‘ಪ್ರಭುತ್ವ, ಧರ್ಮ ಮತ್ತು ಜನತೆʼ

ಡಾ. ವಡ್ಡಗೆರೆ ನಾಗರಾಜಯ್ಯ

ಆತ್ಮೀಯರೇ,

ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ‘ಪ್ರಭುತ್ವ, ಧರ್ಮ ಮತ್ತು ಜನತೆʼ ಎಂಬ ಸಂಶೋಧನಾ ಗ್ರಂಥದ ಮುಖಪುಟ ಇದು. ಇದರ ಕರ್ತೃ ನನ್ನ ಆತ್ಮೀಯ ಬಂಧು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ.

ಈ ಕೃತಿಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಮುನ್ನುಡಿ ಬರೆದಿದ್ದಾರೆ. ನಾನು ಬೆನ್ನುಡಿ ಬರೆದಿದ್ದೇನೆ.‌ ಆಯ್ದ ಕೆಲವು ಸಾಲುಗಳ ಮೂಲಕ ಪ್ರಕಟಣಾ ಪೂರ್ವದಲ್ಲಿ ಈ ಗ್ರಂಥವನ್ನು ತಮಗೆ ಪರಿಚಯಿಸುತ್ತಿದ್ದೇನೆ.

ಸಮಕಾಲೀನ ಸಾಮಾಜಿಕ ಸಂದರ್ಭದ ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ಅಸ್ಮಿತೆಗಳನ್ನು ಶೋಧಿಸಿಕೊಳ್ಳಲು ಹಾಗೂ ವಿವರಿಸಿಕೊಳ್ಳಲು ಆಧುನಿಕ ಪೂರ್ವದ ‘ವಡ್ಡಾರಾಧನೆ’ ಮತ್ತು ‘ಧರ್ಮಾಮೃತ’ ಕೃತಿಗಳು ಸಂವೇದನಾಶೀಲ ವ್ಯಕ್ತಿತ್ವದ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರನ್ನು ಪ್ರೇರೇಪಿಸಿದ ಬಗೆಗಳನ್ನು ಈ ಅಧ್ಯಯನವು ಸಶಕ್ತವಾಗಿ ತೋರಿಸಿಕೊಟ್ಟಿದೆ.

ಎರಡು ಪ್ರಾಚೀನ ಪಠ್ಯಗಳನ್ನು ಕೇಂದ್ರದಲ್ಲಿರಿಸಿಕೊಂಡು ಕೈಗೊಂಡಿರುವ ಈ ಅಧ್ಯಯನದ ಚಿಂತನೆಗಳು ದೇಶ ಮತ್ತು ಕಾಲದಾಚೆಗೂ ಹರಿದಿವೆ. ಹತ್ತು ಶತಮಾನಗಳ ಹಿಂದಿನ ಪಠ್ಯಗಳನ್ನು ಸಮಕಾಲೀನ ತಲ್ಲಣಗಳಿಗೆ ಉತ್ತರ ಹುಡುಕಿಕೊಳ್ಳಲು ಮುಖಾಮುಖಿಗೊಳಿಸುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಅಸಾಧಾರಣ ಪ್ರಯತ್ನದಲ್ಲಿ ಸಂಶೋಧಕರ ಶಿಸ್ತು, ಶ್ರದ್ಧೆ ಮತ್ತು ಸಂಯಮಗಳು ಅನಾವರಣಗೊಳ್ಳುತ್ತಲೇ ಸಂಶೋಧಕರ ವಿದ್ವತ್ಪೂರ್ಣ ಪ್ರತಿಭೆಯೂ ಸಾಬೀತಾಗಿದೆ.

ಪಠ್ಯಗಳು ಪ್ರಾಚೀನವಾಗಿದ್ದರೂ, ಅವು ರೂಪಿಸಿಕೊಂಡಿರುವ ಸಮಾಜೋಧಾರ್ಮಿಕ ಮತ್ತು ರಾಜಕೀಯ ಪಾಠಗಳು ಇಂದಿಗೂ ತಮ್ಮ ಅಸ್ಥಿತ್ವವನ್ನು ಉಳಿಸಿಕೊಂಡು ಚಲನಶೀಲವಾಗಿವೆ ಎಂಬುದನ್ನು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಪ್ರಭುತ್ವ, ಧರ್ಮ ಮತ್ತು ಜನತೆಯ ಅಂತರ್ ಸಂಬಂಧಗಳ ಸ್ವರೂಪವನ್ನು ಸಮಕಾಲೀನ ಪ್ರಜಾಪ್ರಭುತ್ವದ ಆಶಯಗಳೊಂದಿಗಿರಿಸಿ ವಿಶ್ಲೇಷಿಸುವ ಮೂಲಕ ತೋರಿಸಿ ಕೊಟ್ಟಿದ್ದಾರೆ.

ಪ್ರೊ. ಪುರುಷೋತ್ತಮ ಬಿಳಿಮಲೆ

ಕನ್ನಡ ಅಭಿಜಾತ ಕೃತಿಗಳು ತಮ್ಮದೇ ಆದ ರೀತಿಯ ಸಾಂಸ್ಕೃತಿಕ ಲೋಕದಲ್ಲಿ ವಿಹರಿಸುತ್ತವೆ ಮತ್ತು ಮಾನವನ ಅಸ್ತಿತ್ವದ ಕುರಿತು ಭಿನ್ನವಾದ ನೋಟಗಳನ್ನು ಪ್ರಕಟಪಡಿಸುತ್ತವೆ. ಪ್ರತಿಯೊಂದು ಅಭಿಜಾತ ಕಥನವೂ ಮಾನವನು ಈ ವಿಶ್ವದಲ್ಲಿ ಯಾಕಿದ್ದಾನೆ ಎಂಬ ದೊಡ್ಡ ಪ್ರಶ್ನೆಯನ್ನು ಎತ್ತುವುದರ ಮೂಲಕ ಅಧ್ಯಾತ್ಮಿಕ ಮತ್ತು ಧಾರ್ಮಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಜೊತೆಗೆ ಮಾನವನು ಇತರ ಜೀವಿಗಳೊಡನೆ ಮುಖ್ಯವಾಗಿ ಸಹಮಾನವನೊಡನೆ ಯಾವ ಬಗೆಯ ಸಂಬಂಧಗಳನ್ನು ಹೊಂದಿರಬೇಕು ಎಂಬ ಸಣ್ಣ ಸಣ್ಣ ಪ್ರಶ್ನೆಗಳನ್ನೂ ಎತ್ತುವುದರ ಮೂಲಕ ಲೌಕಿಕವೂ ಆಗುತ್ತದೆ.

ಈ ನಿಟ್ಟಿನಲ್ಲಿ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಪ್ರಸ್ತುತ ಪುಸ್ತಕದಲ್ಲಿ ವಿವರಿಸಲು ಆಯ್ದುಕೊಂಡ ಪ್ರಭುತ್ವ, ಧರ್ಮ, ವಣಿಕರು, ಬಡವರು, ಕಳ್ಳರು, ಹೆಂಗಸರು, ಸನ್ಯಾಸಿಗಳು, ಕರ್ಮ, ವೀರತ್ವ, ಪುನರ್ಜನ್ಮ ಮತ್ತಿತರ ವಿಷಯಗಳ ಬಗ್ಗೆ ಕನ್ನಡದ ಅಭಿಜಾತ ಕೃತಿಗಳು ಎತ್ತುವ ಅತ್ಯಂತ ಮಹತ್ವದ ಪ್ರಶ್ನೆಗಳಿಗೆ ನಾವಿಂದು ಗಂಭೀರವಾಗಿ ಮುಖಾಮುಖಿಯಾಗಬೇಕಿದೆ. ಈ ಕೆಲಸವನ್ನು ಪ್ರಸ್ತುತ ಕೃತಿಯಲ್ಲಿ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಸಮರ್ಥವಾಗಿ ಮಾಡಿದ್ದಾರೆ.

‍ಲೇಖಕರು Avadhi

January 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This