ಪ್ರಶ್ನೆಯೊಂದು ನನ್ನ ಕುತ್ತಿಗೆ ಪಟ್ಟಿ ಹಿಡಿದು ಜಗ್ಗಿತು..

Sandeep

ಸಂದೀಪ್ ಈಶಾನ್ಯ 

ನೆನ್ನೆ ಸಂಜೆ ಪುಸ್ತಕದ ಅಂಗಡಿಯಿಂದ ಒಂದಿಷ್ಟು ಪುಸ್ತಕಗಳನ್ನು ತಂದು ರಾತ್ರಿ ಊಟವಾದ ಮೇಲೆ ಪುಸ್ತಕಗಳ ಮೇಲೆ ಕಣ್ಣಾಡಿಸುತ್ತ ಕೂತಿರುವಾಗ ಇದ್ದಕ್ಕಿದ್ದಂತೆ ಪ್ರಶ್ನೆಯೊಂದು ನನ್ನ ಕುತ್ತಿಗೆ ಪಟ್ಟಿ ಹಿಡಿದು ಜಗ್ಗಿದಂತೆ ಮಾಡಿ, ಹೇಳು ನೀನು ಓದುತ್ತಿರುವುದು ಯಾಕೆ? ಎಂದು ಕೇಳಿತು.

ನಾನು ಓದುವುದರಿಂದ ಜ್ಞಾನ, ಬುದ್ದಿ, ತಿಳುವಳಿಕೆ ಬರುತ್ತದೆ ಅದಕ್ಕೆ ಎಂದೆ
ಓ ಹಾಗಾದರೆ ನಿನಗೆ ಈ ಮೊದಲು ಈ ಯಾವುವೂ ಇರಲಿಲ್ಲ ಎಂದಾಯ್ತು. ಸರಿ ನೀನು ಬರೆಯುವುದು ಯಾಕೆ ಎಂದು ಮತ್ತೊಂದು ಪ್ರಶ್ನೆ ತೂರಿ ಬಂತು
ನನ್ನ ಖುಷಿಗೆ ಎಂದು ತೊದಲುತ್ತಲೆ ಉತ್ತರಿಸಿದೆ.

ಅದು ಗಹಗಹಿಸಿ ನಕ್ಕು. ಬರೆಯುವುದು ನಿನ್ನ ಸ್ವಂತದ ಖುಷಿಗೆ. ಒಳ್ಳೆಯದು. ಮತ್ತೆ ಪತ್ರಿಕೆಗಳಲ್ಲಿ ಪ್ರಕಟಿಸಿಸುವುದು. ಈ ಬಾರಿ ಸಾಣೆ ಹಿಡಿದ ಈಟಿಯೊಂದು ನೇರವಾಗಿ ಇರಿಯಲು ಶುರುವಿಟ್ಟುಕೊಂಡಿತು.

ಉತ್ತರಿಸಲಿಲ್ಲ. ನಿಜದಲ್ಲಿ ಉತ್ತರಿಸಲು ನನ್ನಲ್ಲಿ ಉತ್ತರವಿರಲಿಲ್ಲ. ಆ ಕ್ಷಣಕ್ಕೆ ಮಾತು ಬಲ್ಲ ಮೌನಿ ನಾನು.

ಅದು ಎಲ್ಲಿ ಹೋಯಿತೋ ಏನೋ, ಅದು ಬಿಟ್ಟುಹೋದ ಪ್ರಶ್ನೆಗಳಂತೂ ನನ್ನ ಮುಂದೆಯೇ ಸುಳಿದಾಡುತ್ತಿದ್ದವು. ನಾನೇ ನನ್ನ ಆಳಕ್ಕಿಳಿದು ಅವವೇ ಪ್ರಶ್ನೆಗಳನ್ನು ಮತ್ತೊಮ್ಮೆ ಕೇಳಿಕೊಳ್ಳಲು ಅಣಿಯಾದೆ. ಉತ್ತರ ಸಿಕ್ಕಬಹುದೆಂದು ಭ್ರಮಿಸಿ ಬಿಟ್ಟಿದ್ದೆ, ಆದರದೂ ಅಷ್ಟು ಸುಲಭದ ಮಾತಾಗಿರಲಿಲ್ಲ.

Literature1ಬೆಂಕಿ ತಾಕಿದೊಡನೆ ಕರಗಿ ಬಿಡುವ ಮೇಣದಂತೆ ನಾನು ಒಂದಿಷ್ಟನ್ನಾದರೂ ಓದಿಕೊಂಡಿದ್ದೇನೆ ಎನ್ನುವ ನನ್ನ ತಲೆಪ್ರತಿಷ್ಠೆಯ ಅಹಂ ನಿಧಾನವಾಗಿ ಕರಗುತ್ತ ಹೋಯಿತು.

ಪತ್ರಿಕೆಗಳಿಗೆ ಕಳುಹಿಸಿದ ಎಲ್ಲಾ ಪದ್ಯಗಳು ಪ್ರಕಟವಾಗಿದ್ದು ನಿರರ್ಥಕ ಎನಿಸಲು ಆರಂಭವಾಯಿತು. ಪ್ರತಿಕೆಗಳಲ್ಲಿ ನನ್ನ ಪದ್ಯಗಳು ಪ್ರಕಟವಾಗಲು ಆರಂಭವಾದ ದಿನಗಳಿಂದ ನಾನು ಒಳಗೊಳಗೆ ಕವಿಯಾಗಿಬಿಟ್ಟೆ ಎಂದು ಠೀವಿಯಿಂದ ಓಡಾಡುತ್ತಿದದ್ದು ಇಂದು ನನಗೇ ರೇಜಿಗೆ.

ಹುಸಿ ಭಾವುಕತೆಗೆ ಒಳಗಾಗಿ ಬರೆಯುತ್ತಿದ್ದಾಗ, ಅವರು ಅಮೇರಿಕಾದ ನ್ಯೂಜೆರ್ಸಿಯಲ್ಲಿದ್ದರು ಕನ್ನಡದಲ್ಲಿ ಪದ್ಯಗಳು ಬರೆಯುತ್ತಾರೆ ಎಂದು ಹೇಳಲು ಹೋಗಿ ಹಿರಿಯರೊಬ್ಬರಿಂದ ಹೀನಾಯವಾಗಿ ಉಗಿಸಿಕೊಂಡಿದ್ದು.

ಫೇಸ್ ಬುಕ್ ನಲ್ಲಿ ನನ್ನ ಪದ್ಯಗಳಿಗೆ ನೂರೈವತ್ತು ಲೈಕ್ಸ್ ಬಂದಿದೆ ಕಣೋ ಎಂದು ಗೆಳೆಯನೊಬ್ಬ ಫೋನ್ ಮಾಡಿದಾಗ, ಈ ಬಡ್ಡಿ ಮಗ ಕಾವ್ಯ ಎಂದರೆ ಯಾರನ್ನೋ ಮೆಚ್ಚಿಸಲು ಸೃಷ್ಠಿಯಾಗಿರುವ ಸರಕು ಎಂದುಕೊಂಡಿದ್ದಾನೆ ಎಂದು ನನಗಷ್ಟೇ ಕೇಳುವ ಹಾಗೆ ಅವನನ್ನು ಜರಿದದ್ದು.

ಹಿರಿಯ ಅಂಕಣಗಾರ್ತಿ ಆಗಿರುವ ಗೆಳತಿಯೊಬ್ಬರಿಗೆ, ಏಕೆ ಯಾವಾಗಲೂ ನೀವು ಉಡುಪಿಯ ಬಗ್ಗೆ ಮಾತ್ರ ಬರೀತಿರಾ ಎಂದು ಮರಿ ಸಾಹಿತಿಯಂತೆ ಪ್ರಶ್ನಿಸಿದ್ದು. ಒಂದೆರಡು ಅರೆ ಬರೆ ಕಥೆಗಳ ಜತೆಗೆ ಕಾದಂಬರಿಯೊಂದನ್ನು ಬರೆದಿದ್ದು ಎಲ್ಲವನ್ನೂ ಈಗ ತಿರುಗಿ ನೋಡುತ್ತ, ನಾನು ಸಾಹಿತಿಯಾಗಬೇಕು ಎಂದುಕೊಂಡಿದ್ದೆ ಅಲ್ವಾ ಎನ್ನುವುದನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಪ್ರಾಮಾಣಿಕವಾಗಿ ಸಾಹಿತ್ಯವನ್ನು ಓದಲು ಶುರುವಿಟ್ಟುಕೊಂಡ ಮೇಲೆ ಪ್ರಾಮಾಣಿಕವಾಗಿ ಬರೆಯುವದು ಕ್ಲಿಷ್ಠ ಹಾಗೇ ಅನಿವಾರ್ಯವೂ ಹೌದು ಎನಿಸುತ್ತದೆ. ಮತ್ತೆ ನಾನು ಮೌನಿ.

ಹಣವಿಲ್ಲದಿದ್ದರೂ ಪುಸ್ತಕ ಕೊಳ್ಳುವ ನೆಪದಲ್ಲಿ ಬೇಸರವಾದಗೆಲ್ಲಾ ಮೈಸೂರಿನ ಪುಸ್ತಕ ಮಳಿಗೆಗಳಿಗೆ ಸೀದಾ ನುಗ್ಗಿಬಿಡುತ್ತಿದ್ದ ಚಾಳಿಯೂ ಇತ್ತು ಒಂದು ಕಾಲದಲ್ಲಿ. ಅದು ಒಳ್ಳೆಯದು ಹೌದು. ಹಾಗೆ ನೋಡಿದರೆ ನಾನು ಇಡೀ ಕರ್ವಾಲೋ ಕಾದಂಬರಿಯನ್ನು ಮೊದಲ ಬಾರಿ ಓದಿ ಮುಗಿಸಿದ್ದೇ ಮೈಸೂರಿನ ಸಪ್ನ ಪುಸ್ತಕದಂಗಡಿಯಲ್ಲಿ. ಕರ್ವಾಲೋ ಅಷ್ಟೇ ಅಲ್ಲಾ. ಟಾಲ್ಸ್ ಟಾಯ್ ನ ಒಂದಿಷ್ಟು ಸಣ್ಣ ಕಥೆಗಳು ಸೇರಿದಂತೆ ವರ್ಡ್ಸ್ ವರ್ಥ್, ಆನಾ ಆಹ್ಮತೋವಾರ ಪದ್ಯಗಳನ್ನು ಓದಿದ್ದು ಅಲ್ಲಿಯೆ.

ಈಗ ಓದಲು ಕೂಡ ಒಂದು ಬಗೆಯ ಭಯವಿದೆ. ಏಕೆಂದರೆ ಓದುವುದೆಂದರೇ ಕೇವಲ ಓದುವುದಲ್ಲ. ಬರೆಯುವುದೆಂದರೇ ಕೇವಲ ಬರೆಯುವುದಲ್ಲ. ಅದು ಒಂದೇ ದೇಹದೊಳಗಿನ ಎರಡು ಆತ್ಮಗಳ ದಿವ್ಯ ಅನುಭೂತಿಯಂಥ ಅನುಸಂಧಾನ ಎಂದು ಮತ್ತೆ ಮತ್ತೆ ಭಾಸವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್  ಸೇರಿದಂತೆ ಅಸಂಖ್ಯ ಸೋಷಿಯಲ್ ಮೀಡಿಯಾಗಳಲ್ಲಿ ಬರೆಯುವವರ ಸಂಖ್ಯೆ ಹೆಚ್ಚುತ್ತಲೆ ಇದೆ. ( ಸೋಷಿಯಲ್ ಮೀಡಿಯಾ ಬಳಸಿ ಸಾಹಿತ್ಯವನ್ನು ಹುರಿಗೊಳಿಸುವವರು ಇದ್ದಾರೆ ಎನ್ನುವ ಎಚ್ಚರವೂ ಇದೆ) ಆದರೆ ಬರವಣಿಗೆ ಕಡೆಗಿನ ಅವರ ಪ್ರಮಾಣಿಕ ಒಲವು ತೀರಾ ದೂರವೆನಿಸುವಂತಾದು.

ಪ್ರಜಾವಾಣಿ, ಮಯೂರ, ತುಷಾರ, ಅವಧಿ ಸೇರಿದಂತೆ ಬೇರೆ ಬೇರೆ ಪತ್ರಿಕೆಗಳಲ್ಲಿ ನನ್ನ ಒಂದಿಷ್ಟು ಪದ್ಯಗಳು ಪ್ರಕಟಿಸಿದ್ದೇನೆ. ಪ್ರಕಟಿಸುವಾಗ ನನಗೆ ಸಾಹಿತ್ಯದ ಬಗ್ಗೆ ಇದ್ದ ಧೋರಣೆ ಬೇರೆ. ಈಗ ಇರುವ ದೋರಣೆ ಬೇರೆ.

ಸೋಷಿಯಲ್ ಮೀಡಿಯಾದಲ್ಲಿರುವ ಗೆಳೆಯರು ಅಲ್ಲಲ್ಲಿ ನನ್ನ ಪದ್ಯಗಳನ್ನು ಓದಿ, ನಿಮ್ಮ ಪದ್ಯಗಳು ಚೆನ್ನಾಗಿವೆ ಅಂತಲೋ, ನೀವು ಚೆನ್ನಾಗಿ ಬರೆಯುತ್ತೀರಿ ಎಂದು ಹೇಳಿದಾಗಲೋ ನನಗೆ ಕಸಿವಿಸಿಯಾಗುತ್ತದೆ. ಪದ್ಯಗಳು ಚೆನ್ನಾಗಿವೆ ಅಥವಾ ಚೆನ್ನಾಗಿಲ್ಲ ಎನ್ನುವುದರ ಪರಿಧಿಯನ್ನು ದಾಟಿ ಮುಂದೆ ಸಾಗುವ ಸಮಯ ಯಾವಾಗ ಬರುತ್ತದೆ ಎಂದು ಹಪಹಪಿಸುತ್ತೇನೆ.

ಪದ್ಯಗಳು, ಕಥೆಗಳು ಎಂದರೆ ಕೇವಲ ಪ್ರಕಟಣೆಗೆ ಎಂದು ತಿಳಿದಿರುವ ಹುಂಬರಿಗೆ ಕಿರುಚಿ ಹೇಳಬೇಕು ಎನಿಸುತ್ತದೆ. ಒಂದೆರಡು ಪದ್ಯ ಪ್ರಕಟವಾದರೆ ಸಾಕು ಹಠಕ್ಕೆ ಬಿದ್ದು ಬರೆಯಲು ಕೂರುವವರಿಗೆ ಸಾಹಿತ್ಯ ದಿಟ ಸತ್ಸಂಗದ ಪರಿಚಯ ಇರಲಾರದು. ಅಂಥವರು ಶ್ರೇಷ್ಠ ಸಾಹಿತ್ಯ ಎನ್ನುವಂತ ಯಾವುದನ್ನು ಬರೆಯಲಾರರು. ಇದು ಇವತ್ತಿನ ನನ್ನ ಅನಿಸಿಕೆ.

Literature3

ನಾನೊಬ್ಬ ಶುದ್ದ ಸಾಹಿತ್ಯ ಜೀವಿ ಎಂದು ಏಕೆ ಯಾರಿಗೂ ತಿಳಿಯುತ್ತಿಲ್ಲ ಎಂದು ಹೈಸ್ಕೂಲ್ ನಲ್ಲಿದ್ದಾಗಲೇ ದಿನಚರಿಯಲ್ಲಿ ಸಾಹಿತ್ಯದೆಡೆಗಿನ ಕಾಳಜಿಯನ್ನು ಬರೆದಿಟ್ಟುಕೊಂಡಿದ್ದ ಯು.ಆರ್. ಅನಂತಮೂರ್ತಿ, ಅಪ್ಪನಿಗೆ ತಿಳಿದರೆ ಇಲ್ಲದ ರಂಪ ಮಾಡುತ್ತಾನೆಂದು ಮತ್ತೊಬ್ಬನ ಹೆಸರಿನಲ್ಲಿ ಪದ್ಯ ಬರೆಯುತ್ತಿದ್ದ ನೆರೂಡ
ಬರೆಯುವುದಕ್ಕೆಂದೆ ದೇಶ ಬಿಟ್ಟು ಹೊರಟುಹೋದ ಅರ್ನೆಸ್ಟ್ ಹೆಮಿಂಗ್ವೆ, ನೊಬೆಲ್ ಪ್ರಶಸ್ತಿ ಸಿಕ್ಕಿದ ಮೇಲೂ ನಾನು ಇನ್ನಾದರೂ ಒಳ್ಳೆಯ ಪದ್ಯಗಳನ್ನು ಬರೆಯಬೇಕು ಎಂದು ಭಾಷಣ ಮಾಡಿದ ಎಲಿಯೆಟ್, ಕಾಮ, ಪ್ರೇಮ, ಜೀವನಪ್ರೀತಿಯನ್ನು ತನ್ನದೇ ದಾಟಿಯಲ್ಲಿ ಹೇಳುತ್ತ ಬಂದ ಬೋದಿಲೇರ್..

ಈ ಪುಸ್ತಕ ಬರೆದಿರುವುದು ನಾನೇ ಎಂದು ಯಾರಿಗೂ ತಿಳಿಯುವುದು ಬೇಡ ಎಂದು ದೂರದ ಊರಿನಲ್ಲಿ ತನ್ನ ಪಾಡಿಗೆ ತಾನಿದ್ದ ಜೆ ಡಿ ಸ್ಯಾಲಿಯಂಜರ್
ಇನ್ನೂ ಮುಂದೆ ನಾನು ಏನನ್ನೂ ಬರೆಯಲಾರೆ ಎನ್ನುವುದನ್ನ ಕೂಪ ಮಂಡೂಕದಂಥ ಶ್ರೇಷ್ಠ ಪದ್ಯ ಮೂಲಕ ಸಾರಲು ಹೋಗಿದ್ದ ಗೋಪಾಲಕೃಷ್ಠ ಅಡಿಗ
ಯಾವುದೋ ಕಾಡೊಂದರಲ್ಲಿ ಕೂತು ತನಗೆ ಎದುರಾಗುತ್ತಿದ್ದ ಜನರನ್ನೇ ತನ್ನ ಕಥೆಯ ಪಾತ್ರಗಳನ್ನಾಗಿಸಿ ಲೆಕ್ಕವಿಲ್ಲದಷ್ಟು ಓದುಗರನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಪೂರ್ಣಚಂದ್ರ ತೇಜಸ್ವಿ..

ತಾನು ಬರೆಯುವುದು ತನಗೆ ಮೊದಲು ಹಿತ ಕೊಡಬೇಕು ಎಂದು ತದೇಕಚಿತ್ತರಾಗಿ ತಮ್ಮ ಪಾಡಿಗೆ ತಾವು ಮುಂಬೈನಲ್ಲಿ ಕೂತು ಬರೆಯುತ್ತಿದ್ದ ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ. ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವರ್ಯಾರು ಬರೆಯುವುದನ್ನು ಉದ್ಯೋಗವಾಗಿಸಿಕೊಂಡವರಲ್ಲ. ಇವರಿಗೆ ಬರೆಯುವದು ಉಸಿರಾಡಿದಷ್ಟೇ ಸಹಜ ಕ್ರಿಯೆಯಾಗಿತ್ತು. ಹಾಗಾಗಿ ಇವರ ಸಾಹಿತ್ಯ ಕೂಡ ಓದಗರ ಸ್ವಂತದ್ದೇ ಎನಿಸುತ್ತಿತ್ತು.

ಈಗ ಬರವಣಿಗೆ ಎನ್ನುವುದು ಉದ್ಯಮವಾಗುತ್ತಿದೆ. ಅದು ಒಳ್ಳೆಯದು ಹೌದು ಅಪಾಯವೂ ಹೌದು.

ಬರವಣಿಗೆ ಎಂದರೆ ಧ್ಯಾನವೂ ಅಲ್ಲಾ. ಯೋಗವೂ ಅಲ್ಲಾ. ಅದು ಒಂದು ಸಾಮಾಜಿಕ ಕ್ರಿಯೆ ಅಷ್ಟೇ. ಈ ನನ್ನ ಅನಿಸಿಕೆ ಮತ್ತೊಮ್ಮೆ ಸಾಬೀತಾಗಿದ್ದು ಶ್ರೀರಂಗರ ಕತ್ತಲೆ ಬೆಳಕು ನಾಟಕದಲ್ಲಿನ ಪಾತ್ರವೊಂದು ಹೇಳುವ ಈ ಮಾತಿನಿಂದ

”ನಾನು ನಾಟಕ ಬರೆಯುವದು ನನ್ನನ್ನು ಯಾರಾದರೂ ಪ್ರಶ್ನಿಸಲಿ ಎನ್ನುವ ಆಸೆಯಿಂದಲೇ,,”

14/08/2016
ನನ್ನ ದಿನಚರಿಯ ಸಾಲುಗಳು…..

‍ಲೇಖಕರು admin

August 17, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This