ಪ್ರತಿಮಾ ಪೇಚು: ಲೆಫ್ಟಿಯಾಗಿ ಹುಟ್ಟೋದು ರೈಟ್ ಅಲ್ಲವೇ??!!

– ಪ್ರತಿಮಾ ಶಾನುಭಾಗ್ ಕಾಮತ್

ನನಗಾಗ ನಾಲ್ಕು ವರ್ಷ. ಬಾಲವಾಡಿ ಮುಗಿಸಿ ಶಾಲೆಗೆ ಸೇರುವ ಸಮಯ. ಶಾಲೆಯ ಮುಖ್ಯೋಪಾಧ್ಯಾರರ ಬಳಿ ಅಪ್ಪ ಹೇಳಿದ ಮಾತು.” ನನ್ನ ಮಗಳಿಗೆ ಊಟ ತಿಂಡಿ ಮಾಡೋದೇನೋ ಬಲಗೈಯಲ್ಲಿ ಅಭ್ಯಾಸ ಮಾಡಿಸಿದೀವಿ , ಆದ್ರೆ ಯಾಕೋ ಈ ಹುಡುಗಿ ಬರಿಯೋದು ಮಾತ್ರ ಎಡಗೈಯಲ್ಲೇ, ಈಗ ಎನು ಮಾಡೋದು?” “ಇರಲಿ ಬಿಡಿ, ಮೆದುಳಿನ ಬಲಭಾಗ ಚುರುಕಾಗಿದ್ದವರು ಎಡಚರಾಗ್ತಾರೆ, ಅದೇನು ಊನತೆಯಲ್ಲ, ಸುಮ್ನೆ ಬೈದು, ಹೊಡೆದು ತಪ್ಪಿಸೋದು ಬೇಡ” ಎಂದರು ಮೇಷ್ಟ್ರು. ಎಡವೋ ಬಲವೋ ಅಂತು ಮಗಳು ಚುರುಕಿದ್ದಾಳೆ ಅಂತ ಅಪ್ಪ ನಿಟ್ಟುಸಿರು ಬಿಟ್ಟಿದ್ದರೇನೋ!!. ಪ್ರೈಮರಿ ಶಾಲೆಯಲ್ಲಿ ಲೆಫ್ಟಿಯಾಗಿದ್ದುರ ಬಗ್ಗೆ ಇದ್ದ ತೊಂದರೆಗಳು ನನಗೇನೂ ನೆನಪಿಲ್ಲ, ಹೈಸ್ಕೂಲು ಓದಿದ್ದು ಗರ್ಲ್ಸ್ ಕಾನ್ವೆಂಟಲ್ಲಿ..ತೊಂದರೆ ಶುರುವಾಗಿದ್ದೆ ಕಾಲೇಜಿನಲ್ಲಿ. 3-4 ಕಿ. ಮೀ. ಸೈಕಲ್ ತುಳಿದು ಕಾಲೇಜು ಪ್ರವೇಶಿಸುವಾಗ ದೂರದಿಂದ ಯಾರೋ” ಏಯ್ ಲೆಫ್ಟೀ ಆರಾಮಾ” ಅಂತಲೋ, “ರೊಡ್ಡೀ ಹೇಗಿದೀಯಾ” ಅಂತಲೋ ಕೂಗೋರು..ಕ್ಲಾಸ್ ರೂಮ್ ಗೆ ಬಂದು ಕುಳಿತುಕೊಳ್ಳುತ್ತಿದ್ದದ್ದು ಬೆಂಚಿನ ತುದಿಯ ಸೀಟ್ ನಲ್ಲ್ಲಿಯೇ..ಮಧ್ಯವೇನಾದರೂ ಕುಳಿತರೆ ಪ್ರಾಧ್ಯಾಪಕರು ನೋಟ್ಸ್ ಡಿಕ್ಟೇಟ್ ಮಾಡುವಾಗ, ಬರೆಯುತ್ತಿರುವ ನನ್ನ ಎಡಗೈ ಪಕ್ಕ ಕುಳಿತ ಗೆಳತಿಯ ಬಲಗೈಗೆ ಡಿಕ್ಕಿ ಹೊಡೀತಿರ್ತಿತ್ತು.ನೋಟ್ಸ್ ಬರಿಯೋದು ಹೇಗೋ ಮ್ಯಾನೇಜ್ ಮಾಡುವ ನನಗೆ ಸ್ವಲ್ಪ ತೊಂದರೆಯಾಗುತ್ತಿದ್ದದ್ದು ಪ್ರ್ಯಾಕ್ಟಿಕಲ್ ಕ್ಲಾಸಲ್ಲಿ.. “disect the cockroach, pin it with left hand and separate the oesophagus with forceps by right hand’ ಅನ್ನೋಝುವಾಲಜಿ ಮೇಡಮ್ಮು, ” measure width with screwgauge” ಅಂತ ಹೇಳೋ ಫಿಸಿಕ್ಸ್ ಪ್ರಾಧ್ಯಾಪಕರು.ಅವರ ಲೆಫ್ಟ್ ಅನ್ನು ರೈಟ್ ಎಂದೂ, ರೈಟ್ ಅನ್ನು ಲೆಫ್ಟ್ ಅಂತ ನಾನು ಹೇಗೋ ಸಂಭಾಳಿಸುತ್ತಿದ್ದೆ.. ಎಡವಟ್ಟಾಗುತ್ತಿದ್ದದ್ದೇ ಕೆಮಿಸ್ಟ್ರಿ ಲ್ಯಾಬ್ ನ ಟೈಟ್ರೇಶನ್ ಎಕ್ಸ್ಪೆರಿಮೆಂಟಿನಲ್ಲಿ “gently drop the solution drop by drop by tilting the knob of burette in right hand, and shake the conicalflask by left hand carefully ” ಎಂದು ಪ್ರೊಫೆಸರ್ ಆದೇಶಿಸಿದರೆ, .ಲೆಫ್ಟ್ ರೈಟ್ ಗೊಂದಲದಿಂದ ತೊಂದರೆಗೊಳಗಾಗುತ್ತಿದ್ದೆ.ಒಮ್ಮೆಯಂತೂ ಕೊನಿಕಲ್ ಫ್ಲಾಸ್ಕ್ ಬದಲಾಗಿ ಗ್ಲಾಸ್ ಬ್ಯುರೆಟನ್ನು ಘಲ ಘಲ ಅಲುಗಾಡಿಸಿದ್ದೆ, ಬ್ಯುರೆಟ್ಟು ವುಡನ್ ಸ್ಟ್ಯಾಂಡಿಂದ ಕಿತ್ತು ಬಂದಿತ್ತು. ಕೊನಿಕಲ್ ಫ್ಲಾಸ್ಕ್ ಕೈ ಜಾರಿತ್ತು. ಹೊಲಿಯುವವರ ಬಲಕ್ಕೆ ಕೂರಬಾರದು, ಅಳುವವರ ಎಡಕ್ಕೆ ಕೂರಬಾರದೆಂಬ ಗಾದೆ ಮಾತು ನನ್ನ ಮಟ್ಟಿಗೆ ವಿರುದ್ದವಾಗಿತ್ತು. ನಾನು ಹೊಲಿಯುವಾಗ ಯಾರೂ ಎಡಕ್ಕೆ ಕೂರ್ತಾ ಇರಲಿಲ್ಲ, ಅಳುವಾಗ(?!?!).( ಛೆ, ಮೂಗು ಒರಿಸಿಕೊಳ್ಳುವಷ್ಟು ಯಾವಾಗಲೂ ಅತ್ತಿಲ್ಲ ಬಿಡಿ.).ಜಾರ್ಜ್ ಬುಷ್, ವಿಲ್ಲಿಸ್ ಜೀಪ್,ಇವು ಆಚೀಚೆ ಮನೆಯ ಆಂಟಿ ಅಂಕಲ್ ನನಗಿಟ್ಟಿರುವ ನಿಕ್ ನೇಮುಗಳು.ಪಕ್ಕದ ಮನೆಗೆ ಹೊಸದಾಗಿ ಬಾಡಿಗೆಗೆ ಬಂದಿದ್ದ ಆಂಟಿಗೆ ಎಡಗೈಯಲ್ಲೇ ಕ್ರೋಶಾ ಹೆಣೆಯಲು ಕಲಿಸಿಬಿಟ್ಟಿದ್ದೆ!!.. ಅಂತೂ ಡಿಗ್ರೀ ಮುಗಿಸಿದ ಮಗಳಿಗೆ ಅಪ್ಪ ವರಾನ್ವೇಷಣೆ ಕಾರ್ಯ ಶುರುಹಚ್ಚಿಕೊಂಡರು.”ಅಪ್ಪ, ಜಾತಕದ ಜೊತೆ ಬಯೋಡೇಟಾಡಲ್ಲಿ ಹುಡುಗಿ ಲೆಫ್ಟಿ ಅಂತ ಬರಿ” ಎಂದೆ. “ಸುಮ್ನಿರು ಪೆದ್ದೇ ,ಅದೂ ಒಂದು ಕೊರತೆಯೇ.. ಹಾಗೆಲ್ಲಾ ಏನೂ ಇಲ್ಲ” ಅಂದರು.ಅಷ್ಟಾದರೂ ಭಾವೀ ಪತಿರಾಯರ ಹತ್ತಿರನಾನು ಲೆಫ್ಟಿ ಯಾದರೆ ಅವರ ಮನೆಯಲ್ಲಿ ಯಾರಿಗೂ ಅಭ್ಯಂತರವಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದೆ. “ಗಂಡನ ಮನೆಯಲ್ಲಿ ತಗ್ಗಿ ಬಗ್ಗಿ ನಡೆಯಬೇಕು, ಯಾರಿಗೂ ಎದುರುತ್ತರ ಕೊಡಬಾರದು” ಅನ್ನುವ ಜನೆರಲ್ ಉಪದೇಶಗಳೊಂದಿಗೆ ಅಮ್ಮನದೊಂದು ಸ್ಪೆಶಲ್ ಟಿಪ್ಪಣಿ “ನೆನಪಿರಲಿ, ಊಟ ಬಡಿಸಬೇಕಾದರೆ ಬಲಗೈಲೇ ಬಡಿಸು ” ಊಟದ ವಿಷಯಹೇಳಿದ್ದ ಅಮ್ಮ ದೇವರ ಮನೆ ವಿಷಯ ಹೇಳೇ ಇರಲಿಲ್ಲ. ಎಡಗೈಯಲ್ಲಿ ದೇವರಿಗೆ ದೀಪ ಹಚ್ಚೋದು ಸರಿಯಲ್ವಂತೆ, ಬಲಗೈಯಲ್ಲಿ ಕಡ್ಡಿ ಗೀರೊಕ್ಕೆ ನನಗೆ ಬರೊಲ್ಲ. ಎಡಗೈಯಲ್ಲಿ ಕಡ್ಡಿ ಗೀರಿ ಅದನ್ನು ಬಲಗೈಗೆ ಟ್ರಾನ್ಸ್ಫರ್ ಮಾಡಿ ಬತ್ತಿ ಉರಿಸುವಷ್ಟರಲ್ಲಿ ನನ್ನ ತೋರುಬೆರಳು ಸುಟ್ಟಿರುತ್ತಿತ್ತು.ಅಸಹಾಯಕಳಾಗಿ ಗೋಪುರದಲ್ಲಿರುವ ದೇವರನ್ನು ನೋಡಿದಾಗ” ಹೆಂಗೂ ದೀಪ ಹಚ್ಚುಟ್ತ್ಹಾ ಇದೀಯಲ್ಲ ತಾಯಿ, ಯಾವುದೋ ಒಂದು ಕೈ, ಹಚ್ಚಿ ಮುಗಿಸು’ ಅನ್ನೋ ಭಾವನೆ ವಿಗ್ರಹದ ಮುಖದ ಮೇಲೆ ಕಾಣಿಸುತ್ತಿತ್ತು. ಎಲ್ಲರಿಗೂ ಒಳ್ಳೇದನ್ನೇಮಾಡಪ್ಪ್-ಅ ಅಂತ ಶುರುವಾಗೋ ನನ ಪ್ರಾರ್ಥನೆಯ ಕೊನೆಯ ಸಾಲು ಹೀಗಿರ್ತಿತ್ತು. “ನನ್ನನ್ನು ಎಷ್ಟೇ ಪ್ರಸಿದ್ದ ವ್ಯಕ್ತಿಯನಾದರೂ ಮಾಡು ಆದರೆ ಪ್ರತಿಮ ಶಾನಭಾಗರು ಜ್ಯೊತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ ಎನ್ನೋ ಪ್ರಮೇಯ ಬರದಂತೆ ಕಾಪಾಡು”. “ಮೇಡಂ ಕೊರಿಯರ್”.. ಅಂದಾಗ ಬಾಗಿಲು ತೆರೆದರೆ.. ಆ ಪುಣ್ಯಾತ್ಮನಿಗೆ ನಾನು ಚಾಚಿದ ಎಡಗೈ ಕಾಣದೆ ಪೆನ್ನನ್ನು ಬಲವಂತವಾಗಿ ನನ್ನ ಬಲಗೈಗೆ ತುರುಕಿ “ಸೈನ್ ಮಾಡಿ” ಅಂತಿದ್ದ.ಅಸಹನೆಯ ನೋಟದಿಂದ ಅವನನ್ನೊಮ್ಮೆ ಗುರಾಯಿಸಿ ಎಡಗೈಯಲ್ಲಿ ಸೈನ್ ಮಾಡಿಕೊಡುತ್ತಿದ್ದೆ.ಆಗ ನನ್ನ ಮುಖದಲ್ಲಿ ಒಂದು ಕಿರುನಗೆ.. ಎಷ್ಟೆಂದರೂ ಅದೊಂದು ಪೆನ್ನು, ಉರಿಯುವ ಬೆಂಕಿ ಕಡ್ಡಿ ಅಲ್ಲವಲ್ಲಾ!!! ಎಲ್ಲರೂ ನೀರಿನ ಬಿಂದಿಗೆಯನ್ನು, ಪುಟ್ಟ ಮಕ್ಕಳನ್ನು ಎಡ ಕಂಕುಳಿನಲ್ಲಿ ಎತ್ತಿಕೊಂಡರೆ, ನನ್ನದು ಉಲ್ಟಾ ದಿಕ್ಕು..ಸ್ನಾನ ಮಾಡಿದ ಮಗಳಿಗೆ ನಾನು ಮುಂಚೆ ಹಾಕೊದು ಯುನಿಫಾರಂನ ಎಡಗೈ.. ಅಂತೆಯೇ ಎಡ ಶೂ ಮೊದ್ಲು.. ಅವಳು ಬಲಗಾಲನ್ನು ಮುಂದಿಕ್ಕಿ ನನ್ನ ಹತ್ತಿರ ಬೈಸಿಕೊಳ್ಳುತ್ತಾಳೆ..ಸಾಲದಕ್ಕೆ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳೂ(ಕಂಪ್ಯೂಟರ್ ಮೌಸ್ ಕೂಡ) ಬಳಸುವಾಗ ನನಗೆ ತೊಂದರೆ ಕೊಡುತ್ತವೆ, ಆದರೆ ನಾನೀಗ ಅದಕ್ಕೆ ಅಡ್ಜಸ್ಟ್ ಆಗಿದ್ದೇನೆ. ಇಷ್ಟೆಲ್ಲ ಕಿರಿಕಿಯ ಮದ್ಯೆಯೂ ‘ ಲೆಫ್ಟಿ ಆಗಿ ಹುಟ್ಟಿದರೆ ಲಕ್ಕಿ ಅಂತೆ, ಚುರುಕು, ಜಾಣರಂತೆ, ಸಾವಿರಕ್ಕೊಬರು ಹಾಗೆ ಹುಟ್ಟೋದಂತೆ” ಆ ಮಾತುಗಳು ಮನಸಿನೊಳಗೆ ಖುಷಿ ಕೊಡ್ತಾವೆ. ನನ್ನ ಮಗಳು ಪರಿ ಲೆಫ್ಟಿ ಅಲ್ಲದಿದರೂ, ನನ್ನ ಅಕ್ಕನಮಗ 4 ವರ್ಷದ ನಕುಲ ನಲ್ಲಿ ನನ್ನ ಜೀನ್ ಗಳು ಟ್ರಾನ್ಸ್ಫರ್ ಆಗಿವೆ.. ಪಾಪ ಅವನ ಕಷ್ಟ ನಂಗೆ ಮಾತ್ರ ಅರ್ಥ ಆಗೋದು.. .]]>

‍ಲೇಖಕರು G

April 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

9 ಪ್ರತಿಕ್ರಿಯೆಗಳು

 1. pramod srinivasa

  ಅದ್ಭುತವಾದ ಲೇಖನ ಮೇಡಮ್ …. ಬಹಳ ಆಪ್ತವೆನಿಸಿತು … ಸರಳವಾದ, ಲಘು ಹಾಸ್ಯದ ಸಾಲುಗಳು ಮನಸ್ಸಿಗೆ ಮುದನೀಡಿದವು .. ನಮ್ಮ ಜೀವನದ ಕೆಲವು ವೈಪರಿತ್ಯಗಳನ್ನು ನಾವು ಯಾವುದೆ ಗೋಜಲುಗಳಿಲ್ಲದೆ ಸ್ವೀಕರಿಸಿಬಿಟ್ಟರೆ .. ಅದಕ್ಕಿಂತ ಆನಂದ ಇನ್ನೇನಿಲ್ಲ … ಧನ್ಯವಾದಗಳು ಉತ್ತಮ ಲೇಖನವನ್ನು ಕೊಟ್ಟದ್ದಕ್ಕೆ

  ಪ್ರತಿಕ್ರಿಯೆ
 2. Gopal Wajapeyi

  ಶಭಾsಶ್ ಪ್ರತಿಮಾಜೀ…
  ಒಳ್ಳೆಯ ಭಾಷೆ, ಒಳ್ಳೆಯ ಶೈಲಿ, ಒಳ್ಳೆಯ ಹಾಸ್ಯಪ್ರಜ್ಞೆ…
  ಓದುತ್ತ ಓದುತ್ತ ನಿಮ್ಮ ‘ಬಣ್ಣನೆ’ಯೆಲ್ಲ ಕಣ್ಮುಂದೆ ಕಟ್ಟುತ್ತದೆ.

  ಪ್ರತಿಕ್ರಿಯೆ
 3. Swarna

  ಚೆನ್ನಾಗಿದೆ.
  ಉದ್ಘಾಟನೆ ಮಾಡೋಕೆ ಬೇರೆ ದಾರಿ ಹುಡುಕಿದರಾಯಿತು ಇಲ್ಲ ಯಡಗೈಲೇ ಮಾಡಿದರಾಯಿತು ಬಿಡಿ
  ಸ್ವರ್ಣಾ

  ಪ್ರತಿಕ್ರಿಯೆ
 4. ismail

  ಈ ಲೇಖನವನ್ನು ಹೀಗೇ ತೆಗೆದಿಟ್ಟುಕೊಳ್ಳುತ್ತೇನೆ. ನನ್ನ ಮಗಳೂ ಲೆಫ್ಟಿ. ಅವಳ ಈ ಕಥನದ ಮುಂದಿನ ತಲೆಮಾರಿನ ಪ್ರತಿನಿಧಿಯಾಗಿ ಬರೆಯುತ್ತಾಳೆ.

  ಪ್ರತಿಕ್ರಿಯೆ
 5. ರಶ್ಮಿ ಅಭಯ ಸಿಂಹ

  ಪ್ರತಿಮಾ ಅವ್ರೇ ! ಚೆನ್ನಾಗಿದೆ ನಿಮ್ಮ ಬರಹ. ನಿಮ್ಮೊಂದಿಗೆ ನಾನೂ ಇದ್ದೇನೆ. ಪ್ರೈಮರಿ ಶಾಲೆಯಲ್ಲಿ ನಾನೂ ಎಡಗೈಯಲ್ಲೇ ಬರೆಯುತ್ತಿದ್ದವಳು. ಯಾರೋ ಹೇಗೋ ಏನೋ ಅದನ್ನ ಬಲಗೈಗೆ ವರ್ಗಾಯಿಸಿ ಬಿಟ್ಟರು. ಆದರೂ ಸೌಟಿನಿಂದ ಹಿಡಿದು ಪೊರಕೆ ವರೆಗೂ ಬಳಸೂದು ಎಡಗೈಯೇ. ಮದುವೆ ಮುಂಜಿಗಳಲ್ಲಿ ಎಡಗೈಯಲ್ಲಿ ಬಡಿಸಿ ಯಾರ್ಯಾರ ಬಾಯಲ್ಲಿ ಅನ್ನಿಸಿಕೊಂಡು ಅತ್ತದ್ದೂ ಇದೆ. ಖುಶಿ ಎಂದರೆ ಎರಡೂ ಕೈ ನಿನ್ನದೇ ಅಂತ ಹೇಳು ಎಂದು ಧೈರ್ಯ ತುಂಬುವ ನನ್ನ ಗಂಡ ಅಭಯ, ಅತ್ತೆ ಮಾವ, ಅಪ್ಪ ಅಮ್ಮ ನನ್ನ ಜೊತೆಗಿದ್ದಾರೆ! ಶೂಟಿಂಗ್ ನಲ್ಲಿ ಸೌಂಡ್ ನವನು ಮೈಕ್ ಕೊಡುವಾಗ, ಅಸಿಸ್ಟೆಂಟ್ ಡೈರೆಕ್ಟರ್ ಬಂದು ಸೀನ್ ಕೊಡುವಾಗ ಎಡಗೈ ನೋಡಿ ನಿಮ್ಮ ಕೊರಿಯರ್ ನವನಂತೇ ಗುರಾಯಿಸುತ್ತಾರೆ. ನಾನೂ ನಿಮ್ಮ ಹಾಗೇ ನನ್ನ ಎಡಗೈಯನ್ನು ಬಿಟ್ಟು ಕೊಡೋದಿಲ್ಲ. ಹೇಗೆ! ನಾವು ಸ್ಪೆಶಲ್ ತಾನೇ?!

  ಪ್ರತಿಕ್ರಿಯೆ
 6. ನವೀನ್ ಸಾಗರ್

  ನಮ್ಮತ್ತೆ ಮಗ ಚಿಂತು ಹೇಳ್ತಾ ಇದ್ದದ್ದು ನೆನಪಾಗತ್ತೆ… ! ಅವನಿಗೆ ಅವರಮ್ಮ ತಿದ್ದೋ ಪ್ರಯತ್ನ ಮಾಡ್ತಾ ಇದ್ರು.. ತಿನ್ನುವಾಗ, ಬರೆಯುವಾಗ, ಇತ್ಯಾದಿ ಕೆಲಸಗಳಲ್ಲಿ ಎಡಗೈ ಬಳಕೆ ತಪ್ಪಿಸಲು..
  ಆಗವನಿಗೆ ನಾಲ್ಕು ವರ್ಷ ಅನ್ಸುತ್ತೆ.. ” ಅಮ್ಮಾ ನಂಗೆ ಎಡಗೈನೇ ಇಲ್ಲಮ್ಮಾ… ದೇವ್ರು ನಂಗೆ ಎರಡೂ ಬಲಗೈನೇ ಕೊಟ್ಟಿರೋದು… “!!! ಅದನ್ನ ಕೇಳಿದಾಗ ನಗು ಜೊತೆಗೇ ಹೌದಲ್ವಾ ಅಂತಲೂ ಅನಿಸಿತ್ತು..! ಎಡ ಬಲ ಅನ್ನೋದು ಪಕ್ಕಾ ರಿಲೇಟಿವ್ ಟರ್ಮು..! ಅನುಕೂಲಕ್ಕೆ ಸಂಬಂಧಿಸಿದ್ದು. ಅಷ್ಟೇ!!
  ಚೆಂದದ ನಿರೂಪಣೆ ಪ್ರತಿಮಾ… ಒಂದ್ಸಲ ನನ್ನ ಎಡಚ ಸಹಪಾಠಿಗಳು, ಗೆಳೆಯರು ಕಣ್ಮುಂದೆ ಬಂದು ಹೋದರು..!

  ಪ್ರತಿಕ್ರಿಯೆ
 7. ಜಿ.ಎನ್.ಅಶೋಕವರ್ಧನ

  ಲೆಫ್ಟ್, ರೈಟ್ – ಎಂದು ನಮ್ಮ ರಕ್ಷಣಾಬಲವೆಲ್ಲಾ ತೊಡಗುವುದು ಎಡ ಪ್ರಥಮವಾಗಿಯೇ. ನಿಮ್ಮ ರಕ್ಷಣಾ ವ್ಯೂಹವೇ ‘ಎಡ’ದ್ದಾಗಿರುವಾಗ ಇನ್ಯಾತರ ಯೋಚನೆ. ವಾಹನ ಚಾಲಕರಿಗಂತೂ (ನಮ್ಮ ದೇಶದಲ್ಲಾದರೂ) ಲೆಫ್ಟೇ ರೈಟು, ರೈಟ್ ಈಸ್ ರಾಂಗೂ. ಚೆನ್ನಾಗಿದೆ ಚೆನ್ನಾಗಿದೆ
  ಅಶೋಕವರ್ಧನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: