‘ಪ್ರಥಮ್ ಬುಕ್ಸ್’ಗೆ ಪ್ರಶಸ್ತಿ

ಪ್ರಥಮ್ ಬುಕ್ಸ್ ಗೆ ಪ್ರತಿಷ್ಠಿತ ಲೈಬ್ರರಿ ಆಫ್ ಕಾಂಗ್ರೆಸ್ ಸಾಕ್ಷರತಾ ಪ್ರಶಸ್ತಿ

ಸಾಕ್ಷರತೆ ಹಾಗೂ ಓದುವುದನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಈ ಪ್ರಶಸ್ತಿ

ಸಾಕ್ಷರತೆ ಮತ್ತು ಓದುವುದನ್ನು ಉತ್ತೇಜಿಸಲು ಶ್ರಮಿಸುತ್ತಿರುವ ಸಂಸ್ಥೆಗಳಿಗಾಗಿ ಈ ಪ್ರಶಸ್ತಿ

ಮಕ್ಕಳ ಪುಸ್ತಕಗಳ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ಪ್ರಥಮ್ ಬುಕ್ಸ್ ‘ಲೈಬ್ರರಿ ಆಫ್ ಕಾಂಗ್ರೆಸ್ ಸಾಕ್ಷರತಾ’ ಪ್ರಶಸ್ತಿಗೆ ಆಯ್ಕೆಯಾಗಿದೆ. ಜಗತ್ತಿನ 5 ಪ್ರಕಾಶನ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಭಾರತದಿಂದ ಈ ಪ್ರಶಸ್ತಿ ಪಡೆದ ಏಕೈಕ ಸಂಸ್ಥೆ ‘ಪ್ರಥಮ್ ಬುಕ್ಸ್’. ಈ ಪ್ರಶಸ್ತಿಯನ್ನು ಲೈಬ್ರರಿ ಆಫ್ ಕಾಂಗ್ರೆಸ್ ನ ಕಾರ್ಲಾ ಹೇಡನ್ ಅವರು ಘೋಷಿಸಿದರು.

2013ರಲ್ಲಿ ಡೇವಿಡ್ ಎಂ ರುಬೆನ್ ಸ್ಟೇನ್ ಅವರು ಪ್ರಕಾಶನ ಕ್ಷೇತ್ರದಲ್ಲಿ ವಿಶಿಷ್ಟವಾದ, ಹೊಸ ರೀತಿಯ, ಅಸಾಧಾರಣವಾದ ಕೆಲಸವನ್ನು ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಲು ಈ ಸಾಕ್ಷರತಾ ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ಈ ಕಾಲದ ತುರ್ತುಗಳಿಗೆ ಸ್ಪಂದಿಸಲು ಹಾಗೂ ಸಾಕ್ಷರತೆ ಉತ್ತೇಜಿಸಲು ಜರುಗುತ್ತಿರುವ ಮಹತ್ವದ ಕೆಲಸಗಳ ಮೇಲೆ ಬೆಳಕು ಬೀರಲು ಈ ಎಲ್ಲಾ ಪ್ರಶಸ್ತಿಗಳು ಪ್ರಯತ್ನಿಸುತ್ತವೆ. ಈಗಿನ ಅನಿರೀಕ್ಷಿತ ಕಾಲಘಟ್ಟದಲ್ಲಿ ಮಕ್ಕಳು ಎದುರಿಸುತ್ತಿರುವ ವಿಶೇಷ ಅಗತ್ಯತೆಗಳನ್ನು ಪೂರೈಸಲು ಪ್ರಥಮ್ ಬುಕ್ಸ್ ಕಾರ್ಯನಿರ್ವಹಿಸಿದ ರೀತಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

“ಸಾಕ್ಷರತೆಯು ಜಗತ್ತಿನಾದ್ಯಂತದ ಕಲಿಕೆ, ಜ್ಞಾನ ಮತ್ತು ಅವಕಾಶವನ್ನು ಬೆನ್ನಟ್ಟಲು ಪ್ರೋತ್ಸಾಹಿಸುತ್ತದೆ. ಕೋವಿಡ್-19 ಪಿಡುಗಿನಿಂದಾಗಿ ಹೊಸ ರೀತಿಯ ಕಲಿಕೆ ಮತ್ತು ಕಲಿಸುವಿಕೆ ಎರಡರಲ್ಲಿಯೂ ಹೊಸ ವಿಧಾನಗಳನ್ನು ಹುಡುಕಬೇಕಾದ ಸವಾಲು ನಮ್ಮ ಮುಂದಿವೆ” ಎಂದು ಲೈಬ್ರರಿಯನ್ ಆಫ್ ಕಾಂಗ್ರೆಸ್ ನ ಕಾರ್ಲಾ ಹೇಡನ್ ತಿಳಿಸಿದ್ದಾರೆ. “ಅಮೆರಿಕಾ ಮತ್ತು ಜಗತ್ತಿನಾದ್ಯಂತ ಓದುವುದನ್ನು ಪ್ರೋತ್ಸಾಹಿಸುವುದಕ್ಕಾಗಿ ವಿಭಿನ್ನ ಸಾಧನೆ ಮಾಡುತ್ತಿರುವ ಈ ಸಂಸ್ಥೆಗಳ ಸಾಧನೆಗಳನ್ನು ಗೌರವಿಸಲು ಡೇವಿಡ್ ಎಂ ರುಬೆನ್ ಸ್ಟೇನ್ ಅವರ ಜೊತೆ ಕೈ ಗೂಡಿಸಲು ಲೈಬ್ರರಿ ಆಫ್ ಕಾಂಗ್ರೆಸ್ ಹೆಮ್ಮೆ ಪಡುತ್ತದೆ.”

ಮಕ್ಕಳ ಪುಸ್ತಕ ಪ್ರಕಾಶನ ಸಂಸ್ಥೆ 2004ರಲ್ಲಿ ಸ್ಥಾಪನೆಗೊಂಡಿದ್ದು ಲಕ್ಷಾಂತರ ಮಕ್ಕಳಿಗೆ ಅನೇಕ ಭಾಷೆಗಳಲ್ಲಿ ಕೈಗೆಟುಕುವ ದರದಲ್ಲಿ ಆಕರ್ಷಕ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಇದರ ಅಂಗವಾಗಿಯೇ ಪ್ರಥಮ್ ಬುಕ್ಸ್ ಸ್ಟೋರಿವೀವರ್ ಅನ್ನು ಪ್ರಾರಂಭಿಸಿತು. ಇದು ಮಕ್ಕಳ ಬಹುಭಾಷಾ ಕತೆಗಳ ಆನ್‌ಲೈನ್, ಡಿಜಿಟಲ್ ಭಂಡಾರವಾಗಿದೆ. ಎಲ್ಲ ಕತೆಗಳು ಮುಕ್ತ ಪರವಾನಗಿ ಅಡಿ ಲಭ್ಯ. ಉಚಿತವಾಗಿ ಓದಬಹುದು, ಡೌನಲೋಡ್ ಮಾಡಿಕೊಳ್ಳಬಹುದು. ಕತೆ ರಚಿಸಬಹುದು, ಅನುವಾದಿಸಿಬಹುದು, ಪ್ರಿಂಟ್ ಮಾಡಿಕೊಳ್ಳಬಹುದು. ಸ್ಟೋರಿ ವೀವರ್ ನಲ್ಲಿ 259 ಭಾಷೆಗಳಲ್ಲಿ 23,000ಕ್ಕೂ ಹೆಚ್ಚು ಕತೆಗಳಿವೆ.

ಕೋವಿಡ್-19 ಸಮಯದಲ್ಲಿ ಡಿಜಿಟಲ್ ಕಲಿಕಾ ಸಂಪನ್ಮೂಲಗಳಿಗೆ ಬೇಡಿಕೆ ಹೆಚ್ಚಾದಾಗ ಪ್ರಥಮ್ ಬುಕ್ಸ್ ಅದಕ್ಕೆ ಸ್ಪಂದಿಸಿತು. ಕಡಿಮೆ ಸಂಪನ್ಮೂಲಗಳಲ್ಲೇ ಲರ್ನ್ ಅಟ್ ಹೋಮ್ ಪ್ರೋಗ್ರಾಂ, ಆಡಿಯೋ-ವಿಡಿಯೋ ಪುಸ್ತಕಗಳು ಮತ್ತು ಟೋಲ್-ಫ್ರೀ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಆಯ್ದ ಭಾಷೆಯಲ್ಲಿ ಮಕ್ಕಳು ಕತೆ ಕೇಳಬಹುದಾದ ಡಯಲ್-ಎ-ಸ್ಟೋರಿ, ಮಿಸ್ ಕಾಲ್ ಕೊಡಿ, ಕತೆ ಕೇಳಿ ಕಾರ್ಯಕ್ರಮಗಳನ್ನು ರೂಪಿಸಿತು.

ಇದಲ್ಲದೆ, ಕೇವಲ ನಾಲ್ಕು ತಿಂಗಳಲ್ಲಿ, ಸ್ಟೋರಿವೀವರ್ 28 ಹೊಸ ಭಾಷೆಗಳಲ್ಲಿ ಕೊರೊನಾ ವೈರಸ್, ಆರೋಗ್ಯ ಮತ್ತು ನೈರ್ಮಲ್ಯ ಮತ್ತು ಸಾಮಾಜಿಕ ಮತ್ತು ಭಾವನಾತ್ಮಕ ವಿಷಯಗಳ ಕುರಿತಾದ ಪುಸ್ತಕಗಳು ಸೇರಿದಂತೆ 3,000 ಪುಸ್ತಕಗಳನ್ನು ಅನುವಾದಿಸಿದೆ. ವಿಶ್ವಬ್ಯಾಂಕ್ ಮತ್ತು ಯುನೆಸ್ಕೋ ಕೊರೊನಾ ಸಮಯದಲ್ಲಿ ಮನೆಯಲ್ಲಿರುವ ಮಕ್ಕಳಿಗಾಗಿ ತಯಾರಿಸಿದ ಕಲಿಕಾ ಸಂಪನ್ಮೂಲಗಳ ಪಟ್ಟಿಯಲ್ಲಿ ಸ್ಟೋರಿವೀವರ್ ಕೂಡ ಇದೆ.

“ಈ ಪ್ರತಿಷ್ಠಿತ ಪುರಸ್ಕಾರದ ಗೌರವವನ್ನು ನಮಗೆ ನೀಡುತ್ತಿರುವುದಕ್ಕೆ ನಾವು ಆಭಾರಿಗಳಾಗಿದ್ದೇವೆ. ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಮಕ್ಕಳಿಗೆ ಕತೆ ಪುಸ್ತಕಗಳ ಮೂಲಕ ಓದಿನ ಖುಷಿಯನ್ನು ಹಂಚುವ ನಮ್ಮ ಪ್ರಯತ್ನಕ್ಕೆ ಸಂದ ಪುರಸ್ಕಾರ ಎಂದು ಭಾವಿಸುತ್ತೇವೆ.” ಸುಝೇನ್ ಸಿಂಘ್, ಮುಖ್ಯಸ್ಥೆ, ಪ್ರಥಮ್ ಬುಕ್ಸ್

ಪ್ರಥಮ್‌ ಬುಕ್ಸ್‌ ಬಗ್ಗೆ

ಪ್ರಥಮ್‌ ಬುಕ್ಸ್‌ ಲಾಭಾಪೇಕ್ಷೆ ಇಲ್ಲದ ಮಕ್ಕಳ ಪ್ರಕಾಶನ ಸಂಸ್ಥೆಯಾಗಿದ್ದು, ೨೦೦೪ರಲ್ಲಿ ‘ಪ್ರತಿ ಮಗುವಿನ ಕೈಯಲ್ಲೊಂದು ಪುಸ್ತಕ’ ಎಂಬ ಧ್ಯೇಯವಾಕ್ಯದೊಂದಿಗೆ ಸ್ಥಾಪನೆಗೊಂಡಿತು. ಪ್ರಮುಖವಾಗಿ ಗುಣಮಟ್ಟದ ಮಕ್ಕಳ ಕತೆ ಪುಸ್ತಕಗಳನ್ನು ಬಹುಭಾಷೆಗಳಲ್ಲಿ ಕಡಿಮೆ ಬೆಲೆಯಲ್ಲಿ ಕೈಗೆಟಕುವಂತೆ ಮಾಡುವುದು, ಈ ಮೂಲಕ ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಉತ್ತೇಜಿಸುವುದು ಇದರ ಉದ್ದೇಶ.

ಆರಂಭದಿಂದ ಈವರೆಗ ೨೨ ಸಾವಿರ ಭಾಷೆಗಳಲ್ಲಿ ೪೦೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಥಮ್‌ ಬುಕ್ಸ್‌ ಪ್ರಕಟಿಸಿದೆ. ಪುಟಾಣಿಗಳಿಗಾಗಿ ಪುಸ್ತಕಗಳನ್ನು ಒಳಗೊಂಡಂತೆ, ಕತೆ, ಕಾಲ್ಪನಿಕ ಕತೆ, ವಿಜ್ಞಾನ, ಇತಿಹಾಸ, ಗಣಿತ ಮತ್ತು ಪರಿಸರಕ್ಕೆ ಸಂಬಂಧಿಸಿದ ಕತೆಗಳನ್ನು ಈ ಪುಸ್ತಕಗಳ ಮೂಲಕ ಹೇಳಲಾಗುತ್ತಿದೆ. ಪ್ರಥಮ್‌ ಬುಕ್ಸ್‌ ಇಂತಹ ಪುಸ್ತಗಳಿಗಾಗಿ ಪ್ರಖ್ಯಾತ ಲೇಖಕರು ಹಾಗೂ ಚಿತ್ರಕಾರರೊಂದಿಗೆ ಕೆಲಸ ಮಾಡಿದ್ದು, ಅವರ ಹಲವು ಪುಸ್ತಕಗಳು ಪ್ರಶಸ್ತಿಗಳನ್ನು ಪಡೆದಿವೆ.

ತಂತ್ರಜ್ಞಾನದ ಶಕ್ತಿಯನ್ನು ಮನಗಂಡ ಪ್ರಥಮ್‌ ಬುಕ್ಸ್‌, ಸ್ಟೋರಿವೀವರ್‌ (www.storyweaver.org.in) ಎಂಬ ಡಿಜಿಟಲ್‌ ಜಾಲತಾಣವನ್ನು ಲೋಕಾರ್ಪಣೆ ಮಾಡಿತು. ಈ ಮೂಲಕ ಸಹಸ್ರಾರು ಬಹುಭಾಷೀಯ ಕತೆ ಪುಸ್ತಕಗಳನ್ನು ಉಚಿತವಾಗಿ ಯಾರು ಬೇಕಾದರೂ ನೋಡುವ, ಓದುವ ಸೌಲಭ್ಯ ಒದಗಿಸಿತು. ಡೊನೇಟ್‌ ಎ ಬುಕ್‌ (www.donateabook.org.in), ಎಂಬ ಕ್ರೌಡ್‌ ಫಂಡಿಂಗ್‌ ವೇದಿಕೆಯಿಂದ ದಾನಿಗಳ ನೆರವು ಪಡೆದು ಓದಿನ ಆಕರಗಳಿಲ್ಲದ ಮಕ್ಕಳಿಗಾಗಿ ಈ ಪುಸ್ತಕಗಳನ್ನು ತಲುಪಿಸುವ, ಲೈಬ್ರರಿ ವ್ಯವಸ್ಥೆಯನ್ನೂ ಕಲ್ಪಿಸುತ್ತಿದೆ.

‍ಲೇಖಕರು avadhi

September 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

ಅಣಬೆ ­ಎದ್ದವು ­ನೋಡಿ!

ಅಣಬೆ ­ಎದ್ದವು ­ನೋಡಿ!

'ಅಣಬೆ ಎಂದರೆ ಪಂಚಪ್ರಾಣ' ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This