ಪ್ರಸಂಗಾವಧಾನ…

ಟಿ. ಎಸ್.‌ ಶ್ರವಣ ಕುಮಾರಿ

ನಮ್ಮಗುಂಡಣ್ಣನನ್ನು ಚಿತ್ರವಳ್ಳಿಯ ಅನಭಿಷಕ್ತ ರಾಜನೆನ್ನಲು ಏನಡ್ಡಿಯಿಲ್ಲ. ಲೋಕಸೇವಾ ಇಲಾಖೆಯ ಸರ್ಕಾರಿ ಕಂಟ್ರಾಕ್ಟುದಾರ. ಕಾರ್ಯಪಾಲಕ ಅಭಿಯಂತರವರಿಂದ ಹಿಡಿದು ಬಿಲ್‌ ಪೇ ಮಾಡುವ ಎರಡನೇ ದರ್ಜೆಯ ಗುಮಾಸ್ತೆಯವರೆಗೆ ಎಲ್ಲರಲ್ಲೂ ಒಳ್ಳೆಯ ಹೆಸರನ್ನು, ಬಾಂಧವ್ಯವನ್ನೂ ಗಳಿಸಿಕೊಂಡಿದ್ದ. ಇಲಾಖೆಯಲ್ಲಿ ಯಾವ ಹಿಂಡಿ ಹಾಕಿದರೆ, ಯಾವ ಹಸು, ಎಷ್ಟು ಹಾಲು ಕರೆಯುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನುಅನುಭವದಿಂದ ಗಳಿಸಿಕೊಂಡಿದ್ದ ಮತ್ತು ಅದನ್ನು ಸಕಾಲದಲ್ಲಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದ.

ಬರೀ ಇಲಾಖೆಯಲ್ಲಷ್ಟೇ ಅಲ್ಲ, ಊರಿನಲ್ಲೂ ಎಲ್ಲರ ಸಮಯಕ್ಕಾಗುತ್ತಾ ಪರೋಪಕಾರಿಯೆಂಬ ಹೆಸರನ್ನೂ ಗಳಿಸಿಕೊಂಡಿದ್ದ. ದೇವಸ್ಥಾನವಿರಲಿ, ಸೇವಾ ಸಂಸ್ಥೆಗಳಿರಲಿ, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿದ್ದರೂ ಗುಂಡಣ್ಣನ ನೆರವಿಲ್ಲದೆ ಗಣಪತಿ ಪೂಜೆಯಾಗುತ್ತಿರಲಿಲ್ಲ. ಇಂತಹ ವಿಶಿಷ್ಟ ಸೇವಾ ಮನೋಭಾವದ ನಮ್ಮ ಗುಂಡಣ್ಣನ ಆಸ್ಥಾನದಲ್ಲಿ ತನ್ನ ಕಂಟ್ರಾಕ್ಟು ಕೆಲಸಕ್ಕೆ ಬೇಕಾದವರು ಮಾತ್ರವಲ್ಲದೆ ಪುರೋಹಿತರನ್ನೂ ಒಳಗೊಂಡು ಸೇವಾ ಕಾರ್ಯ ನಿಮಿತ್ತ ಬೇಕಾಗುವ ದಂಡೇ ಇತ್ತು.

ಒಂದೇ ಕೊರತೆಯೆಂದರೆ ಆಸ್ಥಾನಿಕರಲ್ಲಿ ಬಾಣಸಿಗನೊಬ್ಬ ಇನ್ನೂ ಸೇರಿಕೊಂಡಿರಲಿಲ್ಲ. ಪ್ರತಿಬಾರಿಯೂ ಕಲ್ದುರ್ಗದಿಂದಲೇ ಕರೆಸಬೇಕಾಗುತ್ತಿದ್ದು, ಅವರ ಮರ್ಜಿ ಹಿಡಿಯುವುದು ಸ್ವಲ್ಪ ತಕರಾರಾಗುತ್ತಿತ್ತು.

ಇಂತಹ ಗುಂಡಣ್ಣನ ಕಾಲಿಗೆ ಒಂದು ದಿನ ಬೆಳ್ಳಂ ಬೆಳಗ್ಗೆ ಶುಭ ಮುಹೂರ್ತದಲ್ಲಿ ಕಾಶೀಪತಿಯೆಂಬೊಬ್ಬ ದೂರದನೆಂಟನ, ದೂರದಸಂಬಂದಿಯೊಬ್ಬ ಬಂದು ಕಾಲಿಗೆರಗಿ ‘ಗುಂಡಣ್ಣಾ ಬೇಡಿ ಬಂದವ್ರನ್ನ ನೀನು ಕೈಬಿಡಲ್ಲ ಅನ್ನೋ ನಿನ್ನ ಪ್ರಸಿದ್ಧಿಯನ್ನು ಕೇಳಿ ನಿನ್ನ ಆಶ್ರಯದಲ್ಲಿರಕ್ಕೆ ಬಂದಿದೀನಿ. ಮಕ್ಕಳೊಂದಿಗ, ಸಹಾಯಮಾಡಪ್ಪಾ’ ಎಂದ. ತನಗಿಂತ ತುಸು ದೊಡ್ಡವನು, ಜೊತೆಗೆ ಬಂಧು, ಬಂದು ಕಾಲಿಗೆರಗಿದಾಗ ಸ್ವಲ್ಪ ಮುಜುಗರವನ್ನೆದುರಿಸಿದ ಗುಂಡಣ್ಣ ‘ನಿನಗ್ಯಾವ ಕೆಲಸ ಬರತ್ತೆ?’ ಅಂದ. ‘ಹಳ್ಳೀನಲ್ಲಿ ಕ್ಯಾಂಟೀನ್‌ ಇಟ್ಕಂಡಿದ್ದೆ. ಡ್ಯಾಮಿನ ಕೆಲ್ಸಮುಗ್ದು, ಕೆಲಸಗಾರ್ರೆಲ್ಲಾ ವಾಪಸ್ಸು ಹೋದ್ಮೇಲೆ ನಾವು ಹೆಂಡ್ತಿ ಮಕ್ಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬಿದ್ದಿದೆ’ ಎಂದು ಕಣ್ತುಂಬಿಕೊಂಡ.

ಹುಡುಕುತ್ತಿದ್ದ ಬಳ್ಳಿಯೇ ಕಾಲಿಗೆ ತೊಡರಿಕೊಂಡಂತಾಯಿತು. ಆದರೂ ಇಂಟರ್‌ವ್ಯೂ ಇಲ್ಲದೆ ನೇಮಕಾತಿ ಹೇಗೆ, ಕೇಳಿದ ‘ಏನೇನು ಮಾಡಕ್ಬರತ್ತೆ? ನಿನ್ನ ಸ್ಟೆಷಾಲಿಟಿ ಅಡುಗೆ ಏನು?’. ‘ಮಾಮೂಲಿ ಎಲ್ಲಾ ಅಡುಗೇನೂ ಬರತ್ತೆ, ತರತರಾವರಿ ಚಿತ್ರಾನ್ನಗಳನ್ನ ಮಾಡ್ತೀನಿ. ಸ್ವೀಟಲ್ಲಿ ಬಾದೂಷಾ ಸಕತ್ತಾಗಿ ಮಾಡ್ತೀನಿ. ಬೋಂಡಾಗಳನ್ನ ಸೂಪರ್‌ ಆಗಿ ಮಾಡ್ತೀನಿ. ಅದ್ರಲ್ಲೂ ಮೆಣಸಿನಕಾಯಿ ಬೋಂಡಾನ ಎಣ್ಣೆಗೆ ಬಿಟ್ಟಾಂದ್ರೆ ಮೈಲು ದೂರದಿಂದ ಜನ ಬರ‍್ತಾರೆ’ ಅಂದ. ಕಡೆಯ ಪಾಯಿಂಟಿಗೆ ಗುಂಡಣ್ಣ ಚಿತ್ತಾದ, ಜಗತ್ತಿನಲ್ಲೆಲ್ಲಾ ಸರ್ವಶ್ರೇಷ್ಠವಾದ ತಿನಿಸೆಂದರೆ ಅದು ಬೋಂಡಾ, ಅದರಲ್ಲೂ ಮೆಣಸಿನಕಾಯಿ ಬೋಂಡಾನೇ ಎನ್ನುವುದು ಅವನ ನಿಲುವು, ಅಲ್ಲಿಗೆ ಗುಂಡಣ್ಣನ ಆಸ್ಥಾನದಲ್ಲಿ, ಕಾಶೀಪತಿ ಬಾಣಸಿಗನಾಗಿ ನೇಮಕವಾಗಿಯೇ ಹೋದ.

ಗುಂಡಣ್ಣನ ಮನೆಯಲ್ಲಿ, ದೇವರಪೂಜೆ, ಸತ್ಯನಾರಾಯಣ ಕತೆ, ಭಜನೆ, ಗುರುಗಳ ಪಾದಪೂಜೆ ಇಂಥವೆಲ್ಲ ಆಗಾಗ ನಡೆಯುತ್ತಲೇ ಇರುವ ವಿದ್ಯಮಾನ. ಮನೆಯ ತಿರುವಿನಲ್ಲೇ ಇದ್ದ ರಾಮದೇವರಗುಡಿಯ ಮುಖ್ಯ ಟ್ರಸ್ಟಿ ಬೇರೆ. ದೇವಸ್ಥಾನವೆಂದಮೇಲೆ ಆಗಾಗ ಕಾರ್ಯಕ್ರಮಗಳೂ ಇದ್ದದ್ದೇ. ಈಗ ಇವೆಲ್ಲಕ್ಕೂ ಒಬ್ಬ ಖಾಯಂ ಬಾಣಸಿಗ ಸಿಕ್ಕಿದ್ದು ಉಭಯತಃ ನೆಮ್ಮದಿಯಾದ ವಿಚಾರ.

ಅಡುಗೆಯ ರುಚಿ ದಿವ್ಯವಾಗಲ್ಲದಿದ್ದರೂ, ತೂಗಿಸಿಕೊಂಡು ಹೋಗಲು ಸಾಕಾಗಿತ್ತು. ಬೇರೆ ಏನೇನೋ ಸ್ವೀಟನ್ನು ಮಾಡುವ ಉತ್ಸಾಹ ತೋರಿದರೂ, ಮಿಕ್ಕೆಲ್ಲವುಗಳ ಗುಣಮಟ್ಟ ಅಷ್ಟಕ್ಕಷ್ಟೇ ಆದ್ದರಿಂದ ಗುಂಡಣ್ಣನಂತೂ ಯಾವ ರಿಸ್ಕೂ ತೆಗೆದುಕೊಳ್ಳದೆ ಸೊಗಸಾಗಿ ಮಾಡುತ್ತಿದ್ದ ಬಾದೂಷಾಗೇ ಅಂಟಿಕೊಂಡಿದ್ದ. ಹೆಚ್ಚೆಂದರೆ, ಹೆಚ್ಚಿಗೆರಿಸ್ಕಿಲ್ಲದ ಬೂಂದೀ ಕಾಳಷ್ಟೇ.ಆದರೆ ಕಾಶೀಪತಿಗೋ, ಗರಿಗರಿಯಾದ ಜಿಲೇಬಿ, ಜಾಂಗೀರನ್ನೋ, ಪದರು ಪದರಾದ ಚಿರೋಟಿಯನ್ನೋ, ಎಳೆ ಎಳೆಯಾದ ಫೇಣಿಯನ್ನೋ, ರಸವುಕ್ಕುವ ಜಾಮೂನನ್ನೋ ಮಾಡುವ ಉಮೇದು. ಯಾವುದಕ್ಕೂ ಗುಂಡಣ್ಣ ಅವಕಾಶ ಕೊಟ್ಟರಲ್ಲವೇ?

ಪ್ರತಿವರ್ಷವೂ ರಾಮದೇವರ ದೇವಸ್ಥಾನದಲ್ಲಿ ಹನುಮ ಜಯಂತಿ ವಿಜೃಂಭಣೆಯಿಂದ ಮೂರು ದಿನ ನೆರವೇರುತ್ತಿತ್ತು. ಮೂರನೆಯ ದಿನ ಸುತ್ತಮುತ್ತಲ ಹಳ್ಳಿಯವರೆಲ್ಲಾ ಸೇರಿ ಸುಮಾರು ಐನೂರು, ಆರು ನೂರು ಜನರು ಊಟಕ್ಕೆ ಸೇರುತ್ತಿದ್ದರು. ವಿಶೇಷವಾಗಿ ಕಲ್ದುರ್ಗದಿಂದ ಅಡುಗೆಯವರನ್ನು ಖಾಯಂ ಆಗಿ ಕರೆಸಲಾಗುತ್ತಿತ್ತು.

ಈ ಬಾರಿ ಆ ಅಡುಗೆಯವರಿಗೆ ಅನಾನುಕೂಲವಾಗಿ ಬರಲು ಸಾಧ್ಯವಿಲ್ಲವೆಂದು ಕೈಯೆತ್ತಿಬಿಟ್ಟರು. ಕಾಶೀಪತಿ ಈ ಅವಕಾಶವನ್ನು ಬಾಚಿತಬ್ಬಿಕೊಂಡು ಅರ್ಧ ಕೂಲಿಗೇ ತಾನು ಮಾಡಿಕೊಡುವುದಾಗಿ ಒಪ್ಪಿಕೊಂಡ. ಅವನಿಗೆ ತನ್ನ ಪ್ರಾವೀಣ್ಯತೆಯ ಪ್ರಾತ್ಯಕ್ಷಿಕೆಗೆ ಇಂತಹ ಒಂದು ಘನವಾದ ಅವಕಾಶಬೇಕಿತ್ತು. ಕಮಿಟಿಯವರು ಇವನ ಶಕ್ತಿಯ ಬಗ್ಗೆ ಸ್ವಲ್ಪ ಶಂಕೆತೋರಿದರೂ, ಗುಂಡಣ್ಣನ ಶಿಫಾರಸಿನ ಮೇಲೆ ಅರೆಮನಸ್ಸಿನಿಂದಲೇ ಒಪ್ಪಿಕೊಂಡರು. ಮೊದಲೆರಡು ದಿನ ನೂರೈವತ್ತು, ಇನ್ನೂರು ಜನರ ಊಟ. ಗುಂಡಣ್ಣನ ಮೇಲ್ವಿಚಾರಣೆಯಲ್ಲಿ ಕಾಶೀಪತಿ ವಿಶೇಷ ಮುತುವರ್ಜಿವಹಿಸಿ ಸೊಗಸಾಗಿ ಮಾಡಿ ಸೈಯೆನಿಸಿಕೊಂಡ.

ಮೂರನೆಯ ದಿನ ಗುಂಡಣ್ಣನಿಗೆ ಪಾಕ ಶಾಲೆಯ ಕಡೆ ಹಾಯಲು ಪುರಸೊತ್ತಿಲ್ಲ, ಎರಡು ದಿನ ದಿವಿನಾಗಿ ಮಾಡಿದ್ದ ನಂಬಿಕೆಯಿಂದ, ಪ್ರಾರಂಭ ಮಾಡಿಸಿ ಹೋದವನಿಗೆ ಈ ಕಡೆ ತಲೆ ಹಾಕಲೂ ಪುರಸೊತ್ತಿಲ್ಲ. ಮಂಗಳಾರತಿಯಾಗುತ್ತಿದ್ದಂತೇ ಓಡಿ ಬಂದು ‘ಏನಪ್ಪಾ ಕಾಶೀಪತಿ, ಆಗ್ಲೇ ಎರಡು ಗಂಟೆಯಾಗ್ತಾ ಬಂತು, ಮಂಗಳಾರತೀನೂ ಆಯ್ತು, ಎಲ್ಲಾತಯಾರಾ, ಎಲೆ ಹಾಕಿಸ್ಬೋದಾ?’ ಎನ್ನುತ್ತಾ ಅವಸರಿಸಿದ. ‘ಹಾಕ್ಸೋದೇ ಗುಂಡಣ್ಣ, ತಯಾರಾಗಿ ಒಂದು ಗಂಟೆ ಆಯ್ತು ಆಗ್ಲೇ’ ಎಂದು ಕಾಶೀಪತಿಯೂ ಆತ್ಮವಿಶ್ವಾಸದಿಂದ ಹೇಳಿದ.

ಸರಸರನೆ ಪ್ರಾಕಾರದಲ್ಲಿ ಎಲೆಬಿತ್ತು, ಮೊದಲ ಪಂಕ್ತಿ ಮುನ್ನೂರು ಜನ ಧಡಭಡ ಬಂದು ಎಲೆ ಮುಂದೆ ಕುಳಿತರು. ತುಪ್ಪ, ಪಾಯಸ ಹಿಡಿದುಕೊಂಡು ಅಭಿಗಾರ ಮಾಡಿ ಬಡಿಸಲು ಶುರುವಾಯಿತು. ಉತ್ಸಾಹದಿಂದ ಗುಂಡಣ್ಣನ ಟೀಮಿನ ಯುವಕರು ಕೋಸಂಬರಿ, ಪಲ್ಯ ಎಂದು ಒಂದೊಂದೇ ಬಕೆಟನ್ನು ಎತ್ತಿಕೊಂಡು ಬಡಿಸಲು ಆರಂಭಿಸಿದರು. ಮೊದಲ ಸುತ್ತು ಅನ್ನ, ಹುಳಿಯಾಯಿತು. ಬೆಳಗಿನಿಂದ ಹಸಿದು, ಅನ್ನ ಕಂಡೇವಾ ಅನ್ನುವ ಹಾಗೆ ಕಾಯುತ್ತಾ ಕುಳಿತಿದ್ದ ಜನ ಗಬಗಬ ಸ್ವಾಹಾ ಮಾಡಲು ಆರಂಭಿಸಿದರು.

ಸಾರಿಗೆ ಮುಂಚೆ ಇನ್ನೊಮ್ಮೆ ಅನ್ನ ಬಡಿಸಲು ಕಳಿಸುವಾಗ ಗುಂಡಣ್ಣ ನೋಡುತ್ತಾನೆ, ಎರಡು ಬಕೆಟ್‌ ಅನ್ನತೋಡಿದೊಡನೆ ಅನ್ನದ ತಪ್ಪಲೆ ಖಾಲಿ. ಇನ್ನೊಂದು ತಪ್ಪಲೆ ಈ ಕಡೆ ಸರಿಸು ಕಾಶೀಪತಿ ಅಂದರೆ ಬೆಪ್ಪಾದ ಕಾಶೀಪತಿ ‘ಇಲ್ನೋಡು ಗುಂಡಣ್ಣ, ಸೇರು ಅಕ್ಕಿಗೆ ಹನ್ನೆರಡು ಜನರ ಊಟ, ಒಟ್ಟು ಆರ‍್ನೂರು ಜನಕ್ಕೆ ಐವತ್ತು ಸೇರಕ್ಕಿ ಅನ್ನ ಮಾಡಿದೀನಿ, ನೋಡುಬೇಕಾದ್ರೆ ಗೋಡೆ ಮೇಲೆ ಸೇರಿಗೊಂದು ಗೆರೆ ಹಾಗೆ ಐವತ್ತು ಗೆರೆ ಎಳ್ದಿದೀನಿ. ಈಗ್ನೋಡಿದ್ರೆ ಇಷ್ಟೇ ಉಳಿದಿದ್ಯಲ್ಲಾ, ಜನ್ರ ಹೊಟ್ಟೇಲೇನಾದ್ರೂ ಹನುಮಂತ ಹೊಕ್ಕೊಂಡಿದಾನ್ಯೇ?’ ಎಂದ ಹೆದರಿ.

ಗುಂಡಣ್ಣನಿಗೋ ನಖ ಶಿಖಾಂತ ಉರಿದು ಹೋಯಿತು. ‘ಹೊಟ್ಟೇಲಿ ಹನುಮನಂತೆ, ನಿನ್‌ ಬುದ್ಧೀಗಿಷ್ಟು, ಗೋಡೆ ಮೇಲೆ ಗೆರೆ ತೋರಿಸ್ಬೇಡ ನಂಗೆ, ತಪ್ಲೇನಲ್ಲಿ ಅನ್ನ ತೋರ‍್ಸು. ಇನ್ನೂ ಒಂದು ಪಂಕ್ತಿಯ ಜನ ಊಟಕ್ಕೆ ಕಾದಿದಾರೆ. ‘ಎಲೆ ಹಾಕ್ಲೇನಪ್ಪಾಂದ್ರೆ’ ಹಾಕ್ಸು ಅಂದು ಈಗ ಮೊದಲ್ನೇ ಪಂಕ್ತಿ ಅರ್ಧ ಊಟಕ್ಕೆ ಖಾಲಿ ತಪ್ಲೆತೋರಿಸ್ತಿದೀಯಲ್ಲಾ. ಏನು ಮಾಡ್ಬೇಕೀಗ. ನಿನ್‌ ನೆಚ್ಕೊಂಡು ನಾನು ಹಾಳಾದೆ’ ಎಂದು ಅಬ್ಬರಿಸುತ್ತಿರುವಾಗ ಕಾಶೀಪತಿ ‘ಈಗೇನ್ಮಾಡ್ಲಿ, ನೀನೇ ಹೇಗಾದ್ರೂ ಕಾಪಾಡ್ಬೇಕಪ್ಪಾ’ ಎಂದು ಅವನ ಕಾಲು ಹಿಡಿದುಕೊಂಡುಬಿಟ್ಟ.

ತಲೆ ಕೊಡವಿಕೊಂಡ ಗುಂಡಣ್ಣ ಅಡುಗೆಯ ಕಡೆ ದೃಷ್ಟಿಹರಿಸಿ, ಒಲೆ ಮೇಲೆ ಏನಿಟ್ಟಿದೀಯ ಅಂದ ‘ಬಿಸ್ನೀರು, ಜಿಡ್ಡಾಗಿರೋ ಪಾತ್ರೆಗೆ ಸುರ‍್ಯಕ್ಕೆ’ ಅಂದ. ‘ಮೊದ್ಲು ಅನ್ನದ ತಪ್ಲೆಗೆ ಆ ನೀರು ಸುರಿದು ಹತ್ಸೇರು ಅಕ್ಕಿ ಹಾಕು. ಇನ್ನೊಂದೊಲೇನಲ್ಲಿ ಮತ್ತೆ ನೀರಿಡು, ಮುಂದಿನ ಪಂಕ್ತಿಯ ಅನ್ನಕ್ಕೆ’ ಅಂದವನೇ ಬಡಿಸುವವರ ಕಡೆಗೆ ತಿರುಗಿ ‘ದೇವರ ಪಂಚಾಮೃತ, ಪ್ರಸಾದಕ್ಕೆ ಮಾಡಿಸಿದ ಪೊಂಗಲ್‌ ಎರಡೆರಡು ಬಕೆಟಿದೆ. ಅದಾದ್ಮೇಲೆ ಚಿತ್ರಾನ್ನ, ಅದೂ ಮುಗಿದ್ರೆ ಬೂಂದಿಕಾಳು…ನಿಧಾನಕ್ಕೆ ಬಡಿಸಿ’ ಎಂದು ಆದೇಶ ಕೊಟ್ಟು ಊಟದ ಪಂಕ್ತಿಯ ಕಡೆಗೆ ನಡೆದ.

ಅರೆ ಹೊಟ್ಟೆ ಉಂಡವರೆಲ್ಲರೂ ಏನು ಎಲೆಗೆ ಬೀಳತ್ತೇಂತ ಕಾಯ್ತಾ ಕುಳಿತಿದ್ದರು. ಖಾಲಿ ನಿಂತಿದ್ದ ಒಬ್ಬನಿಗೆ ‘ಯಾವುದಾದ್ರೂ ದೇವರ ನಾಮಾನ ಹಾಡು’ ಎಂದ. ಅವನಿಗೋ ಬಲು ಖುಷಿಯಾಗಿ ಭಕ್ತಿಪರವಶನಾಗಿ ಹನುಮ ಸಂಕೀರ್ತನೆಯನ್ನು ಶುರುಮಾಡೇಬಿಟ್ಟ. ಅಷ್ಟು ಚೆನ್ನಾಗಿ ಗಾಯನ ನಡೆಯುತ್ತಿರುವಾಗ ಜನರ ಗಮನ ಅದರ ಕಡೆ ಹರಿದು ಊಟ ನಿಧಾನವಾಗಿ ಸಾಗಿತು, ಬಡಿಸುವವರೂ ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಾ ಸಾಗಿದರು. ಪೋಟಿಗೆ ಬಿದ್ದು ಅವನ ಹಾಡು ಮುಗಿಯುತ್ತಿದ್ದಂತೇ ಇನ್ನೊಂದು ಮೂಲೆಯಿಂದೊಬ್ಬ ಶುರು ಹಚ್ಚಿಕೊಂಡ.

ಈಗ ಊಟಕ್ಕೆ ಕೂತವರಿಗೂ ಉಮೇದು ಹತ್ತಿ ಅವರೂ ಹಾಡಲು ಶುರು ಮಾಡಿದರು. ಅಂತೂ ಅರ್ಧ ಗಂಟೆ ಗಾನ ಕಾಲಕ್ಷೇಪವಾಯಿತು. ಅನ್ನದ ತಪ್ಪಲೆ ಬಸಿಯಲು ಮುಗುಚಿದ ತಕ್ಷಣ ಹೊರ ಬಂದು ಕಾಶೀಪತಿ ಗುಂಡಣ್ಣನ ಕಡೆ ನೋಡಿ ಹೆಬ್ಬೆಟ್ಟೆತ್ತಿದ. ತಕ್ಷಣವೇ ಗುಂಡಣ್ಣ ಬಡಿಸುತ್ತಿದ್ದ ಹುಡುಗರ ಮೇಲೆ ಒಂದು ಆವಾಜು ಹಾಕಿದ. ‘ಏನು ಎಲ್ರೂ ಹೀಗ್ನಿಂತ್ಬಿಟ್ರಿ, ಇನ್ನೂ ಮುಂದಿನ ಪಂಕ್ತಿ ಜನ ಊಟಕ್ಕೆ ಕಾದಿದಾರೆ, ಬೇಗ್ಬೇಗ ಅನ್ನ ಸಾರು ತೊಗೊಳಿ’ ಎಂದಾಕ್ಷಣ ಹುಡುಗರೆಲ್ಲರೂ ಅಡುಗೆ ಶಾಲೆಗೆ ಓಡಿ ಬಕೆಟಿನಲ್ಲಿ ತುಂಬಿಟ್ಟಿದ್ದ ಅನ್ನ, ಸಾರು ತೆಗೆದುಕೊಂಡು ಬಂದು ಬಡಿಸುತ್ತಾ ಸಂತರ್ಪಣೆಯು ಸಂಪನ್ನವಾಯಿತು. ಕಾಶೀಪತಿ ಬಚಾಯಿಸಿಕೊಂಡ. ಅಂದಿನ ಅನುಭವದ ನಂತರ ಗುಂಡಣ್ಣ ಮೊದಲು ತನ್ನ ಇನ್‌ಸ್ಪೆಕ್ಷನ್‌ ಆದ ಮೇಲೆ ಎಲೆ ಹಾಕಿಸುವ ತೀರ್ಮಾನ ಮಾಡುತ್ತಿದ್ದ. ಆಗೀಗ ಹೆಚ್ಚು ಕಡಿಮೆಯಾದರೂ ಹೇಗೋ ತೂಗಿಸಿ ಸಂಭಾವನೆಯಲ್ಲೂ ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಳ್ಳುತ್ತಿದ್ದ.

ಹೀಗಿರುವಾಗ ಗುಂಡಣ್ಣನ ಚಿಕ್ಕಪ್ಪನ ಮಗಳಮದುವೆ ಗೊತ್ತಾಯಿತು. ಮರಳೇ ಹಳ್ಳಿಯಲ್ಲಿ ಯಾರೂ ಓಡಾಡುವರಿಲ್ಲದೆ ಗುಂಡಣ್ಣನನ್ನೇ ಆಶ್ರಯಿಸಿ ಚಿತ್ರವಳ್ಳಿಯಲ್ಲೇ ಅವನ ನೇತೃತ್ವದಲ್ಲಿ ಮದುವೆ ಮಾಡುವ ನಿರ್ಧಾರ ತೆಗೆದುಕೊಂಡರು. ಗುಂಡಣ್ಣನೂ ಸಂತೋಷದಿಂದಲೇ ನಿಂತು ಮಾಡಲು ಒಪ್ಪಿಕೊಂಡು ತನ್ನ ಮಾಮೂಲಿ ಆಸ್ಥಾನಿಕರಿಂದ ಎಲ್ಲಾ ಏರ್ಪಾಡುಗಳನ್ನೂ ಮಾಡಿದ. ಕಾಶೀಪತಿ ತನ್ನದೊಂದು ಅಹವಾಲನ್ನಿಟ್ಟ. ‘ಗುಂಡಣ್ಣಾ, ಮೊನ್ನೆ ನನ್ನ ಷಡ್ಡಕನ ಮಗಳ ಮದುವೆಗೆ ಬೆಂಗಳೂರಿಗೆ ಹೋಗಿದ್ದಾಗ ಅಡುಗೆಯವರು ಚಿರೋಟಿ ಮಾಡಿದ್ದನ್ನು ಸ್ವತಃ ಕಣ್ಣಿಂದನೋಡ್ಕೊಂಡು ಲವಾಜಮೆ ತಿಳ್ಕೊಂಡು ನಾನೂ ಒಂದು ಕೈಹಾಕಿದೀನಿ. ಈ ಮದ್ವೇನಲ್ಲಾದ್ರೂ ಚಿರೋಟಿ ಮಾಡಕ್ಕೆ ಅವ್ಕಾಶ ಕೊಡಪ್ಪ’ ಎಂದ.

ರಿಸ್ಕ್‌ ತೆಗೆದುಕೊಳ್ಳಲು ತಯಾರಿಲ್ಲದ ಗುಂಡಣ್ಣ ಎಷ್ಟೇ ಹೇಳಿದರೂ ಕೇಳದೆ ‘ನೋಡಪ್ಪಾ ನಾನೇನಾದ್ರೂ ಕೆಡಿಸಿದರೆ ಸರ್ಕಲ್‌ನಲ್ಲಿ ನಿಲ್ಸಿ ಚಪ್ಲಿತೊಗೊಂಡು ಹೊಡಿಬೇಕಾದ್ರೆ’ ಎಂದು ಗೋಗರೆದು ಅಂತೂ ಒಪ್ಪಿಸಿ ಬಿಟ್ಟು ಲವಾಜಮೆಯ ಪಟ್ಟಿಯನ್ನುಕೊಟ್ಟೇಬಿಟ್ಟ. ದೇವರ ಸಮಾರಾಧನೆ, ವರಪೂಜೆಗಳಾಯಿತು. ಬೆಳಗ್ಗೆ ಧಾರೆಗೆ ಚಿರೋಟಿ ಊಟ. ರಾತ್ರಿ ಊಟವಾದ ತಕ್ಷಣ ಕಾಶೀಪತಿ ಚಿರೋಟಿ ಮಾಡಲು ಶುರು ಹಚ್ಚಿಕೊಂಡ.‌ ಗುಂಡಣ್ಣ ‘ಸಾಮಾನೆಲ್ಲಾ ಸರಿಯಾಗಿದ್ಯೇನಪ್ಪ, ಇನ್ನೇನಾದ್ರೂ ಬೇಕಾದ್ರೆ ಈಗ್ಲೇಹೇಳು’ ಎಂದರೆ, ಇನ್ನೇನೂ ಬೇಕಿಲ್ಲ ನೋಡು, ಐನೂರು ಚಿರೋಟಿ ಹಾಕಕ್ಕೆ ಬೇಕಾಗಿರೋ ನಾಕು ಬುಟ್ಟಿಗಳ್ನೂ ರೆಡಿಮಾಡಿಟ್ಬಿಟ್ಟಿದೀನಿ ಎಂದು ತೋರಿದ.

ಮಿಕ್ಕೆಲ್ಲಾ ಉಸ್ತುವಾರಿಯನ್ನೂ ನೋಡಿಕೊಂಡು ಗುಂಡಣ್ಣ ಮಲಗುವ ಹೊತ್ತಿಗೆ ರಾತ್ರಿ ಹನ್ನೆರಡಾಗಿತ್ತೇನೋ… ಆಯಾಸದಿಂದಾಗಿ ಒಳ್ಳೆ ನಿದ್ರೆ ಹತ್ತಿತ್ತು ‘ಗುಂಡಣ್ಣಾ, ಗುಂಡಣ್ಣಾ’ ಎಂದು ಕರೆಯುತ್ತಿದ್ದರೆ ಎಲ್ಲೋ ಕನಸಿನಲ್ಲಿ ಕೇಳಿದಂತೆ ಎಚ್ಚರಾಗಿ ಕಣ್ಣು ಬಿಟ್ಟರೆ ಎದುರಿಗೆ ಹೆದರಿ ಕೈ ಮುಗಿದುಕೊಂಡು ನಿಂತಿರುವ ಕಾಶೀಪತಿ. ಏನೋ ಅನಾಹುತವಾಗಿದೆಯೆಂದು ಅರ್ಥವಾಗಿ ನಿದ್ರೆಯೆಲ್ಲಾ ಹಾರಿ ಹೋಯಿತು.

‘ಗುಂಡಣ್ಣಾ ಏಳಪ್ಪಾ, ನಡೀ ಸರ್ಕಲ್ಲಿಗೆ’ ಎಂದ ನಡುಗುತ್ತಾ. ಹಿಂದೆ ಮುಂದೆ ಅರ್ಥವಾಗದ ಗುಂಡಣ್ಣ ‘ಈ ಹೊತ್ತಲ್ಲಿ ಯಾವ ಅಂಗಡಿ ಬಾಗಿಲು ತೆಗೆದಿರತ್ತೆ ಅಲ್ಲಿ, ನಾನು ಮೊದ್ಲೇ ಕೇಳ್ಳಿಲ್ವಾ ಇನ್ನೇನಾದ್ರೂ ಬೇಕಾಂತ’ ಎಂದು ಗದರಿದರೆ, ‘ಯಾವ ಅಂಗಡೀನೂ ಬೇಡಪ್ಪಾ. ಅಲ್ಲಿ ನಿಲ್ಸಿ, ನಿನ್‌ ಚಪ್ಲಿ ತೊಗೊಂಡು ಹೊಡೆದ್ಬಿಡು’ ಎಂದು ಕಾಲು ಹಿಡಿದುಕೊಂಡ. ಅಲ್ಲಿಗೆ ಚಿರೋಟಿ ಎಕ್ಕುಟ್ಟೋಗಿದೆ ಎಂದು ಅರ್ಥವಾಯಿತು. ಕಾಲು ಬಿಡಿಸಿಕೊಂಡು ‘ಅಷ್ಟುಬಡ್ಕೊಂಡೆ, ಕೇಳಿದ್ಯಾ ನೀನು…’ ಎಂದು ವಾಚಾಮ ಗೋಚರವಾಗಿ ಬೈದ. ತಗ್ಗಿಸಿದ ತಲೆ ಎತ್ತಲಿಲ್ಲ ಕಾಶೀಪತಿ.

ರಾತ್ರಿ ಎರಡು ಗಂಟೆಯಾಗಿದೆ. ನಾಳೆಗೇನು ಮಾಡುವುದು ಎನ್ನುವ ಚಿಂತೆಯಾಗಿ, ‘ಹಾಳಾಗೋಗ್ಲಿ ನಾಳೆಗೆ ಇನ್ನೇನು ಸ್ವೀಟ್‌ ಮಾಡಕ್ಕಾಗತ್ತೆ? ಈಗ ಹೋಗಿ ಯಾವ ಸಾಮಾನೂ ತರಕ್ಕಾಗಲ್ಲ’ ಎಂದ. ಕಾಶೀಪತಿ ಧೈರ್ಯವಾಗಿ ‘ಏನು ಯೋಚ್ನೆ ಮಾಡ್ಬೇಡ ಗುಂಡಣ್ಣ. ಅದೇ ಹಿಟ್ನಲ್ಲಿ ಹೈಕ್ಲಾಸ್‌ ಬಾದೂಷಾಮಾಡ್ಬಿಡ್ತೀನಿ’ ಎಂದ. ‘ಅದೇಹಿಟ್ನಲ್ಲಿ ಬಾದೂಷಾನೇ… ಸರಿಮಾಡೋಗು’ ಎಂದು ಮಲಗಿದರೂ ಗುಂಡಣ್ಣನ ನಿದ್ರೆ ಹಾರಿ ಹೋಯಿತು. ಬೆಳಗಿನ ಝಾವ ಎದ್ದು ಪಾಕ ಶಾಲೆಗೆ ಹೋದರೆ ನಾಲ್ಕು ತಟ್ಟೆಗಳಲ್ಲಿ ಬಾದೂಷಾ ಕಂಗೊಳಿಸುತ್ತಿದ್ದವು. ಏನನ್ನು ಬೇಕಾದರೂ ಬಾದೂಷಾಗೆ ಪರಿವರ್ತಿಸುವ ಕಾಶೀಪತಿಯ ಪ್ರತಿಭೆಗೆ ಗುಂಡಣ್ಣನೂ ಒಮ್ಮೆತಲೆದೂಗಿದ. ಗರಿಗರಿಯಾಗಿ ರಸ ತುಂಬಿಕೊಂಡಿದ್ದ ಬಾದೂಷಾವನ್ನು ಬೀಗರೂ ಹೊಗಳಿದರು ಎಂದು ಬೇರೆ ಹೇಳಬೇಕಿಲ್ಲ. ಪ್ರಸಂಗಾವಧಾನತೆಯಲ್ಲಿ ಇಬ್ಬರೂ ಪ್ರವೀಣರೇ ಅಲ್ಲವೇ…!!

‍ಲೇಖಕರು Avadhi

February 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…

ಡಾ. ಎಸ್.ಬಿ.ರವಿಕುಮಾರ್ ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

೧ ಪ್ರತಿಕ್ರಿಯೆ

  1. T S SHRAVANA KUMARI

    ಥ್ಯಾಂಕ್ಯೂ ಜಿ ಎನ್ ಮೋಹನ್ ಸರ್, ಥ್ಯಾಂಕ್ಯೂ ಟೀಮ್ ಅವಧಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: