‘ಪ್ರವಾ’ ಪ್ರಸರಣ ಹೆಚ್ಚಾಗಿದ್ದು…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ಬಯಸದೇ ಬಂದ ಬಡ್ತಿಯನ್ನು ಒಂದು ಸವಾಲಾಗಿ ಸ್ವೀಕರಿಸುವುದು ಅಥವಾ ತಿರಸ್ಕರಿಸಿ ಸೇವಾಹಿರಿತನದಲ್ಲಿ ನನಗಿಂತ ಕಿರಿಯರಾದವರ ಅಥವಾ ಬೇರೊಬ್ಬರ ಅಧೀನದಲ್ಲಿ ಕೆಲಸ ಮಾಡುವುದು ಇವೆರಡೇ ನನಗಿದ್ದ ಮಾರ್ಗಗಳು. ನನಗೆ ಇನ್ನೂ ಆರು ವರ್ಷಗಳ ಸೇವಾ ಅವಕಾಶವಿತ್ತು. ಬಹಳ ಯೋಚನೆಯ ನಂತರ ಒಂದು ಸವಾಲಾಗಿಯೇ ಬಡ್ತಿಯನ್ನು ಸ್ವೀಕರಿಸಿದೆ.

ಹೊಸ ಪೀಳಿಗೆಯ ವರದಿಗಾರರು/ಉಪ ಸಂಪಾದಕರುಗಳಲ್ಲಿ ಬಹಳ ಮಂದಿಗೆ ನನಗೆ ಬಡ್ತಿ ನೀಡಿದ್ದು ಪ್ರಿಯವಾದ ವಿಷಯವಾಗಿರಲಿಲ್ಲ ಎನ್ನುವುದು ಬಲು ಬೇಗ ವ್ಯಕ್ತಗೊಂಡಿತು. ಅವರಲ್ಲಿ, ಕೆಲವರಲ್ಲಿ  ವಿರೋಧ, ಅಸಹನೆಗಳು ಇದ್ದವು. ವಿರೋಧ ಸಕಾರಣವಾಗಿರಲಿಲ್ಲ. ಏಕೆಂದರೆ ಸೇವಾ ಹಿರಿತನದಲ್ಲಿ ನಾನು ಅವರೆಲ್ಲರಿಗಿಂತ ಹಿರಿಯನಾಗಿದ್ದೆ. ನನ್ನ ಬಡ್ತಿಯಿಂದ ಅವರ್ಯಾರಿಗೂ ಅನ್ಯಾಯವಾಗಿರಲಿಲ್ಲ. ವಿರೋಧ, ಅಸಹನೆಗಳಿಗೆ ಬೇರೆಯೇ ಕಾರಣ ಇದ್ದಿರಬಹುದು. ಆದರೆ ನಾನು ಆ ಬಗ್ಗೆ ಯೋಚಿಸಲು ಹೋಗಲಿಲ್ಲ.

ಪತ್ರಿಕೆಯ ಗುಣಮಟ್ಟ ಹೆಚ್ಚಿಸುವುದು ಹೇಗೆ? ಪತ್ರಿಕೆಯ ಪ್ರಸರಣ ಹೆಚ್ಚಿಸುವುದು ಹೇಗೆ? ಯಾವ ಯಾವ ಪ್ರದೇಶದಲ್ಲಿ ‘ಪ್ರವಾ’ ಪ್ರಸರಣದಲ್ಲಿ ದುರ್ಬಲವಾಗಿದೆ. ಇದಕ್ಕೆ ಕಾರಣಗಳೇನು? ಎಂದೆಲ್ಲ ಯೋಚಿಸಿ ಈ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು ಹಮ್ಮಿಕೊಂಡೆ. ಕೆಲವೆಡೆ ಆ ಪ್ರದೇಶದ ಸುದ್ದಿಗಳು ಸಮರ್ಪಕವಾಗಿ ‘ಬರುತ್ತಿಲ್ಲ’ ಎಂಬ ದೂರು ಕಾರಣವಾಗಿತ್ತು.

ಇನ್ನು ಕೆಲವು ಪ್ರದೇಶಗಳಲ್ಲಿ ಪತ್ರಿಕೆ ತಡವಾಗಿ ತಲುಪುವುದು ಕಾರಣವಾಗಿತ್ತು. ಕೆಲವೊಂದು ವರ್ಗದ ಓದುಗರಲ್ಲೂ ಪತ್ರಿಕೆ ಬಗ್ಗೆ ಅತೃಪ್ತಿ ಇತ್ತು. ಮಾಮೂಲಿನ ಸುದ್ದಿಗಳ ಜೊತೆಗೆ ವಾಣಿಜ್ಯ-ಉದ್ಯಮ, ಕ್ರೀಡೆ, ವಿಜ್ಞಾನ, ಪರಿಸರ, ಫ್ಯಾಶನ್ ಮೊದಲಾದ ವಿವಿಧ ಜ್ಞಾನ ಶಾಖೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವರದಿಯಾಗುತ್ತಿಲ್ಲ, ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ ಇತ್ಯಾದಿ ಅತೃಪ್ತಿಗಳು. ಆಗ ಸಾಮಾನ್ಯವಾಗಿ ಪ್ರತಿದಿನ ‘ಪ್ರವಾ’ ಎಂಟು ಪುಟಗಳ ಸಂಚಿಕೆಯಾಗಿರುತ್ತಿತ್ತು.

ಜಾಹೀರಾತಿನ ಒತ್ತಡ ಹೆಚ್ಚಿದ್ದಾಗ, ಅಂದರೆ ಹಬ್ಬ ಸಾಲಿನಲ್ಲಿ ಹತ್ತು ಪುಟಗಳ ಸಂಚಿಕೆಯಾಗಿರುತ್ತಿತ್ತು. ಪತ್ರಿಕೆಯಲ್ಲಿ ಶೇ.60ರಷ್ಟು ಸ್ಥಳ ಸುದ್ದಿಗೆ, ಶೇ.40ರಷ್ಟು ಸ್ಥಳ ಜಾಹೀರಾತಿಗೆ ಎಂಬುದು ಅಂಗೀಕೃತ ದಾಮಾಷಾ ಆಗಿತ್ತು. ಎಂಟು ಪುಟಗಳಲ್ಲಿ ಶೇ.40ರಷ್ಟು ಜಾಹೀರಾತು ಹೋಗಿ ಉಳಿದ ಶೇ.60ರಲ್ಲಿ  ದೈನಂದಿನ ಬಿಸಿಬಿಸಿ ಸುದ್ದಿಗಳಿಗೇ ಜಾಗ ಸಾಲುತ್ತಿರಲಿಲ್ಲ. ಇನ್ನು ಅಕೆಡಮಿಕ್ ಸ್ವರೂಪದ ಈ ವಿಶೇಷ ಸುದ್ದಿ/ಲೇಖನಗಳಿಗೆ ಸ್ಥಳಾವಕಾಶವೆಲ್ಲಿ? ಓದುಗರು ಬಯಸುತ್ತಿದ್ದ ಇವುಗಳನ್ನು ನೀಡಲು ‘ಜಾಗದ’ ಕೊರತೆ ಒಂದು ಕಾರಣವಾದರೆ, ಕ್ರೀಡೆ, ವಿಜ್ಞಾನ, ವಾಣಿಜ್ಯ ಇಂಥ ವಿಷಯಗಳಲ್ಲಿ ನುರಿತ ಪತ್ರಕರ್ತರ ಕೊರತೆ ಮತ್ತೊಂದು ಕಾರಣವಾಗಿತ್ತು.

ಕ್ರೀಡೆ, ವಿಜ್ಞಾನ, ವಾಣಿಜ್ಯ ಮೊದಲಾದ ವಿಷಯಗಳಲ್ಲಿ ಪರಿಣಿತ ಸಿಬ್ಬಂದಿ ಇರಲಿಲ್ಲವೆಂದಲ್ಲ. ಕ್ರೀಡೆ ಹೊರತಾಗಿ ಈ ವಿಭಾಗಗಳಲ್ಲಿ ಒಬ್ಬೊಬ್ಬರೇ ಇದ್ದರು. ಅವರಿಗೆ ದೈನಂದಿನ ವರದಿಗಾರಿಕೆಯೇ ಸಾಕಾಗುತ್ತಿತ್ತು. ಕ್ರೀಡಾ ವಿಭಾದಲ್ಲಿ  ಮೂರು ಜನ ಇದ್ದರು. ಓದುಗರು ಬಯಸುವ ವಿಶೇಷ ಮಾಹಿತಿಗಳನ್ನು ನೀಡಲು ಹೆಚ್ಚಿನ ಪುಟಗಳು ಹಾಗೂ ಹೆಚ್ಚಿನ ‘ಜನಶಕ್ತಿ’ಯ ಅಗತ್ಯವಿತ್ತು.

ಈ ಕೊರತೆಗಳನ್ನು ಸರಿಪಡಿಸಲು ಕೆಲವು ಉಪಾಯಗಳು ಹೊಳೆದವು. ಮೊದಲನೆಯದಾಗಿ ಎಲ್ಲೆಲ್ಲಿ ಸುದ್ದಿಗಳು ಸಮರ್ಪಕವಾಗಿ ಪ್ರಕಟವಾಗುತ್ತಿಲ್ಲ ಎಂಬ ದೂರಿದೆಯೋ ಅಲ್ಲೆಲ್ಲ ಸಮರ್ಥ ವರದಿಗಾರರಿಂದ ಸುದ್ದಿ ಜಾಲವನ್ನು ಬಲಪಡಿಸಿ ಸಕಾಲದಲ್ಲಿ ವರದಿಗಳು ಪ್ರಕಟವಾಗುವಂತೆ ಮಾಡುವುದು. ವಾಣಿಜ್ಯ, ವಿಜ್ಞಾನ, ಕ್ರೀಡೆ, ಕೃಷಿ ಇತ್ಯಾದಿಗಳಲ್ಲಿ ಓದುಗರಿಗಿರುವ ಜ್ಞಾನದಾಹವನ್ನು ಇಂಗಿಸಲು ಪ್ರತ್ಯೇಕ ಪುರವಣಿಗಳನ್ನು ಪ್ರಕಟಿಸುವುದು ವಿಹಿತವೆನಿಸಿತು.

ಆಗ ಶುಕ್ರವಾರ ಸಿನಿಮಾ ರಂಜನೆ ಪುರವಣಿ ಮಾತ್ರ ಬರುತ್ತಿತ್ತು. ವಾರದ ಮಿಕ್ಕ ದಿನಗಳಲ್ಲಿ ಒಂದೊಂದು ಪುರವಣಿ ಪ್ರಕಟಿಸುವ ಹಾಗೂ ಹೆಚ್ಚು ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾದ ಅವಶ್ಯಕತೆಯನ್ನು ಬಿಂಬಿಸುವ ಯೋಜನಾ ವರದಿಯೊಂದನ್ನು ಪ್ರಧಾನ ಸಂಪಾದಕರೂ ಆಗಿದ್ದ ಮ್ಯಾನೇಜಿಂಗ್ ಡೈರೆಕ್ಟರ್ ಅವರಿಗೆ ಸಲ್ಲಿಸಿದೆ.

‘ಪ್ರವಾ’ ಗುಣಮಟ್ಟ ಸುಧಾರಣೆ ಮತ್ತು ಪ್ರಸಾರ ಹೆಚ್ಚಿಸಬೇಕಾದ್ದು ನಾನು ಮೊದಲು ಎದುರಿಸಿದ ಸವಾಲುಗಳು. ಇದಕ್ಕಾಗಿ ನಾನು ಸಲ್ಲಿಸಿದ ಯೋಜನೆಗಳಿಗೆ ಪ್ರಧಾನ ಸಂಪಾದಕರಾದ ಶ್ರೀ ಹರಿಕುಮಾರ್ ಅವರು ಸಂಪೂರ್ಣ ಅನುಮೋದನೆ ನೀಡಿದರು. ಜೊತೆಗೆ ಬಹಳ ದಿನಗಳಿಂದ ನನೆಗುದಿ ಬಿದ್ದಿದ್ದ ಜಿಲ್ಲಾ ಆವೃತ್ತಿಗಳನ್ನು ಪ್ರಾರಂಭಿಸುವಂತೆ ಆದೇಶಿಸಿದರು. ಜಿಲ್ಲಾ ಆವೃತ್ತಿಗಳೆಂದರೆ, ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದು ಪುಟ ಮೀಸಲಿಡುವುದು. ಆ ಪುಟದಲ್ಲಿ ಆ ಜಿಲ್ಲೆಯ ಸುದ್ದಿಗಳು ಮಾತ್ರ ಬರತಕ್ಕದ್ದು. ಇದರಿಂದ ‘ನಮ್ಮಸುದ್ದಿ ಬರಲಿಲ್ಲ’ ಎಂಬ ದೂರು ಸ್ವಲ್ಪವಾದರೂ ಕಮ್ಮಿಯಾದೀತು ಎನ್ನುವುದು ನಮ್ಮ ಆಸೆಯಾಗಿತ್ತು.

ಪ್ರಧಾನ ಸಂಪಾದಕರ ಆದೇಶದಂತೆ ಜಿಲ್ಲಾ ಆವೃತ್ತಿಗಳನ್ನು ಪ್ರಾರಂಭಿಸಿದೆ. ನಿಂತು ಹೋಗಿದ್ದ ಜಿಲ್ಲಾ ವಾರ್ತ ಪತ್ರ ಅಂಕಣವನ್ನು ಪುನರಾರಂಭಿಸಿದೆ. ಜಿಲ್ಲೆಯ ವರದಿಗಾರರು ಕಡ್ಡಾಯವಾಗಿ ವಾರಕ್ಕೊಮ್ಮೆ ಜಿಲ್ಲಾ ವಾರ್ತಾ ಪತ್ರ ಬರೆಯಬೇಕೆಂದು ಸೂಚಿಸಲಾಯಿತು. ಮಂತ್ರಿ ಮಹೋದಯರು, ಅಧಿಕಾರಗಳು ಒಳಗೊಂಡಂತೆ ರಾಜಧಾನಿಯ ಓದುಗರಿಗೂ ಜಿಲ್ಲೆಗಳ ಆಗು ಹೋಗುಗಳ ತಿಳಿವಳಿಕೆ ಅಗತ್ಯವೆನಿಸಿದ್ದರಿಂದ ಜಿಲ್ಲಾ ವಾರ್ತಾ ಪತ್ರಗಳು ಎಲ್ಲ ಮುದ್ರಣಗಳಿಗೂ ಹೋಗತಕ್ಕದ್ದೆಂದು ನಿರ್ಧರಿಸಿ ಮುದ್ರಣದ ಹೊಣೆ ಹೊತ್ತ ಮುಖ್ಯ ಉಪಸಂಪಾದಕರುಗಳಿಗೆ ‘ಜಿವಾಪ’ಗಳನ್ನು ಎಲ್ಲ ಮುದ್ರಣಗಳ ಪುಟದಲ್ಲಿ ತೆಗೆದುಕೊಳ್ಳುವಂತೆ ತಾಕೀತು ಮಾಡಲಾಯಿತು. ಪಿ ವಿ ನರಸಿಂಹರಾಯರು ಪ್ರಾರಂಭಿಸಿದ ಸಂಸದರ ನಿಧಿ (ಎಂಪೀಸ್ ಲೋಕಲ್ ಏರಿಯಾ ಡೆವಲಪ್‌ಮೆಂಟ್ ಫಂಡ್) ಏನಾಯಿತು? ಮೊದಲಾದ ತನಿಖಾ ವರದಿಗಳ ಪ್ರಕಟಣೆ ಆರಂಭಿಸಿದೆ.

ಆಡಳಿತ ಮಂಡಳಿಗೆ ಸಲ್ಲಿಸಿದ ಯೋಜನೆಗಳಿಗೆ ಒಮ್ಮೆಗೇ ಅನುಮೋದನೆ ದೊರೆಯಲಿಲ್ಲ. ‘ಒನ್ ಅಟ್ ಎ ಟೈಂ’ ಎನ್ನುವಂತೆ ಕ್ರಮೇಣ ಅನುಮೋದನೆ ದೊರೆಯಿತು. ಮೊದಲಿಗೆ ವಾಣಿಜ್ಯ ಪುರವಣಿ ಶುರುವಾಯಿತು. ನಂತರ ಕ್ರೀಡಾ ಪುರವಣಿ, ವಿಜ್ಞಾನ.. ಹೀಗೆ ಪ್ರತಿ ದಿನ ಒಂದೊಂದು ಪುರವಣಿಯನ್ನು ನಿತ್ಯದ ಸಂಚಿಕೆಯೊಂದಿಗೆ ನಮ್ಮ ಓದುಗರಿಗೆ ಕೊಡುವುದು ಸಾಧ್ಯವಾಯಿತು. ಇದರ ಪರಿಣಾಮ ಫಲಶೃತಿಯೂ ಓದುಗರಿಂದ ಲಭ್ಯವಾಯಿತು.

ವಾಣಿಜ್ಯ ಪುರವಣಿ ಓದಿದಿ ನಂತರ ‘ಕುಡಿಕೆಯಲ್ಲಿ ಕೂಡಿಟ್ಟಿದ್ದ ಹಣವನ್ನು’ ಮ್ಯೂಚುಯಲ್ ಫಂಡ್ ಇತ್ಯಾದಿಗಳಲ್ಲಿ ಹೂಡಿ ಲಾಭ ಪಡೆಯುತ್ತಿರುವುದಾಗಿ ಗ್ರಾಮೀಣ ಜನರು ಪತ್ರ ಬರೆದರು. ಕ್ರೀಡಾ ಪುರವಣಿ ಯುವಜನತೆಯಲ್ಲಿ ಖುಷಿ ಉಂಟುಮಾಡಿತ್ತು. ಪತ್ರಿಕೆ ಪ್ರಸರಣವೂ ಮೂರು ಲಕ್ಷ ದಾಟಿತು.

ಕರ್ನಾಟಕ ಕಲೆ ಸಂಸ್ಕೃತಿಗಳ ಬೀಡು. ಕರ್ನಾಟಕದ ಮೂಲೆ ಮೂಲೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ಪ್ರಕಟಣೆ/ಪ್ರಚಾರಗಳು ಸಿಗುತ್ತಿಲ್ಲ. ಒಂದು ಭಾಗದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತೊಂದು ಭಾಗದವರಿಗೆ ಗೊತ್ತಾಗುತ್ತಿಲ್ಲ ಎನ್ನುವುದು ಬಹಳ ದಿನಗಳಿಂದ ಕೇಳಿ ಬರುತ್ತಿದ್ದ ದೂರು. ಇದಕ್ಕೆ ಸ್ವಲ್ಪಮಟ್ಟಿಗಾದರೂ ಪರಿಹಾರ ನೀಡಲು ಪ್ರತಿ ಭಾನುವಾರ ‘ಕಲಾರಂಗ’ ಪುಟ ಪ್ರಾರಂಭಿಸಲು ನಿರ್ಧರಿಸಿದೆ. (ಕಲಾರಂಗ ಎಂಬ ಅಂಕಣ ಈ ವೇಳೆಗೆ ಭಾನುವಾರ ಪ್ರಕಟವಾಗುತ್ತಿತ್ತು. ಅದು ಕಲೆ/ಸಂಗೀತ ಹಾಗೂ ನಾಟಕ ವಿಮರ್ಶೆಗಳಿಗೆ ಒಂದು ಕಾಲಮ್ಮಿಗೆ, ಬೆಂಗಳೂರು ಆವೃತ್ತಿಗೆ ಸೀಮಿತವಾಗಿತ್ತು). ಇದನ್ನು ಒಂದು ಪುಟಕ್ಕೆ ವಿಸ್ತರಿಸಿ ಎಲ್ಲ ಓದುಗರಿಗೆ ಲಭ್ಯವಾಗುವಂತೆ ಮಾಡಲು ಯೋಚಿಸಿದೆ.

ರಾಜ್ಯಾದ್ಯಂತ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳ ವರದಿ ವಿಶೇಷಗಳನ್ನು ನಾಡಿನ ಎಲ್ಲ ಜನತೆಗೂ ಲಭ್ಯವಾಗಿಸುವ ಉದ್ದೇಶದಿಂದ ಕಲಾ ರಂಗಕ್ಕೆ ಒಂದು ಪುಟ ಮೀಸಲಿಟ್ಟು, ಪ್ರೊ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ‘ಚಹಾದ ಜೋಡಿ ಚೂಡಾಧಾಂಗ’, ವೀರಣ್ಣ ದಂಡೆಯವರ ‘ಕಲಬುರ್ಗಿ ಕಲರವ’, ನಾ. ದಾಮೋದರ ಶೆಟ್ಟಿಯವರ ‘ತೆಂಕಣದ ಸುಳಿಗಾಳಿ’, ಡಾ. ಶ್ರೀಧರ ಅವರ ‘ಟಿ ವಿ ಲೋಕ’ ಮೊದಲಾದ ಅಂಕಣಗಳ ಪ್ರಕಟಣೆ ಪ್ರಾರಂಭಿಸಿದೆ. ಸಂಪಾದಕೀಯ ಪುಟ ಭಾನುವಾರದಂದು ‘ಕಲಾರಂಗ’ ಪುಟವಾಯಿತು. ಇದರಿಂದ ಬೆಂಗಳೂರಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ವರದಿಯಾಗುತ್ತವೆ ಎನ್ನುವ ಆ ಆಪಾದನೆಯಿಂದ ‘ಪ್ರವಾ’ ಮುಕ್ತವಾಯಿತು. ಈ ಅಂಕಣಗಳು ಜನಪ್ರಿಯವಾದವು.

ವೃತ್ತ ಪತ್ರಿಕೆಗಳ ಆಡಳಿತ ಸ್ವರೂಪವೂ ಬದಲಾದುದರಿಂದ ಸಂಪಾದಕನಿಗೆ ಪತ್ರಿಕೆಯ ಹೊಣೆಗಾರಿಕೆ ಜೊತೆಗೆ ಕೆಲವು ಆಡಳಿತಾತ್ಮಕ ಜವಾಬ್ದಾರಿಗಳೂ ಬಂದು ಅಂಟಿಕೊಂಡಿದ್ದವು. ಅವುಗಳಲ್ಲಿ ಮುಖ್ಯವಾದುದು ಸಂಪಾದಕೀಯ ವಿಭಾಗದ ವಾರ್ಷಿಕ  ಬಜೆಟ್ಟನ್ನು ತಯಾರಿಸುವುದು. ಈ ಬಜೆಟ್‍ನಲ್ಲಿ ಸಂಪಾದಕೀಯ ವಿಭಾಗದ ಮಾಮೂಲು ಖರ್ಚುವೆಚ್ಚಗಳ ಜೊತೆಗೆ ದೀಪಾವಳಿ/ಯುಗಾದಿ ಸಂಚಿಕೆಗಳ ಅಂದಾಜು ವೆಚ್ಚದ ಒಂದು ನಿರ್ದಿಷ್ಟ ಮೊತ್ತವನ್ನು ನಮೂದಿಸಬೇಕಿತ್ತು. ಪ್ರತ್ಯೇಕವಾಗಿ ಈ ಬಾಬಿನ ವಿವರಗಳನ್ನು ನೀಡಬೇಕಿತ್ತು.

ಆ ವರ್ಷದಲ್ಲಿ ಹೊಸ ಯೋಜನೆಗಳೇನು? (ಹೊಸ ಅಂಕಣಗಳ ಆರಂಭ, ಹೆಚ್ಚಿನ ಪುಟಗಳನ್ನು ಕೊಡುವುದು, ಹೊಸ ಪುರವಣಿಗಳನ್ನು ತರುವುದು ಇತ್ಯಾದಿ) ಈ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಸಿಬ್ಬಂದಿ, ಆ ವರ್ಷದಲ್ಲಿ ನಿವೃತ್ತರಾಗುವವರ ಜಾಗಕ್ಕೆ ಹೊಸಬರನ್ನು ನೇಮಕ ಮಾಡಿಕೊಳ್ಳುವುದು ಇತ್ಯಾದಿ ಹೆಚ್ಚುವರಿ ಮಾನವ ಸಂಪನ್ಮೂಲ ಮತ್ತು ಆ ಬಾಬ್ತು ಅಂದಾಜು ವೆಚ್ಚವನ್ನೂ ನಮೂದಿಸಬೇಕಿತ್ತು. ಹೀಗೆ ನಮ್ಮಿಂದ ತಯಾರಿಸಲಾದ ಸಂಪಾದಕೀಯ ವಿಭಾಗದ ಬಜೆಟ್ಟಿನ ಮೇಲೆ ಫೈನಾನ್ಸ್ ಮ್ಯಾನೇಜರ್ ಕಣ್ಣು ಹಾಯಿಸಿ ಅದಕ್ಕೆ ಆಡಳಿತ ಮಂಡಳಿ ಮಂಜೂರಾತಿ ಪಡೆದುಕೊಳ್ಳುತ್ತಿದ್ದರು. ಈ ಬಜೆಟ್‍ಗಿಂತ ಹೆಚ್ಚು ನಾವು ಖರ್ಚುಮಾಡುವಂತಿರಲಿಲ್ಲ. ಹೀಗೆ ಆಯವ್ಯಯ ಮಂಡನೆಯೂ ಸಂಪಾದಕನ ತಲೆಗೆ ಕಟ್ಟು ಬಿದ್ದು ಮಂಡೆ ಬಿಸಿಯಾಯ್ತು.

ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುವವರ ಕಾರ್ಯದಕ್ಷತೆ, ಸಾಮರ್ಥ್ಯ, ಪರಿಣತಿಗಳ ಬಗ್ಗೆ ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಪರ್ಸನಲ್ ಮ್ಯಾನೇಜರಿಗೆ ಮೌಲ್ಯಮಾಪನ ವರದಿ ಕಳುಹಿಸಬೇಕಿತ್ತು. ಅವರು ಅದನ್ನು ನಿರ್ದೇಶಕರುಗಳ ಅವಗಾಹನೆಗೆ ಕಳುಹಿಸುತ್ತಿದ್ದರು. ಎಚ್ ಆರ್ ವಿಭಾಗದವರು ಇದಕ್ಕಾಗಿಯೇ ನಾಲ್ಕು ಪುಟಗಳ ಒಂದು ಫಾರ್ಮ್ ಸಿದ್ಧಪಡಿಸಿ ಕಳುಹಿಸುತ್ತಿದ್ದರು. ಅದರಲ್ಲಿ ನೂರೆಂಟು ಕಾಲಂಗಳು. ವರದಿಗಾರರು/ಉಪಸಂಪಾದಕರುಗಳ ಮೌಲ್ಯಮಾಪನ ವರದಿಗಳನ್ನು ಮುಖ್ಯ ಉಪಸಂಪಾದಕರು/ಮುಖ್ಯ ವರದಿಗಾರರು ಬರೆದು ಸುದ್ದಿ ಸಂಪಾದಕರ ಮೂಲಕ ನನಗೆ ಕಳುಹಿಸುತ್ತಿದ್ದರು. ನಾನು ಅವುಗಳನ್ನು ಪರಾಮಾರ್ಶಿಸಿ ಅದರ ಯಥಾರ್ಥತತೆಯನ್ನು ದೃಢಪಡಿಸಿ ಪರ್ಸನಲ್ ಮ್ಯಾನೇಜರಿಗೆ ರವಾನಿಸಬೇಕಿತ್ತು.

ಈ ವರದಿಗಳಲ್ಲಿ ಪೂರ್ವಾಗ್ರಹಗಳು ನುಸುಳದಂತೆ ನೋಡಿಕೊಳ್ಳುವುದೆೇಒಂದು ದೊಡ್ಡ ಹೆಣಗಾಟವಾಗುತ್ತಿತ್ತು. ಮುಖ್ಯ ಉಪಸಂಪಾದಕರು ಹಾಗೂ ಮುಖ್ಯವರದಿಗಾರರ ಮೌಲ್ಯ ಮಾಪನವನ್ನು ಸುದ್ದಿ ಸಂಪಾದಕರು ಮಾಡುತ್ತಿದ್ದರು. ಸುದ್ದಿ ಸಂಪಾದಕರು/ಸಹಾಯಕ ಸಂಪಾದಕರುಗಳ ಮೌಲ್ಯಮಾಪನ ನಾನು ಮಾಡುತ್ತಿದ್ದೆ.

ತಿಂಗಳಿಗೊಮ್ಮೆ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಇತರ ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಎಲ್ಲ ಇಲಾಖೆಗಳ ಮುಖ್ಯಸ್ಥರ ಸಭೆ ನಡೆಯುತ್ತಿತ್ತು. ಕಳೆದ ತಿಂಗಳು ಸಾಧಿಸಿಸದ ಪ್ರಗತಿ, ಎದುರಿಸಿದ ಸಮಸ್ಯೆಗಳು ಇತ್ಯಾದಿ ತಮ್ಮ ಇಲಾಖೆಯ ಆಗು ಹೋಗುಗಳನ್ನು ಕುರಿತು ಇಲಾಖೆ ಮುಖ್ಯಸ್ಥರು ತಿಂಗಳ ಮೊದಲ ವಾರದಲ್ಲಿ ವರದಿ ತಯಾರಿಸಿ ಎಂ ಡಿ ಮತ್ತು ಇತರ ನಿರ್ದೇಶಕರುಗಳಿಗೆ ಕಳುಹಿಸಬೇಕಿತ್ತು. ಸಭೆಯಲ್ಲಿ ಈ ವರದಿಗಳ ಚರ್ಚೆಯಾಗಿ, ಸಮಸ್ಯೆ/ಲೋಪಗಳಿಗೆ ಕಾರ್ಯ ಕಾರಣಗಳನ್ನು ಚರ್ಚಿಸಿ ಹೊಣೆಗಾರರನ್ನು ಗುರುತಿಸುವುದು, ಪರಿಹಾರ ಕಂಡುಕೊಳ್ಳುವುದು ತಿಂಗಳ ಸಭೆಯ ಮುಖ್ಯ ಉದ್ದೇಶವಾಗಿತ್ತು.

ಪತ್ರಿಕೆ ಹೊರಬರಬೇಕಾದರೆ ಸಂಪಾದಕೀಯ/ಮುದ್ರಣ/ಪ್ರಸರಣ ಮತ್ತು ಜಾಹೀರಾತು ಇಲಾಖೆಗಳ ನಡುವೆ ಸಾಮರಸ್ಯ ಇರಬೇಕು. ಹೊಸ ಮ್ಯಾನೇಜರುಗಳು ಬಂದ ಮೇಲೆ ಈ ಸಾಮರಸ್ಯದ ಕೊರತೆ ಕಂಡುಬಂದಿತ್ತು. ಅದರಿಂದಾಗಿ ಪತ್ರಿಕೆಯ ಗುಣಮಟ್ಟ ಹಾಗೂ ಕಾಲಮಿತಿಯಲ್ಲಿ ಕೆಲಸ ನಿರ್ವಹಿಸುವುದರ ಮೇಲೆ ಅದರ ನೆರಳು ಬಿದ್ದಿತ್ತು.

ಎಲ್ಲ ಇಲಾಖೆಯ ಚೀಫ್ ಮ್ಯಾನೇಜರುಗಳು/ಜನರಲ್ ಮ್ಯಾನೇಜರುಗಳು ತಮ್ಮ ಇಲಾಖೆಯ ಸಮಸ್ಯೆ/ಲೋಪದೋಷಗಳಿಗೆ ಸಂಪಾದಕೀಯ ವಿಭಾಗದವರೇ ಕಾರಣ ಎಂದು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದರು. ಇದರಿಂದ ಸಭೆಯಲ್ಲಿ ಬಿಸಿಬಿಸಿ ಚರ್ಚೆ ತಾರಕಕ್ಕೇರುತ್ತಿತ್ತು. ಪ್ರಧಾನ ಸಂಪಾದಕರೂ ಆದ ಮ್ಯಾನೇಜಿಂಗ್ ಡೈರೆಕ್ಟರ್ ಅವರು ನಮ್ಮ ಪರ ನಿಲ್ಲುತ್ತಿದ್ದರಿಂದ ನಾನು ಬಚಾವ್ ಆಗುತ್ತಿದ್ದೆ. ಆನಂತರ ಅವರು ನಮ್ಮ ಕೊರತೆಗಳ ಬಗ್ಗೆ ನನಗೆ ಒಂದಿಷ್ಟು ‘ಪಾಠ’ ಹೇಳುತ್ತಿದ್ದರು. (ಆಸ್ ಲಾಂಗ್ ಆಸ್ ಹರಿ ಕುಮಾರ್ ಈಸ್ ದೇರ್ ಜರ್ನಲಿಸ್ಟ್ಸ್ ಆರ್ ಸೇಫ್ ಹಿಯರ್ ಎಂದು ಸದಾಶಿವ ಹೋಗುವ ಮುನ್ನ ಹೇಳಿದ್ದು ನೆನಪಾಗುತ್ತಿದೆ).

January 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This