ ಪುಸ್ತಕ ಓದಿ…ನಿನ್ನ ಅಭಿಪ್ರಾಯ ಓದಿದ ಮೇಲೆ…u have wrote what exactly she conveyed…wonderfull write up….

  ಪ್ರತಿಕ್ರಿಯೆ
 2. D.RAVIVARMA

  … ಬದುಕಿನ ಸಮುದ್ರದ ನೀರಲ್ಲಿ ಬಗ್ಗಿ ನೋಡಿಕೊಂಡೆ ನಾನು ಕಾಣುತ್ತೀನಾ ಅನ್ನುವ ಭ್ರಮೆಯಲ್ಲಿ … ಪ್ರತಿಬಿಂಬವಿರಲಿ, ಬಿಂಬವೇ ಇರಲಿಲ್ಲ !!…..excellent
  d.ravi varma hospet

  ಪ್ರತಿಕ್ರಿಯೆ
 3. anu pavanje

  Regret ಇಲ್ಲದ ಬದುಕು ಎಷ್ಟು ಚಂದ!….ನ೦ಗೂ ಬೇಕಿದ್ದುದು ಇದೇ….ಭಾರತಿ….ತು೦ಬಾ ಇಷ್ಟವಾಯ್ತು… 🙂

  ಪ್ರತಿಕ್ರಿಯೆ
 4. sandhya

  ಪ್ರತಿಭಾ ಪುಸ್ತಕವನ್ನು ಓದಿ ಅದರ ಬಗ್ಗೆ ಮಾತನಾಡುವ ಬದಲು ಪ್ರತಿಭಾ ಜೀವನದ ಬಗ್ಗೆ ಮಾತನಾಡಿ ನ್ಯಾಯಪೀಠದಲ್ಲಿ ಕೂರುವುದು ಎಷ್ಟು ಸರಿ? ನೀನು ಬರೆದ೦ತೆ ನಾವು ಆ ಚೌಕಟ್ಟನ್ನು ಒಡೆದು ನೋಡಿದಾಗ ಮಾತ್ರ ನಮಗೆ ಚಿತ್ರದ ಸ್ಪಷ್ಟ ಕಲ್ಪನೆ ಮೂಡುತ್ತದೆ. If she wanted to play safe, she would have called it as a fiction and no one would have had the voice to comment. ಪುಸ್ತಕವನ್ನು ಕೇವಲ ಪುಸ್ತಕವನ್ನಾಗಿ ನೋಡಿದ ನಿನ್ನ ಬರವಣಿಗೆ ಇಷ್ಟವಾಯ್ತು.

  ಪ್ರತಿಕ್ರಿಯೆ
 5. RJ

  Wah! You triggered me.. ಪುಸ್ತಕ ಕೊಂಡು ಓದುವಾಸೆಯಾಗುತ್ತಿದೆ.ಬಹುಶಃ ಈ ವೀಕೆಂಡ್ ನಲ್ಲಿ ಈ ಕೆಲಸ ಮಾಡುವೆ..Thumbs up! 🙂
  -RJ

  ಪ್ರತಿಕ್ರಿಯೆ
 6. Sharadhi

  ಕೆಲವು ಸತ್ಯಗಳು ಇಂತಿವೆ. ಪ್ರತಿಭಾ ರ ಬದುಕು ಅವರಿಚ್ಚೆ, ಅದರ ಕುರಿತಾಗಿ ಆಕ್ಷೇಪಣೆ ಅನಗತ್ಯ. ಆದರೆ, ಮನಸ್ಸು ಎನ್ನುವುದು ನಮ್ಮ ಎಲ್ಲಾ ಚಟಗಳನ್ನೂ, ಚಟುವಟಿಗೆಗಳನ್ನೂ ಚೆನ್ನಾಗಿ ಸಮರ್ಥಿಸಿಕೊಳ್ಳುವ ಸ್ವಕ್ಷೆಮ-ನಿಷ್ಠ biomass . ಮಾತ್ರವಲ್ಲ, ಆ ಎಲ್ಲಾ ಗಂಡಸರೂ ತಂತಮ್ಮ ಆತ್ಮ ಕಥನ ಬರೆದುಕೊಂಡರೆ, (ಬರೆಯುವ ಕಲೆ ಸಿದ್ದಿಸಿದ್ದರೆ), ಅವರವರ ಅಭಿಪ್ರಾಯಗಳೂ, ಸರಿ ಎಂದೇ ಅನ್ನಿಸುವುದು. ಅಲ್ಲವೇ!. ನಮ್ಮ ಕುರಿತಾಗಿ ಒಂದು ಸಾತ್ವಿಕ ಸಂಶಯ ಇಟ್ಟುಕೊಂಡು ಬದುಕುವುದು ಸಮಷ್ಟಿ ಯ ದೃಷ್ಟಿ ಇಂದ ಒಳ್ಳೆಯದು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: